ದೇವಸ್ಥಾನದ ಆವರಣದಲ್ಲೊಂದು ಅರಳಿ ಕಟ್ಟೆ, ಕೆಲ ನಾಗ ವಿಗ್ರಹಗಳು, ನವಗ್ರಹ ವಿಗ್ರಹಗಳು. ಭಾನುವಾರದಂದು ಕಿಟ್ಟಿ, ಅಕ್ಕ ಹಾಗೂ ಅಭಿಯ ಬಿಡಾರ ಅಲ್ಲೇ. ಅಲ್ಲೊಂದು ಅವರದ್ದೇ ಲೋಕ. ಮೂವರೂ ಸೇರಿ ಅಲ್ಲಿದ್ದ ವಿಗ್ರಹಗಳಿಗೆ ನೀರು ಹಾಕಿ ತೊಳೆದು, ಕುಂಕುಮ ಇಟ್ಟು, ಹಾರಗಳನ್ನ ಹಾಕಿ ಅದನ್ನೆಲ್ಲಾ ನೋಡಿ ಸಂಭ್ರಮಿಸ್ತಿದ್ದರು. ಆ ಹಾರಗಳನ್ನೂ ಅವರೆ ತಯಾರಿಸ್ತಿದ್ದರು. ಒಂದಷ್ಟು ಅರಳಿ ಎಲೆಗಳನ್ನ ಕಿತ್ತು, ದಾರಕ್ಕೆ ಆ ಅರಳಿ ಎಲೆಗಳನ್ನ ಪೋಣಿಸಿ, ಅರಳೀ ಹಾರವನ್ನ ತಯಾರಿಸೋದು ಮೂವರಿಗೂ ಸಂಭ್ರಮದ ಕೆಲಸ.
ಹೀಗೆ ಸಂಭ್ರಮಿಸುವಾಗಲೇ
ಅದೊಂದು ಚಾಳಿ ಶುರುವಾದ್ದು ಕಿಟ್ಟಿ ಹಾಗೂ ಅಭಿಗೆ. ಅವತ್ತು ಅರಳಿಕಟ್ಟಯ ವಿಗ್ರಹವೊಂದರ ಬಳಿ
ಕಾಯಿನ್ ಸಿಕ್ಕಿತು. ಒಂದು ರೂಪಾಯದ್ದಿರಬೇಕು. ಯಾರು ಹಾಕಿದ್ದೋ, ತನ್ನಲ್ಲೆ ಬಚ್ಚಿಟ್ಟುಕೊಂಡ. ಕಿಟ್ಟಿ, ಅಕ್ಕ ಮನೆಗೆ ವಾಪಸ್ ಹೋಗೋವಾಗ ಕಿಟ್ಟಿಯನ್ನ ಮಾತ್ರ ಗುಟ್ಟಾಗಿ ಕರೆದು
ಹೇಳಿದ - 'ನೋಡು ಒಂದು ರೂಪಾಯಿ ಸಿಕ್ತು.
ಏನಾದ್ರೂ ಮತ್ತೆ ಸಿಗತ್ತಾ ನೋಡೋಣ ಬಾ'. ಅವತ್ತು ಅಂಗಡಿಗೆ ಹೋಗಿ,
ಅಲ್ಲೀವರೆಗೂ ಕಿಟ್ಟಿಗೆ ತಿಳಿಯದ 'ಟಿಟ್-ಬಿಟ್ಸ್' ನ ರುಚಿ ಹತ್ತಿಸಿದ. ಕಿಟ್ಟಿಗೆ ಹೀಗೆ ಬಿಟ್ಟಿ ಹಣದಲ್ಲಿ ಇಷ್ಟೊಂದು
ರಚಿಕರವಾದ್ದು ಸಿಕ್ಕ ತಿನಿಸನ್ನ ಮತ್ತೆ ಮತ್ತೆ ತಿನಬೇಕೆನಿಸಿತ್ತು, ಅದೂ ಬಿಟ್ಟಿ ಹಣದಲ್ಲೇ. ಮನೇಲಿ ದಿನೇ ದಿನೇ ಕೇಳ್ಳಿಕ್ಕೆ ಆಗೋದೇ ಇಲ್ಲ
- ಕೊಡಿಸೆಂದು. ಅದಕ್ಕಾಗಿ ಇಬ್ಬರೂ ಸಿಕ್ಕಾಗೆಲ್ಲಾ ಅರಳಿ ಕಟ್ಟೆಯ ಬಳಿ ಪರಿಶೋಧನೆಯಲ್ಲಿ
ತೊಡಗಿಕೊಳ್ಳುತ್ತಿದ್ದರು. ಎಂದೋ ಅದೃಷ್ಟ ಇದ್ದಾಗ ಒಂದೋ ಎರಡೋ ರುಪಾಯಿಗಳು ಸಿಕ್ಕಾಗ ಇಬ್ಬರಿಗೂ
ಅದೇ ದೊಡ್ಡ ಪಾರ್ಟಿ - ಟಿಟ್ ಬಿಟ್ಸ್, ಹಾಜ್ಮೂಲ, ಕ್ಯಾಡ್ಬರೀಸ್ ಅಥವಾ ಯಾವುದೋ ಚ್ಯೂಯಿಂಗ್ ಗಮ್.
ಎಂದೋ ಅದೃಷ್ಟ ಇದ್ದಾಗಷ್ಟೇ
ಸಿಗುತ್ತಿದ್ದ ಹಣ ಕೈ ತುದಿಯಲ್ಲೇ ವರ್ಷಪೂರ್ತಿ ಸಿಗ್ತದೆ ಅಂತ ತಿಳಿದ್ರೆ? ದೇವಸ್ಥಾನದ ಹುಂಡಿಗೆ ಬೀಗ ಜಡೆದಿದ್ದರೂ, ಎಲ್ಲಾ ಭಕ್ತಾದಿಗಳು ಬರೇ ಕಾಯಿನ್ ಗಳನ್ನ ಮಾತ್ರ
ಹಾಕ್ತಿರಲಿಲ್ಲವಲ್ಲ. ಒಂದೋ ಎರಡೋ ರೂಗಳ ನೋಟುಗಳನ್ನ ಭಕ್ತಾದಿಗಳು ಹುಂಡಿಯ ಬಾಯಿಯೊಳಗೆ
ತೂರಿಸಿದ್ದೇವೆಂದು ಭಾವಿಸಿ ಸಿಗಿಸಿ ಹೋಗುತ್ತಿದ್ದವರಿದ್ದರು. ಮಧ್ಯಾಹ್ನ ದೇವಸ್ಥಾನದ ಬಾಗಿಲು
ಹಾಕೋ ವೇಳೆಗೆ, ದೊಡ್ಡಪ್ಪ ಒಳಗೆ
ಗರ್ಭಗುಡಿಯಲ್ಲಿ ಮಿಕ್ಕ ಕೆಲಸವನ್ನೆಲ್ಲಾ ಮುಗಿಸಿಕೊಳ್ಳೋವಾಗ, ಯಾರೂ ಭಕ್ತಾದಿಗಳು ಇಲ್ಲದಿದ್ದಾಗ ಹುಂಡಿಯ ಬಾಯಿಗೆ ಸಿಗಿಸಿದ್ದ
ನೋಟನ್ನ ಎಳೆದು ಅಭಿ ಜೇಬಿಗೆ ಹಾಕಿಕೊಳ್ಳುತ್ತಿದ್ದ. ಕಿಟ್ಟಿ ತನ್ನ ಜೀವನದಲ್ಲಿ ಕಳೆದ ಅತ್ತುತ್ತಮ
ಕ್ಷಣಗಳವು - ನೋಟು ಕೈಗೆ ಸಿಕ್ಕ ಕ್ಷಣ, ಸಿಕ್ಕ ಹಣದಲ್ಲಿ ಕೊಳ್ಳಬೋದಾದ
ತಿನಿಸುಗಳ ನೆನಪು, ಯಾರಿಗೂ ಕಾಣದೇ ಮನೆ ಪಕ್ಕದ
ಓಣಿಯಲ್ಲಿ ತೂರಿ ಅಂಗಡಿಗೆ ಹೋಗಿ ಕೊಂಡ ತಿನಿಸುಗಳನ್ನೆಲ್ಲಾ ಜೇಬಿಗೆ ತುಂಬಿಕೊಂಡು ತೇರಿನ ಹಿಂಭಾಗ
ಯಾರಿಗೂ ಕಾಣದಂತೆ ತಿನ್ನುವ ಕ್ಷಣ. ಕಿಟ್ಟಿ ಎಂದೂ ಕದ್ದದ್ದಿಲ್ಲ. ಆದರೆ ಅಭಿ ಕದೀತಿದ್ದದ್ದನ್ನ
ತಾನೆ ಕದೀತಿದ್ದವನ ಹಾಗೆ ಅನುಭವಿಸುತ್ತಿದ್ದ. ಹಾಗಾಗಿ ಅಭಿಯ ಎಲ್ಲಾ 'ಪಾಪದಲ್ಲೂ' ಇವನದ್ದೂ ಸಮಪಾಲು.
ಒಮ್ಮೊಮ್ಮೆ ಹುಂಡಿ ತುಂಬಿದ ಸಂದರ್ಭದಲ್ಲಿ ಇಬ್ಬರಿಗೂ ಹಬ್ಬವೇ. ದೊಡ್ಡಪ್ಪ ಒಳಗಿದ್ದಾಗ
ಕಡ್ಡಿಗಳನ್ನ ಹುಂಡಿಯೊಳಗೆ ತೂರಿಸಿ ಸಿಕ್ಕಷ್ಟೂ ನೋಟುಗಳನ್ನ ದೋಚಿ ಪರಾರಿಯಾಗ್ತಿದ್ದರು.
ಕಿಟ್ಟಿಗೆ ಎಷ್ಟು ಹಣ ಕಲೆಕ್ಷನ್ ಆಯಿತು ಎನ್ನುವದರ ಬಗ್ಗೆ ಗಮನವೇ ಇರಲಿಲ್ಲ. ಗಮನವೆಲ್ಲಾ ಅಭಿ
ಕದ್ದನೇ, ಕದ್ದಿರೋದ್ರಲ್ಲಿ ಎಷ್ಟು
ಟಿಟ್ ಬಿಟ್ಸ್, ಸಿಗಬೋದು ಎನ್ನೋದ್ರಲ್ಲಷ್ಟೇ
ಅವನ ಗಮನ.
ಒಂದು ಭಾನುವಾರ ಅಭಿ
ಕಾಣದ್ದರಿಂದ ಕಿಟ್ಟಿಯೇ ದೊಡ್ಡಪ್ಪನ ಮನೆಗೆ ಹೋದ. ಯಾವುದೋ ಕೋಣೆಯಲ್ಲಿ ಅಭಿ ಕಿರುಚುತ್ತಿದ್ದ
ಸದ್ದು ಕೇಳಿತು. ಕೋಣೆಗೆ ಒಳಗಿಂದ ಬೀಗ ಜಡೆದಿತ್ತು. ಅಭಿ ಕಿಟ್ಟಿಯರ ಚಿಕ್ಕಪ್ಪ ಅಭಿಗೆ ಬೆಲ್ಟಿನಲ್ಲಿ
ಹೊಡೀತಿದ್ದಾರೆನ್ನೋದು ತಿಳಿದ ತಕ್ಷಣ ಕಿಟ್ಟಿಗೂ ಭಯ ಶುರುವಾಯಿತು. ರೂಮಿನ ಚಿಲಕದ ಸದ್ದು ಕೇಳಿದ
ತಕ್ಷಣ ಕಿಟ್ಟಿಗೆ ಓಡಬೇಕೆನಿಸೊದರೂ ಓಡಲಾಗಲಿಲ್ಲ. ಹೊರಬಂದ ಚಿಕ್ಕಪ್ಪ - 'ಇನ್ನೊಂದ್ ಸಾರಿ ದೇವರ ದುಡ್ಡು ಕದಿಯೋದು ಮಾಡಿದ್ರೆ
ಮುಕ್ಳಿ ಸುಟ್ಟಾಕ್ತೀನಿ ಬೋಳಿಮಗನೆ' ಎಂದು ಬೈದಿದ್ದು ಕೇಳಿ
ಕಿಟ್ಟಿಗೆ ತಲೆ ಎತ್ತಬೇಕೆನಿಸಲೇ ಇಲ್ಲ. ಚಿಕ್ಕಪ್ಪ ತನ್ನನ್ನ ನೋಡಿದ್ರೋ, ನೋಡ್ಲಿಲ್ಲವೋ ಸಹ ಗೊತ್ತಾಗಲಿಲ್ಲ. ಚಿಕ್ಕಪ್ಪ ಆಚೆ
ಹೋದಮೇಲೆ ರೂಮಿನ ಒಳಗಿದ್ದ ಅಭಿಯ ಬಳಿ ಕಿಟ್ಟಿ ಹೋದ. ಏನು ಹೇಳೋದು ತಿಳಿಯದ ವಯಸ್ಸು. 'ನೋವಾಯ್ತ' ಕೇಳಿದ. 'ಹೋಗೋ' ಎಂದು ಅಭಿ ಮೂಗಿಂದ ಕಣ್ಣಿಂದ ಸುರಿಸುತ್ತ ಅಳತೊಡಗಿದ್ದ.
ಕಿಟ್ಟಿಗೆ ತಿಳಿಯದ ವಿಚಾರಗಳಿದ್ದವು. ಚಿಕ್ಕಪ್ಪನಿಗೆ ತಾವು ಕದ್ದ ವಿಚಾರ ಹೇಗೆ ತಿಳೀತು ಅಂತ.
ಇನ್ನೊಂದು ಚಿಕ್ಕಪ್ಪನೇಕೆ ತನಗೆ ಹೊಡೀಲಿಲ್ಲ ಅನ್ನೋದು.
'ಅವ್ರಿಗ್ ಹೇಗೋ ಗೊತ್ತಾಯ್ತು', ಅರಳಿ ಕಟ್ಟಯ ಹಾರ ಕಟ್ಟೋವಾಗ
ಕಿಟ್ಟಿ ಕೇಳಿದ. 'ಅದ್ಯಾರೋ ಬೋಳಿಮಗ, ನಾವು ಅಂಗಡೀಲಿ ತೆಗೋಳೋದನ್ನ ಚಿಕ್ಕಪ್ಪಂಗೆ ಹೇಳಿದಾನೆ.
ಚಿಕ್ಕಪ್ಪ ನನ್ನ ಕರ್ದು ಹೊಡೆದು ಕೇಳಿದ್ರು. ನಿಜ ಹೇಳ್ಬಿಟ್ಟೆ'. ಎಂದ. 'ಓಹ್ ಇನ್ಮೇಲೆ ಚಾಕ್ಲೇಟ್
ಇಲ್ವ', ಕಿಟ್ಟಿಗೆ ಅದೇ
ಚಿಂತೆಯಾಗಿತ್ತು.
******
'ಹೋ ಬನ್ರೋ...' ದೊಡ್ಡಪ್ಪ ಎಲ್ಲಾ ಮಕ್ಕಳನ್ನ ಕರ್ಕೊಂಡ್ ದೇವಸ್ಥಾನಕ್ಕೆ
ಹೋದರು. ಚಿಕ್ಕಪ್ಪಂದಿರು ಇಲ್ಲದ ದಿನ. ದೇವಸ್ಥಾನದ ಹುಂಡಿಯ ಬೀಗವನ್ನ ತೆಗೆದು ಹಣವನ್ನ
ಬೇರ್ಪಡಿಸೋ ಕೆಲಸ ಇತ್ತು. ಒಂದು ರುಪಾಯಿ, ಎರಡು ರುಪಾಯಿ, ಹೀಗೆ ಕಾಯಿನ್ ನೋಟ್ ಗಳನ್ನ
ಬೇರೆ ಬೇರೆ ಮಾಡೋ ಕೆಲಸ. ದೊಡ್ಡಪ್ಪ ಅಥವಾ ಯಾರಿಗೂ ಅಭಿಗೆ ಬಿದ್ದ ಒದೆಯ ಬಗ್ಗೆ
ತಿಳಿದಿರಲಿಲ್ಲವೇನೋ.
*******
'ಲೋ ಕಿಟ್ಟಿ... ನೋಡು ಈ
ಅಂಗಡಿ ಬೇಡ. ಬೋಳಿಮಗ ಅವನೇ ಹೇಳಿರ್ಬೇಕು. ಒಂದು ಕೆಲಸ ಮಾಡು, ಅದೇ ಬಸವ ಸರ್ಕಲ್ ಹತ್ರ ಹೋಗು. ನಾ ಹೇಳಿದ್ದನ್ನೆಲ್ಲಾ ತೆಗೊಂಡ್ ಬಾ.
ನೀ ಯಾರು ಅಂತ ಅಲ್ಲೀ ಯಾರ್ಗೂ ಗೊತ್ತಿರಲ್ಲಾ' ಕಿಟ್ಟಿಗೆ ತಿನ್ನೋದಷ್ಟೇ ಮುಖ್ಯವಾಗಿತ್ತು. ಇಬ್ಬರೂ ಮತ್ತೆ ತೇರಿನ ಹಿಂದೆ ಸೇರಿದ್ರು.
No comments:
Post a Comment