Sunday, April 21, 2024

ದ್ವಾರಬಂಧ

 

ಸುಮಾರು ಹತ್ತು ವರ್ಷಗಳ ಕೆಳಗೆ ಯೂನಿವರ್ಸಿಟಿಗೆ ಈಗಿನ ರೀತಿಯ ದ್ವಾರಬಂಧಗಳಾಗಲೀ, ಭದ್ರತೆಯಾಗಲೀ ಇರಲಿಲ್ಲ. ಯೂನಿವರ್ಸಿಟಿಯ ಒಳಗಿನ ಡಬಲ್ ರೋಡಿನಲ್ಲಿ - ಆಗಿನ್ನೂ ಈಗಿನ ರೀತಿ ಮಧ್ಯ ಒಂದು ಡಿವೈಡರ್ ಸಹ ಇರಲಿಲ್ಲ- ಬಸ್ಸುಗಳೇ ಓಡಿಯಾಡ್ತಿದ್ವು. ಹಾಗಾಗಿ ಈಗಲೂ ಯೂನಿವರ್ಸಿಟಿಯ ಒಳಗೆ ಕೆಲವು ಕಡೆ ಬಸ್ ಸ್ಟಾಪುಗಳನ್ನ ಕಾಣಬೋದು. ರಾತ್ರಿ ಯಾವ ಸಮಯದಲ್ಲಿ ಬೇಕಾದರೂ ಯೂನಿವರ್ಟಿಯ ಒಳಗೆ ಬರಲಿಕ್ಕೆ ಅಥವಾ ಹೊರಗೆ ಹೋಗಲಿಕ್ಕೆ ಹತ್ತಾರು ದಾರಿಗಳಿದ್ವು. ಆ ದಾರಿಗಳ ಇಕ್ಕೆಲಗಳಲೆಲ್ಲಾ ಮರ ಗಿಡ ಗೆಂಟೆಗಳೇ. ಸದಾನಂದ ಎರಡನೇ ವರ್ಷದ ಎಂ.ಎಸ್ಸಿಗೆ ಬರುವ ವೇಳೆಗೆ ದ್ವಾರಬಂಧಗಳ ನಿರ್ಮಾಣ ಆರಂಭವಾಗಿ, ಎಂ.ಎಸ್ಸಿ ಮುಗಿಯುವ ವೇಳೆಗೆ ಸಂಪೂರ್ಣಗೊಂಡಿತು. ಬಸ್ಸುಗಳೂ, ಯೂನಿವರ್ಸಿಟಿಗೆ ಸಂಬಂಧ ಪಡದ ವಾಹನಗಳೂ ಎಲ್ಲದರ ಎಂಟ್ರಿ ಬಂದಾಯಿತು.  ಯಾರೆಂದರಾಗಲೀ ಸಂಜೆ ಕತ್ತಲಿನ ಮೇಲೆ ಒಳಗೆ ನುಗ್ಗಲು ಸಾಧ್ಯವೇ ಇಲ್ಲ. ಗೇಟಿನಲ್ಲಿ ವಾಚ್ ಮೆನ್ ಗಳಿಗೆ ಕಾರಣ ನೀಡಬೇಕು. ಹಾಸ್ಟಲ್ ಹುಡುಗಿಯರಂತೂ ಸಂಜೆ ಏಳರ ಮೇಲೆ ಹಾಸ್ಟಲಿನಿಂದಲೇ ಹೊರಗೆ ಅನುಮತಿಯಿಲ್ಲದೇ ಕಾಲಿಡಲಾಗುತ್ತಿರಲಿಲ್ಲವಾದ್ದರಿಂದ, ಸಂಜೆ ಏಳು‌‌ಗಂಟೆಯ ಮೇಲೆ ಹುಡುಗಿಯರು ಯೂನಿವರ್ಸಿಟಿಯ ಒಳಗೆ ಹೋಗೋದು ಅಪರೂಪವೇ. ಗಂಡು,‌ಹೆಣ್ಣು ಒಟ್ಟೊಟ್ಟಿಗೆಯೇ ಸಂಜೆ ಏಳರ ಮೇಲೆ ಯೂನಿವರ್ಸಿಟಿಯ ಒಳಗೆ ಹೋಗೋದು ಅಥವಾ ಒಳಗಿನ ಹಾದಿಗಳಲ್ಲಿ ಅಡ್ಡಾಡೋದು  ಮುಜುಗರದ ಸಂಗತಿಯೆಷ್ಟೋ, ಅಷ್ಟೇ ಪ್ರಶ್ನಾರ್ಹ ಸಂಗತಿಯೂ. ಹಿಂದೆ ಯಾವುದೇ ನಿರ್ಬಂಧವಿರದ ಸಮಯದಲ್ಲಿ ರಾತ್ರಿ ಹನ್ನೆರೆಡು ಗಂಟೆಗೆ, ಒಂದು ಗಂಟೆಗೇ ಸದಾನಂದ ಸ್ನೇಹಿತರೊಟ್ಟಿಗೆ ತನ್ನ ಡಿಪಾರ್ಟಮೆಂಟಿನ ಮುಂದೆ ಕೂತು ಹರಟುತ್ತಿದ್ದ. ಕತ್ತಲ ಹಾದಿಯ ಬದಿಯಲ್ಲಿಯ ಮರಗಳ ಹಿಂದಿನ ಅನುಭವಗಳನ್ನು ಸ್ನೇಹಿತ ವರ್ಣಿಸುವಾಗ ಒಳಗೊಳಗೇ ಹೊಟ್ಟೆಕಿಚ್ಚು ಎಲ್ಲರಿಗೂ - ತಮ್ಮಲ್ಲಿಲ್ಲವಾದ್ದು, ಅವನಲ್ಲಿರೋದು ಏನು ಎಂದು. ಒಡನೆಯೇ 'ಛೇ..ಛೇ.. ಅದೆಲ್ಲಾ ತಪ್ಪು ಮಾರಾಯ. ವಿದ್ಯೆ ಕಲಿಯೋ ಜಾಗದಲ್ಲಿ ಹಾಗೆಲ್ಲಾ.. ಥೂ....' ಎಂದು ತಮ್ಮನ್ನ ತಾವು ಸಮಾಧಾನಪಡಿಕೊಂಡರೂ, ಸ್ನೇಹಿತನ ವರ್ಣನೆ ಅಬಚೂರಿನ ಬೋಬಣ್ಣನಿಗಾದ್ದಂತೆ ಇವರ ಮನಸ್ಸನ್ನೂ ಕಲುಕುತ್ತಿತ್ತು. ಆದರೆ ಎಂದಿಗೂ ಸದಾನಂದ ಆ ರೀತಿಯ ಧೈರ್ಯವನ್ನು ತೋರಲಿಲ್ಲ - ಅದು 'ತಪ್ಪೆ'ನ್ನುವ ಭಾವವೊಂದು ಕಡೆ. ಇನ್ನೊಂದು - ಆತ ಅದಕ್ಕಾಗಿ ಯಾವುದೇ ಪ್ರಯತ್ನವನ್ನ ಮಾಡುವಲ್ಲಿ ಅಶಕ್ತನಾದ್ದರಿಂದ. ಸದಾನಂದನಿಗಿದ್ದ 'ತಾನೇಕೆ ಇನ್ನೊಬ್ಬಾಕೆಯ ಕಾಲಿಗೆ ಬೀಳಬೇಕು.  ಬೇಕಿದ್ದರೆ ಹುಡುಗೀರೆ ನನಗೆ ಬೀಳ್ತಾರೆ' ಎನ್ನೋ ಅಹಮ್ಮೆ ಅವನ ಆ ವಯಸ್ಸಿನ  ದುರ್ಬಲತೆ ಎನ್ನೋದು ಅವನ ಅರಿವಿಗೆ ಬಂದಿರಲಿಲ್ಲ. 

ಬೇಲಿಯೇ ಎದ್ದು ಹೊಲ ಮೇಯುವ ಸ್ಥಿತಿ ಎನ್ನುವುದು ತಾನು ಓದಿದ ಯೂನಿವರ್ಸಿಟಿಯಲ್ಲೇ ಕೆಲಸ ಗಿಟ್ಟಿಸಿಕೊಂಡ ಸದಾನಂದನಿಗೆ ನಿಧಾನವಾಗಿ ಅರಿವಾಗುತ್ತಾ ಹೋಗತೊಡಗಿತು. ಯೂನಿವರ್ಸಿಟಿಯ ದ್ವಾರಬಂಧಗಳು ಹೊರಗಿನಿಂದ ಒಳಗೆ ಅನಾಚಾರಗಳು ಬರದಿರಲೆಂದೋ ಅಥವಾ ಒಳಗಿನ ಅನಾಚಾರಗಳು ಹೊರಗೆ ಹೋಗದಿರಲೆಂದೋ ಎನ್ನುವ ಗೊಂದಲ ಬೀಡುಬಿಟ್ಟುಬಿಟ್ಟಿತು. ಅದಾಗಲೇ ಹತ್ತು ವರ್ಷಗಳು ಕಳೆದು ಹೋಗಿದ್ದವು - ವಿದ್ಯಾರ್ಥಿ ಜೀವನವನ್ನ ದಾಟಿ. 'ಸರಿ' 'ತಪ್ಪು' ಗಳ‌ ವ್ಯಾಖ್ಯೆಗಳು, ಅವುಗಳೆಡೆಗಿನ ಕಲ್ಪನೆಗಳು ಬಹು ದೊಡ್ಡ ಅಗಾಧತೆಯಲ್ಲಿ ಬದಲಾಗಿದ್ದವು. ಇಷ್ಟಿದ್ದರೂ ಅಂದು ಸದಾನಂದ ಸ್ನೇಹಿತನಿಗೆ 'ತಪ್ಪು' ಎಂದ ವಿಚಾರದಲ್ಲಿ ಇಂದೂ ಅದೇ ನಿಲುವನ್ನ ತಳೆದಿದ್ದ. ಅದೊಂದು ಮಾತ್ರ ಆತನ ಕೈಲಿ ಈಗಲೂ ಬದಲಾಯಿಸಿಕೊಳ್ಳು ಸಾಧ್ಯವಿರಲಿಲ್ಲ. 

ಈಗ ಒಂದಷ್ಟು ಸಹೋದ್ಯೋಗಿ ಸ್ನೇಹಿತರಾಗಿದ್ದರು. ಅದರಲ್ಲಿ ಸ್ವಲ್ಪ ಆಪ್ತ - ಮಂಚೇ ಗೌಡ. ಆಪ್ತನೆಂದರೆ ಸದಾನಂದನ ಆಲೋಚನಾ ಲಹರಿಗೆ ಹೊಂದಿಕೊಳ್ತಿದ್ದ ಅಂತಲ್ಲ. ಮಂಚೇ ಗೌಡನಲ್ಲಿ ಯಾವುದೇ ತತ್ವಕ್ಕಾಗಲೀ, ಆಧ್ಯಾತ್ಮಕ್ಕಾಗಲೀ ಜಾಗವಿರಲಿಲ್ಲ. 'ಅವೆಲ್ಲಾ ಬರೇ ಕೈಲಾಗದೋರು ಇಲ್ಲ ಮಾಡಿಕ್ಕೆ ಕೆಲ್ಸ ಇಲ್ದೇ ಇರೂರು ಆಡಾದು ಸಾರ್' ಅಂತ ಆಗಾಗ್ಗೆ ಬೈದುಕೊಳ್ತಿದ್ದ. 'ಇವತ್ತಿಗೇನ್ ಬೇಕು ಬದ್ಕಾಕೆ? ನಾಳೆಗೆ ಮಕ್ಳು ಮರೀಗೆ ಏನ್ ಬೇಕು ಬದ್ಕಾಕೆ ಅಂತಷ್ಟೇ ನಾ ಯೋಚಿಸೂದು ಸರ್. ಈಗ ನೋಡಿ, ಅದೇ ನಮ್ಮ natural instinct  ಅಲ್ವೆ, ನಮ್ಮನ್ನ ನಾವು ರಕ್ಷಿಸಿಕೊಳ್ತಾ, ಪ್ರಸರಿಸಿಕೊಳ್ತಾ ಹೋಗೂದು? ಅದೆಲ್ಲಾ ತಪ್ಪು ಅಂತ ಅದ್ಕೆ ವಿರುದ್ಧವಾಗಿ ನಾವು ಸಾಕಷ್ಟು ಮೌಲ್ಯಗಳನ್ನ ಹಾಕಾಂಬಿಟ್ಟಿದೀವಿ. ನೋಡಿ, ಈ ಮೌಲ್ಯಗಳಿಗೆ ಅನುಗುಣವಾಗಿ ನಡೆಯೋದು ಬಾಳ ಕಷ್ಟ ಸಾರ್. ಯಾಕಂದ್ರೆ ಅದು unnatural ಅಲ್ವೆ. ಸಾವಿರಾರು ವರ್ಷಗಳಿಂದ ನಮ್ಮನ್ನ ಆಳಿರೋ, ನಮ್ಮೊಳಗೇ ಹರಿದು ಬಂದಿರೋ natural instinct ನ ಮುಂದೆ ಈಗ ಈಚೀಚೆಗೆ ನಾವು ಹುಟ್ಟಕೊಂಡಿರೋ ಈ unnatural ವಿಚಾರಗಳು ಬಾಳ ಕಷ್ಟವಲ್ಲವೇ? ಹಾಗಾಗಿ ನೋಡಿ ನಾ ಒಳ್ಳೇನೂಂತಲೋ, ಮಹಾತ್ಮನೂಂತಲೋ ಫೇಮಸ್  ಆಗದೇ ಹೋದ್ರೂ ಚಿಂತೆಯಿಲ್ಲ. ನಂಗೆ ಯಾವ ಬೇಸರವೂ ಇಲ್ಲ' ಅಂತ ಹೇಳೋವಾಗ ಸದಾನಂದ ಮೆಚ್ಚಿಹೋದ. ಆತ ಎಂಥದ್ದೇ ಮಾತಾಡಿರಲಿ, ತನನ್ನ ತಾನು ನೈಜವಾಗಿ ತೆರೆದಿಟ್ಕೊಳೋ ಗುಣ, ಅದಕ್ಕೆ ನೀಡಿದ ತರ್ಕಕ್ಕೆ ಸದಾನಂದ ಮಾರುಹೋದ. ಯೂನಿವರ್ಸಿಟಿಯ ಭಾಗಶಃ ವಿಚಾರಗಳು ಸದಾನಂದನನ್ನ ತಲುಪ್ತಾ ಇದ್ದದ್ದು ಮಂಚೇಗೌಡನಿಂದಲೇ. ಸಂಜೆ ಕಾಫಿಗೆ ಹೋದಾಗಲೋ ಅಥವಾ ರಾತ್ರಿ ಊಟಕ್ಕೆ ಸೇರಿದಾಗಲೋ ಗೌಡ ಎಲ್ಲವನ್ನೂ ರಸವತ್ತಾಗಿ ಬಿಡಿಸಿ ಬಿಡಿಸಿ ಇಡುತ್ತಿದ್ದ. 


*****

ತತ್ವಶಾಸ್ತ್ರದ ಅಸೋಸಿಯೇಟ್ ಪ್ರೊಫೇಸರಾದ ರಾಜಾರಾಮಣ್ಣನ ಕುರಿತಾದ ಸುದ್ದಿ ಗಾಳಿಯಂತೆ ಇಡೀ ಯೂನಿವರ್ಸಿಟಿಯನ್ನ‌ ಪಸರಿಸಿಬಿಟ್ಟಿತು. ಆದರೆ ಯಾರೂ ಸಹ ಇದನ್ನ ಓಪೆನ್ ಆಗಿ ಮಾತಾಡೋರಿರಲಿಲ್ಲ. ಇದು ಯೂನಿವರ್ಸಿಟಿಯ ಸಹಜ ಗುಣ - ಎಂಥದೇ ಸುದ್ದಿ ಇದ್ದರೂ ತಮ್ಮ ಆಪ್ತರ ಹೊರತಾಗಿ ಮಿಕ್ಕವರೊಟ್ಟೊಗೆ ಚರ್ಚಿಸುತ್ತಿರಲಿಲ್ಲ. ಅಂದು ಸಂಜೆ ಕಾಫಿಗೆ ಹೋದ ವೇಳೆ ಮಂಚೇ ಗೌಡ ಕಥೆಯ ತನ್ನ ಆವೃತ್ತಿಯನ್ನ ತಾನೇ ಕಣ್ಣಾರೆ ಕಂಡ ಹಾಗೆ ಹೇಳಿದಾಗ ಸದಾನಂದನಿಗೆ ತಲೆದೂಗದೇ ವಿಧಿಯಿರಲಿಲ್ಲ. ಸುದ್ದಿಗಳೇ ಹಾಗೇ - ಒಮ್ಮೆ ವಿಶೇಷವಾದ ಸುದ್ದಿ ಒಬ್ಬನಿಗೆ ದೊರೆಯಿತೆಂದುಕೊಳ್ಳಿ, ತನಗೆ ದೊರೆತದ್ದೇ ಸತ್ಯ ಎನ್ನುವ ರೀತಿಯಲ್ಲಿ ಇನ್ನಾಲ್ಕು ಜನರಿಗೆ ಅದನ್ನ ಕಥೆಕಟ್ಟೋ ಅಹಂಕಾರದಲ್ಲಿ ಸಿಗೋ ಸುಖವನ್ನ ಆತ ಕಳೆದುಕೊಳ್ಳಲಿಚ್ಛಿಸಲಾರ.  ಈ ರೀತಿಯ ಹಲವಾರು ಸುದ್ದಿಗಳು ಅದಾಗಲೇ ಅಲ್ಲಲ್ಲೇ ಗಾಳಿಯಲ್ಲಿ ತೇಲ್ತಿದ್ದವು. ಜೊತೆಗೆ ಆ ರೀತಿ ಸುದ್ದಿಯ ಕೇಂದ್ರ ಬಿಂದು ಎದುರಿಗೆ ಬಂದಾಗ ಯಾರೂ ಏನೂ ಸಹ ಕೇಳ್ತಿರಲಿಲ್ಲ , ಬದಲಾಗಿ ಆತ ಎಂಥದ್ದೆ ಅವಾಂತರ ಸೃಷ್ಟಿಸಿದ್ದರೂ ಒಂದು‌ ನಮಸ್ಕಾರ ಹೇಳಿ ಜಾರಿಕೊಳ್ತಿದ್ದರು. ಆತನೂ ಏನೂ ನಡೆದಿಲ್ಲವೆನ್ನುವ ರೀತ್ಯ ತಲೆ ಎತ್ತುಕೊಂಡೇ ಓಡಾಡ್ತಿದ್ದ. ಅಲ್ವೆ? ಒಬ್ಬನ್ನ ಹಿಂದಿನಿಂದ ಎಷ್ಟೇ ಬೈದುಕೊಳ್ಳಬೋದು, ಅದು ಅವನಿಗೆ ತಿಳೀಲುಬೋದು. ಆದರೆ ಆತನಿಗೆ ಅಷ್ಟೇನು ಚಿಂತೆಯಿಲ್ಲ. ಅದೇ ನಾಲ್ಕು ಜನರ ಸಮ್ಮುಖದಲ್ಲಿ ಅವನನ್ನಿರಿಸಿ ಬೈದರೆ, ಆಗಷ್ಟೇ ಅವನ ಮಾನಾಪಹರಣವಾದಂತೆ. ಅಲ್ಲೀವರೆಗೆ ಡೋಡೋ ಹಕ್ಕಿಯ ಹಾಗೆ ತಾನಿನ್ನು ಸಾಚಾ.

ಆ ಸಂಜೆ ಕಾಫಿ ಕುಡೀತಾ 'ಆ ರೀತಿ ನನ್ನ ಕೈಲಂತೂ ಇರಲಿಕ್ಕೆ ಸಾಧ್ಯವೇ ಇಲ್ಲ' ಸದಾನಂದ ಹೇಳಿದಾಗ ಮಂಚೇಗೌಡನೆಂದ 'ಹೌದ್ ಸಾ.. ಅದ್ಕೆ ಧೈರ್ಯ ಬೇಕು. ಮಾನ, ಮರ್ವಾದೆ, ನಾಚಿಕೆಯೆಲ್ಲಾನೂವೆ ಬಿಚ್ಚಿ ಬೆತ್ತಲು ನಿಲ್ಲಿಕ್ಕೆ ಧೈರ್ಯ ಬೇಕು. ನೀವು ಅಶಕ್ತರು ಬಿಡಿ‌ ಸಾ..' ಎಂದು‌ ನಕ್ಕಿದ್ದ. ಸದಾನಂದನೂ ನಕ್ಕಿದ್ದ. 

'ಬೆತ್ತಲು' ಅಂದ‌ ತಕ್ಷಣ ಸದಾನಂದನ ಆಲೋಚನೆಯೆಲ್ಲಾ ಬೇರೆ ಕಡೆಬಂದುಬಿಡುತ್ತದೆ‌ . ಹಿಂದೊಮ್ಮೆ ಯಾರೊಟ್ಟಿಗೆಯೋ ಮಾತನಾಡುವಾಗ ಬಂದ ಮಾತುಗಳವು. ಅದು  ಸದಾನಂದನನ್ನ ಎಂದಿಗೂ ಕಾಡ್ತಿರ್ತವೆ. ಆತನ ನಂಬಿಕೆಗಳನ್ನ, ಮೌಲ್ಯವ್ಯವಸ್ಥೆಯನ್ನ ಹೀಗಳೆಯುತ್ತಿರ್ತವೆ. 'ನೋಡಿ ನಾವು ಹೆಚ್ಚು ಯಾವುದನ್ನ ಮುಚ್ಚಿ ಇಡ್ತೇವೋ, ಹೆಚ್ಚು ಯಾವುದನ್ನ ಮಡಿ‌ ಮಾಡ್ತೇವೋ, ಯಾವುದನ್ನ ಹೆಚ್ಚು ಪವಿತ್ರ ಮಾಡ್ತೇವೋ, ಮನುಷ್ಯನಿಗೆ ಅವುಗಳ ವಿಷಯದಲ್ಲಿ ಹೆಚ್ಚು ಕುತೂಹಲ ಏಳ್ತಾ ಹೋಗ್ತದೆ. ಹಾಗಾಗಿ ಎಂದಿಗೂ ಮುಚ್ಚಿಯೇ ಇಡುವ ಹೆಣ್ಣಿನ‌ ದೇಹದ ಮೇಲೆ ಎಲ್ಲಿಲ್ಲದ ಆಸಕ್ತಿ..' 
ಸದಾನಂದ ಅಲ್ಲಿಗೆ ತಡೆದು ಮರು ಪ್ರಶ್ನಿಸಿದ್ದ - 'ಹಾಗಿದ್ದರೆ ಬೆತ್ತಲು ಬೆತ್ತಲು ಓಡಾಡ್ತಿದ್ದರೆ ನಮಗೆ ಹೆಣ್ಣಿನ ದೇಹ ಆಕರ್ಷಿಸೋದೇ ಇಲ್ಲ ಅಂತೀರೇನು?' 
'ನಾ‌ ಆಕರ್ಷಿಸೋದಿಲ್ಲ ಅಂತ ಹೇಳ್ತಿಲ್ಲ. ಅದರ ಮೇಲಿನ‌ ಕುತೂಹಲ ಇರೋದಿಲ್ಲ. ಹಾಗೆಯೇ ಇಚ್ಛೆಯ ಮೇರೆಗೆ ನಡೆಯೋ ಕಾಮ'.
ಸದಾನಂದನಿಗೆ ಮರು ಉತ್ತರ ಹೇಳೋದು ಸಾಧ್ಯವಿರಲಿಲ್ಲ. ಏನಂತ ಹೇಳೂದು? ನೀವು ಹೇಳ್ತಿರೋದು ಒಪ್ಪೋಕ್ಕಾಗಲ್ಲ ಅಂತಷ್ಟೇ ಹೇಳಬೋದೆ ವಿನಾ, ಮತ್ತೆ ಅದರ ಮೇಲಿನ ವಾದಕ್ಕೆ ದಾರಿಯಿಲ್ಲದಂತಾಯಿತು. ಆದರೆ, ಹಿಂದೆ ಸ್ಕೂಲು ಓದುವಾಗ ಆತ ದಿನಾ ದೇವರಲ್ಲಿ‌ ಬೇಡಿಕೊಳ್ತಾ ಇದ್ದದ್ದು ಅದೇಕೋ ನೆನಪಿಗೆ ಬಂದುಬಿಡ್ತು. ಪ್ರತೀ ದಿವಸವೂ ಸದಾನಂದ ತಪ್ಪದೇ ಒಂದನ್ನಂತೂ ಬೇಡುತ್ತಿದ್ದ 'ನನ್ನನ್ನ ಅತಿಯಾಗಿ ಪ್ರೀತಿಸುವ ಹೆಣ್ಣು ಕೈ ಹಿಡಿಯಲಿ'. ಆತ ಎಂಥಾ ಹಿಪೊಕ್ರೈಟ್ ಎಂದು ಆತನಿಗೇ ಗೊತ್ತು. ಇಲ್ಲಿ 'ಪ್ರೀತಿ' ಎನ್ನುವುದು ಸೋಗೆಯ ಪದ. ಅವನ ಲೆಕ್ಕದಲ್ಲಿ 'ಪ್ರೀತಿ' ಎಂದರೆ ಚುಂಬಿಸಿ ಮುದ್ದು ಮಾಡೋದು ಎಂದು (ಅದರಾಚೆಗಿನದ್ದಿನ್ನೂ ಆತನಿಗೆ ಅರಿವಿರಲಿಲ್ಲ). ಅವೆಲ್ಲಾ ಸಿನೆಮಾಗಳ ಪ್ರಭಾವ. ಆದರೆ ದೇವರ ಮುಂದೆ ಚುಂಬನ ಆಲಿಂಗನವೆಂದೆಲ್ಲಾ ಮಾತನಾಡೋದೆ? ತಪ್ಪಲ್ಲವೇ ಅಂತ ಆತನಿಗೆ ಭಯವಾಗಿ ಅದಕ್ಕೆ 'ಪ್ರೀತಿ' ಅನ್ನೋ ಪದವನ್ನ ರೀಪ್ಲೇಸ್ ಮಾಡಿಬಿಟ್ಟ. 

*****

ದಿನಗಳೆದವು. ಎಲ್ಲವೂ ಮಾಸಿತು. ರಾಜಾರಾಮಣ್ಣ ತನ್ನಪಾಡಿಗೆ ಏನೂ ಆಗದವರಂತೆ ಎಲ್ಲರ ಮುಂದೆ ನಕ್ಕೊಂಡು, ಕೈ ಕುಲುಕಿ, ಕಾನ್ಫರೆನ್ಸುಗಳನ್ನ ಅಟೆಂಡು ಮಾಡಿಕೊಂಡು, ಕೆಲವು ಸೆಮಿನಾರ್ಗಳನ್ನು ನೀಡಿ ತಲೆಯೆತ್ತೇ, ಎನ್ನೂ ಮೇಲಕ್ಕೆತ್ತುಕೊಂಡೇ ಹೋದರು. ಅವರ ತಪ್ಪೇ ಇಲ್ಲವೇ ಎಂದು ದೂರದವರಿಗೆಲ್ಲಾ ಅನುಮಾನ ಬರುವ ರೀತಿಯೇ ಅವರ ಜೀವನ ಮೊದಲಿನಂತೆ ನಡೆಯುತ್ತಿತ್ತು. ಆದರೆ ಸದಾನಂದನಿಗೆ ಬಗೆಹರಿಯಲಾರದ ಒಂದು ಗೊಂದಲ/ಕುತೂಹಲವಿತ್ತು. ಅದು ಕೇವಲ‌ ರಾಮಣ್ಣರಿಂದಲಷ್ಟೇ ಅಥವಾ ಆ ಹುಡುಗುಯಿಂದ ಬಗೆಹರಿಯೋ ಅಂಥದ್ದು. ಎಷ್ಟೋ ಬಾರಿ ಇಬ್ಬರನ್ನೂ ಮಾತಾಡಿಸಬೇಕಂದುಕೊಂಡ. ಆದರೆ ಸಂಕೋಚ - 'ಯಾಕೆ? ನಿಮಗ್ಯಾಕೆ ಅದೆಲ್ಲಾ?' ಅಂದು ಬಿಟ್ರೆ. ಅಥವಾ 'ನೀನ್ಯಾರಯ್ಯ ಇದ್ನೆಲ್ಲಾ ಕೇಳಾಕ್ಕೆ'  ಎಂದುಬಿಟ್ರೆ. ಅಂಥಾ ಮಂಚೇಗೌಡನಿಗೇ ಸಾಧ್ಯವಾಗದ್ದು, ತನಗೇ ಹೇಗೆ ಸಾಧ್ಯವಾದೀತು? 

ಒಂದು ದಿನ ಯೂನಿವರ್ಸಿಟಿಯ ಅಡ್ಮಿನಿಸ್ಟ್ರೇಟೀವ್ ಬಿಲ್ಡಿಂಗಿನಲ್ಲಿದ್ದ ಮೀಟಿಂಗಿಗೆ ಸದಾನಂದ ಹಾಜರಿದ್ದ. ಅಲ್ಲಿ‌ ರಾಮಣ್ಣನೂ ಕಂಡ. ಕಾರಿಡಾರಿನಲ್ಲಿ‌ ಸದಾನಂದ ಒಬ್ಬನೇ ಗೋಡೆಗೆ ಒರಗಿ‌ನಿಂತಿದ್ದಾಗ ಅತ್ತ ಎದುರು ಬದಿಯಿಂದ ಒಂದಿಬ್ಬರು ಸಂಗಡಿಗರೊಂದಿಗೆ ರಾಮಣ್ಣ ನಡೆದು ಬರ್ತಿದ್ದ. ಸದಾನಂದ ಏಕೋ ಸೊಟ್ಟಗೆ ಒರಗಿ ನಿಂತೋನು, ಇದ್ದಕ್ಕಿದ್ದ ಹಾಗೆ ನೇರ ನಿಂತು ಗೋಡೆಯಿಂದ ಮುಂಬಂದ. ಅದು ಗೌರವ ಸೂಚಕವೇ? ಅದರ ಅವಶ್ಯವೇನಿತ್ತು? ಅದೆಲ್ಲಾ ಅವನ ತಲೆಗೆ ಬರದಿದ್ದರೂ, ರಾಮಣ್ಣನನ್ನ ನೋಡಿದ ಮೇಲೆ ತನ್ನಲ್ಲಿದ್ದ ಕುತೂಹಲದ ಬುಗ್ಗೆ ಮತ್ತೆ ಒಡೆಯಿತು. 'ಮೀಟಿಂಗ್ ಆರಂಭವಾಗಲಿಕ್ಕೆ ಇನ್ನೂ ಸಮಯವಿದೆ. ರಾಮಣ್ಣನನ್ನ ದೂರಕ್ಕೆ ಕರೆಯಲೆ? ಕ್ಯಾಂಟಿನ ಕಾಫಿಗೆ? ಆದರೆ ನಾನ್ಯಾರು ಆತನಿಗೆ ಕರೆದ ಕೂಡಲೇ ಬರಲಿಕ್ಕೆ. ಮೋರ್ ಓವರ್ ಬಂದರೂ ಅದನ್ನೆಲ್ಲಾ ಮಾತಾಡಿಯಾನೆ? ಬೈದು ಉಪ್ಪಿನಕಾಯಿ ಹಾಕಿದ್ರೆ? ಅರ್ರೇ, ಅಂತಾ ಹಲ್ಕಟ್ ನನ್ಮಗ ಬೈದ್ರೆ ನಂಗೇನೂ ತಾಕೂದಿಲ್ಲ ಬಿಡು. ನಂಗೆ ಬೇಕಾದ್ದು ವಿಚಾರವಷ್ಟೆ' ಅಂದುಕೊಳ್ತಾ ರಾಮಣ್ಣ ಹತ್ತಿರ ಬರ್ತಿದ್ದ ಹಾಗೆಯೇ ಕಿಸಿ ಕಿಸಿ ನಕ್ಕು 'ನಮಸ್ಕಾರ' ಎಂದ. ರಾಮಣ್ಣ ಕೈ ಎತ್ತಿ, ಹಸ್ತ ತೋರಿಸಿ, ತಲೆಯಾಡಿಸಿ ಸಂಗಡಿಗರೊಂದಿಗೆ ಹೊರಟು ಹೋದ. ಬಿಳೀ ಪ್ಯಾಂಟು ಕೋಟು, ನೀಲಿ ಟೈ. ಕಣ್ಣಿಗೊಂದು ಕನ್ನಡಕ. ಕೈಲಿ ಎದ್ದು ಹೊಳೆಯೋ ಗೋಲ್ಡೆನ್ ವಾಚು, ರೋಲೆಕ್ಸ್ ದೆ ಇದ್ದಿರಬೇಕು. ಕಾಲಿಗೆ ಕಪ್ಪು ಶೂ. ನೋಡಲಿಕ್ಕೆ ಅಂತೇನೂ ರೂಪವಂತನೇನೂ ಅಲ್ಲ. ಆದರೆ ಗತ್ತಿಗೇನು ಕಡಿಮೆಯಿಲ್ಲ. ಮುಂದೊಂದು ದಿನ, ಯೂನಿವರ್ಸಿಟಿಯ ವೈಸ್ ಚಾನ್ಸೆಲರ್ ಆದರೂ ಆದಾನು ಎಂಬ ಗಾಳಿ ಮಾತುಗಳು. ನಲವತ್ತಾದರೂ ಫಿಟ್ ಬಾಡಿ - ದಿನಾಲೂ ಬೆಳಿಗ್ಗೆ ಎದ್ದು ಬ್ಯಾಡ್ಮಿಂಟನ್ ಆಡುತ್ತಾನಂತೆ. ಒಳ್ಳೇ ಆಟಗಾರನೆಂದೂ ಕೇಳಿದ್ದೂ ಉಂಟು. 'ಒಂದು ಬೆಳಿಗ್ಗೆ - ಭಾನುವಾರವೇ ಅಂದುಕೊಳ್ಳೋಣ ಯಥೇಚ್ಛವಾದ ಸಮಯ ದೊರೀತದಲ್ಲ- ಬ್ಯಾಡ್ಮಿಂಟನ್ ಕೋರ್ಟಿಗೆಯೇ ಹೋಗಬೇಕು. ಅಲ್ಯಾವ ಅಫಿಶಿಯಲ್ ಬಿಹೇವಿಯರ್ ತೋರಿಸೋದಿಲ್ಲವಲ್ಲ. ಹೆಚ್ಚು ವೈಯಕ್ತಿಕ ಮಾತನಾಡ್ಲಿಕ್ಕೆ, ಆತನನ್ನ ಅಬ್ಸರ್ವ್ ಮಾಡಲಿಕ್ಕೆ ಸಮಯ ಸಿಗ್ತದೆ. ನಾನೂ ಏಕೆ ಸೇರಿಕೊಳ್ಬಾರ್ದು?' ಸದಾನಂದ ಅಂದುಕೊಂಡ.‌ ಸದಾನಂದನೂ ಸುಮಾರು ವರ್ಷಗಳ ಹಿಂದೆ ಕ್ಯಾಂಪಾಸಿನ ಹೊರ ಕೋರ್ಟುಗಳಲ್ಲೆ ಬ್ಯಾಡ್ಮಿಂಟನ್ನ ಆಡ್ತಿದ್ದದ್ದುಂಟು. ಆತ ಇಷ್ಟಪಟ್ಟು ಆಡ್ತಿದ್ದ ಒಂದೇ ಆಟ. 

*******

ಸದಾನಂದ ಅಷ್ಟೇನೂ ಗಂಭೀರವಾಗಿ ತನ್ನ ಕುತೂಹಲದ ಹಿಂದೆ ಬೀಳಲಿಲ್ಲ. ಅದು ಕೇವಲ ಕುತೂಹಲ ಅಷ್ಟೆ! 'ಇದು ಎಲ್ಲಿಂದ ಹೇಗೆ ಶುರುವಾಗಿದ್ದಿರಬೋದು? ಆತ ಆಕೆಯನ್ನ ಹೇಗೆ ಕೇಳಿದ್ದಿರಬೋದು? ಇದರ ಪ್ರಸ್ತಾಪ ಬಂದಾಗ ಆತ ಹೇಗೆಲ್ಲಾ ಉಪಾಯ ಹೂಡಿದ್ದಿರಬೋದು? ಎಷ್ಟು ರಾತ್ರಿ ಇದಕ್ಕಾಗಿ ಹೊಂಚು ಯೋಜಿಸಿದ್ದಿರಬೋದು? ಅಥವಾ ಆಕೆಯೇ ಪ್ರಸ್ತಾಪಿಸಿದಳೇ? ಇದರ ಪ್ರಸ್ತಾಪದ ಸಂದರ್ಭ ಆಕೆಯ ಮನಸ್ಸಲ್ಲುದ್ಭವಿಸುತ್ತಿದ್ದ ಭಾವಗಳೇನು? ಕೊನೆಗೆ 'ಒಪ್ಪಿಗೆ' ದೊರೆತ ಸಂದರ್ಭ ಹೇಗಿದ್ದಿರಬೋದು?' ಸದಾನಂದನಿಗೆ ಹಿಂದೆ ಸ್ನೇಹಿತ ವರ್ಣಿಸುತ್ತಿದ್ದ ಪೊದೆಬದಿಯ ವರ್ಣನೆಗಳು ಉಂಟುಮಾಡುತ್ತಿದ್ದ ಕುತೂಹಲಗಳು ಇವೇ ರೀತಿಯದ್ದವು. ಮನುಷ್ಯ ತನ್ನ ಕುತೂಹಲಕ್ಕೆ  ಕಾರಣಗಳನ್ನ ಹುಡುಕಲು ಇಳಿದದ್ದೇ ಆದಲ್ಲಿ, ಆ ಕ್ಷಣಕ್ಕೆ ಕುತೂಹಲದಿಂದ ದೊರೆಯುತ್ತಿದ್ದ ಅರೆ ಸುಖಕ್ಕಾದರೂ, ಆ ಕುತೂಹಲ ತಣಿದಾಗ ಉಂಟಾಗಬಹುದಾಗಿದ್ದ ಮಹದಾನಂದಕ್ಕಾದರೂ ಧಕ್ಕೆಯಾಗಬಹುದಾದ ಸಾಧ್ಯತೆಯುಂಟು. ತನ್ನ ಸಮಸ್ಯೆಯೇ ಈ ರೀತಿಯ ಮೂಲಭೂತ ಹುಡುಕಾಟಗಳೆನ್ನುವದನ್ನ ಸದಾನಂದ ಅರಿತುಬಿಟ್ಟಿದ್ದ. ಹಾಗಾಗಿ, ಸಹಜವಾಗಿಯೇ ತನಗೊದಗಿದ್ದ ಕುತೂಹಲ ಮಾಸುತ್ತಾ ಬಂದಿತ್ತು. ಆದರೆ ಆತನ ಕುತೂಹಲ ಮತ್ತೆ ಚಿಗುರೊಡೆದದ್ದು ಮಂಚೇಗೌಡನ ಸುದ್ದಿಯಿಂದ. 

ಅದೊಂದು ದಿನ ಮಧ್ಯಾಹ್ನವೇ ಮಂಚೇಗೌಡ ಸದಾನಂದನನ್ನ ಹುಡುಕಿಕೊಂಡು ಆತನ ಡಿಪಾರ್ಟ್ ಮೆಂಟಿಗೇ ಬಂದುಬಿಟ್ಟ‌. ಕೈಯಲ್ಲೊಂದು ಹಾಳೆ. 
'ನೋಡಿದ್ರಾ...' ಹಾಳೆಯ ಒಂದೆಡೆ ಬೊಟ್ಟು ಮಾಡಿ ತೋರಿಸಿದ. 
'ಓಹ್... ನಿಮ್ಮವರೇ?' ಸದಾನಂದನಿಗೆ ತತ್ ಕ್ಷಣಕ್ಕೆ ಹೊಳೆಯಲಿಲ್ಲ.
'ನಮ್ಮಿಬ್ಬರಿಗೂ ಸಂಬಂಧಿಸಿದೋರು' ಎಂದು ಮಂಚೆಗೌಡ ಕಣ್ಣು ಮಿಟುಕಿಸಿದಾಗಲೇ ಸದಾನಂದನ ಕುತೂಹಲದ ಬುಗ್ಗೆ ಇದ್ದಕಿದ್ದಂತೆ ಮತ್ತೆ ಒಡೆಯಿತು. 
'ಸೌಮ್ಯಾ ಸಿ... ಹಂ....' ಸದಾನಂದನ ಒಳಗೊಳಗೇ ನಗು ಮೂಡಿತು. 
'ಸೌಮ್ಯಾ ಸಿ, ಸೌಮ್ಯಾ ಸಿ...' ಹೀಗೆ ನಾಲ್ಕೈದು ಬಾರಿ ಹೆಸರು ಓದಿದ ಮೇಲೆ ಮಂಚೇಗೌಡ ಮುಂದುವರೆಸಿದ 
'ಇಷ್ಟೆಲ್ಲಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ತತ್ವಶಾಸ್ತ್ರದಲ್ಲಿ ಪ್ರಥಮ ರ್ಯಾಂಕ್' 
 
ಸದಾನಂದನ ಪ್ರಶ್ನೆಗಳು ಪುನಃ ಬೂದಿಯಿಂದೆದ್ದವು‌. 'ಈ ಸಂಧಾನ ಹೇಗೆ ಸಾಧ್ಯ? ಆಕೆ ಇದಕ್ಕೆ ಹೇಗೆ ಒಪ್ಪಿದಳು?' 

'ಏನ್ ಗೊತ್ತಾ ಸದಾನಂದ್..' ಮಂಚೇಗೌಡನ ಧ್ವನಿ ಗಂಭಿರವಾಯಿತು. 'ಆಕೆ ಈತನ ಮೇಲೆ ಕಂಪ್ಲೇಂಟ್ ಮಾಡ್ತೇನೆ ಅಂತ ಹೇಳ್ತಿದ್ಲು ಅನ್ನೋದು ಗಾಳಿಯಷ್ಟೇ ಸತ್ಯವಾಗಿ ಎಲ್ಲೆಡೆಗೂ ಹರಡಿತ್ತು. ಆ ಬೋಳೀಮಗನಿಗೆ ಅದೆಷ್ಟು ಗತ್ತು ಗೊತ್ತೆ! ಹೀಗೆ ಮಾಡಿದ್ರಲ್ಲ ಅಂತ ಯಾರೋ ಒಬ್ಬ ಬೊಟ್ಟು ಮಾಡಿ ಹೇಳದ್ರೆ ಅವನಿಗೆ ತಿರುಗಿಸಿ ಹೇಳಿದ್ನಂತೆ -'why do you care? I am happy that I will be a certified male soon' ಅಂತ!'

ಮಂಚೇಗೌಡನ ವಿವರಣೆಗಳು ಸತ್ಯವೇ ನಾಚುವಂತಿದ್ದರೂ, ಸದಾನಂದನಿಗೆ ಅವರಿಬ್ಬರನ್ನೂ ಮಾತನಾಡಿಸುವ ತವಕ ಮತ್ತೆಯೂ ಹೆಚ್ಚಿತು. ಈ ಕುತೂಹಲಕ್ಕೆ ಕಾರಣ ತಿಳಿಯದು, ಅದನ್ನ ಹುಡುಕುವ ಭರವೂ ಬೇಡವೆಂದು ಸದಾನಂದ ಆ ರೀತಿಯ ಆಲೋಚನೆಗಳನ್ನು ಪಕ್ಕಕ್ಕಿಡಲು ಪ್ರಯತ್ನಿಸಿದ. ಆದರೆ ಹೇಗೆ? ಎಲ್ಲಿಂದ? 

'ಆಕೆ ಈತನ ವಿರುದ್ಧ ಕಂಪ್ಲೇಂಟ್ ಕೊಡ್ತೇನೆ ಅಂತ ಕುಲಪತಿಗಳ ಬಳಿ ಹೋಗಬೇಕು ಅಂತ ಇದ್ಲಂತೆ. ರಿಜಿಸ್ಟ್ರಾರ್, ಅದೇ ಮೋಹನ ಕುಮಾರಿ ಇವಳನ್ನ ಗೌಪ್ಯವಾಗಿ ಕರೆದು ಮಾತಾಡ್ಸಿದ್ಲಂತೆ. ಅಲ್ಲಿ..' 

'ಅಲ್ಲ ಗೌಡ್ರೆ... ಗೌಪ್ಯವಾಗಿ ಮಾತಾಡಿರೋದನ್ನ ನೀವು ಈಗ ಹೇಗೆ ಹೇಳ್ಳಿಕ್ಕೆ ಸಾಧ್ಯ?' ಸದಾನಂದ ಅರ್ಧಕ್ಕೆ ತಡೆದ. 

'ಸಾರ್, ಮಾತಿಗೆ ಕರೆದಾಗ  ಗೌಪ್ಯ.  ಮಾತು ಕತೆ ಮುಗಿದ ಮೇಲೆ? ಯಾವುದೂ ಇಲ್ಲಿ ಗೌಪ್ಯ ಇಲ್ಲ ಸಾರ್! . ಹಾವು ಎಲ್ಲಿ ಅಡಗಿರ್ಬೋದು ಅನ್ನೋದನ್ನ ಸರಿಯಾಗಿ ಅರ್ಥ ಮಾಡ್ಕೋಂಡೋನಿಗೆ ಅಷ್ಟೇ ಅದನ್ನ ಹಿಡೀಲಿಕ್ಕೆ ಸಾಧ್ಯ. ಹಾಗೆ ಸತ್ಯವೂ. ನೀವೀಗ ಕೇಳಿ. ಆಕೆಗೆ ಕೊಟ್ಟ ಆಫರ್ ಇದು. ಮೋಹನ ಕುಮಾರಿ ಅತೀ ಚಾಲಾಕಿ. ಅವಳ ಮುಂದೆ ನಿಂತ್ರೆ ಬೆಂಕಿಗೆ ತುಪ್ಪ ಕರಗಿದಂತೆ ಕರಗಿ ಹೋಗಲೇ ಬೇಕು.  'ಖುಷಿ ಪಡು ನೀನು ಗರ್ಭಿಣಿ ಅಗದೇ ಇರೋದಕ್ಕೆ. ಇದು ಇಲ್ಲಿಗೆ ಬಿಟ್ಟರೆ ಮುಗಿದೇ ಹೋಯ್ತು. ಇಲ್ಲಾ ನಿನ್ನ ಇಡೀ ಜೀವನವೇ ಕಮರಿ ಹೋಗ್ತದೆ. ನಿನ್ನ ಕರೀರ್, ನಿನ್ನ ಮದುವೆ, ಸಂಸಾರ ಎಲ್ಲವೂ. ಈಗ ಅಗಿರೋದಾದ್ರೂ ಏನು? ನೀನು ಸುಮ್ಮನಾದ್ರೆ ನಿನಗೆ ಬೇಕಾದ ಕರೀರ್ ನೀನು ಬಿಲ್ಡ್ ಮಾಡ್ಕೋಬೋದು. ಅದಕ್ಕೆ ನನ್ನ ಸಹಕಾರವಂತೂ ಇದೆ.' ಆ ಹುಡುಗಿಗೆ ಬೇರೆ ದಾರಿಯೇ ಇರಲಿಲ್ಲವಂತೆ. ಅವರ ಸಹಕಾರ ನೀವೇ ನೋಡ್ತೀದೀರಲ್ಲ!' 

'ಹಂ...' ಸದಾನಂದ ಹೂಂಕರಿಸಿ ಸುಮ್ಮನಾದ. 'ಕಾನ್ವೋಕೇಶನ್ ದಿನವಾದರೂ ಆಕೆಯನ್ನ ಭೇಟಿಯಾಗಲೇಬೇಕು' ಎಂದು ಮನಸ್ಸಲ್ಲೇ ನಿರ್ಧರಿಸಿಕೊಂಡು ಸುಮ್ಮನಾದ. 

*******

ಸದಾನಂದ ತಾನಂದುಕೊಂಡಂತೆ ಆಕೆಯನ್ನ ಮಾತನಾಡಿಸಲಾಗಲಿಲ್ಲ. ಒಂದೆರೆಡು ವರ್ಷ ಕಳೆದಿದ್ದಿರಬೇಕು. ರಾಜಾರಾಂನನ್ನ ಎಂದಿನಂತೆ ಕ್ಲಬ್ಬಿನಲ್ಲಿ ಕಾಣಬೋದಿತ್ತು. ಅದೇ ಹುರುಪಿನಲ್ಲಿ ಆಟವಾಡ್ತಿದ್ದ. ಯೂನಿವರ್ಸಿಟಿಯ ಕ್ಯಾಂಟೀನಿನ ಗೋಡೆಗಳೂ ಮರದೆಲೆ ಉದುರಿ ಹೊಸತು ಮೂಡುವಂತೆ ಹೊಸ ಹೊಸ ಸುದ್ದಿಗಳಿಗೆ ಕಿವಿಗೊಟ್ಟಿದ್ದವು. ಮಂಚೆ ಗೌಡನ ತಾಜಾ ಸುದ್ದೀಗಳೂ ಮುಂದುವರೆದಿದ್ದವು. ಸದಾನಂದ ತನ್ನ ರೀಸರ್ಚಿನಲ್ಲಿ ಮುಳುಗಿಹೋಗಿದ್ದ. ಒಂದೊಮ್ಮೆ ಇದ್ದಕ್ಕಿದ್ದಂತೆ ಸೌಮ್ಯ ಕ್ಯಾಂಟೀನಿನಲ್ಲಿ ಕಾಣಿಸಿಕೊಂಡಳು. ಗೌಡನ ಜೊತೆ ಕ್ಯಾಂಟೀನಿನ ಹೊರಗಿನ ಟೇಬಲ್ಲಿನಲ್ಲಿ ಕಾಪಿ ಹೀರುತ್ತಾ ಕುಳಿತಿದ್ದ ಸದಾನಂದನಿಗೆ ಅಚ್ಚರಿಯಾಯ್ತು - 'ಅರೆ ಗೌಡನಿಂದ ಇದರ ಸುಳಿವೇ ಇಲ್ಲವಲ್ಲ'  ಅಂತ. 
'ಗೌಡ್ರೇ.. ಕಂಡ್ರಾ?' ಆಕೆಯೆಡೆಗೆ ಕನ್ಣೋಟ ಬೀರಿ ತೋರಿಸಿದ ಸದಾನಂದ. 
'ಏನು?' ಮಂಚೆ ಗೌಡ ಹಿಂದಿರುಗೊಮ್ಮೆ ನೋಡಿದ. 'ಓಹ್! ಇದಾ. ಗೊತ್ತಾಯ್ತೇನು? ಆಕೆ ಈಗ ಇಲ್ಲೇ ಪಿ.ಎಚ್ಡಿ. ಮಾಡ್ತಿರೋದು.'
'ಓಹ್!..' ಸದಾನಂದ ಮುಖಚರ್ಯೆ ಬದಲಾದ್ದು ಕಂಡು ಮಂಚೆ ಗೌಡ ಹೇಳಿದ - 'ಅವನ ಅಂಡರ್ ಅಲ್ಲ. ಬದಲಾಯಿಸಿದ್ದಾಳೆ. ಏನೇನೋ ಆಗಿದೆ..' ಎಂದು ಹೇಳುವಾಗ ಮಂಚೆಗೌಡನಿಗೆ ಈ ವಿಷಯದಲ್ಲಿನ ಅನಾಸಕ್ತಿ ಆತನ ಧ್ವನಿಯಿಂದಲೇ ತಿಳೀತಾ ಇತ್ತು. 'ಏನು?' ಅಂತ ಕೇಳೋ ಆಸ್ಥೆಯನ್ನೂ ಸದಾನಂದ ತೋರಲಿಲ್ಲ. 
'ನಿಮಗೇನೋ ಆಕೆಯನ್ನ ಮಾತಾಡಿಸಬೇಕೂಂತ ಬಾಳಾ ಇತ್ತಲ್ಲ. ಏನೋ ತಿಳಕೋಬೇಕೂಂತ. ಕರೀಲಾ?' ಮಂಚೇ ಗೌಡ ಕಿಚಾಯಿಸಿದ. 
'ಹಾ ಹಾ.. ಕುತೂಹಲ ಇನ್ನೂ ಇದೆ ಗೌಡ್ರೆ. ಆದರೆ ನಿಮ್ಮ ಮನಸ್ಸಿನ ದ್ವಾರಬಂಧದಿಂದ ಹೊರಗೆ ನಿಜವನ್ನೇ ನೀವು ಹೊರಬಿಡ್ತೀರಿ ಅನ್ನೋದು ನಿಮಗಷ್ಟೇ ಅಲ್ವೇ ತಿಳಿದಿರೋದು? ಕುತೂಹಲ ಎಂದಿಗೂ ತಣಿಯೋದೇ ಇಲ್ಲ.'

 

No comments:

Post a Comment