ಐರನಿ - 1
'ನಿಮಗೊಂದು ಸ್ವಾಭಿಮಾನವಿದ್ದಲ್ಲಿ ದೇವಸ್ಥಾನಗಳಿಗೆ ಹೋಗೋದನ್ನ ನಿಲ್ಲಿಸಬೇಕು' ಭಾಷಣಕಾರ ಉದ್ರೇಕದಿಂದ ಹೇಳಿದ ದಲಿತ ಸಮಾವೇಶದಲ್ಲಿ.
ಬಯಲ ಮೂಲೆಯಲ್ಲೆಲ್ಲೋ ಸಣ್ಣ ದಿಬ್ಬದ ಮೇಲೆ ಕುಕ್ಕರಗಾಲಲ್ಲಿ ಚೆಡ್ಡಿ ಹಾಕಿ, ತಲೆಗೆ ಟವಲ್ ಸುತ್ತಿ ಕೂತಿದ್ದ ಕರಿ ಮುಖದ ತುಕಾರಾಮನ ಮೋಟು ಬೀಡಿ ಎಳೆಯುವ ವೇಗವೂ ಹೆಚ್ಚಿತು. 'ಟಿಣಿ ಣಿಣ್ ಟಿಣ್ ಟಿಣಿ ಣಿಣ್ ಟಿಣ್ ಟಿಣಿ ಣಿಣ್ ಟಿಣ್ ಟಿಣ್' ಅಂಗಿಯ ಜೇಬಲ್ಲಿದ್ದ ಮೊಬೈಲ್ ತೆಗೆದ 'ಹಲೋ....ಬಂದೆ ಸಾಮೆ..' ಭಾಷಣಕಾರನ ಧ್ವನಿಯನ್ನೂ ಮೀರಿದಂತೆ ಕೂಗಿ ಎದ್ದು ನಿಂತು ಟವಲು ತೆಗೆದ. ನಿಂತೇ ಬೀಡಿಯನ್ನ ಸರ ಸರ ಒಂದೈದು ಬಾರಿ ಎಳೆದು, ಪಕ್ಕೆಸೆದು ಹೊರಟ.
'ಏಯ್..' ಭಾಷಣಕಾರ ಕೂಗಿದ 'ನಿಲ್ಲಲ್ಲೇ... ಎಲ್ಲಿಗ್ಹೊರಟಿ?'
'ಸಾಮೇ.. ದ್ಯಾಮಸ್ಥಾನಕ್ಕೆ..'
'ಮರುಳ ಮರುಳ.. ಇಷ್ಟು ಹೊತ್ತು ಹೇಳಿದ್ದೇನೋ ನಿನಗೆ. ಒಂಚೂರಾದರೂ ಮಾನ ಮರ್ಯಾದೆ ಇಲ್ವೆ? ಸ್ವಾಭಿಮಾನ ಇಲ್ವೆ?'
'ಸಾಮೇ... ಪಕ್ದಾಗೆ ಯಾನೋ ಚರಂಡಿ ಕಟ್ ಗಂಡಯ್ತಂತೆ..'
'ಅದ್ಕೆ.. ನೀನೇ ಬೇಕೇನು? ನೀ ಹೀಗೆ ಸುಲಭವಾಗಿ ಹೋಗೋದ್ರಿಂದಲೇ ಅವರಿಗೆ ನಿಮ್ಮ ಮೇಲಿನ ಈ ದರ್ಪ, ತಾತ್ಸಾರ'.
'ಸಾಮೇ...' ಆತ ಮುಖ ತಿರುಗಿಸಿ 'ಇನ್ಯಾರ್ ಕೊಟ್ಟಾರ್ ಸಾಮೆ ಕಾಸು..' ಎಂದು ಹಲ್ಲು ಕಿರಿದ.
'ಥುತ್.. ಮಾಡೋಕ್ಕೆ ಸಾಕಷ್ಟು ಕೆಲಸಗಳಾದವೇ ಜಗತ್ತಲ್ಲಿ. ನಿನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗದೇ ಇರೋಅಂತವು. ನಾನೇ ನಿನಗೊಂದು ಬೇರೆ ಕೆಲಸ ಕೊಡಿಸ್ತೇನೆ. ಈಗ ಅಲ್ಲೇ ಕುಕ್ಕರುಬಡಿ'.
'ಸಾಮೇ...'
'ಕೂರು ಅಂದೇ...'
ಭಾಷಣವೆಲ್ಲವೂ ಮುಗಿದ ಮೇಲೆ, ಅತಿಥಿ ಸನ್ಮಾನಗಳು, ಸದೋಪಚಾರಗಳೆಲ್ಲವೂ ಕಳೆದ ಮೇಲೆ, ಆತ ಬಂದ..
'ಸಾಮೇ...'
'ಇದು ನನ್ನ ಅಡ್ರೆಸ್ಸು.. ನನ್ನ ಬಂದು ಕಾಣು..'
'ಸಾಮೆ ಸಿಟಿಯಾಗ್ಯೆ?'
'ಹೌದಲ್ಲೋ.. ನೀವೆಲ್ಲಾ ಹೀಗೆ ಇದ್ದಲ್ಲೆ ಅಂಡೂರಿ ಸಿಕ್ಕ ಗಂಜಿ ಸಾಕುಂತ ಕೂತಿರೋದ್ರಿಂದಲೇ ಹೀಗೇ ಇರೋದು.. ಬಾ ಕಾಣು'
ಈತ ಹೋದ.
'ಏನ್ ಮಾಡ್ತಿ..?'
'ಸಾಮೇ.. ನಾನು ಚರಂಡಿ ಕ್ಲೀನಿಂಗ್...'
ಅರ್ಧಕ್ಕೆ ತಡೆದು.. 'ಥುತ್. ಅದಲ್ಲಲೇ.. ಬಾತ್ ರೂಮ್ ತೊಳಿತೀಯ?' ಮೆತ್ತಗೆ ಹತ್ತಿರ ಮುಖಮಾಡಿ ಕೇಳಿದ.
'ಹೂಂ... ಸಾಮೆ..'
'ಲಕ್ಷ್ಮೀ....'
ಐರನಿ - 2
ಅದೊಂದು ಕ್ರಿಸ್ತಿಯನ್ನರ ಸಮಾವೇಶ. ಭಾಷಣಕಾರನ ಉದ್ವೇಗ ಹೆಚ್ಚಿತ್ತು. 'ಈ ದೇಶಕ್ಕೆ ಕ್ರಿಸ್ತಿಯನ್ ಮಿಷಿನರಿಗಳು ಬದುಕು ಕಟ್ಟಿಕೊಟ್ಟವು. ಸಾಲೆಗಳನ್ನ ಹುಟ್ಟಿಹಾಕಿದ್ವು. ಮಠಗಳು ಏನು ಮಾಡಿದವು?'
ಭಾಷಣ ಮುಗಿದು ಸನ್ಮಾನೋತ್ತರ ಸದೋಪಚಾರಗಳೆಲ್ಲಾ ಮುಗಿದು ಭಾಷಣಕಾರರು ಕಾರು ಹತ್ತಿದರು.
'ಸಾರ್..' ಕಾರಿನ ಡ್ರೈವರ್ ಮುಂದೆ ನೋಡುತ್ತಾ ಓಡಿಸುತ್ತಲೇ ಕರೆದ.
'ಹಾಂ..'
'ಮಠಗಳು ಸಾಕಷ್ಟು ಸಾಲೆಗಳನ್ನ ನಡೆಸ್ತಾ ಇದ್ದಾವಲ್ಲ ಸಾರ್..'
'ಹೌದೇ..'
'ನಾನೂ ಒಂದು ಮಠದ ಶಾಲೆಯಲ್ಲೇ ಓದಿಕೊಂಡು ಬಂದೋನು ಸಾರ್..'
'ಅದಕ್ಕೆ ಹೀಗಿದ್ದಿ ಒಬ್ಬ ಡ್ರೈವರ್ ಆಗಿ....'
ಐರನಿ - 3
ಆತನೆಂದೂ ಯೋಚಿಸಿದ್ದಿಲ್ಲ ದೇಗುಲದ ಗರ್ಭಗುಡಿಯ ಒಳಗೆ ತಾನಿನ್ನೆಂದಿಗೂ ಕಾಲಿಡಲಾಗುವುದಿಲ್ಲವೆಂದು. ಭಯ ಅಂತೆನೂ ಆತನಿಗಿರಲಿಲ್ಲ. ಅದನ್ನು ಕಟ್ಟುವಾಗಲೂ, ಅದೆಷ್ಟು ಬೀಡಿಗಳು ಖಾಲಿಯಾಗಿದ್ದವೋ.
ಒಂದೊಮ್ಮೆ ಅದು ಬಿದ್ದಿತು. ಒಳಗಿದ್ದವರಿಗೆ ಪ್ರಾಣದ ಭೀತಿ ಕೂಗಿಸಿತು. ಹತ್ತಿದಲ್ಯಾರೂ ಇಲ್ಲ. ಇವನು ಒಂದಿಬ್ಬರನ್ನು ಸೇರಿಸಿ ಓಡಿದ. ಕಲ್ಲಗಳನ್ನೆಲ್ಲಾ ಸರಿಸಿ ಅವರನ್ನು ಹೊರಗೆಳೆದ.
ಪ್ರಾಣಾಪಾಯದ ಸುಳಿಯಿಂದ ತಪ್ಪಿಸಿ ಹೊರಬಂದು ದೈವಕ್ಕೊಂದು ಕೃತಜ್ಞತೆ ನೆನೆದು, ಮನೆಗೆ ಬಂದು ಸ್ನಾನ ಮಾಡಿ, ಯಜ್ಞೋಪವೀತ ಬದಲಾಯಿಸಿದರು.
No comments:
Post a Comment