Tuesday, June 16, 2026

ಸ್ವಾತಂತ್ರ ಸಂಭ್ರಮ (2021ರ ಗೀಚು)

ದೇಶದೆಲ್ಲೆಡೆ ಸ್ವಾತಂತ್ರೋತ್ಸವದ ಸಂಭ್ರಮ. ಎಲ್ಲೆಡೆ? ಹೌದೆ? ಬೆಳ್ಳಂಬೆಳಗ್ಗೆ ಎದ್ದು, ತಣ್ಣೀರು ಹೊಯ್ದುಕೊಂಡು, ಕಾಲೇಜಿಗೆ ಹೊರಟಿದ್ದ ಇವನ ಮನಸ್ಸಿನೊಳಗೂ? ಏನಿದು ಸಂಭ್ರಮ? ಏತಕ್ಕಾಗಿ? ಪ್ರಾಯಶಃ ವರುಷ ಕಳೆದಂತೆ, ಇವನಲ್ಲಿ ಸಂಭ್ರಮ ಕುಗ್ಗಿದ್ದು Inverse proportionality ಗೆ ಒಂದು ಉದಾಹರಣೆ. ವಯಸ್ಸು ಚಿಕ್ಕದಿದ್ದಾಗ ಸಂಭ್ರಮಕ್ಕೆ ಕಾರಣವೇ ಬೇಕಿರಲಿಲ್ಲ. ಜನ ಜೌಗುಳಿ, ಹೊಸ ಜಾಗ, ಪೆರೇಡ್, ವಿವಿಧ ಕಾರ್ಯಕ್ರಮಗಳು, ಸಿಹಿತಿಂಡಿಗಳು! ಆಗಸ್ಟ್ 15ರ ಸಂಭ್ರಮಕ್ಕೆ ಇನ್ನಷ್ಟರ ಅಗತ್ಯವಿರಲಿಲ್ಲ. ನಾಲ್ಕೈದು ಜನ ನಾಲ್ಕೈದು ಮಾಹಿತಿಗಳು. ತಮಗೆ ತೋಚಿದಂತೆ ತಿರುಚಿ, ತುರುಕಿ ಹೋದರೆ ಅವರ ಸಂಭ್ರಮವೂ ತೀರಿದಂತೆ. 

ಪಾಂ..ಪಾಂ... ಪಾಂ.. ಪೀ.. ಅರೇ! ಬೈಕಿನ ಹಾರನ್ನೇನಲ್ಲ. ದಾರಿಯಲ್ಲಿ ನಾಲ್ಕು ಮಂದಿ ಪೀಪಿ, ಡೋಲು ಹಿಡಿದು ಪರೀಕ್ಷಿಸುತ್ತಿದ್ದರು. ಕೋರ್ಟಿನ ಎದುರಿಗಿದ್ದ ಗಾಂಧಿಯ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪಾರ್ಚನೆಯ ಕಾರ್ಯಕ್ರಮಕ್ಕೆ ರಂಗುರಂಗಿನ, ಜಿಂಗ್-ಜಂಗ್ ಎನ್ನುವ ಅಂಗಿ, ಪ್ಯಾಂಟು, ಟೊಪ್ಪಿ ಧರಿಸಿ ಈ ನಾಲ್ಕು ಮಂದಿ ಮಾಲಾರ್ಪಣೆ ಮಾಡುವವರ ಆಗಮನಕ್ಕೆಯೇ ಕಾಯುತ್ತಿದ್ದರೇನೋ. ಸಾಕಷ್ಟು ಹೊತ್ತು ನಿಲ್ಲಲು ಅನುವಿಲ್ಲ. ಒಂದೈದು ನಿಮಿಷ ಗಾಡಿ ನಿಲ್ಲಿಸಿ ಕಾಫಿಗೆ ಇಳಿದ. ನಾಲ್ಕು ಮಂದಿಯೂ ಕಾಫಿಗೆ ಬಂದರು. ಈ ಬಾರಿ ಪೇಯ್ಮೆಂಟ್ ನಲ್ಲಿ ಹೆಚ್ಚು ಕೇಳಬೇಕೆನ್ನೋದು ಅವರ ಅಭಿಪ್ರಾಯ. 

ಗಂಟೆ 8ಕ್ಕೆ ಕಾಲೇಜಿನಲ್ಲಿ ಧ್ವಜಾರೋಹಣ. 8 45ಕ್ಕೆ ಮುಖ್ಯ ಅತಿಥಿಗಳ ಕಾರಿನ ಆಗಮನ. ದೊಡ್ಡ ಉದ್ಯಮಿಗಳು. ಬಿಳಿ ಪೈಜಾಮ- ಜುಬ್ಬ, ಮೇಲೊಂದು ಕೋಟು, ತಲೆಗೊಂದು ಟೊಪ್ಪಿ. ಸ್ವಾತಂತ್ರ ದಿನಾಚರಣೆಗೆ ಅತ್ಯಂತ ಒಪ್ಪುಗೆಯಾದ ವಸ್ತ್ರ. ಸುತ್ತ ನೋಡಿದ. ಭಾಗಶಃ ಗಂಡಸರೆಲ್ಲಾ ಬಿಳಿ ಅಂಗಿ, ಅದಕ್ಕೆ ಸೂಕ್ತ ಪ್ಯಾಂಟು ಹಾಗು ಇನ್-ಶರ್ಟ್. ತನ್ನದೊಂದು ಮಾತ್ರ ಕೇಸರಿ ಕುರ್ತಾ -  ಹಸಿರು ಪ್ಯಾಂಟು. ಮನೆಯಿಂದ ಹೊರಟಾಗಲೇ ಗುಮಾನಿ ಶುರುವಾಗಿತ್ತು –‘ಬಿಳಿಯೆಲ್ಲಿ? ಎಂದು ಯಾರಾದರೂ ಕೇಳಿಯಾರೇನೋ ಎಂದು. ಸ್ವಾತಂತ್ರದ ದಿನಕ್ಕೂ ಇವನ ಅಂಗಿ ಪ್ಯಾಂಟಿಗೂ ಸಂಬಂಧವಿತ್ತೆ? ಕಾಕತಾಳೀಯವನ್ನ ಎಷ್ಟೇ ಸಮರ್ಥಿಸಿಕೊಂಡರೂ ಹಾಸ್ಯಾಸ್ಪದವೇ. ಈ ಬಾರಿಯ ಆಚರಣೆ ಅತೀ  ಸರಳದ್ದು ಎನ್ನೋದು ನೋಡಿದೋರೆಲ್ಲಾ ಹೇಳಬೋದಾದಷ್ಟು ಸರಳವಾಗಿತ್ತು. ಕೇವಲ ಧ್ವಜಾರೋಹಣ, ಪುಷ್ಪಾರ್ಚನೆ, ಸಿಹಿ ಹಂಚಿಕೆ, ನಿರ್ಗಮನ. ಕಾಲೇಜಿನ ದಿನಗಳ ನೆನಪಾಯಿತು. ತಾನು ಹಿಂದೆ ಓದಿದ್ದ ಅದೇ ಕಾಲೇಜಿನ ದಿನಗಳು. ದೊಡ್ಡ ಶಾಮಿಯಾನ, ವಿವಿಧ ಕಾರ್ಯಕ್ರಮಗಳು, ಬಹುಮಾನ ವಿತರಣೆ. ಕೊನೆಗೆ ಹುಡುಗರಿಗೆಲ್ಲಾ ಸಿಹಿ ಹಂಚಿಕೆ! ಇದ್ದಕ್ಕಿದ್ದ ಹಾಗೆ ನಗು  ಬರಲು ಕಾರಣವೂ ಇತ್ತು! ಅದು ಶಿಕ್ಷಕರಿಗೆ ಹಾಗೂ ಅತಿಥಿಗಳಿಗೆ ವಿಶೇಷವಾಗಿ ಆಯೋಜಿಸಲಾಗಿದ್ದ Breakfast – ಉಪ್ಪಿಟ್ಟು ಚಟ್ನಿಯನ್ನ ನೆನೆದು ಬಾಯೂರಿದ್ದರಿಂದ, ನಗು ಹೊರಬಿತ್ತು. ಇಂದು ಆ ರೀತಿಯ ಬೇಧಭಾವವಿರಲಿಲ್ಲ. ಏಕೆಂದರೆ ಇದ್ದವರೆಲ್ಲಾ ಶಿಕ್ಷಕರೆ. ಎಲ್ಲರಿಗೂ ಒಂದು ಸಿಹಿಯೇ – ಪೇಡ. ಪಕ್ಕದಲ್ಲಿದ್ದ ಅವನ  ಗುರುಗಳು ನಗುತ್ತಿದ್ದೀಯೆಂದು ಎಚ್ಚರಿಸಿದರು. 

ಸುಮಾರು ಒಂದು ಗಂಟೆಗಳ ಕಾಲ ಎಲ್ಲರೂ ನಿಂತಿದ್ದರು. 8. 45 ಕಾರಿಳಿದ ಗಣ್ಯರು ಆಗಮಿಸಿ ಒಂದೈದು ನಿಮಿಷದಲ್ಲೇ ಧ್ವಜಾರೋಹಣ ಮುಗಿಸಿದ್ದು  ಸಮಯದ ಮೇಲಿದ್ದ ಗೌರವವನ್ನ ಹೆಚ್ಚಿಸಿತು. ಒಡನೆಯೇ ರಾಷ್ಟ್ರಗೀತೆ. ಈ ಬಾರಿ ಯಾರೆಲ್ಲಾ ಹಾಡುತ್ತಿದಾರೆಯೋ ಇಲ್ಲವೋ ಎಂದು ಕ್ಯಾಮೆರಾ ಕಣ್ಣನ್ನ ಇಡೋದು ನಿರರ್ಥಕ ಕೆಲಸ. ಸುಮಾರು ಜನ ಮಾಸ್ಕ್ ಹಾಕಿದ್ದರಿಂದ. ಧ್ವಜಾರೋಹಣ ಮುಗಿದ ಕೂಡಲೇ ಸಣ್ಣ ಭಾಷಣ ಕಾರ್ಯಕ್ರಮ – ಹೆಚ್ಚೇನಿಲ್ಲ ಅರ್ಧಗಂಟೆಯಷ್ಟೆ – ಮುಖ್ಯ ಅಥಿತಿಗಳಿಂದ ಮಾತ್ರ. ಗಣ್ಯರಿಗೆಲ್ಲಾ ವೇದಿಕೆಯೆಂದೇನೂ ಇರಲಿಲ್ಲ. ಇದ್ದ ಏಳೆಂಟು ಮಂದಿ ಗಣ್ಯರಿಗೆ ಚೇರುಗಳನ್ನ ಹಾಕಿ ಕುಳ್ಳಿರಿಸಿ ಗೌರವಿಸಲಾಯಿತು. ಎದೆಯುಬ್ಬಿಸಿ, ಕಾಲುಗಳನ್ನ ನೇರವಿಟ್ಟು ಸುಮಾರು ಒಂದು ಗಂಟೆಯಿಂದ ನಿಂತಿದ್ದ ಉಳಿದವರು  ಧ್ವಜಕ್ಕೆ ಗೌರವವನ್ನ ಸಲ್ಲಿಸುವ ಸಲುವಾಗಿ ನಿಂತೇ ಇದ್ದರು. ಚೇರು ಕೇಳಲು ಯಾರಲ್ಲೂ ಮುಜುಗರವೇನೋ! ಗಣ್ಯರೂ ಇವರ ಭಂಗಿಯನ್ನ, ಗೌರವವನ್ನ ಮೆಚ್ಚಿ ಹಾಗೆಯೇ ಮುಂದುವರೆಯಲೆಂದು ಆಶಿಸಿದ್ದರೋ ಏನೋ! ಮುಖ್ಯ ಅತಿಥಿಗಳು ಭಾಷಣಕ್ಕೆ ನಿಂತರು. 

ಸ್ವಲ್ಪ ವಯಸ್ಸಾದವರು. ಹೆಚ್ಚು ಅನುಭವಸ್ಥರು. ಸ್ವಾತಂತ್ರದ ದಿನಗಳನ್ನ ಕಣ್ಣಾರೆ ಕಂಡವರು. ಗಾಂಧಿ, ನೆಹರೂ, ಲಾಲಬಹದ್ದೂರ್ ಶಾಸ್ತ್ರಿ,‘ಮನೀಶ್’ ಪಾಂಡೆ (ವಯಸ್ಸಾದ್ದರಿಂದ ಸ್ವಲ್ಪ ಮರವಷ್ಟೆ)  ಮೊದಲಾದ ಸ್ವಾತಂತ್ರಕ್ಕಾಗಿ ಪ್ರಾಣವನ್ನ ಪಣವಿಟ್ಟವರನ್ನ ನೆನೆದು ಭಾವುಕರಾಗಿ ಮೈ ನಡುಗಲಾರಂಭಿಸಿದೆಯೆಂದು ಹೇಳಿಕೊಂಡರು. ಸ್ವಾತಂತ್ರ ದಿನಾಚರಣೆಯ ಉದ್ದೇಶವೂ ಸಹ ಅಂಥವರನ್ನ ಸ್ಮರಿಸೋದು. ಅವರಿಗೆ ಮನಸ್ಸಲ್ಲೇ ಅಭಿನಂದಗಳನ್ನ ಸಲ್ಲಿಸೋದು ಹಾಗೂ ಭಾರತಮಾತೆಯ, ಭಾರತಾಂಬೆಯ ಮಡಿಲಲ್ಲಿ ಜನಿಸಿದ್ದಕ್ಕೆ ಹೆಮ್ಮೆ ಪಟ್ಟು ನಮ್ಮೊಳಗಿನ ದೇಶಾಭಿಮಾನವನ್ನ ಹೆಚ್ಚಿಸಿಕೊಳ್ಳೋದು. ಇದ್ದಕ್ಕಿದ್ದ ಹಾಗೆ ಭಾಷಣವು ತಿರುವು ಪಡೆದುಕೊಳ್ಳುತ್ತಾ ಹೋಗತೊಡಗಿತು. ಇವನ  ಗುರುಗಳು ಮತ್ತೆ ಮತ್ತೆ ಎಚ್ಚರಿಸತೊಡಗಿದರು – ನಗುತ್ತಿದ್ದೀ ಎಂದು. ದೇಶಕ್ಕೆ ಈಗ ಅತ್ಯಂತ ಅವಶ್ಯಕವಾದವರು ಶಿಕ್ಷಕರು ಎಂದು ಹೇಳಿಕೊಳ್ಳುವಾಗಲೂ ಅತಿಥಿಗಳ ಮೈ ಜುಂ ಎನ್ನುತ್ತಿತ್ತು. ಮಕ್ಕಳನ್ನ ತಿದ್ದಿ ತೀಡಿ ಒಳ್ಳೆಯ ಮಾರ್ಗದರ್ಶನ ನೀಡಿ, ದೇಶವನ್ನ ಮುನ್ನಡೆಯತ್ತ ಸಾಗಿಸಿ ಪ್ರಪಂಚದಲ್ಲೇ ಮುಂಚೂಣಿ ಸ್ಥಾನಕ್ಕೆ ನಿಲ್ಲಿಸಬೇಕೆನ್ನೋದು ಅವರ  ಅಪೇಕ್ಷೆಯಾಗಿತ್ತು. ಎಲ್ಲರೂ ತಲೆಯಾಡಿಸಿ, ಚಪ್ಪಾಳೆಯಿಂದ ಒಪ್ಪಿಗೆ ಸೂಚಿಸಿದ್ದು ಅತಿಥಿಗಳನ್ನ ಮತ್ತಷ್ಟು ಉತ್ತೇಜಿಸಿತು. ಅತಿಥಿಗಳ ಭಾಷಣ ಮುಗಿಯುವ ವೇಳೆಗೆ ಇವನ  ತಲೇಯೊಳಗಾಗಲೇ ಒಂದು ಕಥೆ ಸೃಷ್ಟಿಯಾಗಿತ್ತು. ಎಷ್ಟೇ ಎಚ್ಚರಿಸಿದರೂ ತಲೆಕೆಡಿಸಿಕೊಳ್ಳದ ಧೂರ್ತನೆಂದು ಗುರುಗಳು ಎಚ್ಚರಿಸೋದನ್ನ ನಿಲ್ಲಿಸಿದ್ದರು. 

ಆದರೂ ಈ ಆಚರಣೆ ಈತನಿಗೆ ವಿಶೇಷವಾಗಿ ಕಂಡಿತು – ಯಾವುದೇ ಜೋರು ಭರಾಟೆಗಳಿರಲಿಲ್ಲವೆಂದಲ್ಲ. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅತಿಥಿಗಳು ತಮಗೆ ಹೊದಿಸಿದ್ದ ಶಾಲು, ನೀಡಿದ ಹೂಗುಚ್ಚಗಳನ್ನ ತಮ್ಮ ಕಾರಿನ ಡ್ರೈವರ್ ಕೈಗೆ ನೀಡಿ, ಭುರ್ರೆಂದು ಯಾರ ಕೈಗೂ ಸಿಗದೇ ಹೋಗುವ ಕಾರ್ಯಕ್ರಮ ಇದಾಗಿರಲಿಲ್ಲ. ಮುಖ್ಯ ಅತಿಥಿಗಳು ಬಹಳ  ಸುಲಭವಾಗಿಯೇ ಯಾರೊಟ್ಟಿಗಾದರೂ ಲೋಕಾಭಿರಾಮದ ಹರಟೆಗೆ ಸಿಕ್ಕರು. ಫೋಟೋ ಕ್ಲಿಕ್ಕಿಸುವುದೂ ಇವುಗಳ ನಡುವೆ ಒಂದು ಮುಖ್ಯದ ಕೆಲಸವೇ. ಮುಖ್ಯ ಅತಿಥಿಗಳಿಗೆ ಇವನ  ಪರಿಚಯವೂ ಆಯಿತು – ಗೋಲ್ಡ್ ಮೆಡಲಿಸ್ಟ್ ಎಂದು. ಪಕ್ಕದಲ್ಲಿದ್ದ ತನ್ನ ಗುರುಗಳು ಎಲ್ಲರ ಬಳಿಯೂ ತನ್ನ ಮಾನವನ್ನ ಹೀಗೆ ಚಿನ್ನ ಲೇಪಿಸಿದ ಒಂದು ತಟ್ಟೆಗಾಗಿ ಹರಾಜು ಹಾಕುತ್ತಿರೋದನ್ನ ತಡೆಯೋದಕ್ಕೆ ಸಾಧ್ಯವಾಗಲೇ ಇಲ್ಲ. ಮುಖ್ಯ ಅತಿಥಿಗಳಿಗೂ ಇವನ appointment ಬಗ್ಗೆ ಗುಮಾನಿಯೆದ್ದಿತ್ತೇನೋ! ಗೋಲ್ಡ್ ಮೆಡಲಿಸ್ಟ್ ಆದವನಿಗೇನೂ ವಿಶೇಷ ಕಾಳಜಿ ತೋರಿಸುವ ಅಗತ್ಯವಿಲ್ಲವೆನ್ನೋ ಮಾತು ಇವನನ್ನ ವಿಪರ್ಯಾಸವಾಗಿ ಕುಪಿತನನ್ನಾಗಿಸಿತು. ಗೋಲ್ಡ್ ಮೆಡಲಿಸ್ಟ್ ಆಗಿ,ಪೈಥಗೊರಾಸ್ ನ ನಿಯಮವೇ ತಿಳಿಯದ ಹಲವು ಮಂದಿ ಹೇಗೆ ಸೆಲೆಕ್ಟ್ ಆಗುತ್ತಾರೆನ್ನೋದು ಸಮಾಜದ ವಿಪರ್ಯಾಸವೆಂದು ಮುಖ್ಯ ಅತಿಥಿಗಳು ಹೇಳುವಾಗ ಇವನಿಗೆ ಗೊಂದಲ. ಏನೆನ್ನಬೇಕು ತಿಳಿಯದ ಸಂದಿಗ್ಧ ಪರಿಸ್ಥಿತಿ. ಸುಮ್ಮನಿದ್ದ. ಅತಿಥಿಗಳು ಮತ್ತಷ್ಟು ಗೊಂದಲಕ್ಕೀಡುಮಾಡಿದರು. ಸುಮ್ಮನೆ ಯೋಚಿಸಿ ಒಂದೈದು ನಿಮಿಷ, ನಿಮ್ಮ ಅಂತಃಸಾಕ್ಷಿಗೆ ನೀವು ಸತ್ಯವಾಗಿದ್ದರೆ ಸಾಕೆಂದು ಹೇಳಿದ್ದಕ್ಕೂ ಸುಮ್ಮನಿದ್ದ. ಅತಿಥಿಗಳ ಭಾಷಣೋತ್ತರ ಉಪನ್ಯಾಸವೂ ದಿಕ್ಕು ದಿಕ್ಕಿಗೆ ಹರಿಯತೊಡಗಿತು! ಈತನಿಗೆ ನಗು ತಡೆಯೋದು ಹರಸಾಹಸವಾಗಿ ಹೆಣಗಬೇಕಾಯ್ತು. 

ಯಾವ ಕೆಲಸವಾದರೂ ಸರಿಯೇ – ಗುಡಿಸುವುದರಿಂದ ಹಿಡಿದು, ಯಾವುದಕ್ಕೂ ಹೇಸಿಗೆ ಪಡದೆ ಸಮಾನ ಮನಸ್ಥಿತಿಯಿಂದ ಕೆಲಸ ಮಾಡಲೇಬೇಕು. ಯಾವುದೇ ಸ್ಯಾಲೆರಿಯ, ಪ್ರಾಫಿಟ್ ನ ಲೆಕ್ಕಾಚಾರ ಇಡಕೂಡದು  ಎಂದು ಹೇಳಿದಾಗ ದೂರದಲ್ಲೆಲ್ಲೋ ಪೀಂ.. ಪೀಂ... ಫೂಂ.. ಡುಮ್.. ಎನ್ನುವ ಸದ್ದಿಗೆ ಇವನ  ಮನಸ್ಸು ನಗೆಯ ಪ್ರತಿಧ್ವನಿಗಳಿಂದ ತುಂಬಿ ಹೋಯಿತು. ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ಸಮಾನತೆಯನ್ನ ಕಾಣುವುದು ಮನುಷ್ಯತ್ವದ ಭಾಗವೆನ್ನೋದು ಹೇಳಿ ಮುಗಿಸಿ ಅತಿಥಿಗಳು ಕಾರು ಹತ್ತಿ ಹೊರಟು ಹೋದರು. ಈತ  ಸುತ್ತ ತಿರುಗಿದ. ಎಲ್ಲರ ಮುಖದಲ್ಲೂ ಇದ್ದ ಒಂದೇ ಭಾವನೆ ತನ್ನ ಮುಖದ ಕನ್ನಡಿಯಂತೆ ಕಂಡಿತು. 

ವಾಪಸ್ಸು ಬರುವ ದಾರಿಯಲ್ಲಿ, ಒಂಟಿ ಕಾಲಿನಲ್ಲಿ ಪಾರ್ಕಿನ ಗೋಡೆಗೆ ಕಾಲೊರಗಿ ನಿಂತಿದ್ದ ಪೀಂ.. ಪೀಂ.. ಡುಮ್.. ಡುಮ್ ಗಳು  ಬಂದ ಕೆಲಸ ಇನ್ನೂ ಮುಗಿದ್ದಿರಲಿಲ್ಲವೆಂದು ಸ್ಪಷ್ಟವಾಗಿಯೇ ಕಾಣಿಸುತ್ತಿತ್ತು. ಪೇಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸದಲ್ಲಿ ಆಸಕ್ತಿಯಿಟ್ಟು ಮಾಡಿ ಎಂದು ಅವರಿಗೆ ಹೇಳಿದರೆ ಹೇಗೆ ಎಂದು ಯೋಚಿಸಿದಾಗಲೇ ಈತನಿಗೆ ನಗು ನಿಲ್ಲಲಿಲ್ಲ. 


No comments:

Post a Comment