ಹೊರಗಿಂದಲೋ, ಇಲ್ಲಿಯವರೋ - ಝಗಮಗಿಸುವ ದೀಪ, ಅಲಂಕಾರಗಳು, ಮೆರುಗು, ಕಾರ್ಯಕ್ರಮಗಳು, ಸುತ್ತಾಟ - ದಸರೆಯ ಸಂಜೆಗಳಿಗೆ ಮೈಸೂರಿನ ಬೀದಿಯಲ್ಲಿ ಜನ ಹೆಚ್ಚು. ಒಂದ್ಹತ್ತು ದಿವಸಗಳು ಮಿನುಗುವ, ಮನ ಸೆಳೆಯುವ ಮೈಸೂರನ್ನ ಮುದಕ್ಕೆಂದೇ ಮುತ್ತಿಕ್ಕುವುದು. ದಸರೆಗೆ ಮೈಸೂರಿನ ಬೆನ್ ಬಲವಿಲ್ಲದೆ ಅರ್ಥವುಂಟೆ? ಉತ್ಪ್ರೇಕ್ಷೆ ಹೆಚ್ಚೆನಿಸಿದ್ದರೂ ಅಡ್ಡಿಯಿಲ್ಲ. ಆದರೆ ಇದೊ, ರಾತ್ರಿಯ ಹತ್ತೂವರೆ ಬಸ್ಸಿಗೆ ಹೊರಟಿದ್ದೇನೆ, ಚುಟ್ಟಿಕೆರೆಗೆ. ದಸರೆಯ ಎಂಟನೆಯ ರಾತ್ರಿ. ಇಂದೇ ಇಲ್ಲಿ ಮಳೆಯಿಲ್ಲ. ಪ್ರತೀ ಸಂಜೆ ಕಾಲೇಜಿನಿಂದ ಹೊರಬೀಳೋ ಹೊತ್ತಿಗೆ ಎಂಟರ ಆಸು ಪಾಸು. ಭಾಗಶಃ ದಿವಸಗಳು ಈ ಹೊತ್ತಿಗೆ ಮಳೆಯಿಂದ ತಂಪೆರೆಸಿಕೊಳ್ಳಲಿಚ್ಛಿಸಿದ್ದವು. ಇದೇನು ಮೊದಲ ದಸರೆಯೇನಲ್ಲ. ಮೈಸೂರಿಗೆ ಬಂದು 11 ವರ್ಷಗಳಾಗಿದ್ದಾವಾದರೂ, ಅದರ ವರ್ಣನೆ ನನಗಸಾಧ್ಯ. ಪದಗಳಿಲ್ಲೆಂದಲ್ಲ, ಅನುಭವ ಆಸಕ್ತಿಯ ಕೊರತೆಯೇ? ಇಂದೂ ತಿಳಿದಿಲ್ಲ. ಆಟೋದಲ್ಲಿ ಕುಳಿತು ಹೊರಗೆಲ್ಲಾ ನೋಡುವಾಗ ಒಂದು ಬಗೆಯ ಪುಳಕವೇ. ಬಣ್ಣ ಬಣ್ಣದ ಬಲ್ಬುಗಳು, ಒಂದು ವಿನ್ಯಾಸದಲ್ಲಿ ಹತ್ತುರಿಯುತ್ತಿದ್ದದ್ದು ಒಂದು ಬಗೆಯ ಲೈಟು ಬಲ್ಬುಗಳ ಡ್ಯಾನ್ಸಿನಂತೆ. ವಿವಿಧ ಬಗೆಯ ಆಕೃತಿಗಳು - ಹೂ, ಎಲೆ, ಮರ, ಪ್ರಾಣಿ, ಮುಷ್ಯನ ವಿವಿಧ ಸಂಸ್ಕೃತಿಯ ಮುಖ, ಭಂಗಿಗಳು- ಲೈಟುಗಳಿಂದಲೇ ನಿರ್ಮಿತ. ಎಲ್ಲೆಡೆಯೂ ಬೆಳಕು, ಬಣ್ಣ, ಆಕೃತಿಗಳು, ಬೆಳಕಿನ ನೃತ್ಯ, ನೋಡುವ ಕಂಗಳು. ಇದರಲ್ಲೊಂದಷ್ಟು ನನ್ನ ಮನಸಿಗೆ ಹಿತವೆನಿಸುವ ಚೆಲುವನ್ನ ಹುಡುಕ ಹೊರಡಲು ಕಾರಣ ನನ್ನ ಬಳಿಯೊಂದು ಬೈಕ್ ಹಾಗೂ ಕ್ಯಾಮೆರಾ ಇದ್ದಿದ್ದರಿಂದ. ಲೈಟ್ ಗಳು ಆಫ್ ಆಗುವ ಮುನ್ನ, ಟ್ರಾಫಿಕ್ ಎಲ್ಲಾ ಕಡಿಮೆಯಾಗುವ ಹೊತ್ತಿಗೆ ಸಿಟಿಯನ್ನ ಸುತ್ತಿ ಮನಸ್ಸು, ಕ್ಯಾಮೆರಾಗಳನ್ನ ತುಂಬಿಕೊಳ್ಳಲು ಈ ಬಾರಿ ಸಾಧ್ಯವಾಗಲಿಲ್ಲ.
ರೈಲ್ವೇ ಸ್ಟೇಷನ್ನಿನಿಂದ ಬಸ್ಟಾಂಡಿಗೆ ಹೋಗುವ ರಸ್ತೆಯಲ್ಲಿಯ ಪಕ್ಕದ ರೇಲ್ವೆ ಕಾರ್ಯಾಲಗಳು
ಕಣ್ಣಿಗೆ ಬಿದ್ದವು. ಲೈಟುಗಳಿಂದ ಝಗಮಗಿಸಿದ್ದವು.
ತೋರಣ ಹೂಗಳಿಂದ ಸಿಂಗರಿಸಿಕೊಂಡ ರೂಮುಗಳ ಬಾಗಿಲುಗಳನ್ನ ನೋಡಿ ಇಂದಿನ ಅಷ್ಟೂ ಪ್ರಹಸನಗಳು
ನೆನಪಾಗಿ ನಗೆಯೂ ಇತ್ತು, ಹೆಚ್ಚಾಗಿ ಎಂದಿಗೂ
ಯಾವ ವಿಚಾರದಲ್ಲೂ ಯಾವ ನಿಲುವಿಗೂ ಬರಲಾರದ ನನ್ನ ವರ್ತನೆಗಿನ್ನೊಂದು ಉದಾಹರಣೆ, ಕೇಸ್ ಸೇರ್ಪಡೆಯಾಗಿದ್ದರ ಬಗೆಗೆ ಅನವಶ್ಯಕ
ಚಿಂತನೆಯಿತ್ತು.
ನಾನು ಪ್ರೈಮರಿಯಲ್ಲಿ ಇದ್ದಾಗ 'ದಸರಾ' ಅನ್ನೋದು - ಸೆಪ್ಟೆಂಬರ್ - ಅಕ್ಟೋಬರಿಯಲ್ಲಿ ಸಿಗುವ
ಹತ್ತು ಹದಿನೈದು ದಿನದ ರಜೆಯ ಹೆಸರಿಗಿದ್ದ ಪ್ರಿಫಿಕ್ಸ್.
ನಮಗೆ ದಸರೆಗಿಂತ 'ಬೊಂಬೆ' ಹಬ್ಬ ಅಂತ ಹೆಳಿಯೇ ಹೆಚ್ಚು ಅಭ್ಯಾಸ, ಆಪ್ತತೆ. ಬೊಂಬೆ ಕೂರಿಸೋದು ನಮಗೆ ಸಂಭ್ರಮ. ಮೂರು
ನಾಲ್ಕು ಮೆಟ್ಟಿಲುಗಳ ರೀತಿ ಟೇಬಲ್ಗಳನ್ನ ಎತ್ತರದ ಅನುಸಾರ ಜೋಡಿಸಿ (ಆ ರೀತಿಯದ್ದನ್ನ ಹುಡುಕೋದೂ ಸಹ ನಮಗೆ ಸಂಭ್ರಮವೇ), ಅವುಗಳ ಮೇಲೆ ಚೆನ್ನಾಗೆನಿಸೋ ಬಣ್ಣ ಬಣ್ಣದ
ವಸ್ತ್ರಗಳನ್ನ ಹೊದಿಸಿ ಎಲ್ಲೆಲ್ಲಿ ಯಾವ್ಯಾವ ಬೊಂಬೆಗಳನ್ನ ಜೋಡಿಸಬೇಕು ಅನ್ನೋದಕ್ಕೊಂದಷ್ಟು
ವಾದವಿವಾದ, ಜಗಳಗಳು
ನಡೆಯಲೇಬೇಕಿತ್ತು. ಇವೆಲ್ಲಾ ಮಕ್ಕಳಲ್ಲಿಯೇ ನಡೆವಂಥದ್ದು. ದೊಡ್ಡವರೇನಿದ್ದರೂ 'ರಾಜ' 'ರಾಣಿ'ಯರ ಬೊಂಬೆಗಳ, ದೇವರುಗಳ ಸ್ಥಾನವನ್ನ ನಿರ್ಧರಿಸುತ್ತಿದ್ದರಷ್ಟೇ. ಇದು
ನಾ ಡಿಗ್ರಿಗೆ ಹೋಗೋ ದಿನಗಳ ವರೆಗೂ ನಡೆದಿತ್ತು - ಪದ್ಧತಿ. ಆಮೇಲೆಲ್ಲಾ ಪ್ರತಿ ಸಂಜೆ
ಬೊಂಬೆಗಳಿಗೆ ಪೂಜೆ ಆರತಿಗಳು, ನೈವೇದ್ಯಗಳು,
ತಿರ್ಥಪ್ರಸಾದಗಳ ಹಂಚಿಕೆಯನ್ನ ನಾನೇ ಮಾಡ್ತಿದ್ದದ್ದು.
ಆಗೊಂದು ಗತ್ತು, ಮರ್ಯಾದೆ. ಈ ಗತ್ತು
ಆಗಿಂದೇನಲ್ಲ. ಹೈ ಸ್ಕೂಲಿನಲ್ಲಿ 'ನಮಸ್ತೆ ಶಾರದೇ
ದೇವಿ... ' ಶ್ಲೋಕ
ತನಗೊಬ್ಬನಿಗೇ ತರಗತಿಯಲ್ಲಿ ಹೇಳಲಿಕ್ಕೆ ಬರ್ತಿದ್ದ ವಿಚಾರ ಎಲ್ಲರ ದೃಷ್ಟಿಯಲ್ಲೂ ದೇವರಷ್ಟೇ
ದೊಡ್ಡವನಾಗಿಬಿಟ್ಟೆನೆಂಬ ಗತ್ತೊಂದನ್ನ ತರಿಸಿತ್ತು. ಸರಸ್ವತಿಯ ಫೋಟೋಗೆ ಆರತಿ ಮಾಡೆಂದು
ತನ್ನನ್ನೇ ಕರೆದಾಗ, ಗಟ್ಟಿ ಕಂಠದಿಂದ
ಮನೆಯಲ್ಲಿ ದಿನವೂ ಕೇಳ್ತಿದ್ದ ' ಹಿರಣ್ಯಪಾತ್ರಂ...'
ಇಂದ ಶುರುವಾಗಿ'.... ಮಹಾರಾಜಾಯನಮಃ' ದಲ್ಲಿ ನಿಂತಿದ್ದಾಗ ಮೈಮೇಲೇನೋ ಆವರಿಸಿದಂತೆ ಭಾವಪರವಾಶನಾಗಿ ಹೋಗಿದ್ದೆ. 'ಚೆನ್ನಾಗಿ ಪೂಜೆ ಮಾಡ್ತೀಯಯ್ಯ' ಎಂದ ಹೇಳಿದ್ದ ತನ್ನ ಸೋಷಿಯಲ್ ಸೈನ್ಸ್ ಟೀಚರ್ ನ
ಮಾತುಗಳಿಂದ ಉಬ್ಬಿಹೋಗಿದ್ದೆ.
ಈ ಪೂಜೆಮಾಡಬೇಕೆನ್ನೋ ಹುಚ್ಚೂ ಸಹ ಮೊದಲಿಂದಲೂ ಇದ್ದದ್ದೆ. ಆಗ ಮೂರನೆಯ ಕ್ಲಾಸು.
ಸುತ್ತಲಿನ ಹುಡುಗರೆಲ್ಲಾ, ಒಂದು ಮೂರ್ನಾಲ್ಕು
ಜನ, ಸೇರಿ ಕಲ್ಲುಗಳಲ್ಲಿ ಮನೆ
ಕಟ್ತಿದ್ದೆವು. ಬೇಕಾಗಿದ್ದ ಕಲ್ಲುಗಳನ್ನ, ಟೈಲ್ಸ್ ಗಳನ್ನ ನಾವು ಮನೆ ಕಟ್ಟುವ ಜಾಗಗಳಿಂದ ಕದ್ದು ತರ್ತಿದ್ದೆವು ಅನ್ನೋದನ್ನ ನಮ್ಮ
ನಮ್ಮಲ್ಲೇ ಹೇಳಿಕೊಂಡು ಬೀಗ್ತಿದ್ದೆವು. ಬ್ರಾಹ್ಮಣ ಹುಡುಗರೇ ಆಗಿದ್ದ ನಮಗೆಲ್ಲಾ ಒಂದಿನ
ಗೃಹಪ್ರವೇಶ ಮಾಡಬೇಕಲ್ಲ ಅನ್ನೋ ಯೋಚನೆ ಬಂದಿತು. ಆಗಿನ ಪ್ರಜ್ಞಾಲೋಕಕ್ಕೆ ಇದೊಂದು ಸೀರಿಯಸ್
ವಿಚಾರ. ಅಕ್ಕಪಕ್ಕದ ನಾಲ್ಕೈದು ಮನೆಗಳಿಗೆಲ್ಲಾ ಹೋಗಿ, ಚೀಟಿಯಲ್ಲಿ ಬರೆದಿದ್ದ ಆಮಂತ್ರಣವನ್ನ ನೀಡಿ ದೊಡ್ಡವರು ಚಿಕ್ಕವರು
ಎನ್ನದೇ ಎಲ್ಲರನ್ನೂ ಗೃಹಪ್ರವೇಶಕ್ಕೆ ಬರಬೇಕೆಂದು ಕರೆದಿದ್ದೆವು. ಎಲ್ಲರೂ ನಕ್ಕಿದ್ದರಷ್ಟೆ.
ನಮಗೇನು ಅನ್ನಿಸಿರಲಿಲ್ಲ. ಬಂದವರೆಲ್ಲರಿಗೂ ತೀರ್ಥ ಪ್ರಸಾದ ನೀಡೋದು, ಮನೆಗೆ ಆರತಿ ಮಾಡಿ ಆರತಿ ಕೊಡೋದು ನನ್ನದೇ ಕೆಲಸ. ಬಂದವರೆಲ್ಲಾ ಮನೆ
ಬಹಳ ಚೆನ್ನಾಗಿಕಟ್ಟಿದ್ದೀರಿ ಒಳೇದಾಗಲ್ಲಿ ಅಂದದ್ದನ್ನೆಲ್ಲಾ ನಿಜವಂತ ನಂಬಿ ಮುಂದೊಂದು ದಿನ
ಅದಕ್ಕಿಂತಲೂ ದೊಡ್ಡ ಮನೆ ಕಟ್ಟ ಬೇಕೆಂಬ ಆಸೆಯಾಗಿ, ಕಟ್ಟುತ್ತಿರವಾಗ್ಲೇ ಅದು ದೊಡ್ಡ ಸದ್ದು ಮಾಡಿ ದಬ ದಬ ದಬ ಎಂದು
ಕುಸಿದು ಬಿದ್ದ ಸದ್ದಿಗೆ ಕೆಳಗಿನ ಓನರ್ ಅಜ್ಜನ ನಿದ್ದೆ ಹಾಳಾಗಿತ್ತು. ಎಲ್ಲ ಕಲ್ಲು ಟೈಲ್ಸ್
ಗಳನ್ನ ಒದ್ದು, ಆ ಕೂಡಲೇ
ಎಲ್ಲವನ್ನೂ ಹಾಳುಬಾವಿಗೆ ಎಸೆಯದೇ ಹೋದರೆ ನೆಟ್ಟಗಿರೋಲ್ಲವೆಂದು ಅಜ್ಜ ಗುಡುಗಿದ್ದರು. ಅದಾದ ಮೇಲೆ
ಮನೆ ಕಟ್ಟೋದು ನಿಲ್ಲಿಸಿ ಚಿಕ್ಕಚಿಕ್ಕ ಪಾಟುಗಳಲ್ಲಿ ಗಿಡಗಳನ್ನ ಬೆಳೆಸೋ ಗೀಳಿಗೆ ಬಿದ್ದು,
ಅವುಗಳು ಚಿಗುರೊಡೆದಾಗ ಅವಕ್ಕೊಂದು ಪೂಜೆ, ಆಮಂತ್ರಣ. ಪೂಜೆ ಮಾಡೋದು ಒಟ್ಟಿನಲ್ಲಿ ಆಸಕ್ತಿಯ,
ಗತ್ತಿನ, ಮರ್ಯಾದೆಯ ವಿಚಾರವೇ ಆಗ.
ನಾನು 'ಹಾಳಾಗಿದ್ದು'
ಯಾವಾಗ? ಎನ್ನೋದು ಕೆಲವರ ಮನಸ್ಸಲ್ಲಾದರೂ ಇದೆ. ಅಕ್ಕನಿಗಂತೂ ಆಚರಣೆಗಳಲ್ಲಿ ಎಳ್ಳಷ್ಟೂ ಆಸಕ್ತಿ
ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚಾಗಿದೆ. ಕಾಲೇಜಿನಲ್ಲಿ ಮಾರನೇ ದಿನ ಆಯುಧ ಪೂಜೆ, ಸಂಪ್ರದಾಯದಂತೆ ಎಲ್ಲಾ ವಿಭಾಗಗಳಲ್ಲಿಯೂ faculty
ಗಳು ದೇವರ ಫೋಟೋಗೆ ಪೂಜೆ ಮಾಡಿ, ಸಿಹಿ ಹಂಚಬೇಕೆಂದು ಅಟೆಂಡರ್ ಹೇಳಿದಾಗ ಸ್ವಲ್ಪ
ಗಾಬರಿಯಾಯಿತು. ಹಿಂದೆ ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ, ಅದೇ ಗತ್ತು, ಗಮ್ಮತ್ತಿನಿಂದ
ಪೂಜೆಗಳಲ್ಲಿ ಪಾಲ್ಗೊಳ್ತಿದ್ದವ ಇದ್ದಕ್ಕಿದ್ದ ಹಾಗೆ ಕಕ್ಕಾಬಿಕ್ಕಿಯಾದೆ. ಅದು ಸಾಧ್ಯವುಂಟೇ ಎಂದು
ಕೇಳುವ ಮಟ್ಟಿಗೆ ನಾ 'ಹಾಳಾಗಿದ್ದೇನೆಂದು'
ತಿಳಿದರೆ 'ಅವರ' ಗತಿಯೇನು?
ಈ ಥರಹದ ಪ್ರಶ್ನೆ ಸಹ ಉದ್ಭವಿಸಬಹುದೆಂದು ಯಾರೂ
ಊಹಿಸಿರಲಿಕ್ಕಿಲ್ಲವೆ? ಶ್ವಾಸೋಶ್ಛ್ವಾಸದಷ್ಟು
ಸಹಜದಂತೆ ಪ್ರತೀ ವರುಷ ಪೂಜೆ ಪುನಸ್ಕಾರಗಳು ಜರುಗುವುದುಂಟು. ಇದು 'ಮೈಸೂರಿನ' ಹಿರಿಮೆಯೆಂದೇ
ಕೊಂಡಾಡೋದೂ ಉಂಟೂ. ಇದರ ಮಧ್ಯೆ ಸ್ವಚ್ಛ ತಲೆಯಲ್ಲೊಂದು ಹೇನಿನಂತೆ ನಾ ಇದ್ದಲ್ಲಿ ಅವರಿಗೂ
ಗಾಬರಿಯಾಗೋದು ನಿಜ - ಹೀಗೆಲ್ಲಾ ಈತ ಹಾಳಾಗಿದ್ದೆಂದು ಎಂದು.
ಅಟೆಂಡರ್ ಗೆ 'ನೀವೆ ಪೂಜೆ
ಮಾಡಿಬಿಡಿ. ಏನೇನು ಸಾಮಗ್ರಿ ಬೇಕೋ ತರಿಸಿಕೊಳ್ಳಿ. ಹಣ ಕೊಡ್ತೇನೆ' ಅಂತ ನಾ ಹೇಳಿದ್ದು ಆಕೆಯ ಮೇಲಿನ ಭಯಕ್ಕೇನೆ - 'ಇದೆಂಥಾ ಸರ್ ಇದು.. ದೇವರಿಗೆ ಕೈ ಮುಗೀದೇ ಇರೋದು'
ಅಂತ ಎಲ್ಲರಿಗೂ ಸಾರಿದ್ರೆ? ಎಂಥಾ ಹಿಪೊಕ್ರೆಸಿಯಲ್ಲವೇ? ಕೊನೆಗೂ ಹೇಗೋ ನಮ್ಮ ಪಕ್ಕದ ಡಿಪಾರ್ಟ್ಮೆಂಟಿನಲ್ಲೇ ನಮ್ಮದೂ ಸೇರಿ
ಮಾಡೋಣ ಅಂತ 'ತಳ್ಳಿ' ಹಾಕಿದೆ. ಆದರೆ ಹೋಗೋದು ತಪ್ಪಲಿಲ್ಲ. ಯಾವತ್ತಿಗೂ
ಚಪ್ಪಲಿ ತೆಗೆಯದೆಯೇ ಕಾಲೇಜಿನ ಎಲ್ಲಾ ಮೂಲೆ ಮೂಲೆಗೂ ಓಡಾಡ್ತಿದ್ದವಂಗೆ, ಇವತ್ತು ಚಪ್ಪಲಿ ಹೊರಗಿಟ್ಟು ಬನ್ನಿ ಅಂತ ತಾಕೀತು
ಮಾಡಿದಾಗ ನಗು ಬಂದರೂ ಸುಮ್ಮನಿರಬೇಕಿತ್ತು - ಅವರವರ ನಂಬಿಕೆ. 'ನಮ್ಮದು ಎಜುಕೇಷನಲ್ ಇನ್ಸ್ಟಿಟ್ಯೂಷನ್. ನಾಟ್ ರಿಲೀಜಿಯಸ್' -
ಯಾರಾದರೂ ಯಾಕಿಷ್ಟು ಹಾಳಾಗಿದ್ದಿ ಎಂದವರಿಗೆ ರೆಡಿ
ಮಾಡಿಸಿಟ್ಟ ಉತ್ತರವಾಗಿತ್ತು. ಆದರೆ ಅದಕ್ಕೆ ನಾನೇ ಎಲ್ಲೂ ಆಸ್ಪದ ಮಾಡಿಕೊಡಲಿಲ್ಲ. ಎಲ್ಲೆಡೆಯೂ
ಹೋದೆ, ಚಪ್ಪಲಿ ತೆಗೆದೆ, ಕೈಮುಗಿದೆ,
ಕುಂಕುಮ ಹಚ್ಚಿದೆ, ಪ್ರಸಾದ ಕೊಂಡು ತಿಂದೆ.
ಕ್ಯೂನಲ್ಲಿ ನಿಂತಿದ್ದವನ ಭುಜದ ಮೇಲೆ ನನ್ನ ಶಿಕ್ಷಕರು (ಈಗ ಕಲೀಗ್) ಕೈ ಇಟ್ಟರು. ಮತ್ತೆ
ಗಾಬರಿಯಾಯ್ತು. 'ಬಂದು ನನ್ನ
ಡಿಪಾರ್ಟ್ಮೆಂಟಿನಲ್ಲಿ ಪೂಜೆ ಮಾಡಿ ಕೊಟ್ಟು ಹೋಗಯ್ಯ' ಎಂದು 'ಅಯ್ಯೋ! ಆಗಲ್ಲ'
ಅಂಥ ಹೇಳೋಕ್ಕೂ ಆಸ್ಪದ ಕೊಡದೆ ಓಡಿದರು. ನಾ ಹೋದೆ - 'ಸಾರ್ ನನಗೆ ಪೂಜೆ ಗೀಜೆಯೆಲ್ಲಾ ಬರೋಲ್ಲಾ...' ಅಂತ ಕನಿಷ್ಠ ಇವರ ಬಳಿಯಾದ್ರೂ ನನ್ನ ಮನವನ್ನ
ಬಿಚ್ಚಬೇಕೆನ್ನೋಅಷ್ಟರಲ್ಲಿ, 'ಅಯ್ಯಾ ಅದೆಲ್ಲಾ
ಯಾರಿಗ್ ಬೇಕಯ್ಯ. ಗಂಟೆ ಅಲ್ಲಾಡ್ಸು. ಕರ್ಪೂರ ಹಚ್ಚು. ಪೂಜೆ ಆಗಿದ್ದರ ಕುರುಹಿರ್ಬೇಕಷ್ಟೆ'
ಅಂದರು. ಏನು ಮಾಡೋದೂಂತಲೇ ತಿಳೀದೆ - ಹೂ, ಅಕ್ಷತೆಗಳನ್ನ ಎರಚಿ, ಗಂಧ ಹಚ್ಚಿ ಬ್ರಾಹ್ಮಣನಾಗಿದ್ದು ನಾನು ಮಂತ್ರಗಳನ್ನೆಲ್ಲಾ ಕಲಿತೇ
ಅವುಗಳನ್ನ ತ್ಯಜಿಸಿದ್ದು ಅನ್ನೋದನ್ನ ತೋರಿಸಿಕೊಳ್ಳಲಿಕ್ಕೆ - 'ಗಂಧದ್ವಾರಾಂ...' ಶುರು ಮಾಡಿದೆ.
'ಪೂಜೆ' ಮುಗಿಯೋ ಅಷ್ಟರಲ್ಲಿ
ಮತ್ತೊಂದು ಡಿಪಾರ್ಟ್ಮೆಂಟಿನಿಂದ ಕರೆ ಬಂದಿತು - 'ಬನ್ನಿ. ನಮ್ಮಲ್ಲಿ ಪೂಜೆಯುಂಟು'. ಹೋದಾಗ ನಿಜವಾಗಿಯೂ
ತಿಳೀತು - 'ಶ್ರದ್ಧೆ, ಆಸ್ತೆ' ಅಂದರೇನು ಅಂತ. ಕಾಲೇಜಿನ ಇನ್ನೊಂದು ಸಹೋದ್ಯೋಗಿ ಹತ್ತು ನಿಮಿಷಗಳ ಕಾಲ 'ಅಚ್ಚುಕಟ್ಟಾಗಿ' ಕ್ರಮಬದ್ಧವಾಗಿ ಪೂಜೆಯನ್ನ ಮಾಡಿದ್ದರು. ಮಾಡಿದರಾದ್ರೂ ನಡು ನಡುವೆ
ಮಂತ್ರಗಳ ಉಚ್ಛಾರಣೆಯಲ್ಲಿದ್ದ ದೋಷಗಳನ್ನ - 'ರಾಜಾತಿ ರಾಜಾಯ ಪಸಂಗ್ಯ....' - ಸರಿ ಪಡಿಸದೇ ಹೋದರೆ
ತಮಗೂ ಮಂತ್ರೋಪನಿಷತ್ತುಗಳ ಗಂಧ ಗಾಳಿಇಲ್ಲೆಂದು ತಿಳಿದುಕೊಂಡಾರೆಂದು ಒಂದಿಬ್ಬರು 'ಪ್ರಸಹ್ಯ.. ಪ್ರಸಹ್ಯ...' ಎಂದು ಲೊಚಗೊಟ್ಟಿ ತಲೆಅಲ್ಲಾಡಿಸಿದರು. ದಕ್ಷಿಣೆ ಹಾಕಿ, ಜಿಲೇಬಿ, ಬಾಳೆಹಣ್ಣು, ಮಂಡಕ್ಕಿಪುರಿಗಳನ್ನ
ಹಂಚಿ ಹರ್ಷಿಸಿದರು. ನನಗೊಂದೂ ಅರ್ಥವಾಗಲಿಲ್ಲ, ಅಷ್ಟು 'ಹಾಳಾಗಿದ್ದೆ'.
ಅಂದಹಾಗೆ it need not be a religious institution to celebrate dasara.
Any religion, any community can celebrate this state festival ಅಂತ ಹೇಳ್ತಾರೇನೋ ಯಾರಾದ್ರೂ ಅಂತ ಕಾಯ್ತಿದ್ದೆ. ಯಾರೂ ಹೇಳಿರಲಿಲ್ಲ.
ಪ್ರಾಯಶಃ ತಪ್ಪು ತಿಳಿದ್ರೇನೋ. Of course, how can an educational institution
bring a practice of particular community in its premises and safely keep the
practices of other communities outside its premises? ಅಂತ ನಾ ಪ್ರಶ್ನೆ ಕೇಳಿದರೂ ನಾನೇ ಸುಮ್ಮನಾಗ್ತೇನೆ - when
the 'STATE' itself is celebrating it, I have no proper justification for my
question - or I may have lack of knowledge ಅನ್ನೋದು ನನ್ನ ಪ್ರಶ್ನೆಗೆ ಮರುತ್ತರವಾಗಿ ಹುಟ್ಟುತ್ತದೆ. ನನ್ನ ಭಯ ಇರೋದೆಲ್ಲಾ ನಾನು
ಒಬ್ಬಂಟಿಯಾಗ್ಹೋಗಿಬೇಕಾಗತ್ತೆಂದಷ್ಟೇ. ಬರೀ ದೇವರಷ್ಟೇ ಅಲ್ಲ - ಯಾವುದರಲ್ಲೂ ನಂಬಿಕೆಯನ್ನ
ಇರಿಸದೇ ಇರೋರಿಗೆ ಜೀವನ ರಸಹೀನ, ದುರ್ಬಲ. ಅದು ನನ್ನ ಕಲ್ಪನೆಯೋ ಅಥವಾ ಭಯವೋ ತಿಳೀದು -
ಇವನ್ನೆಲ್ಲಾ ಅನುಸರಿಸದೇ ಹೋದರೆ ಜನ ನನ್ನ ತಿರಸ್ಕರಿಸಿಯಾರು ಅನ್ನೋ ಭಾವ. ಪ್ರಾಯಶಃ ಇಂಥಹ
ಸ್ಥಿತಿಯನ್ನ ನಿರ್ಮಾಣ ಮಾಡಿ, ಪಾಲ್ಗೊಳ್ಳದೇ
ಇದ್ದರೆ ತಿರಸ್ಕರಿಸಿಯಾರೆನ್ನುವ ಭಯ ಹುಟ್ಟಿಸಿ, ಅನಿವಾರ್ಯವಾಗಿ, ಯಾಂತ್ರಿಕವಾಗಿ
ವರ್ತಿಸೋದನ್ನ ಅವರು ಹೇಗೆ ತಡೀಲಿಕ್ಕೆ ಸಾಧ್ಯ? ತಡೀಬೇಕಾದೋನು ನಾನೆಯೇ. ಬೇಕಿದ್ದಲ್ಲಿ ಬೇಕು, ಇಲ್ಲಾದಲ್ಲಿ ಇಲ್ಲ. ಇದು ಮೆನೇಲೂ ಉಂಟಲ್ಲ? ಚುಟ್ಟೀಕೆರೆಯಲ್ಲೂ ಹೀಗೇನಿಲ್ಲೆಂದಿಲ್ಲ. ನಾನು ಹಾಳಾಗಿದ್ದೇನೆ
ಅನ್ನೋದು ಸ್ವಲ್ಪ ಮಟ್ಟಿಗೆ ನನ್ನ ಅತ್ತೆ ಮಾವನವರಿಗೆ ತಿಳಿದಿದೆ. ಸ್ವಲ್ಪ ಉಸಿರಾಡಬಹುದಾಗಿದೆ.
ದಸರಾ ನನ್ನ ಮಟ್ಟಿಗೆ ನನ್ನ ಹಾಗೂ ನನ್ನ ಕ್ಯಾಮೆರಾ ಕಣ್ಣಿಗೆ ನೆನಪಿನ ವಸ್ತುವಿನ ಹಾಗೆ.
ಕ್ಲಿಕ್ಕಿಸಿದ್ದನ್ನ ಇನ್ನೆಂದೋ ನೋಡಿಕೊಂಡು ವಿನಾಕಾರಣ ಸಂತೋಷಿಸೋಕ್ಕೆ. ಮುಂದಿನ ವರ್ಷ ಆಯುಧ
ಪೂಜೆಯ ಹಿಂದಿನ ದಿನ ಕಾಲೇಜಿಗೆ ಚಕ್ಕರ್ ಹಾಕಬೇಕೆಂದಿದ್ದೇನೆ. ಹೇಡಿಯೆಂದರೂ ಓಕೆ -
ನಾಚಿಕೆಯಿಲ್ಲ.
No comments:
Post a Comment