Sunday, April 26, 2020

ಓಣಿಯ ದೆವ್ವ

(ಕಿಟ್ಟಿಯ ಕಥೆಗಳು)


ಕಿಟ್ಟಿಗೆ ಆಗ ೬ ವರ್ಷ. ೧ನೇ ತರಗತಿಯಲ್ಲಿ ಓದುತ್ತಿರಬೇಕಿತ್ತು. ಆದರೆ ದಾಖಲೆಯಲ್ಲೇ ಅವನಿಗೆ ೫ ವರ್ಷ ಮಾಡಿ ಮತ್ತೆ ಯೂ.ಕೆ.ಜಿ. ಗೆ ಹಾಕಬೇಕಾದ ಪರಿಸ್ಥಿತಿ ಬಂದಿತ್ತು. ಕಿಟ್ಟಿಗೆ ಬರ್ತಿದ್ದ ‘ಅ, ಆ, ಇ , ಈ’ ಅನ್ನೋ ನಾಲ್ಕು ಅಕ್ಷರದಿಂದ ಒಂದು ನ್ಯೂಸ್ ಪೇರ‍್ರನ್ನು ಓದಲು ಸಾಧ್ಯವೇ ಇರಲಿಲ್ಲ. ಅಕ್ಷರಗಳೆಂದರೆ ಅರ್ಥವೇ ತಿಳಿಯದ ಅವನಿಗೆ ನ್ಯೂಸ್ ಪೇಪರಿನಲ್ಲಿ ಕಂಡಿದ್ದೆಲ್ಲಾ ಚಿತ್ರಗಳೇ.


ಹಳ್ಳಿಯಲ್ಲಿದ್ದಾಗ ಪ್ರತೀ ಸಂಜೆ ಐದು ವರ್ಷದ ಕಿಟ್ಟಿಯನ್ನ ಅಮ್ಮ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆತನ ಬಲಗೈಯನ್ನು ಹಿಡಿದು ಸ್ಲೇಟಿನ ಮೇಲೆ ತಿದ್ದಿಸುತ್ತಲೇ ಇದ್ದಳು. ಕಿಟ್ಟಿಗೆ ಅದೊಂದು ರೀತಿ ಬಲಗೈಗೆ ವ್ಯಾಯಾಯಮದಂತಿತ್ತಷ್ಟೇ! ಕಿಟ್ಟಿಯ ಎಡಗೈನ ಮಧ್ಯದ ಎರಡು ಬೆರಳುಗಳು ಅವನ ಬಾಯಲ್ಲೇ ಸದಾ ಇದ್ದಿರಬೇಕಿತ್ತು ಮತ್ತು ತೋರು ಬೆರಳು ಮೂಗಲ್ಲಿ. ಮೂಗಲ್ಲಿ ಏನೇ ಇದ್ದಿರಲಿ, ಇಲ್ಲ್ಲದಿದ್ದಿರಲಿ ಬೆರಳಿನಿಂದ ತಿರುವುತ್ತಿದ್ದರೇ, ಆ ವಯಸ್ಸಲ್ಲೇ ಅವನಿಗೇನೋ ಹಿತ. ಹಿತದ ನಡುವೆ ಏನೇ ಬರೆಸಿದರೂ, ಏನೇ ಹೇಳಿದರೂ ಅವನ ತಲೆಗೆ ಇಳಿಯುತ್ತಲೇ ಇರಲಿಲ್ಲ. ಈ ತಲೇನೋವೇ ಬೇಡವೆಂದು ಶಿಶುವಿಹಾರಕ್ಕೆ ಕಿಟ್ಟಿಯನ್ನು ಹಾಕಲು ನಿರ್ಧರಿಸಲಾಯಿತು. ಮೊದಲನೇ ದಿನವೇ ಕಿಟ್ಟಿಯ ಅಮ್ಮ ಆತನನ್ನ ಶಿಶ್ವಾರಕ್ಕೆ ಬಿಟ್ಟು ಮನೆಗೆ ಬರುವ ವೇಳೆಗೆಲ್ಲಾ ಕಿಟ್ಟಿ ಹಾಜರ್ ಆಗಬಿಟ್ಟಿದ್ದ. ಶಿಶ್ವಾರದ ಹಾದಿಯಲ್ಲೇ ಹೋಗುತ್ತಿದ್ದ ಕಿಟ್ಟಿಯ ಚಿಕ್ಕಪ್ಪನನ್ನ ಅಲ್ಲಿಯ ಆಯ ಕರೆದು, ಆತನ ಅಳುವನ್ನ ಸಹಿಸಲಿಕ್ಕೆ ಸಾಧ್ಯವೇ ಇಲ್ಲವೆಂದು ವಾಪಸ್ ಕಳುಹಿಸಿಕೊಟ್ಟುಬಿಟ್ಟಿದ್ದರು. ಕಿಟ್ಟಿಗೆ ಇದೇನೋ ಒಳ್ಳೆಯ ಪ್ಲಾನ್ ಹಾಗೆ ತೋರಿತು. ಮುಂದೆ ಕಿಟ್ಟಿಯ ಜೀವನದುದ್ದಕಕೂ ಈ ಅಳುವಿನ ಅಸ್ತçವನ್ನ ಪದೇ ಪದೇ ಬಳಸಿದ್ದುಂಟೂ. ಆದರೆ ಎಂದೂ ಸಹ ಅದು ಪ್ರಯೋಜನಕ್ಕೆ ಬಾರಲೇ ಇಲ್ಲ.


ಕಿಟ್ಟಿಯ ಚೇಷ್ಟೆಗಳು ದಿನೇ ದಿನೇ ಹೆಚ್ಚಾಗುತ್ತಾ ಬಂದವು. ಕಿಟ್ಟಿಯ ಅಕ್ಕನಿಗೊಬ್ಬ ಸ್ನೇಹಿತನಿದ್ದ. ಬಹಳ ತುಂಟ. ರಾಮು ಅಂತ ಅವನ ಹೆಸರು. ಕಿಟ್ಟಿಗಿಂತ ಮೂರು ವರ್ಷ ದೊಡ್ಡವ. ರಾಮು ಕಿಟ್ಟಿ ಒಟ್ಟಿಗೇ ಮನೆಯಲ್ಲಿದ್ದಾರೆಂದರೆ ಏನಾದರೊಂದು ಧ್ವಂಸವAತೂ ಖಚಿತ. ಮೊದಲೇ ತುಂಟನಾಗಿದ್ದ ಕಿಟ್ಟಿಯ ಬಾಲವನ್ನ ಇನ್ನೂ ಹೆಚ್ಚಿಸಿದ್ದು ಈ ರಾಮುವೆ.


ಈ ಇಬ್ಬರ ಮನೆಯೂ ಒಂದೇ ದಾರಿಯಲ್ಲಿದ್ದದ್ದು. ಅದೊಂದು ಓಣಿ ಎನ್ನಬಹುದು. ಈ ಓಣಿಯ ಮಧ್ಯದಲ್ಲಿ ಒಂದು ಮನೆಯಿತ್ತು. ಆ ಓಣಿಯಲ್ಲಿ ಈ ಮೂರು ಮನೆಯನ್ನ ಹೊರತು ಪಡಿಸಿ ಮತ್ಯಾವ ಮನೆಯೂ ಇರಲಿಲ್ಲ. ಆ ಮನೆಯಲ್ಲಿದ್ದವರ ಬಗ್ಗೆ ಕಿಟ್ಟಿ ಹಾಗೂ ರಾಮುವಿಗೆ ಅವರದ್ದೇ ಆದ ವಿಚಿತ್ರ ಕಲ್ಪನೆಗಳಿದ್ದವು.


‘ಕಿಟ್ಟಿ, ಆ ಮನೇಲಿ ಒಂದು ತಾತ ಇದಾರೆ ಗೊತ್ತಾ ನಿಂಗೆ? ಅವ್ರೊಬ್ರೆ ಇರೋದು ಆ ಮನೇನಲ್ಲಿ. ಗೊತ್ತಾ ನಿಂಗೆ?’


‘ನAಗೊತ್ತಿಲ್ಲಾಪ್ಪ. ಆದ್ರೆ ಅಪ್ಪ ಹೇಳ್ತಿದ್ರು, ಜಾಸ್ತಿ ಗಲಾಟೆ ಮಾಡಿದ್ರೆ ಆ ಮನೇನಲ್ಲಿ ಕೂಡಿ ಹಾಕಿಬಿಡ್ತೀನಿ ಅಂತ’.


‘ಹೌದೇನೋ? ನಾನು ಮೊನ್ನೆ ಅವ್ರ ಮನೆ ಮುಂದೆ ಹೋಗ್ಬೇಕಾದ್ರೆ ಯಾರೋ ಅಜ್ಜ ತೊಟ್ಟಿ ಹತ್ರ ಸ್ನಾನ ಮಾಡ್ತಿದ್ರು. ಅವ್ರೇ ರ‍್ಬೇಕು ಕಣೋ’


‘ಹೌದಾ! ಏನ್ ಮಾಡಿದ್ರು ನಿಂಗೆ?’


‘ನಾನು ಅವ್ರನ್ನ ನೋಡ್ಲೇ ಇಲ್ಲ. ಓಡಿ ಬಂದ್ಬಿಟ್ಟೆ. ಅವ್ರು ನಮ್ಮನ್ನ ಹಿಟ್ಕೊಂಡು ಕಂಬಕ್ಕೆ ಕಟ್ಟುತಾರಂತೆ ಕಣೋ’


‘ಹೌದಾ!’


‘ಹೂಂ. ಅದಿಕ್ಕೆ ನಾನು ಒಂದು ಐಡಿಯಾ ಮಾಡಿದೀನಿ’


‘ಏನದು?’


‘ಅವ್ರು ಸ್ನಾನ ಮಾಡ್ಬೇಕಾದ್ರೆ ನಾವೇ ಅವ್ರಿಗೆ ಕಲ್ಲು ಹೊಡೆದು ಹೆದರಿಸಿಬಿಡೋಣ. ಆಮೇಲೆ ನಮ್ಮನ್ನ ನೋಡಿದ್ರೆ ಹೆರ‍್ಕೋತಾರೆ ಕಣೋ’


‘ಹೂಂ ಹೂಂ.. ನಾನೂ ಹೊಡೀತೀನಿ ಕಣೋ’


ಹೀಗೆ ಇಬ್ಬರೂ ಮಾರನೇ ಆ ಮನೆಯ ಯಜಮಾನರು ಬಾವಿಯ ಬಳಿ ಸ್ನಾನ ಮಾಡುವ ನೇರವನ್ನೇ ಕಾಯುತ್ತಾ ಹೊಂಚು ಹಾಕಿ ಕುಳಿತಿದ್ದರು. ಆ ಅಜ್ಜನ ಮನೆಗೆ ಕಾಂಪೌAಡ್ ಒಂದಿತ್ತು, ಆದರೆ ಗೇಟ್ ಇರಲಿಲ್ಲ. ಯಾರೇ ಆದರೂ ನೇರವಾಗಿ ನುಗ್ಗಬಹುದಿತ್ತು. ಕಾಂಪೌAಡಿನ ಬಾಗಿಲಿಂದ ಅವರ ಮನೆಯ ಬಾಗಿಲಿನ ಮುಂದಿದ್ದ ಮೆಟ್ಟಿಲುಗಳಿಗೆ ಒಂದು ಕಲ್ಲು ಚಪ್ಪಡಿಯ ಹಾದಿಯಿತ್ತು. ಆ ಹಾದಿಯ ಎಡಕ್ಕೆ ಒಂದು ಬಾವಿಯಿತ್ತು. ಮನೆಯ ಬಾಗಿಲ ಮುಂದಿದ್ದ ಮೆಟ್ಟಿಲುಗಳ ಮಧ್ಯದಲ್ಲಿ ಒಂದು ಸಣ್ಣ ಜಾರುಬಂಡೆಯಿತ್ತು.


ಎಷ್ಟು ಹೊತ್ತಾದರೂ ಆ ಮನೆಯಿಂದ ಯಾರೂ ಸಹ ಹೊರಬರಲಿಲ್ಲ. ತಕ್ಷಣ ರಾಮು ಹೇಳಿದ –‘ಲೇ ಕಿಟ್ಟಿ. ಬಾ ನಾವೇ ಬಾಗಿಲು ತಟ್ಟಿ ಓಡಿ ಬಂದ್ಬಿಡೋಣ’. ಕಿಟ್ಟಿಯ ಕೈ ಹಿಡುಕೊಂಡು ರಾಮು ನಿಧಾನಕ್ಕೆ ಒಳಗೆ ಹೋದ. ರಾಮುಗಿಂತ ಕಿಟ್ಟಿಯೇ ಮೊದಲು ಓಡಿ, ಮೆಟ್ಟಿಲು ಹತ್ತಿ ಬಾಗಿಲು ಬಡಿಯೋ ಅಷ್ಟರಲ್ಲಿ, ರಾಮು ಕಿಟ್ಟಿಯ ಕೈಹಿಡಿದೆಳೆದು – ‘ಲೇ ಕಿಟ್ಟಿ, ಉಚ್ಚೆ ಬರ್ತಿದೆ ತಾಳೋ’ ಎಂದು ಹೇಳಿದ. ರಾಮುವಿಗೆ ಅದಾಗಲೇ ಭಯ ಶುರುವಾಗಿತ್ತೇನೋ.


‘ಹೌದ. ಇಲ್ಲೇ ಮಾಡ್ಬಿಡು’ ಎಂದು ಕಿಟ್ಟಿ ಹೇಳುವ ಒಳಗಾಗಲೇ ರಾಮು ಆ ಮನೆಯ ಜಾರುಬಂಡೆಗೆ ಉಚ್ಚಾ ಸ್ನಾನವನ್ನು ಮಾಡಿಸಿದಾಗಿತ್ತು. ಚೆಡ್ಡಿಯನ್ನ ಸರಿ ಮಾಡೋ ಅಷ್ಟರಲ್ಲಿ ಒಳಗಿಂದ ಯಾರದ್ದೋ ಮಾತಿನ ಸದ್ದಾಯಿತು. ಕಿಟ್ಟಿ ಒಂದೇ ನೆಗತಕ್ಕೆ ಮೂರು ನಾಲ್ಕು ಮೆಟ್ಟಿಲು ನೆಗೆದು ಓಡಲಾರಂಭಿಸಿದ. ಆದರೆ ಇವನಿಗಿಂತ ಮೊದಲೇ ರಾಮು ಆಚೆ ಓಡಿದ್ದ. ಇಬ್ಬರೂ ಓಡಿ, ಓಡಿ, ಶಿಶ್ವಾರದ ದೊಡ್ಡ ಜಾರುಬಂಡೆಯ ಸಂದಲ್ಲಿ ಅವಿತುಕೊಂಡು ಕುಳಿತುಬಿಟ್ಟರು.


‘ಕಿಟ್ಟಿ, ಅದು ನನ್ ಉಚ್ಚೆ ಅಂತ ಗೊತ್ತಾಗ್ಬಿಟತ್ತ ಅವ್ರಿಗೆ?’


‘ಗೊತ್ತಿಲ್ಲ ಕಣೋ. ನಮ್ಮಪ್ಪಂಗೆ ಗೊತ್ತಾದ್ರೆ ಅವ್ರ ಮನೇಲೆ ನನ್ನ ಕೂಡು ಹಾಕ್ಬಿಡ್ತಾರೆ.’


‘ಗೊತ್ತಾಗಲ್ಲ ಕಣೋ. ಉಚ್ಚೆ ಎಲ್ಲಾರದೂ ಒಂದೇ ಕಲರ್ ಇರತ್ತೇ ಅಲ್ವಾ. ನಂದು ಅಂತ ಗೊತ್ತಾಗಲ್ಲ. ನಾವು ಒಂದು ಕೆಲಸ ಮಾಡೋಣ. ನೀನು ನಿನ್ ಮನೆಗೆ ಹೋಗು. ನಾನು ನನ್ ಮನೆಗೆ ಹೋಗ್ಬಿಡ್ತೀನಿ ಆಯ್ತ?’


‘ಸಿಗಾಕೊಂಡ್ರೇ?’


‘ಹೊಡೀತಾರೆ ಕಣೋ. ನೀನು ಮನೆಗೆ ಹೋಗ್ಬೇಕಾದ್ರೆ ಆ ಉಚ್ಚೆ ಒಣಗಿದ್ಯಾ ಅಂತ ಒಂದ್ಸರಿ ನೋಡ್ಕೊಂಡ್ ಹೋಗು. ಮನೆ ಹೊರಗೆ ನಿಂತು ಒಳಗಡೆಯಿಂದ ಏನಾದ್ರೂ ಬೈತಾ ಇದಾರ ಕೇಳಿಸ್ಕೋ. ಬೈತಾ ಇದ್ರೆ ಇಲ್ಲಿಗೇ ಓಡಿ ಬಾ. ನಾನೂ ಬೈತಾ ಇದ್ರೆ ಇಲ್ಲಿಗೆ ಬಂದ್ಬಿಡ್ತೀನಿ’/


ಕಿಟ್ಟಿಯ ಅಮ್ಮ ದೇವಸ್ಥಾನದಿಂದ ಬರೋ ಅಷ್ಟçಲ್ಲಿ ಕಿಟ್ಟಿ ಒಂಟಿ ಕಾಲಲ್ಲಿ ಗೋಡೆಗೆ ಒರಗಿ ನಿಂತಿದ್ದ. ಅಮ್ಮನಿಗೆ ಇದು ಮಾಮೂಲಾಗಿತ್ತು. ಕಿಟ್ಟಿಯ ಚೇಷ್ಟೆ ತಡೀಲಿಕ್ಕೆ ಅವರ ಅಪ್ಪ ಕಂಡು ಹಿಡುಕೊಂಡಿದ್ದ ಒಂದು ವಿಧಾನವಾಗಿತ್ತು ಇದು. ಅದಕ್ಕೇ ಇಂದೂ ಏನೋ ತಂಟೆ ಮಾಡಿರಬೇಕೆಂದು – ‘ಏನ್ ಮಾಡಿದ್ರು ಇವತ್ತು ಮಹಾರಾಜರು?’ ಕಿಟ್ಟಿಯ ಅಪ್ಪನಿಗೆ ಕೇಳಿದ್ರು.


‘ಏನ್ ಮಾಡಿದ್ನ ಇವ್ನು? ಆ ಅಳಗ್‌ಸಿಂಗರಾಚಾರ್ ಮನೆ ಮುಂದೆ ಉಚ್ಚೆ ಉಯ್ದು ಬಂದಿದಾನೆ. ಅವ್ರು ಇವತ್ತು ನೇರ ಮನೇಗೆ ಬಂದು ಕಂಪ್ಲೇAಟ್ ಮಾಡಿ ಹೋದ್ರು’


‘ನಾನಲ್ಲಾಣ್ಣ ಅದು. ರಾಮ ಮಾಡಿದ್ದು’


‘ಮುಚ್ಚು ಬಾಯಿ. ನೀನೋ ಅವನೋ. ನೀನು ಹೋಗಿದ್ದೆ ತಾನೆ ಉಚ್ಚೆ ಮಾಡೋಕ್ಕೆ ಬಡವಾ ರಾಸ್ಕಲ್’


‘ನಾನು ಕಲ್ಲು ಹೊಡೆಯೋಕ್ಕೆ ಹೋಗಿದ್ದು’


‘ಅಯ್ಯೋ ಪಾಪಿ ಮುಂಡೇದೆ ಕಲ್ಲು ಯಾಕೋ ಹೋಡೀಬೇಕು ನೀನು?’


‘ಇಲ್ಲ ಅಂದ್ರೆ ಅವ್ರು ನಮ್ಮನ್ನ ಕಂಬಕ್ಕೆ ಕಟ್ಟಿ ಹೊಡೀತಾರಂತೆ. ಅದಿಕ್ಕೆ ನಾವೇ ಅವ್ರಿಗೆ ಕಲ್ಲಲ್ಲಿ ಹೊಡಿಯೋಣ ಅಂದ ರಾಮು’


ಕಿಟ್ಟಿಯ ಅಪ್ಪನಿಗೆ ಇದ್ದ ಕೋಪವೆಲ್ಲಾ ರ‍್ರಂತಾ ಇಳಿದು ಜೋರು ನಗು ಬಂದಿತು. ಕಿಟ್ಟಿಯನ್ನ ತಾವು ಕೂತಿದ್ದ ಚೇರಿನ ಹತ್ತಿರಕ್ಕೆ ಕರೆದರು. ಕಿಟ್ಟಿ ಕಾಲು ಇಳಿಸಿ ಓಡಿ ಬಂದ. ಕಿಟ್ಟಿಯನ್ನ ಕಾಲಿನ ಸಂದಿಯಲ್ಲಿ ನಿಲ್ಲಿಸಿಕೊಂಡು, ಕೆನ್ನೆಗಳನ್ನ ಬೆರಳುಗಳ ಮಧ್ಯದಿಂದ ಹಿಡಿದು ಮುದ್ದು ಮಾಡತೊಡಗಿದರು. ‘ಅಯ್ಯೋ ಪುಟಾಣಿ, ನಿನ್ನ ಯಾಕೋ ಅವ್ರು ಕಂಬಕ್ಕೆ ಕಟ್ಟಿ ಹೋಡಿತಾರೆ?’


‘ರಾಮು ಹೇಳಿದ. ಅವ್ರು ದೆವ್ವ ಅಂತೆ ಅದಿಕ್ಕೆ. ಅಮ್ಮಾನು ಹೇಳಿದ್ರು ಅಲ್ಲಿ ಮಾದುರಿ ಗುಗ್ಗಾ ಇದ್ಯಂತೆ’.


‘ಹ್ಹಾ ಹ್ಹಾ.. ಆ ರಾಮನ್ ಮಾತೆಲ್ಲಾ ಕೇಳ್ಬೇಡ ನೀನು. ಅಮ್ಮ ನಿನ್ನ ಹೆದರಿಸೋಕ್ಕೆ ಹೇಳಿದ್ದು ಕಣೋ ಅದು’


‘ಮತ್ತೇ ನೀನು ಅಲ್ಲೇ ಕೂಡಾಕ್ತೀನಿ ಅಂತೀಯ ನನ್ನ’


‘ಹ್ಹಾ..ಹ್ಹಾ... ಸರೀನಪ್ಪ ಆಯ್ತು. ನಿನ್ನ ಇನ್ಮೇಲಿಂದ ಅಲ್ಲಿ ಕೂಡಾಕಲ್ಲ. ಅಲ್ಲಿ ಯಾವ ದೆವ್ವಾನೂ ಇಲ್ಲ. ಯಾವ ಅಜ್ಜಾನೂ ಇಲ್ಲ. ಅವ್ರು ನಿಂಗೆ ಮಾಮ ಕಣೋ. ಅಳಗು ಮಾಮ. ಅವ್ರು ತುಂಬಾ ಒಳ್ಳೇವ್ರು. ನಿಂಗೇನೂ ಮಾಡೋದಿಲ್ಲ ಅವ್ರು. ನಿನ್ನ ಕಂಡ್ರೆ ತುಂಬಾ ಇಷ್ಟ ಅವ್ರಿಗೆ ಗೊತ್ತಾಯ್ತಾ?’ ಅಪ್ಪ ಕಿಟ್ಟಿಯ ಕೆನ್ನೆಗೆ ಮುತ್ತಿಟ್ಟು ಹಾಗೆ ಚಾಚಿ ತಬ್ಬಿದರು.


ಇದಾದ ಮೂರು ದಿನಗಳ ತರುವಾಯ ಅಳಗು ಸಿಂಗರಾಚಾರರು ದಾರಿಯಲ್ಲಿ ಸಿಕ್ಕ ಕಿಟ್ಟಿಯ ಅಪ್ಪನಿನೊಟ್ಟಿಗೆ ಲೋಕಾಭಿರಾಮವಾಗಿ ಹರಟುವಾಗ– ದಿನಾ ತಾವು ಸ್ನಾನ ಮಾಡುವಾಗ ಯಾರೊ ಕಲ್ಲು ಹೊಡೆಯುತ್ತಿದ್ದಾರೆಂದೂ, ಅವರನ್ನು ಹಿಡಿಯಲು ಸಾಧ್ಯವಾಗಲಿಲ್ಲವೆಂದು ಹೇಳಿದರು. ಪಕ್ಕದಲ್ಲೇ ಲಾಲಿಪಪ್ ಚೀಪುತ್ತಿದ್ದ ಕಿಟ್ಟಿ ಅಪ್ಪನ ತೊಡೆಯ ಸಂದಿಯಲ್ಲಿ ಅವಿತುಕೊಂಡು, ಬಗ್ಗಿ ಬಗ್ಗಿ ತನ್ನ ಮುಂದಿದ್ದ ಮಾಮನನ್ನು ನೋಡುತ್ತಿದ್ದ.


No comments:

Post a Comment