Monday, April 29, 2024

ರುಕ್ಕು

 ಕಳೆದ ವರ್ಷದ ದಸರ ಅಕ್ಕ ರುಕ್ಮಿಣಿ ಇಲ್ಲದೆಯೇ ನಡೆದಿತ್ತು. ಶ್ರೀನಿಗೆ ಮರೆತು ಹೋಗಿತ್ತು, ಕಳೆದ ದಸರೆಗೆ ರುಕ್ಮಿಣಿ ಏಕಿರಲಿಲ್ಲವೆಂದು. ಅದನ್ನು ಯೋಚಿಸಲೂ ಆತ ಶ್ರಮವಹಿಸಲಿಲ್ಲ. ಎಲ್ಲೋ ಅಮ್ಮ - ಮಗಳ ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಇದ್ದರಿಬೋದು ಎಂದು ಅತೀ ಸುಲಭವಾದ ಕಾರಣವೊಂದನ್ನ ಮನೆಯಲ್ಲಿ ಎಲ್ಲರೂ ಊಹಿಸುವ ರೀತಿಯಲ್ಲೇ ಅವರಿಬ್ಬರೂ ಇದ್ದದ್ದು. ಆದರೆ ಈ ಬಾರಿ ಮಗಳೇ ದಸರೆಗೆ ಮೈಸೂರಿಗೆ ಬರ್ತೇನೆ ಅಂತ ಅಮ್ಮನ ಬಳಿ ಖುಷಿಯಿಂದ ಹೇಳಿದ್ದೂ ಮನೆಯವರಿಗೆ ಹೊಸತೇನಾಗಿರಲಿಲ್ಲ. ಅವರಿಬ್ಬರ ಸಂಬಂಧ ಹಾಗೆಯೇ - ಯಾವಾಗ ಕೆಡ್ತದೆ, ಯಾವಾಗ ರಿಪೇರಿಯಾಗ್ತದೆಯಂತ ಊಹಿಸಲಸಾಧ್ಯ. ಆದರೆ ಕೆಟ್ಟಿದ್ದು ಎಂದಾದರೂ ರಿಪೇರಿಯಾಗ್ತದೆ ಅನ್ನೋದಂತೂ ನಿಜ. 

ರುಕ್ಮಿಣಿಗೆ ಮದುವೆಯಾಗಿ ಎಂಟು ವರ್ಷಗಳು ಕೆಳೆದಿದ್ದವು. ಕಳೆದ ಮೂರು ವರ್ಷಗಳಿಂದ ಹೈದರಾಬಾದಿನಲ್ಲಿ ನೆಲೆಸಿದ್ದಳು. ಇಬ್ಬರು ಹೆಣ್ಣು ಮಕ್ಕಳು. ಅಳಿಯ ದೂರದವನೇನಲ್ಲ, ರುಕ್ಮಿಣಿ ತಾಯಿ ಸರಸ್ವತಮ್ಮನ ಸೋದರ ಮಾವನ ಮೊಮ್ಮಗ. ಇಬ್ಬರಿಗೂ ಒಬ್ಬರಿಗೊಬ್ಬರು ಅನ್ನೋದನ್ನ ದೊಡ್ಡವರೇ ಚಿಕ್ಕಂದಿನಿಂದ ತಲೆಯಲ್ಲಿ ತುಂಬಿಸ್ತಾ ಬಂದದ್ದರಿಂದ, ಸಹಜವಾಗಿಯೇ ಮದುವೆಗೇನು ಅಂತಾ ಕಷ್ಟವಾಗಲಿಲ್ಲ. ಮದುವೆಗೂ ಮುನ್ನ, ಮದುವೆಯಾದ ಮೇಲೂ ರುಕ್ಕು, ಸರಸತಮ್ಮರ ಸಂಬಂಧ - ವ್ಯವಹಾರಗಳಲ್ಲೇನೂ ಅಂಥಾ ಬದಲಾವಣೆಯೇನೂ ಇರಲಿಲ್ಲ. ಮದುವೆಗೂ ಮುನ್ನ ತೀರಾ ಅತಿರೇಕಕ್ಕೇ ಹೋದ ಜಗಳಗಳೂ ಉಂಟು. ತಿನ್ನುವ ತಿಂಡಿಗೆ ಹಾರ್ಪಿಕ್ ಬೆರೆಸಿ ತಿಂದು ಸತ್ತು ಹೋಗ್ತೇನೆ ಅಂತ ರುಕ್ಕು ಹೆದರಿಸುವ ಮಟ್ಟಿಗೂ ಹೋಗಿತ್ತೂ. ಶ್ರೀನಿ ಹಾಗೂ ರಾಜಶೇಖರ ಅಯ್ಯಂಗಾರರು ಇದಕ್ಕೆಲ್ಲಾ ಅಷ್ಟಾಗಿ ತಲೆ ಕೆಡಿಸಿಕೊಳ್ತಿರಲಿಲ್ಲ. ಸುಮ್ಮನೆ ತಿಂಡಿ ಹಾಳು ಮಾಡಿ ಮತ್ತೆ ಹೊಸದಾಗಿ ತನ್ನ ಪಾಲಿನ ತಿಂಡಿಯನ್ನೂ ಕಿತ್ತುಕೊಂಡಳು ಅಂತ ರುಕ್ಕು ಮೇಲೆ ಸಿಟ್ಟಾಗಿದ್ದ ಅಷ್ಟೆ! ಮತ್ತೆ ಸಂಜೆಗೆಲ್ಲಾ ಒಬ್ಬರಿಗೊಬ್ಬರು ಜೀವ ಕೊಡೋವಷ್ಟು ಒಂದಾಗಿ ಹೋಗಿದ್ದರು. ಮದುವೆಯಾದಮೇಲೂ ಹೀಗೆಯೇ.  ಒಮ್ಮೆ  ರುಕ್ಮಿಣಿ ಮೈಸೂರಿಗೆ ಬಂದಿದ್ದ ಸಮಯ. ಬಂದ ಎರಡನೇ ದಿನಕ್ಕೆ‌ ಕೆಲಸದಲ್ಲಿದ್ದ ಶ್ರೀನಿಗೆ ಫೋನ್ ಬಂದಿತು, ಕೂಡಲೇ ಮನೆಗೆ ಬರಬೇಕೂಂತ. ರುಕ್ಮಿಣಿ ತನ್ನ ಸೂಟ್ ಕೇಸ್ ಪ್ಯಾಕ್ ಮಾಡಿ‌ ಮನೆಯೆ ಹೊರಗೆ ಮಕ್ಕಳಿಬ್ಬರನ್ನ ಹಿಡಕೊಂಡು ನಿಂತಿದ್ದಳು. 
ಎಲ್ಲಿಗೆ ಹೋಗ್ತಿದೀಯ, ಏನು‌ಮಾಡ್ತಿದೀಯ? ಶ್ರೀನಿ ಗಾಬರಿಯಿಂದ ಕೇಳಿದ. ಕೈಯಲ್ಲಿ ಓಲಾ ಆ್ಯಪ್ ತೋರಿಸಿ - ನಾ ಹೋಗ್ತೀನಿ ಅಂತ ಹೇಳಿದ್ಲು. ಒಳಗೆ ಸರಸ್ವತಮ್ಮ ಕೋಣೆ ಬಾಗಿಲು ಹಾಕಿಕೊಂಡು ಸುಮಾರು ಹೊತ್ತಿಂದ ತೆಗೆಯದೇ ನೇಣು ಹಾಕೋತೀನಿ ಅಂತ ಹೇಳ್ತಿದ್ಲಂತೆ. ಈಗ ಸದ್ದಿಲ್ಲ. ಶ್ರೀನಿಯ ಹೆಂಡತಿ ಪೋಲೀಸಿಗೆ ಫೋನ್‌ ಮಾಡಿದ್ದೇನೆ ಅಂತ ಹೆಳಿದ್ದು ಕೇಳಿಸಿ ಚಿಲಕ ತೆಗೆಯೋ ಸದ್ದು ಬಂದಿತು. ಸರಸ್ವತಮ್ಮನವರನ್ನ ಸಮಾಧಾನ ಮಾಡೋದು ಶ್ರೀನಿಗಷ್ಟೇ ಸಾಧ್ಯವಿದ್ದದ್ದು. ರುಕ್ಮಿಣಿಯನ್ನೂ ಸಮಾಧಾನ ಮಾಡಿ‌ ಒಳಗೆ ಕರೆಸಿ ಮತ್ತೆ ಕೆಲಸಕ್ಕೆ ಹೊರಟು ವಾಪಾಸ್ಸು ಸಂಜೆ ಮನೆಗೆ ಬಂದಾಗ ಶ್ರೀನಿ‌ ಅವಾಕ್ಕಾದಾ. ಅಮ್ಮ ಮಗಳಿಬ್ಬರು ಅಕ್ಕ ಪಕ್ಕ ಕೂತು ಹರಟ್ತಾ ಇದ್ದಾರೆ. ಅವರಿಬ್ಬರ ದೊಡ್ಡ ಜಗಳಗಳೆಲ್ಲಾ ಶುರುವಾಗ್ತಾ ಇದ್ದದ್ದು ಅತೀ ಕ್ಷುಲ್ಲಕ ಕಾರಣಗಳಿಗೆ - ರೊಟ್ಟಿಗೆ ಮಂಗಳವಾರ ತೂತು ಮಾಡಿದಳೆಂದೋ ಅಥವಾ ತನ್ನ ದೇವರ ಫೋಟೋಗೆ ಆಕೆ ಕುಂಕುಮ ಹಚ್ಚಿದಳೆಂದೋ, ಹೀಗೆ. ಶ್ರೀನಿಗೆ ಎಂದೋ ಮನೆ ಬಿಟ್ಟು ಹೋಗಬೇಕೆನಿಸಿದ್ದರೂ, ಎಲ್ಲೇ ಹೋದರೂ ಸರಸ್ವತಮ್ಮನವರಂತವರು ತಪ್ಪಿಸಲಿಕ್ಕೆ ಸಾಧ್ಯವೇ ಎನ್ನುವ ಪ್ರಬುದ್ಧತೆಯಿಂದ ಎಲ್ಲವನ್ನೂ ಸಹಿಸಿ ಹೋಗ್ತಿದ್ದ. 

ಆದರೆ ಈ ಬಾರಿ ಅಚ್ಚರಿ ಅನ್ನೋ ರೀತಿ‌ ಅಮ್ಮ-ಮಗಳ ನಡುವೆ ಯಾವುದೇ ಅನಾರೋಗ್ಯಕರ ಬೆಳವಣಿಗೆ ನಡೆಯಲಿಲ್ಲ. ರುಕ್ಮಿಣಿಯೇ ಎಲ್ಲವನ್ನು ಸಹಿಸಿಕೊಂಡು ಸುಮ್ಮನಾಗ್ತಾ ಇದ್ದಳು. ಕೋಪ ಬರ್ತಿರಲಿಲ್ಲವೆಂದಲ್ಲ. ಕೋಪಿಸಿಕೊಂಡು ಮತ್ತೆ ಅತಿರೇಕಕ್ಕೆ ಹೋದರೆ ತನ್ನ ಗಂಡನ ಕೈಲಿ ಬೈಗುಳಗಳು ಬಿದ್ದಾವೆಂದು ಸುಮ್ಮನಿರುತ್ತಿದ್ದಳು. ಆಕೆಯ ಗಂಡ ಈ ಬಾರಿ ಒಂದು ಎಚ್ಚರಿಕೆಯೊಂದಿಗೆ ಆಕೆಯನ್ನ ತವರಿಗೆ ಕಳಿಸಿದ್ದ - ತನ್ನ ಬಳಿ ಸರಸ್ವತಮ್ಮನಿಂದ ಯಾವುದೇ ದೂರು ಬರಕೂಡದೆಂದು. ಆದರೆ ಈ‌ ಬಾರಿ ಅಷ್ಟೊಂದು ಪ್ರಬುದ್ಧನೆಂದುಕೊಳ್ತಿದ್ದ ಶ್ರೀನಿಯೇ ಕ್ಷುಲ್ಲಕ ಕಾರಣಗಳಿಗೆ ಬಲಿಯಾಗಬೇಕಾಗಿ ಬಂದದ್ದೇ ವಿಪರ್ಯಾಸವಾಯಿತು. 

ಪ್ರತೀ ವರ್ಷ ಅಯ್ಯಂಗಾರರ ಮನೇಲಿ ದಸರೆಗೆ ೧೦ ದಿನ ಗೊಂಬೆ ಕೂರಿಸೋದು ವಾಡಿಕೆ ಇತ್ತು. ಚಿಕ್ಕ ವಯಸ್ಸಿಂದಲೂ ದಸರೆಯೆಂದರೆ ಮಕ್ಕಳಿಗೆ ಸಂಭ್ರಮ.‌ ಕಳೆದ ವರ್ಷ ತಾವು ಬೇರೆಲ್ಲೂ ನೋಡಿದ್ದ ನೀರಿನ ಫೌಂಟೇನನ್ನೋ ಅಥವಾ ಪಾರ್ಕನ್ನೋ ಆ ಥರಹದ್ದೇನಾದರೂ ಒಂದನ್ನ ಮಾಡಲೇ ಬೇಕು ಅನ್ನೋ ಹುಮ್ಮಸ್ಸು. ಒಮ್ಮೊಮ್ಮೆ ಆ ಥರಹದ್ದು -ಪಾರ್ಕನ್ನು - ಮಾಡಿ, ಮರಳಿಗೆಲ್ಲಾ ಇರುವೆ ಮುತ್ತಿ ಸರಸತಮ್ಮನ ಕೋಪಕ್ಕೆ ತುತ್ತಾಗಬೇಕಿತ್ತು. ಇಷ್ಟಿದ್ದರೂ ಮಕ್ಕಳಿಗೇನೋ ಹುರುಪು, ಹುಮ್ಮಸ್ಸು. ದಸರೆಯ ಹತ್ತೂ ದಿನವೂ ಸಂಜೆಯ ವೇಳೆ ಒಂದೊಂದು ಬಗೆಯ ತಿಂಡಿ. ಸುತ್ತ ಮುತ್ತಲಿನ ಮನೆಗಳಲ್ಲೆಲ್ಲಾ ಇವರದ್ದೊಬ್ಬರಲ್ಲೇ ಗೊಂಬೆ ಕೂರಿಸ್ತಾ ಇದ್ದರಿಂದ, ಮಕ್ಕಳಿಗೂ ತಮ್ಮ ಆಡಂಬರ, ಅಲಂಕಾರ, ಗೊಂಬೆಗಳನ್ನೆಲ್ಲಾ, ಎಲ್ಲರಿಗೂ ತೋರಿಸುವ ಉತ್ಸಾಹ. 'ಯಾರು ಇಷ್ಟು ಚೆನಾಗಿ ಜೋಡಿಸಿದ್ದು' ಎಂದು ಯಾರಾದರೂ ಕೇಳಿದ್ದಕ್ಕೆ, 'ಅಯ್ಯೋ. ನಮ್ಮಕ್ಳೇ' ಅಂತ ಸರಸತಮ್ಮ ಹೇಳೋವಾಗ ಒಳಗೊಳಗೇ ಹಮ್ಮು. ಆ ಹುರುಪು ಈಗಿಲ್ಲದಾಗಿತ್ತು ಶ್ರೀನಿಗೆ. ರುಕ್ಕುಗೆ ಮದುವೆಯಾದ ಮೇಲೆ, ಶ್ರೀನಿಗೊಬ್ಬನಿಗೆ ಇದರಲ್ಲಿ ಆಸಕ್ತಿ ಸಾಕಾಗಲಿಲ್ಲ. ಜೊತೆಗೆ, ಅವನು ಮೈಸೂರಿನಿಂದ ಹೊರಕ್ಕೆ ಕೆಲಸಕ್ಕೆ ಹೋದಮೇಲಂತೂ ಅವನ ಜೀವನದ ಅರ್ಥಗಳೇ ಬಹು ದೊಡ್ಡ ಅಗಾಧತೆಯಲ್ಲಿ ಬದಲಾಗಿ ಹೋಗಿ ದಸರೆಗೆ ಮೈಸೂರಿಗೆ ಬರೋದೂ ಕಡಿಮೆಯಾಗಿತ್ತು. ಬಂದರೂ, ಹೊರಗೆ ಆಹಾರ ಮೇಳಕ್ಕೋ ಅಥವಾ ಅರಮನೆ ಕಾರ್ಯಕ್ರಮಗಳಿಗೋ ಅಥವಾ ಕಲಾಂಮಂದಿರಕ್ಕೋ ಹೋಗ್ತಿದ್ದ ಹೊರತು ಮನೆಯಲ್ಲಿನ‌ ಸಂಭ್ರಮ ಅಷ್ಟಕ್ಕಷ್ಟೆ. ಆದರೆ ಶ್ರೀನಿಗೆ ಮದುವೆಯಾದ ಮೇಲೆ, ಮತ್ತೆ ಮೈಸೂರಲ್ಲೇ ಕೆಲಸವಾದ ಮೇಲೆ ಎಲ್ಲವೂ ದಸರೆಗೆ ಮತ್ತೆ ಮೊದಲಿನಂತೆ ಮನೆಯಲ್ಲಿ ಕಳೆತುಂಬಿತು. ಗೊಂಬೆ ಇಡದೇ ಹೋದರೂ, ಬಗೆ ಬಗೆಯ ತಿಂಡಿಗಳೂ, ಪೂಜೆಗಳಂತೂ ಮೊದಲಿನಂತೆ ಪುನರಾರಂಭಿಸಲಾಯಿತು. ಶ್ರೀನಿ ಅಷ್ಟಾಗಿ ತನ್ನನ್ನ ಅವುಗಳಲ್ಲಿ ಸಮರ್ಪಿಸಿಕೊಳ್ಳದಿದ್ದರೂ, ಅವುಗಳಿಂದ‌ ವಿಮುಖನಾಗಿಯೂ ಇರಲಿಲ್ಲ. ಅವನಿಗೆ ಆಚಾರ, ಸಂಪ್ರದಾಯಗಳಿಗಿಂತ, ಎಲ್ಲರೂ ಒಟ್ಟಿಗೆ ಸೇರಿ ಮಾಡುವ ಕೆಲಸಗಳು, ಮಾತು ಕಥೆಗಳು‌ ಹೆಚ್ಚಿಗೆ ಬೇಕಿತ್ತು. 

ರುಕ್ಮಿಣಿ ಈ ಬಾರಿ ಬೊಂಬೆ ಜೋಡಿಸೋಣ ಅಂದಾಗ ಯಾರೂ ಬೇಡವೆನಲಿಲ್ಲ, ಶ್ರೀನಿಯನ್ನ ಬಿಟ್ಟು. ಆದರೂ, ಇಲ್ಲದ ಮನಸಿನಿಂದ 'ಓಕೆ' ಅಂದಿದ್ದ. 'ಬರೆ ಕೆಳಗೆ ಇರೋ ಶೋಕೇಸಿನ ಬೊಂಬೆಗಳು ಸಾಕು' ಅಂತ ಅವನು ಉದ್ಗರಿಸಿದಾಗಲೇ ಎಲ್ಲರಿಗೂ ನೆನಪಾಗಿದ್ದು ಅಟ್ಟದ ಮೇಲೆಯೂ ಬೊಂಬೆಗಳಿದ್ದಾವೆ ಅಂತ. ಎಂದೋ ಕಿಟ್ಟಿ ಬೊಂಬೆಗಳನ್ನೆಲ್ಲಾ ಮೇಲೆ ಜೋಡಿಸಿಟ್ಟಿದ್ದ. ಕಿಟ್ಟಿಗೆ ಬೊಂಬೆಗಳು ಇಷ್ಟವಿಲ್ಲವೆಂದಲ್ಲ. ಸರಸತಮ್ಮನ ಸೌಂದರ್ಯಪ್ರಜ್ಞೆ ಇವನಿಗೆ ಆಗದು. ಮೊದಲಿಂದಲೂ ಅಂದವನ್ನ ದುಡ್ಡಿನಿಂದಲೇ ಅಳೀತಿದ್ದ ಸರಸಮ್ಮನಿಗೆ, ಕಡಿಮೆ ರೇಟಿನ ಬೊಂಬೆಗಳೇ ಬಾಳ ಚೆನಾಗಿ ಕಾಣಿಸ್ತಾ ಇದ್ವು. ಒಂದೇ ಥರಹದ ಬೊಂಬೆಗಳು ಒಂದ್ಹತ್ತನ್ನಾದರೂ ಒಮ್ಮೆಗೆ ತಂದು ಬಿಡ್ತಿದ್ದಳು. ಆ ಗೊಂಬೆಯ ಮೂಗಿನ ಒಂದು ಹೊಳ್ಳೆ ಇನ್ನೊಂದಕ್ಕಿಂತ ವಿಪರೀತ ದೊಡ್ಡದಿದ್ದರೂ, ಅಥವಾ ಒಂದು ಹೊಳ್ಳೆ ಮುಚ್ಚಿ ಇನ್ನೊಂದು ತೆಗೆದಿದ್ದರೂ, ಮುಖವನ್ನ‌ ಗುರುತೇ ಹಿಡಿಯಲಿಕ್ಕೆ ಸಾಧ್ಯವಿರದ ರೀತಿಯಲ್ಲಿದ್ದ ಸಣ್ಣ ಸಣ್ಣ ಬೊಂಬೆಗಳೋ ಹೀಗೆ ಹತ್ತಲವು. ಒಮ್ಮೊಮ್ಮೆ ಮನೆಗೆ ತಂದು ಜೋಡಿಸೋ ವೇಳೆಗೆ ಗೊಂಬೆಯ ಪುಡಿ ಪುಡಿಗಳು ಉದುರಿ ಕೈ ಕಾಲೋ ಮುರಿದಿದ್ದರೂ, ಮತ್ತೇ ಅದೇ ರೀತಿಯ ಪ್ಲಾಸ್ಟರ್ ಆಫ್ ಪ್ಯಾರೀಸಿನ ಬೊಂಬೆಗಳನ್ನ ಕಡಿಮೆ ರೇಟಿಗೆ ತರೋದು ನಿಲ್ಲಿಸಲೇ ಇಲ್ಲ. ಹೀಗೆ, ಯಾರ ಕೈಯಲ್ಲೋ ಹಿಂಸೆಯನುಭವಿಸಿ, ಹುಟ್ಟಿದವು ಸರಸತಮ್ಮನವರಂಥೋರಿಗೆ ಬಿಟ್ಟು ಇನ್ಯಾರಿಗೂ ಬೇಡವಾದ್ದವು ಮನೆಗೆ ಸೇರಿಹೋಗಿ, ಅವುಗಳನ್ನೆಲ್ಲಾ ಶ್ರೀನಿ ಒಂದು ದಿನ ಹಲವು ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಅಟ್ಟದ ಮೇಲೆ ಹಾಕಿಬಿಟ್ಟ. ಈಗ ಅವೆಲ್ಲಾ ಕೆಳಗೆ ಬಂದರೆ, ಮತ್ತೆ ಕೆಳಗೇ ಉಳಿದು ಹೋಗಿವ ಭಯದಿಂದ, ಆತ ಬೇಡವೇ ಬೇಡ ಇವು ಎಂದು ಹಠ ಹಿಡಿದ. ಸರಸತಮ್ಮನಿಗೆ ಗತಕಾಲದ ತನ್ನ ಗೊಂಬೆಗಳನ್ನ ನೋಡಲೇಬೇಕಂತ ಆಸೆಯೂ ಹುಟ್ಟಿಬಿಟ್ಟಿತ್ತು. ಶ್ರೀನಿಗೆ ೧೦೦ ಪರ್ಸೆಂಟ್ ಖಚಿತವಾಗಿಹೋಯ್ತು, ಸರಸತಮ್ಮನ 'ಅಂಧ' ಪ್ರೇಮಕ್ಕೆ ಇವು ಇಲ್ಲೇ ಉಳುದು ಹೋದಾವು ಅಂತ. 

ಆದರೂ ಮನೆಯವರೆಲ್ಲರ ತಾಕೀತಿನಿಂದ ಬೇಸತ್ತು, ಅಟ್ಟದ ಮೇಲಿದ್ದ ಒಂದೊಂದೆ ಬಾಕ್ಸ್ ಗಳನ್ನ ಇಳಿಸೋಕ್ಕೆ ಒಲ್ಲದ ಮನಸ್ಸಿನಿಂದ ಶುರುಮಾಡಿದ. ಶ್ರೀನಿಯ ಬೇಸರ ನೋಡಿ ರುಕ್ಕುವಿಗೂ ಸ್ವಲ್ಪ ರೇಗಿತು -'ಯಾಕೋ ಹೀಗೆ ಮಾಡ್ತೀಯ? ಮೊದಲಿಂದಲೂ ಹೀಗೇನೆ ನೀನು. ಮನೇಲೀ ನಡಿಯೋ ಯಾವುದೇ ಕಾರ್ಯಕ್ರಮಕ್ಕೆ ಅಷ್ಟು ಆಸಕ್ತಿ ತೋರಿಸೋದೇ ಇಲ್ಲ. ಮನೆಗೆ ಚೂರಾದ್ರೂ ಪ್ರಯೋಜನಕ್ಕೆ ಬರಬಾರದ?' 
ರುಕ್ಕುವಿನ ಕೊನೆಯ ಸಾಲು ಶ್ರೀನಿಗೆ ರೇಗಿತು. ಅವನು ಏನೂ ಹೇಳದೆ, ಬಾಕ್ಸ್ ತೇಗೀತಾ ಇದ್ದವ ಎಲ್ಲಾ ಬಾಕ್ಸ್ ಗಳನ್ನ ಹಾಗೇ ಕೆಳಗೆ ಇಟ್ಟು ರುಕ್ಕುವಿನ ಕಡೆಗೆ ಒಮ್ಮೆ ಗುರಾಯಿಸಿ 'ಏನಾದ್ರೂ ಮಾಡಿಕೋ' ಎನ್ನುವ ಅರ್ಥದಲ್ಲಿ ಹೊರಟುಹೋದ. ಶ್ರೀನಿಯ ಹೆಂಡತಿ 'ಹಾಗೆಲ್ಲಾ ಮಾಡ್ಬೇಡ' ಅಂತ ಹಿಂದೆಯೇ ಹೇಳುತ್ತಾ ಬಂದರೂ ಅವಳ‌ ಮಾತಿಗೂ ಕಿವಿಗೊಡದೇ ಹೊರಗೆ ಹೊರಟು ಹೋದ. 

ಗೊಂಬೆಯೆಲ್ಲಾ ತೆಗೆದು ಮನೆಯವರು ಜೋಡಿಸಿದರು. ಶ್ರೀನಿ  ಕೈ ಜೋಡಿಸಲಿಲ್ಲ. ರುಕ್ಕುವಿನ ಜೊತೆಗೆ ಮಾತೂ ಬಿಟ್ಟಿಬಿಟ್ಟ. ಒಂದೆರೆಡು ದಿನ ಕಳೆಯಿತು. ರುಕ್ಕುವಾಗಲಿ, ಶ್ರೀನಿಯಾಗಲಿ ಒಬ್ಬರನ್ನೊಬ್ಬರೂ ನೋಡುತ್ತಲೂ ಇರಲಿಲ್ಲ. ಶ್ರೀನಿಯ ಹೆಂಡತಿ ಮೇಲಿಂದ ಮೇಲಿಂದ ಹೇಳಿದ ಮೇಲೆ, ಮನೆಗೆ ಬಂದಿರೋ ಮಗಳ ಮೇಲೆ ಹೀಗೆ ಕೋಪಿಸಿಕೊಳ್ಳಕೂಡದೂಂತ, ನಾಲ್ಕು ದಿನಗಳಾದ ಮೇಲೆ ಕಿಟ್ಟಿಯೇ ಹೋದ - 'ಏನು ಮಾತಾಡ್ಸದೇ ಇಲ್ವ?' 
ರುಕ್ಕು ನೋಡಿಯೂ ನೋಡದವಳಾಗಿ ಹೋಗಿ ಬಿಟ್ಟಳು. ಕಿಟ್ಟಿಯ ಕೋಪ ಏರಿತು. 'ಈನ್ ಕೊಬ್ಬು ಇವಳಿಗೆ. ಅಷ್ಟೆಲ್ಲಾ ಇವಳ ಹತ್ರ ಅನ್ನಿಸ್ಕೊಂಡ್ರೂ ಮತ್ತೆ ಮಾತಾಡ್ಸೋಕ್ಕೆ ಬಂದ್ರೆ, ನೆಗ್ಲೆಟ್ ಮಾಡಿ ಹೋಗ್ತಾಳೆ. ಅವಳಾಗೆ ಮಾತಾಡಿಸೋವರೆಗೆ ನಾನು‌ ಮಾತಾಡೋಲ್ಲಾ' ಅಂತ ಜೋರಾಗಿ ಹೇಳಿದರೂ, ಒಳಗೊಳಗೆ ಈಗ ನಡೆದ ಅವಮಾನಕ್ಕೆ ಸರಿಯಾದ ಪ್ರತೀಕಾರ ತೆಗೆದುಕೊಳ್ಳಲೇ ಬೇಕು‌ ಅನ್ನೋ ಹಠ ಹುಟ್ಟಿಬಿಟ್ಟಿತು. 'ಆಕೆಯೇ ಮಾತಾಡ್ಸೋಕ್ಕೆ ಬರ್ತಾಳಲ್ಲ ಆಗ ತೋರಿಸ್ತೀನಿ‌ ನನ್ನ ವರಸೆ' ಅಂತ ಮನಸ್ಸಲ್ಲೇ ಅಂದ್ಕೊಂಡು ಸುಮ್ಮನಾದ. 

ಒಂದೆರೆಡು ದಿವಸ ಕಳೆಯಿತು.  ಶ್ರೀನಿಗೆ ಸಾಯಂಕಾಲ ಕೆಲಸ ಮುಗಿಯೋ ಹೊತ್ತಿಗೇ ಹೆಂಡತಿಯಿಂದ ಫೋನ್ ಬಂದಿತು. 'ಬೇಗ ಬರೋಕ್ಕೆ ಆಗತ್ತ? ನಿನ್ನಕ್ಕನಿಗೆ ಕಾಲು ಉಳುಕಿದೆ'. 
'ಏನಾಯ್ತು?' ಶ್ರೀನಿ‌ ಕೇಳಿದ. 
'ಹೇಳ್ತೀನಿ ಬಾ'. 

ಮನೆಗೆ ಹೋದ ಮೇಲೆ ರುಕ್ಕು ಚೇರಿನ‌ಮೇಲೆ ಕೂತು ನೀರು ಕುಡೀತಾ ಇದ್ದೋಳು ಶ್ರೀನಿ ಬಂದದ್ದು ನೋಡಿ ಮುಖ ತಿರುಗಿಸಿಕೊಂಡಳು. 

'ಹಾಂ ಹಾಂ.. ಹೀಗೆ ಮಾಡು. ಕಾಲಿನ ಥರಾ ಮುಖಾನು...' 
ಶ್ರೀನಿ ಹೇಳಿ ಮುಗಿಸೋದರ ಒಳಗೆಯೇ ರುಕ್ಕುವಿನ‌ ಬಾಯಲ್ಲಿದ್ದ ನೀರೆಲ್ಲಾ ಆಚೆಗೆ ಬಂದು‌ ಆಕೆ ಜೋರಾಗಿ ನಗಲಾರಂಭಿಸಿದಳು. ಅನಿಯಂತ್ರಿತವಾಗಿಯೇ ರುಕ್ಕುವಿನ ಅಭಿಮಾನಕ್ಕೆ ಭಂಗವಾಗಿಹೋಯಿತು. ಆದರೂ ಒಂದು ಮಾತಾಡಲಿಲ್ಲ. 

'ಅವರು ಇನ್ನೂ ಒಂದೆರೆಡು ಬಾಕ್ಸ್ ಗೊಂಬೆ ಇತ್ತು ಮೇಲೆ ಅಂತ ಸ್ಟೂಲ್ ಹತ್ತಿ ತೆಗೆಯೋಕ್ಕೆ ಹೋದ್ರು. ಒಂದು ಕಾಲು ಇಡೋಅಷ್ಟರಲ್ಲೇ ಸ್ಟೂಲು ಸ್ವಲ್ಪ ಅಲುಗಾಡಿದಾಗಾಗಿ ಇಡ್ತಿದ್ದ ಇನ್ನೊಂದು ಕಾಲನ್ನ ನೆಲಕ್ಕೆ ಜೋರಾಗಿ ಊರಿದ್ರು ಅಂತ ಕಾಣತ್ತೆ‌. ಟ್ವಿಸ್ಟ್ ಆಗಿರಬೋದು' ಶ್ರೀನಿಯ ಹೆಂಡತಿ ಎಲ್ಲವನ್ನ ವಿವರಿಸಿದಳು. 

'ಹಾಂ.. ಹಾಂ.. ಏನೋ ಬಾಳ ಮನೆಗೆ ಪ್ರಯೋಜನಕ್ಕೆ ಬರ್ತಾಳಂತಲ್ಲ. ಈಗ ಸ್ವಲ್ಪ ಕೆಲಸ ಆಗೋದಿತ್ತು. ಮಾಡ್ತಾಳೇನೂ?' ಶ್ರೀನಿಗೆ ಈ ಸಮಯಕ್ಕಿಂತ ಮತ್ತೊಂದು ದೊರೆಯೋದೇ ಇಲ್ಲ ಅನ್ನೋ ಹಾಗೆ ಚಾಟೀ ಬೀಸ್ತಿದ್ದರೂ, ರುಕ್ಕು ಒಳಗೊಳಗೇ ನಗು ತಡೀಲಿಕ್ಕೆ ಆಗ್ತಿರಲಿಲ್ಲ. ಪ್ರಾಯಶಃ ಆಕೆ ಊಹಿಸಿದ ರೀತಿಯೇ ಶ್ರೀನಿಯ ಮಾತುಗಳು, ಸನ್ನಿವೇಶ ಇದ್ದಿದ್ದರಿಂದ ಆಕೆಗೆ ನಗು ಬರುತ್ತಿತ್ತೋ ಏನೋ! 

'ಅಂಥದ್ದೇನೂ ಇಲ್ಲ. ಈ ಟ್ಯಾಬ್ಲೆಟ್ ಹಾಕಿ. ಹಾಗೆ ಕ್ರೇಪ್ ಬ್ಯಾಂಡೇಜ್ ಕಟ್ಕೋಳಿ ಬೇಕಾದ್ರೆ. ಇನ್ನು ಒಂದು ವಾರ ಜಾಸ್ತಿ ಓಡಾಡಬೇಡಿ' ಡಾಕ್ಟರ್ ಸಲಹೆ ನೀಡಿದ್ರು. 

ಶ್ರೀನಿ ಓರೆಗಣ್ಣಿನಿಂದ 'ಏನಮ್ಮಾ ಪ್ರಯೋಜಕಳೇ' ಅನ್ನೋ ರೀತಿ ರುಕ್ಕುವನ್ನ ನೋಡ್ತಿದ್ದ ಹಾಗೆ ಅವಳಿಗೆ ಭಾಸವಾಯ್ತು. ರುಕ್ಕುವಿಗೂ ನಗು ತಡೀಲಿಕ್ಕೆ ಆಗ್ತಿರಲಿಲ್ಲ. 
'ಇಷ್ಟೊಂದು ದೊಡ್ಡ ಟ್ಯಾಬ್ಲೆಟ್ ಇದೆಯಲ್ಲೋ. ಹೆಂಗೋ ನುಂಗೋದು' ಶ್ರೀನಿಗೆ ರುಕ್ಕು ಕೇಳಿದ್ಲು. ಆಕೆಗೆ ಟ್ಯಾಬ್ಲೆಟ್ ನುಂಗೋದು ಅಂದ್ರೆ ಕಷ್ಟ ಸಾಧ್ಯ. 
'ನುಂಗಿಸ್ತೀನಿ ನುಂಗಿಸ್ತೀನಿ ಬಾ. ಈ ಡಾಕ್ಟರ್ ಹತ್ರ ಅಪ್ಪನ್ನೂ ಕರ್ಕಾಂಡ್ ಬಂದಿದ್ದೆ ಕಾಲು ಉಳ್ಕಿದ್ದಾಗ. ಅಂಥ ಏನು ವರ್ಕೌಟ್ ಆಗಲಿಲ್ಲ' ಶ್ರೀನಿ ಬೇಕೂ ಅಂತಲೇ ರುಕ್ಕೂನ ಕಿಚಾಯಿಸಿದ. 
'ಅಂದ್ರೆ.. ಹೀಗೆ ಹೋಗೋ ವರ್ಗೂ ನಿನ್ಹತ್ರ ಸೇವೆ ಮಾಡಿಸ್ಕೋಬೇಕು ಅಂತಲೋ..ಬ್ಯಾಡವೇ ಬ್ಯಾಡ' ಅಂತ ಶ್ರೀನಿಯ ಕೈಯನ್ನ ಬಿಟ್ಟು ಹೆಜ್ಜೆ ಇಡೋಕ್ಕೆ ನೋಡಿದ್ಲು. ಆಗಲಿಲ್ಲ. ಮತ್ತೆ ಅವನ ಕೈ ಹಿಡ್ಕೊಂಡ್ಲು. 

'ಹಾಗ್ ಬಾ ದಾರೀಗೆ..' ಶ್ರೀನಿ ಜೋರಾಗಿ ನಕ್ಕ. 

No comments:

Post a Comment