ಇಲ್ಲೇ ಹೀಗೇ ಕಳೆದುಹೋದದ್ದಿರಬೇಕು...

 

 

ಈಚೆಗೆ ಸದಾನಂದ ಒಬ್ಬನೇ ಯಾವುದೋ ಲೋಕದಲ್ಲಿ ಮುಳುಗಿರುತ್ತಾನೆ. 'ಇದರಿಂದ ಹೊರಗೆ ಅರಳಿಕೊಳ್ಳಲು ಅಸಾಧ್ಯವಾಗಿದೆ' ಚಿಂತಿಸುತ್ತಾನೆ. ಜೀವನ ತನ್ನರ್ಥವನ್ನ ಬಿಚ್ಚಿಕೊಳ್ಳುತ್ತಾ ಹೋಗುತ್ತಿರುವ ರೀತಿಗೆ ಬೆಚ್ಚಿದ್ದಾನೆ. ಎಷ್ಟೆಲ್ಲಾ ಯೋಚನೆ, ಓಲೈಕೆಗಳ ತರುವಾಯವೂ ಜೀವನ ಹಂಗಿಸುತ್ತದೆ. ಸದಾನಂದ ಅಬಲನಾಗಿದ್ದಾನೆ, ಮತ್ತಷ್ಟು ಆಗುತ್ತಿದ್ದಾನೆ. ಕಟ್ಟಕಡೆಗೆ 'ತನ್ನಿಂದೇನಾಗಬೇಕಿದೆ' ಎನ್ನುವಲ್ಲಿಗೆ ಬಂದು ನಿಲ್ಲುತ್ತಾನೆ. ಸಮಾನತೆ, ಉದ್ಧಾರ, ಬಡತನ, ನ್ಯಾಯ, ಸತ್ಯ, ಸಾಧನೆ, ಸಾರ್ಥಕತೆ, ಕೃತಾರ್ಥತೆ ಎಲ್ಲವೂ ಮತ್ತಷ್ಟು ಬೆಚ್ಚಿಸುತ್ತವೆ.‌ ಸುತ್ತಲಿನ ಜನರ, ಜಗದ ವ್ಯವಹಾರಗಳಿಗೆ ಅಸೂಯೆ ಪಡುತ್ತಾನೆ. 'Is there a person who is so much against creativity?' ಎಂದು ತನ್ನ ಬಗ್ಗೆಯೇ ಹೇಸಿಗೆ ಪಡುತ್ತಾನೆ.  ಇಲ್ಲಿಂದ ಜೀವನ ಅರ್ಥ ಕಳೆದುಕೊಳ್ಳುತ್ತಾ ಹೋಗುತ್ತದೆ. ಸೃಷ್ಟಿ ಇರೋದೆ creativityಯ ಮೂಲಕವಲ್ಲವೆ. ಅದು ಅನಿವಾರ್ಯ - ಯಾವ ದೃಷ್ಟಿಯಲ್ಲಿ? ಒಬ್ಬ ಕಲೆಗಾರನಿಗೆ ಸೃಜಿಸೋದು ಯಾವ ದೃಷ್ಟಿಯಲ್ಲಿ ಅನಿವಾರ್ಯ? ಅದೇ ಒಬ್ಬ ಕಬ್ಬಿಣದ ಆಯುಧವನ್ನ ಸೃಷ್ಟಿಮಾಡಿದವನಿಗೆ ಅದು ಯಾವ ರೀತಿ ಅನಿವಾರ್ಯ? Creativityಯೇ ಅನಿವಾರ್ಯವೇ ಅಥವಾ creativity ಮತ್ತೊಂದ್ಯಾವುದಕ್ಕೋ ಅನಿವಾರ್ಯವೇ? ಮನುಷ್ಯ ತನ್ನ ಇತಿಮಿತಿಗಳನ್ನ ದಾಟಿದಾಗ ನಿಬ್ಬೆರಗಾಗೋದು ಸಹಜ. ಸೃಜನಶೀಲತೆಯೇ ಸಾಧನವಲ್ಲವೇ ಹಾಗಿನ ನಿಬ್ಬೆರಗಿಗೆ? 'ಈಗ ಈ ಪ್ರಶ್ನೆಗೆ ಬರೋಣ. ಈ ಜಗತ್ತಿನಲ್ಲಿ ನನ್ನ (ಯಾರದು ಸದ್ಯಕ್ಕೆ ಬೇಡ) ಸೃಷ್ಟಿಯಾಗಿದೆ - ಆಕಸ್ಮಿಕವಾಗಿ. ಜಗತ್ತು ನಡೆಯುತ್ತಿದೆ - ಒಂದು ಸರಪಳಿಯೊಳಗೆ. ಈ ಸರಪಳಿಯಲ್ಲಿ ನನಗೆ ಸಿಕ್ಕಿಕೊಂಡಿರುವ ಭಾಗಗಳಾವುವು? ಅಕಸ್ಮಾತ್ ನನ್ನ ಕೊಂಡಿ ಕಳಚಿತು ಅಂದ್ಕೋಳಿ ಸರಪಳಿಯಲ್ಲೇನಾದರೂ ಏರುಪೇರಾದೀತೆ? ಹೇಗೆ?  ಸರಪಳಿ ಮತ್ತೆ ಸರಿಮಾಡಿಕೊಂಡು ನಡೀತದೆ, ನಡೀಲೇಬೇಕು. ನನ್ನ ಹುಟ್ಟಿನ ಅರ್ಥವೇನು ಹಾಗಿದ್ರೆ?'

'ನಂಗೆ ಅದೆಲ್ಲಾ ಗೊತ್ತಿಲ್ಲ. ಆದರೆ ನಮ್ಮನ್ನ ಆ ರೀತಿಯ ಯೋಚನೆಗಳಿಂದ ದೂರ ಇಡಲಿಕ್ಕಾಗಿಯೇ ಸಾಕಷ್ಟು ವಿಚಾರಗಳಿದ್ದಾವೆ! ಒಂದು ದೇವರು, ಎರಡು ಸಾಧನೆ, ಮೂರು ಉದ್ಧಾರ ಅಥವಾ ಕೊಡುಗೆ.. ಹೀಗೆ. ನಿಮ್ಮ ಸಮಸ್ಯೆ ಏನು ಹೇಳಬಲ್ಲೆ. ನಿಮಗೆ ಯಾವುದರಲ್ಲೂ ಆಸಕ್ತಿ ಕಡಿಮೆಯಾಗಿದೆ. ಆಸಕ್ತಿ‌ ಇದ್ದ ವಿಚಾರದಲ್ಲೂ ಸಹ. ಕಾರಣ ನಿಮ್ಮ ಮೇಲಿನ ಅಪನಂಬಿಕೆ ಇದ್ದಿರಬೋದು. ಯಾವುದೋ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡೋಕ್ಕೆ ನಿಮ್ಮ ಕೈಲಿ ಸಾಧ್ಯವಿಲ್ಲ ಇದೇ ಕಾರಣಕ್ಕೆ. ' ಸದಾನಂದ ಒಳಗೊಳಗೆ ಹೇಳಿಕೊಂಡು ಒಮ್ಮೊಮ್ಮೆ ನಗುತ್ತಾನೆ, ಮತ್ತೊಮ್ಮೆ ಸುಮ್ಮನೆಯೇ ಗೋಡೆ ನೋಡುತ್ತಾ ಕುಳಿತುಬಿಡುತ್ತಾನೆ.

 

'ಹ್ಹಾ ... ಹ್ಹಾ... ಹಾಂ..‌ಸಾಧನೆ ಮಾಡೋದೇ ಪರಮ ಧ್ಯೇಯ! ನನಗೆ ಅದು ಹಿಡಿಸುತ್ತಲೂ ಇಲ್ಲ, ಇತ್ತ ಕಡೆ ಏನೂ ಸಾಧಿಸಿಲ್ಲ ಅನ್ನೋ ಕೊರಗೂ ಸಹ. ನಾನಿನ್ನೂ ಪಕ್ವವಾಗಿಲ್ಲ. ಎಲ್ಲವನ್ನೂ ಹರಿದು ಗಾಳಿಗೆ ತೂರಿ ಹೋಗಬೇಕು ಯಾವುದಕ್ಕೂ ಸಿಕ್ಕದ ಹಾಗೆ. ಅಯ್ಯೋ ಹಾಗೆ ತೂರಿ ಹೋದ್ರೆ ಏನೂ ಗುರುತು ಉಳಿಸದೆ ಅನ್ನೋ ರಣ. ತೂರಬೇಕು ಅಥವಾ ಗುರುತು ಉಳಿಸಲು ಸವೆಸಬೇಕು.‌ ಯಾವುದು? ಯಾವುದು?' ಈ ಗೊಂದಲಗಳಿಗೆ ಕಾರಣ ತಾನೇನು ಮಾಡದೆ, ಸೃಜಿಸದೆ ಸುಮ್ಮನೆ ಕುಳಿತುರುವುದೇ ಎಂದು ಸದಾನಂದನನ್ನು ಕಾಡುತ್ತಿದೆ. ಅದಕ್ಕಾಗಿಯೇ ಸೃಜನಶೀಲತೆಯ ಬಗ್ಗೆ ಅಷ್ಟೊಂದು ಅಸಹ್ಯ (ಅಥವಾ ಅಸೂಯೆಯೇ?). ಈ ಗುರುತು ಉಳಿಸಬೇಕೆನ್ನೋದು ಅವನಿಗೆ ನುಂಗಲಾಗದ ತುತ್ತಾಗಿದೆ. ಬೇಕು, ಬೇಡ ಎರಡೂ ಉಂಟು. ತನನ್ನ ತಾನು ವಿಜೃಂಭಿಸಿಕೊಳ್ಳೋದಷ್ಟೇ ಆತನಿಗೆ ಗುರುತು ಉಳೀಸೋದರ ಹಿಂದಿನ ಧ್ಯೇಯವಾಗಿ ಕಂಡುಬಂದಿದೆ.

 

ತನ್ನೊಳಗಿನ ನಿಜ ಸತ್ವದ ಅರಿವಿನ ಶೂನ್ಯತೆಯೇ ಸದಾನಂದನನ್ನ ನಿದ್ದೆಗೆಡುವಂತೆ ಮಾಡುತ್ತಿದ್ದದ್ದೆನ್ನುವ ದಿಶೆಯಲ್ಲಿ ಸದಾನಂದನ ಆಲೋಚನೆಯೆಂದೂ ಹೊಕ್ಕಿರಲಿಲ್ಲ. ಅದರ ರೂಪ ಹೇಗಿದ್ದೀತು? ಆದರೂ ಒಳಗೊಳಗೆ ಪ್ರಶ್ನೆಯೇ ತಿಳಿಯದೇ ಏನೋ ಉತ್ತರಕ್ಕಾಗಿ ಹವಣಿಸುತ್ತಿದ್ದ. ತಾನು ಮಾಡಿದ ಯಾವ ಕಾರ್ಯದಲ್ಲಿ ತನ್ನ ಬಗ್ಗೆಯೇ ತನಗೆ ಹೇಸಿಗೆಯಾಗದಂತ, ತನ್ನನ್ನೇ ತಾನು ವಿಜೃಂಭೊಸಿಕೊಳ್ಳುವ ಉದ್ದೇಶವಿಲ್ಲದ ಮನಸ್ಥಿತಿ ಇದ್ದದ್ಸು ಎಂಬುದಂತನ್ನೂ ಸಾಕಷ್ಟು ಬಾರೆ ಯೋಚಿಸಿದ್ದ.

 

ಸದಾನಂದ ತನ್ನನ್ನು ತಾನು ಎಷ್ಟು ನೈಜ ಎಂದು ಪ್ರತೀ ಸನ್ನಿವೇಶದಲ್ಲೂ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದ. ಆದರೆ ಎಲ್ಲರಿಗೂ ಒಳ್ಳೆಯವನಾಗಿರಲು ಬಯಸೋನಿಗೆ ಇದು ಎಂದೆಂದಿಗೂ ಅಸಾಧ್ಯವಾದ ಗುರಿಯೇ!  ಮಂಡ್ಯದಲ್ಲಿರುವಾಗ ಸದಾನಂದನಿಗೆ ಈ ಸೈಜ ಅಸ್ಮಿತೆಯ ಪ್ರಶ್ನೆ ಇದ್ದಿತ್ತಾದರೂ ಹೆಚ್ಚಾಗಿ ಕಾಡಿರಲಿಲ್ಲ. ಅದಕ್ಕೆ ಕಾರಣವೂ ಸ್ಪಷ್ಟ. ಸದಾನಂದನ ಮನಸ್ಸನ್ನ ಬಾಧಿಸುತ್ತಿದ್ದ ನಳಿನ ಅವನನ್ನ ಅಸ್ಮಿತೆಯ ಪ್ರಶ್ನೆಗಳಿಂದೆಲ್ಲಾ ದೂರ ಉಳಿಸಿದ್ದಳು‌. ಆಗಿನ್ನೂ ಸದಾನಂದನಷ್ಟೇ ನಳಿನಳ ಹಿಂದೆ ಅಲೆಯುತ್ತಿದ್ದದ್ದು. ಆಕೆಯಿನ್ನೂ ಸದಾನಂದನ ಪ್ರೀತಿಯನ್ನ ಒಪ್ಪೇ ಇರಲಿಲ್ಲ. ಮನಸ್ಸು ಒಂದು ಕ್ಷಣವೂ ಸುಮ್ಮನಿದ್ದದ್ದಿಲ್ಲವೇ ಇಲ್ಲ.‌ ಕ್ಷಣಕ್ಷಣಕ್ಕೂ ನಳಿನಳದ್ದೇ ಆಲೋಚನೆ, ನೋವು. ಇದು ಜೀವನಪರ್ಯಂತ ತನಗೆ ತಪ್ಪಿದ್ದಲ್ಲ - ತನ್ನೊಳಗೇ ಕ್ಷಣಕ್ಷಣಕ್ಕೂ ಬಿಡುವಿಲ್ಲದೆಯೇ ಮಾತನಾಡಿಕೊಳ್ಳುತ್ತಾ ಇರೋದು - ಎನ್ನೋದು ನಳಿನಳೊಟ್ಟಿಗೆ ಮಾದುವೆಯಾದಮೇಲೂ ಸದಾನಂದ ಯಾವುದೋ ತಿಳಿಯದ ಪ್ರಶ್ನೆಗೆ ಮನಸ್ಸೊಳಗೇ ಉತ್ತರ ಹುಡುಕುವಾಗ ಸ್ಪಷ್ಟವಾಯಿತು. ಈಚೀಚೆಗೆ ಸದಾನಂದನ ಸ್ವಗತ ಹೆಚ್ಚಾಗಿ ಹೋಗಿತ್ತು.

 

'If you start believing or not believing in something, that moment, there itself you separated yourself from some others, although you may think beliefs unite people. Beliefs do both - unite and separate'

 

'ಹಾಗಾದ್ರೆ ನಂಬಿಕೆಗಳೆ ಇರಬಾರದೂಂತಲೇ? ನಾಗೇಂದ್ರ ಕೇಳಿದ್ದರು. 

'ಹಾಗಲ್ಲ. ನಂಬಿಕೆಗಳು ಇರೋದು, ಅಪನಂಬಿಕೆಗಳು ಇರೋದು ಸಹಜ. It is inevitable that you need to get separated from some others once you have beliefs. ನಂಬಿಕೆಗಳೇ ಇಲ್ಲದೋನು ಇರಲಿಕ್ಕೆ ಸಾಧ್ಯವ? ಒಂದು ಪ್ರಶ್ನೆ. ಹಾಗೆ ಇರೋನು ಎಲ್ಲರಿಂದಲೂ ಸೆಪರೇಟೆಡ್ ಎ ಕಣ್ರಿ!' ಸದಾನಂದನ ಈ ಮಾತುಗಳಿಗೆ ಆತನ ನಂಬಿಕೆಗಳೇ ಇಲ್ಲದ personalityಯೆ ಕಾರಣವಿದ್ದಿರಬಹುದು. ಈ ನಂಬಿಕೆಗಳಿದ್ದರಷ್ಟೇ ಏನಾದರೂ ಗುರುತು ಉಳಿಸಲಿಕ್ಕೆ ಸಾಧ್ಯವಲ್ಲವೇ. ಹೀಗಾಗಿ ಸದಾನಂದನಿಗೆ ನಂಬಿಕೆಗಳೇ ಹೆಚ್ಚಾಗಿ ಇಲ್ಲದ ತನ್ನ ಬಗ್ಗೆಯೇ ಆಗಾಗ್ಗೆ ಕೋಪ.

 

ಒಮ್ಮೊಮ್ಮೆ ಸಂಜೆ ಮೋಡಕಟ್ಟಿ, ಗುಡುಗು ಮಿಂಚುಗಳಾದಾಗ ಹಾಗೆ ಯೂನಿವರ್ಸಿಟಿಯ ಕ್ಯಾಂಪಸಿನ ಖಾಲಿ ರೋಡುಗಳಲ್ಲಿ ವಾಕ್ ಮಾಡ್ತಾ ಈ ರೀತಿ ಮುಕ್ತವಾಗಿ ಯಾವುದೇ ಜವಾಬ್ದಾರಿಯುತವೆನಿಸದೇ ಇರೋ ಮಾತುಗಳನ್ನಾಡೋದನ್ನ ಸದಾನಂದ ಎಂಜಾಯ್ ಮಾಡ್ತಿದ್ದ. ನಾಗೇಂದ್ರ, ಡೇವಿಡ್, ಹರ್ಷಿತ - ಆ ಸಮಯದಲ್ಲಿ ಮಾತುಗಳನ್ನ ಆಲಿಸಿ, ಅದ್ಕೊಂದಷ್ಟು ಸೇರಿಸಿ,  ಬೆಳೆಸಿ, ಎತ್ತೆತ್ತಲೋ ದಿಕ್ಕೆಟ್ಟಹಾಗೆ ಕೊಂಡೊಯ್ಯಲು ಯಾರಾದರೊಬ್ಬರು ಇದ್ದರಷ್ಟೇ ಸದಾನಂದನಿಗೆ ನೆಮ್ಮದಿ. ಮತ್ತೆ ಮತ್ತೆ ಹೆಂಡತಿಗ್ಹೇಳಿದ ಮಾತುಗಳು ನೆನಪಾದವು - 'ಇನ್ನೊಬ್ಬನಿಲ್ಲದೆ ನಾನಿರೋದಕ್ಕಾದರೂ ಸಾಧ್ಯವೇನೆ? ಹಾಗೆ ಎಲ್ಲವನ್ನೂ ತೂರಿ ಬಿಟ್ಟು ಹೋಗಲು ಸಾಧ್ಯವೇನೆ?'

'ಅದರ ಅನಿವಾರ್ಯತೆಯಾದರೂ ಏನು?' ಹೆಂಡತಿ ಈತನ ಸಂಕಷ್ಟ ಅರಿಯದೆ ಮುಗ್ಧವಾಗಿಯೇ ಪ್ರಶ್ನಿಸಿದ್ದಳು.

'ಹಾಂ... ಅನಿವಾರ್ಯತೆಯಾದರೂ ಏನು?' ಸದಾನಂದನ ಬಳಿ ಉತ್ತರವಿಲ್ಲದಿದ್ದರೂ ಬೇಕಾದ್ದು  ಈ ರೀತಿಯ ಪ್ರಶ್ನೆಗಳಿಂದ ಮುಕ್ತಿ.


No comments:

Post a Comment