Wednesday, August 28, 2024

ಕ್ಷೌರ - 3

 ಅಮ್ಮಂದಿರಿಗೆ ಗಂಡು ಮಕ್ಕಳ ಕೂದಲಿನ ಮೇಲೆ‌ ಒಂದು ವಿಶೇಷ ಕಾಳಜಿ. ಅಂದರೆ ಕೂದಲ ಆರೈಕೆಯಲ್ಲಲ್ಲ. ಅದರ ಉದ್ದದಲ್ಲಿ. ಕಣ್ಣಲ್ಲೇ ಅವರಿಗೆ ಒಂದು ಅಳತೆಯ ಮಾಪನವಿರ್ತದೆ. ಮಕ್ಕಳ ಕೂದಲನ್ನ  ಅದು ಅತ್ಯಂತ ಜಾಗರೂಕತೆಯಲ್ಲಿ ಆಗಾಗ್ಗೆ ಅಳೆಯುತ್ತಾ ಇರ್ತದೆ‌. ಒಂದೊಮ್ಮೆ ಅದು ನಿಗದಿಸಿಕೊಂಡ ಮಿತಿಯನ್ನ ದಾಟಿತೆಂದುಕೊಳ್ಳಿ, ಒಂದೇ ಸಮನೆ ಕೂಗಲಾರಂಭಿಸ್ತದೆ‌. ಮಗು ಚಿಕ್ಕದಿದ್ದರೆ ಇದು ಅಪ್ಪಂದಿರಿಗೆ ಅಲಾರಂ ಇದ್ದಂತೆ. ಅದು ಬೆಳೆದಂತೆ, ಮಗುವಿಗೇ ಅದು ಎಚ್ಚರಿಕೆ. ನನ್ನ ಅನುಭವವಂತೂ ವಿಚಿತ್ರ‌. ಲೋವರ್ ಮಿಡಲ್ ಕ್ಲಾಸ್ ಮಗುವಾಗಿದ್ದ ನನಗೆ, ಕಟಿಂಗ್ ಗೆ ನಿಗದಿ ಪಡಿಸುವ ದುಡ್ಡಿಗೆ ಒಂದು ನ್ಯಾಯ ಸಿಗಲೇ ಬೇಕು. ಅಂದರೆ ಕಾಸು ಕೊಟ್ಟಷ್ಟು ಕೂದಲೂ! ಹಾಗಾಗಿ ನಮ್ಮದೆಲ್ಲಾ ಎಂದಿಗೂ ಸಮ್ಮರ್ ಕಟ್ಟೇ. 'ಬಿಸಿಲಾದರೇನು, ಮಳೆಯಾದರೇನು, ಕೊಡು ನಿನ್ನ ಅಷ್ಟೂ ಕೂದಲನ್ನು' ಅನ್ನೋದು ನನ್ನ ಅಮ್ಮನ ಧ್ಯೇಯವಾಕ್ಯ. ನೋಡಿ ನಮ್ಮ ಆರ್ಥಿಕತೆಗೂ ಸಮ್ಮರ್ ಕಟ್ಟಿಗೂ ನಂಟುಂಟು. ಕಟಿಂಗ್ ಆಗಾಗ್ಗೆ ಮಾಡಿಸುವ ಪ್ರಮೇಯವಿರೋದಿಲ್ಲಾಂತ. ಈ ಮನಃಸ್ಥಿತಿ ಎಷ್ಟು ಆಳದಲ್ಲಿಳಿದು ಬೇರೂರಿಬಿಡ್ತದೆ ಎಂದರೆ, ಇವತ್ತಿಗೂ, ತಿಂಗಳಿಗೊಮ್ಮೆ ಕಟಿಂಗ್ ಮಾಡಿಸಲು ಶಕ್ಯವಿರುವ ಮಟ್ಟದಲ್ಲೂ, ನನ್ನಮ್ಮ ನನ್ನ ಕಟಿಂಗನ್ನು ನಿರ್ದೇಶಿಸುವ ಮನಃಸ್ಥಿತಿಯನ್ನ ಬಿಟ್ಟಿಲ್ಲ. ನಾನು ಕಟಿಂಗ್ ಮುಗಿಸಿ ಮನೆಗೆ ಬಂದ ಕೂಡಲೇ ನನ್ನ ಕಟಿಂಗನ್ನು ನೋಡಿ 'ಎಂಥಾ ಕಾಲ ಬಂದು ಬಿಡ್ತು' ಅನ್ನುವ ರೀತಿಯಲ್ಲಿ ನನ್ನಮ್ಮ ಅದನ್ನ ಒಪ್ಪುವುದೇ  ಇಲ್ಲ. ಒಮ್ಮೆ ನನ್ನ ಸ್ನೇಹಿತರೊಬ್ಬರು ಇದೇ ರೀತಿಯ ಕಥೆಯನ್ನು ಹೇಳಿಕೊಳ್ತಾ ಇದ್ದರು‌. ತನ್ನಮ್ಮನಿಗೆ ಸಮ್ಮರ್ ಕಟ್ ಹೊಡೆಸಿದ ತಮ್ಮ ಮಗನಿಗಿಂತ ಸುಂದರ ತರುಣ ಪ್ರಪಂಚದಲ್ಲೇ ಇಲ್ಲೆಂದು. 


ಆದರೆ ಇಂದು ನನ್ನ ಮಗನಿಗೆ ಹಾಗೇನು ನಾನು ಮಾಡಲೇಬೇಕೂಂತ ಶಪಥಗೈದು ಕೂತದ್ದಲ್ಲ. ನನ್ನಾಕೆಯ ಕಣ್ಮಾಪನದ ನಿಗದಿತ ಮಿತಿಯನ್ನ ಮಗನ ಕೂದಲು ದಾಟಿತ್ತು‌. ಎಂದಿಂದಲೋ ಆಕೆ ಹೇಳುತ್ತಲೇ ಇದ್ದಳು. ಒಂದಲ್ಲ ಒಂದು ಕಾರಣದಿಂದ ಕಟಿಂಗ್ ಮಾಡಿಸಲಾಗಿರಲಿಲ್ಲ. ನನಗೇನು ಅಂಥಾ ಬೆಳೆದಿದೆ ಅಂತೇನೂ ಅನ್ನಿಸಿದ್ದಿರಲಿಲ್ಲ ಅನ್ನೋದಂತೂ ಸತ್ಯವೇ. ಅದೂ ತಡಕ್ಕೆ ಕಾರಣವಿದ್ದಿರಬೋದು. ಇಂದೇಕೋ ಆಕೆಯ ಮಾತನ್ನ ಬಹಳ ಗಂಭೀರವಾಗಿ ಪರಿಗಣಿಸಿದೆ - 'ಹೊರಗೆ ಹೋಗೋಕ್ಕೆ ಆಗಲಿಲ್ಲಾಂದ್ರೆ ನೀನಾದ್ರೂ ಮಾಡಿಬಿಡು'. ನನಗೆ ಈಗಾಗಲೇ ಹಿಂದಿನ ಕಥೆಗಳಲ್ಲಿ ವರ್ಣಿಸಿದ ಹಾಗೆ ಕಟಿಂಗಿ ಮಾಡಿದ ಅನುಭವವೂ ಇತ್ತಲ್ಲ. ನನ್ನಪ್ಪನ ದಾಸಿ ನಾನೇ ಅನ್ನೋ ಅಹಮ್ಮೂ ಇತ್ತಲ್ಲ. ಇದೇನ್ ಮಹಾ ಈ ನಾಕು ವಯದ ಚಿಲ್ಟಾರಿ. ನನ್ನ ಇಡೀ ಕೈಗೇ ಅದರ ತಲೆ ಸಿಗಬೇಕಾದ್ರೆ, ಒಂದೇ ಏಟಿನಲ್ಲಿ ಮುಗಿಸಿಬಿಡಬೋದು ಅನ್ನೋ ಆತ್ಮವಿಶ್ವಾಸದಲ್ಲಿ ಮಗನನ್ನ ಹೊತ್ತೊಯ್ದೆ. ಆತ ಗಲಾಟೆ ಮಾಡಲಿಲ್ಲ, ಕೂಗಲಿಲ್ಲ ಅಥವಾ ಕನಿಷ್ಟ ಪಕ್ಷ ಗೊಂದಲಕ್ಕೂ ಒಳಗಾಗಲಿಲ್ಲ. ನನ್ನ ಮುಂದೆಯೇ ಕೂತ -'ಅಪ್ಪಾ ನೀನೇ ಮಾಡ್ತೀಯಾ' ಅಂತ ಕೇಳುತ್ತಾ. ನನಗೆ ಇದು ಇನ್ನಷ್ಟು ಉತ್ತೇಜನವಾಯ್ತು‌. ಎರಡು ವರ್ಷದ ಕೆಳಗೆ ನನ್ನ ಹೆಂಡತಿ ನನಗೊಂದು ಫಿಲಿಪ್ಸ್ ಟ್ರಿಮ್ಮರ್ ಉಡುಗೊರೆಯಾಗಿ ನೀಡಿದ್ಲು ನನ್ನ ಹುಟ್ಟು ಹಬ್ಬಕ್ಕೆ. ಕಾಕತಾಳೀಯವೆಂಬಂತೆ ನನ್ನ ತಂದೆಯೂ ಅದೇ ಕೊಟ್ಟರೂ. ಎಲ್ಲರಿಗೂ ನನ್ನ ಮೇಲೆ ಒಂದೇ ಅಭಿಪ್ರಾಯ ಅಂತ ಕಾಣ್ತದೆ ಅಥವಾ ಒಂದು ಅಭೀಪ್ಸೆಯೂ ಇದ್ದಿರಬೋದು - ನನ್ನ ಮುಖ ನಿಜವಾಗಿಯೂ ಹೇಗೆ ಕಾಣ್ತದೆ ಅನ್ನೋದನ್ನ ಕಣ್ತುಂಬಿಕೊಳ್ಳಲಿಕ್ಕೆ. ಅದಾದ ಮೇಲೆ ನನ್ನ ನಯನ ಮನೋಹರ ಮುಖವನ್ನ ಈ ಎರಡು ವರ್ಷಗಳಲ್ಲಿ ಆ ಟ್ರಿಮ್ಮರಿನ ಮೂಲಕ ಒಂದೆರೆಡು ಮೂರು ಬಾರಿ ಅವರಿಗೆ ತೋರಿದ್ದಿರಬೋದಷ್ಟೇ‌. ಹೀಗಿರುವ ಪರಿಸ್ಥಿಯಲ್ಲಿ, ಎಂಥವರಾದರೂ ಒಂದೇ ಊಹಿಸಬಲ್ಲರೂ - ನಿಜವಾಗಿಯೂ ಈತನಿಗೆ ಟ್ರಿಮ್ಮರ್ ಹಿಡಿಯೋದಾದರೂ ಹೇಗಂತ ಅಭ್ಯಾಸವುಂಟೇ ಅಂತ. ನನ್ನ ಕಲೀಗ್ ಬಹಳ ಸುಲಭವಾಗಿ ಕಂಡುಹಿಡಿದುಬಿಡ್ತಾರೆ -' ಸಾರ್ ಇದು ನೀವೆ ಮಾಡಿಕೊಂಡಿದ್ದಲ್ವ' ಅಂತ. 


ನಾನು ಕಟಿಂಗ್ ಮಾಡಿಸೋದು ನಾಲ್ಕೈದು ತಿಂಗಳಿಗೊಮ್ಮೆ. ಹಾಗೆಯೇ ದಾಡಿ ಟ್ರಿಮ್ಮಿಂಗ್. ಇದಕ್ಕೊಂದು ಇತಿಹಾಸವುಂಟು. ನಾನು ಮದುವೆಯಾದ ಹೊಸತರಲ್ಲಿ ನಾಲ್ಕೈದು ತಿಂಗಳಿಗೊಮ್ಮೆ ಹೆಂಡತಿಯ ಊರಿಗೆ ಹೋಗ್ತಿದ್ದೆ. ನನ್ನ ಅತ್ತೆಯ ಕಣ್ಮಾಪನ ಅತೀ ಸೂಕ್ಷ್ಮ. ಹಾಗಾಗಿ ನನ್ನ ಕೂದಲು ಕಟ್ ಆಗಿದ್ದನ್ನ ವಾಪಸ್ಸು ಮೈಸೂರಲ್ಲಿ ಯಾರೇ ನೋಡಿದರೂ ಬಹಳ ಸುಲಭವಾಗಿಯೇ ಊಹಿಸ್ತಾ ಇದ್ದರು ಹೆಂಡತಿ ಮನೆಯಿಂದ ಯಾವಾಗ ವಾಪಾಸ್ಸಾದಿರಿ ಅಂತ. ಎಲ್ಲಕ್ಕಿಂತ ಹೆಚ್ಚಾಗಿ ಅತ್ತೆಯ ಊರಿನ (ಮಾವನ ಊರಿನ ಅನ್ನೋದಿಲ್ವಲ್ಲ ಯಾಕೆ?) ಹೇರ್ ಕಟ್ ಸಲೂನಿನ ರಾಮಚಂದ್ರ ಬಹಳ ಆಪ್ತನಾಗಿ ಹೋಗಿದ್ದ - ಊರು ಕೇರಿ ಮಣ್ಣು ಮಸಿ ವಿಚಾರಗಳನ್ನೆಲ್ಲಾ ಮಾತಾಡುವಷ್ಟು. ಹಾಗಾಗಿ ಊರಿಗೆ ಹೋದಾಗ ಅವನನ್ನೊಮ್ಮೆ ಮಾತಾಡಿಸಿ ಬರೋ ರೂಢಿ ಹುಟ್ಟಿತ್ತು. ಹೀಗಾಗಿ, ಹೇಗೂ ಊರಿಗೆ ಹೋದಾಗ ಕಟಿಂಗ್ ಮಾಡಿಸಲೇ ಬೇಕಾದ ಪ್ರಮೇಯ ಇದ್ದದ್ದರಿಂದ, ನಾಲ್ಕು ತಿಂಗಳವರೆಗೆ ಹಾಗೆಯೇ ಉಳಿಸಿಬಿಡ್ತಿದ್ದೆ‌. ಅದೇ ಒಂದು ನೀತಿಕ್ರಮವಾಗಿ ಈಗ ರೂಢಿಯಾಗಿದೆ, ರಕ್ತಾನುಗತವಾಗಿಹೋಗಿದೆ. 


ಇರಲಿ ಕೆದಕಿಷ್ಟು ಮನುಷ್ಯನ ಮನಸ್ಸಿನಾಳದಲ್ಲಿ ಕಂತೆ ಕಥೆಗಳೇ. ನಾನು ಟ್ರಿಮ್ಮರ್ರನ್ನು ಚಾರ್ಜಿಗೆ ಇಟ್ಟು ಮಗನ ತಲೆಯನ್ನ ಅಂದಾಜಿಸಿದೆ. ಅನ್ನಿಸಿತು - ನಾಲ್ಕು ಪಾಯಿಂಟಿಗೆ ಇಟ್ಟು ಏಕ ಹೊಡೆದುಬಿಡೋಣ ಅಂತ. ನಾಲ್ಕು ಅಂದರೆ ದೊಡ್ಡಕ್ಕಾಗಲಿಲ್ಲವೆ‌. ಮೂರು ವರೆಯೇ, ಬೇಡ ಬೇಡ ಮೂರೇ ಸರಿ ಅಂತ ದಾಡಿಯ ಲೆಕ್ಕವನ್ನ ಮಗನ ತಲೆಕೂದಲಿಗೆ ಅನ್ವಯಿಸಿ ನಿರ್ಧರಿಸಿದೆ - ಮೂರು. ಒಂದು ಇಪ್ಪತ್ತು ನಿಮಿಷದ ವರೆಗೆ ಅವನ ಪ್ರಶ್ನೆಗಳನ್ನ ಸಂಭಾಳಿಸಬೇಕಿತ್ತು - 'ನೀನೇ ಮಾಡ್ತೀಯಾ? ಅಂಗಡಿ ಬೇಡ್ವಾ? ಮಷೀನ್ ಮಾಡ್ತೀಯ? ಸೌಂಡು ಬರತ್ತಾ? ಚಾರ್ಜಿಗೆ ಇಟ್ಟಿದೀಯಾ?' ಮತ್ತದೇ ವರ್ತುಲ 'ನೀನೆ ಮಾಡ್ತೀಯಾ?....' ಬಟ್ಟೆ ಬರೆಗಳನ್ನೆಲ್ಲಾ ಬಿಚ್ಚಿಟ್ಟು ಮುಂದಾಗುವ ಇತಿಹಾಸದ ಅತ್ಯುನ್ನತ ಕ್ಷಣಗಳಿಗೆ ಸಾಕ್ಷಿಯಾಗಲು ಆ ಮಗು ತಯಾರಾಗಿ ನಿಂತಂತಿತ್ತು. ಚಾರ್ಜ್ ಸಾಕೆಂದು, ಉತ್ಸಾಹದಲ್ಲಿ, ಟ್ರಿಮ್ಮರ್ ತಂದೆ. ಒಂದು ಸ್ಟೂಲಿನ ಮೇಲೆ ಮಗನನ್ನ ಕೂಡಿಸಿ ನನ್ನ ಕ್ಷೌರ್ಯವನ್ನ ಆರಂಭಿಸಿದೆ. ಅತ್ಯಂತ ನಾಜೂಕಿನಿಂದ ಕೆ(ಕ)ರೆದರೆ ಯಾವುದಾದರೂ ಬರುವುದುಂಟೆ? ಗೊತ್ತಾಗದೆ, ಪಾಯಿಂಟ್ ಹೆಚ್ಚಾಯಿತೋ ಏನೋ ಎಂದು ಎರಡೂವರೆಗೆ ಇಳಿಸಿದೆ. ನನಗೆ ತಿಳಿಯಿತು ನಾನು ಅತ್ಯಂತ ನಾಜೂಕಿನಿಂದ ಕೆರೆಯುತ್ತಿದ್ದೇನಂತ. ಒಮ್ಮೆಲೆ ಸ್ವಲ್ಪ ಜೋರಾಗಿ ಕೆರೆದೆ‌. ಕೆರೆದಷ್ಟು ಭಾಗ ಒಂದು ಕೊಯ್ದ ಹುಲ್ಲು ಹಾದಿಯಂತಾಯಿತು. ಸುತ್ತೆಲ್ಲಾ ಯಥೇಚ್ಛ ಕೂದಲು, ಮಧ್ಯದ ಹಾದಿಯಲ್ಲಿ ಮಾತ್ರ ಮುಡಿಗೆ ಕೊಟ್ಟಾಗ ಕೆರೆಯುವ ಮಟ್ಟಕ್ಕಿಂತ ಒಂದು ಚೂರಷ್ಟೇ ಉದ್ದ. ಭಾಗಶಃ ಮುಡಿ ಕೊಟ್ಟಷ್ಟೇ! ಆ ಕೂದಲು ಕೆಳಗೆ ಬಿತ್ತು. ಕ್ಷಣಾರ್ಧದಲ್ಲಿ ಇತಿಹಾಸದ ಪರಮ ಕ್ರೌರ್ಯವೊಂದು ಘಟಿಸಿಹೋಗಿತ್ತು. ಇದು ನನ್ನ ಅರಿವಿಗೂ ಬಂದಿತು. 


'ಅಯ್ಯೋ!' ಉದ್ಗರಿಸಿದೆ. 'ಏನಾಯ್ತಪ್ಪ' ಅವನೂ ಕೇಳಿದ ಮುಗ್ಧ ಕಣ್ಣುಗಳಿಂದ ನೋಡ್ತಾ. 'ಅಷ್ಟೂ ಕೆಟ್ಟೋಯ್ತಲ್ಲ ಅಪ್ಪಿ' ಎಂದೆ. 'ಅಂಟಿಸ್ಬಿಡಪ್ಪ' ಎಂದು ಕೆಳಗೆ ಬಿದ್ದದ್ದನ್ನ ಕೈಲಿ ಹಿಡಿದು ಕೊಟ್ಟ. 'ಛೇ..ಛೇ..' ಎಂದು ಕೈಲಿದ್ದಿದ್ದನ್ನ ಕೊಡವಿ, ಮತ್ತೇನು ಸಾಧ್ಯವೆಂದು  ಪರಾಮರ್ಶಿಸಿದೆ‌. ಮತ್ತೆ ಅಕ್ಕ ಪಕ್ಕದಲ್ಲೂ ಅದೇ ರೀತಿ ಕೊರೆಯಲು ಹೋದರೆ, ಟ್ರಿಮ್ಮರ್ ಸಹಕರಿಸದಂತಾಯ್ತು. ಒಂದು ಟ್ರ್ಯಾಕ್ಟರ್ ಉತ್ತ ಹೊಲದಂತಾಯ್ತು ತಲೆಯ ಮುಂಭಾಗವೆಲ್ಲಾ‌. ತಲೆಯ ಹಿಂಭಾಗದಲ್ಲಿ ಹೊಲದ ಇಕ್ಕೆಲಗಳಲ್ಲಿ ಗಿಡಗೆಂಟೆಗಳ ಗೊಂಚಲಿನಂತೆ ಕೂದಲು ಹಾಗೇ ಇತ್ತು‌. ಇನ್ನು ನಾನು ಮುಂದುವರೆದರೆ ನನ್ನ ದುರ್ನಡತೆಗೆ ಮನೆಯವರೆಲ್ಲರೂ ಉಗಿದಾರೆನ್ನುವ ಭಯಕ್ಕೆ ನಿರ್ಧರಿಸಿದೆ -'ಸಲೂನಿಗೇ ಹೋಗದೇ ವಿಧಿಯೇ ಇಲ್ಲೆಂದು'. ನನ್ನ ಮಗನ ಅಮ್ಮನಿಗೆ ಕೂಗಿ ಕರೆದೆ. ಮನೆಯವರೆಲ್ಲರಿಗೂ ಕೇಳಿದ ಕೂಗಿನಿಂದಲೇ ನನ್ನ ಅಚಾತುರ್ಯವನ್ನ ಎಲ್ಲರಿಗೂ ಅನಿವಾರ್ಯವಾಗಿ ಹೇಳಲೇಬೇಕಾಗಿ ಬಂತು. ನನ್ನ ಮಗನಿಗೆ ಒಂದು ಕೋರಿಕೆ ಮಾಡಿಕೊಂಡೆ -'ಒಂದು ಸುಳ್ಳು ಹೇಳ್ತೀನಿ.‌ ಆಯ್ತಾ?' ತಲೆಗೆ ಸ್ನಾನಾ ಮಾಡಿಸಿದೆ. ನಾಲ್ಕು ವರ್ಷದ ಮಗುವಿಗೆ ನನ್ನ ಈ  ಸುಳ್ಳು ಅರ್ಥವಾಯ್ತೋ ಇಲ್ಲವೋ ಕೆಳಗೆ ಬಂದವನೇ 'ಅಮ್ಮ ಅಪ್ಪಾ ಸ್ವಲ್ಪ ಕೂದ್ಲು ಕಟ್ ಮಾಡ್ತು' ಎಂದ. ನಾನು 'ಅವನೇ ಟ್ರಿಮ್ಮರ್ ಹಿಡಿದು ಸ್ವಲ್ಪ ಕೂದಲು ಕೆರಕೊಂಡ. ನಾನು ಸರಿ ಮಾಡ್ಲಿಕ್ಕೆ ಹೋಗಿ ಏನೇನೋ ಆಯಿತು' ಅಂತ ಸುಳ್ಳು ಹೇಳುವ ಯೋಜನೆ ಮಾಡಿದ್ದೆ. ಅವನೇ ಬುನಾದಿ ಹಾಕಿ ನನಗೆ ಸಹಕರಿಸಿದ.


ಈಗ ಅವನಿಗೆ ತಲೆಗೆ ಟೋಪಿ ಕಟ್ಟೆ ಕರಕೊಂಡು ಹೋಗಬೇಕಿತ್ತು ಇಲ್ಲವಾದಲ್ಲಿ ದಸರೆಯ ವಸ್ತು ಪ್ರದರ್ಶನದಂತಾಗಿ ಹೋಗುವ ಸಂಭವವಿತ್ತು. ಇದ್ದ ಬದ್ದ ಟೋಪಿಗಳೆಲ್ಲಾ ಮಂಗಮಾಯ. ಕೊನೆಗೆ ಆಕೆ ತನ್ನ ಒಂದು ಸ್ಕಾರ್ಫ್ ಅನ್ನು ಅವನ ತಲೆಗೆ ಸುತ್ತಿದಳು. ಮನೆಯಲ್ಲಿ ಕಾರ್ಪೆಂಟ್ರಿ ಕೆಲಸಗಳು ನಡೀತಾ ಇದ್ದದ್ದರಿಂದ ಆ ಕೆಲಸದವರಿಗೂ ಅದಾಗಲೇ ವಿಷಯ ಮುಟ್ಟಿತ್ತು‌. ಬೇಕಂತಲೇ ಒಬ್ಬ ಕೆಲಸಗಾರ, ಸ್ವಲ್ಪ ಮಾತಿನಲ್ಲಿ ಚೂಟಿ, 'ಏನನ್ನೋ ಬಚ್ಚಿಟ್ಕೊಂಡು ಆಚೆ ತಗಾಂಡು ಹೋಗ್ತಿದೀರಿ' ಎಂದು ಕಿಸಿ ಕಿಸಿ ನಕ್ಕ. 'ನೀವೂ ತಮಾಷೆ ಮಾಡೋ ಸ್ಥಿತಿ ಆಗೋಯ್ತಲ್ಲ ನಂದು' ಎಂದು ನಕ್ಕು ಮಗನನ್ನ ಬೈಕಿನಲ್ಲಿ ಕೂರಿಸಿಕೊಂಡು ಕಟಿಂಗ್ ಸಲೂನಿಗೆ ಬಂದೆ. ಆತ ಪರಿಚಯದವನೇ, ಒಬ್ಬನೇ ಸುಮ್ಮನೇ ಕೂತು ಹಾಡು ಕೇಳ್ತಿದ್ದ. ಗಿರಾಕಿಗಳಿರಲಿಲ್ಲ. ನಾನು ನೇರವಾಗಿ ಒಪ್ಪಿಸಿದೆ -'ಒಂದು ಅವಾಂತರ ನಡೆದು ಹೋಯಿತು' ಅಂತ ಸ್ಕಾರ್ಫ್ ಬಿಚ್ಚಿದೆ. ಅವನಿಗೆ ಎಲ್ಲವೂ ಅರ್ಥವಾಯಿತು. ಒಮ್ಮೆ ತಲೆಯನ್ನ ಅವಲೋಕಿಸಿ 'ಎಂಥಾ ದುರ್ಘಟನೆ' ಅನ್ನೋ ರೀತಿಯಲ್ಲಿ ಕಣ್ಣರಿಳಿಸಿ ಕೊನೆಗೆ ಇದನ್ನ ಹೇಗೆ ಸರಿ ಮಾಡೋದೋ ಎಂಬಂತೆ ನಕ್ಕ. ಅಲ್ಲಿದ್ದ ಇನ್ನೊಬ್ಬ 'ಇದ್ಯಾರು ಮಾಡಿದ್ದು' ಎಂದು ಕೇಳಿದ. ನಾನು ಸಿದ್ಧಪಡಿಸಿದ್ದ ಸುಳ್ಳನ್ನ ಒದರಬೇಕೆನಿಸಿದರೂ ನಿಜವೇ ಹೊರಬಂದುಬಿಡ್ತು‌. 'ನನ್ನದೇ ಪ್ರಯತ್ನ' ಅಂತ ಪೆಕ್ಕರನಂತೆ ತಲೆ ಕೆರೆದುಕೊಂಡೆ. 'ನೀವೇ ಎಲ್ಲಾನೂವೇ ಮಾಡ್ಕೊಂಬಿಟ್ರೆ ನಮ್ಗಳ ಹೊಟ್ಟೆ ಪಾಡು ಏನ್ ಸಾರ್' ಎಂದ. 'ಅದ್ಕೆ ಅಲ್ವೆ ಇಲ್ಲಿ ಬಂದದ್ದು. ಸುಟ್ಮೇಲೆ ಗೊತ್ತಾಗೋದಲ್ವೆ ಮತ್ತೆ ಮುಟ್ಟಕೂಡದು ಅಂತ' ಅಂತ ಆ ಮಾತಿನಿಂದ ನುಣುಚಿಕೊಂಡೆ. ನನ್ನ ಮಗನಿಗೆ ಸಲೂನೆಂದರೆ ಸ್ವಲ್ಪ ಭಯ. ಅದು ಸಹಜ, ಮಕ್ಕಳಿಗೆ. ಸಲೂನಿಗೆ ಹೋಗೋ ವೇಳೆಗೆ ಅವನ ಮುಖ ಪೆಚ್ಚಾಗಿತ್ತು, ಅಳುಮೂಂಜಿಯೂ ಆಗಿತ್ತು. 'ನೋಡಿ ಪಾಪ ತನ್ನ ತಲೆ ಹೀಗೆ ಆಗೋಯ್ತಲ್ಲ ಅಂತ ಅದು ದುಃಖ ಮಾಡ್ಕೊಂಡಿದೆ' ಅಂತ ಸ್ವಲ್ಪ ಒಗ್ಗರಣೆಯೂ ಸೇರಿಸಿದ ಅಲ್ಲಿದ್ದ ಪಕ್ಕದವ‌. ನಾನು ಏನೂ ಪ್ರತಿಕ್ರಯಿಸಲಿಲ್ಲ. ಮಗುವನ್ನ ತೊಡೆ ಮೇಲೆ ಕುಳ್ಳಿರಿಸಿಕೊಂಡು ಕಟಿಂಗ್ ಮಾಡಿಸಿದೆ. ಆತನೂ ಹರಸಾಹಸ ಪಟ್ಟು ಕೊನೆಗೆ ಹೇಗೋ ಏನೋ ಮಾಡಿದ. ಆತನಿಗೊಂದು ದೊಡ್ಡ ನಮಸ್ಕಾರ ಹಾಕಿ ಮತ್ತೆ ಮನೆಗೆ ಬಂದೆ‌. 'ಅರೆರೆ ಇಷ್ಟು ಬೇಗ ಅದ್ಯಾವ ದೇವಸ್ಥಾನದಲ್ಲಿ ಮುಡಿ ಕೊಟ್ರಿ' ಅಂತ ಕೆಲಸದವ ಮತ್ತೆ ನಕ್ಕ. ನಾನು ಮಗನನ್ನ ಹೊತ್ತು ಒಳಗೆ ಓಡಿದೆ‌. ನನ್ನ ಹೆಂಡತಿ ಅಮ್ಮ ಇಬ್ಬರಿಗೂ ಇವನ ಕಟಿಂಗ್ ನೋಡಿ ಬಾಳ ಮೆಚ್ಚುಗೆ ಆಯಿತು. 'ಅಬ್ಬಾ ಎಷ್ಡು ಚೆನಾಗಿ ಮುಖ ಕಾಣ್ತಿದೆ' (ಇಷ್ಡು ದಿವಸ ಕೂದಲಿಂದ ಮುಚ್ಚಿ ಹೋಗಿತ್ತು ಅಂತಲೇ?). ನಾನು ಹೆಂಡತಿಗೆ ರೇಗಿದೆ -'ನಿನ್ನಿಂದಲೇ ಈ ಅವಾಂತರ ಎಲ್ಲಾ. ನೀನು ಹಾಗೆ ಹೇಳದೆ ಇದ್ದಿದ್ರೆ ನಾನು ಮನೇಲೆ ಕಟ್ ಮಾಡ್ತಿರಲಿಲ್ಲ. ನಿನಗೆ ನೋಡಕ್ಕಾಗೂಲ್ಲ ಅಂತ ನಾನೇ ಕಟ್ ಮಾಡಿದೆ'. 

'ಅಯ್ಯೋ... ನೀ ಮಾಡಿ ಎಲ್ಲಾ ನನ್ ತಲೆಗೆ ಕಟ್ತೀಯಲ್ಲ. ನಾನು ತಮಾಷೆಗೆ ಹೇಳಿದ್ದು ನೀನೇ ಮಾಡ್ಬಿಡು ಅಂತ. ನಿನಗೆ ಪ್ರಯೋಗ ಮಾಡೋ ಉತ್ಸಾಹದಲ್ಲಿ ಹೀಗೆಲ್ಲಾ ಮಾಡಿ, ಕೊನೆಗೆ ನನ್ನ ಮೇಲೆ ಎತ್ತಾಕ್ತೀಯಲ್ಲಾ' ಎಂದು ಮರು ರೇಗಿದಳು‌. 

ಇದರ ಮಧ್ಯೆ ನನ್ನ ಮಗ ತಾತನ ಹತ್ರ ಮಾತಾಡ್ತಿದ್ದ -'ಹಳೇ ಅಪ್ಪಿನ ಕಟಿಂಗ್ ಅಂಗಡಿಲಿ ಬಿಟ್ಟು ಬಂದಿದೀನಿ'. 

No comments:

Post a Comment