'ಮಹಾಂಮತ್ರಿಗಳೆ, ನಮ್ಮೆಲ್ಲಾ ಮಂತ್ರಿ ಮಹಾಶಯರ ಸಭೆಯೊಂದನ್ನೇರ್ಪಡಿಸಬೇಕಲ್ಲ' ಜಕೋಬನ ಕೋರಿಕಾ ರೂಪಕ ಆದೇಶಕ್ಕೆ ಮಹಾಮಂತ್ರಿ ತಲೆದೂಗಿದರು.
ಮಂತ್ರಿಯ ಕುತೂಹಲವನ್ನರಿತ ಜಕೋಬನೇ ಉಲಿದ
'ಇತ್ತೀಚೆಗೆ ಜನರ ಕಷ್ಟ ನಿವೇದನೆಗಳು ಹೆಚ್ಚಿವೆ. ಈ ಸಂಬಂಧ ಪರಿಹಾರ ಚಿಂತನೆ ನಡೆಸಬೇಕಿದ್ದು, ಈ ಸಭೆ....'
'ಚಿತ್ತ ಮಹಾಪ್ರಭು..'
'ಮಹಾಂಮತ್ರಿಗಳೆ. ನಿಮಗೆ ಹೇಳೋದೇನಿದೆ ಹೇಳಿ. ನೀವು ರಾಜ್ಯದ ಸಕಲ ಆಗುಹೋಗುಗಳನ್ನ ಅರಿತವರು. ಬೆಳೆಗಳು ಸರಿಯಾಗಿ ಬರುತ್ತಿಲ್ಲೆನ್ನೋದು ಅವರ ಸಾಮಾನ್ಯ ಸಮಸ್ಯೆ'
'ಹಾಗೇ ಅಲ್ಲವೇ ಮಹಾಪ್ರಭು ಇದ್ದದ್ದು ನಮ್ಮ ಯೋಜನೆ?'
'ಹೌದೌದು.. ಆದರೆ ಅವರ ಧಾವಂತ ಗಮನಿಸಿ ಅನಿಸಿದ್ದು ಅವರ ಆರೈಕೆ ಸಾಲುತ್ತಿಲ್ಲ. ನಮ್ಮ ಉದ್ದೇಶ? ಜನ ಒಂಚಣವೂ ಖಾಲಿಯಾಗಬಾರದಲ್ಲವೇ? ಖಾಲಿ ಮನಸ್ಸು, ಮೆದುಳು ಮಾರಕ! ಹಾಗಾಗಿ ನಮ್ಮ ಧ್ಯಾನದ ವೇಳೆ ಒಲಿದ ಕೆಲ ಪರಿಹಾರಗಳನ್ನು ಚರ್ಚಿಸಬೇಕೆಂದೇ ಈ ಸಭೆ!'
'ಅರ್ಥವಾಯಿತು ಮಹಾಪ್ರಭು'.
ಮಂತ್ರಿ ಮಂಡಳದ ಸಭೆ ಏರ್ಪಟ್ಟಿತು.
'ನಾವು ಧ್ಯಾನಸ್ಥರಾಗಿದ್ದ ವೇಳೆ ಕರ್ಮಯೋಗಿಗಳು ಮನದಲ್ಲಿಳಿದು ಅರುಹಿದ ಪರಿಹಾರವಿದು. ಸಮಸ್ಯೆ, ಜನ ಕಡಿಮೆ ಸಮಯ ಕೆಲಸದಲ್ಲಿ ತೊಡಗಿಸಿಕೊಳ್ಳೋದ್ದಾದ್ದರಿಂದ, ಹೆಚ್ಚಿನ ಕೆಲಸ ನಿರ್ವಹಿಸಲಾಗುತ್ತಿಲ್ಲ. ಹಾಗಾಗಿಯೇ, ಅವರು ಬೆಳಗಿನ ಜಾವ ಬೇಗ ಏಳಲೇ ಬೇಕು. ಎದ್ದು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಬೇಗ ಎಂದರೆ.. ಬ್ರಾಹ್ಮೀ ಸಮಯವಾದರೂ ಸರಿಯೇ. ?'
'ಮಹಾಪ್ರಭು..' ಆಕ್ಷೇಪಣೆಗೊಬ್ಬರು ಸಿದ್ಧರಿದ್ದರು.
'ನಮಗೆ ತಿಳಿದಿದೆ. ಬೆಳೆಗಳು ಅಷ್ಟು ಮುಂಜಾವಿನ ಸಮಯದಲ್ಲಿ ಆರೈಕೆಗೆ ತಯಾರಿರಬೇಕೆಂದಲ್ಲವೇ? ಬೆಳಕು ಹರಿದಿರಬೇಕು. ಬೆಳೆಗಳು ಬೆಳಕನ್ನ ಹೀರಿಯೇ ಮುಂದುವರೆಯುವೆವೆಂದು ಹಟದಲ್ಲಿ ಬಿದ್ದರೆ? ಹಾಗಾಗಿ, ಬೆಳೆ ಬೆಳೆಸುವ ಸರಿ ವಿಧಾನಗಳ ಅರಿವು ಎಲ್ಲರಲ್ಲೂ ಮುಖ್ಯವಲ್ಲವೆ? ಅದಕ್ಕಾಗಿ ಪ್ರತಿ ಬೆಳಗಿನ ಜಾವ ಎದ್ದೊಡನೆಯೇ ಬೆಳೆ ಬೆಳೆಯುವ ಪಾಠ.. ಎಲ್ಲರಿಗೂ. ಏನನ್ನುವಿರಿ'
'ಹೌದೌದು' ಎನ್ನುವಂತೆ ಎಲ್ಲರೂ ತಲೆದೂಗಿದರಾದರೂ, ಕೆಲವರ ಆಕ್ಷೇಪಣೆ ಮುಗಿದಿರಲಿಲ್ಲ. ಜಕೋಬ ಮತ್ತೂ ನುಡಿದ 'ನೋಡಿ, ಎಲ್ಲರಿಗೂ ಸಮಾನ ಫಲ ದೊರೆಯಬೇಕಿದ್ದಲ್ಲಿ, ಸಮಾನ ಶ್ರಮ ಅಗತ್ಯ. ಪ್ರಭುತ್ವವನ್ನೇ ಗುಮಾನಿಯಿಂದ ಇದು ಕೆಲವರ ಓಲೈಕೆಯಲ್ಲಿಳಿದಿದೆಯೆಂದು ತಿಳಿಯಕೂಡದೆಂದಾದಲ್ಲಿ ಈ ನಿರ್ಣಯ ಅತ್ಯಗತ್ಯ. ಅಕಸ್ಮಾತ್, ಯಾರಾದರೂ ತಿರುಗಿ ಬಿದ್ದಲ್ಲಿ....'
'ತಿಳಿದಿದೆ ಮಹಾಪ್ರಭು..'
ಡಂಗೂರ ಸಾರಿತು. ಮರು ದಿನದಿಂದೆಲ್ಲರೂ ಬ್ರಾಹ್ಮೀ ಮುಹೂರ್ತದಲ್ಲೇ ಎದ್ದು, ತಮಗೆ ನಿಗದಿ ಪಡಿಸಿದ ಕೆಲಸವನ್ನು ಮಾಡಬೇಕು.
'ಇಲ್ಲವಾದಲ್ಲಿ?...'
'ಈ ರೀತಿಯ ಪ್ರಶ್ನೆಯೂ ಕೇಳಬೋದೇ?'
ಜನರಲ್ಲೇ ಮಾತುಕತೆಗಳ, ತರ್ಕ-ಕುತರ್ಕಗಳ, ಚರ್ಚೆ-ವಿಮರ್ಶೆಗಳ ಸರಣಿ ಶುರುವಾಯಿತು.
'ಇದೆಂಥಾ ನಿರ್ಣಯ. ಬೆಳೆ ಬೆಳೆಯೋದು ಹೇಗೂಂತ ನಮಗೆ ಗೊತ್ತಿಲ್ಲೇನು? ಈ ನಿರ್ಣಯ ಸಮಸ್ಯೆ ಹೊತ್ತೊಯ್ದೋರಿಗೆ ಮಾತ್ರ ಇದ್ದಿದ್ದಲ್ಲಿ ಪ್ರಬುದ್ಧವಾಗಿರುತ್ತಿತ್ತು.'
'ಇದು ಅನ್ಯಾಯ'
'ಅನ್ಯಾಯ? 'ಜೀತ'ಚರಿತೆಯಲ್ಲಿ ಈ ಪದವುಂಟೆ? ಇಲ್ಲಿ ತಿಳಿದಿರೋದು ಎರಡೇ - ಜೀತ, ಸಾವು'
'ನನ್ನ ತಲೆಯನ್ನ ನನಗೇ ಹೇಳದೇ ನಾಳೆ ಕಡಿದರೂ ಕಡಿದಾರೇನೋ?'
'ನಾವೆಲ್ಲಾ ದಂಗೆಯೆದ್ದರೆ?'
'ಇನ್ಯಾವ ರಾಜ್ಯ ನಮಗಾಗಿ ಕಾಯ್ತಿರುತ್ತದೆ ಇಲ್ಲಿಂದ ಬಿಟ್ಟು ಹೋಗಲು?'
ಹೀಗೆ ತಲೆಗೊಂದು ಮಾತು. ಆಗೀಗ್ಗೆ ಒಂದೆರೆಡು ಸುದ್ದಿ ಹರಿದಾಡಲಾರಂಭಿಸಿತು -'ಆತ ದೇಶ ತೊರೆದ'. ತಾವೂ ಹೀಗೆ ತೊರೆದು, ಆತನ ಹಾಗೆಯೇ ಓಡಿಬಿಡಲು ಕನಸು ಕಂಡರೂ, ಕನಸಿನ ಸಾಕಾರಕ್ಕೆ ಧೈರ್ಯ ಕೈ ಹಿಡಿಯದೇ, ಇಲ್ಲೇ ಉಳಿದುಕೊಂಡ ಜನರೆಷ್ಟೋ.
ಹೀಗೆ ಒಂದೊಮ್ಮೆ ಎಲ್ಲರೂ ಸೇರಿ ಜಕೋಬನ ಅರಮನೆಗೆ ಹೋದಲ್ಲಿ ಅರಸನ ಮನ ಕರಗಬೋದೇನೋ ಎಂದು ಜನ ಭೇಟಿಯಿತ್ತರೂ, ಅರಸನ ಮಾತುಗಳಿಗೆ ಬೊಂಬೆಯಂತೆ ತಲೆಯಾಡಿಸಿ ಮಾರಿಹೋದವರದೆಷ್ಟೋ! 'ಈ ನಿಮ್ಮ ಜೀವ ಇಲ್ಲಿಯೇ ಹುಟ್ಟಲಿಕ್ಕೆ ಕಾರಣ? ಈ ನೆಲ ತಮ್ಮಿಂದ ಅಪೇಕ್ಷಿಸುವಿದಿಷ್ಟೇ - ಇದಕ್ಕಾಗಿ ನಿಮ್ಮ ರಕ್ತ ಬಸಿದು ಶ್ರಮಿಸಬೇಕು. ನಿಮ್ಮ ಜನನವೇ ಈ ಸಂಸ್ಥಾತನದ ಏಳ್ಗೆಗಾಗಿ. ಹಾಗಾಗಿರುವಾಗ ಮೈಗಳ್ಳತನವೇ? ರೋಷ, ನಾಚಿಕೆ ಒಂಚೂರು ಇಲ್ಲದ, ದೇಶದ ಯೋಗಕ್ಷೇಮದ ಕಾಳಜಿಯೂ ಇಲ್ಲದ, ಮನುಷ್ಯರೇ ಅಲ್ಲದ ಮೈಗಳ್ಳ ಮೃಗಗಳು ಈ ದೇಶಕ್ಕೆ ಅಗತ್ಯವೇ? ನನ್ನ ಪ್ರಜೆಗಳು ಎಂದಿಗೂ ಹಾಗಲ್ಲ. ರಕ್ತ ಬಗೆದು ಮಣ್ಣಿಗರ್ಪಣೆ ಮಾಡುವ ರಾಷ್ಟ್ರ ಪ್ರಿಯರು'.
'ಜಯ...ಹೋ... ಜಯ ಜಯ.. ಹೋ.. ಜಕೋಬ' ಈ ಜೈಕಾರ ಕೆಲವರ ಮನದಲ್ಲಿ ಪುಳಕದಿಂದೆದ್ದ ಅಲೆ. ಮತ್ಕೆಲವರ ಮನದಲ್ಲಿ - 'ಮೃಗಗಳಾಗುವೆವೆನ್ನುವ' ಭಯದ ಸೆಲೆ. ಆದರೂ ಕೆಲವರಿಗೆ ಅಸಂತೃಪ್ತಿ!
ಜನ ಬ್ರಾಹ್ಮೀ ಮಹೂರ್ತದಲ್ಲೇ ಏಳುತ್ತಿದ್ದಾರೆ. ಸುಂದರ ಸ್ವಪ್ನದಲ್ಲಿ ಮಿಂದೆದ್ದು, ಅರುಣೋದಯದ ಮೇಲೆ ಕಂಬಿಟ್ಟು ಹಿತ ಪಾನೀಯ ಸವಿದು, ಇಡೀ ಸಮಸ್ತ ದೇಶವೇ ಕೆಲಸದಲ್ಲಿ ಮುಳುಗಿರುವುದನ್ನು ಕಂಡು ಜಕೋಬ ಹೇಳುತ್ತಾನೆ 'ನಿಮ್ಮ ಜನುಮವೇ ಈ ದೇಶಕ್ಕಾಗಿ'.
No comments:
Post a Comment