Friday, March 28, 2025

ಖಜಾನೆ ಬರಿದಾಗುವ ಹೊತ್ತಲ್ಲಿ

ಆಪ್ತನ ಸಲಹೆಗೆ ಮೆಚ್ಚಿ ರಾಜ ಜಕೋಬ ತಲೆದೂಗಿದ. 'ಈ ರೀತಿಯೆಲ್ಲಾ ಯೋಚಿಸಲು ಒಬ್ಬ ಸಾಮಾನ್ಯನಿಗೆ ಸ್ವಪ್ನಕ್ಕೂ ಅಸಾಧ್ಯ. ನೀನೊಬ್ಬ ಹುಟ್ಟು ಪ್ರತಿಭೆ'. 

 

ಡಂಗೂರ ಸಾರಲಾಯಿತು: 

"ಎಲ್ಲರಿಗೂ ಅತ್ಯದ್ಭುತ ಅವಕಾಶ. ನಿಮ್ಮ ಎಷ್ಟೇ ತಲಮಾರಿನ ಹಿಂದಿನವರನ್ನ ಉಸಿರಾಡಿಸಲು ಸುವರ್ಣಾವಕಾಶ. ಒಂದೊಂದು ಸಮಾಧಿಗೂ, ಹೆಣದ ತಲಮಾರಿನಾಧಾರ ನಿಗದಿಪಡಿಸಿದ ಕಾಸು ತೆತ್ತರಷ್ಟೇ ಸಾಕು".

 

" ಭೂತ-ಭವಿಷ್ಯತ್ ಚಿಂತೆ ಬಿಟ್ಟು ವರ್ತಮಾನದ ಬದುಕಿನಲ್ಲಿ ಜೀವಿಸೋದನ್ನ" ಅತ್ಯಂತ ಗಂಭೀರವಾಗಿ ಪರಿಗಣಿಸಿದ ಜನಕೆ ಇದೊಂದು ಸುವರ್ಣಾವಕಾಶವೇ.

 

"ಕಾಸೆಷ್ಟೇ ಆದರೂ, ಮನೆಗೆ ಜನ ಜಾಸ್ತಿ ಆದಷ್ಟು ಆದಾಯವೂ ಹೆಚ್ಚೇ. ಹೆಚ್ಚು ಜನ, ಹೆಚ್ಚು ಸವಲತ್ತು."

 

"ಭಲೆ ಭಲೆ.. ಈಗಿರೋ ಹಣದಲ್ಲಿ ಮೂವರನ್ನ ಬದುಕಿಸಿಕೋಬೋದು.."

 

"ಆದರೂ.. ಜನ ಹೆಚ್ಚಾದಷ್ಟೂ ನಮ್ಮ ಮುಂದಿನ ಪೀಳಿಗೆಗೇ ಭಾರವಲ್ಲವೇ?"

 

"ಸಹಿ ಹಾಕದೆಯೇ ಸತ್ತ ಅಪ್ಪ ಮತ್ತೆ ಬಂದರೆ, ಹೇಗಾದರೂ ಪತ್ರಕ್ಕೆ ಸಹಿ ಹಾಕಿಸಕೋ‌ಬೋದು" 

 

"ಮೂಲಾಧಾರವೇ ಇಲ್ಲದಂತಾಗಿದ್ದ ನಮ್ಮ ಕುಟುಂಬಕ್ಕೆ ಎಂಥಾ ಅವಕಾಶ"

 

ಜನಕೊಂದು ಮಾತು. ಒಂದೊಂದು ಕಾರಣ. 

 

ಒಬ್ಬೊಬ್ಬರನ್ನು ಸರತಿ ಸಾಲಿನಲ್ಲಿ ನಿಲ್ಲಿಸುವಷ್ಟು ಬೇಡಿಕೆ ಬಿತ್ತು. 'ಭಲೆ ಭಲೆ.. ಆಪ್ತನೇ...' ಜಕೋಬನಿಗೆ ಖಜಾನೆ ನೋಡುತ್ತಿದ್ದಂತೆಯೇ ಹರ್ಷೋಲ್ಲಾಸ. 

 

ದಿನಗಳ ನಿಗದಿಯಾಯಿತು. ಮಣ್ಣಗೆದು, ಮೂಳೆಗಳನ್ನೆತ್ತಿ, ಕೆಲವರಿಗೆ ಕೆಲ‌ ಮೂಳೆಗಳು ತಪ್ಪಿ, ದುಃಖತಪ್ತರಾಗಿ, ಇನ್ಕೆಲವರಿಗೆ ಎಲ್ಲಾ ಮೂಳೆಗಳೂ ಸಿಕ್ಕು ಹರ್ಷೋಚ್ಚಿತ್ತರಾದರು. ಮಾಟಗಾರ ಮೋಡಯ್ಯ ಎಲ್ಲಾ ಮೂಳೆಗಳ ಅವಶ್ಯವೆಂದು ಹೇಳಿದ್ದ. ಚಿತಾ ಭಸ್ಮವನ್ನ ನದಿಗೆ ವಿಸರ್ಜಿಸಿದಾಗ ಸಿಕ್ಕ ತೃಪ್ತಿಗೆ ಎಲ್ಲರೂ ಹಳಿದುಕೊಂಡರು. ಮಾಟಗಾರ ಮೋಡಯ್ಯನ ಮಾಟ ಚಾತುರ್ಯಕ್ಕೆ ಎಷ್ಟೋ ಜನ ಹುಟ್ಟಿ ಬಂದು ನಾಡಿಗೆ ನಾಡೇ ಹಬ್ಬದ ವಾತಾವರಣದಲ್ಲಿ ಮುಳುಗಿತು. 

 

ಜನಕ್ಕೊಂದು ಸವಲತ್ತು ಎಂದಿದ್ದ ಜಕೋಬನಿಗೆ ಆ ಕಾರಣದಿಂದಲೇ ತನ್ನ ಸವಲತ್ತಿಗೇ ಕುತ್ತಾಗಿದ್ದು ಎಂಬ ಅರಿವು ಇತ್ತೀಚೆಗೆಯೇ ಬಂದದ್ದು. "ಜನರ ಮನಸ್ಸು ಚಣ ಕಾಲ ತಂಪಾದರೆ ಸಾಕು. ಆದರೆ ರಾಜರದ್ದು? ಸದಾಕಾಲ ತಂಪಿರಬೇಕಲ್ಲ, ಮಹಾಪ್ರಭು". ಆಪ್ತನ ಮಾತುಗಳಿಗೆ ಪುಂಗಿಗೆ ತೂಗುವ ಹಾವಿನಂತೆ ಜಕೋಬ ತೂಗುತ್ತಿದ್ದ. ಜನಕ್ಕೊಂದು ಸವಲತ್ತು ಈಗ ಮನೆಗೊಂದು ಸವಲತ್ತಾಯಿತು. 

 

ಜನರ ಮುಖ ಪೆಚ್ಚಾಯಿತು. " ಅಯ್ಯೋ...." ಚಪ್ಪಡಿಯೇ ತಲೆಯ ಮೇಲೆ ಬಿದ್ದಷ್ಟು ಕೆಲವರು ಉದ್ಗರಿಸಿದರು.ಈಗಷ್ಟೇ ವರ್ತಮಾನದ ನೆರಳಲ್ಲಿ, ಭವಿಷ್ಯವನ್ನ ಕಟ್ಟಿದ್ದವರಿಗೆ, ನೆರಳು ಕರಗಲು, ಭವಿಷ್ಯವೆಲ್ಲಾ ಅಗೋಚರವಾಯಿತು! 

 

"ಸವಲತ್ತಿಗಿಂತ ಎಮಗೆ ತಂದೆಯೇ ಮುಖ್ಯ, ತಾತನೇ ಮುಖ್ಯ, ಅಮ್ಮಮ್ಮಳೇ ಮುಖ್ಯ' ಎಂದು ಇನ್ಕೆಲವೇ ಕೆಲವರು ಉಲಿದುಕೊಂಡರು. 'ಅನಾವಶ್ಯಕವಾಗಿ' ಹುಟ್ಟಿಬಂದವರ ಕೈಲಿ ಹೇಗಾದರೂ ದುಡಿಸಲೇಬೇಕಾದ ಅನಿವಾರ್ಯ. ಮತ್ತೆ ಸತ್ತರೆ ಮತ್ತೆ ಖರ್ಚು. 

 

 

'ಭಲೇ ಭಲೇ‌ ಆಪ್ತರೇ... ಜನರ ಅಸಂತೃಪ್ತಿ, ಆಸೆಗಳೇ ದೈವ, ರಾಜ, ಆಡಳಿತ ಮೇಲಿನ ಭಕ್ತಿಗೆ, ಭಯಕ್ಕೆ ಮೂಲ ಸೆಲೆ.'

 

'ಮಹಾರಾಜ.. ಖಜಾನೆ ಬರಿದಾಗುವವರೆಗೆ ತಾವು ನಿರಾತಂಕವಾಗಿ, ನಿಶ್ಚಿಂತೆಯಾಗಿ ಕಾಲ ಕಳೆಯಬಹುದು. ಖಜಾನೆ ಬರಿದಾಗುವ ವೇಳೆ ಜನರ ಅಸಂತೃಪ್ತಿಯೂ ಬೆಳೆದು, ಹೆಮ್ಮರವಾಗಿ  ಅವನ್ನ ಕಡಿಸಲು  ಮತ್ತೊಂದು ಡಂಗೂರ ಸಾರುವ ವೇಳೆಗೆ ಈಗ್ಗಿಂತ ದೊಡ್ಡ ಸರತಿಯೂ ಆಗಬೋದು'

 

'ಭಲೇ ಭಲೇ....'

 

ಕೆಲ ಜನ ರಾಜನನ್ನ ಹಳಿದಷ್ಟು, ಮತ್ಕೆಲವರು 'ಅವರೇನೂ ಮಾಡಿಯಾರು ನಮ್ಮ ದುರಾಸೆಗೆ' ಎಂದು ಸಮಾಧಾನ ಪಡಿಸಿಕೊಳ್ಳುತ್ತಾ, ತೂಕ ಹೆಚ್ಚಿದ ಸಂಸಾರದ ರಥವನ್ನು‌ ಎಲ್ಲರೂ ಸೇರಿ ಎಳೆಯುತ್ತಾ ಸಾಗಿಸಲು, ಮೆತ್ತನೆ ಹಾಸಿಗೆಯ ಮೇಲೆ ಮಲಗಿ ಸುಖಿಸುತ್ತಾ, ಹೊಸದಷ್ಟೊಂದು ಸೇವಕರನ್ನ ನೇಮಿಸಿ, ಸುಂದರ ಸುಖ‌ ಸ್ವಪ್ನದಲ್ಲಿ ಖಜಾನೆಯ ನೋಟವನ್ನ ತುಂಬಿಕೊಳ್ಳುತ್ತಾ ಜಕೋಬ ಉಲಿದ - 'ಭಲೇ ಭಲೇ ಆಪ್ತ..

 

 

 

 

 

 

 


No comments:

Post a Comment