ಆಕೆಯ ಹೆಸರು ರತಿಯಾದರೇನು? ಶಾಂತಿ ಹೆಸರಿನವಳನ್ನ ಕೂಗಿ ಕೂಗಿಯಾದರೂ ಶಾಂತವಾಗ್ತಾಳೇನೋ ಎಂಬ ದೂರಾಲೋಚನೆಯಲ್ಲೇ ಆ ಹೆಸರಿಟ್ಟರಬೋದು. ಹಾಗೆಯೇ ಸದಾನಂದ, ಸುಖೇಶ, ಸುಭಾಷಿಣಿ. ಈಕೆ ಕುಳ್ಳಗೆ, ತೆಳ್ಳಗೆ, ಕಪ್ಪಗೆ ಇದ್ದಳು. ಭಾಗಶಃ ಹಲ್ಲುಗಳೆಲ್ಲಾ ಹುಳುಕು. ಯಾವಾಗಲೂ ನಗುತ್ತಲೇ ಇರುತ್ತಿದ್ದಳು. ಕರೆದರೂ ನಗು, ಕೂಡು ಎಂದರೂ ನಗು, ಹೋಗು ಎಂದರೂ ನಗು. ಅದು ಮುಜುಗರದಿಂದಲೋ ಅಥವಾ ನಾಚಿಕೆಯಿಂದಲೋ. ಹಾಗಾಗಿ ಹಲ್ಲಿನ ಹುಳುಕು ಎದ್ದು ಕಾಣುತ್ತಿದ್ದವು. ಹಾಗಂತ ಆಕೆ ಸಂತೋಷವಾಗಿದ್ದಳು ಎಂದೂ ಅಲ್ಲ. ಸಂತೃಪ್ತಳೂ ಎಂದೂ ಅಲ್ಲ. ತಿಂಗಳಿಗೆ ಕೇವಲ ಒಂದೈದು ಆರು ಸಾವಿರ ರೂಗಳಿಗೆ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಅಟೆಂಡರು. ಇಬ್ಬರ ಮಕ್ಕಳ ತಾಯಿ. ಕೆಲಸ ಅಚ್ಚುಕಟ್ಟು. ಅಟೆಂಡರ್ ಎಂದರೆ ಹೇಗಿರಬೇಕು ಅನ್ನೋದಕ್ಕೆ ಯಾವುದೇ ಪಾಲಿಸಿ ಬರೆಯದೇ ಕೇವಲ 'ರತಿ'ಯಹಾಗೆ ಅನಬೋದಷ್ಟೇ. ಹೇಳಿದ ಯಾವ ಕೆಲಸವನ್ನೂ ಚಕಾರೆತ್ತದೆ ಮಾಡುತ್ತಿದ್ದಳು. ಹೊಸತದ್ದು ಕಲಿಯಿತ್ತಿದ್ದಳು.
Friday, September 4, 2026
Saturday, August 15, 2026
Tuesday, June 16, 2026
ಸ್ವಾತಂತ್ರ ಸಂಭ್ರಮ (2021ರ ಗೀಚು)
ದೇಶದೆಲ್ಲೆಡೆ ಸ್ವಾತಂತ್ರೋತ್ಸವದ ಸಂಭ್ರಮ. ಎಲ್ಲೆಡೆ? ಹೌದೆ? ಬೆಳ್ಳಂಬೆಳಗ್ಗೆ ಎದ್ದು, ತಣ್ಣೀರು ಹೊಯ್ದುಕೊಂಡು, ಕಾಲೇಜಿಗೆ ಹೊರಟಿದ್ದ ಇವನ ಮನಸ್ಸಿನೊಳಗೂ? ಏನಿದು ಸಂಭ್ರಮ? ಏತಕ್ಕಾಗಿ? ಪ್ರಾಯಶಃ ವರುಷ ಕಳೆದಂತೆ, ಇವನಲ್ಲಿ ಸಂಭ್ರಮ ಕುಗ್ಗಿದ್ದು Inverse proportionality ಗೆ ಒಂದು ಉದಾಹರಣೆ. ವಯಸ್ಸು ಚಿಕ್ಕದಿದ್ದಾಗ ಸಂಭ್ರಮಕ್ಕೆ ಕಾರಣವೇ ಬೇಕಿರಲಿಲ್ಲ. ಜನ ಜೌಗುಳಿ, ಹೊಸ ಜಾಗ, ಪೆರೇಡ್, ವಿವಿಧ ಕಾರ್ಯಕ್ರಮಗಳು, ಸಿಹಿತಿಂಡಿಗಳು! ಆಗಸ್ಟ್ 15ರ ಸಂಭ್ರಮಕ್ಕೆ ಇನ್ನಷ್ಟರ ಅಗತ್ಯವಿರಲಿಲ್ಲ. ನಾಲ್ಕೈದು ಜನ ನಾಲ್ಕೈದು ಮಾಹಿತಿಗಳು. ತಮಗೆ ತೋಚಿದಂತೆ ತಿರುಚಿ, ತುರುಕಿ ಹೋದರೆ ಅವರ ಸಂಭ್ರಮವೂ ತೀರಿದಂತೆ.
Tuesday, March 10, 2026
ವಿಕೃತಿ
ಗಾಢವಾದ ನಿದ್ದೆ, ಏಳುವ ಚೂರು ಮನಸ್ಸಿಲ್ಲದ ಹಾಗೆ. ಒಂಚೂರು ನೆನಪಿದೆ - ಓದುತ್ತಿದ್ದ ಪುಸ್ತಕ ಮಗಚಿ ಪುಟಗಳ ಮೇಲೆ ಮಲಗಿಸಿಟ್ಟದ್ದು. ಅದು ಎಡಗಡೆಯೋ? ಬಲಗಡೆಯೋ? ಹೀಗೆ ಯೋಚಿಸಲು ನಾನು ಹಾಸಿಗೆಯ ಮಧ್ಯದಲ್ಲಿ ಮಲಗಿದ್ದೇನೆನ್ನೋದು ಖಾತ್ರಿ ಇರಬೇಕಲ್ಲ. 'ಚಳ್' ಎಂದು ನರದೊಳಗಿಂದ ಹರಿದ ನೋವೊಂದು 'ಅಮ್ಮಾ' ಎಂದು ಕೂಗಿಸಿತು. ಯಾಕಾದರೂ ಕೂಗಿದೆನೋ. 'ಅಮ್ಮಾ' ಹೊರಗೆ ಪಸರಿಸಿತೋ ತಿಳಿಯದು. ತಲೆಯ ಒಳಗೆಲ್ಲಾ ಧಿಮ್ಮೆನಿಸಿವ ಹಾಗೆ ಪ್ರತಿಧ್ವನಿಸಿತು. ತಲೆ ತಿರುಗಿಸಲು ಮತ್ತೊಮ್ಮೆ ಪ್ರಯತ್ನಿಸಿದೆ. ಮತ್ತೊಮ್ಮೆ 'ಅಮ್ಮಾ...' - ಅಂತರ್ ಪ್ರತಿಧ್ವನಿ. ಈ ಪ್ರತಿಧ್ವನಿಯ ನೋವಿಗೇ ಮತ್ತೊಮ್ಮೆ ಕೂಗಬೇಕಿನಿಸಿದರೂ ಕಷ್ಟ ಪಟ್ಟು ಸುಮ್ಮನಾದೆ. ಏನಾಯಿತು ಇದ್ದಕ್ಕಿದ್ದ ಹಾಗೆ ನನಗೆ? ಎತ್ತ ಕಡೆ ತಲೆ ತಿರುಗಿಸಿದರೂ ನರವೆಳೆದು ಅಸಾಧ್ಯ ನೋವು. ಕೂಗಿದರೂ ಒಬ್ಬರೂ ಪತ್ತೆಯಿಲ್ಲ. ಕೈ ಕಾಲು ಆಡಿಸಿದಾಗ ನರವೆಳೆದರೆ ಎಂದು ಅನಿಸಿದರೂ, ಒಮ್ಮೆ ಪ್ರಯತ್ನಿಸಿದೆ. ದೇವರ ದಯೆ. ಅವು ಸರಿಯೇ ಇದ್ದವು. ಕತ್ತಿಗೆ ಕೈ ಹಾಕಿ ನಾಜೂಕಾಗಿ ತಿರುಗಿಸೋಣವೇ ಎಂದು ಎರಡೂ ಕಡೆಗಳಿಂದ ಕತ್ತು ಹಿಡಿದೆ. ಚೂರೇಚೂರು ಅಲಗಿದ್ದಕ್ಕೆ ಮತ್ತೊಮ್ಮೆ ಅಂತರ್ ಪ್ರತಿಧ್ವನಿ ಹೊಮ್ಮಿತು. ಇಷ್ಟು ಕೂಗಿದರೂ ಯಾರೂ ಸಹ ಬರಲಿಲ್ಲವಲ್ಲ? ಸಮಯ ಎಷ್ಟಾಗಿರಬಹುದು? ರೂಮಿನೊಳಗಂತೂ ಬೆಳಕು ಪ್ರಜ್ವಲಿಸುತ್ತಿದೆ. ಅಯ್ಯೋ! ಹತ್ತರ ಮೇಲಾಗಿರಬಹುದೇ? ಹಾಗೇನಾದರೂ ಆಗಿದ್ದರೆ ಇಷ್ಟೊರಳಗಾಗಲೇ ಅಮ್ಮ ನನ್ನನ್ನ ಎಬ್ಬಿಸಬೇಕಿತ್ತಲ್ಲ? ಅರ್ರೇ! ಚಿಲಕ ಹಾಕಿಬಿಟ್ಟೆನೆ. ರೂಮಿನಬಾಗಿಲು ತಲೆಯ ಹಿಂದೆ ಬಲಬದಿಯಲ್ಲಿ ಇದೆ. ತಿರುಗಲಂತೂ ಅಸಾಧ್ಯ. ಅಮ್ಮ ಸಾಕಷ್ಟು ಬಾರಿ ಬಡಿದೂ ಬಡಿದೂ ಗಾಬರಿಯಾಗಿರಬಹುದೇ?
