ಗಾಢವಾದ ನಿದ್ದೆ, ಏಳುವ ಚೂರು ಮನಸ್ಸಿಲ್ಲದ ಹಾಗೆ. ಒಂಚೂರು ನೆನಪಿದೆ - ಓದುತ್ತಿದ್ದ ಪುಸ್ತಕ ಮಗಚಿ ಪುಟಗಳ ಮೇಲೆ ಮಲಗಿಸಿಟ್ಟದ್ದು. ಅದು ಎಡಗಡೆಯೋ? ಬಲಗಡೆಯೋ? ಹೀಗೆ ಯೋಚಿಸಲು ನಾನು ಹಾಸಿಗೆಯ ಮಧ್ಯದಲ್ಲಿ ಮಲಗಿದ್ದೇನೆನ್ನೋದು ಖಾತ್ರಿ ಇರಬೇಕಲ್ಲ. 'ಚಳ್' ಎಂದು ನರದೊಳಗಿಂದ ಹರಿದ ನೋವೊಂದು 'ಅಮ್ಮಾ' ಎಂದು ಕೂಗಿಸಿತು. ಯಾಕಾದರೂ ಕೂಗಿದೆನೋ. 'ಅಮ್ಮಾ' ಹೊರಗೆ ಪಸರಿಸಿತೋ ತಿಳಿಯದು. ತಲೆಯ ಒಳಗೆಲ್ಲಾ ಧಿಮ್ಮೆನಿಸಿವ ಹಾಗೆ ಪ್ರತಿಧ್ವನಿಸಿತು. ತಲೆ ತಿರುಗಿಸಲು ಮತ್ತೊಮ್ಮೆ ಪ್ರಯತ್ನಿಸಿದೆ. ಮತ್ತೊಮ್ಮೆ 'ಅಮ್ಮಾ...' - ಅಂತರ್ ಪ್ರತಿಧ್ವನಿ. ಈ ಪ್ರತಿಧ್ವನಿಯ ನೋವಿಗೇ ಮತ್ತೊಮ್ಮೆ ಕೂಗಬೇಕಿನಿಸಿದರೂ ಕಷ್ಟ ಪಟ್ಟು ಸುಮ್ಮನಾದೆ. ಏನಾಯಿತು ಇದ್ದಕ್ಕಿದ್ದ ಹಾಗೆ ನನಗೆ? ಎತ್ತ ಕಡೆ ತಲೆ ತಿರುಗಿಸಿದರೂ ನರವೆಳೆದು ಅಸಾಧ್ಯ ನೋವು. ಕೂಗಿದರೂ ಒಬ್ಬರೂ ಪತ್ತೆಯಿಲ್ಲ. ಕೈ ಕಾಲು ಆಡಿಸಿದಾಗ ನರವೆಳೆದರೆ ಎಂದು ಅನಿಸಿದರೂ, ಒಮ್ಮೆ ಪ್ರಯತ್ನಿಸಿದೆ. ದೇವರ ದಯೆ. ಅವು ಸರಿಯೇ ಇದ್ದವು. ಕತ್ತಿಗೆ ಕೈ ಹಾಕಿ ನಾಜೂಕಾಗಿ ತಿರುಗಿಸೋಣವೇ ಎಂದು ಎರಡೂ ಕಡೆಗಳಿಂದ ಕತ್ತು ಹಿಡಿದೆ. ಚೂರೇಚೂರು ಅಲಗಿದ್ದಕ್ಕೆ ಮತ್ತೊಮ್ಮೆ ಅಂತರ್ ಪ್ರತಿಧ್ವನಿ ಹೊಮ್ಮಿತು. ಇಷ್ಟು ಕೂಗಿದರೂ ಯಾರೂ ಸಹ ಬರಲಿಲ್ಲವಲ್ಲ? ಸಮಯ ಎಷ್ಟಾಗಿರಬಹುದು? ರೂಮಿನೊಳಗಂತೂ ಬೆಳಕು ಪ್ರಜ್ವಲಿಸುತ್ತಿದೆ. ಅಯ್ಯೋ! ಹತ್ತರ ಮೇಲಾಗಿರಬಹುದೇ? ಹಾಗೇನಾದರೂ ಆಗಿದ್ದರೆ ಇಷ್ಟೊರಳಗಾಗಲೇ ಅಮ್ಮ ನನ್ನನ್ನ ಎಬ್ಬಿಸಬೇಕಿತ್ತಲ್ಲ? ಅರ್ರೇ! ಚಿಲಕ ಹಾಕಿಬಿಟ್ಟೆನೆ. ರೂಮಿನಬಾಗಿಲು ತಲೆಯ ಹಿಂದೆ ಬಲಬದಿಯಲ್ಲಿ ಇದೆ. ತಿರುಗಲಂತೂ ಅಸಾಧ್ಯ. ಅಮ್ಮ ಸಾಕಷ್ಟು ಬಾರಿ ಬಡಿದೂ ಬಡಿದೂ ಗಾಬರಿಯಾಗಿರಬಹುದೇ?
ಹಿಂದೆ ಹಲವು ಬಾರಿ ಹೀಗೆಯೇ ಚಿಲಕ ಹಾಕಿ, ಸುಮಾರು ಬಾರಿ ಬಡಿದಿದ್ದರೂ ತೆಗೆದಿರಲಿಲ್ಲವಲ್ಲ. ಮೊದಲನೇ ಬಾರಿ ಅಪ್ಪ ಬಾಗಿಲು ಒಡೆದು ಹಾಕಿಬಿಡುವ ಆಲೋಚನೆಗೆ ಹೋಗಿದ್ದರಂತಲ್ಲ. ಆಮೇಲೆ ನನಗೇ ಎಚ್ಚರವಾಗಿ ಬಾಗಿಲು ತೆಗೆದಿದ್ದೆ. ಅದಾದ ಮೇಲೆ ಹಲವು ಬಾರಿ ಹೀಗೆಯೇ ಆಗಿತ್ತು. ಪ್ರತೀ ಬಾರಿಯೂ ಅಮ್ಮನ ಬೈಗುಳ ತಿನ್ನುವುದು ಇದ್ದೇ ಇರುತ್ತಿತ್ತು - ಮತ್ತೊಮ್ಮೆ ಚಿಲಕ ಹಾಕಬೇಡ ಎಂದು. ಸಮಯ ಹತ್ತಾಗಿದ್ದಲ್ಲಿ ಅಪ್ಪ ಅದಾಗಲೇ ಕೆಲಸಕ್ಕೆ ಹೊರಟಿರುತ್ತಾರೆ. ತಮ್ಮನಿಗೆ ಎಂಟು ಗಂಟೆಗೇ ಶಾಲೆಯ ಬಸ್ಸು ಬಂದು ಕಾಯುತ್ತಿರುತ್ತದೆ. ಅರ್ರೇ! ಬಸ್ಸಿನ ಹಾರನ್ ಸದ್ದೂ ಸಹ ತನಗೆ ಕೇಳಿಸದಷ್ಟು ಗಾಢ ನಿದ್ದೆಯೇ. ನನ್ನ ರೂಮಿನೊಳಗೆ ಇಷ್ಟೆಲ್ಲಾ ರಂಪಾಟವಾಗುತ್ತಿದ್ದರೂ ಯಾರಿಗೂ ಚಿಂತೆಯಿಲ್ಲವೇ? ಅಥವಾ ಅಮ್ಮಳೂ ಸಹ ತನ್ನ ಕೆಲಸದಲ್ಲಿ ಮುಳುಗಿ ಹೋದಳೇ? ಒಡನೆಯೇ ನೆನಪಾಯಿತು. ಓಹ್! ಇಂದು ರಜೆ - ಗಣರಾಜ್ಯ ದಿನ! ಹಾಗಾಗಿ ಶಾಲೆಯ ಬಸ್ ಬಂದಿರಲಿಕ್ಕಿಲ್ಲ. ಅಮ್ಮ, ತಮ್ಮ ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ತಮ್ಮ ಅಪ್ಪ, ಅಮ್ಮನ ಬಳಿಯೇ ಮಲಗುತ್ತಾನೆ. ಅವನೂ ಎದ್ದಿರಲಿಕ್ಕಿಲ್ಲವೇನೋ. ಪ್ಚ್.. ಸಮಯ ಎಷ್ಟಾಗಿದ್ದಿರಬೋದು? ರಾತ್ರಿ ಮಲಗುವಾಗ ಕೈಗೆ ವಾಚ್ ಕಟ್ಟುವ ಅಭ್ಯಾಸವನ್ನೂ ನಾನು ಇಟ್ಟಿಲ್ಲವೇ. ಒಡನೆಯೇ ಮನಸ್ಸಿಗೆ ಏನೋ ಚಿಂತೆ ಹತ್ತಿತು. ಕುತ್ತಿಗೆ ಮುಟ್ಟಿದಾಗಲೇ ಬಹಳ ವಿಚಿತ್ರವಾದ ಸ್ಪರ್ಶಾನುಭವವಾಯಿತಲ್ಲ. ಗಂಟುಗಂಟಿನ ರೀತಿ. ಗಟ್ಟಿಯಾಗಿ ಮರಗಟ್ಟಿದಂತೆ. ಕೈಯನ್ನು ಸುಮ್ಮನೆ ಹಾಗೆಯೇ ಮುಖದ ಮೇಲೆಲ್ಲಾ ಆಡಿಸಿದೆ. ಕಣ್ಣು, ಮೂಗು ಹಣೆ ಕೆನ್ನೆಗಳೆಲ್ಲಾ ಚೆನ್ನಾಗಿಯೇ ಇವೆ. ಮೇಲಿನ ಸೂರೂ ಸಹ ಚೆನ್ನಾಗಿಯೇ ಕಾಣುತ್ತಿದೆ. ಉಸಿರಿಗೇನೂ ಭಾರವೂ ಇಲ್ಲ. ಆದರೂ ಹೀಗೇಕೆ? ತಲೆಯ ಮೇಲೆ ಕೈ ಜಾರಿದಂತೆ ಮನಸ್ಸೊಳಗೇ ಹೌಹಾರಿದೆ. ಎದ್ದು ಕೂತುಬಿಡುವಷ್ಟು ಗಾಬರಿಯಾಯಿತು. ಕೂರಲು ಬರೆ ಕುತ್ತಿಗೆಯ ಕೆಳಗಿನ ಭಾಗಕ್ಕೆ ಶಕ್ತಿ. ಮೇಲಿನ ಭಾಗ ಏಳಲೇ ತಯಾರಿಲ್ಲ. 'ಚಳ್' ಎಂದು ಹರಿದ ನೋವಿಗೆ ಮತ್ತೆ 'ಅಯ್ಯಯ್ಯೋ' ಎಂದು ಕೂಗಿದೆ. ನನಗೀಗಾದ ಗಾಬರಿ, ಭಯ ಎರಡೂ ಸಹ ಸಾವಿನ ಭಯವನ್ನೂ ಮೀರಿದ್ದೆ? ಅನಿರೀಕ್ಷಿತವಾಗಿ ಎರಗುವ ಭಯ ತನ್ನೊಟ್ಟಿಗೆ ಸಾಕಷ್ಟು ಇತರೆ ಭಯಗಳನ್ನು ಹುದುಗಿಸಿಟ್ಟುಕೊಂಡು ಆಕ್ರಮಿಸುತ್ತದೆ. ಇವೆಲ್ಲವೂ ಚಣಮಾತ್ರದಲ್ಲಿ ಜರುಗುವ ದೂರಾಲೋಚನೆಯಲ್ಲಿ ಹುಟ್ಟುವ ಭಯ. ಸರಿಯಾಗಿ ನನಗೇನಾಗಿದೆ ಎನ್ನುವುದೂ ಸಹ ತಿಳಿಯಲು ಸಾಧ್ಯವಾಗುತ್ತಿಲ್ಲ ಎನ್ನುವ ನೋವೂ ತೀವ್ರವಾಗಿ ಇರಿಯಲಾರಂಭಿಸಿತು. ತಲೆಯೂ ಸಹ ಕುತ್ತಿಗೆಯ ರೀತಿಯೇ ಮರಗಟ್ಟಿದೆ. ಕೊಂಚ ದಪ್ಪವೂ ಆಗಿದೆ. ಕೊಂಚವೇ? ಹೆಚ್ಚೇ ದಪ್ಪವಾಗಿದೆ. ಭಾರವೂ ಆಗಿದಂತಿದೆ. ಇದೇನಾಯಿತು? ಮನಸ್ಸು ರಾತ್ರಿಯದ್ದನ್ನೆಲ್ಲಾ ನೆನಪಿಸಿಕೊಳ್ಳಲಾರಂಭಿಸಿತು. ರಾತ್ರಿ ಊಟ ಮಾಡಿ ಸ್ವಲ್ಪ ಹೊತ್ತು ಬೀದಿಯಲ್ಲಿ ವಾಕಿಂಗ್ ಮಾಡುವ ಅಭ್ಯಾಸವಿದೆ. ನೆನ್ನೆಯೂ ವಾಕಿಂಗ್ ಮುಗಿಸಿ ಬಂದೆ. ತಣ್ಣಗಿನ ಗಾಳಿ. ಮರಗಳ ವಾಸನೆ. ಮರಗಳು ಗಾಳಿಗೆ ಅಲುಗಾಡುವಾಗ ಉಂಟಾಗುವ ಸದ್ದು. ಅಲ್ಲೊಮ್ಮೆ ಇಲ್ಲೊಮ್ಮೆ ಎಲೆಗಳು ಉದುರುವ ಸದ್ದು. ಒಂದು ಕ್ಷಣವಾದರೂ ನನ್ನ ಎಲ್ಲಾ ಯೋಚನೆಗಳು ಸತ್ತು ಎಲೆಗಳಂತೆ ಉದುರಿ ಅವೆಲ್ಲವನ್ನೂ ನಾನೇ ತುಳಿದು ದಾಟುತ್ತಿದ್ದ ಭಾವ.
ಸಾಮಾನ್ಯ ನಮ್ಮ ಬೀದಿಯಲ್ಲಿ ರಾತ್ರಿಯ ಹೊತ್ತು ಜನ ಓಡಾಡುವುದು ಕಡಿಮೆ. ಬೀದಿಯ ಕೊನೆಯಲ್ಲೆಲ್ಲೋ ಉರಿಯುತ್ತಿದ್ದ ಸ್ಟ್ರೀಟ್ ಲೈಟ್ ಅಷ್ಟಾಗಿ ಎಲ್ಲೆಡೆಯೂ ಬೆಳಕನ್ನು ಸೂಸುತ್ತಿರಲಿಲ್ಲ. ಹಾಗಾಗಿ ಭಾಗಶಃ ನಮ್ಮಬೀದಿ ಪೂರಾ ಕತ್ತಲೇ. ರಾತ್ರಿ ಬೀದಿಯ ಕೊನೆಯವರೆಗೂ ಎರಡು ಬಾರಿ ಹೋಗಿ ಬರುವುದು ನನ್ನ ಅಭ್ಯಾಸ. ಅದು ಸ್ಪಷ್ಟವಾಗಿಯೇ ನನಗೆ ನೆನಪಿದೆ. ವಾಕಿಂಗ್ ಮುಗಿಸಿ ಮನೆಗೆ ಬಂದು ಪುಸ್ತಕ ಹಿಡಿದೆ. ನೆನ್ನೆಯಷ್ಟೇ ಒಂದು ಪುಸ್ತಕ ಮುಗಿದಿತ್ತು. ಸಾಕಷ್ಟು ದಿನಗಳಿಂದ ಓದಬೇಕೆಂದಿದ್ದ ಒಂದು ಹಳೆಯ ಪುಸ್ತಕವನ್ನ ತೆಗೆದೆ. ಧೂಳು ಹಿಡಿದಿತ್ತು. ಒಳಗೆ ಹಾಳೆಗಳೂ ಕೊಂಚ ಸಡಿಲಗೊಂಡಿದ್ದವು. ಧೂಳಿನ ವಾಸನೆ. ಹುಳಗಳು ಪುಟಗಳನ್ನ ಅಲ್ಲಲ್ಲಿ ಚೂರು ತಿಂದಿದ್ದವು. ಅದೂ ಸಹ ನೆನಪಿದೆ. ಒಂದು ಇಪ್ಪತ್ತು ಪುಟಗಳನ್ನ ಓದಿದ್ದಿರಬೋದು. ಅದ್ಭುತ! ಅದ್ಭುತ! ಇಡೀ ವಿಕಾಸದ ಹಿಂದಿನ ಥಿಯರಿಯನ್ನೇ ಬುಡಮೇಲು ಮಾಡುವ ವಿಚಾರಗಳು. ಮತ್ತೂ ಒಂದ್ಹತ್ತು ಪುಟ ಓದಿ ಮುಚ್ಚಿಡೋಣ ಅನ್ನೋ ಅಷ್ಟರಲ್ಲಿ ಕೊಂಚ ಕಣ್ಣಿಗೆ ಆಯಾಸವೆನಿಸಿತು. ಒಂದೈದು ನಿಮಿಷ ಪುಸ್ತಕವನ್ನ ಪಕ್ಕಕ್ಕೆ ಮಗಚಿಟ್ಟು ಕಣ್ಣು ಮುಚ್ಚಿದ್ದಷ್ಟೇ ನೆನಪು! ಅರ್ರೇ! ಇದು ಸೂರ್ಯನ ಬೆಳಕೇ ಅಥವಾ ರಾತ್ರೆ ನಾನು ಆಫ್ ಮಾಡದೇ ಬಿಟ್ಟ ದೀಪವೇ? ಕಿಟಕಿಯಿಂದ ಬಂದದ್ದೇ? ದೀಪವೂ ಮೇಲೆಯೇ ಇರುವುದು. ಕಿಟಿಕಿಯನ್ನೂ ನೋಡಲು ತಲೆ ತಿರುಗಿಸುವಂತಿಲ್ಲ. ಹಾಗಾದ್ರೆ ಇನ್ನೂ ರಾತ್ರಿಯೇ ಇರಬಹುದೇ? ಗೊತ್ತಿಲ್ಲ. ನನ್ನೊಳಗೇ ಅಚಾನಕ್ಕಾಗಿ ಹರಿದ ನೋವಿಗೆ, ಭಯಕ್ಕೇ ಯೋಚಿಸುವ ಶಕ್ತಿಯನ್ನೂ ಮನಸ್ಸು ಕಳೆದುಕೊಂಡಿತ್ತು. ಇನ್ನೂ ರಾತ್ರಿಯೇ ಅಥವಾ ಬೆಳಗಾಯಿತೇ?
****
ದಿಕ್ಕೇ ಕಾಣದೇ ಕಣ್ಣು ಮುಚ್ಚಿದ್ದೆ. 'ಚಳ್' ಎಂದು ನರಕಯಾತನೆಯನ್ನೂ ಮೀರಿಸುವ ನೋವು, ಇಲ್ಲಿಯವರೆಗೂ ಇದ್ದದ್ದಕ್ಕಿಂತ ಹತ್ತು ಪಟ್ಟು ಹೆಚ್ಚು. ಕಣ್ಣು ಬಿಟ್ಟಿ ನೋಡಿದೆ. ಅಮ್ಮನ ಮುಖ. ನನ್ನ ಮೈ ಹಿಡಿದು ಅತ್ತಿತ್ತ ಅಲುಗಿಸುತ್ತಿದ್ದಳು. ನನ್ನನ್ನು ಎಬ್ಬಿಸುವ ಯತ್ನದಲ್ಲಿದ್ದಳು. ಅಳುತ್ತಿದ್ದಳು. ಆಕೆಯ ಹಿಂದೆ ಅಪ್ಪ ಇದ್ದರು. ತಮ್ಮ ಕಾಣಲಿಲ್ಲ. ಏನಾದರೂ ಮುಟ್ಟು, ಮುಖ ಮಾತ್ರ ಮುಟ್ಟಬೇಡ ಎಂದು ಎಷ್ಟೇ ಹೇಳುತ್ತಿದ್ದರೂ, ಒಳಗೊಳಗೇ ಧುಮ್ಮಿಕ್ಕುತ್ತಿದ್ದ ಪ್ರತಿಧ್ವನಿಯ ನೋವಿಗೆ ಸುಮ್ಮನಾದೆ. ಕೆಲವೇ ಕ್ಷಣ, ನೋವು ಉಸಿರಂತೆ ರೂಢಿಯಾಗಿಹೋಯಿತು. ಅದೆಷ್ಟು ಬೇಗ! ಅಮ್ಮನಿಗೆ ಕೇಳಿದೆ - "ಎಷ್ಟು ಗಂಟೆ?" ಆಕೆ ಮತ್ತಷ್ಟು ಅತ್ತಳು. ಅಪ್ಪ ಅಮ್ಮನ ಹಿಂದೆಯೇ ನಿಂತಿದ್ದರು. ಕಣ್ಣಲ್ಲೇನು ನೀರಿಲ್ಲ. ಮುಖ ಗಂಟಿಕ್ಕಿದಂತಿತ್ರು. ಅಸಹ್ಯ ಪಡುವ ರೀತಿಯಲ್ಲಿ. ನನ್ನ ಬುದ್ಧಿಗೇನು ಮಂಕು ಬಡಿದಿರಲಿಲ್ಲ. ಅಮ್ಮ ಏನೋ ಮಾತನಾಡುತ್ತಿದ್ದಾಳೆ. ಆದರೆ ಸ್ಪಷ್ಟವಾಗಿ ಕೇಳುತ್ತಿಲ್ಲ. ಕೇಳುತ್ತಲೇ ಇಲ್ಲ. ಬರೆ ಗಾಳಿಯ ಸದ್ದೋ ಏನೋ ಅದು. ಏನಾಯಿತು ನನಗೆ? ಅಮ್ಮ ಓಡಿದಳು. ಅಪ್ಪ ಅತ್ತ ಕಡೆಯೇ ತಿರುಗಿ ನೋಡುತ್ತಾ ನಿಂತವರು ಮತ್ತೆ ಈ ಕಡೆ ತಿರುಗಲಿಲ್ಲ. ಅವರೂ ಆಚೆಗೆ ಹೊರಟು ಹೋದರು. ಅಮ್ಮ ಮತ್ತೆ ಓಡಿ ಬಂದಳು ಒಂದೆರೆಡು ನಿಮಿಷದಲ್ಲಿ. ಮತ್ತೂ ಅಳುತ್ತಿದ್ದಾಳೆ, ಏನೋ ಮಾತನಾಡುತ್ತಿದ್ದಾಳೆ. ಏನೂ ತಿಳಿಯುತ್ತಿಲ್ಲ. ಮುಖದ ಮೇಲೆ ಕನ್ನಡಿ ತಂದಳು. ಈಗ ಸಮಾಧಾನವಂತೂ ಆಯಿತೂ. ಏನಾಯಿತೆಂದು ತಿಳಿಯದೇ, ನನ್ನ ಊಹೆಯಲ್ಲೇ ಬೆಂದು ಹೋಗಿದ್ದ ನನಗೆ ಉತ್ತರವಂತೂ ದೊರೆಯಿತು. ಆದರೆ ಅದಾಗಲೇ ನನಗೂ ಕಣ್ಣೀರು ಅನಿಯಂತ್ರಿತವಾಗಿ ಹರಿಯುತ್ತಿತ್ತು. ಅಪ್ಪ ಮಾತ್ರ ಇನ್ನೂ ಬಂದಿರಲಿಲ್ಲ. "ಇದೇನಾಯಿತಮ್ಮ" ಎಂದು ನಾನು ಎರಡು ಮೂರು ಬಾರಿ ಕೂಗಿದರೂ, ಹಾಸಿಗೆ ಮೇಲೆ ತಲೆಯಿಟ್ಟು ಗೋಳಿಡುತ್ತಿದ್ದವಳು ಹಾಗೆಯೇ ಇದ್ದಾಳೆ. ನಾನಂತು ಎಷ್ಟು ಜೋರಾಗಿ ಕೂಗಿದೆ ಎನ್ನುವುದು ನನ್ನ ಅಂತರ್ ಧ್ವನಿಯ ನೋವೇ ಹೇಳುತ್ತಿತ್ತು. ಕೇಳಿಸುತ್ತಿಲ್ಲ. ಆಕೆ ಕೇವಲ ಅಳುತ್ತಿರಲಿಲ್ಲ. ಏನೋ ಮಾತನಾಡುತ್ತಿದ್ದಳೆನಿಸುತ್ತದೆ. ತಲೆ ಎತ್ತಿ ಅದನ್ನೇ ಮುಂದುವರೆಸುತ್ತಿದ್ದಳು. ಬೈಯುತ್ತಿದ್ದಳೇ? ಮುಖ ಸ್ವಲ್ಪ ಗಂಟಾಯಿತು. ಎದ್ದು ನಿಂತು ಸೆರಗು ಸುತ್ತಿ ಸೊಂಟಕ್ಕೆ ಕಟ್ಟಿಕೊಂಡಳು. ರೂಮಿನ ಮೂಲೆಗಳ ಕಡೆ ಅವಳ ಗಮನ ಸರಿಯಿತು. ಏನೋ ಹುಡುಕುತ್ತಿದ್ದಳು. ಅದೇನು ಹುಡುಕುತ್ತಿದ್ದಳೋ ಸಿಗಲಿಲ್ಲ. ಮತ್ತೆ ಹೊರಗೆ ಓಡಿದಳು. ಕನ್ನಡಿ ಇಲ್ಲದಿದ್ದರೂ ಕಣ್ಣ ಮುಂದೆಯೇ ಅದರ ಪ್ರತಿಬಿಂಬ. ಅಷ್ಟು ಬೇಗ ಮರೆಯಲು ಸಾಧ್ಯವೇ ಇಲ್ಲದ್ದು ಆ ರೂಪ. ಅಲ್ಲವೇ? ಎಂಥಾ ವಿಕಾರ ಮುಖ. ಸುಕ್ಕು ಸುಕ್ಕು. ಗಂಟು ಗಂಟು. ದಪ್ಪ ದಪ್ಪ. ಗುಳ್ಳೆಗಳೇ ಅಥವಾ ಹೊಳ್ಳೆಗಳೇ? ಮೂಗಿನ ಹೊಳ್ಳೆಯೂ ಯಾವುದೆಂದು ಹೇಳಲಿಕ್ಕಾಗದ ಹಾಗೆ? ಮೂಗು ಕಣ್ಣುಗಳು ಒಳಹೋಗಿವೆ. ತಲೆಯ ಕೂದಲುಗಳೆಲ್ಲಾ ಉದುರಿಹೋಗಿವೆ. ತಲೆಯ ಮೆದುಳೇ ಆಚೆ ಬಂದ ಹಾಗೆ ತಲೆಯೆಲ್ಲಾ ಸುಕ್ಕು ಸುಕ್ಕು. ತಲೆ ಚರ್ಮ ಎದ್ದು ಕಾಣುತ್ತಿದೆ. ಒಮ್ಮೆಲೆ ಫಟ್ ಎಂದು ಹೊಡೆತ ಬಿದ್ದಿತು. ಅಮ್ಮ ಹೊರಗೆ ಹೋದದ್ದು ಪೊರಕೆ ತರಲೆ? ಅಯ್ಯೋ ಇದೇನಾಗುತ್ತಿದೆ. ಇವಳೇಕೆ ಹೊಡೆಯುತ್ತಿದ್ದಾಳೆ? ಆಕೆ ಏನೋ ಹೇಳುತ್ತಿದ್ದಾಳೆ. ಅಳುತ್ತಿದ್ದಾಳೆ. ಸೆರಗಿಂದ ಕಣ್ಣು ಮೂಗು ಒರೆಸಿಕೊಳ್ಳುತ್ತಿದ್ದಾಳೆ. ಜೊತೆಗೆ ಪೊರಕೆಯಿಂದ ಪಟ ಪಟ ಹೊಡೆಯುತ್ತಿದ್ದಾಳೆ. ಯಾಕೆ? ಯಾಕೆ? ನನ್ನ ಮೈಮೇಲೆ ದೆವ್ವ ಹತ್ತಿದೆಯೆನ್ನುವ ಭ್ರಮೆಯೇ? ಏನೊಂದೂ ಕೇಳಿಸುತ್ತಿಲ್ಲ. ತುಟಿಯ ಓದು ನನಗೆ ತಿಳಿಯದು. ಅದೂ ಈ ವಿಪರೀತ ಸನ್ನಿವೇಶವೇಶದಲ್ಲಿ ತಿಳಿದಿದ್ದರೂ ಅಸಾಧ್ಯವೇ. ನನ್ನಿಂದೇನಾದರೂ ತಪ್ಪಾಗಿದೆಯೇ - ಮನಸ್ಸು ಈಗ ಭಿನ್ನ ಆಯಾಮದಲ್ಲಿ ಆಲೋಚಿಸಲಾರಂಭಿಸಿತು. ಕ್ಷಣಕ್ಷಣಕ್ಕೂ ತಲೆ ಚೂರು ಹಿಗ್ಗುತ್ತಿದೆ. ಮುಟ್ಟಿ ನೋಡಿಕೊಂಡಾಗೆಲ್ಲಾ ಒಂಚೂರಾದರೂ ಹಿಗ್ಗಿದ ಭಾಸ. ರೂಮೊಳಗೆ ಯಾರೋ ಹೊಸಬರು ಬಂದರು.
****
ಅವರು ಅಪ್ಪ ಕರೆತಂದಿದ್ದ ಡಾಕ್ಟರ್. ಅವರು ಮಾಡಿದ ಒಂದೊಳ್ಳೆಯ ಕೆಲಸ ಸ್ಲೇಟ್ ಬಳಪ ತರೆಸಿದ್ದು. ಒಂದೆರೆಡು ಸಂವಹನದಲ್ಲೇ ನನ್ನ ಪ್ರಾಥಮಿಕ ಸಮಸ್ಯೆ ಅರಿತುಬಿಟ್ಟರು. ನನಗೆ ಯಾರೂ ಹೇಳಿದ್ದು ಕೇಳಿಸುತ್ತಿರಲಿಲ್ಲ. ಹಾಗೆಯೇ ಅವರು ಹೇಳಿದ್ದು ನನಗೆ. ನನಗೇಕೆ ಹೀಗಾಗಿದೆ ಎನ್ನುವ ಅರ್ಥ ಬರುವಂತೆ ಬರೆದು ತೋರಿಸಿದೆ. ಬರವಣಿಗೆಯೂ ವ್ಯತ್ಯಾಸವಾಗಿತ್ತು. ಇದೇಕೆ ಹೀಗೆ ಬರೆದಿದ್ದಾನೆ ಎಂದು ನೋಡುವ ರೀತಿ ನನ್ನ ನೋಡಿ, ಅವರು ಏನಾಗಿದೆ ಎಂದು ವಿವರಿಸಿದರು. ಅದು ನನಗೆ ತಿಳಿದಿದೆ. ಯಾಕೆ ಹೀಗೆ ಎಂದು ಕೇಳಿದೆ, ಸ್ಲೇಟಿನ ಮೂಲಕ. ಅವರು ನನ್ನ ತಲೆ ಹಿಡಿದು ತಿರುಗಿಸಿ ನೋಡಿದರು. ಅಸಾಧ್ಯ ನೋವು. ಅಭ್ಯಾಸವೂ ಆಗಿತ್ತು. ಸ್ವಲ್ಪ ಲೊಚಗುಟ್ಟಿದಂತಿತ್ತು. ತಲೆ ಅಲ್ಲಾಡಿಸಿ ಏನೇನೋ ಹೇಳುತ್ತಿದ್ದರು. ಬರೆದು ತೋರಿಸಿ ಎಂದು ಸಂಜ್ಞೆ ಮಾಡಿದೆ. "ತಡಿ ತಡಿ" ಎಂದು ಕೈಯಲ್ಲಿ ತೋರಿಸುತ್ತಾ - ರಾತ್ರೆ ಮಲಗೋ ಮುನ್ನ ಏನೇನು ಮಾಡಿದೆ ಎಂದು ಸ್ಲೇಟಲ್ಲಿ ಕೇಳಿದರು. 'ವಾಕಿಂಗ್... ಓದು' ಎಂದು ಬರೆದು ಅಕ್ಕ ಪಕ್ಕ ಪುಸ್ತಕ ಸಿಕ್ಕೀತೆ ಎಂದು ಕೈ ಆಡಿಸುತ್ತಿದ್ದೆ. ಡಾಕ್ಟರ್ ಏನೋ ಮಾತಡಿದರು, ಒಡನೆಯೇ ಅವರಿಗೇ ತಿಳಿಯಿತು ಎಂದೆನಿಸುತ್ತದೆ ನನಗೆ ಕೇಳಿಸುವಿದಿಲ್ಲವೆಂದು. ಗಾಳಿಯಲ್ಲಿ ಎರಡೂ ಕೈಗಳನ್ನು ಹತಾಶೆಯಲ್ಲಿ ತೂರಿದಂತೆ ಮಾಡಿ, ಬಾಗಿಲ ಕಡೆ ತಿರುಗಿದರು. ಯಾರೋ ಒಳಗೆ ಬಂದ. ಬಿಳಿಯ ಏಪ್ರನ್ ಹಾಕಿದ್ದವನ ಕೈಲಿ ಒಂದು ಸೂಟ್ ಕೇಸ್ ಇತ್ತು. ಅದನ್ನ ಹಾಸಿಗೆಯ ಮೇಲೆ ನನ್ನ ಕಾಲ ಬಳಿ ಇರಿಸಲು ಡಾಕ್ಟರ್ ಸೂಚಿಸಿದರು. ಸೂಟ್ಕೇಸ್ ತೆರೆಯುತ್ತಾ ಏನೇನೋ ಬಡಬಡಿಸುತ್ತಿದ್ದರು. ಒಡನೆಯೇ ಆ ಯುವಕ ಬಂದು ನನ್ನ ತಲೆ ಹಿಡಿದ. 'ಅಯ್ಯಯ್ಯೋ...' ಎಂದು ಚೀರಿದೆ. ಪ್ರತಿಧ್ವನಿ! ಒಂದು ದೊಡ್ಡ ಸೂಜಿ, ಸಿರಿಂಜು ಹೊರಗೆ ತೆಗೆದ ಡಾಕ್ಟರ್ ನನ್ನ ತಲೆಗೆ ಚುಚ್ಚಿದರೇ? ಅದು ನನಗೆ ತಿಳಿಯಲಿಲ್ಲ. ತಲೆಯ ಸ್ಪರ್ಶವೆ ಹೋಯಿತೇ?! ಕೆಂಪಗಿನ ರಕ್ತ ತುಂಬಿದ ಸಿರಿಂಜಿನ ಆ ರಕ್ತವನ್ನು ತೆಗೆದು ಇನ್ನೊಂದು ಡಬ್ಬಿಗೆ ವರ್ಗಾಯಿಸಿ, ಅದರ ಮೇಲೊಂದು ಚೀಟಿ ಅಂಟಿಸಿ ಏನೋ ಬರೆದರು. ನನ್ನ ಹೆಸರಿರಬೇಕು. ನನ್ನ ತಲೆಯ ರಕ್ತ ಪರೀಕ್ಷೆ ಮಾಡುವವರಿದ್ದಾರೆ ಎನ್ನುವುದು ಸ್ಪಷ್ಟವಾಗಿಯೇ ತಿಳಿಯಿತು. ಆದರೆ ಕುತ್ತಿಗೆಯೇಕೆ ಅಷ್ಟೊಂದು ನೋವು? ಅದಕ್ಕೇನು ಪರಿಹಾರ ತಿಳಿಯಲಿಲ್ಲ. ಅಪ್ಪನಿಗೆ ಏನೋ ಹೇಳುತ್ತಿದ್ದರು. ಅವರನ್ನು ಮುಟ್ಟಿ ಕರೆದು ಸ್ಲೇಟು ಕೊಡಲು ಸೂಚಿಸಿದೆ. 'ನೋವಿಗೆ ಪರಿಹಾರ?' ಕೇಳಿದೆ. ಅಮ್ಮನ ಕೈಗೆ ನೀಡಿದ್ದ ಮಾತ್ರೆಗಳ ಬಳಿ ಕೈ ತೋರಿಸಿ, ಈಗಲೇ ಕೊಡಿ ಎನ್ನುವಂತೆ ಸೂಚಿಸಿದರು. ಈಗಲೇ ತಿಳಿದದ್ದು, ನುಂಗಲೂ ಸಹ ನೋವೇ! ಸ್ಲೇಟಿನ ಮೇಲೆ ಡಾಕ್ಟರ್ ಏನೋ ಬರೆದು ನನಗೆ ನೀಡಿದರು. ಅವರ ಸಲಹೆಗಳು - ಮಾತನಾಡಕೂಡದು, ನನ್ನ ಮಾತಿಂದ ನನಗೇ ನೋವು. ತಲೆಯೂ ಒಡೆದು ಹೋಗಬಹುದು. ಯೋಚಿಸುವುದು ಅಪಾಯವೇ. ಯೋಚಿಸಿದಷ್ಟೂ ತಲೆ ಹಿಗ್ಗುತ್ತಿದೆ. ಔಷಧಿ - ಗಂಟೆ ಗಂಟೆಗೆ ನೀಡಿದ ಗುಳಿಗೆ, ತಲೆ ತಣ್ಣಗೆನಿಸುವ ತೈಲ. ನಿದ್ರಿಸಿದಷ್ಟೂ ಒಳಿತು. ಒಂದೆರೆಡು ದಿನಗಳಲ್ಲಿ ನೋವು ಇಳಿಯದಿದ್ದರೆ, ಆಸ್ಪತ್ರೆಗೆ ಬರುವುದು.
"ಅಯ್ಯೋ.. ಕಾಲೇಜು? ಓದು?"
ಅಮ್ಮನ ಪೊರಕೆ ತಲೆಗೆ ಫಟ್ ಎಂದು ಬಡಿದಿತ್ತು.
***
ನಾನು ಕಾಲೇಜಿನ ಬಗ್ಗೆ ಯೋಚಿಸಲು ಕಾರಣವೂ ಇತ್ತು. ಆ ಬುದ್ಧಿಹೀನ ಮಾಸ್ತರನೊಬ್ಬನಿಗೆ ವಿಕಾಸವಾದದ ಅರಿವು ಅಗತ್ಯವಿತ್ತು. ನೆನ್ನೆ ನಮ್ಮಿಬ್ಬರ ವಾದ ಸಂಪೂರ್ಣವಾಗಿರಲಿಲ್ಲ. ಹಾಗಾಗಿಯೇ ಆ ಪುಸ್ತಕ ಹಿಡಿದದ್ದು. ಸಂಪೂರ್ಣ ವಿಕಾಸವಾದದಂತೆ, ನಮ್ಮ ಸಂಸ್ಕೃತಿಯ ಕೆಲ ಭಾಗಗಳೂ ಸಹ ಸ್ವಾರ್ಥದ ವಿಸ್ತೃತ ರೂಪಗಳೇ ಎಂದು ನಾನು ಹೇಳಿದ್ದನ್ನ ಸಮರ್ಥಿಸಿಕೊಳ್ಳಲಿಕ್ಕಾಗದೆ, ಅಥವಾ ಸರಿಯಾಗಿ ನನ್ನ ವಾದವನ್ನ ಅರ್ಥೈಸಲಿಕ್ಕಾಗದೇ ನಗೆಪಾಟಲಿಗೀಡಾಗಿದ್ದೆ. ನೆನ್ನೆ ರಾತ್ರಿಯ ವಾಕಿಂಗ್ ನಲ್ಲಿ ಹೊಳೆದಿದ್ದ ವಾದ ಸರಣಿಗೆ ನಾನೇ ಮಾರಿಹೋಗಿದ್ದೆ. ದೇಶಭಕ್ತಿ, ರಾಷ್ಟ್ರಪ್ರೇಮ ಎಲ್ಲವೂ ಮೂಲಭೂತವಾಗಿ ಒಂದು ಗುಂಪಿನ ಹಿತಕ್ಕಾಗಿ ಅನಿವಾರ್ಯವಾಗಿ ಹಾಗೂ ಅತೀ ಸಹಜವಾಗಿಯೇ ಸೃಷ್ಟಿಯಾದ ಸ್ವಾರ್ಥವಲ್ಲವೇ? ಸ್ವಾರ್ಥ ಕೆಟ್ಟದ್ದೇ? ಈ ಪ್ರಶ್ನೆಯೇ ಅರ್ಥಹೀನವಲ್ಲವೇ? ಯಾವುದು ಸಹಜವೋ, ಅನಿವಾರ್ಯವೋ, ಅನಿಯಂತ್ರಿತವೋ, ಅದರ ಸರಿ ತಪ್ಪುಗಳ ಚರ್ಚೆಯೂ ಅನುಪಯುಕ್ತ, ಅರ್ಥಹೀನ. ಹಾಗಾಗಿ, ಸ್ವಾರ್ಥ ಅನ್ವಯವಾಗುವ ಗುಂಪು ಹಿಗ್ಗಿದಂತೆ ಅದರ ಒಪ್ಪಿತ ಮೌಲ್ಯವೂ ಹಿಗ್ಗುವುದರಿಂದ, ದೇಶಪ್ರೇಮದ ಸ್ವಾರ್ಥ, ಮಾನವ ಪ್ರೇಮದ ಮುಂದೆ ಗೌಣವಾದರೂ, ಜಾತಿ, ಧರ್ಮದ ಪ್ರೇಮದ ಮುಂದೆ ಹಿರಿದಾದ್ದೇ. ಇಷ್ಟೆಲ್ಲಾ ಹೊಳೆದಾಗ ನನ್ನ ತಲೆಯು ಹಿಗ್ಗಿತ್ತೇ? ಈಗ ಹಿಗ್ಗುತ್ತಲೇ ಇದೆ ಡಾಕ್ಟರ್ ನ ಬಹು ಮುಖ್ಯ ಸಲಹೆಯನ್ನ ನಾನು ತಿರಸ್ಕರಿಸುತ್ತಿದ್ದೇನೆ. ಅದೆಷ್ಟು ಸುಲಭವಾಗಿ ಹೇಳಿಹೋದರು ಯೋಚಿಸಕೂಡದು ಎಂದು? ಸಾಯಲೇ? ನಿದ್ರಿಸಲೇ?
ಡಾಕ್ಟರಿನ ಗುಳಿಗೆಗೆ ಕತ್ತಿನ ನೋವು ತಗ್ಗಿಯೇ ಹೋಯಿತು. ಆದರೆ ತಲೆ ಹಿಗ್ಗುವುದು, ಅದರ ಭಾರ ಕಡಿಮೆಯಾಗಲಿಲ್ಲ. ರೂಮಿನ ಹೊರಗೆ ಹೋಗಲಿಕ್ಕಾದರೂ ತಲೆ ತೂರುತ್ತಿತ್ತು. ಕಾಲೇಜಿಗೆ ಹೋಗಲೇ? ಏನು ಪ್ರಯೋಜನ? ನಾನಾಡುವ ಮಾತು ಯಾರಿಗೂ ಕೇಳದು. ಅವರ ಮಾತು ನನಗೆ. ಅಯ್ಯೋ, ತಲೆ ಹಿಗ್ಗಿತ್ತಿದೆ. ರೂಮೊಳಗೆ ತೂರಲು ಇನ್ನೂ ಶಕ್ಯ. ಈಗಲೇ ಹೋಗಿ ಬಿಡುತ್ತೇನೆ. ಅದಾದರೂ ಒಂದೊಳ್ಳೆಯ ಜಾಗ. ಸದ್ಯಕ್ಕೆ ಇಡೀ ಪ್ರಪಂಚದಿಂದ ನನ್ನನ್ನು ಬೆಚ್ಚಗೆ ಕಾಯುತ್ತಿರುವ ಜಾಗ. ಹಾಲಿನಲ್ಲಿ ಹೆಚ್ಚು ಹೊತ್ತು ಇರಲು ಅಮ್ಮ ಅಪ್ಪ ಬಿಡುವುದಿಲ್ಲ. ಅಮ್ಮ ಪೊರಕೆ ತರುತ್ತಾಳೆ. ಏಕೆ? ತಮ್ಮ ನೋಡಿದರೆ ಹೆದರಿಯಾನೆಂದೇ? ಅಥವಾ ಇವರಿಗೇ ಅಸಹ್ಯವೇ? ಓಹ್! ಅಲ್ಲ ಅಲ್ಲ. ಬಂದವರ ಮುಂದೆ ಮಗನ ಈ ವೇಷ ಪ್ರದರ್ಶನ ಅವಮರ್ಯಾದೆ! ಒಹ್ಹೋ ತಿಳಿಯಿತು. ರೂಮೊಳಗಿನ್ನೂ ತೂರಿಲ್ಲ. ಹಾಲಿನ ಸೋಪಕ್ಕೆ ಒರಗಿ ಕೂತಿರುವಾಗಲೇ ತಲೆಗೆ ದೂರದಿಂದಲೇ ಎಸೆದ ಪೊರಕೆ ಫಟ್ ಎಂದು ಬಡಿಯಿತು. ನನ್ನಮ್ಮ ನನ್ನನ್ನು ರೂಮಿಗೆ ಓಡಿಸುತ್ತಿದ್ದಾಳೆ.
****
ದಿನಗಳು ಉರುಳುತ್ತಿವೆ - ನಾನಿನ್ನು ಲೆಕ್ಕವಿಡುವುದು ನಿಲ್ಲಿಸಿದೆ. ನಾನು ಕಣ್ಣುಬಿಟ್ಟ ಕ್ಷಣದಿಂದ ಸಮಯ ನಿಂತಿದೆ. ನೆನ್ನೆಯಷ್ಟೇ ಆ ಮತಿಹೀನ ಮಾಸ್ಟರಿನತ್ತ ಮಾತಾಡಿದ್ದು ಎಂದೇ ಮನಸ್ಸು ಆರಂಭಿಸಿಕೊಳ್ಳುತ್ತದೆ. ಡಾಕ್ಟರ್ ಮತ್ತೆ ನನ್ನನ್ನು ನೋಡಲು ಬಂದಿದ್ದರು. ಈಗ ನಾನು ರೂಮಿನ ಹೊರಗೆ ತೂರದಾದಷ್ಟು ತಲೆ ಹಿಗ್ಗಿದೆ. ಇದರೆ ಮೇಲೆ ಹಿಗ್ಗಿದರೆ ಒಡೆದೇ ಹೋದೀತೇನೋ. ನನಗೆ ಓಡಾಡಲು ಅಸಾಧ್ಯ. ತಲೆಯ ಭಾರ ಯಾವುದೋ ಒಂದು ಕಡೆಗೆ ದೇಹವನ್ನ ವಾಲಿಸಿ ಬೀಳಿಸುತ್ತದೆ. ನಾನು ನೆಲದ ಮೇಲೆಯೇ ಮಲಗುತ್ತೇನೆ. ಏಳಬೇಕೆಂದಾದಾಗ ಕೈಗಳ ಸಹಾಯದಿಂದ ಕತ್ತನ್ನೆತ್ತಿ ನನಗಾಗಿ ಇರಿಸಿರುವ ಟೀಪಾಯಿಯ ಮೇಲೆ ಕತ್ತನ್ನು ಇರಿಸುತ್ತೇನೆ. ನನ್ನಪ್ಪ ನನಗಾಗಿ ಮಾಡಿದ ಎರಡು ಸಹಾಯಗಳಲ್ಲಿ ಇದೊಂದು. ರೂಮಿನ ಹೊರಗೆ ತೂರಲು ಸಾಧ್ಯವವಿಲ್ಲವೆಂದು ಇಲ್ಲೇ ರೂಮೊಳಗೆ ನನ್ನ ಹಾಸಿಗೆಯ ಪಕ್ಕ ನನಗೊಂದು ಗೋಡೆಗೇ ಅಂಟಿಕೊಂಡ ಹಾಗೆ ಪಾಯೀಖಾನೆ ವ್ಯವಸ್ಥೆ ಇದೆ. ಒಂದು ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ಜನಗಳ ಗುಂಪು ರೂಮಿಗೆ ಬಂದಿತು. ನನಗೆ ಅದಾಗಲೇ ಉಸಿರು ಕಟ್ಟಿ, ಬೆವೆತು ಹೋದ ಭಾಸವಾಗಿತ್ತು. ಕಣ್ಣು ಬಿಟ್ಟು ನೊಡಿದೆ. ಯಾರೋ ತಲೆ ಮೈ ಕಾಲುಗಳನ್ನು ಬಟ್ಟೆಯಿಂದ ಸುತ್ತಿದ್ದರು. ನನ್ನನ್ನು ಮಂಚಕ್ಕೆ ಗಟ್ಟಿಯಾಗಿ ಅಲ್ಲಾಡದ ಹಾಗೆ ಕಟ್ಟಿದ್ದರು. ಆದರೆ ಬಟ್ಟೆಯ ಒಳಗಿಂದ ಬಂದ ಜನರೆಲ್ಲರೂ ಕಂಡರು. ಎಲ್ಲರೂ ನನ್ನ ಬಳಿ ಅಚ್ಚರಿಯಿಂದ ನೋಡಿದವರೇ. ಅಪ್ಪ ಎನೇನೊ ಸನ್ನೆ ಮಾಡಿ ನಗುತ್ತಿದ್ದ. ಒಬ್ಬ ಅಲ್ಲೇ ಬಾಂಡಲಿಯಲ್ಲಿ ಸಿಮೆಂಟು ಕಲಿಸುತ್ತಿದ್ದ. ಉಳಿದವರೆಲ್ಲಾ ಹೊರಟು ಹೋದರು. ಪ್ರಾಯಶಃ ಆಗಲೇ ಈ ಪಾಯೀಖಾನೆ ಸಿದ್ಧವಾಗಿದ್ದಿರಬೋದು. ನೀರಿನ ನೆಲ್ಲಿಯೂ ಉಂಟು. ಒಂದೇ ಕಷ್ಟ, ಅಲ್ಲಿಯವರೆಗೂ ಹೊರಳುವುದು.
ಡಾಕ್ಟರ್ ನಗುತ್ತಾ ತಲೆ ಮುಟ್ಟುತ್ತಿದ್ದರು. ಅದಾಗಲೇ ಅವರ ಸಲಹೆಯನ್ನು ನಾನು ಪಾಲಿಸಲಾರಂಭಿಸಿದ್ದೆ. ಮಾತಿಲ್ಲ, ಆಲೋಚನೆಯೂ ಅಷ್ಟಕ್ಕಷ್ಟೇ. ಡಾಕ್ಟರ್ ಮೊದಲು ಬಂದ ದಿನ ರೂಮಿನ ನನ್ನ ಕಪಾಟಿನಲ್ಲಿ ಪುಸ್ತಕಗಳು ಹಾಗೇ ಇದ್ದವು. ಹಿಂದಿನ ದಿನ ಓದುತ್ತಿದ್ದ ಪುಸ್ತಕವೊಂದು ಕಂಡಿರಲಿಲ್ಲ. ಆಗ ನನಗೆ ಬೇಸರ ಕಳೆಯಲು ಪುಸ್ತಕ ಓದಬಹುದಿತ್ತು. ಅದಾದರೂ ಉಳಿಯಿತಲ್ಲ ಎನ್ನುವ ದೊಡ್ಡ ನೆಮ್ಮದಿ. ಆದರೆ ಮಾರನೆಯ ದಿನ ಬೆಳಿಗ್ಗೆ, ಕಪಾಟೆಲ್ಲಾ ಖಾಲಿ ಖಾಲಿ. ಅರ್ರೇ! ಈಗ ದಿನದೂಡುವುದು ಹೇಗೆ ಎಂಬ ಚಿಂತೆ ಹತ್ತಿತು. ಅದೂ ಸಹ ಅಭ್ಯಾಸವಾಯಿತು, ಒಂಟಿತನ. ರೂಮಿನ ಬಾಗಿಲು ತೆರೆದರೂ ಒಂದೇ, ಮುಚ್ಚಿದರೂ ಒಂದೇ. ನಾನಂತೂ ಆಚೆ ಹೊರಳಲು ಅಸಾಧ್ಯ. ಬೇಸರವೆನಿಸಿದಾಗ, ಹೇಗೋ ಕಷ್ಟ ಪಟ್ಟು ತಲೆ ಹಿಡಿದು ತೆವಳಿ ಕಿಟಕಿಯ ಬಳಿ ತೆರಳುತ್ತೇನೆ. ಕಿಟಕಿ ಕೊಂಚ ಅಗಲಾವಾದ್ದು. ಸರಳುಗಳಿಲ್ಲದಿದ್ದರೆ ನನ್ನ ತಲೆ ಆಚೆ ಹೊಕ್ಕುತ್ತಿತ್ತೋ ಏನೋ. ಕಿಟಕಿಯ ಬೆಂಚಿನ ಮೇಲೆ ತಲೆ ಒರಗಿಸಿ ಹೊರಗೆ ನೋಡುತ್ತಿರುತ್ತೇನೆ. ರಸ್ತೆಯಲ್ಲಿ ಹೋಗುವ ಎಷ್ಟೋ ಜನ ನನ್ನ ತಲೆ ನೋಡಿ ನಗುತ್ತಾರೆ. ಏನೋ ಮಾತನಾಡುತ್ತಾರೆ. ಕೆಲವು ಮಕ್ಕಳು ಕಲ್ಲೆಸೆಯಲು ಯತ್ನಿಸುತ್ತಾರೆ. ಆದರೆ ಕಿಟಕಿ ಕೊಂಚ ಎತ್ತರ ಇರುವುದರಿಂದ ಯಾರೂ ನಿಂತಲ್ಲಿಂದ ಮುಟ್ಟಲಿಕ್ಕೆ ಕಷ್ಟಸಾಧ್ಯ. ಒಂದೆರೆಡು ಬಾರಿ, ಅಥವಾ ಎಷ್ಟು ಬಾರಿಯೋ ತಿಳಿಯದು ಕಲ್ಲು ತಾಕಿದ್ದಿರಬೇಕು. ನನಗೆ ತಿಳಿದಿರಲಿಕ್ಕಿಲ್ಲ. ಆದರೆ ಒಂದು ದಿನ ಯಾರೋ ಅಸಾಧ್ಯ ರೀತಿಯ ನೋವು ಬರುವಂತೆ ಬೆನ್ನಿಗೆ ಬಾರಿಸಿದರು. ಅಪ್ಪ! ಏನೇನೋ ಬೈಯುತ್ತಿದ್ದ. ಕಾಲಲ್ಲಿ ಒದ್ದ. ಅವನ ಹಿಂದೆಯೇ ಒಂದಿಬ್ಬರು ರೂಮೊಳಗೆ ಬಂದರು. ಮುಸಿ ಮುಸಿ ನಗುತ್ತಿದ್ದರು. ಅಪ್ಪ ಉಗಿದ, ಮತ್ತೆ ಹೊಡೆದ. ಹೊರಟು ಹೋದ. ಅವರಿಬ್ಬರೂ ಹತ್ತಿರಬಂದು ಕೈಲಿದ್ದ ಕೋಲಿನಿಂದ ತಲೆಗೆ ಚುಚ್ಚಿದರು. ನನಗೇನೂ ಆದಂತೆ ಅನಿಸಲಿಲ್ಲ. ತಲೆಗೆ ಬಾರಿಸೊದರೋ ಏನೋ, ತಿಳಿಯಲಿಲ್ಲ. ಆದರೆ ಮುಖದ ಮೇಲೆ ಏನೋ ದ್ರವ ಹರಿದಂತಾಯಿತು. ರಕ್ತ! ಅವರ ಬಳಿ ನುಗ್ಗಲೂ ಅಸಾಧ್ಯ. ಒಬ್ಬನಂತೂ ಹತ್ತಿರ ಬಂದು ನನ್ನ ಒಂದು ಕೈಯನ್ನು ತಲೆಯಿಂದ ಸರಿಸಿದ. ತಲೆ ಅತ್ತ ಕಡೆ ಧೊಪ್ಪೆಂದು ವಾಲಿತು. ದೇಹವೂ ಬಿದ್ದಿತು. ಯಾರಾದರೂ ದೂರದಿಂದ ನೋಡಿದ್ದರೆ ನಾನೊಂದು ಗಧೆಯಂತಿದ್ದೆ - ಭಾರ, ದಪ್ಪ ಬುರುಡೆ, ಸಣ್ಣ ಹಿಡಿಕೆ. ಗಧೆಗೆ ತಾನಾಗೆ ಅಪ್ಪಳಿಸುವ ತಾಕತ್ತಿಲ್ಲವಲ್ಲ - ಹಾಗೆಯೇ ನನಗೂ. ಆದರೆ ನನಗೊಂದು ಅಸ್ತ್ರವಿತ್ತು, ಉರುಳುವುದು. ತಲೆ ಸಲೀಸಾಗಿ ಉರುಳುತ್ತಿತ್ತು. ಗಾಬರಿ ಹತ್ತಿದ ಇಬ್ಬರೂ ಓಡಿದರು.
ಡಾಕ್ಟರ್ ತಲೆ ಸವರಿ ತನ್ನ ಕೈಲಿದ್ದ ರಿಪೋರ್ಟ್ ಒಂದನ್ನು ನೀಡಿದ. ಅಕ್ಷರಗಳೆಲ್ಲವೂ ಇರವೆ ಗಾತ್ರ. ಸಣ್ಣ ಸಣ್ಣ. ಒಂದೂ ಕಾಣದು. ಕಷ್ಟ ಪಟ್ಟು ಓದಿದೆ. ತಲೆಯನ್ನು ಹೊಕ್ಕ ಒಂದು ವಿಚಿತ್ರ ಜಾತಿಯ ಕ್ರಿಮಿ ಇದಕ್ಕೆ ಕಾರಣವಂತೆ. ಇದು ಅತೀ ವಿಚಿತ್ರ. ಕೆಲವರ ದೇಹವಷ್ಟೇ ಇದರ ಸಂತಾನೋತ್ಪತ್ತಿಗೆ ಸೂಕ್ತ ಆವಾಸಸ್ಥಾನವಂತೆ. ಅದರ ಸಂಖ್ಯೆ ಹಿಗ್ಗುವಲ್ಲಿ ಪೂರಕವಾಗಿರುವ ದೇಹಗಳೂ ಸಹ ವಿರಳವಂತೆ. ನೂರರಲ್ಲಿ ಒಂದು. ಕೆಲವು ಕೀಟಗಳಲ್ಲಿ ಈ ಕ್ರಿಮಿ ನಿಷ್ಕ್ರಿಯವಾಗಿ ಇರುತ್ತದಂತೆ. ಆ ಕೀಟದ ಕಡಿತವು ಈ ಕ್ರಿಮಿಯನ್ನ ರಕ್ತದ ಮೂಲಕ ವರ್ಗಾಯಿಸುತ್ತದಂತೆ. ಅಕಸ್ಮಾತ್ ವರ್ಗಾವಣೆಗೊಂಡ ದೇಹ ತನಗೆ ಪೂರಕವಾಗಿದ್ದರೆ ಇದ್ದಕ್ಕಿದ್ದ ಹಾಗೆ ದೈತ್ಯವಾಗಿ ಬೆಳೆದು ಲೆಕ್ಕವಿಲ್ಲದಷ್ಟು ಉತ್ಪತ್ತಿಯಾಗುತ್ತವಂತೆ. ಈ ಸಂತಾನೋತ್ಪತ್ತಿಯ ಕ್ರಿಯೆ ಮತ್ತು ಶಕ್ತಿ ಅನಂತವಂತೆ. ಆ ದಿನ ಹಾಸಿಗೆ ಮೇಲಿದ್ದ ಪುಸ್ತಕವನ್ನ ಕೊಂಡೊಯ್ದದ್ದು ಡಾಕ್ಟರು ಎಂದು ತಿಳಿಯಿತು. ಒಳಗಿಂದ ಪುಟಗಳನ್ನು ತಿರುವುತ್ತಾ ಯಾವುದೋ ಒಂದು ಪುಟದಲ್ಲಿ ನಿಲ್ಲಿಸಿದರು. ಸೂಕ್ಷವಾಗಿ ಅವಲೋಕಿಸಿ ನೋಡಿದರೆ ಅಲ್ಲೊಂದಷ್ಟು ಸಣ್ಣ ಸಣ್ಣ ಹುಳುಗಳು. ಆ ಹುಳುಗಳನ್ನ ಬೊಟ್ಟು ಮಾಡಿ ತೋರಿಸುತ್ತಾ, ಈ ರಿಪೋರ್ಟನ್ನೂ ತೋರಿಸಿದಾಗ ನನಗೆ ತಿಳಿಯಿತು, ಅದೇ ಹುಳು ಕಚ್ಚಿದ್ದಿರಬೋದು. ಇದಕ್ಕೆ ಔಷಧಿ ಸ್ಲೇಟಿನಲ್ಲಿ ಬರೆದು ಕೇಳಿದೆ. 'ಸದ್ಯಕ್ಕೆ' ಇಲ್ಲ ಎಂದರು. ನೀನು ಯೋಚಿಸಿದಷ್ಟೂ ನಿನ್ನ ಮೆದುಳಿನ ರಸಾಯನಿಕಗಳ ಉತ್ಪತ್ತಿ ಅದಕ್ಕೆ ಅಮೃತವಿದ್ದಂತೆ ಎಂದು ಸ್ಲೇಟಲ್ಲಿ ಬರೆದು ತೋರಿಸಿ ಮುಸಿಮುಸಿ ನಕ್ಕ ಡಾಕ್ಟರು.
***
ಅದೊಂದು ದಿನ ಅಪ್ಪ ಬಹಳ ಖುಷಿಯಿಂದ ಒಳಗೆ ಬಂದ. ಜೊತೆಗೆ ಒಂದಿಬ್ಬರೂ ಸಹ ಬಂದಿದ್ದರು. ಅವರಿಗೆ ನನ್ನನ್ನು ತೋರಿಸುತ್ತಿದ್ದ ಅನಿಸುತ್ತದೆ. ಬಂದವರು ಕೋಲಿನ ಮೂಲಕ ನನ್ನ ತಲೆಗೆ ಚುಚ್ಚಿದರು. ಆಮೇಲೆ ಹತ್ತಿರ ಬಂದು ಮುಟ್ಟಿದರು. ಸವರಿದರು. ನನ್ನ ಕಣ್ಣುಗಳ ಮೇಲೆ ಕೈ ಆಡಿಸಿದರು. ಕಣ್ಣುಗಳು ಈಗ ನನ್ನ ಅಂಗೈಯಷ್ಟು ದೊಡ್ಡದಾಗಿತ್ತು. ನನ್ನ ತಲೆಯ ಮೇಲೆ ಹತ್ತಿ ಕೂರಲು ಒಬ್ಬ ನೋಡಿದ. ಒಡನೆಯೆ ಅಪ್ಪ ಅವನನ್ನ ಹಿಡಿದೆಳೆದು ಏನೋ ಬೈಯಲಾರಂಭಿಸಿದ. ಒಂದೈದು ನಿಮಿಷವಷ್ಟೇ. ಇಬ್ಬರೂ ಹೊರಟು ಹೋದರು. ಇದಾದ ಬಳಿಕ ಹಲವಾರು ಜನ ರೂಮಿಗೆ ಬರಲಾರಂಭಿಸಿದರು. ಎಲ್ಲರದ್ದೂ ಅದೇ. ಮುಟ್ಟುವುದು. ಸವರುವುದು. ಕೆಲವರು ಮುತ್ತಿಕ್ಕಿದರು. ಇನ್ಕೆಲವರು ನನಗೆ ಏನೇನೋ ಬಣ್ಣ ಹಚ್ಚಿದರು. ಮತ್ತೆ ಕೆಲವರು ಫೋಟೋ ತೆಗೆಸಿಕೊಳ್ಳಲು ಯತ್ನಿಸಿದರು. ಅಪ್ಪ ಒಡನೆಯೆ ಫೋನು ಕಸಿದುಕೊಂಡ ಅವರಿಂದ. ಇದಾದ ಬಳಿಕ ನಿತ್ಯವೂ ನನ್ನ ರೂಮಿನ ಹೊರಗೆ ಒಬ್ಬ ಕೂಡುತ್ತಿದ್ದ. ಬಂದವರನ್ನ ಚೆಕ್ ಮಾಡಿ ಒಳಗೆ ಬಿಡುತ್ತಿದ್ದ. ಅವನ ಕೈಯಲ್ಲಿ ಒಂದು ಕೋಲಿತ್ತು. ಅದು ಬೇಕಾದಲ್ಲಿ ಜನ ಅವನಿಗೆ ಚಿಲ್ಲರೆ ಕಾಸುಕೊಡಬೇಕಿತ್ತು. ನನ್ನ ತಲೆ ಮುಟ್ಟುತ್ತಿದ್ದರು. ಕೋಲಲ್ಲಿ ಚುಚ್ಚುತ್ತಿದ್ದರು.
ಒಂದೊಮ್ಮೆ ಅಪ್ಪ, ತಮ್ಮ ಇಬ್ಬರೂ ರೂಮಿಗೆ ಬಂದು ನನ್ನನ್ನು ಹಿಡಿದು ನಿಲ್ಲಿಸಿದರು. ಆಹ್! ಅಪ್ಪ ನನ್ನನ್ನು ಮುಟ್ಟಿ ಅದೆಷ್ಟು ದಿನಗಳಾಗಿದ್ದವೋ. ಇಬ್ಬರೂ ನನ್ನನ್ನು ಕಿಟಕಿಯ ಬೆಂಚಿಗೆ ತಲೆಯೊರಗಿಸಿ ಕೂರಿಸಿದರು. ಅರ್ರೇ! ಕಿಟಕಿಯ ಸರಳುಗಳು ಇಲ್ಲ. ಸ್ವಚ್ಛಂದವಾದ ಬಯಲಿಗೆ ನನ್ನ ತಲೆ ತೆರೆದುಕೊಂಡಿತು. ಅಬ್ಬಬ್ಬಾ ಎಂಥಾ ತಣ್ಣಗಿನ ಗಾಳಿ. ಎಷ್ಟು ವಿಶಾಲವಾದ ಪ್ರಪಂಚ. ಎಂದೆನ್ನುಕೊಳ್ಳುವಷ್ಟರಲ್ಲೇ ಯಾರೋ ಒಬ್ಬ ನನ್ನ ಮುಖದ ಮುಂದೆ ಬಂದ. ತಲೆ ಸವರುತ್ತಿದ್ದ. ಜನ ಮುತ್ತಿದರು. ಕಿಟಕಿಯ ಕೆಳಗೆ ಅಪ್ಪ ಒಂದು ಕಟ್ಟೆ ಕಟ್ಟಿಸಿದ್ದನೆಂದು ತೋರುತ್ತದೆ. ಅದರ ಮೇಲೆ ನಿಂತರೆ, ಎಲ್ಲರಿಗೂ ನನ್ನ ತಲೆ ಸಿಗುತ್ತಿತ್ತು. ಹಲವರು ಫೋಟೋ ಕ್ಲಿಕ್ಕಿಸಿದರು. ಜನ ಖುಷಿಯಾಗಿದ್ದರು. ಕೆಲವರು ನನ್ನ ಬಾಯ ಬಳಿ ತಿಂಡಿ ತಂದರು. ಅರೆರೆ ಎಂಥಾ ಅದ್ಭುತ ತಿನಿಸುಗಳು. ಎಷ್ಟು ಒಳ್ಳೆಯ ಜನ. ಎಷ್ಟು ಕರುಣಾಮಯಿಗಳು.
ಅಪ್ಪ ಒಂದು ಚೀಟಿ ಬರೆದು ತೋರಿಸಿದ. ದಿನಾ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಾನು ಹೀಗೆಯೇ ಕೂರಬೇಕೆಂದು. ಒಳ್ಳೆ ತಿಂಡಿ, ಊಟಾ ಎಲ್ಲವೂ ದೊರೆಯುತ್ತದೆಂದು. ಜನರೆಲ್ಲರೂ ನನ್ನನ್ನ, ನನ್ನ ತಲೆಯನ್ನ ಮುದ್ದಾಡುತ್ತಾರೆಂದು.
ಅದೇಕೋ ಅಂದು ಮನಸ್ಸುಭಾರವಾಗಿತ್ತು. ದೇಹವೂ ಸಹ? ಹಿಂದಿನ ರಾತ್ರಿ ಕನಸೋ, ಅಥವಾ ವಾಸ್ತವದ ಚಿಂತೆಯೋ, ನನ್ನ ತಲೆಹೊಡೆದು ಎರಡು ಹೋಳಾಗಿತ್ತು. ಒಳಗಿಂದ ಹರಿದ ಕ್ರಿಮಿಗಳು ರೂಮಲ್ಲೆಲ್ಲಾ ತುಂಬಿದ್ದವು. ರೂಮ ಹೊರಗೂ ಕಿಟಕಿಯಾಚೆಗೆ ಹರಿಯುತ್ತಿದ್ದವು. ರೂಮೊಳಗೆ ಬಂದ ಅಪ್ಪನ ಮೈಮೇಲೂ ಬೀದಿಯಾಚೆ ಹೋಗುತ್ತಿದ್ದ ಜನಗಳ ಮೆಲೂ ಹರಿದವೂ. ಯಾರಿಗೂ ಅವುಗಳ ಪ್ರಜ್ಞೆಯೂ ಇಲ್ಲ. ಏನೂ ಬದಲಾವಣೆಯಿಲ್ಲ. ಗಾಳಿಯಲ್ಲಿ ತೂರಿ ತೂರಿ ಎತ್ತಲೋ ಎಲ್ಲವೂ ಮಾಯವಾಗಿ ಹೋದವು. ಬೆಳಗ್ಗೆ ರೂಮೊಳಗೆ ಬಂದ ಅಪ್ಪ ಎನೋ ಬೊಗಳುತ್ತಿದ್ದ. ಸ್ಲೇಟಲ್ಲೂ ಸಹ ಬರೆದು ತೋರಿದ. ಸತ್ಯವಾಗಿಯೂ ಅದು ನನಗೆ ತಿಳಿಯಲಿಲ್ಲ. ಈಗ ಅಕ್ಷರಗಳೆಲ್ಲಾ ಮಣ್ಣಿನ ಕಣದಷ್ಟು ಆಗಿವೆ. ಏನೂ ಮಾಡದೇ ಸುಮ್ಮನೇ ಇದ್ದೆ. ಅದೆಷ್ಟು ಸಿಟ್ಟು ಬಂದಿತ್ತೊ, ದೊಡ್ಡ ಡೊಣ್ಣೆಯಿಂದ ತಲೆಯ ಮೇಲೆ ನಾಲ್ಕು ಬಡಿದನೆಂದು ತೋರ್ತದೆ. ದೇಹದ ಭಾರವೆಲ್ಲಾ ಎರಡು ಕಡೆ ವಾಲಿದಂತಾಯಿತು. ಎರಡೂ ಕಣ್ಣುಗಳು ಎರಡೂ ಬದಿಯ ನೆಲಕ್ಕೆ ಹೊರಳಿದಂತಾಯ್ತು.
No comments:
Post a Comment