ಆಗಷ್ಟೇ 'ಗಾಳಿಪಟ' ಸಿನೆಮಾ ಹೊರಬಂದಿತ್ತು. 'ಮಿಂಚಾಗಿ ನೀನು ಬರಲು..' ಹಾಡನ್ನ ಮನಸ್ಸು ಹೋದಲ್ಲೆಲ್ಲಾ ತಂತಾನೇ ಗುನುಗಿಕೊಳ್ತಿತ್ತು. ಇದು ನಯನಾ, ನಯನಾ ಜಮದಗ್ನಿ ಮೇಲಿನ ಕಿಟ್ಟಿಯ ಮೋಹವನ್ನ ಇಮ್ಮಡಿಗೊಳಿಸಿತ್ತು. ಟ್ಯೂಷನ್ನಿನ ಮೆಟ್ಟಿಲುಗಳ ಮೇಲೆ ಕುಳಿತು ಓರೆಗಣ್ಣಿನಿಂದ ಆಕೆ ತನ್ನನ್ನೇ ನೋಡುವಳೆಂದು ಆತ ನೆನೆಸಿದ್ದೆಲ್ಲಾ ಅಕ್ಷರಶಃ ಸತ್ಯವೇ. ಟಿ.ಬಿ. ಸರ್ಕಲ್ಲಿನಲ್ಲಿ ಒಂದೇ ಆಟೋ ಹತ್ತಿದಾಗಿನಿಂದ, ಮಾತು ಕತೆಯೇ ಇಲ್ಲದೇ, ಆಟೋದಲ್ಲಿ ಹಾಕಿದ ಹಾಡುಗಳಿಗೆ ಮನಸ್ಸನ್ನ ಕೊಟ್ಟು, ಹೊರಗೆ ನೋಡುತ್ತಾ, ಆಕೆ ತನ್ನನ್ನೇ ನೋಡುತ್ತಿದ್ದಾಳೆಂದು ಕಿಟ್ಟಿ, ಹಾಗೆಯೇ ಕಿಟ್ಟಿ ತನ್ನನ್ನ ಎಂದು ಇಬ್ಬರೂ ಊಹಿಸುತ್ತಾ ಗಾಳಿಗೆ ಕೂದಲು ಕೆದರಿಸಿಕೊಳ್ಳುತ್ತಾ, ಸರಿ ಮಾಡಿಕೊಳ್ಳುವ ನೆವದಿಂದ ಒಬ್ಬರನ್ನೊಬ್ಬರು ನೋಡುವ ಪ್ರಯತ್ನ ಇಬ್ಬರಿಗೂ ಪದೇ ಪದೇ ಬೇಕೆನಿಸುವ ಮತ್ತಿನಂತಾಗಿತ್ತು. ಒಮ್ಮೊಮ್ಮೆ ಮತ್ತೊಬ್ಬ ಜನ ಬಂದಾಗ ಸ್ವಲ್ಪ ಒಳಗೆ ಒತ್ತಾಗಿ ಕೂರಬೇಕಾಗಿ ಬಂದ ಸಂದರ್ಭ, ಕಿಟ್ಟಿಯ ಮನಸ್ಸು ಧಸ್ಸೆಂದು ಕುಸಿದೇ ಹೋಗುತ್ತಿತ್ತು. ಸೋಕಿದ ಮೈಗೆ, ಗಾಳಿಗೆ ಕೆದರಿ ಮುಖದ ಮೇಲೆ ಹಾರುತ್ತಿದ್ದ ಕೂದಲಿಗೆ, ಆಕೆಯ ದೇಹದ ವಾಸನೆಗೆ, ಕಿಟ್ಟಿ ಎದೆಬಡಿತ ನಿಂತೂ ನಿಂತೂ ಹೊಡೆದಂತೆ ಭಾಸವಾಗುತ್ತಿತ್ತು. ಒಮ್ಮೊಮ್ಮೆ ಚಿಲ್ಲರೆ ಇಲ್ಲದಿದ್ದಾಗ ಆಕೆಯದ್ದೂ ಸೇರಿ ಕಿಟ್ಟಿ ಕೊಡುವಾಗ ಆತನೂ ಆಕೆಯನ್ನ ನೋಡುತ್ತಿರಲಿಲ್ಲ, ಅವಳೂ ಸಹ. ಒಂದು 'ಥ್ಯಾಂಕ್ಯೂ' ಸಹ ಇಲ್ಲ. ಆದರೆ ವಾಪಾಸು ಹೊರಡುವಾಗ ಆತನದ್ದೂ ಸೇರಿ ಕೊಡುವ ಸರದಿ ಆಕೆಯದ್ದಾಗಿರುತ್ತಿತ್ತು. ಅದ್ಕಾಗಿಯೇ ಆಕೆಯೇ ಮೊದಲು ಇಳಿಯುವ ಹಾಗೆ ಕೂರ್ತಿದ್ದಳು. ಇಷ್ಟೆಲ್ಲಾ ವ್ಯವಹಾರಗಳೂ ಮೂಕೀ ಪರದೆಯಲ್ಲೇ, ಕತ್ತಲಲ್ಲೇ ನಡೆಯುತ್ತಿದ್ದದ್ದು. ಮಾತಿಲ್ಲ ಕತೆಯಿಲ್ಲ ನೋಟದ ವಿನಿಮಯಗಳೂ ಇಲ್ಲ.