Tuesday, March 29, 2022

ಜಾತಿ - ಪ್ರೀತಿ? (ಕಿಟ್ಟಿಯ ಕಥೆಗಳು)

ಕಿಟ್ಟಿಗೆ ಪ್ರೀತಿಸಬೇಕೆಂಬೋ ಹಂಬಲ ಇದ್ದೇ ಇತ್ತು. ಪ್ರೀತಿಯ ಕಲ್ಪನೆ ಅದೇ - ಚುಂಬನ, ಆಲಿಂಗನ. ಅದರ ಮುಂದಿನದ್ದು ಇವನ ಕಲ್ಪನೆಯಾಚೆಗಿನದ್ದು. ಚಿಕ್ಕ ವಯಸ್ಸಿಗೆಯೇ ಆಲಿಂಗನದ, ಚುಂಬನದ ಬಗ್ಗೆ ಅಷ್ಟು ಕುತೂಹಲ, ಆಸೆ ಹುಟ್ಟಲಿಕ್ಕೆ ದೊಡ್ಡವರಿನದ್ದೂ ಪಾಲುಂಟೇನೋ. ಯಾವುದನ್ನ ಹೆಚ್ಚು ಮಡಿಯಾಗಿ ಮುಚ್ಚಿಟ್ಟು, ಕಿಟ್ಟಿಯನ್ನ ಸಾಧ್ಯವಾದಷ್ಟು ಅದರಿಂದ ದೂರವಿರುವ ಹಾಗೆ ದೊಡ್ಡವರೂ, ಹಾಗೆಯೇ ಸಿನೆಮಾಗಳು ತೋರಿಸ್ತಾ ಇದ್ದವೋ ಅವು ತನಗೂ  ಬೇಕೆನಿಸುವಂತಹ ಆತುರವಾಯಿತು ಕಿಟ್ಟಿಗೆ‌. ಕಿಟ್ಟಿಯ ೧೪ನೇ ವಯಸ್ಸಿನವರೆಗೂ ಆತ ದಿನಾ ಬೆಳಿಗ್ಗೆ ದೇವರಲ್ಲಿ ಕೇಳತ್ತಿದ್ದದ್ದು ಒಂದೆಯೇ - ಆದಷ್ಟು ಬೇಗ ತಾನು ದೊಡ್ಡವನಾಗಬೇಕು ಹಾಗೂ ತನ್ನನ್ನ ಹೆಚ್ಚು ಪ್ರೀತಿಸುವ ಹುಡುಗಿ ಸಿಗಬೇಕೆಂದು - ಪ್ರೀತಿಯೆಂದರೆ ಅದೇ ಮೇಲೆ ಹೇಳಿದ್ದು‌. ಆದರೆ ಇದ್ದಕ್ಕಿದ್ದ ಹಾಗೆ ಕಿಟ್ಟಿಯ ಒಳಗೆ ಒಂದು ರೂಪಾಂತರವೇ ಸಂಭವಿಸಿ ಹೋಯಿತು. ಇದ್ದಕ್ಕಿದ್ದ ಹಾಗೆ ಕಿಟ್ಟಿ ಭಗವದ್ಗೀತೆ ಓದಲಾರಂಭಿಸಿದ. ಗಾಂಧಿಯ ಕಥೆ ಕೈಗಿರಿಸಿದ. ವಿವೇಕ ನುಡಿಗಳು ಕಿವಿ ಮನದಾಳದಲ್ಲಿರಿಂಗಣಿಸಲಾರಂಭಿಸಿದವು. ಯಃಕಶ್ಚಿತ್ ಪ್ರೀತಿಯೆಂಬ ದೈಹಿಕ ಸುಖಕ್ಕಾಗಿ ಮೋಕ್ಷಪ್ರಾಪ್ತಿ ಕೈತಪ್ಪೀತು ಎನ್ನುವ ಅರಿವು ೧೫ ನೇ ವಯದ ಹುಡುಗನಲ್ಲಿ ಬಂದದ್ದು ಎಂದಾದರೂ ಕಂಡಿದ್ದುಂಟೇ? ಕಿಟ್ಟಿ ಬದಲಾಗಿದ್ದ. ದಿನಾ ಸ್ನಾನ ಮಾಡಿ ಪಂಚೆಯುಟ್ಟು, ದೇವರಿಗೆ ಕೈ ಮುಗಿದು ಒಂದಷ್ಟು ಸ್ತೋತ್ರಗಳನ್ನ ಹೇಳಿದಾಗ ಮನದಲ್ಲಿನೆಮ್ಮದಿ. ಶಾಲೆಯಿದ್ದಕ್ಕೂ ಸ್ತೋತ್ರಗಳೇ ತಲೆಯಲ್ಲಿ ತುಂಬಿರುತ್ತಿದ್ದವು. ಮತ್ಯಾವ ಯೋಚನೆಗಳೂ ತಲೆಯೊಳಗೆ ತೂರದ ಹಾಗೆ ಕಿಟ್ಟಿ ಹೂಡಿಕೊಂಡಿದ್ದ ಉಪಾಯವಿದು‌.‌ ಒಮ್ಮೊಮ್ಮೆ ಹನುಮಾನ್ ಚಾಲೀಸ ಓದುತ್ತಲೇ ಪುಸ್ತಕದ ಹಿಂದೆ ಅದರ ಪ್ರಕಾಶನದ ವಿಳಾಸವನ್ನೆಲ್ಲಾ ಓದಿದ.‌ ತಲೆಯೊಳಗೆ ಅಚ್ಚತ್ತಿಹೋಯಿತು. ವಿಳಾಸವೂ ಹನುಮಾನುಚಾಲೀಸದ ಭಾಗವಾಗಿ ಹೋಯಿತು. ಇಷ್ಟೆಲ್ಲಾ ಮಾರ್ಪಾಡು ಕಿಟ್ಟಿಯೊಳಗಾಗಲು ಕಾರಣವೂ ಉಂಟು. 

ಕಿಟ್ಟಿ ಹೈಸ್ಕೂಲು ಆಗ‌.‌ ಇದ್ದಕ್ಕಿದ್ದ ಹಾಗೆ ಅಷ್ಟೂ ವರ್ಷ ಇರದ ಪ್ರೀತಿಯೊಂದು ಅವಳ ಮೇಲೆ ಹುಟ್ಟಿತು‌. ಪ್ರೀತಿಯೆಂದರೆ ಅದೇ! ಕಿಟ್ಟಿಗೆ ಬೆಳಗ್ಗೆ, ರಾತ್ರೆ ಎಲ್ಲಾಗಲೂ ಆಕೆಯ ನೆನಪೇ. ಸಿನೆಮಾದ ಲವ್ ಸಾಂಗುಗಳು ಮನಸ್ಸನ್ನ ಸೂರೆಗೊಂಡು, ಒಳಗೇನೇನೋ ಚಿತ್ರ ವಿಚಿತ್ರ ಮೋಹಕ ಭಾವಗಳನ್ನ ಉಕ್ಕಿಸಿ ತಂಪೆರೆಯುತ್ತಿದ್ದವು‌. ಆಕೆಯ ಕಣ್ಣಲ್ಲಿ ಈತನ ಕಣ್ಣು ಅರೆ ಕ್ಷಣ ನೆಟ್ಟರೆ ಸಾಕು ಒಳಗೇನೆನೋ ರೋಮಾಂಚನ. ಆಕೆ ಈತನ ಹೆಸರು ಕೂಗಿದರೇ ಸಾಕು - ಸಂತೋಷದ ಮಹತ್ಸಾಗರ. ಅಪ್ಪಿ ತಪ್ಪಿ ಆಕೆಯ ಕೈ ತಾಕಿಬಿಟ್ಟರೆ ಸಾಕು, ಒಳಗೆ ವಿದ್ಯುತ್ ಪ್ರವಾಹವೇ ಹರಿದು, ಮೂಕವಿಸ್ಮಿತನಾಗಿ ನಿಂತುಬಿಡುತ್ತಿದ್ದ. ಒಮ್ಮೆ ಆಕೆ ಈತನ ಭುಜವನ್ನ ತಟ್ಟಿ ನಕ್ಕಳು. ಅರೆ ಕ್ಷಣವಾದರೂ ಈತನ ಹೃದಯ ನಿಂತುಹೋಗಿತ್ತೇನೋ. ನಿಜವೋ ಸುಳ್ಳೋ ತಿಳಿಯದೇ ಖುಷಿಯ ಅಲೆಯಲ್ಲಿ ತೇಲಿಹೋಗಿದ್ದ. 
ಯಾರೋ ಮಾತಾಡ್ತಿದ್ದದ್ದು ಕಿಟ್ಟಿಯ ಕಿವಿಯ ಮೇಲೆಬಿದ್ದಿತ್ತು. ಮಹಾಶಿವರಾತ್ರಿಯ ದಿನದಂದು ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿರಿಸೋ ದೀಪಗಳಲ್ಲಿ ನೂರಾ ಎಂಟು ದೀಪಗಳಿಗೆ ಎಣ್ಣೆ ಹಾಕಿ, ದೀಪ ಹಚ್ಚಿದರೆ ಬೇಡಿಕೊಂಡದ್ದೊಂದು ನೆರವೇರ್ತದೆಂದು‌. ಇದು ಕಿಟ್ಟಿಯ ಮನಸ್ಸಲ್ಲಿ ನಾಟಿತು. ದೀಪದ ಎಣ್ಣೆ ತನ್ನದ್ದೇ ಆಗಿರಬೇಕು. ಮನೇಲಿ ಕೇಳಿದ್ರೆ ಒದೆಯೋದಂತೂ ನಿಜವೆ. ಮನೆಯೋರೆಲ್ಲಾ ಅಯ್ಯಂಗಾರಿಗಳು - ವಿಷ್ಣುವಿನ ಆರಾಧಕರು. ಅಪ್ಪಿ ತಪ್ಪಿಯೂ ಶಿವನ ಗುಡಿಯೊಳಗೆ ಕಾಲಿಟ್ಟೋರಲ್ಲ, ಶಿವನ ಹೆಸರನ್ನ ಹೇಳಿದೋರೂ ಅಲ್ಲ‌. ಕಿಟ್ಟಿಗೆ ದಾರಿ ತೋಚಲಿಲ್ಲ. ಒಂದನ್ನು ಬಿಟ್ಟು. ಮನೆಯಲ್ಲಿದ್ದ ಎಣ್ಣೆ ಕ್ಯಾನು ಸುಮಾರು ತುಂಬಿದ ಹಾಗೇ ಇತ್ತು. ಅದರಲ್ಲಷ್ಟು ಎಣ್ಣೆ ಕದ್ದರೆ ತಿಳೀಲಾರದು ಎಂದ್ಹೇಳಿ, ಕಿಟ್ಟಿ ಕಳ್ಳನಾದ. ಹೇಳಿ ಕೇಳಿ ಕಳ್ಳತನ ಹೊಸತೇನಲ್ಲ. ಕಿಟ್ಟಿ ಬಾಟಲಿಗೆ ಕದ್ದ ಎಣ್ಣೆ ತುಂಬಿಸಿ, ಬತ್ತಿಯನ್ನೂ ಕದ್ದು ಹೊರಟ. ಪ್ರತೀ ದೀಪವನ್ನ ಹಚ್ಚುವಾಗಲೂ ಕಿಟ್ಟಿ ಕೇಳ್ತಿದ್ದದ್ದು ಒಂದೇ -'ಪೂರ್ಣಿಮಾ ನನ್ನ ಹೆಂಡತಿಯಾಗಬೇಕು. ಪೂರ್ಣಿಮಾ ನನ್ನ ಹೆಂಡತಿಯಾಗಬೇಕು'‌.‌ ಮೈಮರೆತು, ಆವೇಶದಲ್ಲಿ, ಕುರುಡಲ್ಲಿ, ಎಷ್ಟು ದೀಪಕ್ಕೆ ಹಚ್ಚಿದನೋ ತಿಳಿಯಲೇ ಇಲ್ಲ. ನೂರಾ ಎಂಟಂತು ದಾಟಿತ್ತು. 
ಕಿಟ್ಟಿ ಬಹಳ ಆತ್ಮವಿಶ್ವಾಸದಿಂದಲೇ ಇದ್ದ - ಆಕೆಯನ್ನೇ ಆತನ ಹೆಂಡತಿಯಂತ ದೇವರು ನಿಶ್ಚಯಿಸಿದ್ದಾನೆಂದು. ಕುಣಿದ, ಆನಂದಿಸಿದ. ಆಕೆಯ ಮೇಲಿನಪ್ರೀತಿ ಜವಾಬ್ದಾರಿಯಾಗಿ ಬದಲಾದಂತೆ ಭಾಸವಾಯಿತು. ಆಕೆಯನ್ನ ಕೇರ್ ಮಾಡುವುದು ಈತನ ಕರ್ತವ್ಯದಂತಾಯಿತು. ಆತನಿಗೂ ಹೆಮ್ಮೆಯೆನಿಸಿತು. 
ಸಂಜೆ ಎಲ್ಲರೂ ಕ್ರಿಕೇಟ್ ಆಡೋದನ್ನ ನೋಡಲಿಕ್ಕೆ ಪೂರ್ಣಿಮಾ ತನ್ನ ಸ್ನೇಹಿತೆಯರೊಟ್ಟಿಗೆ ಬರ್ತೇನೆಂದು ಹೇಳಿದಾಗ ಕಿಟ್ಟಿ ವೈಟ್ ಅಂಡ್ ವೈಟ್ - ಅಂಗಿ, ಪ್ಯಾಂಟು, ಹ್ಯಾಟು ಮತ್ತು ಶೂಸ್ ಹಾಕಿ ಆಕೆಯನ್ನ ಇನ್ನಷ್ಟು ಇಂಪ್ರೆಸ್ ಮಾಡುವ ಯೋಜನೆಯಲ್ಲಿದ್ದ. ಆಟವನ್ನಲ್ಲ - ತನ್ನನ್ನ ನೋಡಲಿಕ್ಕಾಗಿ ಆಕೆ ಬರ್ತಿರೋದೆಂದು ಬಗೆದ. ತನ್ನ ಹಾಗೆ ಆಕೆಗೂ ತನ್ನನ್ನ ಬಿಟ್ಟಿರಲಿಕ್ಕಾಗೋಲ್ಲವೆಂದು ಕಲ್ಪಿಸಿದ. ಆಟದ ನಡುವೆ, ತನ್ನ ಟೀಮಿನ ಬ್ಯಾಟಿಂಗ್ ಸಮಯ. ಕಿಟ್ಟಿ ಪೂರ್ಣಿಮಾಳ ಪಕ್ಕ ಕುಳಿತಿದ್ದ‌. ಖಾಲೀ ಹರಟುತ್ತಿದ್ದ ಹುಡುಗಿಯರದ್ದು ಊಟದ ವಿಷಯಕ್ಕೆ ತಿರುಗಿತು. ಯಾರಿಗ್ಯಾವ್ಯಾವುದು ಇಷ್ಟವೆಂದು. ಒಬ್ಬೊಬ್ಬರೇ ಹೇಳುತ್ತಾ, 'ಏಡಿಯಪ್ಪಾ. ಏನ್ ರುಚಿ ಅಂತೀಯಾ ಏಡಿ. ಈಗ್ಲೂ ಬಾಯಲ್ಲಿ ನೀರೂರತ್ತೆ' ಎಂದು ಬಂದದ್ದು ಪೂರ್ಣಿಮಾಳ ಬಾಯಿಂದಲೇಯೇ ಎಂದು ಎರಡು ಮೂರು ಬಾರಿ ಕಿಟ್ಟಿ ಪರೀಕ್ಷಿಸಿಕೊಂಡ. ಕನಸೋ ನಿಜವೋ ಎಂದು ಗಿಲ್ಲಿಕೊಂಡು ನೋಡಿದ. ಕುಳಿತಲ್ಲೆ ಕುಸಿದಂತೆ ಭಾಸವಾಗಿ ಹೋಯಿತು ಕಿಟ್ಟಿಗೆ. ಕಿಟ್ಟಿಗೆ ಆಡಲಾಗಲಿಲ್ಲ. 
*****
ಕಿಟ್ಟಿ ಖಿನ್ನನಾಗಲು ಆಕೆ ಬ್ರಾಹ್ಮಣಳಲ್ಲ ಎನ್ನುವ ವಿಚಾರಕ್ಕಿಂತ ಬೇರೆಯದ್ದೇ ಕಾಡುತ್ತಿತ್ತು. ಮುಂದಿನ ಮಹಾಶಿವರಾತ್ರಿಯ ವರೆಗೆ ಕಾದು ಎಣ್ಣೆ ಬತ್ತಿಯನ್ನ ಹಚ್ಚುತ್ತಾ -'ತನಗೆ ಮದುವೆಯೇ ಬೇಡ' ಎಂದು ಹೇಳುವುದನ್ನು ಪದೇ ಪದೇ ಕಲ್ಪಿಸಿಕೊಳ್ಳುತ್ತಿದ್ದ. ಅವನಿಗೆ ಭಯ, ಅಬ್ರಾಹ್ಮಣಳನ್ನ ತನ್ನ ಹೆಂಡತಿಯಾಗಿ ಕಲ್ಪಿಸಿಕೊಳ್ಳಲಿಕ್ಕೆ. ನೋಡಿ - ಕಲ್ಪನೆಗೂ ಸಿಗಬಾರದ ರೀತಿಯಲ್ಲಿ ಕಿಟ್ಟಿಯ ಮನಸ್ಸನ್ನ ಜಾತಿ ಕಟ್ಟಿಹಾಕಿತ್ತು. ಪ್ರೀತಿ, ಮೋಹ ಎಲ್ಲವೂ ಮನುಷ್ಯನನ್ನ ಕಟ್ಟಿಹಾಕುವ ಸಾಧನಗಳು ಎಂಬ ಅರಿವು ಉಂಟಾಯಿತೆ? 'ನೀನು ಕೇವಲ ನನ್ನನ್ನ ಧ್ಯಾನಿಸು' ಎನ್ನುವ ಭಗವದ್ಗೀತೆಯ ಕೃಷ್ಣನ ಮಾತುಗಳಿಗೆ ಅರ್ಜುನನ ಕಿವಿಗಳು ಇವನದ್ದೇ ಆಗಿದ್ದಂತಿದ್ದವು‌. ಓದಿದ, ಓದಿದ ಓದಿಯೇ ಓದಿದ. ಪ್ರೀತಿ, ಕರುಣೆ, ಮಮಕಾರ ಎಲ್ಲಾ ಬಂಧಗಳಿಂದ ಮುಕ್ತಿ ಪಡೆಯುವುದೇ ಒಂದು ರೀತಿಯ ಮೋಕ್ಷ ಎಂದೇನೋ ತನಗೆ ತೋಚಿದಂತೆ ಅರ್ಥೈಸಿಕೊಂಡ. ಹುಡುಗಿಯರನ್ನ ಮಾತನಾಡುವುದನ್ನ ನಿಲ್ಲಿಸಿದ. ಪೂರ್ಣಿಮಾ ಇವನನ್ನ ಕರೆದರೂ, ಇವನನ್ನ ಕೈ ಹಿಡಿದು ನಿಲ್ಲಿಸಿದರೂ ಜಗ್ಗಲಿಲ್ಲ. 
****
'ಅನನ್ಯ ಭಟ್' ಮೇಷ್ಟರು ಅಟೆಂಡೆನ್ಸ್ ಕೂಗಿದರು. ಒಂದು ವರ್ಷದ ತರುವಾಯ ತಲೆಯೆತ್ತಿ ಕಿಟ್ಟಿ ನೋಡಿದ ಮೊದಲ ಹುಡುಗಿ. ಯಾವುದೋ ಭಟ್ಟನ ಮಗಳೆಂದು ಖಾತ್ರಿಯಾದ ಮೇಲೆ, ಕೃಷ್ಣನ ಮಾತುಗಳೆಲ್ಲಾ ಹಿಮಕರಗಿ  ಹರಿದಂತೆ ಇವನ ಮನಸ್ಸಿಂದ ಹರಿದು ಹೋಗಿ, ಅವೆಲ್ಲಾ ಮತ್ತೆ ಪ್ರೀತಿಯ ಚಿಲುಮೆಯಾಗಿ ಮನಸ್ಸಲ್ಲಿ ಉಕ್ಕಲಾರಂಭಿಸಿದ್ದವು‌. ಕಿಟ್ಟಿಗೆ ಬೆಳ್ಳಗಿನ, ಗುಂಡು ಮುಖದ ಹುಡುಗಿಯನ್ನ ಪ್ರೀತಿಸಲೇ ಬೇಕೆನ್ನುವ ಆಸೆ ಚಿಗುರೊಡೆಯಿತು. ಶಿವರಾತ್ರಿ ಇನ್ನೇನು ಹತ್ತಿರದಲ್ಲೇ ಇತ್ತು. 

No comments:

Post a Comment