Sunday, May 17, 2020

ಮಾದುರಿ ಗುಗ್ಗ

  ಕಿಟ್ಟಿ ಹೆಚ್ಚು ಹೆದರುತ್ತಿದ್ದದ್ದು ಅಮ್ಮನ ಮಾದುರಿ ಗುಗ್ಗಕ್ಕೆ. ಕಿಟ್ಟಿಯ ಮನೆಯ ನಡುಮನೆಯಲ್ಲಿದ್ದ ರೂಮಿನ ಮೇಲೆ ಒಂದು ಅಟ್ಟವಿತ್ತು. ಅಡುಗೆ ಮನೆಯಿಂದ ನಡುಮನೆಯ ಹಾದಿಯಾಗಿ ರೂಮಿಗೆ ಹೋಗಬೇಕಾದರೆ ಈ ಅಟ್ಟದ ಬಾಯಿ ಕಾಣುತ್ತಿತ್ತು. ಅದು ಎಂದಿಗೂ ಕತ್ತಲೇ. ಅದಕ್ಕೆ ಅದು ಅಷ್ಟು ರಹಸ್ಯಮಯವಾಗಿ ಕಂಡದ್ದು. ಒಮ್ಮೆ ಕಿಟ್ಟಿ ಅಮ್ಮನಿಗೆ ಕೇಳಿದ – ‘ಅಮ್ಮ ಅಲ್ಲೇನಿದೆ?’


‘ಅಲ್ಲಿ ಮಾದುರಿ ಗುಗ್ಗಾ ಇದೆ. ಗಲಾಟೆ ಮಾಡೋ ಮಕ್ಕಳನ್ನ ಹಿಡ್ಕೊಂಡು ಹೋಗಿ ತಿಂದು ಬಿಡತ್ತೆ’ ಅಂತ ಅಮ್ಮ ಗಡುಸು ಧ್ವನಿಯಲ್ಲಿ ಹೆದರಿಸಿದಾಗಿಂದ ಕಿಟ್ಟಿ ನಡುಮನೆ ದಾಟುವಾಗ ಪಕ್ಕೆಂದು ಓಡಿಬಿಡುತ್ತಿದ್ದ.  


ನಡುಮೆನಯಲ್ಲಿ ಹಳದೀ ಬೆಳಕನ್ನ ಉಗಿಯೋ ಹಾಗೆಯೇ ಒಂದು ಬಲ್ಬಿತ್ತು. ಬಹಳ ವರ್ಷಗಳಿಂದ ಉಗುಳೀ ಉಗುಳೀ ಅದಕ್ಕೂ ಸಾಕೆನಿಸಿದಂತೆ ಆಗೊಮ್ಮೆ ಈಗೊಮ್ಮೆ ಫಳಕ್ ಫಳಕ್ ಎಂದು ಮಿನುಗುತ್ತಿತ್ತು. ಜೊತೆಗೆ ಮೊದಲಿನಷ್ಟೂ ಪ್ರಖರವಾಗಿದ್ದಿರಲಿಲ್ಲ.  ಮನೆಯವರಿಗೆ ಈ ಬೆಳಕೆ ಹೆಚ್ಚಾದಂತಿತ್ತು. ರಾತ್ರಿಯಾದರೆ ಸಾಕು, ಈ ಬಲ್ಬಿನ ಸುತ್ತ ಕಪ್ಪು ಹುಳಗಳು ಸುತ್ತುತ್ತಾ ಇರುತ್ತಿದ್ದವು. ಆ ಬಲ್ಬಿನ ಸುತ್ತ ಹರಡಿದ್ದ ಜೇಡರ ಬಲೆಯೊಳಗೆ ಕಪ್ಪು ಹುಳಗಳ ರಾಶಿಯೇ ಕಟ್ಟಿಹೋಗುತ್ತು. ಕಿಟ್ಟಿ ಆಗಾಗ ಕೇಳುತ್ತದ್ದ ‘ಅದೇನಮ್ಮಾ’ ಅಂತ. ಅದಕ್ಕೆ ಅಮ್ಮ –‘ಅದೆಲ್ಲಾ ಮಾದುರಿ ಗುಗ್ಗನ ಮೊಟ್ಟೆಗಳು. ಗಲಾಟೆ ಮಾಡೋ ಮಕ್ಕಳನ್ನ ಕಂಡ್ರೆ ಮೊಟ್ಟೆ ಹೊಡೆದುಕೊಂಡು, ದೊಡ್ಡದಾಗಿ ಹಾರಾಡ್ತಾ ಬರ್ತವೆ’ ಅಂತ ಮತ್ತಷ್ಟು ಹೆದರಿಸದ್ದಳು. ಕಿಟ್ಟಿ ನಡುಮೆನಯನ್ನು ದಾಟುವಗೆಲ್ಲಾ ಕುತ್ತಿಗೆಯನ್ನ ಕೆಳಗೆ ಬಗ್ಗಿಸಿ ಒಮ್ಮೆ ಮಾತ್ರ ಓರೆಗಣ್ಣಿನಿಂದ ಬಲ್ಬಿನತ್ತ, ಅಟ್ಟದತ್ತ ದೃಷ್ಟಿ ಬೀರಿ, ಪಕ್ಕೆಂದ ರೂಮೊಳಗೆ ತೂರಿಬಿಡುತ್ತಿದ್ದ. ಹೆಚ್ಚಿನ ಬಾರಿ ಆತ ನಡುಮೆನಯನ್ನ ದಾಟಲು ಯಾರಾದರೂ ಒಬ್ಬರು ಜೊತೆಯಿರಲೇ ಬೇಕಿತ್ತು. ಇಲ್ಲ ಬರುವವರೆಗೂ ಕಾಯುತ್ತಿದ್ದ. 


ಒಮ್ಮೆ ಮಳೆಗಾಲದ ಸಂಜೆ. ಛಳಿ-ಛಳಿ. ಕಿಟ್ಟಿ ಹಾಗು ಅವನ ಅಕ್ಕ ಮನೆಯ ಮುಂದಿನ ಜಾರುಬಂಡೆಯಲ್ಲಿ ಜಾರುತ್ತಿದ್ದರು. ಇದ್ದಕ್ಕಿದ್ದ ಹಾಗೆ ಮೋಡ ಕಟ್ಟಿತು. ಸುತ್ತಲೂ ಕತ್ತಲಾಗುತ್ತಾ ಬಂದಿತು. ಥಂಡಿ ಗಾಳಿ ಕಿಟ್ಟಿಯ ಕೈಗಳಿಗೆ ಹೊಡೆಯುತ್ತಿದ್ದಂತೆ, ಆತ ಕೈಗಳೆರಡನ್ನೂ ಬಿಗಿಯಾಗಿ ಕಟ್ಟಿಕೊಂಡು ನಿಂತ. ಇದಕ್ಕಿದ್ದ ಹಾಗೆ ಯಾರೋ ನೀರು ಎರಚಿದಂತೆ ಮಳೆಯ ಇರುಚಲು ಆರಂಭವಾಯಿತು. ಅಕ್ಕ ತಮ್ಮ ಇಬ್ಬರೂ ಮನೆಯ ಒಳಗೆ ತೂರಿ, ಬಾಗಿಲ ಸಂದಿಯಿAದ ತಲೆಯನ್ನ ತೋರಿಸಿ ನೋಡತೊಡಗಿದರು. ಎರಡೇ ನಿಮಿಷಕ್ಕೆ ಇಬ್ಬರ ಮುಖ, ಮೈ ಕೈಗಳೆಲ್ಲಾ ಒದ್ದೆಯಾಗಿ ಹೋಯಿತು. ಅಷ್ಟು ರಭಸವಾಗಿ ಬೀಸುತ್ತಿದ್ದ ಗಾಳಿಯೊಟ್ಟಿಗೆ ಮಳೆಯೂ ತೋರಿ ಮನೆಯೊಳಗೆ ನುಗ್ಗ ತೊಡಗಿತು. ಇಬ್ಬರೂ ಬಾಗಿಲು ಮುಚ್ಚಿ ಅಡುಗೆ ಮನೆಗೆ ಓಡಿದರು.


ಅಮ್ಮ ಇಬ್ಬರ ಮುಖವನ್ನೆಲ್ಲಾ ಒರೆಸಿ, ಬಟ್ಟೆ ಬದಲಿಸಿ, ಬೆಚ್ಚಗಿರಲೆಂದು ರಗ್ಗು ಹೊದೆಸಿ ನಡುಮನೆಯಲ್ಲಿ ಚಾಪೆ ಹಾಸಿ ಕೂರಿಸಿದರು. ಕಿಟ್ಟಿಗೆ ಆ ಛಳಿಯಲ್ಲಿ, ರಗ್ಗು ಹೊದೆದದ್ದು ಅತೀವ ಹಾಯಿಯೆನಿಸತು. ಕೆಲವೇ ನಿಮಿಷಗಳಲ್ಲಿ ಕೂತಕೂತಲ್ಲೇ ನಿದ್ದೆಗೆ ಜಾರಿ ಹೋದ.


ಕಣ್ಣು ಬಿಟ್ಟಾಗ ಸುತ್ತಲೂ ಕತ್ತಲು. ಪಕ್ಕದಲ್ಲೆಲ್ಲಾ ಕೈ ಸವರಿದ. ಯಾರೂ ಇದ್ದಂತೆ ಕಾಣಲಿಲ್ಲ. ಕಿಟ್ಟಿ ಅಮ್ಮ, ಅಕ್ಕ ಅಣ್ಣ ಎಂದು ಕೂಗಿದ. ಯಾರದ್ದೂ ಸದ್ದಿಲ್ಲ. ನಡಿಮೆಯಲ್ಲಿ ಬಲ್ಬ್ ಸಹ ಉರಿಯುತ್ತಿರಲಿಲ್ಲ. ದೇವರ ಮನೆಯಿಂದ ಹೊರಬಿದ್ದಿದ್ದ ದೀಪದ ಬೆಳಕೆಷ್ಟೇ ಮನೆಯನ್ನೆಲ್ಲಾ ಆಕ್ರಮಿಸಿತ್ತು. ನಡುಮನೆಗೂ ಸ್ವಲ್ಪ ಹರಡಿತ್ತು. ಮೇಲೆ ಶೀಟಿಗೆ ಯಾರೋ ಕಲ್ಲು ಹೊಡೆದಂತೆ ಪಟ ಪಟ ಸದ್ದು. ಮಳೆ ಇನ್ನೂ ಬರುತ್ತಿತ್ತು. ಒಮ್ಮೊಮ್ಮೆ ಎಲ್ಲಿಂದಲೋ ನುಗ್ಗಿದ ಗಾಳಿಯು ದೇವರ ದೀಪವನ್ನ ಅಲುಗಾಡಿಸುತ್ತಿತ್ತು. ಇನ್ನೇನು ಆರಿಯೇ ಹೋಗಬೇಕೆನ್ನುವಷ್ಟರಲ್ಲಿ ಗಾಳಿ ನಿಂತು ಬಿಡುತ್ತಿತ್ತು. ಗಾಳಿ ದೀಪದ ಈ ಆಟ ಕಿಟ್ಟಿಯ ಭಯಕ್ಕೆ ನಾಂದಿ ಹಾಡಿತು.


ಒಡನೆಯೇ ಕಿಟ್ಟಿ ಕತ್ತು ಬಗ್ಗಿಸಿಕೊಂಡು ನಿಧಾನಕ್ಕೆ ಸದ್ದು ಮಾಡದಂತೆ ಎದ್ದು ರೂಮಿನ ಬಳಿ ಓಡಿದ. ಆದರೆ ರೂಮಿನ ಬಾಗಿಲಿಗೆ ಹೊರಗಿನಿಂದ ಮೇಲ್ಗಡೆಯ ಚಿಲಕ ಹಾಕಿತ್ತು. ಕಿಟ್ಟಿಗೆ ಒಡನೆಯೇ ಎಲ್ಲಿಂದಲೋ ಮಳೆ ಬಂದAತೆ ಗಳಗಳನೆ ಅಳು ಬಂದಿತು. ಕಿಟ್ಟಿಗೆ ಹಿಂದೆ ತಿರುಗುವಷ್ಟು ಧರ‍್ಯವಿರಲೇ ಇಲ್ಲ. ಹಾಗೆಯೇ ತಲೆ ಎತ್ತಲೂ ಧೈರ್ಯವಿರಲಿಲ್ಲ. ಜೋರಾಗಿ ಅಳಲೂ ಧೈರ್ಯವಿಲ್ಲ. ಅಮ್ಮ ಮೊದಲೇ ಹೆದರಿಸಿದ್ದಳು, ಗಲಾಟೆಯ ಪರಿಣಾಮವೇನೆಂದು. ಕಿಟ್ಟಿ ಜೋರಾಗಿ ಅತ್ತರೆ, ಕೂಗಿದರೆ ತಾನು ಗಲಾಟೆ ಮಾಡುತ್ತಿದ್ದೇನೆಂದು ಮಾದುರಿ ಗುಗ್ಗ ಭಾವಿಸುತ್ತದೆಂದು ಸೊರ ಸೊರ ಎಂದು ಮೂಗಲ್ಲಿ ಸುರಿಸಿಕೊಳ್ಳುತ್ತಾ ಮುಖವನ್ನೆಲ್ಲಾ ಕಿವುಚಿ, ನಿಂತಲ್ಲೇ ಅಳತೊಡಗಿದ. ಒಡನೆಯೇ ‘ಢಮ್..ಢಮಾಲ್..ಢಿಮೀರ್’ ಎಂದು ಸಿಡಿಲು ಬಡಿಯಿತು. ಕಿಟ್ಟಿಗೆ ಅಳು ತಡೆಯಲಾಗದೆ, ಜೋರಾಗಿ ಕಿರುಚಿ ಓಡಿ ಅಡುಗೆಮನೆಯಲ್ಲಿ ಸಿಲಿಂಡರ್ ಇಡುವ ಜಾಗದಲ್ಲಿ ಕುಳಿತು ಬಿಟ್ಟ. ಆದರೆ ಮತ್ತೆ ಕಿರುಚಲಿಲ್ಲ. ಕೈಗಳಿಂದ ಕಣ್ಣು ಮುಚ್ಚಿ.  ಮುಖ ಕಿವುಚಿ, ಬಾಯಿಂದ ಉಸಿರಾಡುತ್ತಾ, ಸೊರ ಸೊರ ಸುರಿಸಿಕೊಳ್ಳುತ್ತಾ ಅಳುತ್ತಲೇ ಇದ್ದ.


ಸುಮಾರು ಹೊತ್ತಾಗಿರಬೇಕು. ಕಿಟ್ಟಿ ಅಳುತ್ತಲೇ ಇದ್ದ. ಪಟ ಪಟ ಸದ್ದು ನಿಂತಿರಲಿಲ್ಲ. ಕಿಟ್ಟಿಯ ಕೈಗಳನ್ನು ಯಾರೋ ಪಕ್ಕನೆ ಹಿಡಿದುಬಿಟ್ಟರು. ಕಿಟ್ಟಿಗೆ ಮಾದುರಿ ಗುಗ್ಗ ಬಂದು ತಿಂದೇ ಬಿಟ್ಟಿತು ಎಂದು ಭಯವಾಗಿ ಕಣ್ಣು ಬಿಡದೆಯೇ  – ‘ಅಮ್ಮಾ, ಏ, ಈ….ಓಹ್ಹೋ’ ಎಂದೇನೇನೋ ಸದ್ದು ಮಾಡುತ್ತಾ ಕೂತಲ್ಲೇ ಥಕತೈ ಕುಣಿಯಲಾರಂಭಿಸಿದ. ಆದರೂ ಅದು ಬಿಡಲೇ ಇಲ್ಲ. ಕಿಟ್ಟಿಯನ್ನ ಒಳಗಿಂದ ಎಳೆದು, ಮೇಲೆ ಎತ್ತಿಯೇ ಬಿಟ್ಟಿತು. ಕಿಟ್ಟಿ ಕೈ, ಕಾಲುಗಳನ್ನೆಲ್ಲಾ ಅಲುಗಾಡಿಸಿ, ಎಷ್ಟೇ ಕಿರುಚಿದರೂ ಅದು ಬಿಡಲಿಲ್ಲ. ಕಿಟ್ಟಿಯನ್ನ ಗಟ್ಟಿಯಾಗಿ ಬಿಗಿದು ತಬ್ಬಿಕೊಂಡು ಕಿಟ್ಟಿಯ ಬೆನ್ನನ್ನು ಸವರುತ್ತಾ ಇತ್ತು. ಸ್ವಲ್ಪ ಹೊತ್ತು ಕಿಟ್ಟಿಗೆ ಕಾಲಲುಗಾಡಿಸಿ, ಕಿರುಚಿ ಕಿಟ್ಟಿಗೆ ಸುಸ್ತಾದಂತಾಗಿ ಕೈಕಾಲು ಆಡಿಸುವುದು ನಿಧಾನವಾಯಿತು. ಕಿರುಚಾಟವೂ ನಿಧಾನವಾಯಿತು. ಆದರೆ ಅಳು ನಿಲ್ಲಲಿಲ್ಲ. ಕಿಟ್ಟಿಯ ಕರುಚಾಟ ನಿಲ್ಲುತ್ತಿದ್ದಂತೆ, ಆತನ ಅಮ್ಮನ ಧ್ವನಿ ಕೇಳಿಸಲಾರಂಬಿಸಿತು. ಅಮ್ಮನ ಧ್ವನಿ ಕಿವಿಗೆ ಬೀಳುತ್ತಿದ್ದಂತೆ ಕಿಟ್ಟಿ ಕಣ್ಣು ಬಿಟ್ಟ. ಅಮ್ಮನ ಸೆರಗು ಕಂಡಿತು. ‘ಅಮ್ಮಾ.. ಅಮ್ಮಾ...ಮಾದುರಿ ಗುಗ್ಗಾ.. ಮಾದುರಿ ಗುಗ್ಗಾ ಬಂದಿತ್ತು’ ಅಂತ ಅಮ್ಮನನ್ನ ಗಟ್ಟಿಯಾಗಿ ಹಿಡಿದು ಮತ್ತೆ ಜೋರಾಗಿ ಅಳಲಿಕ್ಕೆ ಆರಂಭಿಸಿದ.


ಕೊನೆಗೂ ಆತನನ್ನ ಮುದ್ದಿಸಿ ಸಮಾಧಾನ ಮಾಡಿ ಆತನ ಅಳುವನ್ನ ನಿಲ್ಲಿಸಿದ್ದಾಯಿತು. ಆದರೂ ನಿಧಾನಕ್ಕೆ ‘ಉಹ್..ಉಹ್.’ ಎಂದು ಏದುಸಿರು ಬಿಡುತ್ತಲೇ ಇದ್ದ. ಅಂಗಿಯ ಮೇಲ್ಭಾಗವೆಲ್ಲಾ ಇವನ ಕಣ್ಣೀರಿನಿಂದ, ಮೂಗಿನ ಧಾರೆಯಿಂದ ಒದ್ದೆಯಾಗಿ ಹೋಗಿತ್ತು. ಮತ್ತೆ ಅಂಗಿ ಬದಲಿಸಿ, ರಗ್ಗು ಹೊದ್ದಿಸಿ ಕೂರಿಸಿ ಅಮ್ಮ ಎದ್ದಳು. ಕಿಟ್ಟಿ ಒಡನೆಯೇ ಅಮ್ಮನ್ ಸೆರಗನ್ನ ಹಿಡಿದೆಳೆದ – ‘ನೀನು ಎಲ್ಲೂ ಹೋಗ್ಬೇಡಾ ಇಲ್ಲೇ ಇರು. ಎಲ್ಲಿಗೆ ಹೋಗಿದ್ದೆ ನನ್ನ ಒಬ್ಬನ್ನೇ ಬಿಟ್ಟು’ ಎಂದು ಕೇಳಿದ.


‘ನಾನಾ.. ನೀನು ಮಲಗಿದ್ದೆ ಅಲ್ವಾ. ಐದು ನಿಮಿಷದಲ್ಲಿ ಬಂದ್ಬಿಡೋಣ ಅಂತ ಅಕ್ಕನ್ನ ರ‍್ಕೊಂಡು ದೇವಸ್ಥಾನಕ್ಕೆ ಹೋಗಿದ್ದೆ ಪುಟ್ಟ. ಮಳೆ ಜೋರಾಗೊಯ್ತಲ್ವ ಅದಿಕ್ಕೆ ಸ್ವಲ್ಪ ಲೇಟಾಯ್ತು. ಇನ್ನು ಯಾವತ್ತು ಹೀಗೆ ಹೋಗೋಲ್ಲ ಆಯುತಾ? ಈಗ ನಿಂಗೇ ಅಂತ ಕೋಡುಬಳೆ ಮಾಡಿದ್ದೆ. ತೆಗೊಂಡ್‌ರ‍್ಲಾ?’


‘ಕೋಡು ಬಳೇನಾ?’ ಕಿಟ್ಟಿಯ ಮುಖ ಅರಳಿತು. ‘ಹೂಂ. ಹೂಂ.. ಕೊಡಮ್ಮಾ’ ಕಿಟ್ಟಿಗೆ ತಾನು ಅತ್ತಿದ್ದು, ಇಲ್ಲಿವರೆಗೂ ಆಗಿದ್ದು ಎಲ್ಲವೂ ಮರೆತು ಹೋದಂತಿತ್ತು.


 


 

No comments:

Post a Comment