Saturday, November 30, 2024

ಕಣ್ ಕಟ್

ಖಜಾಂಚಿಗಳೇ ಬಾಗಿಲು ತಟ್ಟುತ್ತಿದ್ದದ್ದು. ಸುಂದರ ಸ್ವಪ್ನವೊಂದಕ್ಕುಂಟಾದ ಭಂಗದಿಂದ ಜಕೋಬನಿಗೆ ಸಿಟ್ಟಾಯಿತಾದರೂ, ವಿಷಯ ಗಂಭೀರವೆಂದು ಹೇಳಿದರಿಂದ ಸುಮ್ಮನಿದ್ದ.


'ಮಹಾರಾಜರೇ! ಲೆಕ್ಕ ಪರಿಶೋಧನೆ ಈಗಷ್ಟೇ ಮುಗಿದಿದ್ದು, ತಮ್ಮ ನಿದ್ರಾಭಂಗ ಅನಿವಾರ್ಯವಾಯಿತು. ರಾಜ್ಯದ ಬೊಕ್ಕಸ ಬರಿದಾಗಲಿದೆ. ಸಾಲಕ್ಕೇ ಎಲ್ಲವನ್ನೂ ‌ವ್ಯಯಿಸಿದರೆ, ತಮಗೇ ಕಿತ್ತು ತಿನ್ನುವ ಸ್ಥಿತಿ ಎದುರಾಗಲಿದೆ' 

ರಾಜ ಒಂದು ಕ್ಷಣ ಯೋಚಿಸಿ ನಕ್ಕ. 
'ಮಹಾಮಂತ್ರಿಗಳೇ, ಈಗೇನು ಮಾಡುವಿರಿ?' ಎಂದು ತುಂಟ ನೋಟ ಬೀರಿ ಕಣ್ಣು ಮಿಟುಕಿಸಿದ. 

'ಮಹಾಪ್ರಭು.. ನಾನು ಹೇಳಿದ್ದು ಖಜಾಂಚಿಗಳಿಗೆ ಮನದಟ್ಟಾಗಲಿಲ್ಲ. ನೀವು ನಿಮ್ಮ ಸುಖ ಸ್ವಪ್ನವನ್ನು ಮುಂದುವರೆಸಿರಿ' ಎಂದು ಮಹಾಂಮತ್ರಿಗಳು ಎಲ್ಲರನ್ನೂ ಕರೆದು ಹೊರಟರು. 

ಎಂದಿನಂತೆ ಮರುದಿನ ಡಂಗೂರ ಸಾರಲಾಯಿತು. 

'ರಾಜ್ಯದ ಕೆಲವು ಜನತೆ ಮಿತಿಗಿಂತ ಹೆಚ್ಚು ಗಾಳಿ ಸೇವಿಸುತ್ತಿರುವುದು ಮಹಾರಾಜರ ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಗಾಳಿ ನಮ್ಮೆಲ್ಲರಿಗೂ ಸಮಾನವಾಗಿ ದೊರೆಯುವಂತಾಗಬೇಕು. ಹಾಗಾಗಿ, ಪ್ರತಿಯೊಬ್ಬರೂ ನಿಗದಿ ಪಡಿಸಿದ ಮಿತಿಗಿಂತ ಹೆಚ್ಚು ಗಾಳಿ ಸೇವಿಸಿದ್ದೇ ಆದಲ್ಲಿ, ಎಲ್ಲರೂ ಸಹ ಅವರವರ ಶಕ್ತ್ಯಾನುಸಾರ ಹೆಚ್ಚಿನ ಗಾಳಿ ಸೇವನೆಗೆ ನಿಗದಿ ಪಡಿಸಿದ ದಂಡವನ್ನು ತೆರಬೇಕಿದೆ'. 

'ಹೌದೇ! ಗಾಳಿಯೂ ಖಾಲಿಯಾಗಬಹುದೇ?'

'ಇರಬೋದು ಇರಬೋದು. ನಾವು ಹೇಳಿ‌‌ ಕೇಳಿ ಪಾಮರರು' 

ಜನರ ಮಾತುಕತೆಗಳು, ಗುಸು ಪಿಸುಗಳು ಆರಂಭವಾದವು. 

'ಮತ್ತೆ ಹೇಗೆ ಕಂಡು ಹಿಡೀತಾರೆ ನಾವು ಎಷ್ಟು ಗಾಳಿ ಸೇವಿಸಿದ್ದೇವೆ ಅಂತ?'

ಎರಡೂ ಕಾಲು ಮೇಲೆ ಹಾಕಿ ಕೂತಿದ್ದ ಜಕೋಬ ಕೊಂಡಾಡಿದ-'ಭಲೇ ಭಲೇ ಮಹಾಮಂತ್ರಿ. ತಮಗೆ ದಂಡ ಬಂದೀತೆಂಬ ಕಾರಣಕ್ಕೆ ಉಸಿರು ಕಟ್ಟಿಯಾದರೂ ಜನ ಸತ್ತು, ಅದರಿಂದ ಒಂದಷ್ಟು ಖರ್ಚು ಮಿಗಬೋದೆನ್ನೋ ಎಂಥಾ ಮಹತ್ ಉಪಾಯ ಹೂಡಿದಿರಿ.'

'ಅಷ್ಟೇ ಎಂದುಕೊಂಡಿರೇ ಮಹಾಪ್ರಭು! ಬನ್ನಿ' ಮಂತ್ರಿ ಪಿಸುಗುಡಲಾರಂಭಿಸಿದ. 'ಎಷ್ಟೇ ಕಾಲ ಕಳೆದರೂ ದಂಡ ಕಟ್ಟೋದು ತಪ್ಪದ ಕಾರಣ, ಗಾಳಿಯ ಅಭಾವ ಎದುರಾಗಿದೆಯೆಂದು ಎಲ್ಲರೂ ತಂತಮ್ಮ ಮನೆಗಳಲ್ಲಿ ಮರಗಳನ್ನ ಬೆಳೆಸಿ ಪೋಷಿಸುವ  ಕಾಯಕ ಕೊಡುವುದು ಮುಂದಿನ ಯೋಜನೆ. ಮರಕ್ಕೆ ಬೀಜ ಯಾರದ್ದೆಂದುಕೊಂಡಿರಿ. ಪೋಷಣೆಗೆ ರಸಾಯನಿಕ ಯಾರದ್ದೆಂದುಕೊಂಡಿರಿ.. ಹ್ಹಿ ಹ್ಹಿ..' ಮಂತ್ರಿ ಕಿವಿಯಲ್ಲೇ ಕಿಸಿಕಿಸಿ ನಕ್ಕ. 


'ಅಬ್ಬಾ...' ಜಕೋಬ ಕಣ್ಣರಳಿಸಿ ಉಲಿದ 'ಸರ್ವಕಾಲಕ್ಕೂ ತಾವೇ ನಮ್ಮ‌‌ ಮಂತ್ರಿ. ಅದಿರಲಿ ಅದ್ಹೇಗೆ ಗಾಳಿಯ ಅಳತೆ ಮಾಡುವಿರಿ?'

ಮನೆಗೊಂದು ಮಾಪನ ಅಳವಡಿಸಲಾಯಿತು. 'ಖರ್ಚಲ್ಲವೇ ಮಹಾಂತ್ರಿ!' ರಾಜ ಉದ್ಗರಿಸಿದ. 'ಅಷ್ಟೂ ಕಣ್ಣೊರೆಸದಿದ್ದಲ್ಲಿ, ಖಜಾನೆ ತುಂಬುವುದಾದರೂ ಹೇಗೆ? ಬಂಡವಾಳವೇ ಇಲ್ಲದೇ, ಲಾಭ ಹೇಗೆ?' ಮಂತ್ರಿಯ ಮಾತು ಪುಂಗಿಯಂತೆ‌. 

'ಈ ಮಾಪನ ಸರಿಯಿಲ್ಲ ಕಾಣ್ತದೆ.'

'ನಮ್ಮ ತಪ್ಪಿಗೆ ಮಾಪನವನ್ನ ದೂರೋದೆ? ಸ್ವಲ್ಪ ಕಡಿಮೆ ಉಸಿರಾಡಿ.'

'ದೇಶ ಕಂಡ ಅತ್ಯುನ್ನತ ಪಂಡಿತರಾದ ಕೋಚಪ್ಪನವರು ಸಿದ್ಧಪಡಿಸಿದ್ದು ತಪ್ಪಾಗಲು ಸಾಧ್ಯವೇ?'

'ಮುಂದಿನ ಬಾರಿಯಾದರು ತುಸು ದಂಡ ಕಡಿಮೆ ಮಾಡಿಕೊಳ್ಳ ಬೇಕು.' 

'ಆಹಾ! ನಾನೆಂಥಾ ಪಾಪಿ. ಗಾಳಿಯನ್ನೂ ಹೆಚ್ಚಾಗಿ ಸೇವಿಸಿ ಇತರರಿಗೆ ಸಿಗದ ಹಾಗೆ ಹೀರುತ್ತಿದ್ದ ಪಾಪಿ.' 

'ರಾಜರ ಆಸ್ಥಾನಕ್ಕೆಷ್ಟು ಮಾಪನಗಳು?'

'ಮಹಾರಾಜರೂ ದಂಡತೆತ್ತರೆ! ಎಂಥಾ ಮಹಾನ್ ವ್ಯಕ್ತಿ.'

ತಲೆಗೊಂದು ಮಾತು, ತಲೆಗೊಂದು ಸುದ್ದಿ. 

'ಭಲೇ ಭಲೇ ಕೋಚಪ್ಪನವರೇ! ಆದರೂ ನಾವು ಅಷ್ಟೊಂದು ಹೆಚ್ಚು ಗಾಳಿ ಸೇವಿಸುತ್ತಿದ್ದೇವೆಯೇ!' ಜಕೋಬ ಅಚ್ಚರಿ ಪಟ್ಟ.

ಪ್ರತೀ ಮನೆಯ ಮಾಪನದಲ್ಲಿದ್ದ ಆರ್ದ್ರತೆ ಕಡಿಮೆಯಾದಂತೆ, ಅದರ ಸೂಚಕವು ಕೆಳಗಿಳಿಯುತ್ತಾ ಬರುತ್ತದೆ. ನಿಗದಿತ ಮಾನಕ್ಕಿಂತ ಎಷ್ಟು ಕಡಿಮೆ ಇಳಿಯುವುದೋ ಅಷ್ಟು ದಂಡ, ಶಕ್ತ್ಯಾನುಸಾರ. ಅದರಲ್ಲೂ ಸಮತೆಯನ್ನು ಮೆರೆದ ಮಹಾರಾಜ. ಆದರೆ, ಸೂಚಕದ ಇಳಿತ ಗಾಳಿಯ ಮೇಲಷ್ಟೇ ನಿರ್ಧಾರಿತವಲ್ಲವೆನ್ನೋದು ಕೋಚಪ್ಪನವರಿಗಷ್ಟೇ ತಿಳಿದದ್ದು. ಕೋಚಪ್ಪನವರಿಗೆ ಈಗ ಮೌನ - ನಗು ಅಷ್ಟೇ ತಂತ್ರ. ಮತ್ತೆ ಇನ್ಯಾವುದರ ಮೇಲೆ ಅದು ನಿರ್ಧಾರಿತವಾಗೋದು? ಕೋಚಪ್ಪನವರಿಗೂ ತಿಳಿಯದು! 

'ಮಹಾಪ್ರಭು!' ಖಜಾಂಚಿಗಳ ಅರಳಿದ ಕಣ್ಣುಗಳಿಂದಲೇ ಖಜಾನೆ ಎಷ್ಟು ತುಂಬಿರಬೋದೆಂದು ಊಹಿಸಬಹುದಿತ್ತು. 

ಮಾಪನ ಓಡುತ್ತಿದೆ. ರಾಜನ ಖಜಾನೆ ಹಿಂದಿಗಿಂತ ನಿಧಾನವಾಗಿ ಬರಿದಾಗಿತ್ತಿದೆ. ರಾಜನ ಕಿತ್ತು ತಿನ್ನುವ ಕಾಲ ಮುಂದಕ್ಕೋಡಿದೆ. 'ಎಲ್ಲವೂ ಮತ್ತೆ ತಮ್ಮ ವಿನಿಯೋಗಕ್ಕೆ ಅಲ್ಲವೇ!' ಪ್ರಜೆಗಳ ಮುಂದೆ ಸಮತಾ ದೈವನಾಗಿ ಒಳಬಂದ ಜಕೋಬನ ಸುಪ್ಪತ್ತಿಗೆ ಒಂದೆರೆಡು ಇಂಚು ದಪ್ಪಗೆ, ಮೆತ್ತಗೆ ಹೊಸತದ್ದಾಗಿದೆ! 










No comments:

Post a Comment