Saturday, August 24, 2024

ಭಾವ ತರಂಗ

ಅವತ್ತು ಬೆಳಿಗ್ಗೆ ಇನ್ನೂ ಗಿಡದಲ್ಲೇ ಕೊಯ್ಯದೆ ಉಳಿದಿದ್ದ ದಾಸವಾಳದ ಹೂಗಳನ್ನ ನೋಡಿಯೇ ಐಯ್ಯಂಗಾರ್ರು ಮನೇಲಿ ಇಲ್ಲ ಎಂದು ತಿಳಿಯಿತು. ಪ್ರತೀ ದಿನ ಬೆಳಿಗ್ಗೆ ಏಳರ ಒಳಗೆ ಕಾಂಪೌಂಡಿನ ಒಳಗೆ ಬೆಳೆದು ಕೊಂಡಿದ್ದ ಹೂಗಿಡಗಳೆಲ್ಲದರ ಹೂಗಳು ಖಾಲಿಯಾಗಿರುತ್ತಿದ್ದವು. ಐಯ್ಯಂಗಾರ್ರಾದರೂ ಕಟ್ಟಾ ಆಚರಣೆ ಇರಲಿಲ್ಲ. 'ತಿರು' ಆರಾಧನೆಯನ್ನ ಮೈಗೂಡಿಸಿಕೊಳ್ಳಲಿಲ್ಲ. ಆದರೆ ದಿನಕ್ಕೆ ಒಮ್ಮೆಯಾದರೂ ಸಂಧ್ಯಾವಂದನೆ, ಹೆಚ್ಚಾಗಿ ಬೆಳಗ್ಗಿನ ಹೊತ್ತೆ, ಮಾಡಿ, ದೇವರಿಗೆ ಹೂಗಳೆಲ್ಲವನ್ನೂ ಅರ್ಪಿಸಿ ಗಂಧ, ಆರತಿ ಎಲ್ಲವನ್ನೂ ತೋರಿ ಹಾಲನ್ನ ನೈವೇದ್ಯ ಮಾಡೋದು ಐಯ್ಯಂಗಾರರ ನಿತ್ಯಕರ್ಮವಾಗಿತ್ತು. ದೊಡ್ದ ಕೆಂಪು ನಾಮವನ್ನಂತೂ ಇಡುತ್ತಿದ್ದರು. ಇದು ಪದ್ಮಮ್ಮ ಹೋದ ಮೇಲೂ ನಡೆದಿತ್ತು. ಅದಕ್ಕೂ ಮುನ್ನ ದಿನಕ್ಕೆರಡು ಬಾರಿ ಸಂಧ್ಯಾವಂದನೆ ಮಾಡ್ತಿದ್ದರಂತೆ. ಐಯ್ಯಂಗಾರರು ಆಚರಣೆಯನ್ನೆಲ್ಲಾ ಕಲೀಲಿಲ್ಲವೆಂದಲ್ಲ. ಮೈಗೂಡಿಸಿಕೊಳ್ಳಲಿಲ್ಲವಷ್ಟೆ. ಒಂದು ರೀತಿ ಉದಾಸೀನ. ಇದಕ್ಕೆ ಅವರ ಟ್ರಾನ್ಸ್ ಫರಬಲ್ ಜಾಬ್ ಕೂಡ ಕಾರಣ ಇದ್ದಿರಬೋದು. ಐಯ್ಯಂಗಾರರಲ್ಲಿ ಸಾಮಾನ್ಯ ನಿಂತು ಪೂಜೆ ಮಾಡೋದು. ಹಾಗಾಗಿ ದೇವರ ಮನೆಯಲ್ಲಿ ಕೆಳಗೆ ನೆಲಕ್ಕೆ ಕಟ್ಟೆಯ ಬದಲಾಗಿ ಸ್ವಲ್ಪ ಎತ್ತರದಲ್ಲಿ ಕಟ್ಟೆ ಇರುತ್ತದೆ. ಅದರ ಮೇಲೆ‌‌ ಒಂದು ಮರದ ಬಾಕ್ಸ್ (ಕೋವಿಲ್‌ ಆಳ್ವಾರ್ ಎಂದು ಪ್ರತೀತಿ). ಅದರ ಒಳಗೆ ಇವರ ದೇವರುಗಳು. ಈ ವ್ಯವಸ್ಥೆ ಹೋದ ಕಡೆಯೆಲ್ಲಾ ಸಿಗಲಾರದು. ಬ್ಯಾಂಕಿನವರು ಅಬ್ಬಬ್ಬ ಎಂದರೆ ನಾಲ್ಕು ವರ್ಷಕ್ಕಿಂತ ಹೆಚ್ಚಾಗಿ ಒಂದೆಡೆ ಉಳಿಸಲಾರರು. ಹೀಗಾಗಿ, ಮನುಷ್ಯ ಜೀವನದ ವಿಕಾಸದಲ್ಲಿ ಈ ರೀತಿಯ ಕೆಲವು ಉದಾಸೀನಗಳು ಅನಿವಾರ್ಯವೆಂಬಂತೆ ಇವರಲ್ಲೂ ತಲೆದೂರಿತು. 



"ಪ್ರತೀ ದಿನ ಎಲ್ಲೇ ಹೋದರು ನನಗೊಂದು ಮಾಹಿತಿ ಕೊಟ್ಟೇ ಹೋಗ್ತಿದ್ದೋರು ಇವತ್ತೇಕೆ ಏನೂ ಹೇಳಲಿಲ್ಲ" ಪಕ್ಕದ ಮನೆಯ ಸುಮಾಳಿಗೆ ಸಂದೇಹವಾಯಿತು. 

"ಅಥವಾ ಮೈ ಹುಷಾರಿಲ್ಲವೋ ಏನೋ" ಎಂದು ಪಕ್ಕದ ಮೆನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದರೂ ಎಷ್ಟೊತ್ತಾದರೂ ತೆಗೆಯಲಿಲ್ಲ. ಪ್ರಾಯಶಃ ಹೊರಗೆಲ್ಲೋ ಹೋಗಿದ್ದಿರಬೋದು ಎಂದು ಒಮ್ಮೆ ಐಯ್ಯಂಗಾರರ ಸಂಖ್ಯೆಗೆ ಫೋನು ಹಚ್ಚಿದಳು. ಸುಮಾಳಿಗೆ ಪದ್ಮಮ್ಮನವರು ಬಹಳ ಆಪ್ತ. ಹಾಗಾಗಿ ಒಂದು ರೀತಿಯ ಆಪ್ಯಾಯಮಾನತೆ. 

"ನೀವು ಕರೆ ಮಾಡಿದ ವ್ಯಕ್ತಿ ಬೇರೊಂದು ಕರೆಯಲ್ಲಿ ನಿರತರಾಗಿದ್ದಾರೆ".

ಸುಮಾಳಿಗೆ ಖಚಿತವಾಯ್ತು ಅವರು ಮನೆಯಲ್ಲಿಲ್ಲೆಂದು. ಇದ್ದಿದ್ದರೆ ಅವರ ಧ್ವನಿಯಾದರೂ ಕೇಳಿಸ್ತಾ ಇತ್ತು. ಸಂಜೆಯ ವೇಳೆಗೆ ಅಯ್ಯಂಗಾರರೇ ಫೋನು ಮಾಡಿ "ಅಮ್ಮಾ.. ಸಾರಿ.. ಬೆಳಗ್ಗೆ ಹೇಳೊಕ್ಕೆ ಆಗಲಿಲ್ಲ.  ನಾನು ಚೆನ್ನೈ ಬಂದಿದೀನಿ‌. ಎಲ್ಲಾನೂ ಬಂದು ವಿವರಿಸ್ತೇನೆ". 

****

ಪದ್ಮಮ್ಮನವರು ಇತ್ತೀಚೆಗಷ್ಟೆ ಹೋದದ್ದು‌. 'ಮಾಮಿ.. ಮಾಮಿ' ಎಂದು ಅವರು ಇದ್ದಷ್ಟು ದಿವಸ ಅವರ ಮನೆಯಲ್ಲೇ ಬೆಳಗ್ಗಿಂದ ಸಂಜೆಯವರೆಗೆ ಸುಮಾ ಸಮಯ ಕಳೀತಾ ಇದ್ದಳು. ಪದ್ಮಮ್ಮನವರ ಕೈ ರುಚಿ ಅದ್ಭುತ. ಹೊಸ ಅಡುಗೆಯನ್ನ ಕಲಿಯೋದು, ಒಟ್ಟಿಗೆ ಕೂತು ಸೀರಿಯಲ್ ನೋಡೋದು, ಅವರಿವರ ಬಗ್ಗೆ,  ಹಾಗೆಯೇ ಶಾಸ್ತ್ರ ಸಂಪ್ರದಾಯಗಳ ಬಗ್ಗೆ ಮಾತು ಹೀಗೆ ದಿನಗಳು ಕಳೆದು ಹೋಗ್ತಿದ್ದವು‌. ಐಯ್ಯಂಗಾರರು ಇವರ ಮಾತುಗಳಲ್ಲಿ ಸೇರ್ತಿರಲಿಲ್ಲವಾದ್ರು, ಒಂಟಿಯಾಗಿಯೂ ಇರ್ತಿರಲಿಲ್ಲ. ಇವರೊಟ್ಟಿಗೆ ಆಗೀಗೊಮ್ಮೆ ಸೀರಿಯಲ್ ನೋಡೋದು, ಅಡುಗೆ ಮಾಡೋ ಸಮಯದಲ್ಲಿ ಮಧ್ಯ ಇಣುಕಿ ತಮ್ಮದೊಂದಷ್ಟು ಮಾತಿನ ಒಗ್ಗರಣೆ ಸೇರಿಸೋದು, ಹೀಗೆ. 

ವಾಸ್ತವವಾಗಿ ಐಯ್ಯಂಗಾರ್ರಿಗೆ ಸ್ವತಃ ಅಡುಗೆ ಮಾಡೋದು ಬರ್ತಿರಲಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಪದ್ಮಮ್ಮ ಹೇಳ್ತಿದ್ದ ಹಾಗೆ ಯಾಂತ್ರಿಕವಾಗಿ ಮಾಡೋರು. ಉಪ್ಪು ಎಷ್ಟು ಹಾಕಬೇಕು ಅನ್ನೋದು ಉಪ್ಪನ್ನ ಕೈಯಲ್ಲಿ ಹಿಡಿದಾಗಲೇ ತಿಳಿಯೋದು. ಹೀಗಾಗಿ, ಐಯ್ಯಂಗಾರ್ರು ಹೇಳಿಸಿಕೊಂಡು ಅಡುಗೆ ಮಾಡಿದ್ರೂ ಅಷ್ಟಕ್ಕಷ್ಟೇ - ಆ ಸಮಯದ ಹೊಟ್ಟೆಗೆ ಅಡ್ಡಿಯಿಲ್ಲ. ಆದರೆ ಪದ್ಮಮ್ಮ ಹೋದಮೇಲಂತೂ ಅವರಿಗೆ ಕೈಕಾಲೇ ಆಡದಾಯಿತು. ರಿಟೈರ್ ಆಗಿ ಐದು ವರ್ಷಗಳು ಕಳೆದಿದ್ದಿರಬೋದು. ಮೈಸೂರಲ್ಲಿ ಬಹಳ ವರ್ಷಗಳು, ಅಂದರೆ ಒಂದು ಹದಿನೈದು ವರ್ಷಗಳ ಹಿಂದೆ ಕೊಂಡಿದ್ದ ಮುಡಾ ಸೈಟಿನಲ್ಲೇ ಮನೆ ಕಟ್ಟಿಸಿ ಅಲ್ಲೆ ವಾಸವಾದರು. ಇವರು ಬಂದಾಗಿನಿಂದ ಇಲ್ಲಿಯವರೆಗೆ ಒಂದೈದು ವರುಷಗಳಷ್ಟೇ ಕಳೆದಿದ್ದರಬೋದು.‌ ಅಷ್ಟರಲ್ಲೆ ಸುಮಾ ಪದ್ಮಮ್ಮರನ್ನು ಅಷ್ಟು ಹಚ್ಚಿಕೊಂಡಿದ್ದಳು. 

ಅವರು ಹೋಗಿದ್ದು ಮಧ್ಯಾಹ್ನ. ಹೋದದ್ದು ಬಹಳ ವಿಚಿತ್ರ. ಹೋಗುವಷ್ಟು ಆರೋಗ್ಯ ಹದಗೆಟ್ಟಿರಲಿಲ್ಲ. ಶುಗರ್ ಇತ್ತಷ್ಟೇ. ಬಾತ್ ರೂಮಿನಲ್ಲಿ ಕಾಲು ಜಾರಿ ತಲೆ ಹಿಂಬಾಗ ಅಲ್ಲಿದ್ದ ಚಪ್ಪಡಿಗೆ ದಡ್ ಎಂದು ಬಡಿದು ಪದ್ಮಮ್ಮ ಕುಸಿದು ಬಿದ್ದರು. ಸದ್ದಿಲ್ಲ ಮಾತಿಲ್ಲ. ಎಷ್ಟೊತ್ತಾದರೂ ಬರದ ಹೆಂಡತಿಯನ್ನ ನೋಡಲು ಬಂದ ಐಯ್ಯಂಗಾರ್ರಿಗೆ ದೊಡ್ಡ ಆಘಾತ. ಏನು ಮಾಡಲು ತಿಳೀದೆ ಪಕ್ಕದ ಸುಮಾಳನ್ನ ಕೂಗಿ ಕರೆದರು. ಇವರ ಗಾಬರಿಯನ್ನ ನೋಡಿ ಅವಾಕ್ಕಾಗಿ ಬಂದ ಸುಮಾಳಿಗೂ ಅದು ಆಘಾತವೇ. ಮಾತೇ ಹೊರಡಲಿಲ್ಲ ಪದ್ಮಮ್ಮನ್ನ ಆ ಸ್ಥಿತಿಯಲ್ಲಿ ನೋಡಿ. ಕಣ್ಣೀರು ತಂತಾನೆ ಕೆನ್ನೆಯನ್ನ ಹಾದಿಯಾಗಿಸಿತ್ತು. ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿ ಪದ್ಮಮ್ಮಳನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜೀವ ಇದ್ದರೂ ಮಧ್ಯಾಹ್ನದ ವೇಳೆಗೆಯೇ ಪದ್ಮಮ್ಮ ಕೊನೆಯುಸಿರೆಳೆದರು‌. ಇದು ಸುಮಾಳಿಗು ಸಹ ಸಹಿಸಲಾಗದ ನೋವಾಗಿತ್ತು. ಐಯ್ಯಂಗಾರ್ರ ಕಣ್ಣಲ್ಲಿ ನೀರಿರದಿದ್ದರೂ ಅವರ ಮೌನ, ನಿಸ್ತೇಜ ದೇಹ ಅವರ ಆಂತರ್ಯದ ವೇದನೆಯನ್ನ ತೋರುತ್ತಿದ್ದವು. 

*****

ಸುಮಾ ತಾನೇ ಅಡುಗೆ ಮಾಡಿ ಕೊಡ್ತೇನೆ ಅಂತ ಎಷ್ಟೇ ಒತ್ತಾಯಿಸಿದರೂ, ಐಯ್ಯಂಗಾರರು ಒಪ್ಪದೇ ಒಂದು ಕ್ಯಾಟೆರಿಂಗನ್ನು ಗೊತ್ತು ಮಾಡಿಕೊಂಡರು. ಸುಮಾಳಿಗೂ ಕಾರಣ ತಿಳೀದು. ಐಯ್ಯಂಗಾರ್ರು -"ನಿನಗೆಲ್ಲಾ ತೊಂದರೆ ಬೇಡ.' ಅಂತಷ್ಟೇ ಹೇಳ್ತಿದ್ರು. ಪ್ರಾಯಶಃ ಸುಮಾ ಹಣವನ್ನ ಪಡೆಯೋಲ್ಲ ಅಂತ ಇದ್ದಿರಬೋದೇ ಅಥವಾ ಆಕೆ ಐಯ್ಯಂಗಾರ್ರಲ್ಲ ಅನ್ನೋದು ಕಾರಣವೇ ಅಥವಾ ಆಕೆಯೆಲ್ಲಾದರೂ ಹೊರಗೆ ಹೋಗೋ ಸಂದರ್ಭ ಬಂದರೆ ಅಥವಾ ಹೊರಗಾದ ಸಂದರ್ಭದಲ್ಲಿ ಊಟಕ್ಕೆ ಹೇಗೆ ಅನ್ನೋ ಚಿಂತೆಯೇ ತಿಳೀದು. ಒಟ್ಟಿನಲ್ಲಿ ಒಬ್ಬ ಐಯ್ಯಂಗಾರಿ‌ ಕ್ಯಾಟೆರಿಂಗನ್ನೇ ಹುಡುಕಿಕೊಂಡರು. ಒಬ್ಬ ಹುಡುಗ ದಿನಾ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟ ತಂದು ಕೊಟ್ಟು ಹೋಗ್ತಿದ್ದ‌. ಪ್ರತೀ ದಿನ ಐಯ್ಯಂಗಾರರನ್ನ ಮಾತನಾಡಿಸಿ, ಅವರ ಆರೋಗ್ಯದ ಬಗ್ಗೆ ಸುಮಾ ಒಂದು‌‌‌ ನಿಗಾ ಇಟ್ಟಿದ್ದಳು. 

ಐಯ್ಯಂಗಾರ್ರಿಗೆ ಇದ್ದ ಮೂವರು ಮಕ್ಕಳಲ್ಲಿ ಒಬ್ಬ ಆಸ್ಟ್ರೇಲಿಯಾದಲ್ಲಿದ್ದ. ಅವನೇ ಹಿರಿ ಮಗ. ಅಮ್ಮನ‌ಕಾರ್ಯ ಮುಗಿದ ಕೂಡಲೇ ಹೋರಡಬೇಕಿತ್ತು. ಆತನೇ ಕ್ಯಾಟರಿಂಗ್ ಐಡಿಯಾವನ್ನೂ ನೀಡಿ ಒಂದನ್ನು ಹುಡುಕಿಯೂ ಕೊಟ್ಟಿದ್ದ. ಇನ್ನು ಎರಡನೆಯವಳದ್ದು ಶ್ಯಿಕಾಗೋದಲ್ಲಿ ವಾಸ್ತವ್ಯ.‌ ಆಕೆಗೆ ಸರಿಯಾದ ಸಮಯಕ್ಕೆ ಕಾಲು ಮಂಡಿಯ ಆಪರೇಷನ್ ಮಾಡಿಸಿದ್ದರಿಂದ ಬರಲಾಗಲಿಲ್ಲ. ಮೂರನೆಯವ ಈಗಷ್ಟೇ ಪಿ.ಎಚ್ಡಿ ಥೀಸೀಸ್ ಸಲ್ಲಿಸಿ ರಿಪೋರ್ಟಿಗಾಗಿ ಕಾಯ್ತಿದ್ದ. ಹಾಗಾಗಿ ಆತ ಬಂದರೂ ಮೂರು ದಿನಗಳ ಮೇಲೆ ಉಳಿಯಲಾಗಲಿಲ್ಲ.

****

ಸುಮಾ ಕಣ್ಣರಳಿಸಿ ನೋಡಿದಳು. "ಮಾಮ.. " ಅಂತ ಬಿಟ್ಟ ಬಾಯಿ ಹಾಗೆ ಇತ್ತು. "ಇದೇನಿದು ಈ ವಯಸ್ಸಲ್ಲಿ" ಅಂತ ಕೇಳಬೇಕೆಂದಾದರು ಸುಮ್ಮನಾದಳು. ಚೆನ್ನೈಗೆ ಹೋಗಿದ್ದ ಐಯ್ಯಂಗಾರ್ರು ಮೂರು ದಿನಗಳ ತರುವಾಯ ಮರಳಿ ಬಂದಿದ್ದರು‌. ಅವರು ಬಂದ ಸದ್ದು ತಿಳಿದು ಹೋದ ಸುಮಾಳಿಗೆ ಆದದ್ದು ಆಶ್ಚರ್ಯ. 

"ಈಕೆ ಮನೋರಮ... ನನ್ನ ಹೊಸಾ ಹೆಂಡತಿ." ಎಂದು ಐಯ್ಯಂಗಾರ್ರು ಆಕೆಯ ಭುಜದ ಮೇಲೆ ಕೈ ಹಾಕಿ ತಟ್ಟಿದರು.

"ನನಗೆ ಪದ್ಮಳ ಕೈ ರುಚಿ ಬಾಳ ಕಾಡ್ತಾ ಇತ್ತು. ಆ ಕ್ಯಾಟೆರಿಂಗಿನ ಊಟದಲ್ಲಿ ಅಷ್ಟು ಪ್ರೀತಿ, ಕಾಳಜಿಯ ಸವಿಯಿಲ್ಲ.  ಹಾಗಾಗಿ ಮನೇಲೆ ಪದ್ಮಳ ಹಾಗೆ ಮಾಡಿ ಹಾಕೋರು ಬೇಕು ಅನ್ನಿಸಿತು." ಅಂತ ಐಯ್ಯಂಗಾರ್ರು ಹೇಳಿದರು. 

"ಮಾಮ....." ಅಂತ ಮತ್ತೆ ಎನೂ ಹೇಳಲು ತೋಚದೆ ಸುಮ್ಮನೆ ನೋಡುತ್ತಾ ನಿಂತ ಸುಮಾಳನ್ನ ನೋಡಿ 

"ಈಕೆಗೆ ಕನ್ನಡ ಬರೋಲ್ಲಾ. ತಮಿಳೆ. ಪದ್ಮಳಹಾಗೆ ನಿಂಗೆ ಈಕೆ ಜೊತೆ ಟೈಂ ಪಾಸ್ ಆಗೋದು ಕಷ್ಟ. ಹ್ಹಾ ಹ್ಹಾ..." ಎಂದು ನಕ್ಕರು‌. ಏನು ಮಾಡಲು ತೋಚದೆ "ಮಾಮ ತಡೀರಿ" ಎಂದು ಅವರನ್ನ ಗೇಟಿನ ಬಳಿಯೇ ನಿಲ್ಲಿಸಿ ತನ್ನ ಮನಕಡೆ ಹೋಗಿ ಒಂದೈದು ನಿಮಿಷದಲ್ಲಿ ಆರತಿ ತಟ್ಟೆ ಹಾಗೂ ಸೇರನ್ನ ತಯಾರು ಮಾಡಿ‌ತಂದು ಆಕೆಯನ್ನ ಮನೆಗೆ ತುಂಬಿಸಿಕೊಂಡಳು. 

"ಥ್ಯಾಂಕ್ಸಮ್ಮ.. ಆಗಾಗ ಬರ್ತಾ ಇರು ಇನ್ನು. ಸ್ವಲ್ಪ ದಿವಸ ಅಷ್ಟೇ ನಿನಗೆ ಅಡ್ಜಸ್ಟ್ ಆಗೋಕ್ಕೆ" ಅಂತ ಹೇಳಿ ಸುಮಾಳನ್ನ ಕಳಿಸಿಕೊಟ್ಟರು. 

****

"ಈ ವಯಸ್ಸಲ್ಲಿ ಯಾಕೆ ಬೇಕಿತ್ತಂತೆ?" ಇದು ಸಹಜವಾದ ಮಾತೇ. ಸುಮಾಳ ಆಂತರ್ಯದಲ್ಲಿ ಬೇರೇನೋ ಓಡುತ್ತಿದ್ದರಿಂದ ಈ ರೀತಿಯ ಪ್ರಶ್ನೆಗಳಿಗೆ "ನಿಮಗ್ಯಾಕೆ" ಎಂದು ಕೇಳುವಷ್ಟೂ ಆಸ್ಥೆ ಹುಟ್ಟಲಿಲ್ಲ. 

ಅಷ್ಟು ಬೇಗ ಗಾಯ ಮಾಸಿ ಹೋಗಲು ಸಾಧ್ಯವೇ? ಅಥವಾ ಐಯ್ಯಂಗಾರ್ರಿಗೆ ಪದ್ಮಮ್ಮನ ಮೇಲೆ ಅಂಥಾದ್ದೇನು ವಿಶೇಷ ಒಲವಿರಲಿಲ್ಲವೇ? ಹಾಗೇನು ಇಲ್ಲ. ಯಾಕಂದ್ರೆ ಪದ್ಮಮ್ಮನ ನೆನಪಲ್ಲೇ, ಅವರ ಕೈ ರುಚಿಯ ಸವಿ, ಪ್ರೀತಿ‌ ಕಾಳಜಿಯಲ್ಲೇ ಅವರು ಈ ಮನೋರಮೆಯನ್ನ ಕಂಡುಕೊಂಡಿದ್ದಲ್ಲವೇ? ಎಂದು ಆಕೆ ಒಳಗೊಳಗೇ ಹೇಳಿಕೊಳ್ಳುತ್ತಿದ್ದಷ್ಟೂ, ಹೊರಗೂ ಸಹ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದ್ದವು‌. 

"ಹುಣಸೆ ಮುಪ್ಪಾದ್ರೂ ಹುಳಿ ಮುಪ್ಪಾಗ್ಲಿಲ್ಲ" ಸುಮಾಳ ಗಂಡನೇ ಅನುಮಾನ ವ್ಯಕ್ತಪಡಿಸಿದಾಗ ಆಕೆಗೆ ಬೇಸರವೂ ಅಯಿತು. 

"ಮಕ್ಳಿಗೆ ಗೊತ್ತೇನು? ನೀ ಆ ಕಡೆ ಹೋಗೋದು ಕಡಿಮೆ ಮಾಡು" ಹೀಗೆ ಒಂದಿಲ್ಲೊಂದು ತಾಕೀತುಗಳನ್ನ ಸುಮಾ ತನ್ನ ಮನೆಯಲ್ಲೇ ಎದುರಿಸಬೇಕಾಯ್ತು‌.  ಆದರೂ ಆಕೆಗೆ ಬಗೆಹರಿಯಲಾಗದ ಸಂದೇಹಗಳಿತ್ತು. 

ಒಂದು ದಿನ ಬೆಳಗ್ಗೆ ಐಯ್ಯಂಗಾರರು ಹೂ ಕೀಳುತ್ತಿದ್ದಾಗ ಸುಮಾ ಕೇಳಿದಳು - " ಮಾಮ ನಿಮಗೆ ಈ‌ಮಾಮಿ ಹೇಗೆ ಸಿಕ್ಕಿದ್ದು?" 

ಮನೋರಮೆಯ ವಯಸ್ಸು ಒಂದು 50-55 ಇದ್ದಿಬೋದು. 

"ಓಹ್ ಅದಾ‌. ಇವಳು ನಮ್ಮ ದೂರದ ಸಂಬಂಧಿಕಳೇ. ಈಕೆಗೆ ಗಂಡ ಹೋಗಿ ಒಂದು ಆರೇಳು ವರ್ಷ ಆಗಿರಬೇಕು. ಒಬ್ಬ ಮಗ, ಒಂದು ಮಗಳು. ನನ್ನ ಚಿಕ್ಕಪ್ಪನ ಮಗ ಇದರ ಪ್ರಸ್ತಾಪ ಇಟ್ಟ. ಅವರ ಮಕ್ಕಳಿಗೂ ಒಪ್ಪಿಗೆ ಇತ್ತಂತೆ‌. ಇನ್ನು ನನ್ನ ಯಾವ ಮಕ್ಕಳೂ ಇದಕ್ಕೆಲ್ಲಾ ತಲೆ ಹಾಕೋದಿಲ್ಲ. ಅವರೆಲ್ಲಾ ಒಂಥರಾ ಪ್ರೋಗ್ರೆಸೀವ್. ನನಗೆ ಪದ್ಮಳ ಕೈ ರುಚಿ ಕಾಡ್ತಾ ಇತ್ತು. ಹಾಗಾಗಿ‌ ನನಗೂ ಇದು ಬೇಕೆನಿಸ್ತು" ಎಂದು ವಿವರಿಸಿದರು.

*****

ಒಂದು ಆರೇಳು ತಿಂಗಳುಗಳು ಕಳೆದಿರಬೋದು. ಸುಮಾ ಐಯ್ಯಂಗಾರರ ಮನೇಗೆ ಹೋಗುತ್ತಿರಲಿಲ್ಲ. ಐಯ್ಯಂಗಾರರ ಯೋಗಕ್ಷೇಮವನ್ನೂ ಅಷ್ಟಾಗಿ ವಿಚಾರಿಸುತ್ತಿರಲಿಲ್ಲ. ಮನೋರಮೆಯೂ ಹೆಚ್ಚಾಗಿ ಹೊರಗೆ‌ ಕಾಣಿಸ್ತಾ ಇರಲಿಲ್ಲ. ಕಂಡರೂ ನಗೂ ಸಹ ಅಷ್ಟಾಗಿ ಇಲ್ಲ. "ಹೇಗಿದ್ದಾರೋ ಮಾಮ.." ಅಂತ ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ಸುಮ್ಮನೆ ಪ್ರಶ್ನೆ ಹುಟ್ಟೋದು ಸುಮಾಳಿಗೆ.‌ ಆದರೂ ಕೆದಕುತ್ತಿರಲಿಲ್ಲ. 

ಸುಮಾಳಿಗೆ ಕುತೂಹಲವಾಯಿತು‌ ಅದೇ ಹಳೆಯ ಕ್ಯಾಟೆರಿಂಗ್ ಹುಡುಗ ಮೂರ್ನಾಲ್ಕು ದಿನಗಳಿಂದ ಮತ್ತೆ ಇವರ ಮನೆಯತ್ತ ಬರೋದು‌ ಕಂಡು. ಕೇಳಲೋ ಬೇಡವೋ ಎನ್ನುವ ಸಂಕೋಚದಲ್ಲೇ ಕೇಳಿದಳು - "ಮಾಮಿಗೆ ಹುಷಾರಿಲ್ವ ಮಾಮ". 

"ಆಕೆಯಿಲ್ಲಾಮ್ಮ. ಚೆನ್ನೈಗೆ ಹೋಗಿದ್ದಾಳೆ ಮಗನ‌ ಮನೆಗೆ. ಅಲ್ಲೇನೋ ಆಕೆಯ ಸೊಸೆಗೆ ಹುಷಾರಿಲ್ಲಂತೆ ಹಾಗಾಗಿ" 

"ಸರಿ ಮಾಮ" ಅಂತಷ್ಟೇ ಹೇಳಿ ಆಕೆಯೂ ಸುಮ್ಮನಾದಳು. 

ಆದರೆ ಒಂದು ತಿಂಗಳಾದರೂ ಕ್ಯಾಟೆರಿಂಗವನು ಬರುತ್ತಲೇ ಇದ್ದದ್ದು ಕಂಡು ಸುಮಾಳಿಗೆ ಅನುಮಾನವೂ ಬಂತು. ಹೀಗೆ ಎರಡು ತಿಂಗಳು ಕಳೆದಿರಬೋದು. ಒಂದು ಬೆಳಿಗ್ಗೆ ಹೂ ಕೊಯ್ಯುವಾಗ ಐಯ್ಯಂಗಾರರು ಸುಮಾ ಕಂಡೊಡನೆಯೇ ಆಕೆಯನ್ನ ಕರೆದರು. ಏನೋ ಮಾತನಾಡಬೇಕೆಂದಿದ್ದೋರು ಸುಮ್ಮನೆ ಎತ್ತಲೋ ನೋಡುತ್ತಾ ಧ್ಯಾನಿಯಂತೆ ನಿಂತು ಬಿಟ್ಟರು‌. 

"ಮಾಮ..." ಸುಮ ಕರೆದಳು. 

"ಹಾಂ. ಹಾಂ.." ನಿದ್ರೆಯಲ್ಲಿ ಎಚ್ಚರಾದಂತೆ ತಿರುಗಿ 

"ಆಕೆಯಿನ್ನೂ ಬಂದಿಲ್ಲಾಮ್ಮ" ಗಂಟಲು ಸ್ವಲ್ಪ‌ಕಟ್ಟಿದಂತಾಯಿತು‌. ಸರಿಮಾಡಿಕೊಂಡು 

"ಈಗ ವಾರದಿಂದ ಫೋನ್ ಕೂಡ ತೆಗೀತಿಲ್ಲ. ಇಗತ್ತು ಬೆಳಗ್ಗಿನಿಂದ ಸ್ವಿಚ್ ಆಫ್ ಬರ್ತಿದೆ. ಮಗನ ಹೆಂಡತಿಗೆ ಆಪರೇಷನ್ ಇದೆ ಅಂತ 25 ಲಕ್ಷ ತೆಗೆದುಕೊಂಡು ಹೋಗಿದ್ದಳು. ವಾರದ ಕೆಳಗೆ ಮನೆಯಲ್ಲಿದ್ದ ಪದ್ಮಳ ಒಂದೆರೆಡು ಸರ, ನನ್ನ ಉಂಗುರಗಳು ಕಾಣದಾಗಿದ್ವು. ನಾನೇ ಚೆನ್ನೈಗೆ ಹೋಗಿ ಬರೋಣೂಂತ ಹೊರಟೆ. ಇವತ್ತೆ ಹೋಗಿ ಬರ್ತೇನೆ." ಅಂತ ಹೇಳಿ ಇವಳ ಉತ್ತರಕ್ಕೂ ಕಾಯದೇ ಹೊರಟು ಹೋದರು. 

"ಮಾಮ.. ಮಾಮ.." ಸುಮಾ ಕರೆದರೂ ನಿಲ್ಲಲಿಲ್ಲ. 

*****

ಕ್ಯಾಟೆರಿಂಗವ ಬೆಲ್ಲು ಬಾರಿಸಿ ತಿಂಡಿ ಕೊಟ್ಟು ಹೋಗ್ತಿದಾನೆ. ಈಚೀಚೆಗೆ ಹೂಗಳು ಗಿಡದಲ್ಲೇ ಹಾಗೆ ಕೊಯ್ಯದೇ ಉಳಿಯುತ್ತಿವೆ. ಸುಮಾ ಐಯ್ಯಂಗಾರರ ಮನೆಗೇ ಹೋದರು ಅವರು ಬಾಗಿಲು ತೆರೆದು ಸುಮ್ಮನೆ ಒಳಗೆ ಹೋಗಿ ಕುಳಿತು ಬಿಡುತ್ತಾರೆ. ಏನೂ ಮಾತಿಲ್ಲ. ಈಕೆಯನ್ನೂ ಗಮನಿಸೋಲ್ಲಾ. ಚೆನ್ನೈಯಲ್ಲೇನಾಯಿತು ತಿಳೀದು. 

 





No comments:

Post a Comment