ಹಾಸಿಗೆ ಮೇಲೆ ಉಸಿರಾಡುತ್ತಲೇ ಹಾಗೆಯೇ ಕಣ್ಣು ನಾಲಿಗೆ ಹೊರ ಬಿಟ್ಟು ಮಲಗಿದ್ದ. ಬದುಕಿದ್ದಾಗಲೇ ಸುಡುವುದು ಅಮಾನವೀಯವೆಂದು ಸುತ್ತ ಕೆಲವರು ಸಾವಿಗಾಗಿ ಎದುರು ನೋಡ್ತಿದ್ದರು. ಸಾಕಷ್ಟು ಜನ, ಮತ್ತೆ ಮೊದಲಿನಂತೆ ಆತ ಎದ್ದು ಕೂರುವನೇ ಎಂದು ನೋಡುತ್ತಿದ್ದರು. ಆದರೆ ಸಾವು ಕೆಳಗೂ ಇಳಿಯದೇ, ಹೊರಗೂ ಹೊರಳದೇ ಗಂಟಲಲ್ಲೇ ಕೂತು ಇವನನ್ನ ಕೇಳಿತು - 'ಈಗ ಹೇಳು. ಹೇಳುವವರೆಗೂ ಈ ಜಾಗ ಬಿಟ್ಟು ಕದಲಲಾಗದು. ನನಗಿದೋ ಆದ ಆಜ್ಞೆ'.
ಸಾವಿಗೂ ಹೆದರದಷ್ಟು ಆ ಸಾವಿನ ಧರಣಿಗೆ ಆತ ಹೆದರಿದ್ದೇ ಆತನ ಕಣ್ಣು ನಾಲಗೆ ಅರಳಿದ್ದಕ್ಕೆ ಕಾರಣವೇನೋ. ಸಾವೂ ಸಹ ಇನ್ಯಾರದ್ದೊ ನಿಯಂತ್ರಣದಲ್ಲೇ ಆ ಧರಣಿ ಕೂತಿದೆ.
ಆತ್ಮ ಕೇಳಿತು -'ದಯಮಾಡಿ ಕೂಡಲೇ ಕೇಳು'
'ನಿನ್ನ ಕೃತ್ಯಕ್ಕೆ ಸಮರ್ಥನೆಯೇನು?' ಅವರು ಕೇಳಿದರು.
'ನನಗೆ ಆ ಕ್ಷಣಕ್ಕೆ ಅವರ ಮುಖದಲ್ಲಿ ಕಾಣ ಸಿಗುವ ಮಂದಹಾಸವನ್ನ ನೋಡಿ ಉಂಟಾದ ತೃಪ್ತಿಯೇ ನನ್ನನ್ನು ಹೀಗೆ ಮುಂದುವರೆಸಿತು'.
'ಮತ್ತೇ ಸುಳ್ಳು. ದಯಮಾಡಿ ನಿಲ್ಲಿಸು. ನಿನ್ನ ಆಂತರ್ಯದ ಒಂದೊಂದು ಗುಟ್ಟೂ ನನ್ನನ್ನ ಬಿಟ್ಟು ಇನ್ಯಾರಿಗೆ ತಿಳಿದೀತು? ಇದೇ ಸುಳ್ಳನ್ನ ನಾನು ಅವರಿಗೆ ದಾಟಿಸಿದರೆ, ನಾನು ಖಾಯಂ ಇಲ್ಲೇ. ಹೀಗೆ. ನೀನೂ ಹೀಗೆ' ಸಾವು ಒಳಗೆಯೇ ಪಿಸುಗುಟ್ಟಿತು.
'ಹೌದೌದು. ಮತ್ತಿನ್ಯಾಕೆ ನಾನು ಹಾಗೆಲ್ಲಾ ಮಾಡಲಿ?'
'ದುರಾಸೆ. ಅತಿಯಾಸೆ. ಸ್ವಾರ್ಥ'
'ಹೌದು ನಿಜ. ರೋಗ ಹಿಡಿದ ಪ್ರತಿಯೊಂದು ಮರವೂ ನನ್ನ ಆರೈಕೆಯಿಂದ ಚಣಕಾಲದಲ್ಲಿ ಸರಿಹೋದಾಗ, ಮರವೂ ಮರದ ಒಡೆಯನೂ ನನ್ನ ನೋಡಿ ಕೈ ಮುಗಿದಾಗ, ಪಕ್ಕದಲ್ಲಿದ್ದ ಮರವೂ, ಅದರ ಒಡೆಯನೂ ನನ್ನ ಮೆಚ್ಚಲಿಲ್ಲವೇ. ಅದಕ್ಕಾಗಿಯೇ ಅವರೂ ಸಹ ನನ್ನನ್ನ ನೋಡ ಬಂದದ್ದಲ್ಲವೇ?'
'ಆದರೆ ನಿನ್ನ ಆರೈಕೆ ಅದ್ಹೇಗೆ ಅಷ್ಟು ಕ್ಷಣಿಕ ಕಾಲದಲ್ಲಿ ಚೇತರಿಸಲು ಸಾಧ್ಯ?'
'ಹಾಗೆಯೇ ಅಲ್ಲವೇ ನನ್ನ ಔಷಧಗಳು ಇದ್ದದ್ದು?'
'ತಪ್ಪಲ್ಲವೇ? ನಿನ್ನ ಔಷಧಿಗಳು ದೀರ್ಘಕಾಲದಲ್ಲಿ ಮಾರಣಾಂತಿಕವಾದದ್ದಲ್ಲವೇ?'
'ಹೌದು.. ಹೌದು..'
'ಹಾಗಿದ್ದರೂ..?'
'ಅದು ನನ್ನ ಔಷಧದಿಂದಲೇ ಎಂದು ಯಾರು ಅರಿತಾರು? ಅವರಿಗೂ ಬೇಕಾದ್ದು ಅದೇ ಅಲ್ಲವೇ? ಆ ಕ್ಷಣದ ಉಪಶಮನ ಹಾಗೂ ತೃಪ್ತಿ? ಮುಂದಿನದ್ದು ಯಾರು ಯೋಚಿಸಿಯಾರು?'
'ಹಾಗಾಗಿ ನಿನ್ನ ಬೊಕ್ಕಸ ತುಂಬ್ತಲೇ ಹೋಯಿತು. ಜನ ನಿನ್ನನ್ನೇ ಅರಸಿ ಬಂದರು. ನೀನು ನಿಷಿದ್ಧ ವಿಧಾನದಿಂದಲೇ ಅವರನ್ನ ಉಪಚರಿಸಿದೆ'
'ಇದನ್ನ ನಾನು ಹೇಗೆ ಒಪ್ಪಲು ಸಾಧ್ಯ? ಈಗಲೂ ನನ್ನ ಸುತ್ತ ನಿಂತ ಸಾಕಷ್ಟು ಜನ ನಾನು ಎದ್ದು ನಿಂತರೆ ಸಾಕೆಂದು ಕಾಯ್ತಿದ್ದಾರೆ. ನನ್ನ ಸಾವು ಅವರಿಗೆ ಅತೀವವಾದ ಸಂಕಟ. ನನ್ನ ಉಳಿಸಿದರೆ ಅವರ ಮುಖದಲ್ಲಿ ಸಿಗುವ ತೃಪ್ತಿ ಎಷ್ಟೆಂದು ನೀನೇ ನೋಡಬಹುದು. ಅವರನ್ನ ಈ ನೋವಿನಿಂದ ನೀನೇ ದೂರ ಮಾಡಬಹುದು'
'ಹಾಗೆಯೇ ನಿನ್ನ ಬೊಕ್ಕಸವನ್ನೂ ತುಂಬಿಸಿಬಹುದು'.
ಸಾವನ್ನ ಯಾರೋ ಕೊಕ್ಕೆಗೆ ಸಿಕ್ಕ ಮೀನಿನ ಹಾಗೆ ಆಚೆ ಎಳೆದರು.
No comments:
Post a Comment