Thursday, July 30, 2015

ಅಷ್ಟಮಿಯ ರಾತ್ರಿಯೂ - ಅರಿವೆಂಬ ಮರಿಚಿಕೆಯೂ


ನನ್ನದು ಯಾವೂರೆಂದು ಹೇಳಲಿ? ೫ ವರ್ಷಗಳಿಗೊಮ್ಮೆ ಅಪ್ಪ ಕರೆದುಕೊಂಡು ಹೋದ ಊರೆಲ್ಲಾ ನನ್ನದೇ. ಮಂಡ್ಯ, ಶಿವಮೊಗ್ಗ, ಭದ್ರಾವತಿ, ಹಾಸನ, ಕೊನೆಗೀಗ ಮೈಸೂರು. ಇದೊಂದು ರೀತಿ ಶಿವಮೊಗ್ಗದಿಂದ ಮೈಸೂರಿನ ಟ್ರೈನ್ ಹತ್ತಿದಾಗೆ. ಅಪ್ಪನ ರಿಟೈರ್ಮೆಂಟ್ ಇಲ್ಲಿಯೆ ಮೈಸೂರಲ್ಲಿಯೇ ಎಂದು ಬ್ಯಾಂಕಿನವರು ನಿಶ್ಚಯಿಸಿದ್ದರು. ಊರೂರು ಸುತ್ತುತ್ತ, ಹೊಸ ಹೊಸ ಪರಿಸರಗಳಿಗೆ ನಮ್ಮನ್ನು ತೆರೆದುಕೊಳ್ಳುತ್ತ, ಅಷ್ಟಾಗಿ ಏನನ್ನೂ ಅನುಭವಿಸಲಾಗದೆ, ಅಮ್ಮನ ಭಯದ ನೆರಳಲ್ಲೇ ನಾನು ಅಕ್ಕ ಬೆಳೆದದ್ದು. ಮೈಸೂರಿಗೆ ಬರುವುದರೊಳಗೆ ,ಅಕ್ಕ, ಓದೆಂಬ ಮಹಾಸಾಗರವನ್ನು ಆಗಲೆ ದಾಟಿದ್ದಾಗಿತ್ತು. ಅವಳ ಅಂಕಪಟ್ಟಿ ಬಹಳ ಬಡಕಲಾಗಿದ್ದರೂ ಅವಳಿಗೆ ಯಾವ ಕೊರಗೂ ಇದ್ದಿರಲಿಲ್ಲ. ಕಾರಣ ಸ್ಪಷ್ಟ - ಪ್ರೀತಿ. ಇದು ಮನೆಯಲ್ಲಿ ತಿಳಿದದ್ದು ಇವಳ ಮದುವೆಯ ಪ್ರಸ್ತಾಪ ಬಂದಾಗ. ಕೈಯಲ್ಲೇ ತುಪ್ಪವಿದ್ದುದರಿಂದ ವರಾನ್ವೇಷಣೆಯಾಗಲಿ, ವರನ ಮನೆಯವರ ಬಗೆಗಿನ ವಿಚಾರಣೆಯಾಗಲಿ ಮಾಡುವ ತಾಪತ್ರಯ ಒದಗಿ ಬರಲಿಲ್ಲ. ಗ್ರಹ ನಕ್ಷತ್ರಗಳ, ಮನಸ್ಸುಗಳ ತಿಕ್ಕಾಟಗಳ ನಡುವೆಯೂ ಇವಳ ಪ್ರೇಮ ಜಯಿಸಿ, ಇವಳಿಷ್ಟ ಪಟ್ಟ ಆಂಧ್ರದ ಅತ್ತೆಯ ಮಗನೊಡನೆಯೇ ಇವಳ ಪಾಣಿಗ್ರಹಣ ನೆರವೇರಿತು. ಇವಳನ್ನು ಅಲ್ಲಿಯ ಮನೆ ತುಂಬಲು ನಾವು ಒಂಗೋಲಿಗೆ ಹೊರಟಿದ್ದೂ ಆಯಿತು.


ಅದು ಅಷ್ಟಮಿಯ ದಿನ. ಶಾಸ್ತ್ರಗಳೆಲ್ಲವನ್ನೂ ಮುಗಿಸಿ ಅಂದೇ ಹೊರಡಬೇಕೆಂದು, ಅದಕ್ಕಾಗಿ ತನಗೊಂದು ಕಾರು ಗೊತ್ತು ಮಾಡಬೇಕೆಂದು ಸೋದರಮಾವನವರೊಬ್ಬರಿಗೆ ಅಮ್ಮನ ಆಜ್ಞೆಯಾಗಿತ್ತು. ಅಷ್ಟಮಿಯ ದಿನ ಹೊರಡುವುದು ಬೇಡವೆಂದು ಅಪ್ಪ ಎಷ್ಟೇ ಹೇಳಿದರೂ ಅವಳು ಕೇಳುವ ಸ್ಥಿತಿಯಲಿರಲಿಲ್ಲ. ಅದಕ್ಕೆ ಅವಳದ್ದೇ ಆದ ಕಾರಣಗಳೂ ಇದ್ದವು. ಅವಳೊದ್ದೊಂದು ರೀತಿಯ ಅಸ್ವಾಭಾವಿಕ ಹಠ. ಹಿಂದಿನ ರಾತ್ರಿ ತಾನು ‘ಆಜ್ಞಾಪಿಸಿದ್ದನ್ನು’ ತನ್ನ ಅಳಿಯ ಅಹಂಕಾರದಿಂದ ಧಿಕ್ಕರಿಸಿದನೆಂದೂ, ಅದರಿಂದ ತನಗೆ ತಡೆಯಲಾರದಷ್ಟು ನೋವು, ಅವಮಾನವಾಗಿದೆಯೆಂದು, ಮಾರನೆಯ ದಿನವೇ ಅಲ್ಲಿಂದ ಹೊರಡಬೇಕೆಂದು ನನಗೆ ಅಪ್ಪನವರಿಗೆ ಘರ್ಜಿಸಿದಳು. ಅವಳ ಈ ರೀತಿಯ ಸ್ವಭಾವ ಹೊಸತದ್ದೇನಾಗಿರಲಿಲ್ಲ. ಹಿಂದೆ ಅದಾರದ್ದೋ ದೂರದ ತಾತನವರ ಷಷ್ಠಿಬ್ಧಿಪೂರ್ತಿಯ ಸಮಾರಂಭದಲ್ಲಿ ತನಗೆ ಬಸ್ಸಿಗೆ ಲೇಟಾಗಿದ್ದಾಗಿಯೂ, ಆ ಕೂಡಲೇ ತಾಂಬೂಲ ಕೊಟ್ಟು ಕಳಿಸಿಬಿಡಬೇಕೇಂದು ಹಠ ಹಿಡಿದಿದ್ದಳಂತೆ. ಆದರೆ ಕಾರ್ಯಕ್ರಮದ ಕೊನೆಯವರೆಗೂ ಅಲ್ಲೆ ಉಳಿಸಿಕೊಂಡಿದ್ದರಿಂದ ತನಗೆ ಬಸ್ ತಪ್ಪಿ ಹೋಯಿತೆಂಬ ಕೋಪಕ್ಕೆ, ಕೊಟ್ಟ ತಾಂಬೂಲವನ್ನು ಪಕ್ಕಕ್ಕೆ ಬಿಸುಟಿ ಅವರ ಅಹಂಕಾರವನ್ನು ಮುರಿದಿದ್ದೇನೆಂದು ಭಾವಿಸಿದ್ದಳಂತೆ. ಅವಳನ್ನು ಸಮಾಧಾನ ಮಾಡುವ ವಿಧಾನ ತಿಳಿದದ್ದು ಅಪ್ಪನಿಗೆ ಮಾತ್ರ. ಮತ್ತೆಲ್ಲಿ ಇನ್ನೂ ಹೆಚ್ಚು ರಾದ್ಧಾಂತ ಮಾಡುತ್ತಾಳೆಂಬ ‘ಭಯಕ್ಕೆ’, ಅಷ್ಟಮಿಯಾದರೂ ಸರಿಯೆ ಹೊರಟಿಬಿಡೋಣವೆಂದು ಅಪ್ಪ ನಿರ್ಧರಿಸಿದ್ದು.

ನನಗೆ ಅಪ್ಪನಿಗೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಹೆಚ್ಚು. ಇದೇ ಕಾರಣಕ್ಕೆ ವಾರಗಟ್ಟಲೇ ಇಬ್ಬರು ಮಾತು ಬಿಟ್ಟದ್ದೂ ಉಂಟು. ಕಾರಣದ, ಉದ್ದೇಶದ ಅರಿವಿಲ್ಲದೆ ರೂಢಿಸಿಕೊಂಡಿರುವ ಅಭ್ಯಾಸಗಳೆಂದರೆ ನನಗೆ ಸ್ವಲ್ಪ ಕಿರಿ ಕಿರಿ. ‘ನಮ್ಮಪ್ಪ ಹೇಳಿದ್ದು ನಾನು ಎದಿರು ಮಾತಾಡ್ದೆ ಮಾಡ್ತಾ ಇದೀನಿ. ನನಗೆ ಅದರಲ್ಲೇ ನೆಮ್ಮದಿ. ನಾ ಹೇಳಿದ್ದು ಈಗ ನೀನು ಮಾಡು’ - ಇದೊಂದೆ ಅಪ್ಪನ ಉದ್ದೇಶ. ‘ನಿಮ್ಮ ಪಾಯಿಖಾನೆ ನೆಲ್ಲಿಯನ್ನ ಯಾವುದ್ಯಾವುದೋ ನಕ್ಷತ್ರಗಳ ನಿಯಮಾನುಸಾರ ನೀವು ನಿಯಂತ್ರಿಸ್ತಿರೋ ಹಾಗೆ ನನ್ನನ್ನೂ ಸಹ ನಿಯಂತ್ರಿಸ್ತಾ ಇದ್ದೀರಿ ಅಷ್ಟೆ.’ - ಎಂದು ರೇಗುತ್ತಿದ್ದೆ. ವಾರಕ್ಕೆ ಮೂರು ದಿನ ಗಡ್ಡ ತೆಗೆಯುವ ಹಾಗಿಲ್ಲ. ಅಷ್ಟಮಿ, ನವಮಿ, ಷಷ್ಠಿ, ದ್ವಾದಶಿ, ಹುಣ್ಣಿಮೆ, ಅಮಾವಾಸ್ಯೆ ದಿನಗಳಂದಂತೂ ತೆಗೆಯುವ ಹಾಗೇ ಇಲ್ಲ. ಜೊತೆಗೊಂದು ಜನ್ಮ ನಕ್ಷತ್ರದ ದಿನ. ನನಗೆ ಹತ್ತಿದ್ದ ಕೋಪಕ್ಕೆ ನಾನು ತಿಂಗಳುಗಳಗಟ್ಟಲೆ ಗಡ್ಡ ತೆಗೆಯದೇ ಇದ್ದದ್ದೂ ಉಂಟು.

ಇವರ ಈ ಗೋಜಲ ಜಂಜಾಟದಲ್ಲಿ ನನಗೂ ಊರಿಗೆ ಬಂದರೆ ಸಾಕೆನಿಸಿತ್ತು. ನಾನೂ ಸಿದ್ಧನಾಗಿದ್ದೆ.

ಸೋದರಮಾವನವರು ಕಾರ್ ಒಂದು ಬುಕ್ ಮಾಡಿದ್ದರು. ಅದರ ಡೈವರ್ ತೆಲುಗಿನವ. ಬೆಂಗಳೂರಿನವರೆಗೆ ಸಲೀಸಾಗಿ ಹೋಗಬಲ್ಲವನಾಗಿದ್ದ. ಅಲ್ಲಿಂದ ಮೈಸೂರಿಗೆ ಅವನಿಗೆ ದಾರಿ ತಿಳಿದಿರಲಿಲ್ಲ. ವಾಸ್ತವವಾಗಿ ಅವನಿಗೆ ಮೈಸೂರೇ ಗೊತ್ತಿದ್ದಿರಲಿಲ್ಲ. ಯಾರೋ ಅತ್ತೆಯವರೊಬ್ಬರ ಮಗಳು ಕಾರಿಗೆ ಎದಿರು ಬರುವುದರೊಂದಿಗೆ ಪ್ರಯಾಣ ಆರಂಭವಾಯಿತು.ಈ ರೀತಿಯ ಪಧ್ಧತಿಯನ್ನು ನಾನು ಅಕ್ಕ ವಿರೋಧಿಸುತ್ತಾ ಬಂದಿದ್ದೆವು. ಎಲ್ಲಾದರೂ ಎನಾದರೂ ಅಪಘಾತವಾದರೆ ಯಾರೊಬ್ಬರ ಬಾಯಲ್ಲಾದರೂ ಆ ಹೆಣ್ಣು ಮಗಳ ಬಗ್ಗೆ ದೂಷಣೆ ಬರಬಹುದಾದ ಅಥವಾ ಆ ಹೆಣ್ಣು ಮಗಳಿಗೇ ದೂಷಣೆಗಳ ಭಯ ಮೂಡಿಸಬಹುದ್ದಾಗಿರುವ ಒಂದು ಪದ್ಧತಿ. ನಮ್ಮ ಹಣೆಯ ಬರಹಕ್ಕೆ ಅನ್ಯರನ್ನು ದೂಷಿಸುವ ಕೆಟ್ಟ ಪಧ್ಧತಿ. ಇದಕ್ಕಾಗಿಯೇ, ‘ನಿಮ್ಮ ಮಾವನವರಿಗೆ ಕೆಲಸದಲ್ಲಿ ಬಡ್ತಿ ಸಿಕ್ಕಿದುದಕ್ಕೆ ನಿನಗೆ ಮಗಳು ಹುಟ್ಟಿದ್ದೇ ಕಾರಣ’ ಎಂದಾಗ ಅಕ್ಕ ಕೆಂಡಾಮಂಡಲವಾಗೋದು.

ಕೋಲಾರವಿದ್ದಿರಬಹುದು. ವಾಹನಗಳೆಲ್ಲವನ್ನೂ ತಡೆ ಹಿಡಿದಿದ್ದರಿಂದ ಸ್ವಲ್ಪ ಸೆಖೆ ಎದ್ದು ನಿದ್ದೆಗೆ ಜಾರಿದ್ದ ನನಗೆ ಎಚ್ಚರವಾಯಿತು.  ಅಪ್ಪನ ಗೊಣಗಾಟ ಅದಾಗಲೇ ಶುರುವಾಗಿತ್ತು.‘ಅಷ್ಟಮಿ ದಿನ ಹೊರಡೋದು ಬೇಡ ಅಂತ ಎಷ್ಟು ಹೇಳಿದ್ರು ಕೇಳ್ಳಿಲ್ಲ. ಈಗ ನೋಡು ಅಲ್ಲಿ ಆಕ್ಸಿಡೆಂಟ್. ಅಪಶಕುನ.’  - ವಾಹನಗಳನ್ನು ತಡೆಹಿಡಿದಿದ್ದರ ಕಾರಣ ತಿಳಿಯಿತು.  ಅವನೊಬ್ಬನ ತಲೆಬುರುಡೆಯ ಚಿಪ್ಪು ಅಲ್ಲೆ ‘ಹೆಲ್ಮೆಟ್ ರಹಿತ ಚಾಲನೆ, ಆಸ್ಪತ್ರಗೆ ರವಾನೆ’, ಎನ್ನುವ ಫಲಕದ ಕೆಳಗೆ ಬಿಚ್ಚಿ ಆ ಫಲಕದ ‘ಆಸ್ಪತ್ರೆ’ ಬದಲು ‘ಯಮಲೋಕ’ ಹಾಕಿರೆನ್ನುವುದನ್ನು ಸೂಚಿಸಿದಂತಿತ್ತು. ಅದೊಂದು ಭೀಕರ ಅಪಘಾತವೇ. ಆ ಆಕ್ಸಿಡೆಂಟಿನ ಭೀಕರತೆ ನಮ್ಮ ಮನಸ್ಸನ್ನು ಸ್ವಲ್ಪ ವಿಚಲಿತಗೊಳಿಸಿತ್ತು. ಅದರ ಭೀಕರತೆಗೆ ಮೈಸೂರು ಹೋಗಿ ಸೇರಿದರೆ ಸಾಕು ಎಂದೆನಿಸಿತ್ತು ಎಲ್ಲರಿಗೂ. ಬೆಂಗಳೂರು ತಲುಪಿದಾಗ ಸಂಜೆ ಸುಮಾರು ೫.

ಬಹುಶಃ ಬೆಂಗಳೂರಲ್ಲಿ ನಮಗೆ ಸಿಕ್ಕವರಲ್ಲಿ ಒಬ್ಬರಿಗಾದರೂ ಮೈಸೂರಿನ ಹಾದಿ ತಿಳಿದಿದ್ದರೆ ನಮಗೆ ಹಾಗಾಗುತ್ತಿರಲಿಲ್ಲವೇನೊ. ಒಂದು ರೀತಿಯಲ್ಲಿ ಹಾಗೆ ನೋಡುವುದಾದರೆ ಬೆಂಗಳೂರು ಬಹಳಷ್ಟು ಕಲುಷಿತಗೊಂಡಿದೆ - ಅನ್ಯ ಭಾಷಿಕರಿಂದ. ‘ಮೈಸೂರಿನ ದಾರಿ ಯಾವುದು?’ ಎನ್ನುವುದಕ್ಕೆ ಬಹುತೇಕರ ಉತ್ತರ, ‘ಐ ಡೋಂಟ್ ನೊ’. ಈ ಡ್ರೈವರ್ ಅದಾವುದೋ ದಾರಿ ಹಿಡಿದು, ಇನ್ಯಾವುದೋ ಫ಼್ಲೈ-ಓವರ್ ಹತ್ತಿ, ಮತ್ಯಾವುದೋ ಇಳಿದು ಎಲ್ಲೋ ಬಂದು ನಿಂತಿದ್ದ. ಬೆಂಗಳೂರಿನಲ್ಲಿ ಈ ಫ಼್ಲೈ-ಓವರ್ ವಿಚಾರದಲ್ಲಿ ಬಹಳ ಹುಷಾರಾಗಿರಬೇಕು. ಮೊನ್ನೆ ಯಾವುದೊ ಪರೀಕ್ಷೆಗೆಂದು ಸ್ನೇಹಿತನೊಟ್ಟಿಗೆ ಬೈಕಿನಲ್ಲಿ ಅದ್ಯಾವುದೋ ತಪ್ಪು ಪ್ಲೈ-ಓವರ್ ಹಿಡಿದಕ್ಕಾಗಿ, ೧೦ ಕಿ.ಮೀ ಹೆಚ್ಚು ದೂರ ಕ್ರಮಿಸಬೇಕಾಗಿ ಬಂದಿತ್ತು. ಈ ಹತ್ತು ವರುಷಗಳಲ್ಲಿ ಬೆಂಗಳೂರು ಮುಖೇನ ಮೈಸೂರಿಗೆ ಕನಿಷ್ಠ ಪಕ್ಷ ನೂರು ಸಾರಿಯಾದರೂ ಪ್ರಯಾಣಿಸಿದ್ದಿರಬಹುದು. ಹಾಗಾಗಿಯೂ ಮಾರ್ಗ ತಿಳಿದುಕೊಳ್ಳದ್ದೆ ಇದ್ದದ್ದು ನಿಜವಾಗಿಯೂ ನಾಚಿಕೆ ಪಡುವಂತಹ ವಿಷಯವೇ. ದುರಾದೃಷ್ಟಕ್ಕೆ ಮೊಬೈಲ್‌ನಲ್ಲಿ ಚಾರ್ಜ್ ಇದ್ದಿಲ್ಲದ ಕಾರಣ ಮ್ಯಾಪ್ ಸಹ ಓಪೆನ್ ಮಾಡುವ ಹಾಗಿರಲಿಲ್ಲ. ಕೊನೆಗಲ್ಲೆಲ್ಲೊ ಕೆ.ಎ - ೦೯ ಗಾಡಿ ಕಂಡು ಮಧುಮೇಹಿ ಅಮ್ಮ ಮಾಡುವ ಕಾಫಿಯಲ್ಲಿ ಸಕ್ಕರೆ ಹಾಕಿದಷ್ಟು ಖುಷಿಯಾಯಿತು. ಎಲ್ಲರಿಗೂ  ಮೈಸೂರೇ ಸಿಕ್ಕಿದಷ್ಟು ನೆಮ್ಮದಿಯಾಗಿತ್ತು. ಆದರೆ ಅಪ್ಪನ ನಂಬಿಕೆಯ ಹಾಗೆ ಅಷ್ಟಮಿಯ ಅಟ್ಟಹಾಸ ಅದಾಗಲೇ ಆರಂಭವಾಗಿತ್ತೆಂದೆನಿಸುತ್ತದೆ. ಅದಕ್ಕೆ ಸೂಚನೆಯೇನೋ ಎಂಬಂತೆ ಡ್ರೈವರ್ ಹೈವೇಯಲ್ಲಿ ಕಾರನ್ನು ಬದಿಗೆ ಹಾಕಿದ. ‘ಯಾಕೆ? ಏನಾಯಿತು’ ಅಪ್ಪ ಕೇಳಿದರು. ‘ಕಾರಿನ ಗಾಜಿನ ಮೇಲೆ  ಧೂಳು ಕೂತಂತಿದೆ. ಕತ್ತಲಾದ್ದರಿಂದ ಸ್ವಲ್ಪ ಮಬ್ಬಾಗಿ ಕಾಣುತ್ತಿದೆ. ನೀರು ಹಾಕಿ ಒರೆಸಬೇಕು’ ಎಂದವನೆ ಕೇಳಗಿಳಿದ. ‘ಕಾರಿಗೆ ಧೂಳೋ ಅಥವಾ ಇವನ ಕಣ್ಣಿಗೋ’ ಎಂದು ಗೊಣಗುತ್ತ ಅಪ್ಪ ಆತನಿಗೆ ಟೀ ಹಾಕಿ ಬಾ ಎಂದು ಕೈಗೆ ೧೦ ರೂ ಇತ್ತರು. ಗಾಜಿಗೆ ನೀರು ಹಾಕಿ ಆತ ಅಲ್ಲೆ ಬಳಿಯಲ್ಲಿದ್ದ ಹೋಟೆಲ್‌ಗೆ ನಡೆದ. ಇತ್ತ ಅಮ್ಮ ತನ್ನ ವೇದನೆಗಳನ್ನು ಹೇಳೀಕೊಳ್ಳುತ್ತಾ ಅಪ್ಪನ ಅರೆಬರೆ ನಿದ್ದೆಯನ್ನೂ, ತಲೆಯನ್ನೂ ತಿಂದು ಹಾಕುತ್ತಿದ್ದಳು. ಮಧ್ಯೆ ಮಧ್ಯೆ ನಾನು ಅಪ್ಪನನ್ನು ಕಿಚಾಯಿಸುತ್ತಾ ಪರೋಕ್ಷವಾಗಿ ಅಮ್ಮನ ಸ್ಥಿತಿಯನ್ನೂ, ಅವಳ ಬುದ್ಧಿಯನ್ನೂ ಹೀಗಳೆಯುತ್ತಿದ್ದೆ. ಹೀಗೆ ಅರ್ಧ ಗಂಟೆ ಕಳೆದಿರಬಹುದು. ಡ್ರೈವರ್‌ನ ಸುಳಿವೇ ಇಲ್ಲ. ಹೋಟೆಲ್‌ನಲ್ಲಿ ಊಟಕ್ಕೇ ಇಳಿದುಬಿಟ್ಟನೋ ಏನೋ ಎಂದು ಕಾರಿಂದ ಕೆಳಗಿಳಿದೆ. ಹೋಟೆಲ್ ಖಾಲಿ ಹೊಡೆಯುತ್ತಿದೆ. ಇನ್ನೊಂದೆಡೆ ತಿರುಗಿದೆ. ಒಂದು ದೊಡ್ಡ ಜನರ ಗುಂಪು ಹೈವೇಯ ಮಧ್ಯ ಭಾಗದಲ್ಲಿ ಕೂಡಿತ್ತು.
                                                                           ೨
‘ಹೇಯ್ ಕಳ್ಳಿ, ಇಲ್ ನೋಡು ನಿನ್ ಮಾವ..’ ಖುಷಿಯಿಂದ ಅಕ್ಕನ ಮಗುವನ್ನ ತೊಡೆಯ ಮೇಲೆ ಮಲಗಿಸಿ ಆಡಿಸುತ್ತಿದ್ದೆ. ಅದೇಕೋ ನಮ್ಮ ಸಮುದಾಯದಲ್ಲಿ ಹೆಣ್ಣು ಮಗು ಹುಟ್ಟಿತೆಂಬ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರಿಗೂ ಒಂದು ರೀತಿಯ ಆಶ್ಚರ್ಯ, ಖುಷಿ. ಗಂಡು ಮಗು ನೋಡಿ ನೋಡಿ ಸಾಕಾಗಿದ್ದೆನಿಸಿದಂತಿದ್ದ ನಮಗೆಲ್ಲಾ ಹೆಣ್ಣೆಂದೊಡನೆ ಖುಷಿಯಾಗಿದ್ದು ಸಹಜವೇ. ಹಿಂದಿನ ದಿನ ಹುಟ್ಟಿದ್ದ ಮಗುವನ್ನು ಬಹಳ ಜಾಗರೂಕತೆಯಿಂದ, ಅಮ್ಮನ ಮುಂದಾಳತ್ವದಲ್ಲಿ ಒಬ್ಬೊಬ್ಬರು ಎತ್ತಿಕೊಳ್ಳುವುದನ್ನು ಕಲಿತೆವು. ‘ಹ್ಞಾಂ.. ಹ್ಞಾಂ... ಹಾಗೆ. ಕುತ್ತಿಗೆಗೆ ಕೈ ಕೊಡಬೇಕು..’ ಅಮ್ಮ ಕಲಿಸುತ್ತಿದ್ದರು. ಇದರ ನಡುವೆ ಮಗು ಅಕ್ಕಳನ್ನೇ ಹೋಲುತ್ತಿದೆ ಎನ್ನುವುದು ಅಪ್ಪನ ವಾದ. ಇಲ್ಲ ಭಾವನನ್ನು ಹೋಲುತ್ತಿದೆ ಎನ್ನುವುದು ಅತ್ತಿಗೆಯದ್ದು. ಮಧ್ಯೆ ತಲೆದೂರಿಸಿ, ‘ಇದು ಅದರ ಸೋದರ ಮಾವನ್ನ ಹೋಲ್ತಿದೆ’ ಎಂದು ನಾನು. ಅಲ್ಲೆ ಇದ್ದ ಅಮ್ಮ ನಗುತ್ತ, ‘ಮೊದಲು ಹೋಗಿ ಶೇವ್ ಮಾಡು. ನೀನು ಹೇಗೆ ಕಾಣ್ತೀಯ ಅಂತ ಗೊತ್ತಾದ್ಮೇಲೆ ಅದರ ವಿಚಾರಕ್ಕೆ ಬಾ’ ಎಂದು ಕಿಚಾಯಿಸುತ್ತಾ, ಮಗು ತನ್ನನ್ನು ಹೋಲುತ್ತದೆ ಎನ್ನೋದೆ?
ಅಕ್ಕಳಿಗೆ ಮಗುವಾದಮೇಲಂತೂ ನಾನು ಬಿಡುವಿಲ್ಲದವನಾಗಿಬಿಟ್ಟೆ. ‘ಈಗ್ಲೇ ಇಷ್ಟು ಮಾಡ್ತಿದೀಯ ಅದಕ್ಕೆ. ಇನ್ನು ಅದ್ರ ಮದ್ವೆ ಹೇಗ್ ಮಾಡ್ತೀಯೊ’ ಎಂದು ಬರುವವರೆಲ್ಲ ಹೇಳುತ್ತಿದ್ದರು. ಅಷ್ಟು ನಿಯತ್ತಾಗಿ ಸೋದರ ಮಾವನ ಕೆಲಸವನ್ನು ನಿಭಾಯಿಸುತ್ತಿದ್ದೆ. ಆಸ್ಪತ್ರೆಯಿಂದ ಮನೆಗೆ, ಮನೆಯಿಂದ ಆಸ್ಪತ್ರೆಗೆ ದಿನಕ್ಕೆ ಹತ್ತದಿನೈದು ಬಾರಿ.
ಅಂದು ಬೇಳಿಗ್ಗೆ ಸುಮಾರು ೬ ೩೦ ಇದ್ದಿರಬಹುದು. ಕಾಫಿ ಸಪ್ಲೈಗೆಂದು ಆಸ್ಪತ್ರೆಗೆ ಬಂದಿದ್ದೆ. ಯಾರೋ ಕದ ತಟ್ಟಿದರು.
‘ಓಹ್! ಅಜ್ಜಿ.. ಬನ್ನಿ ಬನ್ನಿ’.
‘ಅಜ್ಜಿ ಅನ್ಬೇಡ ಅಂತ ಎಷ್ಟು ಸಾರಿ ಹೇಳಿಲ್ಲ ನಿಂಗೆ. ಆಂಟಿ...’ ಮಂಜು ಅಂಕಲ್ ಅವರ ಅಮ್ಮ ಚಪ್ಪಲಿಯನ್ನೂ ಹೊರಗೆ ಬಿಡದೆ ಒಳಗೆ ನುಗ್ಗಿದರು.
‘ಏನ್ ಅಣ್ಣಾವ್ರೆ. ಏನಂತಾರೆ ಮಗಳು ಮೊಮ್ಮಗಳು..’ ಕಾಫಿ ಹೀರುತ್ತಿದ್ದ ಅಪ್ಪನನ್ನು ಕೇಳೀದರು.
‘ನೋಡಿ. ನೀವೇ ಆರೈಕೆ ಮಾಡೋದು ಇವ್ರಿಬ್ರನ್ನ ಇನ್ಮುಂದೆ’
‘ಮಾಡೋಣ ಬಿಡಿ. ಅದ್ರಲ್ಲೇನಿದೆ. ನರ್ಸ್‌ಗಳಿಗೆ ಇದು ಬಿಟ್ರೆ ಬೇರೇನಾದ್ರು ಕೆಲ್ಸ ಉಂಟೆ ಹೇಳಿ..’
ನೀಲಮ್ಮ ಅದೇ ಆಸ್ಪತ್ರೆಯಲ್ಲಿ ಹೆಡ್‌ನರ್ಸ್ ಆಗಿ ವಾಲೆಂಟರಿ ರಿಟೈರ್‌ಮೆಂಟ್ ತೆಗೆದುಕೊಂಡಿದ್ದರು. ಸುಮಾರು ೯ ವರುಷಗಳ ಪರಿಚಯ. ಅವರ ಪರಿಚಯವಾದದ್ದು ನಾವು ನಾಗಮಂಗಲದಲ್ಲಿದ್ದಾಗ. ಆಗಾಗ ಮನೆಗೆ ಊಟಕ್ಕೆ ಬಂದು ಹೋಗುತ್ತಿದ್ದರು. ಮಾತಾಡುವುದರಿಂದ ಹಿಡಿದು ಊಟ ಮಾಡಿ ಕೈ ತೊಳೆಯುವವರೆಗಿನ ಅವರ ಯಾವ ಪದ್ಧತಿಯೂ ನನಗೆ ಹಿಡಿಸುತ್ತಿರಲಿಲ್ಲ. ನಾನು ಹೇಳಿದ್ದಕ್ಕೆಲ್ಲಾ, ಮಾಡುವುದಕ್ಕೆಲ್ಲ ಅವರದ್ದು ಸಂಪೂರ್ಣ ವಿರುದ್ಧ. ಅಪ್ಪನಿಗೋಸ್ಕರ ಎದುರುತ್ತರ ಕೊಡದೆ ಹಲ್ಲು ಕಚ್ಚಿಕೊಂಡಿರುತ್ತಿದ್ದೆ.
‘ಚಿಕ್ಕಣ್ಣಾವ್ರು ಹೇಗ್ ಬಂದ್ರಿ? ಬೈಕ್‌ನಲ್ಲೋ?’
‘ಹ್ಞಾಂ..’
‘ಹಾಗಿದ್ರೆ ನನ್ನ ನನ್ ಮನೇವರ್ಗು ಬಿಟ್ಬಿಡಪ್ಪ. ಮನೆ ನೋಡಿದಾಗಾಗತ್ತೆ. ಹೇಗಿದ್ರು ನಾಳೆ ದಿನ ಕರ್ಕೊಂಡ್ ಹೋಗ್ಲಿಕ್ಕೆ ಬರ್ಬೇಕಲ್ಲ.’ - ಹೊರಡೋದಿಕ್ಕೆ ಸಿದ್ಧನಾಗ್ತಿದ್ದ ನನಗೆ ನೀಲಮ್ಮ ಆಜ್ಞೆ ಮಾಡಿದ ಹಾಗನ್ನಿಸಿತು. ಬಂದ ಕೋಪದ ನಡುವೆಯೂ, ‘ನನಗೆ ನಿಮ್ಮನೆ ಗೊತ್ತಿದೆ ಆಂಟಿ’ ಎಂದು ನನ್ನೊಟ್ಟಿಗೆ ಅವರು ಬರವುದು ಬೇಡವೆಂಬ ಅರ್ಥದಲ್ಲಿ ತಿಳಿಸಿದೆ. ಅದು ತಿಳಿಯಿತೇನೊ, ಅಪ್ಪನಿಗೆ ‘ಓಹ್! ಅಣ್ಣಾವ್ರೆ. ಇದೇನ್ಯೆ ನಿಮ್ಮ ಮಗ ಬೆಳೆದಿರೋ ರೀತಿ. ಒಂದು ನಿಮ್ಸ ಬಂದು ಬಿಟ್ಟು ಹೋಗೋದಿಕ್ಕೆ ಯಾಕ್ ಹಿಂಗ್ ಆಡ್ತವ್ರೆ’ ನೀಲಮ್ಮ ದೂಷಿಸಿದರು.
‘ಇಲ್ಲ ಬರ್ತಾನೆ ಬಿಡಿ’, ಅವರ ಮಗಳ ಕೈಯನ್ನು ತನ್ನ ಮಗ ಹಿಡಿಯುವ ಹಾಗೆ ಮಾಡುತ್ತೇನೆಂಬಂತೆ ಅಪ್ಪ ಆಶ್ವಾಸನೆ ಇತ್ತರು. ಪಕ್ಕದ ರೂಮಿನಲ್ಲಿದ್ದ ತನ್ನ ಬ್ಯಾಗ್ ತರಲು ನೀಲಮ್ಮ ಹೊರಟಾಗ ಇತ್ತ ಅಪ್ಪನ ತರಗತಿ ಶುರುವಾಯಿತು.
‘ಏನೋ ಕತ್ತೆ ರಾಸ್ಕಲ್. ಮರೆತು ಹೋದ್ಯ ಅವರ ಮಗ ಮಾಡಿದ್ದ ಉಪಕಾರಾನಾ? ಅವರು ಅವತ್ತು ಆ ಛಳಿ ರಾತ್ರಿಲಿ ಬರದೇ ಹೋಗಿದ್ರೆ ಏನ್ ಗತಿ? ಇಲ್ಲಿಂದಿಲ್ಲಿಗೆ ಬಿಡೋದಕ್ಕೆ ಅಳ್ತೀಯಲ್ಲೋ ಸ್ವಾರ್ಥಿ, ಕೃತಘ್ನ..’
ಎಲ್ಲಾ ನೆನಪಾಗಿ ಹಾಗೆ ಮೌನ ತಳೆದೆ. ನಮ್ಮಪ್ಪನಿಗೊಂದು ಚಾಳಿ. ಯಾರಿಗಾದರೂ ಏನಾದರೂ ಉಪದೆಶ ಕೊಡುತ್ತಿರಬೇಕಾದರೆ, ಇಲ್ಲವೇ ಬೈಯುತ್ತಿರಬೇಕಾದರೆ ಎದುರಿದ್ದವ ಸುಮ್ಮನೆ ಇದ್ದರೆ ತಾನು ಹೇಳುತ್ತಿರುವುದು ಆತನನ್ನು ತಾಕುತ್ತಿದೆಯೆಂದೂ, ತನ್ನ ಮಾತುಗಳಿಂದಲೇ ಆತನ ಜೀವನದಲ್ಲಿನ ನೋವುಗಳೆಲ್ಲಾ, ಕೆಟ್ಟ ಗುಣಗಳೆಲ್ಲಾ ದೂರವಾಗಿ ಆತ ಸದ್ಗುಣ ಸಂಪನ್ನನೂ, ಅತ್ಯಂತ ಸಂತೋಷಿಯೂ ಆಗಿರುವುದೇಂದು ಕಲ್ಪಿಸಿಕೊಂಡು ಮತ್ತಷ್ಟು ಮೊಳೆ ಹೊಡೆಯುವುದು.
ನನಗೂ ಸಾಕಾಯಿತು. ಎದ್ದವನೇ ಏನೂ ಹೇಳದೆಯೇ ಹೊರಟೆ. ನಾನೇನೋ ಬೇರೆಯದ್ದೇ ಆಲೊಚಿಸುತ್ತಿದ್ದೆ. ನನ್ನ ವರ್ತನೆಗೆ ಒಳಗೊಳಗೆ ಸಮರ್ಥನೆಯನ್ನು  ಕಂಡುಕೊಳ್ಳುತ್ತಿದ್ದೆ. ‘ಮಂಜು ಅಂಕಲ್ ನಮಗೆ ಕಷ್ಟದಲ್ಲಿ ಸಹಾಯ ಮಾಡಿದ್ದಾರೆ ನಿಜ. ಆದರೆ ಇವರಿಗೇನು ಕಷ್ಟ ಈಗ. ಆರಾಮಾಗಿ ಬಸ್ಸಿನಲ್ಲೇ ಹೋಗಬೋದಲ್ಲ. ಏನಾದರೂ ಕಷ್ಟವಿದ್ದರೆ ಸಹಾಯ ಮಾಡೋಣ.’ ಬೈಕನ್ನು ‘ಧಡಕ್..ಭಡಕ್’ ಎಂದು ಹಳ್ಳದಲ್ಲಿ ಬಿಡುತ್ತಾ ನೀಲಮ್ಮನನ್ನು ಮನೆಗೆ ತಲುಪಿಸಿದೆ.
‘ಎಷ್ಟೆ ಆದರೂ ಈ ಆಂಟಿ ಸರಿ ಇಲ್ಲ. ಚಪ್ಪಲಿ ಹೊರಗೆ ಬಿಟ್ಟು ಬರಬೇಕು ಅನ್ನೋ ಪರಿಜ್ಞಾನ ಕೂಡ ಇಲ್ಲ. ಇವ್ರೇನು ಡಾಕ್ಟರ್ರಾ ಅಕ್ಕಳಿಗೆ ಅದು ತಿನ್ಬೇಡ ಇದು ತಿನ್ಬೇಡ ಅನ್ನೋದಕ್ಕೆ. ಅದಿರ್ಲಿ ಅಕ್ಕ ಮಲಗೇ ಹಾಲು ಕುಡಿಸ್ಬೋದು ಅಂತ ಡಾಕ್ಟರ್ರೇ ಹೇಳಿರಬೇಕಾದ್ರೆ ಇವ್ರದ್ದೇನು?.... ಹೀಗಿರುವಾಗ ನಾನು ಕೃತಘ್ನನೇಗಾಗ್ತೇನೆ?’ ಎಂಬ ಆಲೋಚನೆಗಳು ನೀಲಮ್ಮನಲ್ಲಿಯ ದೋಷಗಳ ಪಟ್ಟಿ ತಯಾರು ಮಾಡಿದ್ದವು.

                                                                            ೩
ಸಾಮಾನ್ಯವಾಗಿ ಯಾವ ಅಪಘಾತವಾದರೂ ಹೆಚ್ಚು ಆಸಕ್ತಿ ತೋರದವ ಅಂದೆಕೋ ಆ ಗುಂಪಿನೆಡೆಗೆ ಹೆಜ್ಜೆ ಹಾಕಿದೆ. ಆ ಕ್ಷಣಕ್ಕೆ ಹಾಗೆಯೆ ತಲೆಯಲ್ಲಿ ಮಿಂಚಿ ಹೋದ ಒಂದು ಕೆಟ್ಟ ಆಲೋಚನೆಯೇ ಅದಕ್ಕೆ ಕಾರಣ. ಇನ್ನೂ ಬಾರದ ಡ್ರೈವರ್ ಹೋಟಲ್‌ನಲ್ಲಿಯೂ ಇಲ್ಲದಿದ್ದದ್ದು, ರಸ್ತೆಯಲ್ಲಿ ಕೂಡಿಕೊಂಡಿದ್ದ ಗುಂಪು, ಈ ಬದಿಯಿಂದ ನೀರಿನ ಬಾಟಲ್ ಕೊಂಡೊಯ್ಯುತ್ತಿದ್ದ ಹುಡುಗ, ಎಲ್ಲವೂ ನಮ್ಮ ಡ್ರೈವರ್‌ಗೇನಾದರೂ ಆಗಬಾರದ್ದಾಗಿತ್ತೆ ಎನ್ನುವ ಆಲೋಚನೆಯನ್ನು ಸೃಷ್ಟಿಸಿದವು. ಒಮ್ಮೆಲೆ ಎದೆ ಝಲ್ ಎಂದಿತು. ಖಚಿತಪಡಿಸಿಕೊಳ್ಳೋದಕ್ಕೆ ಅಲ್ಲೇ ಒಬ್ಬನ ಬಳಿಯಿದ್ದ ಟಾರ್ಚನ್ನು ಆತನ ಮುಖಕ್ಕೆ ಬಿಟ್ಟೆ. ಹೌದು! ಅದು ನಮ್ಮ ಡ್ರೈವರ್ರೇ! ಬಾಯಿ, ತಲೆ, ಕಿವಿಯಿಂದ ರಕ್ತ ಸೋರುತ್ತಿದೆ. ಗಲ್ಲ, ಕೈ, ಕಾಲುಗಳೆಲ್ಲಾ ತರಚಿವೆ. ಶರ್ಟು, ಪ್ಯಾಂಟು ಹರಿದಿವೆ. ಮೊಬೈಲ್ ಅಲ್ಲೆಲ್ಲೋ ದೂರದಲಿ ಬಿದ್ದು ಒಡೆದಿದೆ. ಈತ ಹಾಗೆಯೇ ನೆಲದ ಮೇಲೆ ಶೂನ್ಯ ನೋಟ ಬೀರುತ್ತ ಕಂಬಕ್ಕೆ ಒರಗಿ ಕುಳಿತಿದ್ದಾನೆ. ಒಮ್ಮೆಲೆ ನನಗೆ ಭ್ರಾಂತಿಯಾದಂತಾಯಿತು. ಇದು ಅವನಾಗಿರಬಾರದು ಎಂದು ಯಾರು ಯಾರನ್ನೋ ಬೇಡಿಕೊಳ್ಳುತ್ತಾ ಮತ್ತೆರಡು ಬಾರಿ ಟಾರ್ಚ್ ಬಿಟ್ಟು ನೋಡಿದೆ. ನನಗೆ ಕೈ ಕಾಲು ಓಡದಂತಾಗಿ ಅಲ್ಲಿದ್ದವರ ಸಹಾಯದೊಂದಿಗೆ ಆತನನ್ನು ಇತ್ತ ಬದಿಗೆ ತಂದು ಕುಳ್ಳಿರಿಸಿದೆವು. ಇದರಲ್ಲಿ ನಾನು ಒಳಗೊಂಡಿದ್ದನ್ನು ದೂರದಿಂದಲೇ ವಿಕ್ಷಿಸುತ್ತಿದ್ದ ಅಪ್ಪ ಅಮ್ಮನಿಗೆ ಅದಾಗಲೆ ಪರಿಸ್ಥಿತಿಯ ಅರಿವಾಗಿ ಅಮ್ಮ ಸೋದರಮಾವನವರಿಗೆ ಫೋನ್ ಹಚ್ಚಿ ಗೊಳೋ ಎಂದು ಅಳುತ್ತಿದ್ದಳು.

‘ನಾನು ನೋಡ್ದೆ ಸಾರ್. ಯಾವನೋ ರ‍್ಯಾಶ್ ಮುಂಡೆ ಮಗ. ಪಾಪ ಇತ್ಕಡೆ ಇಂದ ಬರ್ತಾ ಇದ್ ಇವ್ರಿಗೆ ಗುದ್ಬಿಟ್ಟ. ಹೆಂಗೆ ಛಂಗಂತ ಹಾರಿದ್ರು ಗೊತ್ತಾ ಇವ್ರು’
‘ಛೇ! ನಾನು ಬೈಕ್ ನಂ. ನೋಡೋದು ಮರ್ತೆ ರೀ..’
‘ಅಲ್ಲ ಇವ್ರಿಗೇನು ಅವಸರ ಇತ್ತು ಆ ಬದಿಗೆ ಹೋಗೋದಿಕ್ಕೆ ಅಂತ?..’
‘ನಂಗೇನೋ ಇವ್ನು ಆ ಕಡೆ ಇರೋ ಪ್ಯಾಕೆಟ್ ಸಾರಾಯಿ ಅಂಗಡಿಗೆ ಹೋಗ್ತಿದ್ದ ಅನ್ಸತ್ತೆ..’
‘ಅಯ್ಯೋ! ದ್ಯಾವ್ರೆ! ಕಿವೀಲಿ ರಕ್ತ ಬರ್ತಿದೆ. ಇವ್ನನ್ನ ಹೀಗೆ ಬಿಟ್ರೆ ಉಳಿಯೋದು ಕಷ್ಟ..’
ಎಲ್ಲರೂ ಅವರವರ ಅಭಿಪ್ರಾಯ, ವಾದಗಳನ್ನ ಮಂಡಿಸುತ್ತಿದ್ದರು. ಈತ ಮಾತ್ರ ಪ್ರಪಂಚದ ಅರಿವೆ ಇಲ್ಲದವರ ಹಾಗೆ ಶೂನ್ಯ ಭಾವದಲ್ಲಿದ್ದ.
‘ಇಲ್ಲೆಲ್ಲಾದ್ರೂ ಹಾಸ್ಪಿಟಲ್ ಇದ್ಯೇನ್ರಪ್ಪಾ?’ ಅಪ್ಪ ಕೂಡ ಅಂಜಿದ್ದರು.
‘ಮುಂದೆ ಹೋದ್ರೆ ಕ್ಲಿನಿಕ್ ಇದೆ. ಹಿಂದೆ ಹೋದ್ರೆ ಹಾಸ್ಪಿಟಲ್ ಇದೆ. ಆದ್ರೆ ಹಿಂದೆದು ದೂರ’, ಒಬ್ಬ ಹೇಳಿದ.
ಇಲ್ಲೊಂದು ಸಮಸ್ಯೆಯಿತ್ತು. ಅಪ್ಪನಿಗೂ ನನಗೂ ಕಾರ್ ಚಲಾಯಿಸಲು ತಿಳಿದಿದ್ದಿರಲಿಲ್ಲ. ಅಲ್ಲೆ ಒಬ್ಬನನ್ನು ಪರಿಪರಿಯಾಗಿ ಕೇಳಿಕೊಂಡಮೇಲೆ ಆ ಕ್ಲಿನಿಕ್‌ವರೆಗು ಮಾತ್ರ ಬರಲೊಪ್ಪಿದ. ದುರಾದೃಷ್ಟಕ್ಕೆ ಕ್ಲಿನಿಕ್ ಬೀಗ ಹಾಕಿತ್ತು. ಆತ ಕೆಳಗಿಳಿದವನೆ -‘ಅದೇನೋ ಹೇಳ್ತಾರಲ್ಲ ಊಟಕ್ಕಿಲ್ಲದ ಉಪ್ಪಿನಕಾಯಿ ಇನ್ನೇನಕ್ಕೊ ಸಮಾನ ಅಂತ. ಹಾಗೆ ಇವ್ರದ್ದೆಲ್ಲಾ. ಬರ್ತೀನಿ ಸಾರ್’ ಎಂದು ನಿಲ್ಲದೆಯೇ ಹೊರಟಿಬಿಟ್ಟ.
ಸುತ್ತ ಗವ್ವೆನ್ನುವ ಕತ್ತಲು. ಇವನು ಪ್ರಜ್ಞೆ ಕಳೆದುಕೊಳುತ್ತಿರುವಂತೆ ತೋರಿತು. ನಾನು, ಅಪ್ಪ, ಅಮ್ಮ ಮೂವರೆ. ಅಪ್ಪ ಆಟೋ ಹುಡುಕಿ ತರಲು ಹೊರಟರು. ಇತ್ತ ಅಮ್ಮನ ಆಲೋಚನೆ ಪರಲೋಕದವರೆಗೆ ಹರಡಿತ್ತು. ‘ಪಾಪ ನಮ್ಮನ್ನ ಸುರಕ್ಷಿತವಾಗಿ ಊರು ತಲಿಪ್ಸೋದಿಕ್ಕೆ ಊರಲ್ಲದ ಊರಿಗೆ ಬಂದೋವ್ನು.  ಇವ್ನೇನಾದ್ರು ಇಲ್ಲೇ....ಅಯ್ಯೋ ಛೇ! ಛೇ! ಹಾಗಾಗ್ಬಾರದಪ್ಪಾ!’ ಅಮ್ಮ ತನ್ನೊಳಗೆ ಮಾತಾಡಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಅಪ್ಪ ಆಟೋ ತಂದರು.
‘ಇವ್ನನ್ನ ರಾಜರಾಜೇಶ್ವರಿ ಹಾಸ್ಪಿಟಲ್‌ಗೆ ಕರೆದ್ಕೊಂಡ್ ಹೋಗು’ ಎಂದು ಮತ್ತೇನನ್ನೂ ಕೇಳಲು ಬಿಡದೆ ಕೈಯಲ್ಲಿ ಸಾವಿರ ರೂ ಇತ್ತು ಆಟೊ ಹತ್ತಿಸಿದರು. ನಾನೂ ಆ ಗಡಿಬಿಡಿಯಲ್ಲಿ ಇವರಿಬ್ಬರ ಸ್ಥಿತಿಯ ಬಗ್ಗೆ ಯೊಚಿಸದೆ ಆಟೊ ಹತ್ತಿಬಿಟ್ಟೆ.
ಹಾಸ್ಪಿಟಲ್ ತಲುಪಿದಾಗ ಈತ ಇನ್ನೂ ಉಸಿರಾಡುತ್ತಿದ್ದದ್ದು ಸ್ವಲ್ಪ ನೆಮ್ಮದಿ ತಂದಿತ್ತು.
‘ತಕ್ಷಣ್ವೇ ಇವನ್ನೆಲ್ಲಾ ಇಲ್ಲೇ ಮೆಡಿಕಲ್ ಶಾಪ್ ಲಿ ತನ್ನಿ’ - ಡಾಕ್ಟರ್ ಏನೋ ಬರೆದು ಕೊಟ್ಟರು.
‘ಡಾಕ್ಟರ್ ಏನಾದ್ರೂ ಸೀರಿಯಸ್ ಆಗಿದ್ಯ’ ಭಯದಲ್ಲೇ ಕೇಳಿದೆ.
‘ಹಾಗೆ ಅನ್ನಿಸ್ತಾ ಇದೆ. ಮೊದ್ಲು ಇದನ್ನೆಲ್ಲಾ ತನ್ನಿ ಆಮೇಲೆ ನೋಡೋಣ’

ಸಮಯ ರಾತ್ರಿ ೧೨ ೩೦ ಇದ್ದಿರಬಹುದು. ಡಾಕ್ಟರ್ ಕರೆದರು.
‘ಇವ್ರ ಹೆಸ್ರೇನಂದ್ರಿ?’
‘ಸುಂದರಂ ಸರ್’
‘ಏಜ್?’
‘೫೦ ಇದ್ದಿರ್ಬೋದು’
‘ಕುಡಿದಿದ್ರ?’
‘ಇಲ್ಲ. ಹಾಗೇನಿಲ್ಲ’. ಖಚಿತಪಡಿಸಿಕೊಳ್ಳೊದಕ್ಕೆ ಒಮ್ಮೆ ಮೂಸಿ ನೋಡಿದೆ. ಕುಡಿದಿರಲಿಲ್ಲ.
‘ಸರಿ. ನಾನು ಒಂದು ಲೆಟರ್ ಬರೆದು ಕೊಡ್ತೀನಿ. ನೀವು ಇವ್ರನ್ನ ಆಂಬುಲೆನ್ಸ್‌ಲಿ ನಿಮ್ಹಾನ್ಸ್‌ಗೆ ಕರೆದುಕೊಂಡ್ ಹೋಗಿ’.
ನಿಮ್ಹಾನ್ಸ್ ಎಂದೊಡನೆ ನನ್ನ ಝಂಗಾಬಲವೇ ಉಡುಗಿತು. ‘ಎನಾದ್ರು ಸೀರಿಯಸ್..? ಡಾಕ್ಟರನ್ನು ಕೇಳಿದೆ.
‘ಹೌದು. ಕಿವಿಯಿಂದ ಹೆಚ್ಚಾಗಿ ರಕ್ತ ಸೋರ್ತಿರೋದ್ರಿಂದ ಮೆದುಳಿಗೆ ಸ್ವಲ್ಪ ದೊಡ್ಡ ಪ್ರಮಾಣದ ಏಟಾಗಿರ್ಬೋದು. ತಡ ಮಾಡ್ದೆ ಕರ್ಕೊಂಡ್ ಹೋಗಿ. ಹ್ಞಾಂ.. ಹಾಗೆ ಚಾರ್ಜಸ್ ಪೇ ಮಾಡ್ಬಿಡಿ’  ಅವನು ಬದುಕುಳಿದರೂ ಹೀಗೆಯೇ ಮಂಕಾಗಿರುವನೆಂಬಂತೆ ಡಾಕ್ಟರ್ ಭಯ ಹುಟ್ಟಿಸಿದರು.
ಮೈಸೂರು ತಲುಪಿ ಎಂದಿನಂತೆ ಮಾಡಬೇಕಾದ ಕೆಲಸಗಳನ್ನು ಪಟ್ಟಿ ಹಾಕಿಕೊಂಡು, ಅದಕ್ಕೆ ಮಾನಸಿಕ ಸಿದ್ಧತೆಯನ್ನು ಮಾಡಿಕೊಂಡಿದ್ದ ನನಗೆ ಒಡನೆಯೆ ಒಂದು ದೊಡ್ಡ ಬೆಟ್ಟವನ್ನು ಹೊಡೆದುರುಳಿಸಿ ದಾರಿ ಮಾಡಿಕೊಳ್ಳಬೇಕೆನ್ನುವ ಅಸಾಧ್ಯವಾದಂತಹ ಕೆಲಸ ಆ ಕ್ಷಣಕ್ಕೆ ಆತನನ್ನು ಅಲ್ಲೆ ಬಿಟ್ಟು ಓಡಿ ಹೋಗಿ ಬಿಡೋಣವೆಂಬ ಆಲೋಚನೆ ತಂದದ್ದು ನಿಜವೇ.
ಧೃತಿಗೆಡದೆ ಬಂದದ್ದು ಬರಲೆಂದು ಆತನನ್ನು ನಿಮ್ಹಾನ್ಸ್‌ಗೆ ಕರೆದೊಯ್ದೆ. ಇದರ ನಡುವೆ ಅಪ್ಪ ಅಮ್ಮನ ನೆನಪಾಗಿ ಅವರ ಪರಿಸ್ಥಿತಿ ಹೇಗಿದೆಯೋ ತಿಳಿದುಕೊಳ್ಳಲು ಆಂಬುಲೆನ್ಸ್ ಸಹಾಯಕನ ಫೋನಿಂದ ಅಪ್ಪನಿಗೆ ಕರೆ ಮಾಡಿದೆ.
‘ನೀವು ಕರೆ ಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ..’

                                                                                ೪
‘ಅವರು ಹೇಳಿದ್ದು ಮಾಡಿದ್ರೆ ನಾನು ಅವರ ಮಾತು ಕೇಳ್ತಿರೋವ್ನಾಗ್ತೀನಿ. ಪರೋಕ್ಷವಾಗಿ ಅವರ ತತ್ವ ಪದ್ಧತಿಗಳನ್ನ ಒಪ್ಪಿಕೊಂಡಂಗೆ ಆಗತ್ತೆ. ಅಂದರೆ ನನ್ನ ತತ್ವಗಳೆಲ್ಲಾ ಅವರದ್ದರ ಮುಂದೆ ತಪ್ಪು ಎಂದಂತಾಯಿತು. ಆದ್ದರಿಂದಲೇ ನನಗೆ ಅವ್ರ ಮುಂದೆ ಸೋಲೊದಿಕ್ಕೆ ಇಷ್ಟ ಇಲ್ಲ. ಇದರಲ್ಲಿ ತಪ್ಪೇನಿದೆ? ನಾನು ಕೃತಘ್ನನೇಗಾಗ್ತೀನಿ? ಮಂಜು ಅಂಕಲ್ ಸಹಾಯ ಮಾಡಿರ್ಲಿ ಮಾಡಿಲ್ದೆ ಇರ್ಲಿ, ನೀಲಮ್ಮನೊಟ್ಟಿಗಿನ ನನ್ನ ಭಿನ್ನಾಭಿಪ್ರಾಯಗಳು ಹಿಂದೆ ಇದ್ದವೇ. ಮುಂದೆಯೂ ಇರುವವೆ. ಅಲ್ವೇ?’ - ಮನೆಗೆ ಬಂದರೂ ನನ್ನ ಸಮರ್ಥನೆಗೆ ಸರಿಯಾದ ಬೆಂಬಲ ಸಿಕ್ಕದಿದ್ದಕ್ಕೆ ಅದೇ ಆಲೊಚನೆಯಲ್ಲೇ ಮುಳುಗಿದ್ದೆ.
ಮನಸ್ಸು ಹಾಗೆ ದೇಶ, ಸಂಸ್ಕೃತಿ, ಭಾಷೆಗಳೆಲ್ಲವನ್ನೂ ದಾಟಿ ಕಾಲದಲ್ಲಿ ಹಿಂದೆ ಸಾಗುತ್ತಾ, ಗಟ್ಟಿಯಾಗಿ ಬೇರೂರಿರುವ ಮಾನವೀಯತೆ, ನೈತಿಕತೆಗಳ ಮೂಲವನ್ನು ಹುಡುಕಿ ಅಲ್ಲಿಗೆ ತನ್ನ ಸುತ್ತಲಿರುವವರೆಲ್ಲರನ್ನೂ ಕೊಂಡೊಯ್ಯಲು ಪರಿತಪಿಸುತ್ತಿತ್ತು.
‘ಈ ತಪ್ಪು ಸರಿಗಳೆಲ್ಲಾ ಹುಟ್ಟಿಕೊಂಡದ್ದೆಲ್ಲಿ? ಅಕಸ್ಮಾತ್ ಮೂಲದಲ್ಲಿ ಒಬ್ಬ ಮನುಷ್ಯ ಕೃತಘ್ನನಾಗಿರುವುದು ಸರಿಯೆಂದಾಗಿಯೂ, ಸಹಾಯವನ್ನು ಹಿಂತಿರುಗಿಸೋ ‘ಕರ್ತವ್ಯವು’ ತಪ್ಪೆಂದಾಗಿಯೂ ಆಗಿದ್ದು ಅದೇ ಬೆಳೆದುಕೊಂಡು ಬಂದಿದ್ದಲ್ಲಿ? ನಮಗುಂಟಾಗುವ ಸಂತೋಷವೇ ನೋವೆಂದು, ನೋವೇ ಸಂತೋಷವೆನ್ನುವ ಭಾವನೆ ಮೊದಲಿಂದಲೂ ಮೂಡಿದ್ದರೆ? ಈ ವಿಕಾಸದ ಹಾದಿಯಲ್ಲಿ ಅಕಸ್ಮಾತ್ ನಾವು ಹಾವನ್ನು ನೋಡಿದಾಗ ಅದು ನಮಗೆ ಅಪಾಯವಲ್ಲವೆಂದೂ, ಅದರ ಬಳಿ ಕಚ್ಚಿಸಿಕೊಳ್ಳಬೇಕೆಂದೂ ನಮ್ಮ ನರಮಂಡಲ ರೂಪುಗೊಂಡಿದ್ದರೆ? ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಕಂಡಾಗ  ನರಮಂಡಲದಲ್ಲಿನ ರಾಸಾಯನಿಕ ವಸ್ತುಗಳ, ಹಾರ್ಮೋನ್‌ಗಳ ಬಿಡುಗಡೆಯಿಂದ, ಎಲೆಕ್ಟ್ರಿಕ್ ಸಿಗ್ನಲ್‌ಗಳಿಂದ ಆಗುವ ಮಾನಸಿಕ, ಶಾರೀರಿಕ ಬದಲಾವಣೆಗಳು ಆತನನ್ನು ಹೊಡೆಯಬೇಕು, ಕೊಲ್ಲಬೇಕು ಎನ್ನುವಂಥದ್ದಾಗಿದ್ದಿದ್ದರೆ? ವಿಸ್ಮಯ ಪ್ರಕೃತಿ. ಜೀವವನ್ನು ಶಾರೀರಿಕವಾಗಿ ಉಳಿಸುವೆಡೆಗೆ ಅದರ ಪ್ರಯತ್ನ ನಡೆಯಿತು. ಇಲ್ಲ, ಇಲ್ಲ. ವಾತಾವರಣ ಈ ರೀತಿಯ ಬದಲಾವಣೆಗೆ ಅನುಕೂಲವಾಗಿದ್ದಿರಿಂದ ಪ್ರಕೃತಿಯು ಈ ಹಾದಿಯಲ್ಲೇ ಸಾಗಬೇಕಾಗಿ ಬಂದದ್ದು. ಯಾರ ಲೀಲೆಯೋ?! ಆ ರೀತಿಯಲ್ಲಿ ನೋಡುವುದಾದರೆ ನಾವೂ ನಮ್ಮ ನೆಮ್ಮದಿಗೋಸ್ಕರ ಬೆಳಕಿನ ಹಾಗೆ ದ್ವಿ-ಸ್ವಭಾವವನ್ನು ಹೊಂದಬಹುದೇನೋ. ಅನ್ಯರು ನಮಗೆ ನೋವುಂಟು ಮಾಡುವಾಗ, ಮನುಕುಲದ ಆದಿಯಿಂದ ಅನ್ಯರು ನಮಗೆ ನೋವು ನೀಡುವುದು ಸರಿಯೇ ಎಂಬ ಭಾವನೆ ಬೆಳೆದುಬಂದಿದೆಯೆಂಬಂತೆ ಮನವರಿಕೆ ಮಾಡಿಕೊಂಡು ತಾತ್ಕಾಲಿಕ ನೆಮ್ಮದಿಯನ್ನು ಹೊಂದಬಹುದೇನೊ. ಈಗ ನಾನೇಕೆ ಹೀಗೆ ಭಾವಿಸಬಾರದು? ನನ್ನ ತತ್ವಗಳಿಗೆ ಸೋಲುಂಟಾಗುತ್ತಿರುವುದರಲ್ಲಿ ತಪ್ಪಿಲ್ಲ ಎಂದುಕೊಂಡರೆ ನಾನು ಕಳೆದುಕೊಳ್ಳುವುದಾದರೂ ಏನು? ಆಹ್! ಒಂದು ಚಿಕ್ಕ ವಿಷಯಕ್ಕೆ ಇಷ್ಟೆಲ್ಲಾ ಆಲೋಚನೆಗಳ ಅಗತ್ಯವಿತ್ತೆ? ಒಂದೈದು ರೂಗಳ ಪೆಟ್ರೋಲ್ ಇದ್ದಿದ್ದರೆ ಸಾಕಿತ್ತಲ್ಲವೆ ಆ ಆಂಟಿಯನ್ನು ಬಿಟ್ಟು ಬರಲು? ಎಷ್ಟೆಲ್ಲಾ ಅಹಮ್ಮಿನ ಕೋಟೆಗಳು’ - ಹೊರಳಾಡುತ್ತಾ ನಿದ್ದೆ ಬಾರದೆ ಕೊನೆಗೆ ಇಯರ್ ಫೋನ್ ಸಿಗಿಸಿಕೊಂಡೆ.
‘ಏನೋ ಯೋಚಿಸ್ತಿದೀಯ? ತಿಂಡಿ ತಿನ್ನೊ’ - ಮಾವ ಇನ್ನೆರಡು ಇಡ್ಲಿ ಹಾಕುತ್ತ ಆಲೋಚನಾ ಲೋಕದಿಂದ ನನ್ನನ್ನು ಹೊರಗೆಳೆದರು. ಅಪ್ಪ, ಅಮ್ಮನಿಗೆ ಪುರುಡಿದ್ದುದರಿಂದ ಅವರಿಬ್ಬರೂ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು. ಅವರಿಗೆ ಮಾಡಿ ಹಾಕಲು ಅಮ್ಮನ ಅಣ್ಣ ಹಾಗು ಅವರ ಹೆಂಡತಿ ಊರಿಂದ ಬಂದಿದ್ದರು. ಈ ಮಾವನಿಗೆ ಕೆಲವು ಹುಚ್ಚಿದ್ದವು. ಆ ನಾಲ್ಕೈದು ದಿನಗಳಲ್ಲಿ ಅದನ್ನು ಸ್ವಯಂ ತಿಳಿದುಕೊಂಡೆ. ಕೆಲಸ ಮಾಡಲು ಏನೂ ಇಲ್ಲದಿದ್ದರೆ, ಒಂದು ಪಾತ್ರೆಯೊಳಗಿನ ಪದಾರ್ಥವನ್ನ ಇನ್ನೊಂದಕ್ಕೆ ಹಾಕಿ ಆ ಪಾತ್ರೆಯನ್ನ ತೊಳೆಯೋದು. ಇಲ್ಲ ಹೀಗೆ ರೈಲ್ವೇ ಸ್ಟೇಷನ್‌ವರೆಗೂ ವಾಕಿಂಗ್ ಹೋಗಿಬಿಡೋದು, ಇಲ್ಲ ಯಾವ್ದಾದ್ರು ದೇವಸ್ಥಾನಕ್ಕೆ ಹೋಗಿ ಕೂರೋದು. ಇದರೊಟ್ಟಿಗಿನ್ನೊಂದು ಹುಚ್ಚಿತ್ತು ಮಾವನಿಗೆ. ಅಡುಗೆ ಮಾಡಿ ಮಕ್ಕಳೆಲ್ಲರಿಗೂ ತಾನೆ ತಿನ್ನಿಸೋದು. ಮಾವನಿಗೆ ಮಕ್ಕಳಿರಲಿಲ್ಲ. ನಾವೆ ಮಕ್ಕಳಿದ್ದಂತೆ ಅವರಿಗೆ. ಇವರನ್ನು ನೋಡಿ ಸಮಯವನ್ನ ಸದುಪಯೋಗ ಪಡೆಸಿಕೊಳ್ಳೋದು ಹೇಗೆ ಎನ್ನೋದು ಕಲಿಯಬೇಕೆಂದುಕೊಂಡಿದ್ದೆ. ಇಷ್ಟಿದ್ದರೂ ಅದ್ಯಾವುದೋ ರೆಂಬೆಯಿಂದ ಆ ಆಲೋಚನೆಯ ಕಪಿಯು ಛಂಗನೆ ಹಾರಿ ತಲೆಯಲ್ಲಿ ಕುಳಿತಿತು. ರಾತ್ರಿಯ ಆಲೋಚನೆಗಳೇನೂ ಮುಂದುವರೆದಿರಲಿಲ್ಲ. ಕೊನೆಗೂ ಯಾರಿಂದಲೂ ಕೃತಘ್ನನೆನಿಸಿಕೊಳ್ಳಕೂಡದೆಂಬ ನಿರ್ಧಾರಕ್ಕೆ ಬಂದಿದ್ದೆ. ‘ಒಮ್ಮೆ ಒಬ್ಬರನ್ನು ತಿರಸ್ಕಾರ ಭಾವದಿಂದ ಕಂಡರೆ ಅವರೇನೆ ಒಳ್ಳೆಯ ಕೆಲಸ ಮಾಡಿದರೂ, ನಮ್ಮನ್ನು ಕೊಚ್ಚೆಗೆ ತಳ್ಳಿ, ತುಳಿದು ತಾನು ಗೆದ್ದೆನೆಂದು ಬೀಗುತ್ತಿರುವ ಹಾಗೆ, ಎಲ್ಲರೂ ಅವರಿಗೆ ಹೂಮಾಲೆ ಹಾಕಿ ನನ್ನನ್ನು ಮತ್ತೆ ಆ ಕೊಚ್ಚೆಗೆ ತಳ್ಳಿದ ಹಾಗೆ ಭಾಸವಾಗುತ್ತದೆ. ನೀಲಮ್ಮನ ವಿಚಾರದಲ್ಲಿ ನನಗಾಗುತ್ತಿರುವುದೂ ಹೀಗೆ. ಎಲ್ಲವೂ ನನ್ನ ಅಹಂ’. ಅಲ್ಲಿಂದಿಲ್ಲಿಗೆ ಬಿಡುವುದರಲ್ಲಿ ಯಾರ ಸ್ವತ್ತು ಕಳೆಯುವುದಿಲ್ಲವೆಂದು ಮನವರಿಕೆ ಮಾಡಿಕೊಳ್ಳುತ್ತಾ ನೀಲಮ್ಮನ ವಿಚಾರದಲ್ಲಿ ನನ್ನ ಧೋರಣೆಗಳನ್ನ ಬದಲಾಯಿಸಿಕೂಂಡಿದ್ದೇನೆಂಬ ತೀರ್ಮಾನಕ್ಕೆ ಬಂದಿದ್ದೆ.

                                                                            ೫
(ಇದೆಲ್ಲಾ ಅಮ್ಮ ನನಗೆ ಅನಂತರ ತಿಳಿಸಿದ್ದು)
ನಾನು ಹಾಸ್ಪಿಟಲ್‌ಗೆ ಹೊರಟಕೂಡಲೇ ಇತ್ತ ಅಪ್ಪ ಅಮ್ಮ ಕಾರೊಳಗೆ ಕೂತು ಬಾಗಿಲು ಹಾಕಿಕೊಂಡರು. ನೂರಾರು ಮನೆಗಳಿರುವ ನಮ್ಮ ಏರಿಯಾದಲ್ಲೇ ಸರಗಳ್ಳತನವಾಗುತ್ತಿರುವಾಗ, ಇದೋ ಹೈ-ವೇ, ಕತ್ತಲು. ನೂರು ಮೀಟರ್ ದೂರದಲ್ಲಿ ಒಂದು ಡಾಬ ಬಿಟ್ಟರೆ ಮತ್ತೇನಿಲ್ಲ. ಅಮ್ಮ ಬಿ.ಪಿ. ಮಾತ್ರೆ ಒಂದನ್ನು ಹಾಕಿಕೊಂಡಳು. ಒಡನೆಯೇ ಕಾರನ್ನು ಯಾರೋ ತಟ್ಟಿದ ಸದ್ದಾಯಿತು. ಕಿಟಕಿಯಲ್ಲಿ ಯಾರೂ ಕಾಣಲಿಲ್ಲ. ಅಮ್ಮನಿಗೆ ಎದೆ ‘ಡವ..ಡವ’ ಹೋಡೆದುಕೊಳ್ಳೋದಕ್ಕೆ ಶುರುವಾಯಿತು. ‘ಅಯ್ಯೋ ದೇವ್ರೇ! ಬೇಕಾದ್ರೆ ಒಡವೆ ತೆಗೊಂಡ್ ಹೋಗಿಬಿಡ್ಲಿ ಅಥವಾ ಪ್ರಾಣಾನೂ.. ಇನ್ನೇನೂ ಮಾಡೋದು ಬೇಡಾಪ್ಪಾ. ಮುದುಕೀರನ್ನೂ ಬಿಡ್ತಿಲ್ವಂತೆ!’
ಅಪ್ಪನಿಗೂ ಭಯ ಶುರುವಾಯಿತು. ‘ನಾ ಹೇಳ್ದೆ. ನನ್ ಮಾತು ಎಲ್ಲಿ ಕೇಳ್ತೀಯ..’
ಅಷ್ಟರಲ್ಲಿ ಕಿಟಕಿಯಲ್ಲಿ ಯಾರೋ ಬಗ್ಗಿ ನೋಡಿದಂತಾಗಿ ಅದು ಪೋಲಿಸರೆಂದು ತಿಳಿದು ಅಪ್ಪನಿಗೆ ಧೈರ್ಯ ಬಂದು ಕಾರಿನಿಂದ ಇಳಿದು ನಡೆದದ್ದನ್ನೆಲ್ಲಾ ವಿವರಿಸಿ ಸಹಾಯ ಬಯಸಿದರು.
ಆ ಪೋಲೀಸರಿಗೆ ಸತ್ಯದ ಅರಿವಾದರೂ, ಅವತ್ತಿನ ಕಲೆಕ್ಷನ್ ಸರಿಯಾಗಿದ್ದಿಲ್ಲದ ಕಾರಣ ನಂಬದವರಂತೆ ನಟಿಸಿದರೆನ್ನುವುದು ಅಪ್ಪನ ವಾದ.
‘ಏನ್ರೀ ಹೈ-ವೇಲೇ ನಿಮ್ಮ ಬ್ಯುಸಿನೆಸ್ಸ್ ಶುರುವಾಗಿಬಿಡ್ತಾ?’
ಅಪ್ಪನಿಗೆ ನಖಶಿಖಾಂತ ಉರಿದರೂ ಆಗಿರುವುದೇ ಸಾಕೆಂದು ತಾಳ್ಮೆ ತಂದುಕೊಳ್ಳುತ್ತ ‘ನೋಡಿ ಸರ್. ನಾನೊಬ್ಬ ಬ್ಯಾಂಕ್ ಮ್ಯಾನೇಜರ್. ಇವಳು ನನ್ನ ಹೆಂಡತಿ. ಬೇಕಿದ್ದರೆ ನಿಮಗೆ ಐಡೆಂಟಿಟಿ ಕಾರ್ಡ್ ತೋರಿಸ್ತೀನಿ’ ಎಂದು ಅಪ್ಪ ಕಾರೊಳಗೆ ತನ್ನ ಬ್ಯಾಗ್ ಹುಡುಕಿದರು. ದುರಾದೃಷ್ಟಕ್ಕೆ ನೀರಿನ ಬಾಟೆಲ್ ಇದ್ದ ಅದನ್ನು ನಾನು ತೆಗೆದು ಕೊಂಡು ಹೋಗಿದ್ದೆ. ಅಪ್ಪ ಪೆಚ್ಚುಮೋರೆ ಹಾಕಿ ತಲೆ ತಗ್ಗಿಸಿ ನಿಂತರು. ಅಷ್ಟರೊಳಗೆ ಅಮ್ಮ ಮಾತಿಗಿಳಿದಿದ್ದರು ‘ಸರ್ ಮೊದಲೇ ಕಷ್ಟದಲ್ಲೀದ್ದೀವಿ. ಇದನ್ನ ಇಟ್ಕೊಂಡು ಬಿಟ್ಬಿಡಿ ಸರ್’ ಎಂದು ಕೈಗೆ ಸಾವಿರ ರು ಇತ್ತು ಅಂಗಲಾಚಿದಳು.
‘ನೋಡಿ ಸಾರ್, ಇಷ್ಟೊತ್ತಿಗೆಲ್ಲಾ ಇಲ್ಲಿರ್ಬಾರ್ದು. ಬೇಗ ಯಾರನ್ನಾದ್ರು ಕರೆಸಿಕೊಂಡು ಹೋಗ್ಬಿಡಿ’ ಎಂದು ಆ ಪೋಲಿಸು ತನ್ನ ಮಾತಿನ ಶೈಲಿಯನ್ನೇ ಬದಲಾಯಿಸಿದ್ದನ್ನು ಕಂಡು ಅಪ್ಪನಿಗೆ ಇಂದಿಗೂ ಆ ಪೋಲೀಸಿನವನ ಮೇಲೆ ಎಲ್ಲಿಲ್ಲದ ಕೋಪ -‘ನಾನೇನಾದ್ರೂ ದೇವ್ರಾಗಿದ್ರೆ ಅವ್ನ ಕೈಯಲ್ಲಿ ದುಡ್ಡು ನಿಲ್ಲದ ಹಾಗೆ ಕೈ ಕತ್ತರಿಸಿ ಬಿಡ್ತಿದ್ದೆ’ ಎನ್ನುತ್ತಾರೆ.
ಅಷ್ಟರ ವೇಳೆಗಾಗಲೇ ನಾನು ಆಂಬುಲೆನ್ಸ್‌ನಲ್ಲಿದ್ದೆ. ಅಪ್ಪನ ಕಾಲ್ ಬಂದಿತು.
‘ಹ್ಞಾಂ.. ನಾನು ಮಂಜು ಅಂಕಲ್ ಒಟ್ಟಿಗೆ ಮಾತಾಡ್ತಿದ್ದೆ. ಅವ್ರಿಗೆ ಹೇಳಿದೀನಿ. ಅವ್ರು ಬರ್ತಿದಾರೆ.’
‘ಹಾಗಿದ್ರೆ ನೀವು ನೇರವಾಗಿ ನಿಮ್ಹಾನ್ಸ್‌ಗೆ ಬಂದು ಬಿಡಿ. ಮತ್ತೇನನ್ನು ಕೇಳ್ಬೇಡಿ. ಇಲ್ಲಿಗೆ ಬಂದ ಮೇಲೆ ವಿವರಿಸ್ತೀನಿ’ ಎಂದು ಫೋನ್ ಇಟ್ಟೆ.

ಮಂಜು ಅಂಕಲ್ ಅಪ್ಪನ ಆಫೀಸಲ್ಲಿ ಅಟೆಂಡರ್ ಕೆಲಸ ಮಾಡಿಕೊಂಡಿದ್ದವರು. ಒಳ್ಳೆಯ ಡ್ರೈವರ್ ಕೂಡ. ಅಪ್ಪ-ಇವರ ನಡುವಿನ ಸಂಬಂಧದ ಬಗ್ಗೆ ನನಗೆ ಅಷ್ಟಾಗಿ ಅರಿವಿಲ್ಲ. ನಾಗಮಂಗಲದಿಂದ ನಮ್ಮ ಕುಟುಂಬಕ್ಕೆ ಮಂಜು ಎನ್ನುವ ಹೆಸರು ಚಿರಪರಿಚಿತ. ಒಂಗೋಲಿಗೆ ಹೋಗಬೇಕಾದಾಗ ಇವರೇ ನಮ್ಮ ಕಾರಿನ ಡ್ರೈವರ್. ಆಗಲೇ ಇವರ ಚಾಲನೆಯ ಬಗೆಗಿನ ಅರಿವಾದದ್ದು. ಅದ್ಯಾವುದೇ ಹಳ್ಳೀಗೆ ಬಿಟ್ಟರೂ ಸಲೀಸಾಗಿ ಹೈ-ವೇಯನ್ನು ಕಂಡು ಹಿಡಿಯಬಲ್ಲ ಚಾಣಾಕ್ಷತನ. ಅಷ್ಟೆ ಘಾಟಿಯೂ ಕೂಡ. ಅಪ್ಪ ಇವರನ್ನೇ ಕರೆಸಬೇಕೆಂದುಕೊಂಡಿದ್ದರು. ಆದರೆ ಯಾವುದೋ ಅಫಿಷಿಯಲ್ ಟ್ರಿಪ್ಪಿನ ಮೇಲೆ ಹೋಗಿದ್ದರಿಂದ ಇವರು ಬರಲಾಗಲಿಲ್ಲ. ಅಪ್ಪ ಫೋನ್ ಮಾಡಿದಾಗ ಸುಮಾರು ೧೩ ಗಂಟೆಗಳ ಪ್ರಯಾಣ ಮುಗಿಸಿ ಆಗ ತಾನೆ ನಿದ್ದೆಗೆ ಜಾರಿದ್ದರಂತೆ. ‘ಆ ರಾತ್ರಿ ೧ ಗಂಟೆಲೂ ಫೋನ್ ರಿಸೀವ್ ಮಾಡೋ ಕರ್ಮ ಅವರಿಗೇನಿತ್ತು? ರಿಸೀವ್ ಮಾಡಿಯೂ ನಾನೆಲ್ಲೋ ಬೇರೆ ಕಡೆ ಇದೀನಿ ಅನ್ಬೋದಿತ್ತಲ್ಲ? ನಾನೇನಾಗ್ಬೇಕು ಅವ್ರಿಗೆ?’ ಅಪ್ಪ ನನಗೆ ಬೈಯುವಾಗ ಹೇಳುತ್ತಿದ್ದದ್ದು.
‘ಹೇಳೀ ಸಾರ್.. ಏನು ಈ ಹೊತ್ನಲ್ಲಿ?’
‘ಮಂಜು ನೋಡಪ್ಪ ಹೀಗಾಗೋಗಿದೆ..’ ಅಪ್ಪ ಎಲ್ಲವನ್ನು ವಿವರಿಸಿದರು.
‘ಏನೂ ಆಗೋದಿಲ್ಲ ಯೋಚಿಸ್ಬೇಡಿ ಸಾರ್.. ನಾನೀಗಲೇ ಬಸ್ಸಿಗೆ ಹೊರಟು ಬರ್ತೀನಿ. ನೀವಲ್ಲೇ ಕಾರಲ್ಲೇ ಕೂತಿರಿ’
‘ಅಯ್ಯೋ ನೀನ್ಯಾಕಪ್ಪ. ಮೊದ್ಲೇ ದಣಿದಿದ್ದೀಯ. ಬೇರೆ ಯಾರನ್ನಾದ್ರು ಕಳ್ಸಕ್ಕಾದ್ರೆ ನೋಡು’
‘ಅಯ್ಯೋ ನೀವು ಮಾಡಿರೋ ಸಹಾಯದ ಮುಂದೆ ಇದೇನು ಬಿಡಿ ಸಾರ್.’ ಎಂದು ಫೋನಿಕ್ಕೆ ಒಡನೆಯೆ ಹೊರಟರಂತೆ.

ಒಬ್ಬ ಅಟೆಂಡರ್‌ಗೆ ಅಷ್ಟು ದೊಡ್ಡ ಸಹಾಯ ಅಪ್ಪ ಮಾಡಿರ್ಲಿಕ್ಕಿಲ್ಲ. ಒಂದು ವರ್ಗಾವಣೆ ಮಾಡಿಸಿರ್ಬೋದು ಅಷ್ಟೆ.
ಅಪ್ಪ ತನ್ನ ಉಪದೇಶ ರತ್ನಮಾಲೆಯಲ್ಲಿ ಇದನ್ನೆಲ್ಲಾ ಹೇಳಿದಾಗಲೆಲ್ಲಾ ಏನೋ ಚುಚ್ಚುತ್ತಿತ್ತು. ನನ್ನ ಹಾಗೆಯೇ ಅಂದು ಮಂಜು ಅಂಕಲ್ ಯೋಚಿಸಿದ್ದರೆ? ತನ್ನ ಬದಲು ಮತ್ಯಾರನ್ನೋ ಕಳಿಸಿದ್ದಿರಬಹುದಿತ್ತಲ್ಲವೇ? ಎಂದೆಲ್ಲಾ ಯೋಚಿಸಿದ್ದೆ.

                                                                         ೬
ಅದೊಂದು ನರಕ ಸದೃಶದಂತಿತ್ತು. ತನ್ನ ನೋವು ಹೇಳಿಕೊಳ್ಳಲಾಗದೆ ಎಣ್ಣೆಗೆ ಹಾಕಿ ಸುಟ್ಟವರಂತೆ ಜೋರಾಗಿ ಕೂಗುತ್ತಿದ್ದ ರೋಗಿಯೊಬ್ಬಳು, ಅವಳ ನೋವು ತಿಳಿಯುತ್ತಿಲ್ಲವೆಂದು ಸೆರಗು ರವಿಕೆಗಳ ಗಮನವಿಲ್ಲದೆ ಅಳುತ್ತಿದ್ದ ಅವಳಮ್ಮ. ಸುಮ್ಮನೆ ಮಲಗಿದ್ದವ ಒಮ್ಮೆಲೆ ಒಂದು ಭೂತ ಎದ್ದಂತೆ ಎದ್ದು ‘ಹೋ...’ ಎಂದು ನಾಯಿಯ ಹಾಗೆ ಕೂಗುವುದು. ಗರ್ಭಿಣಿಯಾದ ಮತಿಹೀನ ಹೆಂಗಸೊಬ್ಬಳು ಹೊರಳಾಡುತ್ತಾ ಸ್ಟೆಚರ್‌ನಿಂದ ಕೆಳಗೆ ಬೀಳುವುದು. ಉಚ್ಚೆ ಹೇಲಿನ ಅರಿವಿಲ್ಲದೆ ಅವಲ್ಲಿ ಅದ್ದಿದ್ದ ಕೈಯನ್ನು ಬಾಯಿಗೆ ಹಾಕುತ್ತಿದ್ದ ಮತ್ತೊಬ್ಬ. ಎಲ್ಲವನ್ನೂ ನೋಡುತ್ತಿದ್ದಂತೆ ಗಂಟಲು ಕಟ್ಟಿ, ಬಾಯೆಲ್ಲಾ ಒಣಗಿ, ನನಗೇ ಅರಿವಿರದ ಹಾಗೆ ಹುಬ್ಬು ಗಂಟಿಕ್ಕಿ, ರೆಪ್ಪೆ ಒದ್ದೆಯಾದಂತಿತ್ತು. ಇದು ನಿಮ್ಹಾನ್ಸ್‌ನಲ್ಲಿದ್ದ ಆ ರೋಗಿಗಳ ಮೇಲಿನ  ಅನುಕಂಪಕ್ಕಲ್ಲ. ನನ್ನ ಆಗಿನ ಪರಿಸ್ಥಿತಿಯ ಬಗ್ಗೆ, ಅದರ ಭಯದಲ್ಲಿ ನನಗೇ ಮತಿಗೆಟ್ಟಂತಾಗಿತ್ತು. ಎಚ್ಚರ ತಂದುಕೊಂಡು ಅಲ್ಲೇ ಒಂದು ಸಂದಿಯಲ್ಲಿ ಸುಂದರಂನ ಸ್ಟ್ರೆಚರನ್ನು ತೂರಿಸಿ ಡಾಕ್ಟರ್‌ಗಾಗಿ ಕಾದು ನಿಂತೆ.
‘ಏನಾಯ್ತು’ ಡಾಕ್ಟರ್ ಬಂದರು.
ಅದಾಗಲೇ ನನ್ನ ಪ್ರವರದಂತೆ ಬಾಯಿಪಾಠವಾಗಿದ್ದ ಅದನ್ನ ಇವರಿಗೂ ಒಪ್ಪಿಸಿದೆ. ಡಾಕ್ಟರ್ ಆತನನ್ನು ಮಾತಾಡಿಸಿದರು. ಉತ್ತರವಿಲ್ಲ.
‘ಕುಡಿದಿದ್ರ?’ ಮತ್ತದೇ ಪ್ರಶ್ನೆ.
ಮತ್ತೊಮ್ಮೆ ಮೂಸು ನೋಡಿ - ‘ಇಲ್ಲ. ಖಂಡಿತ ಇಲ್ಲ’ ಎಂದೆ.
‘ನೋಡ್ರಪ್ಪ, ಇವ್ರಿಗೆ ಈ ಸ್ಕ್ಯಾನ್ ಎಲ್ಲಾ ಮಾಡಿ ರಿಪೋರ್ಟ್ ತಂದು ಕೊಡಿ’ - ಅಲ್ಲಿದ್ದ ಸೇವಕರಿಗೆ ಡಾಕ್ಟರ್ ಆದೇಶಿಸಿದರು.
ಮೂರು ನಾಲ್ಕು ಸ್ಕ್ಯಾನಿಂಗ್ ಇದ್ದಿತ್ತು. ಈ ನಡುವೆ ಸ್ಕ್ಯಾನಿಂಗ್ ಮಾಡುತ್ತಿದ್ದಾಗ ಡಾಕ್ಟರ್ ಬಳಿ ಪರಿಸ್ಥಿತಿಯ ತೀವ್ರತೆ ಬಗ್ಗೆ ತಿಳಿಯೋಣವೆಂದು ಹೋದೆ.
ಎಮರ್ಜೆನ್ಸಿ ವಾರ್ಡ್ ಎನ್ನಬಹುದಾದಂತಿದ್ದ ಆ ಒಂದು ದೊಡ್ಡ ಹಾಲಿನಲ್ಲಿ ಒಂದೆಡೆ ಡ್ರೆಸ್ಸಿಂಗ್ ರೂಮ್, ಇನ್ನೊಂದೆಡೆ ಸ್ಕ್ಯಾನಿಂಗ್ ಮಾಡುವ ಕೋಣೆಗಳು. ಇವುಗಳ ಮಧ್ಯದಲ್ಲಿ ಸಾಲಾಗಿ ಒಂದು ನಾಲ್ಕು ಟೇಬಲ್‌ಗಳು, ಡಾಕ್ಟರ್‌ಗಳಿಗಾಗಿ.
ಡಾಕ್ಟರ್ ಬಳಿ ಹೋದಾಗ ಇಬ್ಬರು ರೋಗಿಗಳು ಅದಾಗಲೇ ಕಾದು ಕುಳಿತಿದ್ದರು.
ಡಾಕ್ಟರ್ ಬಂದೊಡನೆ ಅದರಲ್ಲೊಬ್ಬ ತನ್ನ ರಿಪೋರ್ಟ್ ತೋರಿಸಿದ. ಒಡನೆಯೇ ಡಾಕ್ಟರ್ - ‘ಎಷ್ಟು ಸಾರಿ ಬರ್ತೀಯಪ್ಪ. ಹೇಳಿದ್ನಲ್ಲ ನಿನ್ನ ಕಥೆ ಅಷ್ಟೆ. ಆ ಗಡ್ಡೆಯನ್ನ ಯಾವ ಆಪರೇಷನ್ ಮಾಡಿದರೂ ತೆಗೆಯೋದಿಕ್ಕೆ ಆಗೋದಿಲ್ಲ. ನೀನಿರೋದು ಇನ್ನು ಮೂರೇ ದಿನ. ಇನ್ನೂ ಆಪರೇಷನ್ ಮಾಡಿಸ್ಕೋಳೋ ಮನಸಿದ್ರೆ ಬೇರೇ ಹಾಸ್ಪಿಟಲ್‌ಗೆ ಹೋಗು. ಇಲ್ಲಿ ನಾವು ರಿಸ್ಕ್ ತೆಗೋಳೋದಿಲ್ಲ.’ ಇದ್ದದ್ದನ್ನು ಇದ್ದ ಹಾಗೆ ಹೇಳಿಬಿಟ್ಟರು.
ಆತನ ಕಣ್ಣಲ್ಲಿ ನೀರೇ ಹರಿಯಲಿ ರಕ್ತವೇ ಹರಿಯಲಿ ಇರುವುದನ್ನು ಇದ್ದ ಹಾಗೇ ಹೇಳುವುದು ಡಾಕ್ಟರ್‌ನ ಕರ್ತವ್ಯವಲ್ಲವೇ. ಆ ರೋಗಿಯ ಕಣ್ಣಲ್ಲಿ ತುಂಬಿದ್ದ ನೀರು ನನ್ನ ಕೆನ್ನೆಯನ್ನು ಹಾದಿಯಾಗಿಸಿದಂತಿತ್ತು. ಖಚಿತವಾಗಿ ಅಂದೇ ಸಾಯುತ್ತೇವೆಂದು ತಿಳಿದರೆ ಅದಾಗಲೆ ಮಾನಸಿಕವಾಗಿ ಸತ್ತೇ ಹೋಗಿರುತ್ತೇವೆ. ಆದರೆ ಹೀಗೆ ಗೊತ್ತಾಗುವುದರಿಂದ ಎಲ್ಲಾ ಸಾಧನೆಯನ್ನೂ ಮುಂದೂಡುವ ನಮ್ಮ ತಾಮಸಗುಣವನ್ನಾದರೂ ಹೊಡೆದೋಡಿಸಿ ಅಂದುಕೊಂಡದ್ದನ್ನು ಸಾಧಿಸಿಬಿಡಬೇಕೆಂಬ ಸಕಾರಾತ್ಮಕ ಭಾವವೂ ಮೂಡಬಹುದಲ್ಲ. ಎಲ್ಲಕ್ಕೂ ಅನುಭವವಾಗಬೇಕು ಎಂದುಕೊಳ್ಳುತ್ತಿರಬೇಕಾದರೆ ಮತ್ತೊಬ್ಬ ಶುರು ಮಾಡಿದ.
‘ಹ್ಞಾಂ..ಹ್ಞಾಂ.. ಅದೇ ಲಾರಿ ಆಟೋಗೆ ಹಿಂದೆಯಿಂದ ಗುದ್ದಿದ ಕೇಸಲ್ವೇ? ಅವರಿಗೆ ಹಿಂದಿನ ಮೆದುಳಿಗೆ ಬಲವಾದ ಪೆಟ್ಟು ಬಿದ್ದಿದೆ. ಇನ್ನೊಂದು ಗಂಟೆಯಲ್ಲಿ ಆಪರೇಷನ್ ಮಾಡದೇ ಇದ್ರೆ ಕೋಮಾಗೆ ಹೋಗುವ ಸಂಭವವಿದೆ.’ ಡಾಕ್ಟರ್ ಹೇಳಿದರು.
ಇದನ್ನೆಲ್ಲ ಕೇಳುತ್ತಿದ್ದ ಹಾಗೆ ನನ್ನಲ್ಲಿನ ಭಯ ದುಗುಡ ದುಪ್ಪಟ್ಟಾಗುತ್ತಾ ಹೋಯಿತು. ‘ಹಿಂದೆಯಿಂದ ಆಟೋ ಒಳಗೆ ಕೂತಿರೋವ್ರಿಗೆ ಲಾರಿ ಗುದ್ದಿದ್ದಕ್ಕೆ ಹೀಗಾದ್ರೆ ಇನ್ನು ನೇರವಾಗಿ ಬೈಕಲ್ಲಿ ಗುದ್ದಿಸಿಕೊಂಡು ಹಾರಿ ಬಿದ್ದೋವ್ನಿಗೆ ಇವ್ರು ಇನ್ನೇನನ್ಬೇಡ’ ಎಂದೆಲ್ಲಾ ಹೆದರಿಕೊಳ್ಳುತ್ತಾ ಡಾಕ್ಟರ್‌ಗೆ ಏನೂ ಕೇಳದೆ ಹೊರಬಂದೆ. ಮಳೆ ಜಿನುಗುತ್ತಿತ್ತು.
‘ಎರಡು ದಿನಗಳ ಹಿಂದೆ ಹೇಗಿತ್ತು, ಸ್ನೇಹಿತರು, ಸಂಬಂಧಿಕರು, ಹಾಡು, ಕುಣಿತ, ಮೋಜು, ಮಸ್ತಿ. ನಾಳೆ ಮೈಸೂರಲ್ಲಿದ್ದಿದ್ರೆ ಅವನ ಟ್ರೀಟ್ ಇತ್ತು. ಅದಾದ್ಮೇಲೆ ಬಲಮುರಿಗಿ ಸಣ್ಣ ಪಿಕ್‌ನಿಕ್ ಎಂದಾಗಿತ್ತು. ಇವ್ನೇನಾದ್ರು ಹೋಗ್ಬಿಟ್ರೆ.. ಇಲ್ಲ ಕೋಮಾಗಿಳಿದ್ರೆ.. ಇನ್ನೂ ಮೂರು ನಾಲ್ಕು ದಿನ ಇಲ್ಲೆ, ಈ ಕೊಂಪೆಯಲ್ಲೇ..’ ನನ್ನದೇ ಆದ ಸ್ವಾರ್ಥ, ಸಮಯ ಪರಿಸ್ಥಿತಿಗಳ ಪ್ರಜ್ಞೆ ಇಲ್ಲದ ದಿಗಿಲುಗಳು ಮೂಡಿದ್ದವು. ಸ್ಟ್ರೀಟ್ ಲೈಟಿನ ಹಿನ್ನೆಲೆಯಲ್ಲಿ ಜಿನುಗುತ್ತಿದ್ದ ಹನಿಗಳನ್ನೇ ನೋಡುತ್ತಾ ಆಲೋಚಿಸುತ್ತಿದ್ದೆ.
‘ಯಾರ್ರೀ ಸುಂದರಂ ಕಡೆಯೋವ್ರು?..’ ಮೂರು ನಾಲ್ಕು ಬಾರಿ ಯಾರೋ ಕೂಗಿದ ಹಾಗಾಯಿತು. ಓಡಿದೆ.
‘ನೋಡಿ ಸ್ಕ್ಯಾನಿಂಗ್ ರಿಪೋರ್ಟ್ ಬಂದಿದೆ. ಬಿದ್ದ ರಭಸಕ್ಕೆ ಮೆದುಳಲ್ಲಿ ಒಂದು ಕಡೆ ಎಲ್ಲೊ ಪುಟ್ಟ ಗುಳ್ಳೆಯ ಹಾಗೆ ರಕ್ತ ಹೆಪ್ಪುಗಟ್ಟಿದಂತಿದೆ. ಸರಿಯಾಗಿ ತಿಳೀತಿಲ್ಲ. ಈತ ಏನಕ್ಕೂ ಪ್ರತಿಕ್ರಯಿಸ್ತಿಲ್ಲ. ಮಾತಾಡ್ತಾನೂ ಇಲ್ಲ. ಇನ್ನೊಂದು ಎರಡು ಗಂಟೆ ನೋಡೋಣ. ಒಂದು ವೇಳೇ ಮಾತಾಡಿದ್ರೆ ಓಕೆ. ಇಲ್ಲವಾದ್ರೆ ಮುಂದಿನ ಕ್ರಮ ಕೈಗೊಳ್ತೇನೆ. ಅಲ್ಲೇ ಹೊರಗಿರಿ.’ ಎಂದೇನೋ ಗಾಯದ ಮೇಲೆ ಉಪ್ಪು ಹಾಕಿದಾಗೆ ಮತ್ತಷ್ಟು ಹೆದರಿಸಿದರು ಡಾಕ್ಟರ್.
‘ಮುಂದಿನ ಕ್ರಮ ಎಂದರೆ..’ ಎಂದು ಕೇಳುವಷ್ಟರಲ್ಲಿ ಡಾಕ್ಟರ್ ಪಕ್ಕದ ರೋಗಿಯ ಬಳಿ ಹೋಗಿದ್ದರು.
‘ಥು ತ್ತೇರಿಕೆ ! ಒಂದು ಮಾತದ್ರು ಆಡ್ಬಾರ್ದೇನೋ’ ಎಂದು ಆ ದುಗುಡದಲ್ಲೇ ಅವನನ್ನು ಬೈದುಕೊಳ್ಳುತ್ತಾ ಸ್ಟ್ರೆಚರ್ ಎಳೆದುಕೊಂಡು ಹೊರಗೆ ಬಂದೆ. ಮಳೆ ಸುರಿಯುತ್ತಲೇ ಇತ್ತು. ಅಪ್ಪನಿಗೆ ಕಾಲ್ ಮಾಡಿ ಎಲ್ಲ ವಿವರಿಸಿ ಹಾಗೆ ಚೇರ್ ಲಿ ಒರಗಿ ಕುಳಿತು ಕಣ್ಣು ಮುಚ್ಚಿದೆ.

ಒಂದಿಪ್ಪತು ನಿಮಿಷ ಕಳೆದಿರಬಹುದು. ಯಾರೋ ತಟ್ಟಿದ ಹಾಗಾಯ್ತು. ಸುಂದರಂ ಬಾಯಿ ತೆಗೆದು ಎನೋ ಉಗುಳುವನಂತೆ ಎದ್ದು ನನ್ನೆಡೆ ಸೊಂಟ ಊರಿ ಕೂತಿದ್ದ. ಕೆಳಗಿದ್ದ ಟಬ್ಬು ತಂದು ಬಾಯಿಯ ಬಳಿ ಇಟ್ಟೆ. ಏನೋ ಕೇಳಿಸಿದ ಹಾಗಾಯ್ತು. ಸುಂದರಂ ಉಗುಳಲಿಲ್ಲ. ಬದಲಾಗಿ, ‘ತುಂಬಾ ಥ್ಯಾಂಕ್ಸ್’ ಎಂದಂಗಿತ್ತು. ಅದೆಲ್ಲಿತ್ತೋ ಏನೋ, ದೊಡ್ಡದೊಂದು ಉಸಿರು ಆ ಸಣ್ಣ ಮೂಗಿನೊಳ್ಳೆಯಲ್ಲಿ ದಾರಿ ಮಾಡಿಕೊಂಡು ಸುತ್ತಲಿನ ಗಾಳಿಯಲ್ಲಿ ಲೀನವಾಗಿತ್ತು. ದೊಡ್ಡದಾಗಿ ಕಣ್ಣನ್ನು ಅರಳಿಸಿ, ಉಸಿರೆಳೆದುಕೊಂಡು, ‘ನಿನ್ನ ಹೆಸರು ತಿಳೀದಿದ್ಯ?’ ಎಂದು ಕೇಳಿದೆ.
‘ಚುಂಡ್ರಾಂ..’ ಎಂದಂಗೇನೋ ಇತ್ತು.
ಮತ್ತೊಮ್ಮೆ ದೊಡ್ಡದಾಗಿ ಉಸಿರು ಬಿಟ್ಟು, ‘ನಮ್ಮನ್ನು ಸಂಕಷ್ಟದಿಂದ ಪಾರು ಮಾಡಿಬಿಟ್ಟೆ ಕಣಯ್ಯ’ ಎಂದು ನಗು ಅಳು ಮಿಶ್ರಿತ ಭಾವದಲ್ಲಿ ಡಾಕ್ಟರ್‌ಗೆ ಎಲ್ಲವನ್ನೂ ತಿಳಿಸಿದೆ.
‘ಗುಡ್. ನಾ ಸ್ವಲ್ಪ ಔಷಧಿ ಬರೆದು ಕೊಡ್ತೀನಿ. ಕೊಡ್ತಾ ಇರಿ. ಮತ್ತೆ ತೊಂದ್ರೆ ಅನ್ಸಿದ್ರೆ ಕರೆದುಕೊಂಡು ಬನ್ನಿ. ಲಕಿ ಫೆಲ್ಲೊ’ ಎನ್ನುತ್ತ ಏನೋ ಬರೆದು ಕೊಟ್ಟರು.
ಅಪ್ಪನಿಗೆ ಎಲ್ಲವನ್ನೂ ತಿಳಿಸುವಷ್ಟರಲ್ಲಿ ಮಂಜು ಅಂಕಲ್ ಬಂದಿದ್ದರು.
‘ಥ್ಯಾಂಕ್ ಗಾಡ್.. ಇನ್ನೊಮ್ಮೆ ಅಷ್ಟಮಿಯ ಪ್ರಯಾಣ ಬೇಡಾಪ್ಪ’ ಎಂದು ನಿಟ್ಟುಸಿರು ಬಿಡುತ್ತ ಅಮ್ಮನಿಗೆ ತಿಳಿಸಿದರು.
ಇದರ ನಡುವೆ ಅಮ್ಮನದ್ದು ಮಾಮೂಲು ಸಂದೇಹಗಳು -‘ ಊಟ ಏನ್ ಕೋಡ್ಬೋದಂತೆ ಕೇಳಿ? ಪ್ರಯಾಣಾ ಮಾಡ್ಬೋದಂತ? ಡ್ರೈವ್ ಮಾಡ್ಬೋದ?....’

ನಡುಗುತ್ತಿದ್ದ ಸುಂದರನಿಗೆ ನನ್ನ ಶಾಲು ಹೊದಿಸಿ ಹಾಗೆ ಆ ಮಳೆ ಹನಿಗಳನ್ನ ನೋಡುತ್ತಾ ಕಣ್ಣು ಮುಚ್ಚಿದೆ.

                                                                   **********
ಅದು ಬಹಳ ದೊಡ್ಡ ಅಹಮ್ಮಿನ ಕೋಟೆ. ಹೊರಗಿನ ಎಲ್ಲವನ್ನೂ ಕಾಣದಂತೆ ಮರೆಮಾಚುವ ಕೋಟೆ. ಅಲ್ಲಿ ಎಲ್ಲವೂ ಮರೀಚಿಕೆ. ಕಾಣಿಸಿಯೂ ಇಲ್ಲದ್ದು. ಇಂಥದ್ದರ ನಡುವೆ ಆಗಿದ್ದ ಆ ಅರಿವೂ ಮರೀಚಿಕೆಯೆಂದು ತಿಳಿಯಲಷ್ಟೇನು ಕಷ್ಟವೆನಿಸಲಿಲ್ಲ.
ಬೆಳಿಗ್ಗೆ ಕಾಫಿ ಕೊಡುವುದಕ್ಕೆ ಆಸ್ಪತ್ರೆಗೆ ಬಂದಿದ್ದೆ. ಮತ್ತದೇ ಚಪ್ಪಲಿಯ ಸದ್ದು. ನೀಲಮ್ಮ ಒಳಗೆ ಬಂದರು.
‘ಓ ಬಂದ್ಯೇನಪ್ಪಾ... ಬಂದೆ ಬಂದೆ ಬ್ಯಾಗ್ ತಕ್ಕೊಂಡ್ ಬರ್ತೀನಿ.’ ನೀಲಮ್ಮ ಓಡಿದರು.
ಆ ಕ್ಷಣಕ್ಕೆ ಕಾಗೆ, ಗೂಬೆ, ಗಂಟೆಗಳೆಲ್ಲವೂ ಒಟ್ಟೊಟ್ಟಿಗೆ ಅರಚಿ ಉಂಟು ಮಾಡಿದ್ದ ಕರ್ಕಶ ಧ್ವನಿ ಅದಾಗಿತ್ತು. ‘ಥೂ ಇವ್ರಿಗೇನು ಅನ್ಸಲ್ವ. ನಂಗೆ ಸಾವಿರಾರು ಕೆಲ್ಸ ಇರತ್ತೆ. ಇವ್ರನ್ನ ಬಿಟ್ಕೊಂಡ್ ಕೂರೋಕ್ಕಾಗುತ್ಯೇ?..’ ಗೊಣಗಿಕೊಳ್ಳುತ್ತಾ ಹೊರಗೆ ಬೈಕ್ ಬಳಿ ನಡೆದೆ. ಮೊಬೈಲ್ ಹೊಡೆದುಕೊಳ್ಳುತ್ತಿತ್ತು.
‘ಮಗಾ ಅಸ್ಸೈನ್‌ಮೆಂಟ್‌ಗೆ ಕೊನೆ ದಿನಾ ಇವತ್ತು..’ ಸ್ನೇಹಿತ ಕರೆ ಮಾಡಿದ್ದ.
‘ಹ್ಞಾಂ.. ಗೊತ್ತು ಬರ್ತೀನಿ’ ಎಂದು ಫೋನ್ ಇಟ್ಟು ನೀಲಮ್ಮನ ಮನೆಯೆಡೆಗೆ ಬೈಕ್ ಬಿಟ್ಟೆ.

‘ಗೆಳೆಯ ಏನಮ್ಮಾ ಸಮಾಚಾರ.. ಪಾಪು ಹೇಗಿದೆ?’ ಕಾಲೇಜಿಗೆ ಬಂದೊಟ್ಟಿಗೆ ಸ್ನೇಹಿತನದ್ದು ಶುರುವಾಯಿತು. ಅಲ್ಲಿಯವರೆಗೂ ಅಮಾಯಕರೂ, ಮುಗ್ಧರೂ ಆಗಿದ್ದ ನನ್ನ ಹೆಗಡೆಯನ್ನ ಕನ್ನಡದ ಹೊಸ ಪದಕೋಶ ಲೋಕಕ್ಕೆ ಕೊಂಡೊಯ್ದ ಕೀರ್ತಿ ಇವನದ್ದು. ಅದಕ್ಕೆ ನಾವು ಋಣಿಯಾಗಿಯೂ ಇದ್ದೇವೆ.
‘ಹೌದು ಕಣ್ಲಾ ನೀ ಹೇಳಿದ್ದು ನಿಜಾ. ಬೇರೇವ್ರಿಗೆ ಕೆಟ್ಟದ್ದು ಅನ್ಸಿದಾಗ ಆ ರೀತಿ ಕೆಟ್ಟ ಮಾತುಗಳ್ನ ಆಡ್ಬಾರ್ದು. ನಮಗೂ ನೆಮ್ಮದಿ ಇರೋದಿಲ್ಲ, ಅವ್ರಿಗೂ. ಅದಿಕ್ಕೆ ನಾನು ಡಿಸೈಡ್ ಮಾಡಿದೀನಿ. ಇನ್ಮೇಲಿಂದ ಸೂಳೆಮಗಂದ್ ಆ ಸುಡುಗಾಡ್ ಮಾತ್‌ಗಳ್ನ ಆಡೋದಿಲ್ಲ. ಮುಕ್ಳಿ ಮುಚ್ಕಾಂಡ್ ಇದ್ಬಿಡ್ತೀನಿ’ ಬಹಳ ಸಭ್ಯನಾಗಿ ಬದಲಾಗಿದ್ದೇನೆಂದು ತೋರಿಸಿಕೊಳ್ಳುತ್ತಿದ್ದ ಅವನು.
‘ಅಯ್ಯೋ! ಬೋ....’- ನಾ ಏನೋ ಹೇಳಲು ಹೊರಡುತ್ತಿದ್ದಂತೆ ಎಲ್ಲರೂ ಕಣ್ಣು ಅರಳಿಸಿ ಗೊಳ್ಳೆಂದು ನಕ್ಕರು.

                                                                      ******

ಅದೆಷ್ಟೇ ಅರಿವು ಮೂಡಿದರೂ, ಹುಟ್ಟಿನಿಂದ ಬಂದ ಕೆಲ ಗುಣಗಳು, ಬೆಳೆದಾಗ ರೂಢಿಸಿಕೊಂಡ ಕೆಲ ಅಭ್ಯಾಸಗಳು, ಕೆಲ ಅಹಮ್ಮಿನ ಕೋಟೆಗಳು ಆ ಅರಿವನ್ನು ತಿಳಿಗೊಳಿಸಿ ಕರಗಿಸಿಬಿಡುತ್ತವೆ. ರವಿ ಮತ್ತೊಮ್ಮೆ ಮೂಡಣದಲ್ಲಿಯೇ ಉದಯಿಸುತ್ತಾನೆ.







No comments:

Post a Comment