ಆಗಷ್ಟೇ 'ಗಾಳಿಪಟ' ಸಿನೆಮಾ ಹೊರಬಂದಿತ್ತು. 'ಮಿಂಚಾಗಿ ನೀನು ಬರಲು..' ಹಾಡನ್ನ ಮನಸ್ಸು ಹೋದಲ್ಲೆಲ್ಲಾ ತಂತಾನೇ ಗುನುಗಿಕೊಳ್ತಿತ್ತು. ಇದು ನಯನಾ, ನಯನಾ ಜಮದಗ್ನಿ ಮೇಲಿನ ಕಿಟ್ಟಿಯ ಮೋಹವನ್ನ ಇಮ್ಮಡಿಗೊಳಿಸಿತ್ತು. ಟ್ಯೂಷನ್ನಿನ ಮೆಟ್ಟಿಲುಗಳ ಮೇಲೆ ಕುಳಿತು ಓರೆಗಣ್ಣಿನಿಂದ ಆಕೆ ತನ್ನನ್ನೇ ನೋಡುವಳೆಂದು ಆತ ನೆನೆಸಿದ್ದೆಲ್ಲಾ ಅಕ್ಷರಶಃ ಸತ್ಯವೇ. ಟಿ.ಬಿ. ಸರ್ಕಲ್ಲಿನಲ್ಲಿ ಒಂದೇ ಆಟೋ ಹತ್ತಿದಾಗಿನಿಂದ, ಮಾತು ಕತೆಯೇ ಇಲ್ಲದೇ, ಆಟೋದಲ್ಲಿ ಹಾಕಿದ ಹಾಡುಗಳಿಗೆ ಮನಸ್ಸನ್ನ ಕೊಟ್ಟು, ಹೊರಗೆ ನೋಡುತ್ತಾ, ಆಕೆ ತನ್ನನ್ನೇ ನೋಡುತ್ತಿದ್ದಾಳೆಂದು ಕಿಟ್ಟಿ, ಹಾಗೆಯೇ ಕಿಟ್ಟಿ ತನ್ನನ್ನ ಎಂದು ಇಬ್ಬರೂ ಊಹಿಸುತ್ತಾ ಗಾಳಿಗೆ ಕೂದಲು ಕೆದರಿಸಿಕೊಳ್ಳುತ್ತಾ, ಸರಿ ಮಾಡಿಕೊಳ್ಳುವ ನೆವದಿಂದ ಒಬ್ಬರನ್ನೊಬ್ಬರು ನೋಡುವ ಪ್ರಯತ್ನ ಇಬ್ಬರಿಗೂ ಪದೇ ಪದೇ ಬೇಕೆನಿಸುವ ಮತ್ತಿನಂತಾಗಿತ್ತು. ಒಮ್ಮೊಮ್ಮೆ ಮತ್ತೊಬ್ಬ ಜನ ಬಂದಾಗ ಸ್ವಲ್ಪ ಒಳಗೆ ಒತ್ತಾಗಿ ಕೂರಬೇಕಾಗಿ ಬಂದ ಸಂದರ್ಭ, ಕಿಟ್ಟಿಯ ಮನಸ್ಸು ಧಸ್ಸೆಂದು ಕುಸಿದೇ ಹೋಗುತ್ತಿತ್ತು. ಸೋಕಿದ ಮೈಗೆ, ಗಾಳಿಗೆ ಕೆದರಿ ಮುಖದ ಮೇಲೆ ಹಾರುತ್ತಿದ್ದ ಕೂದಲಿಗೆ, ಆಕೆಯ ದೇಹದ ವಾಸನೆಗೆ, ಕಿಟ್ಟಿ ಎದೆಬಡಿತ ನಿಂತೂ ನಿಂತೂ ಹೊಡೆದಂತೆ ಭಾಸವಾಗುತ್ತಿತ್ತು. ಒಮ್ಮೊಮ್ಮೆ ಚಿಲ್ಲರೆ ಇಲ್ಲದಿದ್ದಾಗ ಆಕೆಯದ್ದೂ ಸೇರಿ ಕಿಟ್ಟಿ ಕೊಡುವಾಗ ಆತನೂ ಆಕೆಯನ್ನ ನೋಡುತ್ತಿರಲಿಲ್ಲ, ಅವಳೂ ಸಹ. ಒಂದು 'ಥ್ಯಾಂಕ್ಯೂ' ಸಹ ಇಲ್ಲ. ಆದರೆ ವಾಪಾಸು ಹೊರಡುವಾಗ ಆತನದ್ದೂ ಸೇರಿ ಕೊಡುವ ಸರದಿ ಆಕೆಯದ್ದಾಗಿರುತ್ತಿತ್ತು. ಅದ್ಕಾಗಿಯೇ ಆಕೆಯೇ ಮೊದಲು ಇಳಿಯುವ ಹಾಗೆ ಕೂರ್ತಿದ್ದಳು. ಇಷ್ಟೆಲ್ಲಾ ವ್ಯವಹಾರಗಳೂ ಮೂಕೀ ಪರದೆಯಲ್ಲೇ, ಕತ್ತಲಲ್ಲೇ ನಡೆಯುತ್ತಿದ್ದದ್ದು. ಮಾತಿಲ್ಲ ಕತೆಯಿಲ್ಲ ನೋಟದ ವಿನಿಮಯಗಳೂ ಇಲ್ಲ.
ಟ್ಯೂಷನ್ ಎರಡು ಪಾಳಿಯಲ್ಲಿ ನಡೀತಾ ಇತ್ತು. ಸಂಜೆ ಹುಡುಗರಿಗೆ, ಬೆಳಿಗ್ಗೆ ಹುಡುಗಿಯರಿಗೆ. ಕಿಟ್ಟಿ ಸಂಜೆ ಬರಲಿಕ್ಕಾಗದ ಕಾರಣಕ್ಕೆ ಬೆಳಗ್ಗೆ ಹುಡುಗಿಯರ ಬ್ಯಾಚಿಗೆ ಹಾಕಿಸಿಕೊಂಡಿದ್ದ. ಆತನೊಬ್ಬನಿಗೇ ಕೊನೆಯಲ್ಲಿ ಒಂದು ಚೇರ್ ಹಾಕಿ ಕುಳ್ಳಿರಿಸುತ್ತಿದ್ದರು. ಹುಡುಗಿಯರೆಲ್ಲಾ ನೆಲಕ್ಕೆ ಕೂತಿದ್ದು, ಈತ ಮಾತ್ರ ಮೇಲೆ ಕೂರೋದು ಅವನಿಗೇ ಮುಜುಗರದಂತೆ ಆಗಿ ಮೇಷ್ಟರ ಬಳಿ ಹೇಳಿಕೊಂಡಾಗ, ಕೊನೆಯಿಂದ ತೆಗೆದು ಮುಂದೆಯೇ ಹುಡುಗಿಯರ ಸಾಲಿನ ಒಂದು ತುದಿಯಲ್ಲಿ ಗೋಡೆಗೆ ಒರಗಿಸಿ ನೆಲಕ್ಕೇ ಹುಡುಗಿಯರೊಟ್ಟಿಗೆಯೇ ಕುಳ್ಳಿರಿಸಿಬಿಟ್ಟರು. ಗೊಳ್ ಎಂದು ನಕ್ಕಿದವರ ಪೈಕಿ ನಯನಳ ನಗುವೂ ಇತ್ತು. ದಾಳಿಂಬೆಯಂತೆ ಜೋಡಿಸಿಟ್ಟ ಆಕೆಯ ಹಲ್ಲುಗಳು, ಕೋಲು ಮುಖ, ಆಕೆಯ ಧ್ವನಿ ಎಲ್ಲವೂ ಆತನನ್ನ ಏಕಾಏಕಿ ಆಕರ್ಷಿಸಿಬಿಟ್ಟವು. ಪ್ರಾಯಶಃ ಆತನಿಗೆ ಕಂಡದ್ದು ಆಕೆಯೊಬ್ಬಳೇ ಆದ್ದರಿಂದ ಹಾಗೆ ಆಯಿತೇ? ಆಕೆಯ ಬದಲು ಆಕೆಯ ಪಕ್ಕದಲ್ಲಿದ್ದ ಕೌಸಲ್ಯ ಕಣ್ಣಿಗೆ ಬಿದ್ದಿದ್ದರೆ, ಕೌಸಲ್ಯಾಳನ್ನೇ ಆತ ಇಚ್ಛಿಸುತ್ತಿದ್ನೇ? ಆದರೆ ಅದಕ್ಕಿಂತ ಹೆಚ್ಚಾಗಿ ನಯನಳೇ ಹೆಚ್ಚು ಹೆಚ್ಚು ಎದ್ದು ಬಂದು ಬೋರ್ಡಿನ ಮೇಲೆ ಲೆಕ್ಕ ಮಾಡ್ತಿದ್ದದ್ದು ಕಿಟ್ಟಿಯನ್ನ ಆಕರ್ಷಿಸಿದ್ದಿರಬೋದು. ಕಿಟ್ಟಿ ತುಸು ಜಾಣ. ಲೆಕ್ಕಗಳನ್ನ ಮೊದಲೇ ಮಾಡಿ ಕೂತಿರುತ್ತಿದ್ದದ್ದು ಮಾಸ್ತರಿಗೆ ಗೊತ್ತಿದ್ದರಿಂದಲೇ, ಉಳಿದವರಿಗೆ ಚಾನ್ಸ್ ನೀಡುತ್ತಿದ್ದರು. ಉಳಿದವರಲ್ಲಿ ಹೆಚ್ಚು ಮುಂದೆ ಬರ್ತಿದ್ದದ್ದೂ ನಯನಳೊಬ್ಬಳೇ. ಎಷ್ಟೋ ಬಾರಿ ಇಬ್ಬರೂ ಕೂತು ಚರ್ಚಿಸಬೋದಾದ ಎಲ್ಲಾ ಸದಾವಕಾಶಗಳು ಕೈ ತುದಿಯಲ್ಲಿದ್ದರೂ, ಇಬ್ಬರೂ ಅದನ್ನ ಚೆಲ್ಲಿ, ಮೂಕಿ ಪರದೆಯ ಚಿತ್ರಗಳಾಗಿಬಿಡುತ್ತಿದ್ದರು.
ಒಮ್ಮೆ ಆಕೆ ಬೋರ್ಡಿನ ಮೇಲೆ ಲೆಕ್ಕ ಮಾಡುತ್ತಿದ್ದ ವೇಳೆ ಒಂದು ತಪ್ಪಾಯಿತು. ಅದನ್ನ ಸರಿಪಡಿಸಲು ಮಾಸ್ತರು ಕಿಟ್ಟಿಗೆ ಸೂಚಿಸಿದರು. ಆಕೆಯಿಂದ ಸೀಮೇಸುಣ್ಣ ಇಸುಕೊಳ್ಳಲು ಆಕೆಯನ್ನು ಕೇಳಬೇಕಲ್ಲ, ಸನ್ನೆಯ ಮೂಲಕವಾದರೂ, ಕನಿಷ್ಠ ಕೈ ಚಾಚಿಯಾದರೂ? ಕಿಟ್ಟಿ ಅವಳನ್ನ ಕಣ್ಣಿಟ್ಟು ನೋಡಿದವನಲ್ಲ. ಆಕೆಯ ನೋಟವೂ ನೆಲದ ಕಡೆಗೆ. ತುಸು ಕೈ ಮುಂಚಾಚಿ ಸೀಮೆಸುಣ್ಣ ಹಿಡಿದಿದ್ದಳು. ಕಿಟ್ಟಿಗೆ ಇಸುಕೊಳ್ಳಲು ಏನೋ ಸಂಕೋಚ. ಎದೆ ಬಡಿತವು ದುಪ್ಪಟ್ಟಾಯಿತು. ಕೈ ಮುಂದೆ ಚಾಚಿ ಇಸುಕೊಳ್ಳುವ ವೇಳೆ ಆಕೆಯ ಕೈಗೆ ಕೈ ತಾಕಿ, ಆತನಿಗೆ ಲೆಕ್ಕದ ಬಗೆಗಿನ ಗಮನವೆಲ್ಲವೂ ಕರಗಿಹೋಗಿ ಮರೆತೇಹೋಯಿತು. ಇದೆಲ್ಲವೂ ಕ್ಷಣಾರ್ಧದಲ್ಲಿ ಘಟಿಸಿಹೋದರೂ, ಗಂಟೆಗಳೇ ಕಳೆದಂತಾಗಿತ್ತು. ಮಾಸ್ತರಿಗೇ ಆಶ್ಚರ್ಯವಾಗಿತ್ತು ಕಿಟ್ಟಿ ಲೆಕ್ಕ ಮಾಡದ್ದು ನೋಡಿ. ಕಿಟ್ಟಿಯೂ ತಪ್ಪು ಮಾಡಿದ್ದ.
ಮೇಸ್ತರು ಕಿಟ್ಟಿಗೆ ಹೆಚ್ಚು ಉಪದ್ರವ ಕೊಡ್ತಿರಲಿಲ್ಲ. ಆತನಿಗೆ ಅವರೇ ಒಂದಷ್ಟು ಪುಸ್ತಕಗಳನ್ನ ಕೊಟ್ಟು ಲೆಕ್ಕ ಮಾಡಲು ಬಿಟ್ಟು ಬಿಡ್ತಿದ್ದರು. ಆತ ತನ್ನ ಶಾಲೆಯ ಪುಸ್ತಕದ ಲೆಕ್ಕಗಳನ್ನೆಲ್ಲಾ ಕ್ಲಾಸಿಗೆ ಬರೋ ಮುಂಚೆಯೇ ಮಾಡಿ ಮುಗಿಸಿರ್ತಿದ್ದ. ಹಾಗಾಗಿ ಮಾಸ್ತರು ಪಾಠ ಮಾಡೋವಾಗ ಈತ ಅವರು ಕೊಟ್ಟಿದ್ದ ಪುಸ್ತಕದ ಲೆಕ್ಕಗಳನ್ನ ಮಾಡ್ತಾ ಕೂತಿರುತ್ತಿದ್ದ. ಇದನ್ನ ಓರೆಗಣ್ಣಿನಿಂದ ನಯನ ಗಮನಿಸುತ್ತಿದ್ದದ್ದು ಈತನಿಗೂ ಮಜವೆನಿಸ್ತಾ ಇತ್ತು. ಒಂದಿನವಾದರೂ ಆಕೆ ಇದರ ವಿಚಾರವಾಗಿ ಮಾತನಾಡಬೋದೇನೋ ಎಂದು ಕಿಟ್ಟಿ ಊಹಿಸಿ ಕನಸು ಕಟ್ಟಿದ್ದೆಲ್ಲಾ ಸುಳ್ಳೇ. ಆಕೆ ಓರೆಗಣ್ಣಿನಿಂದ ಗಮನಿಸ್ತಿದ್ದಳೇ ವಿನಃ ಆಕೆಯ ಕುತೂಹಲ ತಣಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ.
ಒಮ್ಮೊಮ್ಮೆ ಟ್ಯೂಷನ್ ಮುಗಿಸಿ ವಾಪಾಸು ಬರೋ ಟೈಮಿಗೆ ಸರ್ರು ಕಿಟ್ಟಿಯನ್ನೂ ತಮ್ಮೊಟ್ಟಿಗೆ ಬೈಕಲ್ಲೇ ಕರೆದುಕೊಂಡು ಹೋಗಿಬಿಡ್ತಿದ್ದರು. ಆಗ ಕಿಟ್ಟಿಗೆ ಬೇಸರವೋ ಬೇಸರ. 'ಯಾಕೋ ಅಳ್ತಿದ್ದಿ?' ಅಂತ ಇಳಿಯೋ ವೇಳೆಗೆ ಸರ್ ಕೇಳುವ ಹಾಗೆ ನೀರು ಹರಿಯುತ್ತಿತ್ತು. ಅದು ಅಳುವಲ್ಲ. ಬೇಸರವಿದ್ದರೂ, ಗಾಳಿಗೆ ಕಣ್ಣು ಒದ್ದೆಯಾಗಿರುತ್ತಿದ್ದವು. ಸರ್ ಕೇಳ್ತಿದ್ದಂತೆ ಸರ್ ಮೇಲೆಯೇ ಕೊಂಚ ಕೋಪ ಬರ್ತಿದ್ದರೂ ಸುಮ್ಮನಿರ್ತಿದ್ದ. ಆ ಸಮಯದಲ್ಲಿ ನೋಕಿಯ ಫೋನುಗಳು ಹೆಚ್ಚು ಪ್ರಚಲಿತದಲ್ಲಿದ್ದವು. ಅವಕ್ಕೆ ಸಿನೆಮಾ ಹಾಡುಗಳ ರಿಂಗ್ ಟೋನುಗಳನ್ನ ಹಾಕಿಸಿಕೊಳ್ಳೋದು ಜನರಿಗೆ ಹುಚ್ಚಾಗಿತ್ತು. ರಿಂಗ್ ಟೋನ್ಗಳನ್ನ ಫೋನಲ್ಲೇ ರಚಿಸಬಹುದಿತ್ತೂ ಸಹ. ಮಾಸ್ತರ ರಿಂಗ್ ಟೋನಗಳೂ ಸಹ ಹಾಗೆಯೇ. ವಾರಕ್ಕೆ ಒಂದರಂತೆ 'ಚೆಲುವಿನ ಚಿತ್ತಾರ' ಸಿನೆಮಾದ ರಿಂಗ್ ಟೋನಗಳು ಇರುತ್ತಿದ್ದವು. ಒಮ್ಮೊಮ್ಮೆ ಪಾಠದ ಮಧ್ಯೆ ಅವರ ಫೋನ್ ರಿಂಗಣಿಸಿದಾಗ ಒಮ್ಮೆಯಾದರೂ ಕಿಟ್ಟಿ ತನ್ನ ಲೆಕ್ಕದ ಲೋಕದಿಂದ ಹೊರಬಂದು ಉಲ್ಲಸಿತನಾಗಿತ್ತಿದ್ದ.
ಇದ್ದಕ್ಕಿದ್ದಂತೆ ನಯನಾಳ ತಂದೆ ಮನೆ ಬದಲಾಯಿಸಿದರು. ಟೌನಿನ ಸೌಮ್ಯಕೇಶವ ದೇವಸ್ಥಾನದ ಬಳಿ, ಟ್ಯೂಷನ್ನಿಗೂ ಸಮೀಪವೇ, ಮನೆ ಮಾಡಿದರು. ಕಿಟ್ಟಿಗೆ ಇದು ತಿಳಿಯುವ ವೇಳೆಗೆ ದೊಡ್ಡ ತನಿಖೆಯೇ ಮಾಡುವಂತಾಯಿತು. ಬೆಳಗ್ಗೆಯ ಹೊತ್ತು ನಯನಾ ಕಾಣದೆ ತಡಬಡಾಯಿಸಿದ. ಟ್ಯೂಷನ್ನಿಗೆ ಬರಲು ಆಕೆ ಅದಾಗಲೇ ಕೂತಿದ್ದಳು. 'ಅಯ್ಯೋ..ಇದೇಕೆ ತನ್ಬೊಟ್ಟಿಗೆ ಬರಲಿಲ್ಲ ಇಂದು' ಎಂದು ಕಿಟ್ಟಿ ತರಗತಿಯ ಪೂರ ಚಿಂತಿಸಿದ. ನಡು ನಡುವೆ ಸರ್ ನ ರಿಂಗ್ಟೋನ್ ಆತನ ದುಃಖವನ್ನ ಇನ್ನಷ್ಟು ತೀವ್ರಗೊಳಿಸಿದವು. ಕಿಟ್ಟಿಗೆ ಗೊತ್ತಿರಲಿಲ್ಲ ನಯನಾ ಮನೆ ಬದಲಾಗಿದೆಯೆಂದು. ಇದು ತಿಳಿಯದೇ ಒಂದು ವಾರದ ಒಳಗೆ ಆತನಿಗೆ ತಾನೊಂದು ಭ್ರಮಾಲೋಕವನ್ನೇ ಸೃಷ್ಟಿಸಿಕೊಂಡುಬಿಟ್ಟೆ ಎಂದು ಬಹಳಾ ನೋವಾಯಿತು. ಕಿಟ್ಟಿಯ ತಳಮಳ ತಿಳಿದೇ ನಯನಾಳ ಸ್ನೇಹಿತೆ ಹಾಗೆ ಮಾಡಿದಳೋ ಅಥವಾ ಅದು ಕಾಕತಾಳೀಯವೋ ತಿಳೀದು. ಸರ್ ಇನ್ನೂ ಬಂದಿರಲಿಲ್ಲ. 'ನಿಂಗೆ ಈಗ ಬಾಳ ಸುಲಭ ಆಗಿರಬೇಕಲ್ಲ ನಯನಾ ಓಡಾಡ್ಲಿಕ್ಕೆ ಟ್ಯೂಷನ್ನಿಗೆ. ಮನೆ ಇಲ್ಲೇ ಆಗೋಯ್ತಲ್ಲ ಟೌನಲ್ಲಿ..' ಅಂತ ಸುಮ್ಮನೆ ಕೇಳಿದಳು.
ಮೊದಲ ಬಾರಿಗೆ ಅಷ್ಟೂ ದಿವಸದಲ್ಲಿ ಕಿಟ್ಟಿ ಸರಿಯಾಗಿ ತಲೆ ಎತ್ತಿದ. ಇದು ತಿಳಿಯದೇ, ನಯನಳ ಮೇಲೆಯೇ ತಪ್ಪು ತಿಳಿದೆನೇ ಎಂದು ತುಸು ಬೇಸರವಾದರೂ, ಆದರೂ ಆಕೆ ಹೇಗಾದರೂ ಹೇಳಬೋದಿತ್ತಲ್ಲ? ಎಂದು ಪ್ರಶ್ನೆ ಮೂಡಿದರೂ, 'ಆದರೂ ಹೇಗೆ?' ಎನ್ನುವ ಮತ್ತೊಂದು ಪ್ರಶ್ನೆ ಎದ್ದು ಸಮಾಧಾನವಾಯಿತು. ಕಿಟ್ಟಿಯ ಮುಖ ಅರಳಿತು. ಅದನ್ನ ನಯನ ಗಮನಿಸಿದ್ದಳು. ಕಿಟ್ಟಿ ಮೊದಲ ಬಾರಿಗೆ ಆಕೆಯ ಮುಖ ನೋಡಿದ. ಆಕೆಯೂ ಅವನನ್ನ ನೋಡ್ತಿದ್ದಳು. ಇಬ್ಬರ ಕಣ್ಣೂ ಸೇರಿದವು. ಆದರೆ ಒಂದೆರೆಡು ಸೆಕೆಂಡು ಅಷ್ಟೆ. ಆಕೆ ತನ್ನನ್ನ ನೋಡಿದ್ದೇ ಕಿಟ್ಟಿಗೆ ಅಷ್ಟೂ ದಿವಸದ ಮನೋರೋಗಕ್ಕೆ ಟಾನಿಕ್ಕಾಗಿ ಸರ್ರನೆ ಆತ ಸರಿಹೋದ. ಆಕೆ ಹೂವು ಮುಡಿದಿದ್ದಳು. ಹುಬ್ಬುಗಳ ಮಧ್ಯೆ ಕುಂಕುಮದ ಬೊಟ್ಟು ದುಂಡಗೆ. ಕಣ್ಣಿಗೆ ಕಣ್ಣು ಕಪ್ಪು. ದಾಳಿಂಬೆಯಂತ ಜೋಡಿಸಿಟ್ಟ ಅರಳಿದ ಹಲ್ಲುಗಳು. ಕತ್ತಿಗೊಂದು ಕಪ್ಪು ದಾರ. ಕಿವಿಗೆ ದುಂಡಗಿನ ಓಲೆಗಳು. ಎರಡೇ ಸೆಕೆಂಡಾದರೂ ಇಷ್ಟೆಲ್ಲಾ ಗಮನಿಸಲು ಸಾಧ್ಯವೇ? ಇಲ್ಲ ಇವೆಲ್ಲಾ ಸಾಕಷ್ಟು ದಿನಗಳಿಂದ ಗಮನಿಸಿದ್ದು. ಎಲ್ಲವೂ ಏಕಕಾಲಕ್ಕೆ ಕಂಡವು! ಅಥವಾ ಕಂಡಂತೆ ಭಾಸವೂ ಆಗಿದ್ದಿರಬೋದು.
ಒಮ್ಮೆ ಒಂದು ಭಾನುವಾರ ಟ್ಯೂಷನ್ನಿದ್ದಾಗ, ಅದು ಮುಗಿದ ಮೇಲೆ ಕಿಟ್ಟಿ ಬೆರಕಂತಲೇ ನಯನಾಳನ್ನ ಹಿಂಬಾಲಿಸುವ ಧೈರ್ಯ ತೋರಿದ. ಆಕೆಯ ಮನೆ ತಿಳಿದರೂ ಪ್ರಯೋಜನವೇನು? ಮನಸ್ಸಲ್ಲೇ ಗಾಳಿಪಟದ ಹಾಡು, ಮುಂದೆ ನಯನಾ. ಅದಷ್ಟೇ ಸಾಕಿತ್ತೇನೋ ಅವನಿಗೆ.
ಒಮ್ಮೆ ದೇವಸ್ಥಾದ ರಥೋತ್ಸವ. ಅಂದು ಶಾಲೆಗೆ ರಜೆಹಾಕಿ ಎಲ್ಲರೂ ದೇವಸ್ಥಾನದಲ್ಲೇ ಇದ್ದರು. ನಯನಳೂ ಸಹ, ಕಿಟ್ಟಿಯೂ. ಆಕೆ ಲಂಗಾದಾವಣಿ ಉಟ್ಟಿದ್ದಳು. ಕಿಟ್ಟಿ ಪಂಚೆ, ಮೇಲೊಂದು ಶಲ್ಯ. ಊಟದ ನಂತರ ಕೈ ತೊಳೆಯುವ ವೇಳೆ ಕಿಟ್ಟಿ ಶಲ್ಯ ಬಿಚ್ಚಿದ್ದ. ಕೈ ತೊಳೆಯಲು ನೀರು ತೋಡಿಡ್ತಿದ್ದ ನಯನಾಳನ್ನ ನೋಡಿಯೇ ಮುಜುಗರ ಆಗಿಹೋಯ್ತು. ಹಾಗೂಹೀಗೀ ನಾಚಿಕೊಂಡು, ತನ್ನ ಕಳೇಬರದ ದೇಹವನ್ನ ಆಕೆ ನೋಡಿಬಿಟ್ಟು ತನ್ನನ್ನು ರಿಜೆಕ್ಟ್ ಮಾಡಿಬಿಟ್ಟರೆ ಎನ್ನುವ ಭಯದಲ್ಲೇ ಕೈ ತೊಳೆದು ಓಡಿ ಅಂಗಿಯನ್ನು ಹಾಕಿಕೊಂಡ. ದೇವಸ್ಥಾನದ ಪಕ್ಕ ಒಂದು ಹಯಗ್ರೀವರ ಸನ್ನಿಧಿ. ಅಲ್ಲಿಯ ಕಟ್ಟೆಯ ಮೇಲೆ ಹೋಗಿ ಕುಳಿತಿದ್ದ. ಎತ್ತಿಂದಲೋ ಈಕೆಯೂ ಸ್ನೇಹಿತೆಯೊಟ್ಟಿಗೆ ಬಂದು ಅಲ್ಲೇ ಕುಳಿತಳು. 'ಇಲ್ಲೇ ಏಕೆ?' ಎಂದು ಪ್ರಶ್ನಿಸಿಕೊಳ್ಳುತ್ತಲೇ ಕಿಟ್ಟಿ ಪುಳಕಿತನಾಗ್ತಿದ್ದ. ಅವನಿಗೆ ಉತ್ತರ ಬೇಕಿರಲಿಲ್ಲ. ಆ ಪ್ರಶ್ನೆ ನೀಡ್ತಿದ್ದ ಮುದವೇ ಸಾಕಿತ್ತು. 'ಬಾರೇ ಹೋಗೋಣ..' ಅಂತ ಪೀಡಿಸುತ್ತಿದ್ದ ಸ್ನೇಹಿತೆಗೆ ಸುಮ್ಮನೇ 'ಹೂಂ..' ಅಂತಿದ್ದಲೇ ಹೊರತು ಹೊರಟಿರಲಿಲ್ಲ. ಕಿಟ್ಟಿಗೆ ನೋಡಲೂ ಮುಜುಗರ. ಸುಮ್ಮನೆ ಎತ್ತಲೋ ನೋಡುತ್ತಾ ಕುಳಿತಿದ್ದ.
ಪರೀಕ್ಷೆ ಮುಗಿಯಿತು. ಕಿಟ್ಟಿಗೆ ಗಣಿತದಲ್ಲಿ 100. ನಯನಾಳಿಗೆ 99. ಹಾಗೂ ಕಿಟ್ಟಿ ಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆಗೇ ಪ್ರಥಮನಾಗಿದ್ದ. ಇದು ಊರಲ್ಲೇ ಕಿಟ್ಟಿಯ ಹೆಸರನ್ನ ಎಲ್ಲರಿಗೂ ಪರಿಚಯಿಸಿಬಿಟ್ಟಿತ್ತು - ನಯನಳ ತಂದೆಯನ್ನೂ ಸೇರಿ. ಕಿಟ್ಟಿಯ ಸರ್ ಗೆ ಫೋನ್ ಮಾಡಿ ಆತನನ್ನ ಮನೆಗೆ ಕರೆಯುವಂತೆ ಹೇಳಿದ್ದರು. ನಯನಾಳ ತಂದೆಗಿದ್ದ ವಿಶೇಷ ಕಾಳಜಿಗೆ ಮತ್ತೊಂದು ಕಾರಣವೂ ಇದ್ದಿರಬೋದು - ಕೃಷ್ಣಮೂರ್ತಿ ಶರ್ಮ ಎನ್ನುವ ಹೆಸರು. ಬ್ರಾಹ್ಮಣರೆಂದರೆ ಅವರಿಗೆ ವಿಶೇಷ ಕಾಳಜಿ - ಎಷ್ಟಿದ್ದರೂ ಪೌರೋಹಿತ್ಯದ ಹಿನ್ನಲೆಯಿದ್ದರಿಂದ. ಅದಕ್ಕೂ ಮುನ್ನ ಆ ವರ್ಷ ಎಂದೂ ಕಂಡಿರದ ಫಲಿತಾಂಶ ಟ್ಯೂಷನ್ನಿಗೆ ಬಂದದ್ದರಿಂದ ಮಾಸ್ತರೂ ಒಂದು ಪಾರ್ಟಿಯನ್ನ ಏರ್ಪಡಿಸಿದ್ದರು. ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದ ಕೂಟದಲ್ಲಿ ಕಿಟ್ಟಿ, ನಯನಾ ಹಾಗೂ ಇನ್ನಿತರರ ಗುಣಗಾನ ನಡೆದಿತ್ತು. ಕೊನೆಗೆ ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿತ್ತು. ಕಿಟ್ಟಿ ಹಾಗೂ ನಯನಾರಂತೂ ಮಾತಾಡಲೇ ಬೇಕಿತ್ತು. ಮೊದಲು ನಯನಾಳೇ ಎದ್ದಳು. 'ಸಾಧಿಸಿದ ಎಲ್ಲರಿಗೂ ಕಂಗ್ರಾಜುಲೇಷನ್ಸ್' ಎಂದು ಹೇಳಿ ಒಮ್ಮೆ ಕಿಟ್ಟಿಯನ್ನ ನೋಡಿದಳು -'ನಿಮಗೂ' ಎಂದದ್ದು ಕೇಳಿಕಿಟ್ಟಿಗೆ ಅಲ್ಲೇ ನಾಚಿಕೆಯುಕ್ಕಿ ಫುಲ್ ಖುಷಿಯಾಯಿತು. ಕಿಟ್ಟಿಯ ಸರದಿ ಬಂದಾಗ ಆಕೆಗೂ ಒಂದು ಕಂಗ್ರಾಜುಲೇಷನ್ಸ್ ಹೇಳಲೇ ಬೇಕಲ್ಲ. 'ನಯನಾ ಜಮದಗ್ನಿ' ಅಂತ ಫುಲ್ ಹೆಸರು ಕರೆದೇ ಹೇಳಬೇಕು ಅಂತ ನಯನ ಹೇಳಿದ್ದ ಮುಂದಿನದೇನನ್ನೂ ಕೇಳಿಸಿಕೊಳ್ಳದೇ ಮನಸ್ಸನ್ನ ಪಳಗಿಸಿದರೂ, ಅಲ್ಲಿಗೆ ಹೋಗಿ, ಆಕೆಯಂತೆ 'ನಿಮಗೂ ಸಹ...' ಅನ್ನೋದು ಬಿಟ್ಟು ಬೇರೆಯದ್ದು ಬರಲಿಲ್ಲ. ಎಲ್ಲಾ ಮುಗಿದ ಮೇಲೆ ಸರ್ರೇ ಇಬ್ಬರನ್ನೂ ಕರೆದು ಇಬ್ಬರ ಕೈಗಳನ್ನ ಕುಲಿಕಿ ಇಬ್ಬರದ್ದೂ ಒಬ್ಬರಿಗೊಬ್ಬರ ಕೈಯಲ್ಲಿ ಕೈ ಇರಿಸಿ ವಿಷ್ ಮಾಡಿಕೊಳ್ಳಿ ಎಂದಾಗ ಮೊದಲ ಬಾರಿಗೆ ಕಿಟ್ಟಿ ಆಕೆ ಕೈ ಹಿಡಿದದ್ದು. ತಣ್ಣಗಿನ, ಮೃದು ಕೈಗಳವು. ಅಲ್ಲೇ ಆಕೆಯನ್ನ ಕರೆದು ಓಡಿಹೋಗಿಬಿಡಬೇಕು, ಆಕೆ ತನ್ನವಳೇ ಎನ್ನುವ ಭಾವ ಕಿಟ್ಟಿಯ ಮನಸ್ಸಲ್ಲಿ ಕೂತು ಬಿಟ್ಟಿತು. ಆ ಪಾರ್ಟಿ ಮುಗಿಯುವವರೆಗೂ ಕಿಟ್ಟಿಗೆ ಒಂಚೂರು ಯೋಚನೆಯೇ ಬರಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ನಡು ನಡುವೆ ನೋಡಿಕೊಳ್ತಾ ನಾಚುತ್ತಿದ್ದರೆ ವಿನಾ, ನಾಳೆಯಿಂದ ಎನ್ನುವ ಯೋಚನೇ ಪ್ರಾಯಶಃ ಆಚೆಗೆ ಹೋಗಿ ಮನೆಯ ಹಾದಿ ತುಳಿದ ಮೇಲೆಯೇ ಬಂದದ್ದು.
ಮುಂದೆ? ಮುಂದೆ ಆಕೆ ಏನು ಮಾಡ್ತಾಳೆ? ತಾನು? ಎಲ್ಲಿ? ಆಕೆಯ ಭೆಟಿ ಹೇಗೆ? ಆಕೆ? ರೀತಿ ಕೈಕುಲುಕುವುದು ಕಿಟ್ಟಿ ದೇವರಿಗೆ ಕೇಳಿಕೊಂಡ ಕೊನೆಯ ವರವಾಗಿತ್ತೋ ಏನೋ.
ಕಿಟ್ಟಿ ನಯನಾಳ ಮನೆಗೆ ಹೋಗುವಾಗ ಸಾಕಷ್ಟು ಪುಳಕಿತನಾಗಿದ್ದ. ಆಕೆಯನ್ನ ನೋಡಿ ಹತ್ತು ದಿನಗಳ ಮೇಲೆಯೇ ಆಗಿ ಹೋಗಿತ್ತು. ಆಕೆಯ ತಂದೆ ಒಳಗೆ ಕುಳ್ಳಿರಿಸಿ 'ಹಾಲು ಆಗಬೋದೆ?' ಕೇಳಿದಾಗ, ನಯನಳೇ ತಂದು ಕೊಡುವಳೇನೋ ಎನ್ನುವ ಆಸೆಯಲ್ಲಿ ಬರೇ ಹಾಲು ಹಿಡಿಸದಿದ್ದರೂ 'ಹೂಂ..' ಎಂದ. ಅವರೇ ಒಳಹೋಗಿ ಮಾಡಿಕೊಂಡು ಬಂದು ಕೊಟ್ಟರು. 'ಆಕೆ?' ಎಂದು ಕೇಳಬೇಕೆಂದಿದ್ದರೂ, ಸುಮ್ಮನೆ ಕೂತಿದ್ದ. 'ಮುಂದೆ?' ಅವರ ತಂದೆ ಪ್ರಶ್ನೆಗಳನ್ನ ಕೇಳುತ್ತಾ ಹೋದಂತೆ ಮನದ ಮೂಲೆಯಲ್ಲಿ ನಯನಾ ಸುಳಿಯುತ್ತಿದ್ದರಿಂದ ಯಾಂತ್ರಿಕವಾಗಿಯೇ ಉತ್ತರಿಸುತ್ತಿದ್ದ. 'ನಯನಾಳಿಗೆ ತಾಯಿಯಿಲ್ಲ. ನನಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಾಕೆ ಅದಾಗಲೇ ಎಂಜಿನೀರಿಂಗ್ ಓದ್ತಿದ್ದಾಳೆ ಹಾಸನದಲ್ಲಿ. ಆಕೆಯ ಬಳಿಯೇ ಪಿಯೂಗಾಗಿ ಇವಳನ್ನ ಕಳಿಸ್ತಿದ್ದೇನೆ. ಮೊನ್ನೆಯೇ ಹೋದಳು. ಇವತ್ತಿಗೆ ಬಂದು ಬಿಡ್ತೇನೆ ಅಂತ. ಇನ್ನೂ ಅಡ್ಮಿಷನ್ ಮುಗಿದಿಲ್ಲ ಅಂತ ನಾಳೆ ಬರೋದಾಗಿ ಹೇಳಿದಾಳೆ.'
ತಂದೆ ಹೇಳಿದರು. 'ಹಾಸನದಲ್ಲಿ ಎಲ್ಲಿ..?' ಎಂದು ಕೇಳಬೇಕೆಂದಿದ್ದರೂ ಅದರಿಂದ ಅಷ್ಟಾಗಿ ಪ್ರಯೋಜನವಿರಲಿಲ್ಲ. ಆಕೆಯೂ ತನ್ನೊಟ್ಟಿಗೆ ಮೈಸೂರಿನಲ್ಲಿ ಓದುವ ಹಾಗಿದ್ದರೆ ಎಂದೆಲ್ಲಾ ಕಟ್ಟುಕೊಂಡ ಆಸೆ ಕರಗಿ ಹೋಯಿತಾಗಿ ಸುಮ್ಮನಾದ.
ಕಿಟ್ಟಿ ಮತ್ತೆ ಆ ಊರಿನ ಕಡೆ ಬರುವ ಪ್ರಮೇಯವಿರಲಿಲ್ಲ. ತಂದೆಗೆ ಶಿವಮೊಗ್ಗೆಗೆ ಟ್ರಾನ್ಸ್ಫರ್ ಆಯಿತಾದರೂ, ಕಿಟ್ಟಿ ಅಮ್ಮ, ಅಕ್ಕನೊಡನೆ ಮೈಸೂರಿಗೆ ಬಂದ, ಓದಿಗಾಗಿ.
ಕಿಟ್ಟಿ ಪಿ.ಯೂ ಮುಗಿಸಿ ಮುಂದೆ ಬಿ.ಎಸ್ಸಿ ಸೇರಿ, ನಂತರ ಎಂ.ಎಸ್ಸಿ ಮುಗಿಸುವ ವೇಳೆಗೆ ನಯನಾ ಸ್ಮೃತಿಯಿಂದ ಸಾಕಷ್ಟು ಅಳಿಸಿ ಹೋಗಿದ್ದರೂ, ಒಮ್ಮೆ ಬಹಳ ವರ್ಷಗಳ ನಂತರ ತನ್ನ ಮಾಸ್ತರಿಗೆ ಫೋನ್ ಮಾಡಿದಾಗ 'ನಯನಾ ಏನು ಮಾಡ್ತಿದ್ದಾಳೆ?' ಕುತೂಹಲದಿಂದ ಕೇಳಿದ. ಕಿಟ್ಟಿ ಫೇಸ್ ಬುಕ್ಕಿನಲ್ಲಿ ಆಕೆಯನ್ನ ಹುಡುಕಿದ್ದರೂ, ಆಕೆಯ ಕುರುಹು ದೊರೆತಿರಲಿಲ್ಲ. 'ಅವಳು ಎಂಜಿನೀರಿಂಗ್ ಮಾಡಿ ಈಗ ಬೆಂಗಳೂರಿನಲ್ಲಿ ಟಿ.ಸಿ.ಎಸ್ ಲಿ ಇದ್ದಾಳೆ ಕಣೋ' ಎಂದು ಸರ್ ಹೆಳಿದರು. ಕಿಟ್ಟಿಗೆ ಕುತೂಹಲವಷ್ಟೇ. ಆಕೆಯ ಬಗ್ಗೆ ವಿಶೇಷ ಕಾಳಜಿಯಿರಲಿಲ್ಲ. ಎಂ.ಎಸ್ಸಿ ಬರುವ ವೇಳೆಗಾಗಲೇ, ಅನನ್ಯ, ಸಿಂಧು ಹಾಗೂ ರಂಜನಾ ಕಿಟ್ಟಿಯ ಜೀವನದ ನಯನರಾಗಿ ಬಂದು ಹೋಗಿದ್ದರು. ರಂಜನಾ ಒಬ್ಬಳಷ್ಟೇ ಎಂ.ಎಸ್ಸಿಯ ವೇಳೆಗೆ ಉಳಿದಿದ್ದಳು. ಉಳಿದವರೆಲ್ಲಾ ಮೂಕಿ ಚಿತ್ರದ ಪಾತ್ರಗಳಾಗಿದ್ದರೆ, ಕಡೆಯದ್ದು ಹಾಗೆ ಆಗದೆ ತನ್ನ ಪ್ರೀತಿಯನ್ನ ವ್ಯಕ್ತಪಡಿಸಿಯೇ ಬಿಟ್ಟಿದ್ದ. ದುರಾದೃಷ್ಟವೆಂಬಂತೆ, ಆಕೆ ಒಪ್ಪಿರಲಿಲ್ಲ.
No comments:
Post a Comment