ಒಮ್ಮೊಮ್ಮೆ ರಕ್ತ ಕುದಿಯುತ್ತದೆ - ಇನ್ನೂ ಯುವಕನಾದ್ದರಿಂದ. ಆದರೂ ತನಗ್ಯಾಕೆ ಎನ್ನುವ ಪ್ರಶ್ನೆಯಿಂದ, ಇದು ತನಗೆ ಸಂಬಂಧ ಪಟ್ಟದ್ದಲ್ಲವೆನ್ನುವ ಹಿಂಜರಿಕೆಯಿಂದ, ಮುಂದೇನಾದರೂ ಆಗಿಬಿಟ್ಟರೆ ಎನ್ನುವ ಭಯದಿಂದ ಸುಮ್ಮನಿರಲೇಬೇಕಾದ ಭ್ರಮಾನಿವಾರ್ಯತೆಯ ಸೃಷ್ಟಿಯಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮೈಗಳ್ಳರು, ಕಾಕರು, ಗೂಂಡಾಗಳು, ರಿಯಲ್ ಎಸ್ಟೇಟ್ ಬಿಸಿನಸ್ಮೆನ್ ಗಳು, ದಲ್ಲಾಳಿಗಳು, ಚೀಟಿ ವ್ಯಾಪಾರಿಗಳು ಹೀಗೇ ಹಣದ ರಾಶಿಯಲ್ಲೇ ಗೋರಿ ಕಟ್ಟಿಸಿಕೊಳ್ಳಬೇಕೆಂದು ಹಟಕ್ಕೆ ಬಿದ್ದು ಹೋದ ಜನರೇ ತುಂಹೋಗಿರೋದು ಎಂಥಾ ವಿಪರ್ಯಾಸವಲ್ಲವೇ? ಅಸಲಿಗೆ ಉನ್ನತ ಶಿಕ್ಷಣದ ಶಿಕ್ಷಕನಿಗೆ (ಸೋ ಕಾಲ್ಡ್ ಪ್ರೊಫೆಸರ್) ಇರೋ ಸಂಬಳ ಒಬ್ಬ ಐ.ಎ.ಸ್ ಅಧಿಕಾರಿಗೂ ಇರದಿರೋದರಿಂದಲೇ ಈ ಶಿಕ್ಷಕನ ಹುದ್ದೆಗೆ ನೊಣ ಮುತ್ತಿದ ಹಾಗೆ ಜನ ಮುತ್ತಲಿಕ್ಕೆ ಆರಂಭಿಸಿದ್ದು ಕಾಣ್ತದೆ. ಇಂದು ಸಾಕಷ್ಟು ಸರ್ಕಾರೀ ಸಂಬಳ ಪಡೆಯುತಿರೋ ಜನರಿರೋ ಕಾಲೇಜುಗಳಲ್ಲಿನ ವ್ಯವಸ್ಥೆಯನ್ನ ಎಲ್ಲರೂ ಗಮನಿಸದೇ ಏನಿಲ್ಲ. ನಮ್ಮ Appraisal ವ್ಯವಸ್ಥೆಯು ಟೊಳ್ಳು ಮರದ ಹಾಗೇ ಬರೇ ನೋಡಲಿಕ್ಕಷ್ಟೇ ಉಂಟು. ಮುಟ್ಟಿದರೆ ಶಕ್ತಿಯೇ ಇಲ್ಲದೇ ಕುಸಿದು ಮಣ್ಣು ಸೇರಿ ಹೋಗಬೋದು ಅನ್ನೋದಕ್ಕೆ ಯಾರೊಬ್ಬರೂ ಸಹ ಅದನ್ನ ಗಂಭೀರವಾಗಿ ಮುಟ್ಟಿಯೇ ಇಲ್ಲವೆಂದು ಕಾಣ್ತದೆ.
Friday, November 1, 2024
ವ್ಯವಸ್ಥಿತ ಅವ್ಯವಸ್ಥೆ!
ಇದು ಬದಲಾಗಬೇಕಿದೆ. ಗಟ್ಟಿಯನ್ನು ಮಾತ್ರ ಉಳಿಸಿ ಟೊಳ್ಳನ್ನ ಅಲ್ಲೇ ಬಡಿದುರುಳಿಸುವ ಶಕ್ತಿಯೇ ಇಲ್ಲದ, ಕೇವಲ ಧೂಳಿನ ಕಪಾಟು ಸೇರಲಿಕ್ಕಾಗಿಯೋ ಅಥವಾ ತನಗಾಗದವನನ್ನ ದಮನ ಮಾಡಲಿಕ್ಕಾಗಿಯೋ ನಾಮಕೇವಾಸ್ತೆಗಾಗಿ ನಡೆಯೋ ಇಂತಹ Appraisal ವ್ಯವಸ್ಥೆಯಿಂದ ದೇಹದ ಅಪೇನ್ಡಿಕ್ಸಿನ ಹಾಗೆ ಉಪಯೋಗವೇನಿಲ್ಲ - ಮಾರಕವಷ್ಟೇ. ಶಿಕ್ಷಕನಾಗಲು ಯೋಗ್ಯತೆಯೇ ಇಲ್ಲದ ವ್ಯಕ್ತಿಗಳನ್ನ ಹೆಕ್ಕಿ ಆರಿಸಿ, ಅಪ್ಪಿ ತಪ್ಪಿ ಒಳಗೆ ತೂರಿದನಲ್ಲ ಅನ್ನೋ ಅನುಕಂಪಕ್ಕಾಗಿ ಒಂದು ಅವಕಾಶ ನೀಡೀ, ಅದರಲ್ಲಿಯೂ ಆತ ಸರಿ ಹೋಗದಿದ್ದರೆ ಬೇಡದ ಕೂದಲಿನ ಹಾಗೆ ಕಿತ್ತೊಗೆವ ವ್ಯವಸ್ಥೆ ಇದಾಗಬೇಕಿದೆ. ತನಗಲ್ಲದ ಕೆಲಸ ತನಗ್ಯಾಕೆ ಅನ್ನುವ ಕಿಂಚಿತ್ ನಾಚಿಕೆಯಾದರೂ ಮನುಷ್ಯನಲ್ಲಿ ಮೂಡಬೇಕಿದೆ. ಆದರೆ ದುರದೃಷ್ಟ - ಮೂಡಿಸಬೇಕಾದ್ದೋನು ಈತನೇ ಅಲ್ಲವೇ? ಈ ವ್ಯವಸ್ಥೆ ಬಲಗೊಳ್ಳಲೇ ಬೇಕು. ಇಲ್ಲವಾದಲ್ಲಿ ಕಿಂಚಿತ್ ಆದರೂ ಒಳ್ಳೆಯ ದಿಶೆಯಲ್ಲಿ ಯೋಚಿಸುವ ತಲೆಗಳು ಇದನ್ನ ತೊರೆದು, ಇದು ಕೇವಲ ವಿಷವನ್ಯವಾಗಿ ವಿಷವಷ್ಟೇ ಬಿಟ್ಟು ಬೇರೆಯದು ತೂರದ ಹಾಗೆ ಮಾರ್ಪಾಡಾಗ್ತದೆ. ಎಂಥಾ ಮೋಜು ನೋಡಿ - ವಿಷಕ್ಕೆ ವಿಷವೇ ಅಮೃತವಲ್ಲ. ಹೊರಗಿನವರಿಗಷ್ಟೇ ವಿಷ, ವ್ಯವಸ್ಥೆಗಲ್ಲ. ಕಾಲ ಮತ್ತೆ ಹಿಂದಕ್ಕೆ ಸರಿಯುತ್ತದೆ. ಇದು ವಿಷವೆಂದು ಬಗೆದು ಹೊರಗೆ ಹೋದವರ ಪೈಕಿಯೇ ಒಬ್ಬ ಕಲ್ಕಿಯಾಗಬೇಕಷ್ಟೇ!
ಇದೊಂದು ವ್ಯವಸ್ಥಿತವಾದ ಅವ್ಯವಸ್ಥೆ. ಆಗೀಗೆ ಒಮ್ಮೆ ಸುದ್ದಿ ಬೀಳ್ತದೆ - 'ಶಿಕ್ಷಕರಿಗೆಲ್ಲಾ ತಲೆಗೆ 9000 ವಂತೆ' - ಒಂದು ವೋಟ್ ಹಾಕಲಿಕ್ಕೆ. ಇನ್ನೂ ಕೆಲವರು ನಾಚಿಕೆಯೆಲ್ಲವನ್ನೂ, ಮೌಲ್ಯ, ಮಾನವೀಯತೆ, ಬಟ್ಟೆ ಬರೆಗೆಳೆಲ್ಲವನ್ನೂ ಬಿಟ್ಟು, ಕಿಸೆ ತುಂಬಿಸುತ್ತಲೇ ಅಯೋಗ್ಯರಾಗಿಯೇ ಯೋಗ್ಯ ರೀತಿಯಲ್ಲಿ ಬಾಳುತ್ತಿರೋದೆ ನೋಡಲು ಮಜ - ಒಂದು ರೀತಿ ಡೊ-ಡೊ ಹಕ್ಕಿಯ ಹಾಗೆ. ವ್ಯವಸ್ಥೆ ನಿಧಾನವಾಗಿ ಹಳೆಯ ಕಟ್ಟಡಗಳ ಹಾಗೆ ಶಿತಿಲಾವಸ್ಥೆಯೆಡೆಗೆ ಹೊರಳುತ್ತಿದೆ. ಈ ವ್ಯವಸ್ಥೆಯಲ್ಲಿನ ಅಪಾರದರ್ಶಕತೆ, ಸ್ವಜನ ಪಕ್ಷಪಾತ, ಮೈಗಳ್ಳತನ, ಎಲ್ಲವೂ ಕಿಸೆಯ ದೆಸೆಯಿಂದ ಈ ವ್ಯವಸ್ಥೆಗೆ ಅಂಟಿರುವ ರೋಗ. ಪಾಠ ಮಾಡುವ ಮೇಸ್ತರೂ ಕೈ-ಬಾಯಿಗಳನ್ನ ಹೂವಿನ ಹಾಗೆ ನೋಡಿಕೊಳ್ಳುವ ರೀತಿಯಲ್ಲೇ ತನ್ನ ಸುತ್ತಲಿನ ವ್ಯವಸ್ಥೆಯನ್ನ ನಿರ್ಮಿಸಿಕೊಳ್ಳುತ್ತಿರೋದು ವ್ಯವಸ್ಥೆಯ ಅಧಃಪತನದ ಸೂಚನೆ. ಇವರೇ ಹೀಗಾದಲ್ಲಿ, ಇವರನ್ನು ನೋಡೋ ಮಕ್ಕಳು? ನೋಡಿ ಕಲಿಯೋದೂ ಹೆಚ್ಚೇ ಅಲ್ಲವೇ? ಕೆಟ್ಟದನ್ನ ಕಲಿಯದೇ ಹೋದಲ್ಲಿ, ಅದು ಮೇಸ್ತರಿಗೆ ಮಾರಕವಾದ್ದರಿಂದ, ಕಲಿಯಲೇ ಬೇಕಾದ ಅನಿವಾರ್ಯತೆಗೆ ಮುಂದಿನ ಪೀಳಿಗೆ ದೂಡಲ್ಪಡುತ್ತದೆ.
ನಮ್ಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ, ಖಾಸಗೀ ಸಂಸ್ಥೆಗಳ ಹಾಗೆ ಅರ್ಥಪೂರ್ಣವಾದ Appraisal ವ್ಯವಸ್ಥೆಯಿಲ್ಲ. ಹೇಗಿದೆ ಎಂದು ನೋಡಿದರೆ, ಪ್ರತಿಯೊಬ್ಬ ನೌಕರನೂ ವರ್ಷದ ಕೊನೆಯಲ್ಲಿ ಒಂದು ಫಾರಂ ತುಂಬಿಸಿ ಕೊಡಬೇಕಿದ್ದು, ಅದರ ಮೇಲೆ ಆತನ ಮೇಲಧಿಕಾರಿ ಒಂದು ಶರಾ ಬರೆದು ಕಳೆಸಬೇಕಿದೆ. ಇದು ಎಲ್ಲಿಗೆ ಹೋಗ್ತದೆ, ಯಾರು ನೋಡ್ತಾರೆ, ಮುಂದೇನಾಗ್ತದೆ ಅನ್ನೋದು ಅಸ್ಪಷ್ಟ ಹಾಗೂ ನಿಗೂಢ. ಜೊತೆಗೆ ಅದರಲ್ಲಿರುವ ಮಾನದಂಡಗಳನ್ನ ಆ ನೌಕರ ತಲುಪಿದ್ದರೆ ಸಾಕಷ್ಟೆ, ಎಲ್ಲರೂ ಒಂದೇ. ಮುಂಬಡ್ತಿಗೆ, 'ಕನಿಷ್ಠ' ಮಾಡಬೇಕಾದ್ದ ಕೆಲಸಗಳನ್ನ ಮಾಡಿದರೆ ಸಾಕಷ್ಟೆ. ಆದರೆ, ಮಾಡಿದ ಕೆಲಸಗಳೆಲ್ಲ ಆತನೇ ಮಾಡಿದ್ದು ಎನ್ನುವುದನ್ನ ಸ್ಪಷ್ಟವಾಗಿ ಅಳೆಯಲಿಕ್ಕೆ ಕಾಗದ ಸಾಕ್ಷಿಗಳನ್ನ ಬಿಟ್ಟು ಮತ್ತೇನಿಲ್ಲ. ಮುಂಬಡ್ತಿ ಸಮಯದಲ್ಲೊಂದು ಸಂದರ್ಶನ ಇರುತ್ತದಾದರೂ ಅದೂ ಸಹ ನಾಮಕೇವಸ್ತೆಗೆ. ದಾಖಲೆಗಳ ಪರಿಶೀಲನೆ ನಂತರ ಮುಂದೆಲ್ಲವೂ ನಾಮಕೇವಸ್ತೆಗೆ. ಆದರೆ ಖಾಸಗೀ ಸಂಸ್ಥೆಗಳಲ್ಲಿ ಹಾಗಿಲ್ಲ - ಅವರಿಗೆ ಲಾಭ ಮುಖ್ಯವಾದ್ದರಿಂದ. ನೌಕರರ ಕ್ಷಮತೆ ಅತೀ ಮುಖ್ಯ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲಿಯವರೆಗೂ ಈ ರೀತಿಯ ಗಂಭೀರ ಪ್ರಕ್ರಿಯೆ ನಡೆದಿಲ್ಲವೇಕೆ ಅನ್ನೋದೇ ಅಚ್ಚರಿ. ಈಗ ನೋಡಿ, ಮುಂದಿನ ಬಡ್ತಿಗೆ ಇಂತಿಷ್ಟು ಪಬ್ಲಿಕೇಷನ್ ಇರಬೇಕು ಅಂತಿರ್ತದೆ ಅಂದುಕೊಳ್ಳಿ. ತಮ್ಮ ಪಕ್ಕವನಿಗೆ ಒಂದಿಷ್ಟು ಹಣ ನೀಡಿ ಆತನ ಲೇಖನದಲ್ಲಿ ತಮ್ಮ ಹೆಸರನ್ನೂ ಸೇರಿಸಕೊಳ್ಳದ ಮೂರ್ಖರು ಇಲ್ಲಿದ್ದಾರೆಯೇ? ಇದನ್ನು ಕಂಡು ಹಿಡಿಯೋದು ಹೇಗೆ? ಆ ಲೇಖನ ಇವರದ್ದೇ ಅಂತ ಕಂಡು ಹಿಡಿಯೋದು ಹೇಗೆ? ಅಂತೆಯೇ, ಒಂದು ಬಡ್ತಿಗಾಗಿ ರಿಫ್ರೆಷರ್ ಕೋರ್ಸಿನ ಅವಶ್ಯಕತೆಯಿದೆ ಎಂದುಕೊಳ್ಳಿ. ಇಲ್ಲಿಯವರೆಗೂ ರಿಫ್ರೆಷರ್ ಕೋರ್ಸಿನಲ್ಲಿ ಫೇಲಾದವರ ಸಂಖ್ಯೆ ಎಷ್ಟು? ನಗಣ್ಯ! ಎಲ್ಲವೂ ನಾಮಕೇವಸ್ತೆಗೆ. ಆತ ರಿಫ್ರೆಷರ್ ಕೋರ್ಸ್ ನಡೆಸೋದು ಆತನ ಹಣೆಬರಹ, ಅದರಲ್ಲಿ ಭಾಗವಹಿಸೋದು ಇವನದ್ದು.
ಹೇಗೋ ದೇಹದೊಳಗೆ ತೂರಿದ ವೈರಸ್ ಒಂದನ್ನ ಗುರುತೇ ಹಿಡಿಯಲಿಕ್ಕೆ ಸಾಧ್ಯವಾಗದೇ ಹೋದಲ್ಲಿ, ದೇಹ ಸಾಯುತ್ತದೆ. ಗುರುತು ಹಿಡಿದ ಮೇಲೆ ಅದನ್ನ ಮುಂದಕ್ಕೆ ಸಾಗಲಿಕ್ಕಾಗದ ಹಾಗೆ ತಡೆಯೋದು ಮತ್ತಷ್ಟು ಅತ್ಯವಶ್ಯಕ. ಇದೆರಡೂ ಆಗದಿದ್ದಲ್ಲಿ, ಒಂದು, ಆ ದೇಹದಿಂದ ಏನೂ ಪ್ರಯೋಜನವಿಲ್ಲ. ಮತ್ತೊಂದು ಅದು ವೈರಸ್ಸನ್ನ ಎಲ್ಲೆಡೆಯೂ ಪಸರಿಸ್ತದೆ.
ನಮ್ಮ 'Appraisal' ವ್ಯವಸ್ಥೆ ಮತ್ತಷ್ಟು ಬಿಗಿಯಾಗಬೇಕಿದೆ. ಇಷ್ಟಕ್ಕೂ 'Appraisal' ಇರೋದೇ ಶಿಕ್ಷಕರ ಒಳಿತಿಗಾಗಿ ಅಲ್ಲವೇ? ನೀನು ಇಲ್ಲಿಗೆ ಯೋಗ್ಯನಲ್ಲ ಅಂತ ಪಾಪ ಆತನಿಗೆ ಅರಿವು ಮೂಡಿಸಿ ಆತ ನಿಜವಾಗಿಯೂ ಸಲ್ಲಬಲ್ಲ ಜಾಗಕ್ಕೆ ಹೋಗಲಿಕ್ಕೆ ಅನುವು ಮಾಡಿಕೋಡೋದರಲ್ಲಿ ಹೇಗೂ ನಮ್ಮ ಶಿಕ್ಷಣ ವ್ಯವಸ್ಥೆ ಸೋತು ಹೋಗಿದೆ. 'Appraisal' ಅನ್ನೋದು ಪಾಪ ಆತನ ಜೀವನದಲ್ಲಿ ಸಿಕ್ಕ ಎರಡನೆಯ ಅವಕಾಶ. ಅದೂ ಸರಿಯಾಗದಿದ್ದಲ್ಲಿ, ಇದು ಆತನಿಗಾದ ಮೋಸವೇ ಪಾಪ!
Subscribe to:
Post Comments (Atom)
No comments:
Post a Comment