Saturday, January 11, 2020

ಭಯ


“ಭಯ... ಭಯ... ಓಹ್! ಬೆಳಕು, ಬೆಳಕು... ದಯಮಾಡಿ ಬಾಗಿಲು ಮುಚ್ಚಿರಿ. ನಾನು ಕಂಡು ಬಿಟ್ಟರೆ? ಅಯ್ಯೋ! ಎಂಥಾ ದರಿದ್ರ ರೂಪವಿದು. ಜನ ಉಗಿದಾರು, ಹೊಡೆದಾರು, ನನ್ನ ಹರಿದು ನಾಲ್ಕಾರು ಕಡೆ ಎಸೆದಾರು. ನನ್ನ ನೋಡಿದೊಂದಿಬ್ಬರು ನನ್ನೀ ವೇಷದ ಬಗೆಗಿನ ಸತ್ಯವನ್ನು ಮುಚ್ಚಿಟ್ಟರು! ನನ್ನೆಡೆಗಿನ ಮರುಕವೇ? ಅಲ್ಲ.. ಅಲ್ಲ.. ನನ್ನ ಹುಟ್ಟಿಸಿದಾತನೊಟ್ಟಿಗಿನ ವಿಶ್ವಾಸವೇ? ಅಯ್ಯೋ.. ಆತ ಕುರುಡಾಗಿ ಹೋಗಿದ್ದಾನೆ! ಹೀಗೆಯೇ.. ಹೀಗೆಯೇ.. ನನ್ನ ಹಾಗೆಯೇ ವಿಕಾರ, ಕುರೂಪ, ಅಸಹ್ಯಕರ ಜೀವಿಗಳನ್ನ ಹುಟ್ಟಿಸಿ ಜಗತ್ತಿಗೆಲ್ಲಾ ತೋರಿಸಿಬೇಕೆಂದಿದ್ದಾನೆ! ಅಯ್ಯೋ.. ಅಯ್ಯೋ.. ನೀವಾದರೂ ಹೇಳಬಾರದೆ? ಆತನಿಗೇನೂ ಕಾಣಲಾರದು... ದಯಮಾಡಿ ಎಲ್ಲಾ ತಿಳಿದ ನೀವು ಹೀಗೆ ನಮ್ಮ ಮೇಲೆ ಬೆಳಕ್ಹಾಯಿಸಬೇಡಿ.. ನಾವು ಕಂಡುಬಿಟ್ಟರೆ? ಅಯ್ಯೋ.. ಬೆಳಕು, ಭಯ ಭಯ...”ನನ್ನ ಲೇಖನಗಳ ಈ ಆರ್ತನಾದ ದಿನಾ ರಾತ್ರಿಯ ಕನಸಿನಲ್ಲಿ ಕೇಳಿಸುತ್ತಿದೆಯಲ್ಲಾ?


Thursday, January 9, 2020

ಮುರಿದ ಮೌನ

  ಆಕೆಯಿಂದು ಮೌನ ಮುರಿದಿದ್ದಾಳೆ. ನನಗವಳು ತೀರ ಹತ್ತಿರದ ಪರಿಚಯ. ಪ್ರತೀ ಸಂಜೆ, ಇಗೋ ಇಲ್ಲೇ ಈ ಜಾಗದಲ್ಲೇ, ನನ್ನ ಪಕ್ಕದಲ್ಲೇ ಮೌನವಾಗಿ ಕುಳಿತಿರುತ್ತಿದ್ದಳು. ಆಕೆ ಮೂಕಿಯೆಂದು ಭಾವಿಸಿದ್ದೆ. ಓಹ್! ಇದೇನಿದು ಇಂದು? ಆಕೆಯ ಮಾತುಗಳು ತಡೆಯಲಾಗದಷ್ಟು ಅಸಂಬದ್ಧವಾಗಿವೆಯೇ! ಅಗೋ, ಅಗೋ, ನಿಮ್ಮನ್ನು ರೊಚ್ಚಿಗೇಳಿಸುವಷ್ಟು ಅವೈಜ್ಞಾನಿಕವಾಗಿ ಮಾತನಾಡುತ್ತಿದ್ದಾಳಲ್ಲವೇ. ಆಕೆಗೆ ಬೈದು, ಆಕೆಯ ಬಾಯಿ ಮುಚ್ಚಿಸಿ ಓಡಿಸಿಬಿಡಬೇಕೆಂದು ಓಡೋಡಿ ಬಂದಿರಲ್ಲವೇ? ಹ್ಹ..ಹ್ಹ.. ನಿಮ್ಮ ಹಾಗೆ ಆಕೆಗೆ ‘ನಾ ನಿನ್ನ ಮಾತುಗಳನ್ನು ಕೇಳಲಾರೆ’ ಎಂದು ಹೇಳಲಾಗದ ಮೂಕನೇನೋ ಹೌದು ನಾನು. ಅಶಕ್ತನೆಂದು ಸುಮ್ಮನಿಲ್ಲ. ಆಕೆಯದ್ದೇ ಆದ ಮಾತುಗಳು ಕೇಳುಗರಿಲ್ಲದೆ ಆಕೆಯನ್ನು ಇರಿದು ಕೊಂದು ಮೂಕಿಯಾಗಿಸಿದ್ದು. ನಾನೂ ಸಹ ಕೋಪಿಸಿಕೊಂಡರೆ? ಮತ್ತೇ ಕೇಳುಗರಿಲ್ಲದೇ ಹೋದರೆ?