Friday, March 13, 2020

ನೆರವು


ಒಳಗೊಳಗೆ ಕುದಿದು ಕುದಿದು ಹೋಗುತ್ತಿದ್ದಾನೆ – ಜಗದ ಅತೀ ಜಡ ವಸ್ತುವೆಂದೋ? ಯಾರಿಗೂ ಬಾರದ ನಿರುಪಯೋಗಿಯೆಂದೋ? ಅದು ಅವನ ಕೋಪದ ಪ್ರತೀಕವಲ್ಲ, ಅವನ ಮುಖದ ಮೇಲಿನ ಕೆಂಪು ಅಗ್ನಿ. ಅದೋ! ಎದುರು ಮನೆಗೆ ಬೆಂಕಿ ಬಿದ್ದಿತು. ಧಗ ಧಗನೆ ಉರಿಯಿತು. ಇವನಿನ್ನು ತಡೆಯಲಾರ. ಕೆಂಪಲ್ಲಿ ಕೆಂಪಾಗಲು, ತನ್ನನ್ನೊಬ್ಬ ನಿರುಪಯೋಗಿಯೆನಬಹುದಾದ ಇಡೀ ಜಗತ್ತಿನ ಜನರ ಬಾಯಿಗೆ ಬೀಗ ಜಡಿಯಲು, ಜಗತ್ತನ್ನು ಈ ಬೆಂಕಿಯ ಕೆನ್ನಾಲಿಗೆಯಿಂದ ಪಾರುಮಾಡಿ ದೇವರೆನಿಸಲು ಧುಮುಕಿದ ಬೆಂಕಿಗೆ - ತನಗಾಗಿಗೇ! ತನಗಾಗಿಯೇ!


ಹೊತ್ತಿತು, ಹೊತ್ತಿಯೇ ಹೊತ್ತಿತು. ತಡೆಯಲಾರದೆ ಓಡಿದ. ಮತ್ತೊಂದು ಮನೆ ಹತ್ತಿತು. ಇನ್ನೊಂದು. ನೋಡಿ ನೋಡಿ. ಓಡಿ. ಇಲ್ಲ ನಿಮ್ಮ ಬಳಿಯೂ ಬಂದಾನು! ನಮ್ಮನ್ನೂ ಹೊತ್ತಿಸಿಯಾನು. ಜಡತ್ವವೇ ಲೇಸಿದ್ದಿತ್ತು.