Saturday, March 31, 2018

 

ಎರಡು ಮೂರು ಬಸ್ ಗಳು ಬಂದು ನಿಂತಿದ್ದರೂ ಎಲ್ಲೂ ಖಾಲಿಯಿಲ್ಲ. ಅವುಗಳಲ್ಲೆಲ್ಲಾ ಹಿಡಿಸೋ ಅಷ್ಟು ಜನರ ಹಿಂಡೇ ಅಲ್ಲಿತ್ತು. ಶನಿವಾರವೇನಾದ್ರು ಗವರ್ನಮೆಂಟ್ ಹಾಲಿಡೇ ಬಂದ್ರೆ, ಶುಕ್ರವಾರದ ಸಂಜೆಯ ಬಸ್ ಗಳಲ್ಲಿ ಸೀಟ್ ಪಡಕೋಳೋದು ಒಂದು ಸಾಹಸಾನೆ. ಅಷ್ಟೆಲ್ಲಾ ಜನಜಾತ್ರೆ ಇದ್ದರೂ ಕೂರೋ ಬೆಂಚುಗಳು ಮಾತ್ರ ತುಂಬೋದೇ ಇಲ್ಲ. ಹಿಂದಿನ ಮೂರ್ನಾಲ್ಕು ಬಸ್ ಗಳು ನಿಂತಿದ್ದ ಜಾಗವನ್ನ ಅಂದಾಜಿಸಿ, ಮುಂದಿನ ಬಸ್ ಎಲ್ಲಿ ನಿಲ್ಬೋದು ಅನ್ನೋದನ್ನ ಅವ್ರವ್ರೆ ಲೆಕ್ಕ ಹಾಕಿಕೊಳ್ತ ಆ ಜಾಗಗಳನ್ನ ರಿಸರ್ವ್ ಮಾಡಿಕೊಂಡು ನಿಂತುಬಿಡ್ತಿದ್ರು. ಬೆಂಚುಗಳ ಆಹ್ವಾನವನ್ನ ಗುರುತಿಸ್ತಿದ್ದದ್ದು ಎಲ್ಲೋ ಕೆಲವು ವಯಸ್ಸಾದವ್ರು, ಕೆಲವು ಹೆಂಗಸ್ರು ಹಾಗೂ ಶುದ್ಧ ಸೋಂಬೇರಿಗಳು. 

‘ “ಕೆಹ್ಹೆ... ಕೆಹ್ಹೆ..’’ – ಇಲ್ಲ, ಇಲ್ಲ.. “ಘ್... ಘ್…- ಅಹಾಂ...., “ಘುಹ್ಹೂ.. ಘುಹ್ಹೂ.. “.. ಛೇ!  ಇಲ್ಲ. ಯಾವುದೂ ಸರಿ ಹೋಗ್ತಿಲ್ವಲ್ಲ”. ಕಲ್ಬೆಂಚಿನ ಒಂದು ಮೂಲೆಲಿ ಎರಡು ಬ್ಯಾಗ್ ಗಳನ್ನ ತೊಡೆಯ ಮೇಲಿಟ್ಟು ಎತ್ತಲೋ ನೋಡ್ತಿದ್ದ ಶ್ರೀಕಾಂತನ ದೃಷ್ಟಿಯು ಪಕ್ಕದಲ್ಲಿ ಕುಳಿತಿದ್ದ ಅಜ್ಜಿಯೊಬ್ಬಳ ಗೂರಲಿಂದ ಕದಲಿತು. ಈ ಗೂರಲನ್ನ - ಗೂರಲು ಬೇಡ, ಸಣ್ಣ ಕೆಮ್ಮನ್ನ ಬರಿವಣಿಗೆಯಲ್ಲಿ ತರೋದು ಹೇಗೆ?’ ಯೋಚಿಸಿದ. ಯಾವ ಪದಗಳನ್ನ ಪುನರಾವರ್ತಿಸಿ ಬರೆದ್ರೂ ಆ ಶಬ್ದವನ್ನ ಯಾವುವೂ ಸಹ ಅವನ ಮನದಲ್ಲಿದ್ದಹಾಗೆ ಅಣುಕಿಸ್ತಿರ್ಲಿಲ್ಲ. ಇದಕ್ಕಾಗಿಯೇ ಒಂದೆರೆಡು ಬಾರಿ ಕೆಮ್ಮಿಯೂ ನೋಡಿದ. ಕೆಮ್ಮಿ ಹೊರಹೊಮ್ಮಿದ ಶಬ್ದಕ್ಕೆ ಯಾವ ಪದಗಳನ್ನ ಇಡಬೋದು ಅಂತ  ಒಂದಷ್ಟು ತಲೇಲೆ ಬರೆದುಕೊಂಡು ಪಕ್ಕದಲ್ಲಿರೋವ್ರಿಗೂ ಕೇಳಿಸದ ಹಾಗೆ ಉಚ್ಛರಿಸಿ ಪರಿಶೀಲಿಸ್ತಿದ್ದ. ಯಾವುದೂ ಸಹ ಹೊಂದಿಕೊಳ್ಳದೇ ಅವನಿಗೂ ಈ ಚಟುವಟಿಕೆ ಸಾಕೆನಿಸಿತು. ಅಲ್ಲ. ಹಾಗೆ ನೋಡಿದ್ರೆ ನಾ ಮಾಡ್ತಿರೋ ಕೆಲ್ಸಕ್ಕಿಂತ, ಈ ಧ್ವನಿಗಳನ್ನ ಬರವಣಿಗೆಗೆ ತರೋ ಕೆಲ್ಸವೇ ಎಷ್ಟೋ ಪರವಾಗಿಲ್ಲ ಎನ್ನಿಸತ್ತೆ. ಅದೇನಾದ್ರು ಧ್ವನಿಗೆ ಪದಗಳು ಸಿಕ್ಬಿಟ್ರೆ ಈ ಕೆಲ್ಸಕ್ಕಿಂತ ಚಂದವಾದ ಕೆಲ್ಸವೇ ಇಲ್ಲ. ಎಲ್ಲಾ ಪಕ್ಷಿ, ಪ್ರಾಣಿ, ಕೀಟ, ವಾಹನ, ಹಾರನ್ ಗಳ  ಸದ್ದನ್ನ, ಇಷ್ಟೇ ಯಾಕೇ ಏನೇ  ಕೇಳಲಿ ಎಲ್ಲದ್ರ ಸದ್ದನ್ನೂ ಬೇಕಿದ್ರೆ ಬರವಣಿಗೆಗೆ ತಂದ್ಬಿಡ್ತೀನಿ ಶ್ರೀಕಾಂತನ ಮುಖ ಯೋಚನೆಯಲ್ಲಿಯೂ ತನಗೇ ಅರಿವಿಲ್ಲದ ಹಾಗೆ ಕೊಂಚ ಅರಳಿತ್ತು.

ಸುಮಾರು ಒಂದು ಗಂಟೆ ಕಳೆದರೂ, ಏಳೆಂಟು ಬಸ್ಸುಗಳೂ ಹೋದರು ಅವನಿಗೆ ಏಳಬೇಕೆಂದು ಮನಸ್ಸಾಗಲಿಲ್ಲ. ಎಲ್ಲರಂತೆ ಅವನಿಗೂ ಮೊದಲಿಂದ ಜನಜಂಗುಳಿಯೆಂದರೆ ಆಗದು. ಶ್ರೀಕಾಂತನಿಗೆ ತನ್ನ ಆಲೋಚನೆಗಳಿಗೆ ಸಹಕರಿಸಲು ಕೊಂಚ ಪ್ರಶಾಂತವಾದ ಏಕಾಂತ ವಾತಾವರಣ ಬೇಕಿತ್ತು. ಇದ್ದದ್ದರಲ್ಲಿ ಆ ಮೂಲೆ ಅದಕ್ಕೆ ಕೊಂಚ ಸಾಮ್ಯತೆ ಹೊಂದಿತ್ತು! ಅದು ಕಂಡಿದ್ದೆ, ಒಂದೆರೆಡು ಗಂಟೆ ಬಸ್ ಸಿಗದಿದ್ದರೂ ಅಡ್ಡಿಯಿಲ್ಲೆಂದು,  ಜನ ಸಮೂಹ ಖಾಲಿಯಾಗಿ ಬಸ್ಸಲ್ಲಿ ಸೀಟ್ ಸಿಗುವವರೆಗೂ ಅಲ್ಲೇ ಕುಳಿತಿರೋದು ಎಂದು ನಿರ್ಧರಿಸಿದ. ಬಸ್ಸಲ್ಲಿ ಎಂಜಿನ್ ಪಕ್ಕ ಇರೋ ಸೀಟ್ ಸಿಕ್ರೆ ಸಾಕು’,  ಎಂದು ಎರೆಡೂ ಕೈಗಳನ್ನ ಬ್ಯಾಗ್ ಮೇಲೆ ಇಟ್ಟು ಕುಳಿತ.

ಬಾನು ತನ್ನ ರಂಗನ್ನ ಮರೆಮಾಚಿಕೊಳ್ಳುತ್ತಾ ಹೋಗುತ್ತಿತ್ತು. ಆ ಸಮಯದಲ್ಲಿ ಆಗಸವನ್ನ ಹಿನ್ನಲೆಯಾಗಿಸಿ ಯಾವುದೇ ವಸ್ತುವನ್ನ ಗಮನಿಸಿದ್ರೂ ಎಲ್ಲವೂ ಮಸಿಯಾಕೃತಿಗಳೇ! ಆಹ್! ಇದು ಏನನ್ನೋ ನೆನಪಿಸ್ತಿದೀಯಲ್ಲಾ! ಅಲ್ಲೆ ಬಸ್ ಪಾತ್ ನ ಅತ್ತ ಕಡೆ ತನ್ನ ಕಾಂಡ, ಕೊಂಬೆಗಳನ್ನ ದೊಡ್ಡದಾಗಿ ಚಾಚಿಕೊಂಡಿದ್ದ ಮರವನ್ನೊಮ್ಮೆ ತಲೆಯೆತ್ತಿ ನೋಡಿದ ಶ್ರೀಕಾಂತನ ಮನಸ್ಸಲ್ಲೇನೋ ಓಡಿತು. ಕುವೆಂಪು? ಆಹ್! ಅಲ್ಲ. ಕುವೆಂಪುವಿಗೂ ಇದಕ್ಕು ಏನು ಸಂಬಂಧ! ಮಲೆನಾಡಿನ ಚಿತ್ರಗಳನ್ನ ಬಿಟ್ಟು ಅವರದ್ದೇನು ಓದಿಲ್ಲ. ಅದ್ರಲ್ಲೆಲ್ಲೂ ಈ ರೀತಿಯ ಮರ ಕಂಡದ್ದಿಲ್ಲ! ಮತ್ತೆ, ತೇಜಸ್ವಿ? ಯಾವುದಿರಬೋದು? ಆಹಾ! ಆ ಸಂಜೆಗಳು? ಕತ್ತಲು ಧರೆಯನ್ನಪ್ಪಿ ಧರೆಯ ಅಸ್ತಿತ್ವವನ್ನೇ ಮರೆಸುತ್ತಿದ್ದ ಆ ಸಂಜೆಗಳು? ಹೊರಗೆಲ್ಲೂ ದೀಪವಿಲ್ಲ. ಮನೆಯ ಮುಂದಿನ ಜಗುಲಿ! ಅಲ್ಲಿ ನಾನು, ಅಕ್ಕ. ಒಬ್ಬೊಬ್ಬರ ಮುಖವೂ ಸಂಪೂರ್ಣ ಅಸ್ಪಷ್ಟವಾಗುವವರೆಗೂ, ಸೊಳ್ಳೆಗಳ ಗುಂಯ್ಗುನಾದ ತಾರಕಕ್ಕೇರೋ ವರೆಗೆ ಅಮ್ಮನ ತೊಡೆಗೆ ಒರಗಿ ಕುಳಿತೋ, ಅವಳ ತೊಡೆಯಲ್ಲಿ ಮಲಗೋ ಅವಳು ಹೇಳೋ ಕಥೆಗಳಿಗೂ ಕಣ್ಣೆದುರು ಇರುತ್ತಿದ್ದ ಮರ ಗಿಡಗಳಿಗೂ ಏನೇನೋ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತಾ ಹಾಗೆಯೇ ನಿದ್ದೆ ಹೋಗುತ್ತಿದ್ದ ಸಂಜೆಗಳು! ಆದರೆ ಇದೇನು ಆ ಮಾವಿನ ಮರದ ಹಾಗಿಲ್ಲ. ಆ ಮರವು ಎರೆಡು ಕಡೆಗಳಿಗೆ ತನ್ನ ಕಾಂಡವನ್ನು ಹಬ್ಬಿಸಿತ್ತು! ಈ ಮರವು ಒಂದು ಕೈಯನ್ನು ಕಳೆದುಕೊಂಡರೂ ಇನ್ನೊಂದರಲ್ಲೇ ಬಾನನ್ನ ಮುಟ್ತೇನೆ ಅನ್ನೋ ಅಹಂಕಾರ ಇದಕ್ಕೆ!  ಎಷ್ಟು ಕಪ್ಪು ಕಪ್ಪು! ಆ ಎಲೆಗಳು ಹಸಿರೋ ಅಥವಾ ಕಪ್ಪೋ! ಅಥವಾ ನಾನೇದರೂ ಚಿತ್ರಕಲೆಯೊಂದನ್ನು ನೋಡ್ತಿದ್ದೇನೆಯೇ?’ ಶ್ರೀ ಯ ಮನಸ್ಸು ಎಲ್ಲೆಲ್ಲೋ ಹೇಗೆಗೊ ಅಲೆಯತೊಡಗಿತು. ಮನಸ್ಸಿಗೆ ಕಡಿವಾಣವೆಲ್ಲಿ?

ರಾಜಶೇಖರ ಅಯ್ಯಂಗಾರ, ಶ್ರೀಕಾಂತನ ಅಸ್ತಿತ್ವದ ಮೂಲ ಕಾರಣ. ಒಂದೆರೆಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ಅದರ ಸುದ್ದಿಯಿಲ್ಲ. ಅಯ್ಯಂಗಾರರಂತೂ ಶ್ರೀಕಾಂತ ಫೋನು ಮಾಡಿದರಷ್ಟೇ ಮಾತನಾಡೋದು. ಇಲ್ಲದಿದ್ದಲ್ಲಿ ಅವರಾಯ್ತು ಅವರ ಕರ್ಮಗಳಾಯ್ತು. ಎರೆಡು ದಿನ ಫೋನ್ ಮಾಡಿಲ್ಲದ ಕಾರಣ ಶ್ರೀಗೆ ಏನೂ ಸಮಾಚಾರವಿಲ್ಲ. ನೆಗಡಿಯಾದರೆ ಅದನ್ನ ಮುಚ್ಚಿಡಲಿಕ್ಕಂತೂ ಸಾಧ್ಯವಿಲ್ಲ. ಆದರೆ ಅಪ್ಪನಿಗೆ ನೆಗಡಿಯಷ್ಟೆ ಇರಲಿಲ್ಲ. ಕೆಲಸಕ್ಕೆ ರಜೆ ಹಾಕಿ ಶ್ರೀ ತಕ್ಷಣ ಹೊರಡಲೇ ಎಂದು ಕೇಳಿದಾಗಲೂ ಅಯ್ಯಂಗಾರರಿಗೆ ಅದರ ಅವಶ್ಯಕತೆಯಿದ್ದಿರಲಿಲ್ಲ. ಇನ್ನೊಂದು ದಿನ ನೋಡೋಣ ಎಂದು ತಳ್ಳಿ ಹಾಕಿದರು. ಆದರೆ ಅಯ್ಯಂಗಾರರಿಗೆ ಅದೇ  ಮೊದಲ ಬಾರಿಗೆ ತಮ್ಮ ಜೀವಮಾನದಲ್ಲಿ ಇನ್ನೊಬ್ಬರ ಅವಶ್ಯಕತೆಯನ್ನ ಬೆಂಬಲಿಸಬೇಕಾಗಿ ಬಂತು. ಅದನ್ನು ಅವರಾಗೆ ಬಾಯಿ ಬಿಟ್ಟು ಕೇಳಲಿಲ್ಲ. ಶ್ರೀ ಫೋನ್ ಮಾಡಿದಾಗ ಅವರ ಧ್ವನಿಯಿಂದ ಆರೋಗ್ಯವನ್ನ ಅಂದಾಜಿಸಿ ಕೋಡಲೇ ರಜೆ ಹಾಕಿ ಬರ್ತೇನೆ ಎಂದು ಹೇಳಿದಾಗ ಅಪ್ಪ ಬೇಡ ಅನ್ನಲಿಲ್ಲ. ಒಂದು ನಾಲ್ಕು ದಿನದಿಂದ ಅಯ್ಯಂಗಾರರಿಗೆ ರಾತ್ರಿ ನಿದ್ದೆ ಇಲ್ಲ. ವಿಪರೀತ ತಲೆಭಾರ. ಮೈ ಕೈ ನೋವು. ಸಣ್ಣದಾಗಿ ಜ್ವರ. ನಿದ್ದೆ ಇಲ್ಲದೇ ದಿನ ಪೂರ್ತಿ ಕುಳಿತೇ ಇರ್ತಿದ್ರು.

***********
ಗೋಡೆಯ ಮೇಲಿನ ಹಲ್ಲಿಯೊಂದು ಲೊಚಗುಟ್ಟಿದಾಗ ಅದೆಲ್ಲಿದೆಯೋ ಅಂತಲೂ ಗಮನಿಸ್ದೆ ಕೃಷ್ಣ.. ಕೃಷ್ಣ.. ಕೃಷ್ಣ.. ಅಂತ ನೆಲದ ಮೇಲೆ ಕುಟ್ಟೋದು ಒಂದು ರೀತಿಯ ಅಪ್ರಜ್ಞಾಪೂರ್ವಕ ಕ್ರಿಯೆಯಾಗಿ ಹೋಗಿತ್ತು ಶ್ರೀಕಾಂತನಿಗೆ. ಅದೆಲ್ಲಾ ಅಮ್ಮ ಹೇಳಿಕೊಟ್ಟದ್ದು.  ಛೇ! ಈ ಬಲ್ಬೊಂದು.. ಏನೂ ಕಾಣ್ಸೋದೆ ಇಲ್ಲ ಸರಿಗೆ’, ಡಬ್ಬಿಯ ಮೇಲೆ ಸಣ್ಣದಾಗಿ ಬರೆದಿದ್ದ ಅಕ್ಷರಗಳು ಕಾಣದ್ದಾಗಿದ್ದವು. ಅದೆಷ್ಟು ವರ್ಷಗಳಿಂದ ಆ ಬಲ್ಬ್ ಇವರಿಗೆ ಓದುದೀಪವಾಗಿತ್ತೋ ಏನೋ! ಅದಕ್ಕೆ ವಯಸ್ಸಾಗುತ್ತಿದ್ದ ಹಾಗೆ ಸರಿಯಾಗಿ ಬೆಳಕನ್ನ ಉಗುಳಲಿಕ್ಕೆ ಆಗದೆ ಅಶಕ್ತನಾಗಿ ಹೋಗಿತ್ತು. ಅದರ ಸುತ್ತಲೂ ಅದನ್ನೇ ನುಂಗಿಕೊಳ್ಳಲಿಕ್ಕಾಗಿ ಹೆಣೆದಂತಿದ್ದ ಜೇಡರ ಬಲೆಗಳು. ಅದರೊಳಗೆ ಸತ್ತು ಬಿದ್ದಿದ್ದ ರಾಶಿ ಕಪ್ಪು ಹುಳಗಳು. ಅದರ ಧೂಳನ್ನ ಕೊಡವೋಣವೆಂದರೆ ಆ ಅಸಂಖ್ಯಾತ ಹುಳುಗಳು ಕೆಳಗೆ ಗೋಡೆಗೆ ಹೊಡೆದ ನೀರಿನ ಫಿಲ್ಟರ್ ಮೇಲೆ ಬಿದ್ದು ಮತ್ತೆ ಅದನ್ನ ಕ್ಲೀನ್ ಮಾಡ್ತಾ ಕೂರಬೇಕಾಗುತ್ತದೆ ಅನ್ನೊ ಕಾರಣಕ್ಕೇನೋ ಅದನ್ನ ಕ್ಲೀನ್ ಮಾಡದೆ, ಆ ಬಲ್ಬನ್ನ ಮುಟ್ಟದೇ ಇದ್ದದ್ದು.

ಅಪ್ಪ ನಾಳೆ ನಾನು ಹೊರ್ಟು ದೀಪ್ತಿಯನ್ನ ಕಳಿಸ್ತೀನಿ.. ಏನೂ ಬೇಸರ ಪಟ್ಕೋಬೇಡಿ ನಾ ಇರಲ್ಲ ಅಂತ. ನಿಮಗೆ ಅಡುಗೆ ಮಾಡಿಕೊಳ್ಳೋದಿಕ್ಕೆ ಶಕ್ತಿ ಬರೋವರೆಗೂ ದೀಪ್ತಿ ಇಲ್ಲಿರ್ಲಿ..ಆಯ್ತಾ?’ ಅಪ್ಪನ ಲೋಟಕ್ಕೆ ಉಳಿದಿದ್ದ ಗಂಜಿಯನ್ನ ಸುರಿಯುತ್ತಾ ಶ್ರೀಕಾಂತ ಹೇಳಿದ.

ಕಬ್ಬಿಣದ ಕಾಲಿನ ಆ ಮಂಚ ಗೋಡೆಗೆ ಹೊಂದಿಕೊಂಡ ಹಾಗಿತ್ತು. ಗೋಡೆಗೆ ಒಂದು ತೆಳ್ಳಗಿನ ದಿಂಬನ್ನು ಉದ್ದವಾಗಿ ಒರಗಿಸಿ ಅದಕ್ಕೆ ಅಯ್ಯಂಗಾರರು ತಮ್ಮ ಬೆನ್ನನ್ನು ಒತ್ತಿದ್ದರು. ಶ್ರೀಕಾಂತನ ಮಾತುಗಳು ಗಾಳಿಯಲ್ಲೇ ಕರಗಿ ತನ್ನೆಡೆಗೆ ಸುಳಿಯಲೇ ಇಲ್ಲವೆನ್ನುವಂತೆ ಅಯ್ಯಂಗಾರರು ಸೂರನ್ನು ನೋಡುತ್ತಾ ಕುಳಿತರು. ಶ್ರೀಕಾಂತನೇನೂ ಅಯ್ಯಂಗಾರ ಮುಖ ನೋಡಿ ಹೇಳಲಿಲ್ಲ. ಅಷ್ಟು ಧೈರ್ಯವೂ ಅವನಿಗಿರಲಿಲ್ಲ. ಈ ಅಧೈರ್ಯಕ್ಕೆ ಕಾರಣವೂ ಅವನಿಗೆ ತಿಳಿದಿಲ್ಲ.  ಪ್ರಾಯಶಃ  ತಾನು ಹೇಳಿದ್ದನ್ನ ತನ್ನ ಅಪ್ಪ ತಿರಸ್ಕರಿಸಿಯೇ  ತೀರುತ್ತಾರೆ ಎನ್ನುವ ಗಟ್ಟಿ ನಂಬಿಕೆ ಶ್ರೀಕಾಂತನಿಗಿತ್ತು.  ಇದು ತಿಳಿದಿದ್ದರೂ ಮತ್ತೆ ಅದನ್ನು ಹೇಳುವ ಉದ್ಧಟತನವನ್ನ ತೋರ್ತಾನಲ್ಲ ಎನ್ನುವ ಮುಖಭಾವವನ್ನು ತನ್ನ ಅಪ್ಪ ತೋರಿದರೆ ಎನ್ನುವ ಭಯವಿರಬೇಕು. ಇದನ್ನೇ ಶ್ರೀಕಾಂತ ಪ್ರಯಾಣದುದ್ದಕ್ಕೂ ಯೋಚಿಸಿದ್ದ. ಯಾವ ರೀತಿಯ ವಾಕ್ಯಮಾಲೆಯನ್ನು ರಚಿಸಿದರೆ ತನ್ನ ಅಪ್ಪನಿಗೆ ತನ್ನ ಮೇಲೆ ಬೇಸರವಾಗುವುದಿಲ್ಲವೆಂದು. ಜೀವನದ ಅತ್ಯಂತ ವಿಪರ್ಯಾಸಗಳಲಲ್ಲಿ ಇದೂ ಒಂದು – ನಾವು ಏನು ಹೇಳಬೇಕಿದೆ ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಮೊದಲೆ ನಿರ್ಧರಿಸಿಕೊಂಡಿಟ್ಟುಕೊಳ್ಳುವುದು. ಆದರೆ ಭಾಗಶಃ ಸನ್ನಿವೇಶಗಳಲ್ಲಿ, ನಾವು ಅಂದುಕೊಂಡದ್ದನ್ನು ಹೇಳುವೆಡೆಗೆ ಹೆಚ್ಚು ಗಮನವನ್ನು ಹರಿಸುತ್ತಾ, ಆ ಸನ್ನಿವೇಶವನ್ನು ನಿಭಾಯಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ಇನ್ನು ಹಲವು ಸನ್ನಿವೇಶಗಳಲ್ಲಿ, ನಾವು ಅಂದುಕೊಂಡದ್ದನ್ನು ಅಂದುಕೊಂಡ ಹಾಗೇ ಹೇಳಲು ಸಮಯ  ದೊರೆಯದೆಯೋ ಅಥವಾ ಹಲವೂ ಪೂರ್ವಾಗ್ರಹಗಳಿಂದಲೋ, ಹೊಸತೊಂದನ್ನು ಯೋಚಿಸುತ್ತಾ, ಹೊಸತು ಹಳತು ಎಲ್ಲವೂ ಬೆರೆತು, ನಾವು ಸನ್ನಿವೇಶದ ಅಡಿಯಾಳಾಗಿ ಹೋಗಿಬಿಡುತ್ತೇವೆ. ಶ್ರೀಕಾಂತನೂ ಇದರಿಂದ ಹೊರತೇನಲ್ಲ. ತಾನೇನು ಹೇಳಬೇಕು ಅಂದುಕೊಂಡಿದ್ದನೋ ಅದನ್ನೆಲ್ಲಾ ತನ್ನ ಜವಾಬ್ದಾರಿಯೆಂಬಂತೆ ಒದರಿ ಸುಮ್ಮನೆ ಕುಳಿತುಬಿಟ್ಟ. ಆದರೆ ಶ್ರೀಕಾಂತನಿಗೆ ತಿಳಿದಿತ್ತು ಅಪ್ಪ ದೀಪ್ತಿಯ ಕೈಯಲ್ಲಿ ಮಾಡಿದ ಅಡುಗೆಯನ್ನು ತಿನ್ನೋದಿಲ್ಲೆಂದು.

ಒಂದೈದು ನಿಮಿಷದ ಮೌನದ ಬಳಿಕ ಯಾವುದೋ ತಿಳಿಯದ ಬಲವೊಂದು ಶ್ರೀಕಾಂತನಿಂದ ನಾ ಹೇಳಿದ್ದು ಕೇಳಿಸ್ತಾ?’  ಎನ್ನುವುದನ್ನು ಹೊರಡಿಸಿತು. ನಿನ್ನ ಕೈಯಲ್ಲಿ ನಾನು ತಿಂತಾ ಇರೋದೆ ಹೆಚ್ಚು ಎಂದು ಹೇಳಿದ ಹಾಗಿತ್ತು ಅಯ್ಯಂಗಾರರ ನೋಟ. ಅಯ್ಯಂಗಾರರು ಶ್ರೀಕಾಂತನ ಮುಖವನ್ನೊಮ್ಮೆ ನೋಡಿ, ಖಾಲಿ ಲೋಟವನ್ನು ತಟ್ತೆಯಲ್ಲಿಟ್ಟು, ಕೈಗೆ ನೀರು ಚುಮುಕಿಸಿಕೊಂಡು, ದಿಂಬು ಸರಿ ಮಾಡಿ ಮಲಗಿದರು.

ಹಲವಾರು ಬಾರಿ ನಾವು ಏಕೆ ಹಠಾತ್ ಕೋಪಕ್ಕೆ ತುತ್ತಾಗುತ್ತೇವೆ ತಿಳಿಯದು. ನಾವು ಹೇಳುವುದನ್ನು ಸಾವಧಾನವಾಗಿ ಹೇಳಲಿಕ್ಕಾಗದ ಹಾಗೆ ತಡೆಯುವುದಾದರೂ ಏನು? ಅನ್ಯರ ಮೇಲಿರುವ ಪೂರ್ವಾಗ್ರಹವೇ? ಅಪ್ಪ ಏನೂ ಹೇಳದೇ ಮಲಗಿದ್ದು ಕೇಳಿ ಶ್ರೀಕಾಂತನಿಗೆ ಸಿಟ್ಟಾಯಿತು. ಪ್ರತ್ಯುತ್ತರವೊಂದನ್ನು ಅಪೇಕ್ಷೆಯಾಗಿ ಹುದುಗಿಸಿಕೊಂಡು ಹೊರಟಿದ್ದ ಮಾತುಗಳಿಗೆಲ್ಲಾ ಯಾವ ರೀತಿಯ ಮನ್ನಣೆಯೂ ದೊರೆಯಲಿಲ್ಲವೆನ್ನುವ ಕೋಪವೇ ಇರಬೇಕು ಅದು. ಅಥವಾ ಯಾವ ರೀತಿಯ ಅಗೌರವಕ್ಕೂ ಒಳಪಡಬಾರದ ಮಾತುಗಳನ್ನ ಧೂಳಿನ ಹಾಗೆ ಉಫ್’..’ ಎಂದು ಊದಿದ ಹಾಗಿದ್ದರಿಂದೇನೋ ಆ ಕೋಪ. ಆತ ಹೇಳಿದ ಮಾತುಗಳಲ್ಲಿ ಒಂದಷ್ಟು ತೂಕ, ಒಂದಷ್ಟು ಗಾಂಭೀರ್ಯ, ಒಂದಷ್ಟು ಪ್ರಾಮುಖ್ಯತೆ ಅಡಗಿದ್ದವು ಶ್ರೀಕಾಂತನ ದೃಷ್ಟಿಯಲ್ಲಿ.

*********

ನಾನು ಒಂದು ಜಾತಿ ಗೊತ್ತಿಲ್ಲದ ಹುಡುಗಿಯನ್ನ ಇಷ್ಟ ಪಡ್ತಿದ್ದೇನೆ.. ಅವಳನ್ನೇ ಮದುವೆಯಾಗ್ತೇನೆ’, ಎಂದು ಅಂದು ಶ್ರೀಕಾಂತ ಹೇಳಿದಾಗ ಅದಕ್ಕೆ ಅಯ್ಯಂಗಾರರ ವಿರೋಧವೇನೂ ಇರಲಿಲ್ಲ. ಅಯ್ಯಂಗಾರರು ಜಾತಿ ಬೇಧಮಾಡೋದಿಲ್ಲ ಅಂತ ನೋಡಿದೋರಿಗೆ ಅನ್ನಿಸೋಹಾಗೇ ಅಯ್ಯಂಗಾರರು ಒಪ್ಪಿಯೇ ಬಿಟ್ಟರೂ. ಆದರೆ ಅವರ ಲೆಕ್ಕಾಚಾರವೇ ಬೇರೆ.. ಮದುವೆಯಾದ ಮೇಲೆ ದೀಪ್ತಿಯ ತೋಳುಗಳಿಗೆ ಶಂಖ-ಚಕ್ರ ಮುದ್ರೆಗಳನ್ನು ಒತ್ತಿಸಿಬಿಟ್ಟರೆ ಅವಳೂ ಶ್ರೀವೈಷ್ಣವಳೇ ಆಗುತ್ತಾಳೆಂದು. ಇದೂ ಜಾತಿ ಬೇಧವಲ್ಲವೇ? ಮುದ್ರೆ ಇಲ್ಲದೇ ಹೋದಮೇಲೆ ಆಕೆ ಮನೆಯ ಮಗಳಂತೆ ಮನೆಯೊಳಗೆಲ್ಲಾ ಓಡಾಡುವ ಹಾಗೂ ಇಲ್ಲ, ಅಡುಗೆಯನ್ನಂತೂ ಮಾಡುವ ಹಾಗೆಯೇ ಇಲ್ಲ. ಆದರೆ ಇದು ದೀಪ್ತಿಗೆ ತಿಳಿದಿಲ್ಲ. ದೀಪ್ತಿ ಈ ರೀತಿಯ ಬೇಧವನ್ನುಂಟು ಮಾಡುವ ಆಚರಣೆಗಳನ್ನು ಮೊದಲಿನಿಂದಲೂ ವಿರೋಧಿಸಿದವಳು. ತಿಳಿದೂ ತಿಳಿದೂ ಈಗ ಹೇಗೆ ಆಕೆ ಇದಕ್ಕೆ ಬಲಿಯಾದಾಳು? ಬೇಕಾದರೆ ಪ್ರೀತಿ ಬಿಟ್ಟಾಳು ಎನ್ನುವ ಆಲೋಚನೆಗಳಲ್ಲಿ ಶ್ರೀಕಾಂತ ಮುದ್ರೆಯ ಹಿಂದಿನ ನಿಜವಾದ ಉದ್ದೇಶವನ್ನು ತಿಳಿಸದೆ  ಅದೊಂದು ರೀತಿಯ ಶಾಸ್ತ್ರವೆಂದು ದೀಪ್ತಿಗೆ ತಿಳಿಸಿದ್ದರೂ ಆಕೆ ಆ ಕ್ಷಣಕ್ಕೆ  ಒಪ್ಪಿದ್ದಳು. ಆದರೆ ಮದುವೆಯಾಗಿ ನಾಲ್ಕು ತಿಂಗಳಾಗಿದ್ದರೂ ಮುದ್ರೆ ಇನ್ನು ಹಾಕಿಸಿರಲಿಲ್ಲ. ಆಕೆ ಹಾಕಿಸುವವರೆಗೂ ಅಯ್ಯಂಗಾರರು ಆಕೆಯ ಕೈಯಲ್ಲಿ ಊಟ ಮಾಡುವುದಿಲ್ಲ.

ನಿಮಗೆ ಜಾತಿಯ ಭೂತ ಹಿಡಿದಿದೆ..’, ಶ್ರೀಕಾಂತ  ತನಗೇ ತಿಳಿಯದ ಹಾಗೆ  ಪದ್ಧತಿಗಳನ್ನ ಜರಿಯಲಾರಂಭಿಸಿದ. ಒಂದು ಚೂರು ಲಾಜಿಕಲ್ ಸೆನ್ಸ್ ಇದೆಯಾ ನಿಮ್ಮ ಆಚರಣೆಯಲ್ಲಿ.. ಆಕೆ ಮುದ್ರೆ ಹಾಕಿದ ತಕ್ಷಣ ಪವಿತ್ರಳಾಗಿ ಹೋಗ್ತಾಳೆ ಅಂತ ಹೇಳೋಕ್ಕೆ ಆಕೆ ಈಗೇನು ಅಪವಿತ್ರಳಾಗಿದಾಳೆಯೇ? ಹಾಗಿದ್ರೆ ನಾನು ಮುದ್ರೆ ಹಾಕಿಸಿರ್ಲಿಲ್ಲ. ನನ್ನ ಕೈಲಿ ತಿಂದದ್ದೇಕೆ? ಹ್ಹ.. ಹ್ಹ.. ಮನಸ್ಸಲ್ಲಿ ನಾನು ಶ್ರೀವೈಷ್ಣವ ಅನ್ನೋ ಮುದ್ರೆ ಒತ್ತಿದೆ ನಿಮ್ಗೆ.. ಆದ್ರೆ ಆಕೆಯ ಶ್ರೀವೈಷ್ಣವತ್ವದ ಮುದ್ರೆ ಇನ್ನೂ ಒತ್ತಿಲ್ಲ. ಮುದ್ರೆ ಮನಸ್ಸಲ್ಲಿ ಒತ್ತಿಸ್ಕೋಬೇಕು ಹೊರತು ದೇಹದ ಮೇಲಲ್ಲ. ಆಕೆಗೆ ನಿಮ್ಮ  ಮೇಲೆ ತುಂಬಾ ಅಭಿಮಾನವಿದೆ. ಹೊರ್ಡೋಕ್ಕು ಮುಂಚೆ ತಾನೂ ಬರ್ತೀನಿ.. ತಾನೆ ನಿಮ್ಮನ್ನ ನೋಡ್ಕೋತೀನಿ ಅಂತ ಹೇಳಿದ್ಲು.. ನಾನು ಏನೇನೋ ಕಾರಣ ಹೇಳಿ ತಡೆದೆ. ನಾಳೆ ಹೋದ್ರೆ ಕೇಳ್ತಾಳೆ.. ಅಪ್ಪನಿಗೆ ಹುಶಾರಾಯ್ತ ಅಂತ.. ನಾನು ಸುಳ್ಳು ಹೇಳ್ಬೇಕಾಗತ್ತೆ. ಯಾಕೆ ಹೇಳಿ.. ಹುಶಾರಾಗಿಲ್ಲ ಅಂದ  ತಕ್ಷಣ ಹೊರಟು ಬಂದು ಬಿಡ್ತಾಳೆ.. ಛೀ! ನಿಮ್ಮಲ್ಲಿ ಸ್ವಲ್ಪವಾದ್ರು ಕರುಣೆ, ಲಾಜಿಕ್ ಅನ್ನೋದು ಯಾಕೆ ಇಲ್ಲ… ಯಾರೋ ಹೇಳಿದ ಶಾಸ್ತ್ರವನ್ನ ಕಣ್ಣು ಮುಚ್ಚಿ ಫಾಲೋ ಮಾಡೋದು.. ಶ್ರೀಕಾಂತನ ತಾನು ಯಾವುದಕ್ಕಾಗಿ ಇಷ್ಟೆಲ್ಲಾ ಹೇಳುತ್ತಿದ್ದೇನೆ ಎಂದು ಯೋಚಿಸುವ ಶಕ್ತಿಯನ್ನ ಆ ಕ್ಷಣಕ್ಕೆ ಕಳೆದುಕೊಂಡು ಬಿಟ್ಟಿದ್ದ ಎನ್ನಿಸ್ತದೆ.

ಇದೆಲ್ಲಾ ನಿನಗೆ ಈಗ ತಿಳಿಯೊಲ್ಲಾ ಯಾಕೆ ಅಂತ.. ಅಯ್ಯಂಗಾರರು ಅತ್ತ ಕಡೆ ಹೊರಳಿ ಮಲಗಿದರು.

ಏನು ಬೇಕಾದ್ರೂ ಮಾಡ್ಕೋಳಿ.. ನಾನಂತೂ ನಾಳೆ ಸಂಜೆ ಹೊರಡ್ತೀನಿ…  ಶ್ರೀಕಾಂತನ ಮಾತುಗಳು ಕೇವಲ ಕೋಪದಿಂದಷ್ಟೇ ಬಂದಿದ್ದವು. ಮನಸ್ಸಿನಿಂದ ಬಂದದ್ದವಲ್ಲ.

*********

ಬೆಳಿಗ್ಗೆ ಮೂರು ಗಂಟೆಯ ಸಮಯದಲ್ಲಿ ಟಾಯ್ಲೆಟ್ ಗೆಂದು ಶ್ರೀಕಾಂತ ಎದ್ದು ಹೋದಾಗ, ರೂಮ್ ಲೈಟ್ ಆನ್ ಆಗಿದ್ದು ಗಮನಿಸಿದ. ಅಪ್ಪ ಎದ್ದೇ ಇದ್ದರು. ಅವರು ತಲೆಯನ್ನು ಒತ್ತಿಕೊಳ್ಳುತ್ತಿದ್ದನ್ನು ನೋಡಿದರೆ ತಲೆ ಭಾರ ಹೆಚ್ಚಿದಂತಿತ್ತು. ಶ್ರೀಕಾಂತ ಒಂದಷ್ಟು ಸಮಯ ಅಪ್ಪನ ತಲೆಯನ್ನು ಒತ್ತಿದ. ಸ್ವಲ್ಪ ತಲೆಭಾರ ಇಳಿದಂತೆನಿಸಿ ಅಯ್ಯಂಗಾರರಿಗೆ ನಿದ್ರೆ ಬಂದಂತೆನಿಸಿತು. ಆದರೆ ಮೈ ಸ್ವಲ್ಪ ಸುಡುತ್ತಿತ್ತು. ಅಯ್ಯಂಗಾರರು ಕಣ್ಣು ಮುಚ್ಚಿ ಒಂದೆರೆಡು ಬಾರಿ ದೀರ್ಘ ಉಸಿರನ್ನು ತೆಗೆದುಕೊಂಡು ನಿದ್ರೆಗೆ ಜಾರುವ ವರೆಗೂ ಶ್ರೀಕಾಂತ ಅಲ್ಲೆ ಇದ್ದ.

********

ಶ್ರೀಕಾಂತ ಕಣ್ಣು ಬಿಟ್ಟಾಗ ಬೆಳಿಗ್ಗೆ 8: 45. ಅಪ್ಪನಿಗೆ ತಲೆಯೊತ್ತಿ ಬಂದು, ಮತ್ತೆ ನಿದ್ರೆ ಬಾರದೆ ಶ್ರೀಕಾಂತ ಈಸಿ ಚೇರ್ ಮೇಲೆ ಪುಸ್ತಕವೊಂದನ್ನು ಹಿಡಿದು ಕುಳಿತ. ಅದು ಯಾವ ಸಮಯದಲ್ಲಿ ನಿದ್ರೆ ಬಂದದ್ದೋ ತಿಳಿಯಲಿಲ್ಲ. ಎದ್ದ ಮೇಲೆ ಅಪ್ಪನ್ನನು ನೋಡಲಿಕ್ಕೆ ರೂಮಿಗೆ ಹೊರಟ. ಅಪ್ಪ ಅಲ್ಲಿರಲಿಲ್ಲ, ಅದಾಗಲೇ ಎದ್ದಿದ್ದರು. ಶ್ರೀಕಾಂತ ಬಾಲ್ಕನಿಯೆಲ್ಲಾ ಸುತ್ತಿ ನೋಡಿದ… ಎಪ್ಪ ಎಲ್ಲೂ ಇರಲಿಲ್ಲ. ಬಾತ್ ರೂಮ್ ಗೆ  ಬಂದು ನೋಡಿದಾಗ, ಸೋಪಿನ ವಾಸನೆ ಹೊಡೆಯುತ್ತಿತ್ತು. ಸೀದಾ ಕೆಳಗೆ ಬಂದು ನೋಡಿದ. ಮನೆಯ ಮುಂದೆ ಕಾರ್ ಇರಲಿಲ್ಲ. ಶ್ರೀಕಾಂತನಿಗೆ ಖಚಿತವಾಯಿತು. ಸಿದಾ ಅಜ್ಜಿಯ ಮನೆಯೆಡೆಗೆ ನಡೆದ.

ಶ್ರೀಕಾಂತನ ಅಜ್ಜಿಗೆ ವಯಸ್ಸಾಗಿದ್ದು ದಿನವೂ ಅಯ್ಯಂಗಾರರೆ ಅಡುಗೆ  ಮಾಡಿ  ಕೊಡುತ್ತಿದ್ದರು. ಅಜ್ಜಿಯೇಕೆ ಇವರ ಜೊತೆಯಿರಲಿಲ್ಲ ಅನ್ನುವುದೇ ಒಂದು ಕಾದಂಬರಿಯ ಕಥಾವಸ್ತುವಾಗಬಹುದು. ಎಲ್ಲರ ಮನೆಯ ರಾಮಾಯಣವೂ ಇದೇ ಇರುವುದರಿಂದ ಅದನ್ನು ವಿವರಿಸುವ ಅಗತ್ಯವೂ ಇಲ್ಲ. ಶ್ರೀಕಾಂತ ಅಜ್ಜಿ ಮನೆಯ ಅಡುಗೆ ಕೋಣೆಯ ಹೊರಗೆ  ನಿಂತ. ತಲೆಗೆ ಒಂದು ಟವಲನ್ನು ಗಟ್ಟಿಯಾಗಿ ಸುತ್ತಿ ಅಪ್ಪ ತರಕಾರಿ ಹೆಚ್ಚುತ್ತಿದ್ದರು. ಅಲ್ಲಿಂದಲೇ – ಸ್ನಾನ ಆಗಿಲ್ಲ ಅಂದ್ರೆ ಒಳಗೆ ಬರ್ಬೇಡ. ಅಜ್ಜಿ ಆಮೇಲೆ ಊಟ ಮಾಡೋದಿಲ್ಲ ಎಂದರು.

ನಿಮಗೆ ತಲೆ ಭಾರ ಇಳಿದಿಲ್ಲ. ಮುಖ ನೋಡಿದ್ರು ಗೊತ್ತಾಗತ್ತೆ ಜ್ವರ ಸಹ ಇಳಿದಿಲ್ಲ. ನಾ ಸ್ನಾನ ಮಾಡಿ ಬಂದು ಅಡುಗೆ ಮಾಡ್ತೀನಿ.. ನೀವು ಬಂದು ಮಲಗಿ..’ ಎಂದು ಶ್ರೀಕಾಂತ ಹೇಳಿದ್ದಕ್ಕೆ, ತರಕಾರಿ ಹೆಚ್ಚುತ್ತಲೇ ಅಯ್ಯಂಗಾರರು ಉತ್ತರಿಸಿದರು – ನೀನು ಮಾಡಿದ್ರೆ ಅಜ್ಜಿ ತಿನ್ನೋದಿಲ್ಲ ಮುದ್ರೆ ಆಗೋ ವರ್ಗು. ಮೂವರಿಗೂ ಸೇರಿ ರಾತ್ರಿಗೂ ಆಗೋ ಹಾಗೆ ಮಾಡಿದೀನಿ..  ಗಂಜೀನೂ ಮಾಡ್ಕೊಂಡಿದೀನಿ..

ಶ್ರೀಕಾಂತ ತಲೆ ಮೇಲೆತ್ತಿ, ಕಣ್ಣು ಮುಚ್ಚಿ ಒಂದು ದಿರ್ಘ ಉಸಿರನ್ನು ತೆಗೆದುಕೊಂಡ. ಹಾಲಲ್ಲಿದ್ದ ಒಂದು ಚೇರಲ್ಲಿ ಬಂದು ಕುಳಿತು, ಕಾಲ ಮೇಲೆ ಕಾಲು ಹಾಕಿ ಸೂರನ್ನು ನೋಡುತ್ತಾ ಕುಳಿತ.

 

 

No comments:

Post a Comment