ಕಳೆದು ಹೋದದ್ದರ ಕುರುಹು

 ಮನೆ ಮೇಲೆ ಮನೆ ಕಟ್ಟುತಾ ಹೋದ್ರೆ ಕೆಳಗಿನದ್ದಕ್ಕೆ ಒತ್ತಡ, ಪೆಟ್ಟಲ್ವೆ? ಸದಾನಂದನಿಗೆ ತನ್ನ ಸಾಫ್ಟ್ ವರ್ತನೆಯನ್ನ ಕಂಡು ತನ್ನ ಮುಖಕ್ಕೆ ತಾನೇ ಉಗಿದುಕೊಳ್ಳಬೇಕೆನಿಸಿತು‌. ಯಾವತ್ತೂ ತನಗನ್ನಿಸಿದ್ದನ್ನ ಬಿಚ್ಚಿ ಬೆತ್ತಲೆ ನಿಲ್ಲಿಸಲು ಭಯ. ಈ ಒಳ್ಳೆಯತನವೆನ್ನೋ ಮೌಲ್ಯವನ್ನ ಕೊಚ್ಚಿ ಕೊಂದು ಪಾತಾಳಗರ್ಭದಲ್ಲಿ ಮೇಲೇಳದೇ ಇರೋ ಹಾಗೆ ಹೂತುಬಿಡಬೇಕೆನ್ನೋ ರೋಷ ಮನಸ್ಸಿನೊಳಗೆ ಮಾತ್ರ. 'I am bored of being good' ಎಂದು ಹೇಳಿಕೊಳ್ಳುತ್ತಲೇ ಇದೆ ಮನಸ್ಸು. ಆದರೆ ಕೃತಿಗೆ ಇಳಿಯಲಾಗಲೇ ಇಲ್ಲ. ಒಬ್ಬ ಕ್ಲೆರಿಕ್ - ತನ್ನ ಪರಿಚಯಸ್ಥ - 'ನಿಮಗೆ ಸಹಾಯ ಮಾಡಲಿಕ್ಕೆ ನಾ ಇರೋದು. ನನ್ನ expectations ಏನೂ ಬೇರೆಯವರ ಹಾಗೆ ಜಾಸ್ತಿ ಇರೋದಿಲ್ಲ' ಎಂದು ಹೇಳಿದಾಗ, 'ಹಲ್ಕಟ್ ಬೋಳಿಮಗನೆ' ಎಂದು ಬಾಯಿ ತುದೀಗೆ ಬಂದದ್ದು ಎಲ್ಲಿ ಹೋಯ್ತು? 'ಹ್ಹಿ ಹ್ಹಿ ಕೆಹ್ಹೆ ' ಎಂದು ಆತನಿಂದ ತನಗೆ ಸಹಾಯವಾಗಿದೆಯೆಂದು ಆತನಿಗನ್ನಿಸಲಿ ಎನ್ನುವರೀತಿಯಲ್ಲಿ ಸದಾನಂದ ನಕ್ಕ.  ಯಾಕೆ ಮನಸ್ಸು ಬೆತ್ತಲಾಗಲು ಬೆದರುತ್ತಿದೆ?

ಎಲ್ಲರೂ ಒಗ್ಗಿದ್ದಾರೆ. ಎಲ್ಲರೂ ಒಪ್ಪಿಯೇ ನಿರ್ಮಿಸಿಕೊಂಡ ಪದ್ಧತಿಯೇ. ಎಲ್ಲರಿಗೂ ಬೇಕಾದ್ದೆ?! ಲಂಚ ಎಲ್ಲರಿಗೂ ಬೇಕಾದ್ದೆಗವರ್ನಮೆಂಟ್ ಬಿಲ್ಡಿಂಗಿನೊಳಗೆ ಕಾಲಿರಿಸಿದ ಚಪ್ಪಲಿಯೂ ಸಹ ಹೇಳುವ ಮಾತಿದು. ಎಲ್ಲರೂ ಒಪ್ಪಿದ್ದಾರೆ - ಎಲ್ಲರೂ ಅನುಸರಿಸುತ್ತಿದ್ದಾರೆ - ಎಲ್ಲರಿಗೂ ಸಮ್ಮತಿಯಿದೆ. ಮತ್ತೇಕೆ ಸದಾನಂದ ಬೆವರಿದಮೊದಲ ಬಾರಿಗೆ ಪೋಲೀಸ್ ವೆರಿಫಿಕೇಷನ್ ಗೆ ಮನೆಯ ಬಳಿ ಕಾನ್ಸ್ಟೇಬಲ್ ಒಬ್ಬ ಬರ್ತಾನೆ. ಅವನನ್ನ ನೋಡ್ಕೋಳಿ ಅನ್ನೋ ಮಾತು ಆತನಿಗೆ ಸುಲಭಕ್ಕೆ ನಿಲುಕಲಿಲ್ಲ. ಸದಾನಂದನ ದೃಷ್ಟಿಯಲ್ಲಿ 'ನೋಡಿಕೊಳ್ಳಿಅನ್ನೋದು ಕಾಫಿ ಟೀ ಕೊಟ್ಟು ಒಳ್ಳೆಯದಾಗಿ ವರ್ತಿಸಿ ಉಪಚರಿಸಿ ಅಷ್ಟೆ. ಹಾಗಾದರೆ ಅದೂ ಸಹ ಲಂಚವೇಅನ್ನೋದು ಸದಾನಂದ ಮನಸ್ಸನ್ನ ಈಗ ಪೀಡಿಸಲಾರಂಭಿಸಿದೆ‌. ಅದು ಮಾಡೋದೇತಕ್ಕೆಆತ ನನಗೆ ಸಹಾಯ ಮಾಡ್ತಾನೇಂತಲೇಹಾಗಾದ್ರೆ ದಾರೀಲಿ ಹೋಗೋ ಸಂಬಂಧವೇ ಇರದ ದಾಸಯ್ಯನನ್ನೂ ಹೀಗೇ ಉಪಚರಿಸ್ತೇನೆಯೇಇಲ್ಲ. ಇದೀಗ ಹೀಗೆ ಈ ವೆರಿಫಿಕೇಷನ್ ನ ಮುಖಾಂತರ ನನ್ನ ಅವನ ಪರಿಚಯ ಏರ್ಪಟ್ಟಿತಷ್ಟೆ. ಪರಿಚಯದ ವ್ಯಕ್ತಿಯಾಗಿ ಆತನನ್ನ ಕಾಫಿಗೆ ಕರೆದೆ! ಅಷ್ಟೆ ಸುಲಭ. ಆತ ನನಗೆ ಸಹಾಯ ಮಾಡಿದಾ ಅಂತ ಹೇಳಿ ಕಾಫಿ ನೀಡಿ ಉಪಚರಿಸಿದೆ ಅಂತ ಹೇಳಿದರೆಮೂಲಭೂತವಾಗಿಯೇ ತಪ್ಪು ಹೇಳಿದ್ದೇನೆ. ಆತ ಮಾಡಿದ್ದು ಸಹಾಯವಲ್ಲ. ಕರ್ತವ್ಯ. ಆದರೆ ವಾದವೇ ಬೇರೆ! ಈಗಿನ ಸಮಾಜದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮಾಡೋನು ನಿಜವಾಗಿಯು ಸಹಾಯ ಮಾಡಿದಾನೇಂತಲೇ! ಅದಕ್ಕೆ ಬಳುವಳಿಯಾಗಿ ನನ್ನ ಮನಃತೃಪ್ತಿಗಾಗಿ ಅಷ್ಟೋ ಇಷ್ಟೋ - ಕಾಫಿಯೋಟೀಯೋಬಿರಿಯಾನಿಯೋ೫೦೦ ರೂ ಹಣವೋ! ಕಾಫಿಟೀಬಿರಿಯಾನಿ ಕೊಡೋದರಲ್ಲಿ ಯಾವುದೇ ಮುಜುಗರವಿಲ್ಲದ ಸದಾನಂದನಿಗೆಕೈ ಬೆಚ್ಚಗಾಗಿಸೋದು ಅಂತ ತಿಳಿದ ತಕ್ಷಣವೇ ಚಿಂತೆಗೀಡಾಗದ. ಇದೊಂದು ಅನಿರೀಕ್ಷಿತ ಭೆಟಿ. ಸದಾನಂದ ಬೆವರಿದಚಿಂತಿಸಿದ. ಮನಸ್ಸಲ್ಲೇ ಆ ಭೇಟಿಯ ಬಗ್ಗೆ ಕಲ್ಪಿಸಿದ. ಪೋಲಿಸನೇ ಕೇಳುತ್ತಾನೋಅಥವಾ ತಾನೇ ಕೇಳಬೇಕೋಹೇಗೆ ಕೇಳಬೋದು ಆತಇಲ್ಲ ತಾ ಹೇಗೆ ಕೇಳೋದುಕೊಡದೇ ಇದ್ದರೆಬೈದುಕೊಳ್ತಾನೆಯೇಸದಾನಂದ ರಾತ್ರಿಯೆಲ್ಲಾ ಚಿಂತಿಸಿದ. ತನ್ನ ಪಿಯೂಸಿಯ ದಿನ ನೆನಪಾಯಿತು‌. ಪಿಯೂಸಿ ಮುಗಿಸಿ ಡಿಗ್ರಿಗೆ ಸೇರಿದ ಮೇಲೆ ಸದಾನಂದ ಮಾಡಿದ ಮೊದಲ ಸಾಹಸವೆಂದರೆ 'ಪ್ರೊಪೋಸ್'. ಪಿಯೂಸಿಯಲ್ಲಿ ತಾನು ಕಣ್ಣಲ್ಲೇ ಪ್ರೀತಿಸಿ ರಮಿಸಿದ್ದ ಹುಡುಯೊಬ್ಬಳ ಈ ಮೇಲನ್ನ ಸಂಪಾದಿಸಿ ಆಕೆಗೆ ಒಂದೆರೆಡು ಪೇಜುಗಟ್ಟಲೆ ಮನಸ್ಸಿಗೆ ತೋಚಿದ್ದು ಗೀಚಿದ್ದ. ಆ ಸಂಜೆಯೇ ಆತನಿಗೊಂದು ಕಾಲ್ - ನಾಳೆ ನಿನ್ನೊಟ್ಟಿಗೆ ಮಾತನಾಡಬೇಕು.ಗಂಡಸಿನ ಧ್ವನಿ. ಸದಾನಂದ ರಾತ್ರಿಯೆಲ್ಲಾ ನಡುಗಿದ್ದ. ನಿದ್ದೆಯೇ ಬಾರದೇ ಹೊರಳಾಡಿ ದೂಡಿದ್ದ ಆ ರಾತ್ರಿ ಇನ್ನೆಂದೂ ತನ್ನ ಜೀವದಲ್ಲಿ ಘಟಿಸದಿರಲೆಂದು ಬೇಡಿದ್ದೆಷ್ಟೋ. ಈಗಲೂ ಹಾಗೆಯೇನಾಳೆ ಯಮಕಿಂಕರ ಬಂದು  ಕುತ್ತಿಗೆಗೆ ಹಗ್ಗ ಬಿಗಿದು ಎಳೆದೊಯ್ಯುವ ಮುಹೂರ್ತ. ತಪ್ಪಿಸಿಕೊಳ್ಳಲಸಾಧ್ಯ.

ಕಾನ್ಸಟೇಬಲ್ ಬಂದ. ದಪ್ಪ ಮೀಸೆಒಳ್ಳೆಯ ಮೈಕಟ್ಟು‌. ನೋಡಿದೊಡನೆಯೇ ಸದಾನಂದನ ಕಾಲುಗಳು ಕುಸಿಯುವಂತೆ ಭಾಸವಾಯಿತು‌. 'ಕೊಡೋದಿಲ್ಲ ಅಂದ್ರೆ ಬಿಟ್ಟಾನೆಯೇ?' ಸದಾನಂದ ಅಳುಕಿ ಹಿಂಜರೆಯುತ್ತ ಕೈ ಕುಲುಕಿದ.

'ನೀವು ಸದಾನಂದ?'

'ಹೌದು'

'ಈ ಒಂದೆರೆಡು ಫಾರಂ ನ ಅಕ್ಕ ಪಕ್ಕದ ಮನೇವ್ರ ಹತ್ತಿರ ಫಿಲ್ ಮಾಡ್ಸಿರಿ. ನಾನು ಅರ್ಧ ಗಂಟೆ ಬರ್ತೇನೆಹೇಳಿ ಹೊರಟ.

ಸದಾನಂದನಿಗೆ ಸ್ವಲ್ಪ ನೆಮ್ಮದಿಯಾಯಿತು. ಉಸಿರು ಬಿಟ್ಟು ಆತನ‌ ಮೊಪೆಡ್ ಡುರ್ ಎಂದು ಹೊಗೆ ಬಿಟ್ಟು ಹೋದ ಹಾದಿಯನ್ನ ನೋಡುತ್ತಾ ನಿಂತ. 

'ಫಿಲ್ ಮಾಡಿಸಿ ಆಯಿತು. ಮತ್ತೆನಾದ್ರು formalities ಇದ್ಯಾ?'

'ಇನ್ನೇನಿಲ್ರೀ. ಮತ್ತೆ ಯಾವ ಕಾಲೇಜು?'

ಕಾನ್ಸ್ಟೇಬಲ್ ಹರಟಲಾರಂಭಿಸಿದ. ಸದಾನಂದನಿಗೆ ಖಾತ್ರಿಯಾಗ್ತಾ ಹೋಯಿತು. 'ಓಹ್ಹೋ! ಒಮ್ಮಲೆ ಹೀಗೆ ಮೈಮೇಲೆರಗುವುವವರಲ್ಲ ಇವರುಎಂದು ಧೈರ್ಯ ತಂದುಕೊಂಡ. ಕಾಲು ಭದ್ರವಾಗಿ ನಿಂತಿತು. ಧ್ವನಿ ತೆರೆಯಿತು. ತಲೆ ಎತ್ತಿತು.

'ಸರಿ ಮತ್ತೆ ಹೊರಡಲಾ?'

ಸದಾನಂದನಿಗೆ ಹೂಂ ಅನ್ನುವ ಮುನ್ನ ಏನಾದರೂ ಕೇಳಬೇಕೆ ಅನ್ನೋ ಗೊಂದಲ ಮತ್ತೂ ಮೂಡಿತು. 'ಛೀ.‌.. ಹೇಸಿಗೆ.. ಕೇಳಕೂಡದು. ಕೇಳದಿದ್ರೆ ಕೆಟ್ಟವನೆಂದುಕೊಂಡಾನೋಬೇರೇವ್ರೆಲ್ಲಾ ಬೆಚ್ಚಗಿರಿಸಿ ನಾ ಇರಿಸದೇ ಹೋದ್ರೆ ನನ್ನ ತಿರಸ್ಕರಿಸಿಯಾನೋ?' ಇಷ್ಟೆಲ್ಲಾ ಏಕಮಾತ್ರ ಕ್ಷಣದಲ್ಲಿ ಜರುಗಿ ಹೋಗುವ ಸಾಧ್ಯತೆಯಿದೆ. ಸದಾನಂದನಿಗೆ ಕಷ್ಟಕೊಡಕೂಡದೂಂತಲೋ ಆತ ಕೇಳಿದ

'ನಮ್ಮನ್ನ ನೋಡ್ಕೋಳ್ಳೇ ಇಲ್ಲ?'

ಈ ಪ್ರಶ್ನೆ ಸದಾನಂದನ ಪಟ್ಟಿಯಲ್ಲಿ ಹಿಂದಿನ ದಿನವೇ ಇತ್ತು. ಇದಕ್ಕುತ್ತರವೂ ಸಿದ್ಧವಿತ್ತು.

'ಈಗಾಗಲೇ ಕೊಟ್ಟು ಕೊಟ್ಟು ಸುಸ್ತಾಗಿ ಹೋಗಿದ್ದೇನೆ ಸಾರ್. ನನ್ನ ಮೇಲೆಯೇ ನನಗೆ ಹೇಸಿಗೆ ಮೂಡಿದೆಸದಾನಂದ ಯಾಂತ್ರಿಕವಾಗಿಯೇ ಹೇಳಿದ.

'ಓಹ್ ಸಾರಿ brother. ಬೇಡ ಬಿಡಿ.‌ ಬರ್ತೇನೆ'

ಸದಾನಂದನಿಗೆ ಇದು ಅನಿರೀಕ್ಷಿತ ವರ್ತನೆ. ಅಚ್ಚರಿ. ಈ ರೀತಿಯ ಪ್ರತಿ ವರ್ತನೆ ಸದಾನಂದ ಯೋಚಿಸಿದ್ದಿರಲಿಲ್ಲ. ಇದ್ದಕ್ಕಿದ್ದ ಹಾಗೆ ಸದಾನಂದ ಯಾವುದೋ ವಶೀಕರಣಕ್ಕೆ ಒಳಗಾಗಿ ಹೋದ. ಅತೀ ಪ್ರಬಲವಾದ್ದು. ಸುತ್ತಲಿನ ಸಮಾಜ ಹೆಮ್ಮೆಯಿಂದ ಬೀಗಿ ಜಯೋತ್ಸಾಹದಲ್ಲಿ ಮಿಂದುಹೋದ ಸಮಯವದು.  ಮನಸ್ಸು ನಿಯಂತ್ರಣವನ್ನೇ ಕಳೆದು ಕೊಂಡುಕೈ ಪರ್ಸಿಗೆ ಜಾರಿ ಇನ್ನೂರ ರೂಗಳನ್ನ ಎತ್ತಿ ಸದಾನಂದ ಆತನ ಜೇಬಿಗಿರಿಸಿದ. ಏತಕ್ಕೆ ಏನೋ ತಿಳಿಯಲಿಲ್ಲ. 

'ಬೇಡ brother ನಂಗೆ ಒಳ್ಳೇದಾಗಲ್ಲಎಂದು ಆತ ತೆಗೆಯಲಾರಂಭಸಿದಾಗ

'ಇರ್ಲಿ. ಇಡಿ. ಬರ್ತೇನೆ. ಥ್ಯಾಂಕ್ಯೂಎಂದು ಸದಾನಂದ ಮನೆಯ ಗೇಟು ಹಾಕಿ ಒಳಗೆ ಹೋದ.

_______________________________________________________________________

'It is rare that emotions come under the influence of logic (it would be good if it happens). But the other way is always true' ಟಾರ್ಪಲ್ಲಿನ ತೂತಿನಿಂದ ನೀರು ತೊಟ್ಟಿಕ್ಕುತ್ತಿದ್ದಂತೆ ನಾಗ್ ಕಾಫಿ ಹೀರುತ್ತಾ  ಮಾತಾಡಿದ್ದ.

 _______________________________________________________________________________

ಇಂದೂ ಸಹ ಈ ಕ್ಲೆರಿಕ್ಕನ ಮುಂದೆ ಸದಾನಂದನದು ಅದೇ ಸ್ಥಿತಿ. ಸದಾನಂದ ಕೊಟ್ಟೂ ಕೊಟ್ಟೂ ಹೇಸಿಗೆಯ ಉಚ್ಛ್ರಾಯವನ್ನ ತಲುಪಿದ್ದಾಗಿತ್ತು‌. ಆದರೂ ಮನಸ್ಸು ಬೆತ್ತಲಾಗಲು ಇನ್ನೇನಕ್ಕೋ ಬೆದರುತ್ತಿತ್ತು. 


No comments:

Post a Comment