ಮೌಲ್ಯಗಳೆಲ್ಲಾ ಬುರುಡೆಗಳು. ವಿಕಾಸ ನಮ್ಮೊಳಗೆ ತುರುಕಿಸಿಟ್ಟಿದ್ದು ಸ್ವಾರ್ಥ. ದೀರ್ಘಕಾಲಿಕವಾಗಿ, ಶಾಶ್ವತವಾಗಿಯೇ ಅಂದುಕೋ, ಹೇರಳವಾಗಿ ನನ್ನ ಗುರುತು ತಲತಲಾಂತರವಾಗಿ ಹರಿದು ಹೋಗಬೇಕೆನ್ನುವ ಸ್ವಾರ್ಥ. ಇದೋ ಕೇಳು ಜಕೋಬನ ಒಂದು ಕಥೆ.
ಸದಾ ಸುಪ್ರಸನ್ನನಾದ ಜಕೋಬ ಒಂದೊಮ್ಮೆ ಖಿನ್ನನಾದ. ವಿಚಾರಿಸಲು, ಜನರ ಮೌಲ್ಯ ವ್ಯವಸ್ಥೆ ಕುಸಿತಗೊಂಡಿದ್ದು ಆತಂಕಕ್ಕೆ ಕಾರಣವಾಗಿತ್ತು. 'ಮಂತ್ರಿವರ್ಯರೆ, ಇದನ್ನು ಗಟ್ಟಿಗೊಳಿಸಲು ಸಾಧ್ಯವಿಲ್ಲವೇ?' ಜಕೋಬ ನೊಂದ. 'ಉಂಟು ಮಹಾಪ್ರಭು. ಅದಕ್ಕಾಗಿ ಸೂಕ್ಷ ಅವಲೋಕನ, ಸೂಕ್ಷ್ಮ ಪರೀಕ್ಷೆ ಹಾಗೂ ಸೂಕ್ತ ಪರಿಶ್ರಮ ಅವಶ್ಯಕ.'
'ಹೇಗೆ? ಮಂತ್ರಿವರ್ಯರೆ?'
'ಅದನ್ನು ನನಗೆ ಬಿಡಿ ಮಹಾಪ್ರಭು'
ಡಂಗೂರ ಸಾರಲಾಯಿತು. 'ರಾಜ್ಯದ ಜನರೆಲ್ಲರಿಗೂ ಇದೋ ಜಕೋಬ ರಾಜರ ಸಂದೇಶ. ಈ ಹುಣ್ಣಿಮೆ ಶಿವನ ಆಲಯದಲ್ಲಿ ಶಿವಲಿಂಗಕ್ಕೆ ಕ್ಷೀರಾಭಿಷೇಕ ಇದ್ದು, ಎಲ್ಲರೂ ತಂತಮ್ಮ ಮನೆಗಳಿಂದ ಮನೆಗೆ ಒಂದು ಬಿಂದಿಗೆ ಕ್ಷೀರವನ್ನು ದೇವಳದ ಮುಂದಿನ ದೊಡ್ಡ ಹಂಡೆಯಲ್ಲಿ ಬೆಳಗಿನೊಳಗೆ ಸುರಿಯತಕ್ಕದ್ದು'.
'ಹರ ಹರ ಮಹಾದೇವ.. ಎಂಥಾ ಭಾಗ್ಯವಂತರು ನಾವು'
'ಮಾದೇವ.. ಇದೆಂಥಾ ಪರೀಕ್ಷೆಯಯ್ಯಾ. ಕುಡಿಯಲು ಒಂದು ಹನಿ ನೀರಿಲ್ಲದ ಸ್ಥಿತಿಯಲ್ಲಿ ಹಾಲೇ? ಇರಲಿ'
'ಒಂದು ಬಿಂದಿಗೆಯೇ?! (ಕಣ್ಣರಳಿಸಿ) ಅಷ್ಟೂ ಜನರಲ್ಲಿ ನಾನೇನು ಹಾಕದಿದ್ದರೆ ಯಾರಿಗೆ ತಿಳಿದೀತು. ಅಷ್ಟಕ್ಕೂ ಕತ್ತಲೆಯಲ್ಲಿ ಯಾರಿಗ್ಯಾರು ಕಂಡಾರು?'
ತಲೆಗೊಂದು ಮಾತು.
ಹಂಡೆ ಕಾಲು ಭಾಗವೂ ತುಂಬಲಿಲ್ಲ. 'ಅರೆರೆ ಏನಿದು ಮಂತ್ರಿಗಳೇ'!
'ಮಹಾಪ್ರಭುಗಳೇ. ನೋಡಿದಿರೆ? ರಾಜ್ಯದ ಮುಕ್ಕಾಲು ಪಾಲು ಜನ 'ನಾನೊಬ್ಬ ಹಾಕದಿದ್ದರೆ ಎನಾದೀತು?' ಎನ್ನುವ ಯೋಚನೆಯಲ್ಲಿದ್ದಾರೆ. ಕುಡಿಯಲು ನೀರೂ ಇಲ್ಲದ ಕೆಲ ಜನ ಒಂದು ಉದ್ಧರಣೆ ಹಾಲನ್ನಾದರೂ ಕಷ್ಟ ಪಟ್ಟು ತಂದು ಹಾಕಿದವರೂ ಇದ್ದಾರೆ. ತಮ್ಮ ಪುಣ್ಯವೆಂದು ಹೇಳಿ ಒಂದು ಬಿಂದಿಗೆ ಹಾಲನ್ನು ಹಾಕಿದವರೂ ಇದ್ದಾರೆ. ಈಗ ನಮ್ಮ ಪರಿಶ್ರಮವೆಲ್ಲಾ ಆ ಮೊದಲ ಗುಂಪಿನ ಮೇಲೆ'.
'ಏನು ಮಾಡುವಿರಿ ಮಂತ್ರಿಗಳೆ?'
'ಮಹಾಪ್ರಭು, ನಮಗೆ ಬಿಡಿ'
ಮಾರನೇ ದಿನ ಮತ್ತೊಂದು ಡಂಗೂರ ಸಾರಲಾಯಿತು. 'ಮಹಾಪಚಾರ ಮಹಾಪಚಾರ. ಯಾರೋ ಹಾಲಿನ ಬದಲು ಮೊಸರು ಸೇರಿಸಿದ್ದರಿಂದ ಕ್ಷೀರವೆಲ್ಲಾ ಹೆಪ್ಪಾಗಿ ಮಹಾದೇವನಿಗೆ ಅಭಿಷೇಕವಿಲ್ಲವಾಗಿ ಅಪಶಕುನವಾಗಿದೆ. ಈ ಅಪರಾಧಕ್ಕೆ ಯಾವ ಶಿಕ್ಷೆಯೂ ಸಾಲದಂತಾಗಿ ಹಾಲಿತ್ತವರೆಲ್ಲಾ ವಿಚಾರಣೆಗಾಗಿ ನಾಳೆ ದೇವಾಲಯಕ್ಕೆ ಬರಬೇಕಾಗಿ ಮಹಾಪ್ರಭುಗಳ ಕಟ್ಟಾಜ್ಞೆ. '
'ವಿಚಾರಣೆ ಎಂದರೆ? ವಿಚಾರಣೆಯಲ್ಲಿ ಯಾರು ತಿಳಿಯದೇ ಇದ್ದಲ್ಲಿ?'
'ಅರೆರೆ. ಎಲ್ಲರಿಗೂ ಶಿಕ್ಷೆಯಾದಲ್ಲಿ?'
'ಮನೆಯಲ್ಲೇ ಉಳಿದರೆ ಹಾಲಿತ್ತಿಲ್ಲವೆನ್ನೋ ಸತ್ಯ ತಿಳಿದೀತು'
ಜನರೆಲ್ಲರಿಗೂ ಉಭಯ ಸಂಕಟ.
'ಹೇಗೂ ಅಪಶಕುನವಾಗಿ ಮತ್ತೊಮ್ಮೆ ಹಾಲೀಯಲು ಹೇಳಬೋದು. ಈ ಅಪಶಕುನಕ್ಕಿಂತ ಹಾಲೀಯದಿದ್ದೆ ಈ ಸಂದರ್ಭದಲ್ಲಿ ಒಳಿತಲ್ಲವೇ?'
ಜನಕ್ಕೊಂದು ಮಾತು.
'ಮಹಾಪ್ರಭು ಈಗ ಮನೆಯಲ್ಲೇ ಉಳಿಯೋ ಜನ ಒಂದಿಲ್ಲ ಒಂದು ಸುಳ್ಳು ಹೇಳಿದವರೆ. ಇಲ್ಲ ಅವ ಹಾಲು ಹಾಕಿರುವುದಿಲ್ಲ. ಅಥವಾ ಹಾಕಿ ಹೆದರಿಕೆಗೆ ಮನೆಯಲ್ಲೇ ಉಳಿದವ'
'ಭಲೇ... ಭಲೇ...'
ಕೆಲವರಷ್ಟೇ ಬಂದದ್ದು. ಮನೆಯಲ್ಲಿದ್ದವರಿಗೆಲ್ಲಾ ಅಚ್ಚರಿ! ರಾಜಭಟರು ಮೆನಯಲ್ಲಿದ್ದವರನ್ನೆಲ್ಲಾ ರಾಜಭನಕ್ಕೆ ಎಳೆದೊಯ್ದರು.
'ಮಂತ್ರಿವರ್ಯರೇ... ಈಗ?' ಜಕೋಬ ಕೇಳಿದ
'ಮಹಾರಾಜ. ಇವರ ಪರಿವರ್ತನೆ. ಇದಕಾಗಿ ಕಠಿಣ ತರಬೇತಿ. ಎಲ್ಲೆಡೆಯೂ ಪರಿವರ್ತನಾ ಕೇಂದ್ರಗಳ ಸ್ಥಾಪನೆ. ಇವರ ಪರಿವರ್ತನೆಗೆ ತರಬೇತಿ'
ತರಬೇತಿ ಕೇಂದ್ರಗಳ ಸ್ಥಾಪನೆಯಾಯಿತು. ವಿವಿಧ ಆಯಾಮದ ತರಬೇತಿ ಶುರುವಾಯಿತು. ಮೌಲ್ಯಗಳ ಪ್ರಾಮುಖ್ಯತೆಯ ಬಗ್ಗೆ ಕಥೆಗಳು, ನಿದರ್ಶನಗಳು, ಹೇಳಿ ಹತ್ಹಲವು ಪರೀಕ್ಷೆ ಒಡ್ಡಲಾಗಿ, ಮೌಲ್ಯಗಳೇ ಮನುಷ್ಯನ ಉಸಿರು ಎನ್ನುವ ರೀತಿ ತಲೆಗೆ ತುಂಬಲಾಯಿತು. ಹಲವರು ಮರುಳಾದದ್ದು ಅವರಿಗಿಟ್ಟ ಆಲೋಚಿತ ಪರೀಕ್ಷೆಗಳ ಮೂಲಕ ತಿಳಿಯಿತು.
'ಮೌಲ್ಯಗಳ ಉಳಿವಿಗೆ ತಮ್ಮ ಪ್ರಯತ್ನ ಶ್ಲಾಘನೀಯ. ಮನುಷ್ಯನನ್ನ ಮೃಗಗಳಿಂದ ಪ್ರತ್ಯೇಕಿಸುವ ಈ ಮೌಲ್ಯಗಳ ಪಾಲನೆಗೆ ತಮ್ಮಂತೆ ಜಗತ್ತಿನ ಎಲ್ಲರೂ ಶ್ರಮಿಸುವುದು ಅವಶ್ಯಕ' ಮಂತ್ರಿಗಳೆಲ್ಲಾ ಜಕೋಬನನ್ನ ಕೊಂಡಾಡಿದರು.
ಮೆತ್ತನೆಯ ಹಾಸಿಗೆಯ ಮೇಲೆ ವಿಶ್ರಮಿಸುತ್ತಿದ್ದ ಜಕೋಬ ಮನದಲ್ಲೇ ಹರ್ಷಿಸಿದ - 'ನಂಬಿಕಸ್ತನಿದ್ದರಷ್ಟೇ ನನ್ನ ಉಳಿವಲ್ಲ.'
No comments:
Post a Comment