Friday, September 4, 2026

ರತಿ

ಆಕೆಯ ಹೆಸರು ರತಿಯಾದರೇನು? ಶಾಂತಿ ಹೆಸರಿನವಳನ್ನ ಕೂಗಿ ಕೂಗಿಯಾದರೂ ಶಾಂತವಾಗ್ತಾಳೇನೋ ಎಂಬ ದೂರಾಲೋಚನೆಯಲ್ಲೇ ಆ ಹೆಸರಿಟ್ಟರಬೋದು. ಹಾಗೆಯೇ ಸದಾನಂದ, ಸುಖೇಶ, ಸುಭಾಷಿಣಿ. ಈಕೆ ಕುಳ್ಳಗೆ, ತೆಳ್ಳಗೆ, ಕಪ್ಪಗೆ ಇದ್ದಳು. ಭಾಗಶಃ ಹಲ್ಲುಗಳೆಲ್ಲಾ ಹುಳುಕು.  ಯಾವಾಗಲೂ ನಗುತ್ತಲೇ ಇರುತ್ತಿದ್ದಳು. ಕರೆದರೂ ನಗು, ಕೂಡು ಎಂದರೂ ನಗು, ಹೋಗು ಎಂದರೂ ನಗು. ಅದು ಮುಜುಗರದಿಂದಲೋ ಅಥವಾ ನಾಚಿಕೆಯಿಂದಲೋ. ಹಾಗಾಗಿ ಹಲ್ಲಿನ ಹುಳುಕು ಎದ್ದು ಕಾಣುತ್ತಿದ್ದವು‌. ಹಾಗಂತ ಆಕೆ ಸಂತೋಷವಾಗಿದ್ದಳು ಎಂದೂ ಅಲ್ಲ. ಸಂತೃಪ್ತಳೂ ಎಂದೂ ಅಲ್ಲ.  ತಿಂಗಳಿಗೆ ಕೇವಲ ಒಂದೈದು ಆರು ಸಾವಿರ ರೂಗಳಿಗೆ  ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಅಟೆಂಡರು. ಇಬ್ಬರ ಮಕ್ಕಳ ತಾಯಿ. ಕೆಲಸ ಅಚ್ಚುಕಟ್ಟು. ಅಟೆಂಡರ್ ಎಂದರೆ ಹೇಗಿರಬೇಕು ಅನ್ನೋದಕ್ಕೆ ಯಾವುದೇ ಪಾಲಿಸಿ ಬರೆಯದೇ ಕೇವಲ 'ರತಿ'ಯಹಾಗೆ ಅನಬೋದಷ್ಟೇ.  ಹೇಳಿದ ಯಾವ ಕೆಲಸವನ್ನೂ ಚಕಾರೆತ್ತದೆ ಮಾಡುತ್ತಿದ್ದಳು. ಹೊಸತದ್ದು ಕಲಿಯಿತ್ತಿದ್ದಳು.

ರತಿಗೆ ಇಬ್ಬರು ಮಕ್ಕಳು. ದೊಡ್ಡ ಮಗನನ್ನ ಆಕೆಯ ಅಕ್ಕ ದತ್ತು ಪಡೆದಿದ್ದಳು. ಅದು ಅಧಿಕೃತ ಪ್ರಕ್ರಿಯೆಯಲ್ಲ. ನಂಬಿಕೆಯ ಒಪ್ಪಂದವಷ್ಟೇ. ತನ್ನ ದೊಡ್ಡ ಮಗನನ್ನ ಅಕ್ಕಳಿಗೆ ಬಿಟ್ಟುಕೊಟ್ಟಿದ್ದಳು. ಹಾಗಂತ ಮಗನೇನು ದೊಡ್ಡಮ್ಮನನ್ನ ಅಮ್ಮ ಅಂತೇನೂ ಕರಿಯುತ್ತಿರಲಿಲ್ಲ. ರತಿಯನ್ನೇ ಅಮ್ಮ ಅನ್ನುತ್ತಿದ್ದದ್ದು‌. ಮತ್ತೆ ಈ‌ 'ದತ್ತು'ವಿನ ಅರ್ಥವೇನು? ಯಾರಿಗೂ ತಿಳಿಯದು. ಮಕ್ಕಳ ಮಾತಿನ ಆಟದಂತೆ ಇದ್ದಿರಬೋದು. ಅಕ್ಕಳಿಗೆ ಮಕ್ಕಳಿರಲಿಲ್ಲ. ಹಾಗಾಗಿಯೂ ಈ ಮಾತು-ಕಥೆಗಳಿರಬಹುದು. ಅಥವಾ ಅದು ಜವಾಬ್ದಾರಿಯ ವರ್ಗಾವಣೆಯೂ ಇರಬಹುದು‌.  ಇವರಿಬ್ಬರಿಗೂ ಇನ್ನೊಬ್ಬ ಅಕ್ಕಳಿದ್ದಳು. ಅವಳಿಗೆ ಮದುವೆಯಾಗಿರಲಿಲ್ಲ. ಈ‌ ಮೂವರೂ ಸಹ ಒಂದೇ ಮನೆಯಲ್ಲಿ ಅವರಮ್ಮನೊಟ್ಟಿಗೆ ಇದ್ದರು. ಅಪ್ಪ ಇರಲಿಲ್ಲ. ಮನೆಗೆ ಗಂಡು ದಿಕ್ಕೂ ಸಹ ಇಲ್ಲ - ರತಿಯ ಎರಡು ಗಂಡು ಮಕ್ಕಳನ್ನು ಬಿಟ್ಟು. ರತಿ ಹಾಗೂ ಅವಳ ಅಕ್ಕ ಗಂಡಂದಿರೊಟ್ಟಿಗೆ ಇರಲಿಲ್ಲ. ಅಕ್ಕಳೂ ಸಹ ರತಿಯ ಕೆಲಸದ ಜಾಗದಲ್ಲೇ ಮತ್ತೊಬ್ಬ ಅಟೆಂಡರ್. 

*****

ರತಿ ಮೂಗಿಯೇನಲ್ಲ. ಒಮ್ಮೆ ಕೆದಕಿದರೆ ಸಾಕು ಎದುರಿನವರೇ ಸಾಕು ಎನಿಸುವಷ್ಟು ಮಾತು ಹೃದಯದಲ್ಲಡಗಿರುತ್ತಿತ್ತು‌. ಧುಮ್ಮಿಕ್ಕಿ ಹರಿಯುತ್ತಿತ್ತು. ಆಕೆಯೇ ಕೊನೆಯ ಮಗಳು. ಇಬ್ಬರೋ ಮೂವರೋ ಅಣ್ಣಂದಿರು. ಎಲ್ಲರಿಗೂ ಮದುವೆಯಾಗಿತ್ತು, ಮಕ್ಕಳೂ ಇದ್ದವೂ. ಅವರದ್ದೆಲ್ಲಾ ಬೇರೆಯ ಸಂಸಾರ - ಸ್ವಂತ ಮನೆಗಳು. ಕೆಲಸಗಳೇನೂ ಅಂಥಾ ಹೇಳಿಕೊಳ್ಳುವಂಥದ್ದೇನಲ್ಲವಾದರೂ 'ಅದ್ಹೇಗೆ ಅಟ್ಟೊಂದು ಹಣ ಮಾಡ್ಕಂಡ್ರೋ' ಅನ್ನೋದು ರತಿಯ ಉದ್ಗಾರವೇ‌. ಅಕ್ಕ ತಂಗಿ ಇಬ್ಬರೂ ಗಂಡ ಬಿಟ್ಟೋರು ಅಂತ ಎಲ್ಲರೂ ಹೇಳ್ತಿದ್ದರೇ ವಿನಾ - 'ಹೆಂಡ್ರನ್ನ ಸರಿಯಾಗಿ ನಡಸ್ಕೊಳದ್ದೆ ಬೇಡ ಅಂತ ಬುಟ್ಬುಟ್ರು' ಅಂತ ಒಮ್ಮೆಯೂ ಹೇಳಲ್ವೇ ಯಾರೂ ಅನ್ನೋದು ರತಿಯ ಬಾಧೆ‌. ರತಿ ಅಮ್ಮನ ಮುದ್ದಿನ ಮಗಳು. ಗಂಡ, ಅಣ್ಣಂದಿರೆಲ್ಲಾ ಕೈಕೊಟ್ಟಾಗ 'ನಾ ಇರೋಗಂಟ ಇವ್ಳನ್ನ ಜ್ವಾಪಾನ ಮಾಡ್ತೀನಿ' ಅಂತ ಆಕೆಯ ಅಮ್ಮಳೇ ತನ್ನೊಟ್ಟಿಗೇ ಅವಳನ್ನ ಇಟುಕೊಂಡಿದ್ದಳು. ರತಿಯ ಮಕ್ಕಳು ಕಾನ್ವೆಂಟಿನಲ್ಲೀ ಓದುತ್ತಿದ್ದರು. ಅದಕ್ಕೆ ಹಣ ಹೊಂದಿಸುವುದೂ ಆಕೆಯ ಕಥಾಮಾಲಿಕೆಯ ದೊಡ್ಡ ಭಾಗಗಳೇ. ಅಣ್ಣಂದಿರೆಲ್ಲಾ ಒಳ್ಳೆಯೋರೇ - ಮದುವೆಯಾದ್ಮೇಲೇ ದಾರಿ ತಪ್ಪಿದ್ದು ಅನ್ನೋದು ಗಂಡಸರ ಮೇಲಿನ ಹೊಸತಾದ ಆಪಾದನೆಯೇನಲ್ಲ. ರತಿಯ ಮದುವೆಯ ಪ್ರಸಂಗವೇ ಒಂದು ದೊಡ್ಡ ಸ್ವಾರಸ್ಯ‌. ರತಿಗೆ ಗಂಡೇನು ಹುಡುಕುತ್ತಿರಲಿಲ್ಲ. ಆಕೆಯ ಅಣ್ಣನ ಸ್ನೇಹಿತ ಒಬ್ಬ ಹೆಣ್ಣಿಗಾಗಿ ಹುಡುಕುತ್ತಿದ್ದ. ಆತ ತಾನೇ ಬೇಕಿದ್ದರೆ ಹಣ ಕೊಡ್ತೇನೆ ಒಳ್ಳೆಯ ಹೆಣ್ಣು ಹುಡುಕಿದರೆ ಅಂತ ಹೇಳಿದ್ದೇ ತನ್ನ ಅಣ್ಣ ಹಿಂದೂ ಮುಂದೂ ನೋಡದೇ ದುಡ್ಡಿಗಾಗಿ ತನ್ನನ್ನ ಆತನಿಗೆ ಕಟ್ಟಿದ. ಆತನಿಗೆ ಹೆಣ್ಣು ಬೇಕಿತ್ತು, ಹೆಂಡತಿಯಲ್ಲ. ಆತನ ಕುಡಿತ ಹೊಡೆತ ತಾಳಲಾಗದೆ ಮನೆ ಬಿಟ್ಟು ಹೋಗ್ತೇನೆ ಅಂತ ಹೇಳುವ ಮಟ್ಟಿಗೆ ಸೌಮ್ಯ ಸ್ವಭಾವದ ರತಿ ಬದಲಾಗಿದ್ದಳು. ಗಂಡನನ್ನ ಬಿಟ್ಟು ಬಂದ ಮೇಲೆ ಒಂದೆರೆಡು ಸಂಧಾನಗಳೂ ನಡೆದು ಮತ್ತೆ ಗಂಡ ಬದಲಾಗಿಯಾನು ಅಂತ ಆತನೊಟ್ಟಿಗೆ ಹೋಗಿದ್ದರೂ, ಪುನಃ ತಾಳಲಾಗದೇ ಇನ್ನೆಂದೂ ಹೋಗಲಾರೆ ಎಂದು ನಿರ್ಧರಿಸಿದ್ದಳು. ಇಂದಿಗೂ ಮಕ್ಕಳು ಎಲ್ಲಿ ಓದ್ತಿದ್ದಾರೆ ಹೋಗಲಿ ಹೇಗಿದ್ದಾರೆ ಅಂತಲೂ ನೋಡೋದಿಕ್ಕೆ ಬಂದೇ ಇಲ್ಲ ಎಂದು ಕೆದಕಿದಾಗ ಗೋಳಿಡುತ್ತಾಳೆ. 

*****

ರತಿಯ ಅಮ್ಮನಿಗೆ ಒಂದು ವರ್ಷದಿಂದ ಆರೋಗ್ಯ ಸರಿಯಿರಲಿಲ್ಲ. ಹಾಸಿಗೆ ಹಿಡಿದಿದ್ದಳು‌. ಎಲ್ಲವೂ ಹಾಸಿಗೆಯಲ್ಲೆ‌. ಆಗಾಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿಯೂ ಒದಗುತ್ತಿತ್ತು‌. ಪಾಳಿಯಲ್ಲಿ ಈ ಇಬ್ಬರು ಅಕ್ಕ - ತಂಗಿಯರೇ ಕೆಲಸ ವಹಿಸಿಕೊಳ್ಳಬೇಕಿತ್ತು. ದೊಡ್ಡಾಕೆ ಈ ಜವಾಬ್ದಾರಿಗಳನ್ನ ಅಷ್ಟಾಗಿ ಹೊರುತ್ತಿರಲಿಲ್ಲ‌. ಇದರ ಜೊತೆಗೆ ರತಿಯ ಎರಡನೆಯ ಮಗನಿಗೂ ಮಾನಸಿಕ ಸಮಸ್ಯೆ ಇದೆಯೆಂದು ರತಿ ತಲೆಕೆಡಿಸಿಕೊಂಡಿದ್ದಳು. ತನ್ನಷ್ಟಕ್ಕೇ ತಾನೇ ಮಾತಾಡಿಕೊಳ್ಳುತ್ತಾನೆ, ನೆನಪಿನ ಶಕ್ತಿಯೂ ಕುಂದುತ್ತಿದೆ ಎಂದು ರತಿ ಕಲ್ಪಿಸಿ ಭಯಗೊಂಡಿದ್ದಳು. ಹಾಗಾಗಿ ಕೆಲಸಕ್ಕೆ ಆಗಾಗ್ಗೆ ರಜೆ ಹಾಕಲೇಬೇಕಾದ ಅನಿವಾರ್ಯತೆ ಒದಗಿ ಬರುತ್ತಿತ್ತು‌. 

ರತಿಯ ಅಮ್ಮ ಹೆಚ್ಚು ತೊಂದರೆ ಕೊಡಲಿಲ್ಲ. ಒಂದು ವರ್ಷ ಕಳೆದು ಒಂದೆರೆಡು ತಿಂಗಳುಗಳಷ್ಟೇ! ಅಮ್ಮ ತೀರಿಕೊಂಡದ್ದರಿಂದ ಮೂರು ದಿನಗಳ ರಜೆ ಕೋರಿ ಫೋನು ಮಾಡಿದ್ದಳು. ಶವವನ್ನು ನೋಡಲು ಹೋದಾಗ ರತಿ ಅಳುತ್ತಿರಲಿಲ್ಲ. ಸುಮ್ಮನಿದ್ದಳು. ಅದಾಗಲೇ ಅತ್ತು  ಮುಗಿಸಿದ್ದಳೋ ಏನೋ.  ಒಂದು ವರ್ಷದ ನಿತ್ರಾಣ ಸೇವೆ ಆಕೆಯನ್ನ ಸುಸ್ತಾಗಿಸಿದ್ದಂತೂ ಹೌದು. ಆ ಸುಸ್ತಿಗೆ ಫಲವಿಲ್ಲವೇ ಎಂದು ಗೋಳಿಟ್ಟಿದ್ದಳಂತೆ. ಜೊತೆಗೆ ಅಮ್ಮನ ಮುದ್ದಿನ ಮಗಳೂ ಹೌದು. ಈಗ ಕೊಂಚ ಭಯವೂ ಆವರಿಸಿದ್ದರಬೋದು‌. ಹಾಗಾಗಿ ಕೊಂಚ ಮೌನಿಯಾಗಿದ್ದಳು. ಮೂರು ದಿವಸಗಳು ಕಳೆದವು ಆದರೆ ರತಿಯ ರಜೆ ಮತ್ತೂ ಮುಂದುವರೆಯಿತು. ರತಿ ಹೀಗಲ್ಲವಲ್ಲ‌ ಎಂದು ಆಕೆಯ ಅಕ್ಕಳನ್ನು ವಿಚಾರಿಸಲು ನೋಡಿದಾಗ, ಆಕೆಯೂ ರಜ. ಪ್ರಾಯಶಃ ಮನೆಯಲ್ಲೇನೋ ಅನಿರೀಕ್ಷಿತ ಘಟನೆ ನಡೆದಿರಬೋದು ಎಂದು ಊಹಿಸಲಾದರೂ, ಯಾವುದೇ ಘಟನೆ ನಡೆಯಲಿ ಆಕೆ ಹೇಳದೆ ರಜೆ ಹಾಕಿದವಳಲ್ಲ. ಪ್ರಾಯಶಃ ಅಣ್ಣಂದಿರೊಟ್ಟಿಗೆ ಜಗಳವಾಗಿದ್ದಿರಬೋದೇ? ಎಂದೇನೇ ಊಹಿಸಿದ್ದರೂ, ನಿಜ ತಿಳಿಯಲು ರತಿಯ ಮನೆಯ ಬಳಿಯೇ ಇರುವ ಮತ್ತೊಂದು ಅಟೆಂಡರನ್ನು ಕೇಳಿಲಾಯಿತು. 'ಅರೆರೆ ವಿಷಯ ತಿಳೀಲಿಲ್ವಾ' ಅಂತ ಆಕೆ ಉದ್ಗರಿಸಿದ್ದು ಕೇಳಿ ರತಿಗೇನಾದರೂ ಆಗಬಾರದ್ದು ಆಗಿಹೋಯಿತೇ? ಎಂದೆನಿಸಿದಂತೂ ಹೌದು. ಅವಳ ಅಮ್ಮ ತೀರಿಕೊಂಡಾಗ ಆಕೆಯ ಮೌನ ಬಹಳ ಗಂಭೀರವಾಗಿತ್ತು. ಅಮ್ಮ ಇಲ್ಲದ ಭಯದಲ್ಲಿ ಏನಾದರೂ? 

*******

ಅದೇ ರೀತಿಯೇ ಆಗಿತ್ತು. ರತಿ ಕಣ್ಣು ಬಿಟ್ಟು ನೋಡಿದಾಗ ವಿಚಿತ್ರ ಪ್ರಪಂಚದಂತೆ ಅನಿಸಿತಂತೆ. ಛಳಿ. ಮೈಮೇಲೆ ಬಟ್ಟೆ ಇದೆಯೇ ಇಲ್ಲವೇ ಎನ್ನುವಷ್ಟು ಹಗುರ. ಒಮ್ಮೆ ಕೈ ಎತ್ತಿ ಮುಟ್ಟಿ ನೋಡೋಣ ಎಂದುಕೊಂಡರೆ ಕೈಗೇನೋ ನಳಿಕೆ ಚುಚ್ಚಿದ್ದರಂತೆ. ರತಿ ಐ.ಸಿ.ಯೂ ಸೇರಿದ್ದಳು. ಮೂರ್ನಾಲ್ಕು ದಿನಗಳ ಕಾಲ ಅಲ್ಲಿಯೇ ಇದ್ದಳು. ತಾನು ಬದುಕಿದ್ದೇ ಪವಾಡ ಎನ್ನುವುದು ಆಕೆಯ ಅಭಿಪ್ರಾಯ.‌ ರತಿಯ ಊಹೆಯಂತೆಯೇ  ಅಮ್ಮ ಹೋದ ದಿವಸವೇ ಅಣ್ಣಂದಿರು ಈ ಮೂರು ಅಕ್ಕ ತಂಗಿಯಂದರಿಗೆ ಸೂಚನೆ ನೀಡಿದ್ದರಂತೆ - ಮನೆ ಖಾಲಿ ಮಾಡಿ ಹೊಸ‌ ಮನೆ ಹುಡುಕಲು. ಆ ಮನೆ ಗಂಡು ಮಕ್ಕಳಿಗೆ, ಉಳಿದಂತೆ ಹತ್ತು ಕುಂಟೆ ತೋಟ ಹೆಣ್ಣು ಮಕ್ಕಳಿಗೆ ಅಂತ ಅಮ್ಮ ಬರೆಸಿದ್ದಳು. ಇರೋ ಸ್ವಂತ ಮನೆ ಬಿಟ್ಟು ಈಗ ಖರ್ಚು ಹಾಕಿಕೊಂಡು ಬಾಡಿಗೆ ಮನೆ ಹುಡುಕೋದೇಕೆ ಎಂದು ಪ್ರಶ್ನಿಸಿದಾಗ ಅಣ್ಣ ಬೈದನಂತೆ - ಏನೇ ಆದರೂ ಗಂಡನ ಮನೇನೆ ನಿನ್ನ ಮನೆ. ಕಷ್ಟವೋ ಸುಖವೋ ಅಲ್ಲೇ ಇರ್ಬೇಕು. ಇರಾಕ್ಕಾಗಲಿಲ್ಲ‌ ಅಂದ್ರೆ ನನ್ನ ತಪ್ಪಲ್ಲ. ಬಾಡಿಗೆ ಕೊಟ್ಕಂಡು ಬಾಡಿಗೆ ಮನೇಲಿ ಇರ್ಬೋದು. ನಿಮ್ಮ ಅತ್ತಿಗೆಯಂದರಿಗೆ ಗಂಡನ ಮೂಲ ಮನೆ ಅಂತ ಒಂದು ಬೇಡವೇ?  ಅಮ್ಮ ಹೋದದಕ್ಕೆ ದುಃಖ ಈಗ ಹೆಚ್ಚು ಉಮ್ಮಳಿಸಿ ಬಂದಿತಂತೆ. ಮತ್ತೊಬ್ಬ ಅಣ್ಣ ಬಂದು ಕೇಳಿದನಂತೆ - ಆ ತ್ಟಾಟ ಇಟ್ಕಂಡ ಏನ್ ಗೇಯಕ್ ಆದಾತು ನಿಂಗೆ. ಅದೂ ಅಲ್ದೆ ನೀ ಕೊನೆಯೋಳು ಅಂತ ನಿಂಗೆ ಎರಡು ಕುಂಟೆ ಸಿಕ್ಕಾತು ಅಷ್ಟೆ. ಅದ್ಯಾಕೆ ನಿಂಗೆ. ನನ್ಗೆ ಕೊಟ್ಬುಡು. ಎಷ್ಟೋ ಅಷ್ಟು‌ ನಿಂಗೆ ಬೇಕಾಗೋ ಅಷ್ಟು ದುಡ್ಡು ಕೊಡ್ತೀನಿ. ರತಿಗೆ ಕೊಂಚ ರೇಗಿತ್ತು - ಎಲ್ಲಾನೂವೇ ನಿಮಗೆ ಕೊಟ್ಟಬಿಟ್ಟು ನಾವು ಬೀದಿಲಿ ಭಿಕ್ಷೆ ಬೇಡ್ಬೇಕೇನು ಅಂತ.  ಇಷ್ಟೆಲ್ಲಾ ಇದ್ದರೂ ರತಿಯ ಆಸ್ಪತ್ರೆಯ ಖರ್ಚನ್ನ ಅಣ್ಣಂದಿರೇ ವಹಿಸಿಕೊಂಡರಂತೆ. "ನೋಡು ಸತ್ರೆ ಸಾಯಲಿ ಅಂತ ಬುಟ್ಟಬುಡ್ಬೋದಿತ್ತು. ಹಂಗೇ ಇತ್ತು ನಿನ್ ಸ್ಥಿತಿ. ನೀನು ಉಳಿಯಾಕ್ಕೆ ಇಲ್ಲ ಅಂತಲೇ ಅಂದ್ಕಂಡಿದ್ವಿ. ಎಷ್ಟೇ ಆದ್ರೂ ತಂಗಿ ಅಲ್ವೆ. ಅದ್ಕೆ ಬುಟ್ಕೊಡ್ಲಿಲ್ಲ ಅಣ್ಣಂದ್ರು. ಅವ್ರೇ ಎಲ್ಲಾ ಖರ್ಚು ಹಾಕಂಡು ಎಟ್ಟೇ ದೊಡ್ಡಾಸ್ಪತ್ರೆ ಆದ್ರೂ ಪರ್ವಾಇಲ್ಲ ಅಂತ ಸೇರ್ಸಿದ್ರು. ಕಾಣಕ್ಕಿಲ್ವೇ ನಿಂಗೆಯಾ ಇಲ್ಲೆಲ್ಲಾ ನೋಡಿದ್ರೆ ಎಷ್ಟು ದ್ವಡ್ಡದು ಅಂತ?" ರತಿ ಕಣ್ಣು ಬಿಟ್ಟಾಗ ಆಕೆಯ ಅಕ್ಕ  ಹೇಳಿದಳು. ರತಿ ಅರೆಕ್ಷಣವಾದರೂ ಆಲೋಚಿತಳಾದಳು. ಅಣ್ಣಂದಿರೂ, ಅತ್ತಿಗೆಯಂದಿರೂ ಒಳಗೆ ನೋಡಲು ಬಂದಾಗ, ಆಕೆ ಭಾವುಕಳಾದಳು. ದೊಡ್ಡ ಅಣ್ಣ ಆಕೆಯ ಕೈ ಸವರಿ, "ಹ್ಯಾಗಿದ್ದೀಯ?" ಅಂತ ಕೇಳಿದಾಗ ಆಕೆಗೆ ಅಳು ತಡಿಯಲಿಕ್ಕಾಗಲಿಲ್ಲ.  'ಅಳ್ಬ್ಯಾಡ. ಎಲ್ಲಾ ಸರಿಯೋಗದೆ..' ಅಂತ ಅಣ್ಣ ತಲೆ ಸವರಿದ.

******

ಅಮ್ಮ ತೀರಿಹೋದ ಎರಡೋ ಅಥವಾ ಮೂರನೆಯ ದಿನವೋ ಸಮಾಧಿಗೆ ಪೂಜೆ ಮಾಡೋದಿಕ್ಕೆ ಮಕ್ಕಳು ಸೊಸೆಯಂದಿರು, ಕೆಲ ಕುಟುಂಬಸ್ಥರು ಹೋಗಿದ್ದರು. ಪೂಜೆ ಮಾಡೋದು ಯಾರು? ಅಮ್ಮನಿಗೆ ಬಹಳ ಪ್ರೀತಿಪಾತ್ರರಾದವರೇ ಮಾಡ್ಬೇಕು ಅಂತ ದೊಡ್ಡವರ್ಯಾರೋ ಹೇಳಿದಾಗ, ರತಿ‌ ಅಲ್ವೇ ಅದು ಅಂತ ರತಿಯ ಅಕ್ಕ ಹೇಳಿದಳು. ಹೌದೌದು ಅಮ್ಮ ರತಿಯ ಮೇಲೆ ಪ್ರಾಣವೇ ಇಟ್ಕೊಂಡಿದ್ದಳು ಅಂತ ಎಲ್ಲರೂ ತಲೆದೂಗಿದರು. ಹೌದಲ್ವೇ. ಪ್ರಾಯಶಃ ಅಮ್ಮ ಇಲ್ಲದೇ ಆಕೆ ಹೇಗೆ ಇರುತ್ತಾಳೋ ಅನ್ನೋ ಸಂಶಯ ಎಲ್ಲರಿಗೂ ಬರುವಷ್ಟು ಆಕೆ ಅಮ್ಮನ ಮೇಲೆ ಅವಲಂಬಿತಳಾಗಿದ್ದಳು. ಅಮ್ಮ ಹಾಸಿಗೆ ಹಿಡಿದಿದ್ದರೂ, ರತಿಗೆ ಅಮ್ಮನದ್ದೇ ಬೆಂಬಲ. ಹೀಗಿರುವಾಗ ಅಮ್ಮ ಇಲ್ಲದೆ ಈಕೆ ಹೇಗೆ ಇರುವಳು ಎನ್ನುವ ಸಂಶಯ ಆಕೆಗೂ ಬಂದಿರಬೋದೇ? ರತಿಗೆ ಕೊಂಚ ಸಮಾಧಾನವಾಯಿತು ಅಮ್ಮನಿಗೆ ತಾನೇ ಪೂಜೆ ಮಾಡಬೇಕೆಂದು ಎಲ್ಲರೂ ಹೇಳಿದಾಗ. ಆಕೆ ಪೂಜಾಕ್ರಿಯೆ ನೆರವೇರಿಸಿ ಕೊನೆಯಲ್ಲಿ ಹೊರಡೋವೇಳೆಗೆ ಯಾರೋ ಹಿರಿಯೋರು ಅಮ್ಮನಿಗೆ ಧೂಪ ಇಡದೇ ಹಾಗೇ ಹೊಂಟೀಯಲ್ಲಮ್ಮ ಎಂದು ಉದ್ಗರಿಸಿದರು. ಸರಿ ಎಂದು ಧೂಪ - ಕಲ್ಲಿದ್ದಲು ಹಚ್ಚಿ, ಸಮಾಧಿಗೆ ಹಿಡಿದು ಮೂರು ಸುತ್ತು ಸುತ್ತಿ ಕೆಳಗೆ ಇಟ್ಟು ನಮಸ್ಕರಿಸಿದಳು. ಅದೆಷ್ಟು ಧೂಪದ ಬೊಟ್ಟುಗಳನ್ನ ಸುಟ್ಟಳೋ ತಿಳಿಯದು. ಹೊಗೆ ದೊಡ್ಡದಾಗಿ ಆವರಿಸಿತು. ಮೇಲೆ ಹಬ್ಬಿತು. ಮರದ ಮೇಲೆ ಕಟ್ಟಿದ್ದ ಜೇನುಗೂಡನ್ನು ಯಾರೂ ಕಂಡಿರಲಿಲ್ಲ. ಆಕೆ ನಮಸ್ಕಾರ ಮಾಡಿ ಏಳುವ ವೇಳೆಗಾಗಲೇ, ಕೂಗಾಟ ಶುರುವಾಗಿತ್ತು. ಏನಿದು ಎಂದು ಸರಿಯಾಗಿ ಕತ್ತೆತ್ತಿ ನೋಡುವ ವೇಳೆಗೆ ರಪ್ ಎಂದು ಮುಖಕ್ಕೆ ಏನೋ ಹೊಡೆಯಿತು‌. ಆ ನೋವಿಗೆ ರತಿ ಚೀರಿದಳು. ಅದರ ಹಿಂದೆಯೇ ಧೊಪ ಧೊಪ ಎಂದು ಅದೆಷ್ಟು ಬಡಿದವೋ ತಿಳಿಯದು. ಅಲ್ಲಿದ್ದ ಹಲವರಿಗೂ ಬಡಿದವು‌. ರತಿಯನ್ನ ಕಾಪಾಡಲು ಬಂದ ರತಿಯ ದೊಡ್ಡ ಅಕ್ಕಳಿಗೂ ಬಡಿದವು. ಇಬ್ಬರೂ ತಲೆ ತಿರುಗಿ ಬಿದ್ದರು. ಕೆಲವರು ಓಡೋಡುತ್ತಲೇ ಕೂಗುತ್ತಿದ್ದರಂತೆ - 'ಅಯ್ಯೋ ತನ್ನ ಪ್ರೀತಿಯ ಮಗಳನ್ನ ತನ್ನ ಬಳಿಗೇ ಕರೆಸಿಕೊಂಡುಬಿಟ್ಟಳು ಅವಳಮ್ಮ'. 'ಇವಳೂ ನೋಡಿ ಅಮ್ಮನ್ನ ಬಿಟ್ಟೇ ಇರಲಾರೆ ಅಂತ ಹೋಗಿಯೇಬಿಟ್ಟಳು.' 'ಅಯ್ಯೋ... ಎಂಥಾ ದೈವಲೀಲೆ. ತಾಯಿ ಮಗಳನ್ನ ಬೇರೆ ಮಾಡೋದಕ್ಕೆ ಇಚ್ಛಿಸದೇ ಒಟ್ಟುಮಾಡಿಬಿಟ್ಟ.'

ರತಿ ಕಣ್ಣು ಬಿಟ್ಟಾಗ ಐಸೂಯುವಿನ‌ ವಿಚಿತ್ರ ಪ್ರಪಂಚ ಕಣ್ಣ ಮುಂದೆ ಇತ್ತು‌. ಆಕೆಯ ದೊಡ್ಡ ಅಕ್ಕನಿಗೆ ಅಷ್ಟೇನು ಅಪಾಯವಾಗಿರಲಿಲ್ಲ. 

*******

ಅಣ್ಣ ಅತ್ತಿಗೆಯ ಪ್ರೀತಿಗೆ ರತಿ ಭಾವುಕವಾಗಿದ್ದಂತೂ ನಿಜ. ಅತ್ತಿಗೆ ಅಣ್ಣನ ಬೆನ್ನ ಮೇಲೆ ಕೈ ಇರಿಸಿದಳು. ಆತ ಒಮ್ಮೆ ತಲೆ ಕೊಂಚ ತಿರುಗಿಸಿ ನೋಡಿ ತಲೆ‌ ತೂಗಿದ ಏನೋ ನೆನಪಿಸಿಕೊಂಡವನ ಹಾಗೆ. ಅಷ್ಟರಲ್ಲಿ ರತಿ ಆತನ ಕೈ ಹಿಡಿದಳು. 'ಇಟ್ಟೊಂದು ನನ್ನ ಮೇಲೆ ನಿಂಗೆ ಪ್ರೀತಿ ಐತೆ ಅಂದ್ಕಂಡಿರಲಿಲ್ಲ. ಆ ತ್ವಾಟ ನೀವೇ ಮಡಿಕ್ಕಳಿ. ನಾನು ಆ ಮನೇನೂವೇ ಬಿಟ್ಕೊಡ್ತೀನಿ'. 

ರತಿಯ ಅತ್ತಿಗೆ ಗಂಡನ ಬೆನ್ನನ್ನ ಒತ್ತಿದಳು. ರತಿ ಕಣ್ಣು ಮುಚ್ಚಿ ಮಲಗಿದಳು. 

***

ಕಾಲೇಜಿನಲ್ಲಿ ಅಕ್ಕ ತಂಗಿ ಇಬ್ಬರಿಗೂ ಕೊಂಚ ಸಂಬಳ ಏರಿದ್ದು ಹೊಸ ಮನೆಯ ಬಾಡಿಗೆಗೆ ಸರಿಹೋಯಿತು. ಹಳೆಯ ಮನೆಯ ಮುಂದೆ ಹೋಗುವಾಗ ಕೊಂಚ ಪಿತ್ತ ನೆತ್ತಿಗೇರಿ ಶಾಪ ಹಾಕಿಕೊಳ್ಳುತ್ತಾಳೆ. ಅಣ್ಣ ಅದನ್ನ  ರಿಪೇರಿ ಮಾಡಿಸಿ ಬಾಡಿಗೆಗೆ ಬಿಟ್ಟಿದ್ದಾನೆ. ರತಿಗೆ ಈಗ ಅದಕ್ಕಿಂತಲೂ ಹೆಚ್ಚಿನ ಚಿಂತೆಯೊಂದಿದೆ. ಶಾಲೆಗೆ ಹೋಗದೇ ಊರೂರು ಸುತ್ತುತ್ತಿರುವ ಮಗನನ್ನ ಯಾವುದಾದರೂ ಒಂದು ಉಚಿತ ಹಾಸ್ಟೆಲ್ಲಿಗೆ ಸೇರಿಸಬೇಕು ಅನ್ನೋದು.

No comments:

Post a Comment