ಬಿಸಿಲಿನ ಝಳಪಿಗೆ ಶಾಮಿಯಾನದ ಕೆಳಗೆ ಕೂತಿದ್ದವರೆಲ್ಲಾ ಬೆವೆತು ಹಾಗೆಯೇ ಬಿಟ್ಟಿದ್ದಲ್ಲಿ ಬೆವರಲ್ಲೇ ಬೆಂದು ಹೋಗುತ್ತಿದ್ದರೆಂದರೆ ಅಷ್ಟು ಬಿಸಿಲು ನಿಜವಾಗಿಯೂ ಇತ್ತು. ಬೆಳಕಿನ ಹರಿವಿಗೆ ಕಣ್ಣುಗಳ ಪ್ಯೂಪಿಲ್ ಚಿಕ್ಕದಾಗಿ ಏಕಾಏಕಿ ಕಡಿಮೆ ಬೆಳಕಿದ್ದ ಒಳಜಾಗಗಳಿಗೆ ಹೋದಾಗ ಕಣ್ಣು ಮಬ್ಬಾಗಿ ಒಂದೆರೆಡು ನಿಮಿಷ ಸುತ್ತೆಲ್ಲಾ ಕತ್ತಲು ಆವರಿಸುತ್ತಿದ್ದುದಂತೂ ಹೌದು. ಬೆಳಗ್ಗೆ ಮನೆ ಬಿಟ್ಟಾಗ ನೀರು ಕುಡಿದದ್ದು. ನೀರಿನ ಬಾಟೆಲ್ಲನ್ನು ಮನೆಯಲ್ಲಿ ಮರೆತು ಬಂದದ್ದಕ್ಕೆ ಶಪಿಸಿಕೊಳ್ಳುತ್ತಾ, ಹತ್ತಿಪ್ಪತ್ತು ನಿಮಿಷಗಳಿಗೆ ಎದ್ದು ಹೋಗಿ ನೀರು ಕುಡಯುತ್ತಿದ್ದ ಸದಾನಂದನಿಗೆ ಮತ್ತೊಮ್ಮೆ ಹುಬ್ಬು ಮೇಲೆರಿಸಿ 'ಪ್ಟ್ಚ್..' ಎಂದು ತನ್ನಲ್ಲೇ ಲೊಚಗುಟ್ಟುವಂತಾಯ್ತು.
'ನಾಳೆ ಇಷ್ಟು ಹೊತ್ತಿಗೆಲ್ಲಾ ಒಂದಿನ್ನೂರು ಬಿದ್ದಿರಬೋದು. ನಾಳಿದ್ದು ಇಷ್ಟು ಹೊತ್ತಿಗೆ ಕಾಲೇಜಲ್ಲಿರ್ತೇನೆ' ಎಂದು ತನ್ನಲ್ಲೇ ಹೇಳಿದ್ದನ್ನೇ ಪುನರಾವರ್ತಿತವಾಗಿ ಹೇಳಿಕೊಳ್ತಾ ಇದ್ದ. ವಿಶಾಲ ಅಂತರಿಕ್ಷದಲ್ಲಿ ಒಬ್ಬನೇ ಗುರಿಯಿಲ್ಲದ ವಿಹಾರಿಯಂತೆ ಭಾಸವಾಗುತ್ತಿತ್ತು ಆತನಿಗೆ. 'ಸರ್..' ಹೆಗಲ ಮೇಲೆ ಒಮ್ಮೆ ಕೈ ಬಡಿದು, ನಾಗೇಶ್ವರ್ ಹೇಳಿದರು 'ಯೋಚಿಸ್ಬೇಡಿ. ಬನ್ನಿ.. ಕಾಮ್ ಆಗಿರಿ. ನೀರಿಗೆ ಇಳಿದಾಯ್ತು. ಈಜದೇ ಹೇಗೆ ದಡ ಸೇರೋದು? ಯಾರಾದ್ರೂ ಬರಲಿ ಅಂತ ಕಾಯ್ತಾ ಕೂರೋ ಅಷ್ಟರಲ್ಲಿ ಮುಳುಗಿ ಹೋಗ್ತೇವೆ. ಬನ್ನಿ ಬನ್ನಿ.. ಯೋಚಿಸ ಬೇಡಿ..'
ರಾಮು ಹಾಗೂ ಮುಖೇಶ್ ಸಹ ಬಂದಿದ್ದರು. ಅವರಿನ್ನು ಯಾವ ಪೋಲಿಂಗ್ ಸ್ಟೇಷನ್ ಎಂದು ನೋಡಿರಲಿಲ್ಲ. '124' ಸದಾನಂದ ಸ್ವಲ್ಪ ಅಸಡ್ಡೆಯಿಂದ ಹೇಳಿದ. ಸುಮ್ಮನೆ ಗಲ್ಲದ ಮೇಲೆ ಕೈ ಇಟ್ಟುಕೊಂಡು ಎತ್ತಲೋ ನೋಡುತ್ತ ಕುಳಿತಿದ್ದ. ಕಳೆದ ವರ್ಷದ ಎಲೆಕ್ಷನ್ ಡ್ಯೂಟಿಯ ಪ್ರಹಸನಗಳು ಕಣ್ಣ ಮುಂದೆ ಹಾದು ಹೋಗುತ್ತಿತ್ತು. ಅದು ಮೊದಲನೆಯ ಡ್ಯೂಟಿ. ಕೊಂಚ ಕುತೂಹಲ, ಕೊಂಚ ಭಯ, ಅತೀವ ಉತ್ಸಾಹ. ಎರಡು ಟ್ರೈನಿಂಗ್ ಗಳಲ್ಲಿಯೂ ಅತೀವ ಆಸಕ್ತಿಯಿಂದ ಪ್ರಶ್ನಿಸುತ್ತಾ, ಪ್ರತಿಯೊಂದಕ್ಕೂ ತರ್ಕ ಹುಡುಕುತ್ತಾ, ಸಕ್ರಿಯವಾಗಿ ತನ್ನನ್ನ ತೊಡಗಿಸಿಕೊಂಡಿದ್ದ. ಆದರೆ ಹೇಗೆ ಈಜೋದು ಅಂತ ಕೇಳಿಸಿಕೊಂಡರೆ ಸಾಲದಲ್ಲ. ಮೈಯನ್ನ ಬಳುಕಿಸಿಯೇ, ಈಜಿಯೇ ಕಲಿಯಬೇಕು. ಮತಗಟ್ಟೆಯ ವಾತಾವರಣ ಎಷ್ಟೇ ಶಾಂತವಾಗಿದ್ದರೂ, ತಾನೆಷ್ಟೇ ಶ್ರದ್ಧೆಯಿಂದ ಕೆಲಸ ಮಾಡ್ತೇನೆ ಅಂತ ಅಂದುಕೊಂಡರೂ, ಸನ್ನಿವೇಶಗಳ ಹಿಡಿತಕ್ಕೆ ಒಳಗಾಗಿ, ಏನೂ ಮಾಡಲು ತೋಚದ ಅಸಹಾಯಕ ಸ್ಥಿತಿಗಳೂ ಎದುರಾಗಬಾಹುದು ಎನ್ನುವುದು ಅರಿವಾಗುವುದು ಅವುಗಳು ಅನುಭವಕ್ಕೆ ಬಂದಾಗ ಮಾತ್ರ. ಜೀವನದ ಮೊದಲ ಎಲೆಕ್ಷನ್ ಡ್ಯೂಟಿಯಲ್ಲೇ ಸಾಕಷ್ಟು ಹೊಸ, ಕಷ್ಟಕರವಾದ ಅನುಭವಗಳು ಎದುರಾದವು. ಸದಾನಂದನಿಗೆ ನಿದ್ದೆ ಆವರಿಸಿಬಿಟ್ಟಿತ್ತು. ಗಲ್ಲದ ಮೇಲಿದ್ದ ಕೈ ಹಾಗೇ ಇತ್ತು. ಉಸಿರಿನ ಪ್ರವಾಹ ಇದ್ದಕ್ಕಿದ್ದ ಹಾಗೆ ಹೊರ ಹರಿಯಲು ಎಚ್ಚರಾಯಿತು. ಎಲ್ಲರೂ ತಂತಮ್ಮರೂಮುಗಳಿಗೆ ತೆರಳಿ ಎಂದು ಗಟ್ಟಿಯಾಗಿ ಘೋಷಿಸುತ್ತಾ ಇದ್ದರು. 'ರೂಂ 18, ಹೊಸ ಬಿಲ್ಡಿಂಗ್'. ಸದಾನಂದ ತನ್ನ ಸಹ ಅಧಿಕಾರಿಗಳಿಗೆ ಹೇಳಿ ಎಲ್ಲರೂ ರೂಂ 18ಕ್ಕೆ ಹೊರಟರು.
ಬೆಳ್ಳಂಬೆಳಿಗ್ಗೆ ಕಾರಿನಲ್ಲಿ ತನ್ನೊಟ್ಟಿಗೆ ತನ್ನ ಟೀಮಿನ ನಾಗೇಶ್ವರ್, ಹಾಗೆ ಇನ್ನಿಬ್ಬರು ಬೇರೆ ಬೇರೆ ಪೋಲಿಂಗ್ ಪಾರ್ಟಿಯವರು ಹೊರಟಿದ್ದರು. ದಾರಿಯಲ್ಲೆಲ್ಲಾ ಹಿಂದಿನ ವಿಧಾನ ಸಭೆ ಚುನಾವಣೆಯ ಅನುಭವಗಳನ್ನ, ತಮ್ಮ ತಮ್ಮ ರಾಜಕೀಯ ಅಭಿಪ್ರಾಯಗಳನ್ನ ನಿರ್ಭಯವಾಗಿ ಮನಸೊ ಇಚ್ಛೆ ಹೇಳಿಕೊಳ್ಳುತ್ತಾ ಆನಂದಿಸುತ್ತಿದ್ದರು. ಒಬ್ಬರು ಹೇಳಿದ್ದಕ್ಕೆ ಇನ್ನೊಬ್ಬರು ಲೊಚಗುಟ್ಟುತ್ತಲೋ ಅಥವಾ 'ಅದೇನ್ ಹೇಳ್ತೀರ ಇದು ಕೇಳಿ' ಅಂತ ಇನ್ನೊಂದು ಶುರು ಮಾಡುತ್ತಾ ತಮ್ಮ ಮಸ್ಟರಿಂಗ್ ಸೆಂಟರ್ ಬಂದದ್ದೇ ತಿಳೀಲಿಲ್ಲ. ಎಲ್ಲರಿಗೂ ಇದ್ದ ಒಂದೇ ಕುತೂಹಲ, ಉತ್ಸಾಹ, ತಮ್ಮ ತಮ್ಮ ಮತಗಟ್ಟೆ ಯಾವುದೆಂದು ತಿಳಿಯೋದು. ತನ್ನ ಕಾರಿನಲ್ಲಿ ಬಂದ ಇತರರಿಬ್ಬರಿಗೂ ರಿಸರ್ವ್ ಬಿದ್ದಿದೆಯೆಂದು ತಿಳಿದು ಸದಾನಂದನಿಗೂ, ನಾಗೇಶ್ವರನಿಗೂ ಕೊಂಚವಾದರೂ ಹೊಟ್ಟೆಕಿಚ್ಚಾಯಿತು. ಮತಗಟ್ಟೆಯ ನಿಯೋಜನೆಯ ವಿವರಗಳನ್ನ ಹೊರಗೆ ಒಂದು ದೊಡ್ಡ ಕಪ್ಪು ಹಲಗೆಯ ಮೇಲೆ ಅಂಟಿಸಲಾಗಿತ್ತು.
'ನಮ್ಮದು ಎಷ್ಟು?' ನಾಗೇಶ್ವರ್ ಕೇಳಿದರು.
'ಪ್ಚ್..' ಲೊಚಗುಟ್ಟಿ '124' ಸದಾನಂದ ಹೇಳಿದ.
'ಯಾವುದು ಬರತ್ತೋ...' ನಾಗೇಶ್ವರ್ ಹೇಳಿದರು.
'ರಾಮನಳ್ಳಿ... ಕಳೆದ ಚುನಾವಣೇಲಿ 972 ವೋಟರ್ ಗಳು' ಸದಾನಂದ ಕ್ಷಣಾರ್ಧದಲ್ಲೇ ಎಲ್ಲಾ ವಿವರ ಕಲೆ ಹಾಕಿದ್ದ.
'ರಾಮನಳ್ಳಿನಾ...?' ಅಲ್ಲೇ ಪಕ್ಕದಲ್ಲೊಬ್ಬ ಬೈಕ್ ಹತ್ತುತ್ತಿದ್ದವ ಒಬ್ಬ ಆಶ್ಚರ್ಯದಿಂದ ಕೇಳಿದ. ಆತ ಹಾಕಿದ್ದ ಐಡಿ ಕಾರ್ಡಿನಿಂದಲೇ ಹೇಳಬೋದಿತ್ತೇನೋ ಆತನೊಬ್ಬ ಸೆಕ್ಟರ್ ಆಫೀಸರೆಂದು.
'ಯಾಕೆ ಆಶ್ಚರ್ಯದಿಂದ ಕೇಳಿದ್ರಿ?' ಸದಾನಂದನಿಗೂ ಆಶ್ಚರ್ಯವಾಯ್ತು.
'ಏನಿಲ್ಲಾಪ್ಪ. ಸ್ವಲ್ಪ ಹುಷಾರಾಗಿರಿ ಅಷ್ಟೆ' ಆತ ಬೈಕ್‌ಶುರು ಮಾಡಿದ.
'ಸಾರ್ ... ಹಾಗಂದ್ರೇನೂ ಸಾರ್...' ನಾಗೇಶ್ವರ್ ಕಣ್ಣು ಅರಳಿತು.
'ಹೇ ಛೇ ಏನಿಲ್ಲಾರೀ. ಮಾಮೂಲಿ ಹೇಳೋ ಹಾಗೆ ಹೇಳಿದೆ ಅಷ್ಟೆ..' ಆತ ಬುರ್ರೆಂದು ಹೊರಟೇ ಬಿಟ್ಟ.
ಸದಾನಂದ ನಾಗೇಶ್ವರ್ ಇಬ್ಬರೂ ಕಣ್ ಕಣ್ ಬಿಟ್ಟು ನೋಡ್ತಾ ಇದ್ದರಷ್ಟೇ. 'ಏನ್ ಸಾರ್ ಹೀಗಂದ್ಬಿಟ್ಟ..' ಸದಾನಂದನಿಗೆ ಮೊದಲಿಗೆ ದಿಗಿಲಾಗಲು ಈ ರೀತಿಯ ನಾಗೇಶ್ವರ್ ಅವರ ಪ್ರಶ್ನೆಗಳೂ ಒಂದು ರೀತಿ ಕಾರಣವೇ. ಏನೂ ಹೇಳಲು ತೋಚದೆ - 'ಹಂ...' ಎಂದು ಹೂಂಕರಿಸಿ ಇಬ್ಬರೂ ಶಾಮಿಯಾನಾದ ಕಡೆ ಹೊರಟಿದ್ದರು. ಇದ್ದಕ್ಕಿದ್ದ ಹಾಗೇ ಸದಾನಂದ ತಡೆದ -'ಸಾರ್ ಬನ್ನಿ ಇಲ್ಲಿ' ಅಂತ ಅಲ್ಲೇ ಇದ್ದ ದೊಡ್ಡ ಕಪ್ಪು ಹಲಗೆಯ ಇನ್ನೊಂದು ಬದಿಗೆ ಕರೆದೊಯ್ದ. '124..' ಸದಾನಂದನಿಗೆ ಒಮ್ಮೆಲೆ ನಗು ಬಂತು. 'ಏನ್ ಸಾರ್ ನಮ್ಮಪರಿಸ್ಥಿತಿ!' ಎಂದು ನಗಲಾರಂಭಿಸಿದ.
'ಯಾಕ್ ಸಾರ್ ಏನಾಯ್ತು?' ನಾಗೇಶ್ವರ್ ಕೇಳಿದ.
'ಹಾ ಹಾ... ನೋಡಿ ನಮಗೊಬ್ಬ ಮೈಕ್ರೋ ಅಬ್ಸರ್ವರ್ ಸಹ ಇದ್ದಾನೆ. ನಾನು ಅದೆಲ್ಲಾ ಯಾರಿರ್ತಾರೆ ಅಂತ ಅದರ ಬಗ್ಗೆ ಅಷ್ಟಾಗಿ ಓದಿಕೊಳ್ಳಿಲ್ಲ. ಈಗ ಅದನ್ನೂ ನೊಡಕೋಬೇಕಾ?!' ಎಂದು ಮತ್ತೆ ತನ್ನ ಪರಿಸ್ಥಿತಿಯ ಬಗ್ಗೆ ನಗು ಬಂದಿತು. ಎಷ್ಟು ಸುಲಭವಾಗಿದ್ದರಷ್ಟೇ ಸಾಕು ಎಂದುಕೊಂಡು ಬಂದೋರಿಗೆ ಎಲ್ಲವೂ ತೊಡಕುಗಳೇ ಎದುರಾದಂತನಿಸಿ ನಗೂವೂ ಬರ್ತಾ ಇತ್ತು, ಹಾಗೆ ಒಳಗೊಳಗೇ ಅಧೈರ್ಯವೂ ತಾಳುತ್ತಿತ್ತು.
ಇಬ್ಬರೂ ಶಾಮಿಯಾನದ ಬಳಿ ಹೋಗಲು ನಾಗೇಶ್ವರರಿಗೆ ಪರಿಚಯದೋರೊಬ್ಬರು ಸಿಕ್ಕು ತಮಗೂ ಸಹಾ ರಿಸರ್ವ್ ಅಂತ ಹೇಳಿದ್ದು ಕೇಳಿ ಇಬ್ಬರಿಗೂ 'ಥೋ..' ಎನ್ನುವಂತಾಯಿತು. ಅಷ್ಟರಲ್ಲಿ ಕಾರಲ್ಲಿ ತಮ್ಮೊಟ್ಟಿಗೆ ಬಂದಿದ್ದ ಕೃಷ್ಣ ಎದುರಾಗಿ ತಾನು ತಪ್ಪಾಗಿ ನೋಡಿದ್ದು ತನಗೆ ರಿಸರ್ವ್ ಅಲ್ಲವೆಂದು ಹೇಳಿದಾಗ ಸ್ವಲ್ಪ ಸಮಾಧಾನವೂ ಆದಂತಾಯಿತು. ಸದಾನಂದನ ಪಿ.ಯು. ಸ್ನೇಹಿತನೊಬ್ಬ ಅಲ್ಲೇ ಪಕ್ಕದ ಊರಲ್ಲೇ ಅಸಿಸ್ಟೆಂಟ್ ಎಂಜಿನೀರ್ ಆಗಿ ಕೆಲಸ ಮಾಡ್ತಿದ್ದವ ಒಬ್ಬ ಈಗ ಸೆಕ್ಟರ್ ಆಫೀಸರಾಗಿದ್ದ. ಸದಾನಂದನಿಗೆ ಆತ ಪಿ.ಯು. ಆದ ನಂತರ ಮತ್ತೆ ಸಿಕ್ಕದ್ದೆ ಈ ಎಲೆಕ್ಷನ್ನಿನ ಎರಡನೇ ಟ್ರೈನಿಂಗ್ ವೇಳೆ. ಫೋನ್ ನಂಬರ್ ಈಸುಕೊಂಡಿದ್ದ ಸದಾನಂದ ಒಮ್ಮೆ ಆತನಿಗೆ ಫೋನ್ ಹಚ್ಚಿದ.
'ವೆಂಕಟ..' ಸದಾನಂದ ಶುರು ಮಾಡೋದ್ರೊಳಗೆ ವೆಂಕಟ ಕೇಳಿದ 'ಎಲ್ಲಮ್ಮ ನಿಂಗೆ? ಎಲ್ ಬಿದ್ರೇನ್ ಬಿಡು ನಿಂಗೆ. ಆರೇಳ್ ಪೋಲಿಂಗ್ ಸ್ಟೇಷನ್ ಕೊಟ್ರು ಎಲ್ಲಾದನ್ನೂ ನಿಭಾಯಿಸಿ ಬಿಡ್ತೀಯ.' ವೆಂಕಟನಿಗೆ ಪಿ.ಯು.ದಿನಗಳಲ್ಲಿ ಸದಾನಂದನೆಂದರೆ ಬಾರಿ ಮೆಚ್ಚುಗೆ ಇತ್ತು. ಪರೀಕ್ಷೆಗಳಲ್ಲಿ ಹತ್ತಿರತ್ತಿವೇ ಕೂಡ್ತಿದ್ರಿಂದ ಸುಮಾರು ಪರೀಕ್ಷೆಗಳಲ್ಲಿ ಸದಾನಂದನ ದೆಸೆಯಿಂದ ತನ್ನದು ಪಾಸ್ ಆಗಿದ್ದನ್ನ ಈಗಲೂ ನೆನಪಿಸಿಕೊಂಡು ನಗ್ತಾ ಇದ್ದ.
'ನಂದು ರಾಮೇನಳ್ಳಿ ಕಣೋ.. ನಿನ್ನ ಸೆಕ್ಟರ್ ಒಳಗೆ ಬರ್ತದಾ?' ಸದಾನಂದ ಕೇಳಿದ.
'ಯಾವುದು ರಾಮೇನಳ್ಳಿಯ? ಇಲ್ಲಾಪ್ಪಾ ಇಲ್ಲಾಪ್ಪಾ' ವೆಂಕಟ ಹೇಳಿದ್ದು ಕೇಳಿ ಮತ್ತೆ ಸದಾನಂದನಿಗೆ ಗೊಂದಲವಾದಂತಾಯ್ತು.
'ಯಾಕಯ್ಯ ಹೆದರಿಕೊಂಡಂಗೆ ಅದೆನೋ ಅದು ನಿನಗೆ ಸಿಕ್ಕಿದ್ರೆ ಅಪಾಯವಾಗ್ತಿತ್ತು ಅನ್ನೋ ಹಾಗೆ ಹೇಳ್ತೀಯ?' ಸದಾನಂದ ಮತ್ತೆ ಗಾಬರಿಯಿಂದ ಕೇಳಿದ.
'ಹೇ ಹಾಗೇನಿಲ್ಲಾಮ್ಮ. ಅದು ನಂಗೆ ಬರೋಲ್ಲ. ನೀ ಏನ್ ಯೋಚಿಸ್ಬೇಡ. ಎಲ್ಲಾ ಚೆನಾಗೇ ಆಗತ್ತೆ. ನೀನಿದ್ಮೇಲೆ ಆಗ್ಲೇಬೇಕಲ್ಲ' ವೆಂಕಟ ಹೇಳಿದ.
ಸದಾನಂದನಿಗೆ ವೆಂಕಟನ ಮಾತಿನ ಮೇಲೂ ಗುಮಾನಿ ಎದ್ದಿತು - ಎಲ್ಲಾ ಯಾಕೆ ಹೀಗೆ ಹೇಳ್ತಿದ್ದಾರೇಂತ. ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು ಹೂಂಕರಿಸಿ 'ಆಯ್ತು ಏನಾದ್ರು ಸಹಾಯ ಇದ್ರೆ ಕೇಳ್ತೇನೆ' ಅಂತ ಸದಾನಂದ ಕಟ್ ಮಾಡಿದ.
'ನಾನೇ ನಿನ್ನ ಸಹಾಯ ಕೇಳ್ತೀನಯ್ಯ ಬೇಕಾದ್ರೆ..' ಅನ್ನೋ ವೆಂಕಟನ ಮಾತನ್ನ ಅಷ್ಟಾಗಿ ಗಂಭಿರವಾಗಿ ತೆಗೆದುಕೊಳ್ಳದೇ ಅವನು ಮುಗಿಸುವ ವೇಳೆಗೆಯೇ ಕಟ್ ಮಾಡಿದ್ದ.
ಬಿಸಿಲು ಏರುತ್ತಲೇ ಇತ್ತು. ಮಧ್ಯಾಹ್ನದ ಊಟ ಅಷ್ಟಾಗಿ ಸೇರಲಿಲ್ಲ. ರೂಮ್ 18ರಲ್ಲಿ ಎಲೆಕ್ಷನ್ನಿಗಾಗಿ ಎಲ್ಲಾ ಸಾಮಗ್ರಿಗಳನ್ನ ಸ್ವೀಕರಿಸಿ ಒಬ್ಬೊಬ್ಬರೆ ಊಟಕ್ಕೆ ಹೋಗ್ತಿದ್ದರು. ತನ್ನ ಜೊತೆ ಕಾರಲ್ಲಿ ಬಂದಿದ್ದ ವಿನೀತ್ ಅವರಿಗೆ ಇನ್ನೂ ಯಾವುದೇ ಪೋಲಿಂಗ್ ಸ್ಟೇಷನ್ ದೊರೆತಿರಲಿಲ್ಲ. 'ನೀವು ಪುಣ್ಯವಂತರು ಬಿಡಿ ಸಾರ್' ಎಂದು ಪಾಪ ಪುಣ್ಯಗಳ ಬಗ್ಗೆ ನಂಬಿಕೆ ಇಲ್ಲದಿದ್ದರೂ, ಹೊಟ್ಟೆ ಉರಿಯ ಕಾರಣವಾಗಿಯೋ ಏನೋ ಸದಾನಂದ ಊಟ ಮಾಡುತ್ತಾ ಅವರಿಗೆ ಹೇಳಿದ. ಅವರು ಬೇಕಂತಲೇ 'ನಿಮಗಿನ್ನೊಂದು ಹೇಳಲಾ..? ನನ್ನ ಹೆಂಡತಿಯೂ ಸಹ ರಿಸರ್ವ್..' ಅಂದಾಗ ಸದಾನಂದ 'ಸಾರ್...' ಎಂದು ಕಣ್ಣರಳಿಸಿ ನಕ್ಕ. ಊಟ ಮುಗಿಸಿ ತತ್ ಕಷ್ಣವೇ ಸಾಮಗ್ರಿಗಳನ್ನೆಲ್ಲಾ ಒಮ್ಮೆ ಪರಿಶೀಲಿಸಿಕೊಂಡು ಬಸ್ ಏರಬೇಕಿತ್ತು. ಆ ಸೆಕೆಯ ನಡುವೆ, ಏನೇನೋ ಆಲೋಚನೆಗಳು ಸಮ್ಮಿಳಿತವಾಗಿ ಮೈ ಮನಸ್ಸುಗಳೆರೆಡು ಕುದಿಯಲಾರಂಭಿಸಿದ್ದವು. 'ರೂಟ್ ನಂ 14' ಎನ್ನುವ ಬೋರ್ಡನ್ನ ನೋಡಿ ಸದಾನಂದನ ತಂಡ ಹತ್ತಿತು. 'ನಾಳೆ ಇಷ್ಟೊತ್ತಿಗೆ ಒಂದು 600 ಆದ್ರೂ ಅಪೇಕ್ಷಿಸಬೋದು. ನಾಳಿದ್ದು ಈ ಹೊತ್ತಿಗೆಲ್ಲಾ ಮನೆಯಲ್ಲಿ ಇರ್ತೇನೆ' ಅಂತ ಮತ್ತೊಮ್ಮೆ ಮನಸ್ಸೊಳಗೆ ಪ್ರವರ ಹೇಳಿಕೊಂಡು ಬಸ್ ಹತ್ತಿ ಕೂತ ಸದಾನಂದ.
'ಎಲ್ಲಾ ಬಂದ್ರಾ?' ಬಸ್ಸಿನ ಡ್ರೈವರ್ ಒಮ್ಮೆ ಕೂಗಿದ. ಅಲ್ಲೇ ಇದ್ದ ರೂಟ್ ಆಫೀಸರ್ ಒಮ್ಮೆ ಒಂದೊಂದೆ ಪೋಲಿಂಗ್ ಸ್ಟೇಷನ್ ನಂಬರ್ ಕೂಗಿದ - 'ನಾನು ಕೂಗ್ತಾ ಹೋಗ್ತೇನೆ. ಪೋಲೀಸಿನೋರಿನ ಸಮೇತ ಆ ಪೋಲಿಂಗ್ ಸ್ಟೇಷನ್ನಿನ ಎಲ್ಲಾ ಸಿಬ್ಬಂದಿಗಳು ಕೈ ಎತ್ತಿ' ಎಂದು ಕೂಗಲಾರಂಭಿಸಿದ. ಅಚ್ಚರಿಯೆಂಬಂತೆ '124' ಕ್ಕೆ ಇಬ್ಬರು ಪೋಲೀಸರು ಕೈ ಎತ್ತಿದರು. 'ಮಂಜುನಾಥ' - ತನ್ನ ಪರಿಚಯ ಮಾಡಿಕೊಂಡ ಪೋಲೀಸ್ ಸದಾನಂದನ ಪಕ್ಕಕ್ಕೆ ಅತ್ತ ಬದಿಯೇ ಕೂತಿದ್ದ. ಇನ್ನೊಬ್ಬಾತ 'ಗಣಪತಿ' ಮುಂದೆ ಕೂತಿದ್ದ. ಆತನೇ ಸದಾನಂದನ ತಂಡದ ಅಧೈರ್ಯ ಇಮ್ಮಡಿಗೊಳ್ಳಲಿಕ್ಕೆ ಕಾರಣ.
'ಸಾಮಾನ್ಯ ಸ್ವಲ್ಪ sensitive ಇದ್ದಾಗ ಎರಡೆರಡು ಪೋಲೀಸ್ ಹಾಕಿರ್ತಾರೆ ಸರ್' ಎಂದು ತನ್ನ ಅಡಿಕೆ ರಸ ತುಂಬಿದ ಬಾಯನ್ನ ಸ್ವಲ್ಪ ಮೇಲಕ್ಕೆತ್ತಿ ಹೇಳಿದ. ನಾಗೇಶ್ವರ್ ಅವರ ಮುಖ ನೋಡಿ ಸದಾನಂದ ಇನ್ನೊಮ್ಮೆ ಹಣ್ಣೆ ಮೇಲೆ ಕೈ ಇಂದ ಗೆರೆ ಎಳೆದಂತೆ ತೋರಿ -'ಇಷ್ಟೆ ಹಣೆ ಬರಹ' ಎಂದು ನಕ್ಕ.
'ನೀವೇನ್ ಮಲ್ನಾಡೋರೋ.?' ಬಸ್ ಹೊರಡ್ತಾ ಪೋಲೀಸೋನ್ನ ಕೇಳಿದ.
'ತೀರ್ಥಹಳ್ಳೀರಿ..' ಪೋಲೀಸ್ ಅಂದ.
'ಗೊತ್ತಿತ್ತು. ನಿಮ್ಮ ಚಟ ನಿಮ್ಮ ಜಾತಕಾನೆ ಹೇಳತ್ತೆ' ಅಂತ ಸದಾನಂದ ನಕ್ಕ. 'ಆದರೆ ಇವತ್ತು ಅಲ್ಲಿ ಹೋದ ಮೇಲೆ, ಇವತ್ತು ನಾಳೆ ಎರಡು ದಿವಸ ಇದನ್ನ ಸ್ವಲ್ಪ ಕಡಿಮೆ ಮಾಡಿ' ಆತ ಪಾನ್ ಹಾಕ್ತಾ ಇದ್ದದ್ದನ್ನೂ ಗಮನಿಸಿದ ಸದಾನಂದ ಹೇಳಿದ.
'ಅಯ್ಯೋ ಹೌದಾ.... ಆಗಲಿ' ಆತ ಅದು ಸಾಧ್ಯವೇ ಅನ್ನುವ ಹಾಗೊಮ್ಮೆ ಉದ್ಗರಿಸಿ ಸುಮ್ಮನಾದ.
ಸದಾನಂದನಿಗೆ ನಿಧಾನಕ್ಕೆ ಕೆಲವೊಂದು ಈಗ ಅರಿವಿಗೆ ಬರುತ್ತಾ ಹೋಯಿತು. ಕಳೆದ ಬಾರಿಯೂ ಆತನ ಮತಗಟ್ಟೆಗೆ ಎರಡೆರಡು ಪೋಲೀಸ್ ಇದ್ದದ್ದು ವಿಶೇಷವಾಗಿ ನೆನಪಾಯಿತು. ಕಳೆದ ಬಾರಿ ಒಂದು ಸಿ ಆರ್ ಪಿ ಎಫ್ ಇದ್ದದ್ದು. ಅದರ ನಡೆವೆಯೂ ದಿನದ ಕೊನೆಯ ವೇಳೆಗೆ ಉಂಟಾದ ಘರ್ಷಣೆಗಳು ಈಗಲು ಕಣ್ಣಿಗೆ ಕಟ್ಟಿದಂತಿವೆ ಸದಾನಂದನಿಗೆ. ಸರಿಯಾಗಿ ಮೂರು ವರೆ ನಾಲ್ಕರ ಸಮಯಕ್ಕೆ ಮತಯಂತ್ರ ಕೆಟ್ಟುಹೋಗಿ ಮತ್ತೇ ಅದನ್ನ ಬದಲಿಸಬೇಕಾಗಿ ಬಂದು, ಅಷ್ಟರಲ್ಲಾಗಲೇ ಜನ ಮತಗಟ್ಟೆಯೊಳಗೆ ಜಮಾಯಿಸಿ ಇಲ್ಲೇನೋ ನಡೆಯಬಾರದ್ದು ನಡೀತಿದೇಂತ ಗುಲ್ಲೆಬ್ಬಿಸಿ ಅದರಲ್ಲೆ ಒಂದಷ್ಟು ಹೊತ್ತು ಸುಖ ಕಂಡಿದ್ದರು. ಕೊನೆಗೆ ಚುನಾವಣಾ ಸಮಯದ ಮುಕ್ತಾಯದ ಮೇಲೂ 100 ಕ್ಕೂ ಹೆಚ್ಚು ಜನರಿದ್ದು, ಅವರ ತಳ್ಳಾಟಗಳನ್ನ, ಬೈಗುಳಗಳನ್ನ, ಸಾರಾಯಿಯ ದುರ್ನಾತವನ್ನ ತಡೆಯಲಾಗದೆ ಕೊನೆಗೆ ಸೆಕ್ಟರ್ ಆಫೀಸರನ್ನೇ ಸದಾನಂದ ಕರೆಸಿಕೊಳ್ಳಬೇಕಾಯ್ತು. ಇದರ ನಡುವೆಯೇ ಒಬ್ಬಾಕೆ ಜಗಳಕ್ಕೆ ನಿಂತಿದ್ದಳು. ತಾನು ವೋಟ್ ಹಾಕಿಲ್ಲವೆಂದೂ ಆದರೆ ಈಗಾಗಲೇ ತನ್ನ ವೋಟನ್ನ ಬೇರೆ ಯಾರೋ ಹಾಕಿದ್ದಾರೆಂದು ಈಗ ತಾನು ಹಾಕಿಯೇ ತೀರಬೇಕೆಂದು ಗಲಾಟೆ ಎಬ್ಬಿಸಲಾರಂಭಿಸಿದ್ದಳು. ಇದು ಹೀಗೆ ಬಿಟ್ಟರೆ ಇನ್ನುಳಿದವರೂ ಸೇರಿಯಾರು ಈಕೆಯೊಟ್ಟಿಗೆ ಎಂದು, ಸದಾನಂದ ಒಂದು ಟೆಂಡರ್ಡ್ ವೋಟನ್ನೂ ಸಹ ಹಾಕಿಸಿದ್ದ. ಇದನ್ನೆಲ್ಲಾ ತರುವಾತ ಹೇಳಲು ಬೇರೆಯೋರು ನಿಮಗೆ ಬುದ್ಧಿ ಇಲ್ಲ. ಅನುಭವವೂ ಇಲ್ಲ ಅಂತ ಹೇಳಿದಾಗ ಸದಾನಂದನಿಗೆ ಆಗಿಂದಲೇ ಈ ವ್ಯವಸ್ಥೆಯ ಬಗ್ಗೆ ಚೂರು ಅಸಹನೆ ಮೂಡೋದರೊಟ್ಟಿಗೆ ಜನರ ಮನಃಸ್ಥಿತಿಯ ಬಗ್ಗೆಯೂ ಬೇಸರವೆನಿಸಿತ್ತು. ಈಗ ತಾನೂ ಸಹ ಅದೇ ರೀತಿ ಯಾವುದೇ ತೊಂದರೆಗಳಿಗೆ ಒಡ್ಡಿಕೊಳ್ಳಕೂಡದೆಂದು ಯೋಚಿಸ್ತಾ ಇರೋದು ನೋಡಿ ಒಮ್ಮೆ ದಿಗಿಲಾಯಿತು.
'ಛೇ.. ನೀವು ಹೇಳೋದ್ ಸರಿ ಸಾರ್. ನಾಳೆ ದಿವಸ ವೋಟಿಂಗ್ ಮುಗಿಸಿ ಇಲ್ಲಿಗೆ ಬಂದು ಮನಸ್ಸು ನಿರಾಳ ಅನಿಸ್ಬೆಕಾದ್ರೆ ಈ ಥರದ್ದು ಒಂದು ಚಾಲೆಂಜಿಗ್ ಸ್ಥಳವೇ ಬೇಕು' ಸದಾನಂದ ನಾಗೇಶ್ವರನಿಗೆ ಹೇಳಿದ. ತಾನು ಯಾವಾಗ ಹಾಗೆ ಹೇಳಿದ್ದೆ ಅನ್ನೋದು ತಿಳೀದೇ ಇದ್ರೂ, ನಾಗೇಶ್ವರ್ ಪುಂಗಿಯ ಸದ್ದಿಗೆ ಹಾವು ತಲೆದೂಗಿದಂತೆ 'ಹೂಂ..ಹೂಂ.. ಸರ್' ಎಂದು ನಿರಾಸಕ್ತಿಯಿಂದಲೇ ಹೂಂಗುಟ್ಟಿದ. 'ಆದರೂ...' ಸದಾನಂದನ ಮನಸ್ಸು ಒಳಗೊಳಗೆ ಹಪಹಪಿಸುತ್ತಿತ್ತು -'ಬೇರೆಯೋರಿಗೆ ಇರೋ ಸುಖ ತನಗೆ ಬರ್ಲಿಲ್ಲಾಯ್ತಲ್ಲ' ಅಂತ.
'ಕಳೆದ ಬಾರಿ ಸಾರ್... ' ಸದಾನಂದ ನಾಗೇಶ್ವರರಿಗೆ ಬಸ್ಸಲ್ಲಿ ಹೇಳಲಾರಂಭಿಸಿದ
'ಹಿಂದಿನ ರಾತ್ರಿ ಮಳೆ. ಅದೂ ಗುಡುಗು ಸಹಿತ ಮಳೆ'
'ಹೌದೌದು.. ನೆನಪಿದೆ' ನಾಗೇಶ್ವರ್ ದನಿಗೂಡಿಸಿದರು.
'ನಮ್ಮದು ಎಂತಾ ಪ್ಲೇಸು ಅಂದ್ಕಾಂಡ್ರಿ! ಹೆಂಚು ಸೋರ್ತಾ ಇದೆ. ಮಲಗಿದ್ದ ಜಾಗದಲ್ಲೇ ಹೆಂಚು ಸೋರ್ತಾ ಇದೆ! ಕೊನೆಗೆ ಈ ಇವಿಎಂ ಗಳನ್ನೆಲ್ಲಾ ಕವರ್ ಒಳಗೆ ಹಿಂದಿನ ದಿನಾನೆ ಭದ್ರ ಪಡಿಸ್ಕೊಂಡು, ರಾತ್ರಿಯೆಲ್ಲಾ ಹೊರಗೆಯೇ ಕೂತಿದ್ದಾಯ್ತು ನಿದ್ರೆ ಇಲ್ದೆ!' ನಾಗೇಶ್ವರ್ ಹೆಚ್ಚಾಗಿ ಕೇಳೋ ಸ್ಥಿತೀಲಿ ಇರಲಿಲ್ಲವಾದ್ದರಿಂದ ಸದಾನಂದನೂ ನಿಲ್ಲಿಸಿ ನಾಗೇಶ್ವರನ ಹಾಗೆ ಕಣ್ಣು ಮುಚ್ಚಿದ. ಅರೆ ಕ್ಷಣದಲ್ಲಿ ನಿದ್ದೆ ಆವರಿಸಿಬಿಟ್ಟಿತು.
ನಾಗೇಶ್ವರ್ ಸದಾನಂದನಿಗಿಂತ ಒಂದು ಹತ್ತು ವರುಷ ದೊಡ್ಡವರಿರಬೋದು. ಸರ್ಕಾರಿ ವ್ಯವಸ್ಥೆಯಲ್ಲಿ 'ಸರ್' ಅಥವಾ 'ಮೇಡಂ' ಅನ್ನೋದು ರೂಢಿಯಾನುಗತ ಬಂದು ಬಿಟ್ಟಿರೋದ್ದರಿಂದ ಚಿಕ್ಕವರು, ದೊಡ್ಡವರು ಎನ್ನದೆ ಎಲ್ಲರೂ ಎಲ್ಲರಿಗೂ 'ಸರ್', 'ಮೇಡಂ' ಅನ್ನೋದು ರೂಢಿ. ಹಾಗಾಗಿ ಸದಾನಂದನನ್ನ ನಾಗೇಶ್ವರ್ 'ಸಾರ್' ಅಂತ ಸಂಬೋಧಿಸ್ತಾ ಇದ್ದದ್ದು. ನಾಗೇಶ್ವರ್ ಇದಕ್ಕೂ ಹಿಂದೆ ಸುಮಾರು ಎಲೆಕ್ಷನ್ ಡ್ಯೂಟಿಗಳನ್ನ ಮಾಡಿದ ಅನುಭವ ಉಳ್ಳವರಾಗಿದ್ರೂ, ಈ ಬಾರಿಯೇಕೋ ಅವರಲ್ಲೂ ಅಳುಕಿತ್ತು. ನಾಗೇಶ್ವರ್ ಅಸಿಸ್ಟೆಂಟ್ ಪಿ.ಆರ್.ಒ. ಈಬಾರಿ. ಸುಮಾರು ಬಾರಿ ಪಿ.ಆರ್.ಒ. ಆಗಿ ಕೆಲಸ ಮಾಡಿ ಅನುಭವ ಇದ್ದರೂ 'ಈಚೀಚೆಗೆ ಯಾಕೋ ನಮ್ಮನ್ನ ಎ.ಪಿ.ಆರ್.ಒ' ಆಗಿ ಹಾಕ್ತಿದಾರೆ ಸಾರ್ ಅಂತ ಹೆಳಿಕೊಳ್ತಾ ಇದ್ದರು. ಈಗ ಸದಾನಂದ ಪಿ.ಆರ್.ಒ. ಏನೇ ನಡೆದರೂ ಎಲ್ಲದಕ್ಕೂ ಉತ್ತರ/ತಲೆ ಕೊಡುವಾತ. ಹಾಗಾಗಿ ನಾಗೇಶ್ವರನಿಗಿಂತ ಸಹಜವಾಗಿಯೇ ಸ್ವಲ್ಪ ಹೆಚ್ಚು ದಿಗಿಲು.
ರಾಮೇನಳ್ಳಿಯಲ್ಲಿ ಎರಡು ಬೂತುಗಳು ಅಕ್ಕ ಪಕ್ಕವೇ ಇದ್ದವು ಒಂದು ಸರ್ಕಾರಿ ಶಾಲೆಯ ಕಾಂಪೌಂಡಿನೊಳಗೆ, ಒಂದಿನ್ನೂರು ಮೀಟರ್ ಅಂತರದಲ್ಲಿ. ಎರಡೂ ತಂಡಗಳು ಇಳಕಾಂಡು ಬೂತಿನ ವ್ಯವಸ್ಥೆಯ ಬಗ್ಗೆ ಒಂದಷ್ಟು ಮೇಲ್ವಿಚಾರಣೆ ನಡೆಸಿಕೊಂಡವು. ಸಾಮಾನ್ಯ, ಪೋಲಿಂಗ್ ಸ್ಟೇಷನ್ನಿನಲ್ಲಿ ಮಲಗೋಕ್ಕೆ ಜಾಗ ಬಿಟ್ಟು ಮತ್ತೇನಕ್ಕೂ ಹೆಚ್ಚಾಗಿ ಅಪೇಕ್ಷಿಸೋ ಹಾಗಿಲ್ಲ. ಇರೋದ್ರಲ್ಲೇ ಎಲ್ಲರೂ ಹೊಂದಿಕೊಂಡು ಹೋಗಬೇಕಿತ್ತು. ಈ ಬಾರಿಯಾದರೋ, ಒಂದು ಕ್ಲೀನಾದ ಪಾಯಿಖಾನೆಯ ವ್ಯವಸ್ಥೆ ಲಭ್ಯವಿತ್ತು - ಗಂಡಸರಿಗೊಂದು ಹಾಗೂ ಹೆಂಗಸರಿಗೊಂದು. 'ಒಂದೇನಾ ಅಷ್ಟೂ ಜನಗಳಿಗೆ ಸೇರಿ!' ಫರ್ಸ್ಟ್ ಪೋಲಿಂಗ್ ಆಫೀಸರಾದ ರಾಮು ಗಾಬರಿಯಾದರು. 'ಸಾರ್, ನಾಳೆ ಸಂಜೆವರೆಗೂ ಬಾಯಲ್ಲಿ ಬರತ್ತೆ ಹೊರತು...' ಸೆಕಂಡ್ ಪೋಲಿಂಗ್ ಆಫಿಸರ್ ಮುಖೇಶ್ ಹೇಳದ್ದು ಕೇಳಿ ಎಲ್ಲರಿಗೂ ನಗು ತಡೆಯಲಾಗಲಿಲ್ಲ.
'ಕಳೆದ ಬಾರಿ ಅದೂ ಸಹ ಇರಲಿಲ್ಲ ಸಾರ್ ನಮಗೆ. ಟಾಯ್ಲೆಟ್ ಅಂತ ಇತ್ತು. ತೆಗೆದ್ರೆ ಎಲ್ಲಾ ಕಪ್ಪು ಕಪ್ಪು. ಕೊನೆಗೆ ಕತ್ತಲಿದ್ದಾಗ್ಲೇ ಹೊರಗೆ ಬಾಟಲಿ ಇಟಕೊಂಡು ಹೋಗಿದ್ದಾಗಿತ್ತು.' ಸದಾನಂದ ಕಳೆದ ಎಲೆಕ್ಷನ್ನಿನ ಅವಾಂತರಗಳನ್ನ ನೆನಪಿಸಿಕೊಂಡ.
'ಸ್ನಾನಕ್ಕೆ ಏನು ಮಾಡೋದು ಸಾರ್' ರಾಮುವಿಗೆ ಚಿಂತೆಗಳು ಹೆಚ್ಚು.
'ಅದಕ್ಕೂ ವ್ಯವಸ್ಥೆ ಆಗಿದೆ ಸಾರ್' ಬೂತ್ ಲೆವೆಲ್ ಆಫಿಸರ್ (ಬಿ.ಎಲ್.ಒ) ಮೂರ್ತಿ ಅಲ್ಲೇ ಪಕ್ಕದ ಒಂದು ಅಕ್ಷರ ದಾಸೋಹದ ಕೋಣೆ ತೋರಿಸಿ, ಒಳಗೆ ಪಾತ್ರೆ ತೊಳೆಯೋಕ್ಕೆ ಅಂತ ಇದ್ದ ಸಣ್ಣ ಜಾಗವೊಂದನ್ನ ತೋರಿದ.
'ಅಲೆಲೆ.. ಪರವಾಗಿಲ್ಲ' ರಾಮುವಿಗೆ ಸಮಾಧಾನವಾಯ್ತು. ಆದರೆ ಬೆಳಗ್ಗೆ ಸದಾನಂದ ಸ್ನಾನಕ್ಕೆ ಅಂತ ಹೋದಾಗಲೇ ತಿಳಿದದ್ದು ಆ ರೂಮಿಗೆ ಒಳಗೆ ಚಿಲಕ ಇಲ್ಲೆಂದು. ಕೊನೆಗೆ ಯಾರಿಗೂ ಸಹ ಅದೇಕೋ ಇದ್ದಕ್ಕಿದ್ದ ಹಾಗೆ ಅಕ್ಷರ ದಾಸೋಹದ ರೂಮಿನಲ್ಲಿ ಸ್ನಾನ ಮಾಡಲು ಮನಸ್ಸಾಗದೆ ಎಲ್ಲಾ ಆ ರೂಮನ್ನ ಬಟ್ಟೆ ಬದಲಾಯಿಸೋದಕ್ಕಷ್ಟೆ ಬಳಸಿಕೊಂಡರು.
ರಾತ್ರೆ ಊಟಕ್ಕೆ ಮೂರ್ತಿ ಅಲ್ಲೇ ಪಕ್ಕದ ಹೋಟೆಲ್ ಒಂದರಿಂದ ಎಲ್ಲರಿಗೂ ಊಟ ಒದಗಿಸಿದ. ಅನ್ನ, ಸಾರು, ಮಜ್ಜಿಗೆ ಹಾಗೂ ಹಪ್ಪಳ. 'ಇದೆಲ್ಲಾ ನಮ್ ಗ್ರಾಮ್ ಪಂಚಾಯ್ತಿ ಕಡೆಯಿಂದ ಗುರುಗಳೇ.' ಅಂತ ಮೂರ್ತಿ ಹೇಳಿದ್ದಕ್ಕೆ 'ಫ್ರೀನಾ? ಬ್ಯಾಡವೇ ಬ್ಯಾಡ. ಕೊನೆಗೆ ಇದಕ್ಕೆಲ್ಲಾ ಎಷ್ಟಾಯಿತು ಹೇಳಬೇಕು. ಕೊಟ್ಟು ಬಿಡ್ತೇನೆ' ಅಂತ ಸದಾನಂದ ತಾಕೀತು ಮಾಡಿದ. ಮುಂದೆ ಒದಗಿ ಬರಬಹುದಾದ ಅಪಾಯವೊಂದನ್ನ ಸದಾನಂದನ ಆರನೇ ಇಂದ್ರಿಯ ಗ್ರಹಿಸಿತ್ತೋ ಏನೋ! ಅನ್ನಕ್ಕೆ ಸೋಡ ಬೆರೆಸಿದ್ದರಿಂದ ಹೆಚ್ಚು ಅನ್ನ ಇಳಿಯಲಿಲ್ಲ. ಆ ಎರಡೂ ಮತಗಟ್ಟೆಗಳು ಇದ್ದದ್ದು ಒಂದು ಶಾಲಾ ಆವರಣದಲ್ಲಿ. ಸದಾನಂದನದ್ದು 124,ಮತ್ತೊಂದು 125. ಅದು ವಿಶಾಲವಾದ ಜಾಗ. ಸದಾನಂದನ ಮತಗಟ್ಟೆಯ ಕೇಂದ್ರದ ಹೊರಗೆ ಒಂದು ದೊಡ್ಡ ರಂಗ ವೇದಿಕೆ. ಮೇಲೆ ಒಂದು ಛಾವಣಿ. ದಣಿದ ಜನರಿಗೆ ಕುಳಿತ್ಕೊಳ್ಳೋಕ್ಕೆ ಒಳ್ಳೆ ವ್ಯವಸ್ಥೆ ಆಯ್ತು ಅಂತ ಸದಾನಂದ ಭಾವಿಸಿದ. ಹಿಂದಿನ ರಾತ್ರಿಯೇ ಸಾಧ್ಯವಾದಷ್ಟು ಫಾರಂಗಳನ್ನ ತುಂಬಿಕೊಂಡು ಎಲ್ಲರೂ ಮಲಗೋಕ್ಕೆ ಹೋದಾಗ 11 ಗಂಟೆ. ಆದರೆ ಸದಾನಂದನಿಗೆ ಮಾತ್ರ ನಿದ್ದೆ ಹತ್ತಲಿಲ್ಲ. ಕೋಣೆಯ ದೀಪವನ್ನ ಆರಿಸಿ, ಹೊರಗಿಂದ ಕೋಣೆಗೆ ಚಿಲಕ ಹಾಕಿ ಅಲ್ಲೇ ಶಾಲೆಯ ಒಳಗೆ ಅಡ್ಡಾಡಲು ಹೊರಬಂದ. ರಂಗ ವೇದಿಕೆಯ ಒಂದು ಬದಿಯಲ್ಲಿ ಕಂಬಕ್ಕೆ ಒರಗಿ ಒಬ್ಬರು ಕುಳಿತಿದ್ದಾಗೆ ಭಾಸವಾಯಿತು. ನೋಡಿದರೆ ಮೂರ್ತಿ. ವೇದಿಕೆಯ ಮೇಲೆ ಅದಾಗಲೇ 'ಗಣಪತಿ' ಮಲಗಿಬಿಟ್ಟಿದ್ದ. ಒಳಗೆ ಹೋಲಿಸಿದಾಗ ಇಲ್ಲಿ ಸ್ವಲ್ಪ ತಣ್ಣನೆಯ ಗಾಳಿ ಬೀಸ್ತಾ ಇತ್ತು. ಗಣಪತಿಯ ಪಕ್ಕ ಒಂದೆರೆಡು ನಾಯಿಗಳೂ ಮಲಗಿದ್ವು.
'ಮೂರ್ತಿ ನಾ' ಸದನಾಂದ ಕೂಗಿದ. ಉತ್ತರವಿಲ್ಲ. ಆ ದೇಹ ಒಂದಿಚು ಕದಲಲೂ ಇಲ್ಲ. ಹತ್ತಿರಕ್ಕೆ ಹೋಗಿ ಪಕ್ಕ ಕೂತು ಮತ್ತೊಮ್ಮೆ ಕರೆದ -'ಮೂರ್ತಿ. ಮಲಗಿಲ್ವಾ?'
ಮೂರ್ತಿಗೆ ಎಚ್ಚರಾದಂತಾಯ್ತು ಆದರೆ ಎನೂ ಹೇಳಲಿಲ್ಲ. ಸದಾನಂದ ಆತನ ಪಕ್ಕಕ್ಕೆ ಕೂತ ಕೂಡಲೆಯೇ ಸರಾಯಿಯ ಕಂಪು ಹೊಡೆದಿತ್ತು. ಸದಾನಂದ ಮತ್ತೊಮ್ಮೆ ಕೇಳಿದ - 'ಮಲಗೋಲ್ವೆ'
'ಆಪೀಸಲ್ಲಿ ಮಲ್ಗೋದು. ಗಾಳಿ ಇಲ್ಲ. ಇಲ್ ಬಂದೆ' ಅಂತ ಹೇಳಿದ ಮೂರ್ತಿ.
'ಓಕೆ..' ಸದಾನಂದ ಇನ್ನೇನೊ ಕೇಳಬೇಕು ಅನ್ನೊ ಅಷ್ಟರಲ್ಲಿ ಮತ್ತದನ್ನೆ ಮೂರ್ತಿ ಒದರಿದ
'ಅಫಿಸಲ್ಲಿ ಗಾಳಿ ಇಲ್ಲ. ಅದ್ಕೆ ಇಲ್ಲಿಗೆ ಮಲ್ಗಾಕ್ಕೆ ಬಂದೆ. ನಂಗೆ ಈ ಕೆಲಸ ಇಷ್ಟಾ ಇಲ್ಲ. ಎಲ್ರೂ ಸೇರಿ ಮಾಡ್ಸ್ ಬುಟ್ರು'
ಇದೇನು ತಾನು ಕೇಳಲಿಲ್ಲವಾದ್ರೂ, ಸದಾನಂದ ಆಲಿಸ್ತಾ ಇದ್ದ.
'ಹಿಂದೆ ಇದ್ದೊನು ಸತ್ತೋದ. ನನ್ನ ಮಾಡ್ಬುಟ್ರು. ದಿನಾ ಅಫಿಸಾಗೇ ಮಲ್ಗೋದು ನಾನು. ಅಲ್ಲಿ ಫ್ಯಾನ್ ಕೆಟ್ಟೋಗಯ್ತೆ.' ಸುಮ್ಮನೆ ಹೇಳಿದ್ದನ್ನೇ ಬಡಬಡಾಯಿಸುತ್ತಿದ್ದ.
'ಸರಿ.. ಇಲ್ಲಿ ಎಲ್ಲಾ ಸ್ಮೂತಾಗಾಯ್ತದೋ ಹ್ಯಾಂಗೇ?' ಸದಾನಂದನ ಕೇಳಿದೆ.
ಮೂರ್ತಿ ಆಗಿಂದಲೇ ಎರಡು ಹುಬ್ಬು ಗಂಟಿಕ್ಕಿಕೊಂಡೇ ಕುಳಿತಿದ್ದ. ಮಂದ ಹಳದಿ ಸ್ಟ್ರೀಟ್ ಲೈಟ್ ಮುಖದ ಮೇಲೆ ಬಿದ್ದಿತ್ತು. ಕಣ್ಣು ಪಿಳುಕಿಸ್ತಲೇ ಇದ್ದ - ನಿದ್ದೆ ಬಂದಿತ್ತೋ ಏನೋ. ಸುಮ್ಮನೆ ತಕೆ ಆಡಿಸ್ತಾ 'ಹೂಂ.. ಹೂಂ..' ಅಂತ ಹೇಳಿದ. ಸದಾನಂದನಿಗೆ ಅರಿವಾಯ್ತು ತನ್ನ ಪ್ರಶ್ನೆ ಅವನಿಗೆ ತಿಳೀಲಿಲ್ಲ ಅಂತ.
'ಚುನಾವಣೆ ಎಲ್ಲಾ ಸ್ಮೂತಾಗಾಯ್ತದೇನಯ್ಯ..' ಅಂತ ಇನ್ನೊಮ್ಮೆ ಕೇಳಿದೆ.
'ಗಾಳಿ ಇಲ್ಲ. ಫ್ಯಾನ್ ಕೆಟ್ಟೋಗಯ್ತೆ' ಅಂತ ಮತ್ತೆ ಅದನ್ನೇ ಒದರಿದ. ಇದ್ಯಾಕೋ ಸರಿ ಹೋಗ್ತಿಲ್ಲ ಅಂತ ಸದಾನಂದನೂ ಸುಮ್ಮನಾದ.
'ಹೋದ್ಸರಿ ಎಲೆಕ್ಷನ್ನಲ್ಲಿ ನಾ ಇರ್ನಿಲ್ಲ. ಈಗ ಬಂದಿದ್ದು. ಎಲ್ಲಾ ನನ್ನೆ ಮಾಡ್ಬುಟ್ರು. ನನ್ ಮಾತು ಯಾರೂ ಕೇಳಾಕೂ ಇಲ್ಲ. ಎಲ್ಲಾ ಒನ್ ಸೈಡ್ ಇಲ್ಲಿ. ಆದ್ರೂ ಒಂದಿಬ್ರು ಕಿರಿಕ್ ಮಾಡ್ತಾರೆ' ಸದಾನಂದನ ಊಹೆ ತಪ್ಪಾಗಿತ್ತು. ಅಥವಾ ಸುಮ್ಮನೆ ಏನೋ ಒದರೋ ಭರದಲ್ಲಿ ಇದನ್ನೂ ಒದರಿದ್ನೆ? ಅಂತ ಸದಾನಂನಿಗೆ ಅನ್ನಿಸಿತು. ಬೆಳಗ್ಗೆ ಬೈಕ್ ಹತ್ತುತ್ತಿದ್ದ ಅಧಿಕಾರಿಯೂ ಇದನ್ನೇ ಹೇಳಿದ್ದು ನೆನಪಾಯ್ತು 'ಒನ್ ಸೈಡ್' ಅಂತ. ಆಗಲೇ ಸ್ವಲ್ಪ ಸಮಾಧಾನ ಆಗಿದ್ರೂ, ಈಗ ಮತ್ತೇ ಪ್ರಶ್ನೆ ಉದ್ಭವಿಸ್ತು. ಕಿರಿಕ್ ಯಾಕೆ ಮಾಡ್ತಾರೆ, ಯಾಕೆ ಎರಡೆರೆಡು ಪೋಲೀಸ್ ಕೊಡ್ತಾರೆ ಅಂತ ಹೇಳಿ. ಆದರೂ ಸದಾನಂದನಿಗೆ ಮೂರ್ತಿಯ ಮಾತು ಕೇಳಿ ಸ್ವಲ್ಪ ಸಮಾಧಾನವಾದದ್ದಂತೂ ಹೌದು. ಆದರೆ, ಮೊದಲನೆ ಎಲೆಕ್ಷನ್ ಕಲಿಸಿದ್ದ ಪಾಠವನ್ನ ಸದಾನಂದ ಅಷ್ಟು ಸುಲಭವಾಗಿ ಮರೆತದ್ದಾದರೂ ಹೇಗೆ?
ಮಾರನೇ ದಿನ ಬೆಳಗ್ಗೆ ಎಲ್ಲರೂ ಏದು ಗಂಟೆಗೆ ರೆಡಿ. ಮೆಷೀನ್ ಗಳನ್ನೆಲ್ಲಾ ಕನೆಕ್ಟ್ ಮಾಡಿ, ಆನ್ ಮಾಡಿ, 5:45 ಕ್ಕೆಲ್ಲಾ ಅಣಕು ಮತದಾನಕ್ಕೆ ಸಿದ್ಧಮಾಡಿಕೊಂಡಿದ್ರು. ಯಾವ ಪೋಲಿಂಗ್ ಏಜೆಂಟನೂ ಬರದ ಕಾರಣ, ಅಣಕು ಮತದಾನವನ್ನ ಸೂಕ್ಷ್ಮ ವೀಕ್ಷಕನ ಸಮ್ಮುಖದಲ್ಲಿ ಇವರೇ ಆರಂಭಿಸಿಮುಗಿಸಿ, ಎಲ್ಲವನ್ನೂ ಸೀಲ್ ಮಾಡುವ ವೇಳೆಗೆ 6:40 ಆಗಿತ್ತು. 7 ಗಂಟೆಗೆ ಮತದಾನ ಆರಂಭವೂ ಆಯಿತು. ಎಲ್ಲಾ ಸುಸೂತ್ರವಾಗಿ ನಡೀತಾ ಇದ್ದದ್ದು ನೋಡಿ ಸದಾನಂದನಿಗೆ ಸ್ವಲ್ಪ ನೆಮ್ಮದಿಯಾಯ್ತು -'ಹೀಗೆಯೇ ದಿನ ಪೂರ್ತಿ ಕಳೆದು ಹೋಗಲಿ' ಅಂತ. 7 ಗಂಟೆಗೆ ಸರಿಯಾಗಿ ನಾಲ್ಕೈದು ಜನ ಕಾಯ್ತಾ ನಿಂತಿದ್ರು. ಇನ್ನೇನು ಶುರು ಆಗೋ ಮುನ್ನ ನಾಗೇಶ್ವರ್ ಹೇಳಿದ್ರು -'ನೀವು ಏನೇ ಹೇಳಿ ಸಾರ್, ನಂಗೆ ಬಾಳ ಆಶ್ಚರ್ಯ ಆಗಿದ್ದು ಇಲ್ಲಿ ಒಂದು ಸೊಳ್ಳೇನೂ ಇಲ್ವಲ್ಲ ಸಾರ್!'
'ಹೌದಲ್ಲ.!' ಸದಾನಂದನೂ ಅಚ್ಚರಿ ಸೂಚಿಸಿದ. ಸದಾನಂದ ರಾತ್ರಿ ಮಲಗೋಕ್ಕೆ ಬಂದದ್ದು 1 ಗಂಟೆ ಆಸುಪಾಸು. ಮಲಗಿದ್ರೂ ನಿದ್ದೆ ಇಲ್ಲ. ಏನೋ ಕಿರಿಕಿರಿ. ಆ ಕಡೆ, ಈ ಕಡೆ ಹೊಟ್ಟೆ ಮೇಲೆ ಎಲ್ಲಾ ರೀತಿ ಮಲಗಿ ಪ್ರಯತ್ನಿಸಿದ. 'ಥುತ್ತೇರಿ..' ಸಮಯ ನೋಡಿಕೊಂಡಾಗ 1:45. ಹಾಗೆ ಕಣ್ಣು ಎಳೆದಿತ್ತಾದರೂ ಮತ್ತೆ ಎಚ್ಚರಾದಾಗ 2;20. ಹೀಗೆ ಮಧ್ಯೆ ಮಧ್ಯೆ ಹಲವು ಬಾರಿ ಎಚ್ಚರಾಗಿ ಕೊನೆಗೆ 3:30ಕ್ಕೆ ಎದ್ದು ಕುಳಿತು ಬಿಟ್ಟ. ಸರಿಯಾಗಿ 7 ಗಂಟೆ ವೋಟಿಂಗ್ ಆರಂಭವಾಗೋ ಸಮಯಕ್ಕೆ ಒಂದು ಪಕ್ಷದ ಪೋಲಿಂಗ್ ಏಜೆಂಟ ಬಂದು ಕುಳಿತ. ವಯಸ್ಸಾದವ - ಒಂದು 50. ನೋಡೋಕ್ಕೆ ಸ್ವಲ್ಪ ಸೌಮ್ಯ ಸ್ವಭಾವದವನಾಗೇ ಕಂಡ. ಬಂದವನೇ -'ಸಾರ್. ಇಲ್ಲಿ ಎಲ್ಲಾ ಒನ್ ಸೈಡೇ. ನೋಡಿ ಮಾಡಿ. ಅಷ್ಟೇನ್ ತೊಂದ್ರೆ ಆಗಕ್ಕಿಲ್ಲಾ' ಅಂದ.
'ಹಾಂ ಹಾಂ..' ಸದಾನಂದ ಅಷ್ಟಾಗಿ ಪ್ರತಿಕ್ರಯಿಸದೆ ಕೂರಲು ಸೂಚಿಸಿದ.
ಪ್ರತಿ ಎರಡು ಗಂಟೆಗೊಮ್ಮೆ ತನ್ನ ಅಧಿಕಾರಿಗಳಿಗೆ ಸದಾನಂದ ಲೆಕ್ಕ ಕೊಡಬೇಕಿತ್ತು ಎಷ್ಟು ಮತಗಳಾದ್ವು ಅಂತ. ಜೊತೆಗೆ ರಿಜಸ್ಟಿರಲ್ಲಿ ನಮೂದಿಸಿಕೊಳ್ತಿದ್ದ ದಾಖಲೆಗೂ, ಮೆಷೀನಲ್ಲಿನ ದಾಖಲೆಗೂ ತಾಳೆ ಆಗೋದು ಬಹು ಮುಖ್ಯ. ಎರಡನೆ ಪೋಲಿಂಗ್ ಆಫಿಸರ್ ಮುಖೇಶ್ ಗೆ ಬ್ಯಾಲೆಟನ್ನು ರಿಲೀಸ್ ಮಾಡೋ ಕೆಲಸ ಬಿಟ್ಟು ಬೇರೆ ಏನೂ ಇರಲಿಲ್ಲ ಹಾಗಾಗಿ. ಒಂದು ನಿಮಿಷ ಆತ ಮರೆತು ಬ್ಯಾಲೆಟ್ ರಿಲೀಸ್ ಮಾಡದೇ ಹೋದರೆ, ಬಂದ ಮತದಾರನಿಗೆ ತಾನು ಓಟಿನ ಬಟನ್ ಒತ್ತಿದ ತಕ್ಷಣ ತನ್ನ ಪಕ್ಕದಲ್ಲಿ ತಾನು ಒತ್ತಿದ ಗುರುತಿನ ಚೀಟಿ ಬಂದು ಅದು ಹಾಗೆ 7 ಸೆಕೆಂಡಿನ ವರೆಗೆ ಇದ್ದು ಕೊನೆಗೆ 'ಕೊಂಯ್..' ಎಂದು ಮಷೀನ ಕೂಗಬೇಕು ಅನ್ನೋದು ತಿಳಿಯದೇ ಇದ್ದ ಪಕ್ಷದಲ್ಲಿ ಓಟಿನ ಲೆಕ್ಕ ತಪ್ಪಿ ಹೋಗೋ ಸಾಧ್ಯತೆ ಹೆಚ್ಚು. ಹಾಗಾಗಿ ಆ 'ಕುಂಯ್' ಸದ್ದಿನ ಮೇಲೆ ಮುಖೇಶನಿಗಿಂತ ಸ್ವಲ್ಪ ಹೆಚ್ಚು ಗಮನ ಸದಾನಂದನಿಗೂ ಇತ್ತು. 9 ಗಂಟೆಗೆ ಅದಾಗಲೇ 150 ಕ್ಕೂ ಹೆಚ್ಚು ಜನ ವೋಟ್ ಹಾಕಿ ಹೋಗಿದ್ದು ಸದಾನಂದನಿಗೆ ಬಾಳ ಆರಾಮೆನಿಸಿತ್ತು.
'ಇದು ಲೋಕಸಭೆ ಆದ್ದರಿಂದ ಒಂದು 60% ವೋಟು ಆಗಬೋದು. ಅಂದರೆ 1000 ಕ್ಕೆ 600. ಅಬ್ಬಬ್ಬ ಅಂದ್ರೂ 70% ವೋಟು ಅಂದುಕೊಳ್ಳೋಣ. 700 ಆಗಬೋದು. ಅಂದರೆ ಇದೇ ವೇಗದಲ್ಲಿ ಹೋದರೆ 8 ಗಂಟೆಗಳಿಗೆ 600 ವೋಟು. ಅಂದರೆ ಒಂದು 9 ಗಂಟೆಗಳ ಅವಧಿಯಲ್ಲಿ ಮುಗಿಸಿ ಬಿಡಬೋದು. ಅಂದರೆ ಸಂಜೆ 4 ಗಂಟೆ!' ಸದಾನಂದ ಒಳಗೊಳಗೆ ಲೆಕ್ಕಾಚಾರ ಹಾಕತೊಡಗಿದ.
ಅಷ್ಟರಲ್ಲಿ ಒಬ್ಬ ಹುಡುಗ, ಈಗಷ್ಟೆ ವೋಟಿನ ಹಕ್ಕು ಪಡೆದವ ಕಾಣ್ತದೆ, ಒಬ್ಬ ಮುದುಕನನ್ನ ವೀಲ್ ಚೇರಿನಲ್ಲಿ ಒಳಗೆ ತಳ್ಳಕೊಂಡು ಬಂದ. ಆ ಮುದುಕನಿಗೆ ಕಣ್ಣು ಕಾಣದಿರೋದಂತೂ ಸ್ಪಷ್ಟವಾಗಿತ್ತು. ಆತ ಆ ಮುದುಕನ ಹೆಬ್ಬೆಟ್ಟನ್ನ ಒತ್ತಿಸಿ, ಕೈ ಬೆರಳಿಗೆ ಮಸಿಯನ್ನ ಹಾಕಿಸಿ ವೋಟಿಂಗ್ ಕಂಪಾರ್ಟ್ಮೆಂಟ್ ಕಡೆಗೆ ತಳ್ಳಿಕೊಂಡು ಹೋದ. ಕೂಡಲೆ ಮೈಕ್ರೋ ಅಬ್ಸರ್ವರ್ ಸದಾನಂದನಿಗೆ ಕೇಳಿದ -'ವೋ ಫಾರಂ ಫಿಲ್ ಕರ್ ದಿಯಾ?'
ಸದಾನಂದ ಆ ಹುಡುಗನ ಕಡೆ ಕೂಗಿದ -'ಅಣ್ಣಾ. ನೀ ವೋಟ್ ಹಾಕ್ತೀಯ ಅಥವಾ ಅವರೆ ಹಾಕ್ತಾರ?'
'ಸಾರ್. ಅವ್ರಿಗೆಲ್ಲಾಯ್ತದೆ ಸಾರ್. ನಮ್ ತಾತ ಅವ್ರು. ಕಣ್ ಕಾಣಕ್ಕಿಲ್ಲ. ನಾನೆ ಹಾಕ್ತೀನಿ'. ಅಂತ ಹೇಳಿದ.
'ಮೊದ್ಲೇ ಹೇಳಬೇಕ್ ಅಲ್ವ. ವೋಟ್ ಹಾಕಿಸಿ ಕರಕೊಂಡು ಬಾ. ಒಂದು ಫಾರಂ ಫಿಲ್ ಮಾಡಬೇಕು' ಸದಾನಂದ ತಾಕೀತು ಮಾಡಿದ.
ನಿಮಯದ ಪ್ರಕಾರ ಇನ್ನೊಬ್ಬರ ಪರವಾಗಿ ವೋಟ್ ಹಾಕಲು ಹೋಗುವ ಸಂಗಡಿಗ ಒಂದು ಘೋಷಣೆ ಮಾಡುವ ಅಗತ್ಯವಿತ್ತು - ತಾನು ಇನ್ನೊಬ್ಬರ ಪರವಾಗಿ ವೋಟ್ ಹಾಕುತ್ತಿರುವುದಾಗಿಯೂ ಹಾಗೂ ಅದನ್ನ ಎಲ್ಲೂ ಸಹ ಬಹಿರಂಗ ಪಡಿಸುವುದಿಲ್ಲವಾಗಿಯೂ ಘೋಷಿಸಬೇಕಿತ್ತು.
ಆ ಹುಡುಗ ಬಂದ -'ಇದೇನಿದು ಹೊಸದಾಗಿ?' ಸ್ವಲ್ಪ ಖಾರವಾಗಿಯೇ ಕೇಳಿದ.
'ಇದು ನಿಯಮ' ಅಂತ ಏನೇನೋ ಹೇಳಿ ಸಮಾಧಾನಮಾಡಿ ಸದಾನಂದ ಆತನ ಬಲಗೈ ಬೆರಳಿಗೆ ಇಂಕು ಹಾಕಿಸಿ ಫಾರಂ ಫಿಲ್ ಮಾಡಿಸಿಕೊಂಡು ಕಳಿಸಿದ. ಇಷ್ಟರಲ್ಲಿ ನಾಗೇಶ್ವರ್ ಅವರ ಶುಗರ್ ಲೆವೆಲ್ ಕಡಿಮೆಯಾಗಿ ಅವರು ತಿಂಡಿತಿನ್ನಲಿಕ್ಕೆ ಹೋಗಿ ಬಂದರು. ಒಂದ್ಹತ್ತು ನಿಮಷದಲ್ಲೇ ತಿಂಡಿ ಮುಗಿಸಿ ಬಂದರು. ಸುಮಾರು 10:30 ರ ಸಮಯ. ಆಗಲೇ ಹೋದ ಹುಡುಗ ಮತ್ತೊಮ್ಮೆ ಇನ್ನೊಬ್ಬರನ್ನ ವ್ಹೀಲ್ ಚೇರಿನ ಮೇಲೆ ಕೂರಿಸಿಕೊಂಡು ಬಂದ. ಸದಾನಂದನಿಗೆ ಮೈಕ್ರೋ ಅಬ್ಸರ್ವರ್ ಕೇಳಿದ 'ಯೇ ಫಿರ್ ಆ ರಹಾ ಹೈ?' ಆ ಮೈಕ್ರೋ ಅಬ್ಸರ್ವರ್ ಹರಿಯಾಣದ ವ್ಯಕ್ತಿ. ಇಲ್ಲಿ ಒಂದು ಬ್ಯಾಂಕಿನಲ್ಲಿ ಕೆಲಸಕ್ಕಿದ್ದ. ಕನ್ನಡ ಬರುತ್ತಿರಲಿಲ್ಲ. ಅರ್ಥವೂ ಆಗ್ತಿರಲಿಲ್ಲ.
'ಮತ್ತೇನಯ್ಯ ಇದು?' ಸದಾನಂದ ಆ ಹುಡುಗನ್ನ ಕೇಳಿದ.
'ನಮ್ಮಪ್ಪ ಇವ್ರು. ಇವ್ರಿಗೆ ಕೈ ಕಾಲ್ ಎಲ್ಲಾ ಬಿದ್ದೋಗೈತೆ. ನಾನೆ ವೋಟ್ ಹಾಕ್ತೀನಿ' ಅಂದ
'ಕ್ಯಾ ಬೋಲಾ ಕ್ಯಾ ಬೋಲಾ?' ಮೈಕ್ರೋ ಅಬ್ಸರ್ವರ್ ಬಾಯಿಹಾಕಿದ.
ಸದಾನಂದ ಹೀಗೀಗೇಂತ ಹೇಳಲು, 'ನಹಿನಹಿ.. ನಹಿ ಅಲೋ ಕರ್ನಾ ಹೈ' ಅಂತ ತಾಕೀತು ಮಾಡಿದ. ಸದಾನಂದನಿಗೂ ಅದು ತಿಳಿದಿತ್ತು. ಒಬ್ಬ ಒಮ್ಮೆ ಒಬ್ಬರಿಗೆ ಸಂಗಡಿಗನಾಗಿ ಹೋದವ ಇನ್ನೊಬ್ಬರಿಗೆ ಹೋಗೋ ಹಾಗಿಲ್ಲ. ಅದ್ಕಾಗಿಯೇ ಆತನ ಬಲಗೈ ತೋರು ಬೆರಳಿಗೆ ಇಂಕನ್ನ ಹಾಕಿ ಕಳಿಸೋದು.
'ನೋಡಪ್ಪ ರೂಲಿನ ಪ್ರಕಾರ ಒಬ್ರನ್ನ ಒಮ್ಮೆ ಮಾತ್ರ ಕಳಿಸೋಕ್ಕೆ ಆಗೋದು. ನೀನು ಅದಾಗ್ಲೇ ಹಾಕಾಗಿದೆ ಒಬ್ಬರ ಪರವಾಗಿ. ಬೇರೆ ಯಾರನ್ನಾದ್ರೂ ಕರ್ಕಾಂಡು ಬಾ' ಸದಾನಂದ ಆತನಿಗೆ ವಿವರಿಸಿದ.
'ಏನಂದ್ರೀ?' ಆ ಹುಡುಗನಿಗೆ ಸದಾನಂದ ಏನೋ ಹೇಳಬಾರದ್ದನ್ನ ಹೇಳಿಬಿಟ್ಟ ಅಂತ ಅನ್ನಿಸಿತ್ತು ಕಾಣ್ತದೆ. ಹುಬ್ಬು ಗಂಟಿಕ್ಕಿಕೊಂಡು ಆಶ್ಚರ್ಯದಿಂದ ಕೇಳಿದ.
'ನಾನ್ ವೋಟ್ ಹಾಕ್ ಬಾರದ ನಮ್ಮಪ್ಪಂದು? ಯಾಕೆ?'
ಆತನ ಪ್ರಶ್ನಗೆ ಸದಾನಂದ ಇನ್ನೇನು ಹೇಳಿಯಾನು ಅದು ರೂಲ್ಸಪ್ಪ ಅಂತ ಹೇಳೋದು ಬಿಟ್ಟು. ಯಾಕೆ ಏನು, ಏತಕ್ಕಾಗಿ ಆ ರೂಲ್ಸು ಅನ್ನೋದನ್ನ ಹೇಗೆ ವಿವರಿಸ್ತಾ ಕೂರೋದು ತಾಳ್ಮೆಯೇ ಇಲ್ಲದೆ, ಮತಿಭ್ರಮಣೆಯಾದಂತೆ ವರ್ತಿಸೋಕ್ಕೆ ಆರಂಭಿಸಿದ ಆ ಹುಡುಗನಿಗೆ ಅನ್ನೋದು ಸದಾನಂದನಿಗೆ ಗೊಂದಲವಾಯ್ತು. ಮತ್ತದನ್ನೇ ಒದರಿದ. 'ನೋಡು ಅದು ರೂಲ್ಸು. ಅದ್ಕಾಗೀನೇ ನಿಂಗೆ ಇನ್ನೊಂದು ಬೆರಳಿಗೆ ಇಂಕ್ ಹಾಕಿದ್ದು. ಬೇರೆ ಯರ್ನಾದ್ರು ಕರ್ಕೊಂಡು ಬಾ. ಅವರ ವೋಟು ಖಂಡಿತ ಹಾಕಿಸ್ತೀನಿ'.
'ಇಬ್ನೊಬ್ರನ್ನ? ಯಾರ್ನಾ ಕರ್ಕೊಂಡ್ ಬರ್ಲಿ. ನಂಗೆ ಯಾರ್ ಮೇಲೂವೆ ನಂಬಿಕೆ ಅನ್ನಾದಿಲ್ಲ. ನೀವ್ ಹಾಕ್ಸ್ತೀರಾ ಇಲ್ವಾ? ನಮ್ಮಪ್ನಿಗೆ ನಾ ವೋಟಾಕ್ದೆ ಇನ್ಯಾವನ್ ಹಾಕ್ದಾನು? ಲೋ ಇಷಕಂಠಣ್ಣ ಇದೇನಣ್ಣಾ? ಇಸ್ಟೂ ವರ್ಸ ಇಲ್ಲಾದ್ದು. ಈಗ ಏನೋ ಹೇಳ್ತಾವ್ರೆ? ಇದೇಯಾ ನೀನು ಪೋಲಿಂಗ್ ಏಜೆಂಟ್ ಕೆಲ್ಸಾವ ಮಾಡ್ತಿರಾದು. ಹಿಂಗೆಲ್ಲಾ ಅವಮಾನ ಮಾಡ್ತಾವ್ರೆ ಇಲ್ಲಿ.' ಆ ಹುಡುಗ ಏರು ಧ್ವನಿಯಲ್ಲಿ ಪೋಲಿಂಗ್ ಏಜೆಂಟನನ್ನೂ ಮಧ್ಯಕ್ಕೆಳೆದ.
'ರೀ ಸಾಮೇ, ಹೊಸ್ ಹೊಸಾದೆಲ್ಲಾ ಯಾಕ್ರೀ ಹೇಳ್ತೀರಿ ನಾವ್ ಕಾಣದ್ದು. ಎಷ್ಟ್ ಎಲೆಕ್ಷಾನ್ ನೋಡಿಲ್ಲ. ಇದೇನಿದು ಹೊಸದಾಗಿ' ಆ ಹುಡುಗನ ಮಾತು ಪೋಲಿಂಗ್ ಏಜೆಂಟನನ್ನ ಬಡಿದೆಬ್ಬಿಸಿತ್ತು. ತನ್ನ ಕರ್ತವ್ಯವನ್ನೇ ಮರೆತು ಹೋಗಿದ್ದೆನೆಂದು ನೆನಪು ಬಂದವನಂತೆ ಧೊಪ್ಪನೆ ಎದ್ದು ಬಂದ.
ಇದರ ನಡುವೆ 'ಕ್ಯಾ ಬೋಲಾ? ಕ್ಯಾ ಹೋರಹಾ ಹೈ?' ಮೈಕ್ರೋ ಅಬ್ಸರ್ವರ್ ಕೇಳಿದ. ಸದಾನಂದನಿಗೆ ಬೆಳಗ್ಗಿನಿಂದ ಇದ್ದ ಸ್ಥೈರ್ಯವೆಲ್ಲಾ ಏಕಾಏಕಿ ಹೋಗತೊಡಗಿತು. ಹೊರಗೆ ರವ ರವ ಬಿಸಿಲು. 'ಥೋತ್.. ಬಿಡ್ರಿ ಬೇಗ' ಎನ್ನುವ ಉದ್ಗಾರಗಳು. ಬಾಗಿಲು ಕಿಟಕಿಗಳಿಂದ ಇಣಿಕಿಣುಕಿ ನೋಡುತ್ತಿದ್ದ ಹತ್ಹಲವಾರು ಕಣ್ಣುಗಳು. ಸದಾನಂದ ಇತರೆ ಅಧಿಕಾರಿಗಳಿ ಮತದಾನ ಮುಂದೆವರೆಸಲು ಹೇಳಿ, ಎದ್ದು ಬಂದ.
'ಅದ್ಹೆಂಗೆ ಮುಂದುವರೆಸ್ ಬಿಡ್ತೀರಿ? ನಮ್ಮಪ್ಪಂಗೆ ವೋಟ್ ಹಾಕಕ್ ಬಿಡೋವರ್ಗೂ ನಾ ಯಾರ್ಗೂ ವೋಟ್ ಹಾಕಕ್ ಬಿಡೂಲ್ಲ' ಆ ಹುಡುಗ ಗಟ್ಟಿಯಾಗಿ ನಿಂತ.
ಸದಾನಂದ ಇನ್ನು ತಿಂಡಿ ತಿಂದಿರಲಿಲ್ಲ. ರಾತ್ತಿ ಊಟವೂ ಸರಿಯಾಗಿರಲಿಲ್ಲ. ಈ ಬಿಸಿಲಿನ ನಡುವೆ, ಈ ಹೊಸ ಜಗಳದ ಮಧ್ಯೆ ತಲೆ ನೋವು ಶುರುವಾಯಿತು. ಏನಾಯಿತೋ ಏನೋ - ಸಿಟ್ಟು ನೆತ್ತಿಗೇರಿ 'ಹಿಂಗೆ ಆಡ್ತಿದ್ರೆ ನಿನ್ ಮೇಲೆ ಕಂಪ್ಲೇಂಟ್ ಹರಿದು ಎಫ್.ಐ.ಆರ್ ಹಾಕಿಸ್ತೀನಿ ಹುಷಾರ್' ಎಂದು ಗುಡುಗಿದ.
ಸದಾನಂದನ ಗುಡುಗು ಅನಿರೀಕ್ಷಿತವಾಗಿದ್ದರೂ, ಒಂದೆರೆಡು ಸೆಕೆಂಡ್ ಎಲ್ಲಾರೂ ತೆಪ್ಪಗಾದರೂ, ಆ ಹುಡುಗ ಇದನ್ನ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದ. 'ಏನೂ...' ರಾಗ ಎಳೀತ ಕೂಗಲಾರಂಭಿಸಿದ. ಅದರ ಹಿಂದೆಯೆ ಜನರ 'ಗುಜುಗುಜು' ಗೌಜಯವೂ ಆರಂಭವಾಯಿತು.
'ಕೇಸ್ ಹಾಕ್ತೀಯ.. ಹಾಕು ಹಾಕು. ಅದೇನಂತ ಹಾಕ್ತೀಯೋ ಹಾಕು' ಎನೋ ವಿಜಯದ ಮಾಲೆ ಹಾಕಿಸಿಸಕೊಳ್ಳೋಹಾಗೆ ಹೇಳ್ತಿದ್ದ ಆತನ ಮಾತಿಗೆ ಸದಾನಂದನ ಧೈರ್ಯ ಮತ್ತಷ್ಟು ಅಡಗಿ,
'ನೋಡು ಅಣ್ಣಾ. ನಾ ಇನ್ನೂ ತಿಂಡಿ ತಿಂದಿಲ್ಲ. ಬೆಳಗ್ಗಿಂದ ಸುಸ್ತಾಗ್ತಿದೆ. ರಾತ್ರಿ ನು ಸರಿಊಟ ಆಗಿಲ್ಲ' ಎನ್ನುತ್ತಿದ್ದ ಹಾಗೆ ವಿಷಕಂಠ ಧ್ವನಿ ಎತ್ತಿದ
'ರಾತ್ರೆ ಒಳ್ಳೆ ಬಿಟ್ಟಿ ಊಟ ಹಾಕುಸ್ದೊಲ್ಲ ಸಾಮೆ..'
'ಸಾಹೇಬ್ರೇ.. ಬಿಟ್ಟಿ ಗಿಟ್ಟಿ ಅನ್ಬೇಡಿ. ಅದ್ಕೆ ದುಡ್ಡೂ ಕೊಡ್ತೇನೆ. ಊಟ ಕೊಟ್ಟಿದ್ರೂ ನಾನು ಸರೀ ಊಟ ಮಾಡಿಲ್ಲ. ನನ್ನ ಪರಿಸ್ಥಿತಿ ನೂ ಅರ್ಥ ಮಾಡ್ಕಳಿ. ಇಲ್ಲಿ ಸಿಸಿಟಿವಿ ಇದೆ. ಮೈಕ್ರೋ ಅಬ್ಸರ್ವರ್ ಇದ್ದಾನೆ. ರೂಲ್ಸ್ ಫಾಲೋ ಮಾಡಲೇಬೇಕು. ಅವನಿಗೆ ಬೇರೆ ಯಾರನ್ಬಾದ್ರೂ ಕರ್ಕೊಂಡ್ ಬರೋಕ್ಕೆ ಹೇಳಿ' ಸದಾನಂದ ತಣ್ಣಗಾಗಿ ತನ್ನ ಅಸಹಾಯಕತೆಯನ್ನ ಹಾಗೆಯೇ ತೆರೆದಿಟ್ಟ.
ಇದರ ನಡುವೆ ಇನ್ನೊಂದು ಹೆಂಗಸು ತೂರಿತು. ರೂಮೊಳಗೆ ಹಾಳೆಗಳೆಲ್ಲಾ ಹಾರಿಯೋಗಾವು ಅಂತ ಫ್ಯಾನ್ ಆಫ್ ಮಾಡಿದ್ದರು. ಸೆಖೆ. ಬೆವರಿಳೀತಾ ಇದೆ. ಸದಾನಂದ ಸುತ್ತುವರೆಯಲ್ಪಟ್ಟಿದ್ದಾನೆ.
'ಹಂಗಾರೆ ನಂಗೂ ನಮ್ಮಪ್ಪ ಅಮ್ಮಂಗೆ ವೋಟ್ ಹಾಕಾಕ್ಕೆ ಕೋಡಾಕ್ಕಿಲ್ಲೇನೋ ಇಷ್ ಕಂಠಣ್ಣ' ಆಕೆಯೂ ದಪ್ಪ ಕಣ್ಣು ಬಿಟ್ಟು ಹೇಳಿದಳು.
ಇದೆಕೋ ಅನಂತ ವಿಷಸರಪಳಿಯಂತೆ ಭಾಸವಾಯಿತು ಸದಾನಂದನಿಗೆ. ಕೂಡಲೇ ಸೆಕ್ಟರ್ ಆಫಿಸರಿಗೆ ಫೋನ್ ಮಾಡಿ ಇದ್ದದ್ದನ್ನೆಲ್ಲಾ ಹೇಳಿ ಕೂಡಲೇ ಬರದೇ ಹೋದರೆ ಎಡವಟ್ಟಾದೀತು ಅಂತ ಹೇಳಿದ.
ಇದರ ನಡುವೆ ಈ ಸುದ್ದಿ ಹೊರಗೆ ನಿಂತ ಜನರವರೆಗೂ ತಲುಪಿತು. ಆದರೆ ಅಷ್ಟರಲ್ಲಾಗಲೇ ಇದರ ರೂಪವೇ ಬೇರೆಯಾಗಿತ್ತು. 'ಏನಾ.. ಸೋಮಣ್ಣಂಗೆ ವೋಟಾಕಕ್ಕ ಕೋಡಾಕಿಲ್ವಂತಾ! ಅವ್ನಿಗೆ ವೋಟ್ ಹಾಕಕ್ಕೆ ಆಯಕ್ಕಿಲ್ವಲ್ಲ. ಯಾರೂ ಜೊತೆಗೆ ಹೋಗಾಕ್ಕಿಲ್ವಂತೆ. ಇವರು ಯಾರೋ ಬೇಕಾಂತಾನೆ ಮಾಡ್ತವ್ರೆ. ನಮ್ಗೂ ವೋಟ್ ಹಾಕಕ್ ಕೊಡ್ತಾರ? ತಕರಾರುಮಾಡ್ತಾರಾ?' ಹೀಗೆಲ್ಲಾ ಪಸರಿಸ ತೊಡಗಿತು.
ಅಷ್ಟೇ ಅಲ್ಲದೇ ಊರೊಳಗೂ ಈ ಸುದ್ದಿ ನುಗ್ಗಿ, ಊರಿನ ಪುಂಡ ಪೋಕರಿಗಳೂ, ಮಾಜೀ ಗ್ರಾಂ ಪಂಚಾಯಿತಿ ಸದಸ್ಯರೂ, ಅಧ್ಯಕ್ಷರು, ಪುಡಾರಿಗಳೆಲ್ಲಾ ಇತ್ತ ಕಡೆಯೇ ಧಾವಿಸಿದರು. ಅಷ್ಟರಲ್ಲಿ ಸೆಕ್ಟರ್ ಆಫಿಸರ್ ಸಹ ಬಂದ. ಸೆಕ್ಟರ್ ಆಫಿಸರ್ ಅಲ್ಲೇ ಪಕ್ಕದ ಊರಿನಲ್ಲಿ ಕೆಲಸ ಮಾಡ್ತಿದ್ದವ. ಅದೇನೋ ಆತನನ್ನ ಕಂಡರೆ ಇಲ್ಲಿಯ ಜನಕ್ಕೆ ಆಗದೋ ಏನೋ. ಅವನು ಬಂದೊಡನೆಯೇ -'ಓ.. ಇವನಾ. ಅನ್ಕಾಂಡೆ ಏನೋ ಇದರ ಹಿಂದೆ ಇದೆ ಅಂತ' ಅಂತ ಅಲ್ಲಿದ್ದೋರಿಬ್ರು ಗುನುಗಿದರು. ಆತನೂ ಸದಾನಂದ ಹೆಳಿದ್ದನ್ನೇ ಒಪ್ಪಿಸಿದ -'ನಮಗೆ ಟ್ರೈನಿಂಗಲ್ಲಿ ಇದೇ ರೂಲ್ಸು ಹೆಳ್ಕೊಟ್ಟಿರೋದು. ರೂಲ್ಸಿಗೆ ವಿರುದ್ಧವಾಗಿ ನಾವು ಹೋಗೋ ಹಾಗಿಲ್ಲ. ಸಿಸಿಟಿವಿ ಇದೆ. ಮೈಕ್ರೋ ಅಬ್ಸರ್ವರ್ ಇದಾನೆ'
ಜನರಿಗೆ ಕೇಳಿದ್ದನ್ನೇ ಕೇಳೋ ತಾಳ್ಮೆ ಇರಲಿಲ್ಲ. ಮತ್ತೆ ಸಂದಿಯಿಂದ ತಲೆದೂರಿಸಿ ಆ ಹೆಂಗಸು -'ಏನ್ ಕೊಡ್ತಾರಾ ಕೊಡಕ್ಕಿಲ್ವಂತ?' ಕೇಳಿದಳು.
ಕೂಡಲೇ ಒಂದಷ್ಟು ಪುಡಾರಿಗಳು ಒಳಗೆ ನುಗ್ಗಿದರು. ಹಳ್ಳಿ ಹಳ್ಳಿಗೇ ಬಲ ಬಂದಂತಾಯಿತು.
'ಯಾರ್ರೀ ಅದು. ವೋಟ್ ಹಾಕಕ್ಕೆ ಬಿಡ್ತಿಲ್ವಂತೆ? ಏನ್ ಸಮಾಚಾರ' ಒಬ್ಬ ಕೂಗಿದ.
ಇನ್ನೊಬ್ಬ ಒದರಿದ 'ಇದು ಒನ್ ಸೈಡ್ ಅಂತ ಗೊತ್ತಿದ್ರೂ ಕಿರಿಕ್ ಮಾಡ್ತಾವ್ತೆ ಅಂದ್ರೆ ಇವ್ರು ಯಾರ ಏಜೆಂಟ್ರು ಅಂತ ಗೊತ್ತಾಗ್ತಿಲ್ಲ'
ಸದಾನಂದನಿಗೆ ಈಗ ಅರಿವಾಯಿತು 'ಒನ್ ಸೈಡ್' ಇದ್ದರೂ ಹೇಗೆ ಅಪಾಯ ಒದಗಿ ಬರಬೋದು ಅಂತ. ಹೀಗೂ ಆಗೋದು ಸಾಧ್ಯ ಅಂತ ಈಗಲೇ ಅರಿವಾದದ್ದು. 'ಒನ್ ಸೈಡ್' ಇದ್ದ ಕಡೆ ನಿಮಯಗಳನ್ನ ಹೇರೋದು ಹೇಗೆ ಅಪಾಯವಾಗಬೋದು ಅಂತ ಈಗ ತಿಳೀತು.
ಗ್ರಾಂ ಪಂಚಾಯಿತಿ ಮಾಜಿ ಅಧ್ಯಕ್ಷ ಕೂಗಿದ -'ಯಾವತ್ತೂ ಹೀಗಾಗಿಲ್ಲ. ಬಂದೋರೆಲ್ಲಾ ಎಷ್ಟು ಸಹಕರಿಸಿಕೊಂಡು ಹೋಗೋರು. ಯಾರ್ ನೀವೆಲ್ಲಾ? ಯಾರ ಏಜೆಂಟ್ರು? ಮತದಾನ ಆಗೋದು ನಿಮ್ಗೆಲ್ಲಾ ಇಷ್ಟವೇ ಇಲ್ವಾ? ಹಿಂಗೆ ಆದ್ರೆ ಸರಿಹೋಗಲ್ಲ. ಮುಂದೆ ಆಗೋಕ್ಕೆ ನಾ ಕಾರಣ ಆಗೊದಿಲ್ಲ' ಆಗಲೇ ಹತ್ತಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದ.
'ಸರಿಯಾಗ್ ಹೇಳ್ದೆ ಮಂಜಣ್ಣ. ವೋಟ್ ಹಾಕೋಕ್ ಬಿಟ್ರೋ ಸರಿ. ಇಲ್ಲಾಂದ್ರೆ ಇವತ್ತು ಇಲ್ಲಿ ವೋಟ್ ಆಗೋಲ್ಲ. ಆಗೋದೆ ಬೇರೆ' ಆ ಹುಡುಗ ಕೂಗಿದ. ಅವನಿಗೆ ಪ್ರತಿಷ್ಠೆಯನ್ನ ಉಳಿಸಿಕೊಳ್ಳೋದು ಹೆಚ್ಚಿತ್ತು. ಇಷ್ಟರಲ್ಲಿ ಹೊರಗಿನೋರಿಗೆ ಸಂಯಮ ಕಳೆದು ಹೋಗಿತ್ತು.
'ಆಯ್ತು ಸ್ವಲ್ಪ ಹೊತ್ತು ಇಲ್ಲೇ ಕೂತಿರಿ. ಮಾತಾಡೋಣ. ತಹಸೀಲ್ದಾರರನ್ನ ಕರೆಸ್ತೀನಿ' ಅಂತ ಸದಾನಂದ ಹೇಳಿದ್ದು ಮತ್ತೆ ರೇಗಿತು ಅಲ್ಲಿದ್ದವರಿಗೆ.
'ಏನು ಕಾಯ್ಬೇಕಾ?' ಹೊರಗಿದ್ದೋರೆಲ್ಲಾ ಅರ್ಧಂಬರ್ಧ ಕೇಳಿಸಿಕೊಂಡು ಜಗಳಕ್ಕೆ ನಿಲ್ಲೋಕ್ಕೆ ತಯಾರಾದ್ರು.
'ಮನೆ ಕೆಲ್ಸಾವೆಲ್ಲಾ ಬಿಟ್ಟು ಬಂದ್ರೆ ವೋಟ್ ಹಾಕ್ಸಾಕಿಲ್ವಲ್ಲ ಇವ್ರು. ಬಿಸಿಲು ಸುಡ್ತೈತೆ. ವೋಟ್ ಹಾಕಿಸ್ದೆ ಹೋದ್ರೆ ಆಗೋದೆ ಬೇರೆ' ಹೊರಗೊಬ್ಬ ಕಿಟಕಿಯನ್ನ ಗಟ್ಟಿಗೆ ಬಡಿದು ಕೂಗಿದ. ನೋಡಿದರೆ ಮಾತಲ್ಲೇ ತಿಳೀತಿತ್ತು ಬೆಳಗ್ಗೆಯೇ ತೀರ್ಥ ಪೋಣಿಸಿದ್ದನೆಂದು. ಅವನ ಪಕ್ಕ ಇದ್ದೋರು ಕಿಟಕಿ ಬಡಿಯೋಕ್ಕೆ ಶುರು ಮಾಡಿದ್ರು.
'ಎಲ್ರಿಗೂ ವೋಟ್ ಹಾಕಕ್ಕೆ ಬಿಡಬೇಕು' ಅಂತ ಇನ್ನೊಬ್ಬ ಅಸಂಬದ್ಧ ಹೇಳಿಕೆ ಕೂಗಿ ಹೇಳಿದ. ಉಳಿದೋರೆಲ್ಲಾ ಹೌದೌದು ಅಂತ ಗುನುಗುನಿಸಿದರು.
ಇದ್ದಕ್ಕಿದ್ದ ಹಾಗೆ ಅಲ್ಲೊಬ್ಬ -'ಬೇಕೆ ಬೇಕು ನ್ಯಾಯ ಬೇಕು ಅಂತ ಕೂಗಿದ'
ಊರಿನ ಪುಡಾರಿಗಳೆಲ್ಲಾ ನೆಲದ ಮೇಲೆ ಧರಣಿ ಕೂತರು. 'ಬೇಕೆ ಬೇಕು ನ್ಯಾಯ ಬೇಕು. ಬೇಕೆ ಬೇಕು ನ್ಯಾಯ ಬೇಕು'.
ಸದಾನಂದ ಒಂದು ಕೈ ಕಟ್ಟಿ ಮತ್ತೊಂದನ್ನ ಗಲ್ಲಕ್ಕೆ ಒರಗು ನೀಡಿ ನೋಡುತ್ತಾ ನಿಂತ. ಏನೇನೋ ನೆನಪಾಗ್ತಾ ಬಂದಿತು. ತನ್ನ ಹಿಂದಿನ ಕೆಲಸದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ, ಶಿಕ್ಷಣದ ಗುರಿಯ ಬಗ್ಗೆ ಮಾತಾಡ್ತಿದ್ದದ್ದು ನೆನಪಾಗ್ತಾ ಬಂದಿತು. 'ಶಿಕ್ಷಣದ ಒಂದು ಗುರಿ ಮನುಷ್ಯನನ್ನ ಸಂವೇದನಾಶೀಲನಾಗಿ ಮಾಡೋದು' ಎನ್ನುವ ತನ್ನ ಮಾತುಗಳೇ ಗುಂಯ್ಗುಡಲಾರಂಭಿಸಿದವು. ಒಬ್ಬನಿಗೂ ಸದಾನಂದನ ಮಾತು ಅರ್ಥವಾಗ್ತಿರಲಿಲ್ಲ. ಅಥವಾ ಅವರು ಅತೀ ಸುಲಭವಾಗಿ -'ಯಾಕೆ ಈ ನಿಯಮ?' ಎಂದು ಕೇಳುತ್ತಿದ್ದ ಪ್ರಶ್ನೆ ಇವನಿಗೆ ಇನ್ನೂ ಅಷ್ಟು ಸುಲಭವಾಗಿ ಹಾಗೂ ಸಹಜವಾಗಿ ನಿಲುಕಿರಲಿಲ್ಲ. 'ಹೌದು ಅಷ್ಟಕ್ಕೂ ಏಕೆ ಹೀಗೆ? ಈ ಹುಡುಗ ಹೇಳೋದ್ರಲ್ಲಿ ತಪ್ಪೇನಿದೆ?' ಅಂತ ಒಮ್ಮೆಯಾದರೂ ಸದಾನಂದನ ತಲೆಗೆ ತೂರದೇ ಇರಲಿಲ್ಲ. ಸದ್ಯಕ್ಕೆ ಅದನ್ನ ಆಲೋಚಿಸಲು ಸಮಯ, ಶಕ್ತಿ ಇಲ್ಲವಾದ್ದರಿಂದ ಸುಮ್ಮನಾದ. ಸುತ್ತಲೂ ಜನರ ಕೂಗು -'ಬೇಕೆ ಬೇಕು...' ಹಾಗೇ ಆ ಹುಡುಗನ ಮಾತುಗಳು -'ನಾ ಯಾರಿಗ್ ಕೇಳಿದೆ? ನಮ್ಮಪ್ಪನಿಗೆ ಅಲ್ಲದೆ ಮತ್ಯಾರಿಗೆ? ಬೀದೀಲ್ ಹೋಗೋ ದಾಸಾಯ್ಯಂಗೆ ಕೇಳಿದ್ರೆ ನೀವ್ ಕೇಳಿ ನನ್ನ. ಅದ್ ಬಿಟ್ಟು...'
ಪೋಲಿಂಗ್ ಏಜೆಂಟ್ ಸದಾನಂದನ ಮೇಲೆ ರೇಗಿದ - 'ಎಲ್ಲಾ ಆಗಿದ್ದು ನಿಮ್ಮಿಂದಾನೇ. ನಾನೇನಾದ್ರೂ ತಕರಾರು ಮಾಡಿದ್ನೇನ್ರಿ? ತಕರಾರು ಮಾಡಿದ್ರಷ್ಟೆ ನೀವು ನಿಯಮ ಹೇಳ್ಬೇಕು. ಬಾಯಿ ಮುಚ್ಕೊಂಡು ನಾ ಹೇಳಿದ್ದನ್ನ ಕೇಳಿದ್ರೆ ಇದೆಲ್ಲಾ ಅಗ್ತಾ ಇರ್ನಿಲ್ಲ. ಈಗಲೂ ಹೇಳ್ತೀನಿ ಬಿಟ್ ಬಿಡಿ ಇದೆಲ್ಲಾ ಬೇಡ'.
'ನಿವೆಷ್ಟು ಸಹಕಾರ ಕೊಡ್ತೀರೋ ನಾವು ಅದಕ್ಕಿಂತ ಹೆಚ್ಚು ಕೊಡ್ತೀವಿ. ನೋಡಿ ಸುಮ್ಮನೆ ಜಗಳ ಮಾಡ್ಕೋಬೇಡಿ' ಅಲ್ಲಿದ್ದ ಪುಡಾರಿ ಒಬ್ಬ ಹೇಳಿದ.
ಇದೆಲ್ಲಾ ಕೇಳಿ ಸದಾನಂದನಿಗೆ ಮೈ ಕುದೀಲಿಲ್ಲ ಅಂತಲ್ಲ. ಒಬ್ಬಬ್ಬನನ್ನೂ ಒದ್ದು ಲಾಕಪ್ ಒಳಗೆ ಹಾಕಿಸಿಬಿಡಬೇಕು ಅಂತ ಅವರ ಮರ್ಮಕ್ಕೆ ತಾಗೋ ಹಾಗೆ ಮನಸ್ಸಲ್ಲಿ ಬೈದುಕೊಂಡರೂ, ಈ ಸರ್ಕಾರಿ ಕೆಲಸವೇ ಬೇಡ. ಎಲ್ಲಾದರೂ ಹೋಗಿ ಹಪ್ಪಳ ಹಾಕೊಂಡು ಮಾರಿ ಬದುಕಿಬಿಡಬೋದು. ಈ ರೀತಿಯ ಹಿಂಸೆ ಯಾರಿಗೂ ಸಹ ಬೇಡವೆಂದು ಮನಸ್ಸಲ್ಲೇ ಕೊರಗ್ತಾ ನಿಂತ.
ಇದರ ನಡುವೆ 'ಆಯಿಯೆ ಇಧರ್' ಅಂತ ಮೈಕ್ರೋ ಅಬ್ಸರ್ವರ್ ಕೂಗಿ ಹೇಳಿದ.
ಆತ ತನ್ನ ಹಿರಿಯ ಅಧಿಕಾರಿಗಳಿಗೆ ಅಲ್ಲಿ ನಡೀತಿದ್ದನ್ನ ಅರುಹಿ ಅವರಿಂದ ಸಲಹೆ ಪಡೆದಿದ್ದ. ಆ ಹುಡುಗ ಏನಾದರೂ ಅವರಿಗೆ ಸ್ವಂತ ಮಗನಾಗಿದ್ದರೆ, ಆತನಿಗೆ ಬೇರೆ ಯಾರೂ ಸಹ ಸಂಗಡಿಗರು ಇಲ್ಲದಿದ್ದಲ್ಲಿ ಬಿಟ್ಟು ಬಿಡಿ ಎಂದು.
ನಾಗೇಶ್ವರ್ ಅಷ್ಟರಲ್ಲಾಗಲೇ ಕುಪಿತರಾಗಿದ್ದರು. 'ಇದ್ಕೆಲ್ಲಾ ಆ ಮೂರ್ತಿನೇ ಸಾರ್ ಕಾರಣ. ಕಣ್ ಕಾಣದೋರಿಗೆ, ವಯಸ್ಸಾದೋರಿಗೆ ಈಗಾಗ್ಲೇ ಮನೆ ಮನೆಗೆ ಹೋಗಿ ವೋಟ್ ಹಾಕಿಸೋದ ಬಿಟ್ಟು. ಏನೂ ಗ್ರೌಂಡ್ ವರ್ಕ್ ಮಾಡಿಲ್ಲ ಸಾರ್. ಸುಮ್ಮನೆ ಇದಾನೆ'
'ಎಲ್ಲಾ ಸೇರಿ ಮಾಡ್ಬುಟ್ರು', ಮೂರ್ತಿಯ ಹಿಂದಿನ ರಾತ್ರಿಯ ಮಾತು ನೆನಪಾಯಿತು ಸದಾನಂದನಿಗೆ.
ಆ ಹುಡುಗನ್ನ ಹಾಕೋಕ್ಕೆ ಬಿಟ್ಟ ಮೇಲೆ ಮತಗಟ್ಟೆ ಸ್ವಲ್ಪ ಶಾಂತವಾಯಿತು. ಕೊನೆಗೆ ಆ ಇನ್ನೊಂದು ಹೆಂಗಸೂ ಸಹ ತನ್ನ ಅಪ್ಪ ಅಮ್ಮನ ಪರವಾಗಿ ವೋಟ್ ಹಾಕಿ ಹೋದಳು. ಸದಾನಂದ ಪೆಚ್ಚು ಮೋರೆ ಹಾಕಿ ಕುಳಿತ. ಎಲ್ಲವನ್ನೂ ನೋಟ್ ಮಾಡಿ ಅವರಿಂದ ಡಿಕ್ಲರೇಷನ್ ಬರೆಸಿಕೊಂಡು, ತಾನು ಇಂಥಹವರ ಮಗ/ಮಗಳೇ ಎಂದು ಐಡಿ ಕಾರ್ಡಿನ ಸಂಖ್ಯೆಯನ್ನೂ ನೊಂದಾಯಿಸಿಕೊಂಡು ಇಟ್ಟುಕೊಂಡ. ಸದಾನಂದನಿಗೆ ಗ್ರಾಮೀಣ ಜನರ ನಡವಳಿಕೆ ಕೋಪ ತರಿಸಿದ್ದರೂ, ಗಾಢವಾಗಿ ಯೋಚಿಸುವ ಹಾಗೆ ಮಾಡಿಬಿಟ್ಟಿತು. ಈ ಜನರು ಕೇಳೋ ಪ್ರಶ್ನೆಗಳಿಗೆ ಹೇಗೆ ಉತ್ತರಿಸೋದು? ಆ ನಿಯಮವನ್ನ ಆ ಹುಡುಗನ ಮೇಲೆ ಹೇಗೆ ಹೇರಲಿಕ್ಕಾದರೂ ಸಾಧ್ಯ? ಉದಾಹರಣೆಗೆ, ಒಬ್ಬ ಅಂಧ ದಂಪತಿಗಳಿಗೆ ಒಬ್ಬನೇ ಮಗನಿದ್ದನೆಂದು ಭಾವಿಸೋಣ. ಆ ಅಂಧ ದಂಪತಿಗಳಿಗೆ ಮಗನನ್ನ ಬಿಟ್ಟು ಬೇರೆಯವರ ಮೇಲೆ ನಂಬಿಕೆಯೇ ಇಲ್ಲೆಂದು ಭಾವಿಸೋಣ, ಆಗ ಅವರ ವೋಟನ್ನ ಯಾರ ಕೈಲಿ ಹಾಕಿಸೋದು? ಹೀಗೆ ಮನಸ್ಸು ಗೊಂದಲದ ಗೂಡಾಗಿ ಒಂದರ್ಧ ಗಂಟೆ ಏನೂ ಮಾಡದೇ ಸುಮ್ಮನೆ ಕುಳಿತ.
ಮಧ್ಯಾಹ್ನ ಅದೇ ಸೋಡಾ ಅನ್ನವನ್ನ ಸ್ವಲ್ಪವಷ್ಟೇ ತಿಂದು, ಕುಳಿತಿದ್ದಾಗ ಒಬ್ಬ ಬಂದು ತನ್ನ ಚೀಟಿಯಲ್ಲಿ ಬರೆದಿದ್ದನ್ನು ತೋರಿಸಿದ -'ಓದೋಕ್ಕೆ ಬರತ್ಯೇ ತಮಗೆ?' ಅಂತ.
'ಅಂಧರಿಗೆ ಸಂಗಡಿಗರಾಗಿ ಒಬ್ಬರು ಹೋಗಬಹುದು' ಎಂದು ಬರೆದಿತ್ತು. ಸದಾನಂದನಿಗೆ ಹತ್ತಿದ ಕೋಪಕ್ಕೆ ಆತನನ್ನ ಅಲ್ಲೇ ಬಗ್ಗಿಸಿ ಆತನ ಪ್ಯಾಂಟನ್ನ ಬಿಚ್ಚಿ ಮುಕಳಿಯೊಳಗೆ ಖಾರದ ಕೋಲನ್ನ ತುರುಕಿ ಇನ್ನೊಮ್ನೆ ಅಧಿಕ ಪ್ರಸಂಗಿತನ ತೋರಿಸಕೂಡದ ಹಾಗೆ ಮಾಡಬೇಕೆಂದೆನಿಸಿತು. ಆತನನ್ನ ಮಾತಾಡಿಸದಯೇ ಕೈ ಸನ್ನೆಯಲ್ಲೇ ಬಗ್ಗು ಇಲ್ಲಿ ಎಂದು ಹೇಳಿ, 'ಪಿ.ಆರ್.ಒ' ಹ್ಯಾಂಡ್ ಪುಸ್ತಕದಲ್ಲಿ ತಾನು ಗುರುತು ಮಾಡಿಕೊಂಡಿದ್ದ ಸಾಲನ್ನ ತೋರಿಸಿದ. ಆತ ಏನೂ ಮಾತಾಡದೇ ತಲೆ ಕೆರಕೊಂಡು ಸರತಿಯಲ್ಲಿ ಹೊರಟ. ಮತ್ತೆ ವಾಪಾಸ್ಸು ತಿರುಗಿ ಬಂದಾಗ -'ಸಾರಿ ಸರ್..' ಎಂದು ಹೇಳಿ ಹೊರಟು ಹೋದ. ಸದಾನಂದನಿಗೆ ಆತನ ಬಗ್ಗೆ ತನಗೊದಗಿದ್ದ ಕಲ್ಪನೆಯ ಬಗ್ಗೆ ನಾಚಿಕೆಯಾಯಿತು.
'ನೀವೊಬ್ರೆ ಹಿಂಗೆ ಮಾಡೋದು ರೂಲ್ಸು ರೂಲ್ಸು ಅಂತ..' ಮಧ್ಯೆ ವಿಷಕಂಠ ಸುಮ್ಮನೆ ಮಾತಿಗೆಳೆದ. ಸದಾನಂದ ಆತನನ್ನ ಒಮ್ಮೆ ನೋಡಿ ತಲೆಯಾಡಿಸಿ ತನ್ನ ಕೆಲಸ ಮುಂದುವರೆಸಿದ. 'ನಾನು ಹೇಳಿದ್ಮೇಲೆ ಮುಗೀತು. ನೀವು ಐಡಿ ಕಾರ್ಡ್ನು ಕೇಳಬಾರ್ದು' ಅಂತ ತಾಕೀತು ಮಾಡಿದ. ಸದಾನಂದನಿಗೆ ಮತ್ತೆ ಕೋಪ ಬಂದಿತು. ಆದರೂ ಸಮಾಧಾನದಿಂದ -'ಐಡು ಕಾರ್ಡು ನಂಬರ್ ನೀವು ಹೇಳ್ತೀರ ಅವ್ರದ್ದು?' ಅಂತ ಕೇಳಿದ. 'ಅದ್ಯಾಕ್ ಬೇಕು?' ಅಂತ ಆತ ಕೇಳಿದ್ದಕ್ಕೆ 'ಅದ್ನೆಲ್ಲಾ ನಿಮಗೆ ಹೇಳೋ ಅವಶ್ಯಕತೆ ಇಲ್ಲಾರೀ' ಅಂತ ಹೇಳಬೇಕೆನಿಸಿದರೂ, ರಿಜಿಸ್ಟರ್ 17 A ಬಳಿ ಆತನನ್ನ ಕರಕೊಂಡು ಹೋಗಿ ತೋರಿಸಿದ. 'ನಿಯಮ. ಐಡಿ ಕಾರ್ಡುಇಲ್ಲದೇ ನಾವು ಹೇಗೆ ಆತನ ಗುರುತನ್ನ ಕಂಡು ಹಿಡಿಯೋದು?' ಸದಾನಂದನ ಕೇಳಿದ.
'ನಾ ಇಲ್ವಾ ಇಲ್ಲಿ?'
ಸದಾನಂದನಿಗೆ ನಗು ಬಂದು ನಕ್ಕು ಸುಮ್ಮನಾದ.
ಆದರೂ ಸದಾನಂದನಿಗೆ ತಾನು ಮೊದಲು ವೋಟ್ ಹಾಕಿದ ದಿನಗಳು ನೆನಪಾಗದೆ ಇರಲಿಲಲ್ಲ. ತಾನೂ ಸಹ ಐಡಿ ಕಾರ್ಡನ್ನ ಮರೆತು ಹೋಗಿದ್ದಾಗ ಅಲ್ಲಿದ್ದ ಪೋಲಿಂಗ್ ಏಜೆಂಟರ ಮಾತಿನ ಆಧಾರದ ಮೇಲೆ ತನಗೆ ವೋಟ್ ಹಾಕಲು ಅವಕಾಶ ನೀಡಿದ್ದು ನೆನಪಾಯಿತು. ತಾನೇಕೆ 'ನಿಯಮ'ದ ಅಧೀನನಾಗಿ ಇಷ್ಟೊಂದು ಕಾಂಪ್ಲಿಕೇಟ್ ಮಾಡಿಕೊಳ್ತಿದ್ದೇನೆ ಅಂದೆನಿಸಿತು. 'ಇದು ಭಯವೇ?' ಎಂದು ತಿಳಿಯದೇ ಇದ್ದರೂ, ನಿಯಮವನ್ನ ಮೀರಲಿಕ್ಕೆ ಸದಾನಂದನಿಗೆ ಧೈರ್ಯವಂತೂ ಇರಲಿಲ್ಲ. ಹೇಳಿ ಕೇಳಿ ಮೊದಲೇ ಗಣಿತದ ಮೇಷ್ಟ್ರು ಆತ!
ಆ ಒಂದು ಗಂಟೆಯ ಪ್ರಹಸನವೊಂದ ಬಿಟ್ಟು ಸಣ್ಣ ಪುಟ್ಟ ಮಾತು ಕತೆಗಳೊಂದಿಗೆ ದಿನ ಕಳೆಯಿತು. ಸಂಜೆ 5:30 ಕ್ಕೆಲ್ಲಾ ಜನರ ಸಂಖ್ಯೆ ನಿಂತಿತು. ದಿನ ಪೂರ ನೀರು ಹರಿದಂತೆ ಹರಿದ ಜನ ದಿನದ ಕೊನೆಗೆ 750ರ ಚಿಲ್ಲರೆಯಲ್ಲಿ ನಿಂತಿತು. ದಿನದ ಕೊನೆಯಲ್ಲಿ ಒಬ್ಬಾಕೆ ಒಳ ಬಂದಳು. ನಂಬರ್ ಹೇಳಿ ಅಂದಾಗ, 'ನಂದು ಆಗೈತೆ ಸಾರ್'. 'ಮತ್ತೆ?' ಸದಾನಂದ ಕೇಳಿದ. 'ಉಳಿಕೆ ವೋಟು ಹಾಕ್ಕೋಳ್ಳ?' ಕೆಳಿದಳು. ಸದಾನಂದನಿಗೆ ಗಾಬರಿಯಾಯಿತು. ಇಷ್ಟು ಧೈರ್ಯವಾಗಿ ಹೀಗೆ ಕೇಳಿದಳಲ್ಲ ಎಂದು. 'ಹೋಗಮ್ಮ ಹೋಗು ಆಚೆಗೆ' ಸದಾನಂದನ ಏನಾದರೂ ಮಾತಾಡೋದರೊಳಗೆ ನಾಗೇಶ್ವರ್ ಗುಡುಗಿದರು. ಕಿಟಕಿಯಲ್ಲಿ ಇಣುಕಿದ್ದ ವಿಷಕಂಠನ ಮುಖವೂ ಚಕ್ಕೆಂದು ಮಾಯವಾಯಿತು.
6 ಗಂಟೆಗೆ ಸರಿಯಾಗಿ ಎಲೆಕ್ಷನ್ನನ್ನು ಮುಗಿಸಿ ಎಲ್ಲಾ ಪ್ಯಾಕ್ ಮಾಡಿ ಫಾರಂಗಳನ್ನೆಲ್ಲಾ ಫಿಲ್ ಮಾಡೋ ಅಷ್ಟರಲ್ಲಿ 7 ಗಂಟೆಯೇ ಆಯಿತು. ಸದಾನಂದ ತನ್ನ ಪಿ.ಆರ್.ಒ ಡೈರಿಯನ್ನ ತುಂಬಬೇಕಿತ್ತು.
ಏನಾದರೂ ಹಿಂಸಾಚಾರ ಜರುಗಿತೆ? ತೊಡಕುಗಳು ಜರುಗಿತೆ? ಎನ್ನುವ ಕಾಲಂನಲ್ಲಿ 'ಇಲ್ಲ' ಎಂದು ಬರೆದು ಎಲ್ಲವನ್ನೂ ಪ್ಯಾಕ್ ಮಾಡಿದ.
ಹೊರಗೆ ಬಂದು ತಣ್ಣನೆಯ ಗಾಳಿಗೆ ಮೈಯೊಡ್ಡಿ ಅಲ್ಲಿದ್ದ 'ಡಿ' ಗ್ರೂಪ್ ನೌಕರನಿಗೆ ಕೇಳಿದ 'ಏನಯ್ಯಾ ನಿಮ್ಮೂರಲ್ಲಿ ಪಿಕ್ಚರ್ ತೋರ್ಸಿದ್ರಲ್ಲಯ್ಯಾ?' ಅಂತ.
'ಅದೇನಿಲ್ಲಾ ಸಾರ್. ಕಳೆದ ಸತಾನೂವೆ ಹಿಂಗೆ ಜಗಳ ಆಗಿತ್ತು. ಆದರೆ ಇಲ್ಲಲ್ಲ ಹೊರಗೆ. ಪೋಲಿಂಗ್ ಏಜೆಂಟ್ರು ಮಧ್ಯ. ಸಿಕ್ಕಾಪಟ್ಟೆ ಪೋಲೀಸ್ ಬಂದಿದ್ರು'.
'ಹಂ...' ಸದಾನಂದ ಹೂಂಕರಿಸಿ ಗೋಡೆಗೆ ಒರಗಿ ಕೂತ. 'ಏನ್ ಸಾರ್', ನಾಗೇಶ್ವರ್ ಕಡೆಗೆ ತಿರುಗಿ ಸದಾನಂದ ಹೇಳಿದ - 'ಸೊಳ್ಳೆ ಇಲ್ಲಾ ಅಂತಿದ್ರಲ್ಲಾ. ಸುಮ್ಮನೆ ನೀವು ಕಣ್ಣು ಕಾಣಿಸ್ತಿಲ್ಲ ಅಂತ ಬಂದಿದ್ನಲ್ಲ ಅವನಿಗೆ ಕಣ್ಣು ಕಾಣಿಸೋಲ್ಲ ಅನ್ನೋಕ್ಕೆ ದೃಡೀಕರಣ ಪತ್ರ ತೋರಿಸು ಅಂತ ಕೇಳಬೇಕಿತ್ತು. ನಿಮ್ಮ ರಕ್ತ ಹೀರಿ ಬಿಡ್ತಿದ್ರ ಅಂತ'.
ನಾಗೇಶ್ವರ್ ಗೊಳ್ ಎಂದು ನಕ್ಕರು.
No comments:
Post a Comment