ತನ್ನ ಬಳಿ ಬಂದಲ್ಲಿ ಆಕೆಗೇನಾದರೂ ದೊರೆತೀತು ಅಂತ ಅರುಹಿದವರಾದರೂ ಯಾರು? ಬೆಳಗ್ಗಿನಿಂದ ಶಾಂತಲೆಯ ತಲೆಯಲ್ಲಿ ಇದೇ ಸುತ್ತುತ್ತಿತ್ತು. ತಾನು ಶಕ್ತಳೇ ಹೌದಾದರೂ 'ಯಾರೋ ಹೇಳಿಸಿಯೇ ಕಳುಸಿರಬೇಕು. ನಾಳೆ ಸಿಕ್ಕಾಗ ಕೇಳೋಣ' ಎಂದುಕೊಂಡಳು. ಆದರೆ ಆಕೆಯ ಊಹೆ ಸುಳ್ಳಿತ್ತು. ಆ ಹುಡುಗಿ ಯಾರದೋ ಸಲಹೆಯನ್ನ ಮನ್ನಿಸಿ ಬಂದಿರಲಿಲ್ಲ. ಸ್ವಪ್ರೇರಣೆಯಲ್ಲೇ ಶಾಂತಲೆಯನ್ನ ಅರಸಿ ಬಂದಿದ್ದಳು. ಶಾಂತಲೆ ಕಾಲೇಜಿನ ಪ್ರಾಂಶುಪಾಲೆಯಾದ್ದರಿಂದ ಆಕೆಯನ್ನ ಅರಸಿ ಬರೋದು ಸಹಜವೇ ಅಲ್ಲವೇ. ಇದು ಆಕೆಗೆ ಅಸಲಿಗೂ ಹೊಳೆಯಲಿಲ್ಲವಲ್ಲ.
******
ಎಂದಿನ ಸಮಯದಂತೆ ಶಾಂತಲೆ ಕಾಲೇಜಿಗೆ ಬಂದಾಗ ತನ್ನ ಚೇಂಬರಿನ ಹೊರಗೆ ಸೋಪಾದ ಮೇಲೆ ಹುಡುಗಿ ಕುಳಿತಿರುವುದು ಕಂಡಿತು. ಶಾಂತಲೆ ಬರುತ್ತಿದ್ದಂತೆ ಆಕೆ ಎದ್ದು ನಿಂತು ಬಲವಂತದ ನಗೆ ಬೀರಿ, ನಮಸ್ಕರಿಸಿದಳು. ಕಾಲೇಜಿಗೆ ಬರುತ್ತಿದ್ದಂತೆ ಶಾಂತಲೆಯ ಮೊದಲ ಕೆಲಸ - ಬ್ಯಾಗುಗಳನ್ನು ಚೇಂಬರಿನಲ್ಲಿ ಇಡುವುದು. ಅಲ್ಲಿಗೆ ಒಂದು ಭಾರ ಇಳಿದಂತೆ. ನಂತರವೇ ಉಳಿದ ಕೆಲಸ. ದಾರಿಯಲ್ಲಿ ಯಾರೇ ಕಂಡರೂ, ಮೊದಲು ಬ್ಯಾಗಿನ ಭಾರ ಇಳಿಯದೆ ಆಕೆ ಮಾತಿಗೂ ಇಳಿಯುತ್ತಿರಲಿಲ್ಲ. ಚೇರಿನ ಮೇಲೆ ಕುಳಿತು ತನ್ನ ಡೆಸ್ಕ್ಟಾಪ್ ಕಂಪ್ಯೂಟರ್ ಆನ್ ಮಾಡಿ ಮೇಲ್ ಚೆಕ್ ಮಾಡುವುದು ಆಕೆಯ ನಂತರದ ಕೆಲಸ. ಕಂಪ್ಯೂಟರ್ ಆನ್ ಮಾಡುತ್ತಿದ್ದ ಜೊತಗೆಯೇ ಹೊರಗಿನ ಹುಡುಗಿಯ ಮುಖ ನೆನಪಿಗೆ ಬಂದಿತು. ಒಂದೆರೆಡು ಸೆಕೆಂಡುಗಳಷ್ಟೇ ಗಮನಿಸಿದ್ದರೂ, ಆ ಹುಡುಗಿಯ ಪೇಲವ ಮುಖ ಕಣ್ಣಿಗೆ ಕಟ್ಡಿತ್ತು. ಒಡನೆಯೇ ಎದ್ದು ತಾನೇ ಹೊರಗೆ ಬಂದಳು.
ಸ್ನಾತಕೊತ್ತರ ಪದವಿಯ ಎರಡನೆಯ ಸೆಮೆಸ್ಟರಿನ ವಿದ್ಯಾರ್ಥಿನಿ - ಗೋಧಿ ಬಣ್ಣದ ಕೋಲು ಮುಖ - ಕುರೂಪಿಯೇನಲ್ಲ, ತುಂಬಿದ ಮೈಕಟ್ಟು- ಕಣ್ಣಲ್ಲಿ ನೀರು ಹರಿಸುತ್ತಾ ತನ್ನ ಮುಂದೆ ನಿಂತಾಗ ಪ್ರಾಯಶಃ ಸಾಮಾನ್ಯವಾದ ಹೆಂ-ಸಮಸ್ಯೆಗೆ ಸಿಲುಕಿರಬೋದೆಂದು ಮೊದಲ ನೋಟಕ್ಕೆ ಊಹಿಸಿದಳು ಶಾಂತಲೆ. ಹಾಗಾಗಿ ಇದು ಎಂದಿನ ವಿದ್ಯಾರ್ಥಿಗಳ ಭೇಟಿಯಂತಿರಲಿಲ್ಲ. ಈಚೀಚೆಗೆ ವಿದ್ಯಾರ್ಥಿಗಳ ಇನ್ಸೆಂಸಿಬಲ್ ಅವಹಾಲುಗಳು, ಗೋಳುಗಳು ಹೆಚ್ಚಾಗಿ - "ವಿದ್ಯಾರ್ಥಿಗಳ ಭೇಟಿ ಮಧ್ಯಾನ 3 ಗಂಟೆಯ ಮೇಲೆ" ಎಂದು ಚೇಂಬರಿನ ಹೊರಗೆ ದೊಡ್ಡದಾಗೊಂದು ಬರೆಸಿ ಅಂಟಿಸಿದ್ದಳು. ಪ್ರಾಂಶುಪಾಲೆಯಾಗಿ ಚಾರ್ಜ್ ತೆಗೆದುಕೊಂಡಾಗ ಹೀಗೆ ಇರಲಿಲ್ಲ. ಯಾವ ವೇಳೆಯೇ ಆಗಲಿ, ವಿದ್ಯಾರ್ಥಿಗಳ ಗೋಳುಗಳನ್ನ, ಸಮಸ್ಯೆಗಳನ್ನ ಕೇಳುತ್ತಾ ಕುಳಿತಿರುತಿದ್ದಳು. ಆದರೆ ಸಣ್ಣ ಪುಟ್ಟ ವಿಚಾರಗಳಿಗೂ ಕಿವಿ ಕೊಡುವುದು ತಲೆಬೇನೆಯಾಯಿತು. ಹಾಗಾಗಿ ಅದನ್ನು ಕೊಂಚ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಸಮಯ ಮೂರರ ಮೇಲೆ ಎನ್ನುವ ಸುತ್ತೋಲೆ ಹೊರಡಿಸಿದಳು. ಮುಖ ನೋಡಿಯೇ ಆತ ಏನು ಎಂದು ಹೇಳುವಷ್ಟು ನನ್ನ ಸರ್ವೀಸ್ ನನಗೆ ಕಲಿಸಿಬಿಟ್ಟಿದೆ ಎಂದು ಸಾಕಷ್ಟು ಬಾರಿ ಶಾಂತಲೆ ಹೇಳುತ್ತಿದ್ದದ್ದೂ ಹೌದು. ಆದರೆ ಆ ಹುಡುಗಿಯ ಸಮಸ್ಯೆ ಈಗಾಗಲೇ ತಾನು ಎದುರಿಸಿದ್ದಕ್ಕೆ ಮತ್ತೊಂದು ಸೇರ್ಪಡೆ ಎನ್ನೋದು ಕಥೆ ಕೇಳಿದಾಗಲೇ ತಿಳಿದದ್ದು.
'ಆ' ಹುಡುಗಿ ಇಲ್ಲೇ ನಂಜನಗೂಡು ಬಳಿಯ ಸಿಂಗನಹಳ್ಳಿಯವಳು. ಅಪ್ಪ, ಅಮ್ಮ ಮತ್ತು ತಮ್ಮ ಈಕೆಯ ಫ್ಯಾಮಿಲಿ. ಪ್ರತೀ ದಿನ ಬಸ್ಸಿನಲ್ಲಿ ಮೈಸೂರಿಗೆ ಅಪ್ ಅಂಡ್ ಡೌನ್ ಮಾಡುತ್ತಿದ್ದಳು. ಸಂಜೆ ವಾಪಾಸ್ಸಾಗುವಾಗ ನಂಜನಗೂಡಿಗೆ ಹೋಗಿ, ಅಲ್ಲಿಂದ ಇವರ ಹಳ್ಳಿಗೆ ಹೋಗುತ್ತಿದ್ದ ಒಂದೋ ಎರಡೋ ಬಸ್ಸನ್ನು ಸಮಯಕ್ಕೆ ಸರಿಯಾಗಿ ಹಿಡಿದು ಹಳ್ಳಿಗೆ ಹೋಗಬೇಕಿತ್ತು. ಬಸ್ ಮಿಸ್ಸಾದಲ್ಲಿ ಅಪ್ಪ ಅಥವಾ ತಮ್ಮ ಬೈಕಿನಲ್ಲಿ ಒಯ್ಯಲು ಬರುತ್ತಿದ್ದರು. ಕಡೆಯ ಬಸ್ ಇದ್ದದ್ದು ಸಂಜೆ 5:50ಕ್ಕೆ. ಹಾಗಾಗಿ ಆಕೆ ಮಧ್ಯಾಹ್ನದ ಲ್ಯಾಬನ್ನು ಸ್ವಲ್ಪ ಬೇಗ ಬಿಡಬೇಕೆಂದು ಮೊದಲೇ ಕೇಳಿಕೊಂಡು ಕಾಲೇಜಿಗೆ ಸೇರಿಕೊಂಡಿದ್ದಳು. ಆದರೂ ಅದಕ್ಕೊಂದು ಪರ್ಯಾಯ ವ್ಯವಸ್ಥೆ ಕೂಡಲೇ ಮಾಡಿಕೋಬೇಕೇಂದು ಆಕೆ ಕಾಲೇಜಿಗೆ ಸೇರಿದ ಮೇಲೆ ಪ್ರಾಧ್ಯಾಪಕರು ರಿವರ್ಸು ಗೇರು ಹಾಕಲಾರಂಭಿಸಿದರಿಂದ ಆಕೆಗೆ ಇದು ಕಷ್ಟವೇ ಆಯಿತು. ಮೊದಲ ಸೆಮಿಸ್ಟರಿನಾರ್ಧದವರೆಗೆ ಹಾಗೋ ಹೀಗೋ ಮಧ್ಯಾಹ್ನ ಲ್ಯಾಬ್ ಇದ್ದ ದಿನಗಳು ಬೇಗನೇ ಕಾಲೇಜನ್ನು ಬಿಟ್ಟು ಮನೆ ಸೇರಿಕೊಳ್ಳುತ್ತಿದ್ದಳು. ಆದರೆ ಕಾಲೇಜಿನಲ್ಲಿ ಇವಳ ಅಹವಾಲಿನ ಅವಧಿ ಎಕ್ಸ್ ಪೈರಿ ಆಗುತ್ತಿದ್ದಂತೆ, ಆಕೆ ಅಪ್ಪ, ತಮ್ಮನ ಮೇಲೆ ಹೆಚ್ಚು ಅವಲಂಬಿತವಾಗಬೇಕಾಯಿತು. ಆಕೆಯ ತಂದೆ ಒಬ್ಬ ಕ್ಯಾಬ್ ಡ್ರೈವರ್. ಆತನಿಗೇ ಇದೇ ತನ್ನ ವರ್ಕಿಂಗ್ ಅವರ್ಸ್ ಎಂದು ನಿಗದಿಯಿಲ್ಲ. ಕಸ್ಟಮರ್ಸ್ ಕರೆದ ಸಮಯವೆಲ್ಲಾ ಡ್ಯೂಟಿಯೆ. ಒಮ್ಮೊಮ್ಮೆ ಮಧ್ಯರಾತ್ರಿಯೂ ನಿದ್ದೆಯಿಂದೆದ್ದು ಹೋಗಿದ್ದುಂಟು. ಕೆಲವೊಮ್ಮೆ ವಾರ ತಿಂಗಳುಗಟ್ಟಲೆ ಹೊರಗೇ ಇರುತ್ತಿದ್ದ. ಹಣಕ್ಕೇನೂ ಕಷ್ಟವಿಲ್ಲ. ತಮ್ಮನದ್ದು ಡಿಗ್ರಿ ಮೊದಲ ವರ್ಷ. ನಂಜನಗೂಡಿನ ಸರ್ಕಾರಿ ಕಾಲೇಜಿಗೆ ಸೇರಿದ್ದ. ಮಧ್ಯಾಹ್ನದ ಊಟದ ಸಮಯದವರೆಗಷ್ಟೇ ಇವನ ತರಗತಿಗಳು. ಊರಿಗೆ ಮಧ್ಯಾಹ್ನದ ಮೇಲೆ ಇದ್ದ ಮೊದಲ ಬಸ್ ಮೂರು ಕಾಲಿಗೆ ಆದ್ದರಿಂದ, ಊಟದ ಬಾಕ್ಸ್ ತಂದುಬಿಡುತ್ತಿದ್ದ. ತಪ್ಪದೇ ಮೂರು ಕಾಲಿನ ಬಸ್ ಹಿಡಿದು ಮನೆ ಸೇರಿಬಿಡುತ್ತಿದ್ದ.
*****
ತಂದೆಯ ವೃತ್ತಿಯೇ ಅವನ ವರ್ತನೆಗೆ ಕಾರಣವೇನೋ. ಸಾಕಷ್ಟು ಊರುಗಳನ್ನ ಸುತ್ತಿ, ಜನ-ಜೀವನ ನೋಡಿ, ಕಥೆ ಕೇಳಿ, ತನ್ನದೂ ಒಂದಿಷ್ಟು ವಿವಾಹೇತರ ಸಂಬಂಧಗಳ ಹಿನ್ನಲೆಯಲ್ಲೇ ಆತನ ಸುಪ್ತ ಪ್ರಜ್ಞೆ ಕೆಲಸ ಮಾಡುತ್ತಿದ್ದಿರಬೋದು.
*****
ಮೊದ ಮೊದಲು ಬಸ್ಸು ಮಿಸ್ಸಾಗಿ ಹ್ಯಾಗೋ ಅವರಿವರನ್ನ ಹಿಡಿದು ಕಷ್ಟಪಟ್ಟು ಮಗಳು ತಾನಾಗೇ ಮನೆ ಸೇರಿಕೊಳ್ಳುತ್ತಿದ್ದಳು. ಆಗ ಮಗನಿಗೆ ಅಪ್ಪನಿಂದ ಲಾತ ಬೀಳುತ್ತಿದ್ದವು. ಆದರೆ ದಿನಗಳೆದಂತೆ ಇದು ಪುನರಾವರ್ತಿಸಲು, ನೇರವಾಗಿ ಮಗಳನ್ನೇ ಬೈಯಲಾರಂಭಿಸಿದ -"ಯಾವ ಬೋಸುಡಿ ಮಗನಿಗೋಸ್ಕರ ಕಾಯ್ತಾ ಇರ್ತಿದ್ದೆ? ಏನಾದ್ರೂ ಆಥರ ಇದ್ರೆ ಇಲ್ಲಿಗೇ ನಿಲ್ಲಿಸಿಬಿಡು ಹಲ್ಕಾ ಲೌಡಿ."
ಈ ರೀತಿಯ ಮಾತುಗಳು ಮನೇಲಿ ಹೊಸತೇನಲ್ಲ. ಅಪ್ಪನ ವ್ಯೊಕಾಬ್ಯುಲರಿ ಮುಂಚಿಂದಲೂ ಇವರಿಗೆಲ್ಲಾ ಗೊತ್ತು. ಆದರೆ ತನ್ನ ನಡತೆ ಅನುಮಾನಿಸಿದ್ದಕ್ಕೆ ಇವಳಿಗೆ ತಡೆಯಲಾಗಲಿಲ್ಲ.ಈ ಹಿಂದೆ ಸಾಕಷ್ಡು ಬೈಗಳುಗಳು ಬೇರೆ ಕಾರಣಕ್ಕೆ ತಿಂದಿದ್ದರೂ, ಪ್ರಾಯಶಃ ತನ್ನ ನಡತೆಗೆ ಆತ ಹೊಡೆದಿದ್ದು ಇದೇ ಮೊದಲು. ಅವಳಿಗೆ ಈ ಅನಿರೀಕ್ಷಿತ ನಡೆಯಿಂದ ದಿಗಿಲೂ ಆಯಿತು. ಆದರೆ ಎಂದಿಗಾದರೂ ಅಮ್ಮನಿಗೆ ಆಗ್ತಾ ಇದ್ದದ್ದು ತನಗೂ ಆದಾತು ಎನ್ನುವ ಕಹಿ ಭಯವೊಂದು ಮನದಲ್ಲಿದ್ದರು ಅದು ಈಗಲೇ ಇಷ್ಟು ಬೇಗನೆ ಎರಗುವುದೇ ಎಂದು ಆಕೆ ಎಣಿಸಿರಲಿಲ್ಲ. "ಸತ್ಯವಾಗಿಯೂ ತಾನು ಹಾಗೆಲ್ಲಾ ಮಾಡೋಳಲ್ಲ. ಡೌಟಿದ್ರೆ ಕಾಲೇಜಿನಲ್ಲೂ ಕೇಳಿ ನೋಡು" ಎಂದು ಆಕೆ ಹೇಳಿದರೂ ಅಷ್ಟು ಸುಲಭವಾಗಿ ಅದನ್ನೆಲ್ಲಾ ಒಪ್ಪುವ ಆಸಾಮಿಯೇ ಆತ! "ನಿಮ್ಮಮ್ಮನ ಮೇಲಾಣೆ. ಅವಳ ತಲೆ ಮೇಲೆ ಕೈಯಿಟ್ಟು ಹೇಳು. ಆಥರ ಯಾವುದೂ ಇಲ್ಲ ಅಂತ" ಎಂದು ಅವ ಹಾಕಿದ ಗುಟುರಿಗೆ ಈಕೆ ಹೆದರಿ ಅಮ್ಮನ ತಲೆಮೇಲೆ ಕೈ ಇಟ್ಟು ಆಣೆ ಮಾಡಿದಳು. "ಹೂಂ. ನಮ್ಮನೆ ಮಾನ ಮರ್ಯಾದೆ ಎಲ್ಲಾ ಮೂರು ಕಾಸಿಗೆ ಹರಾಜು ಹಾಕಿದ್ರೆ ಮಗಳು ಅಂತಲೂ ನೋಡದೇ ಸಿಗಿದು ಬಿಡ್ತೀನಿ ಲೌಡಿ" ಎಂದು ಕೂಗಿದ. ಅವಳು ಬೆಚ್ಚಿದಳು. ಈ ರಂಪ ರಾಮಾಯಣಗಳೆಲ್ಲಾ ಅವನು ಮನೇಯಲ್ಲಿದ್ದಾಗಷ್ಟೇ. ಹೊರಗೆ ಕೆಲಸದ ಮೇಲೆ ಹೋಗಿದ್ದಲ್ಲಿ ಉಳಿದ ಮೂವರು ಹೇಗೋ ಹೊಂದಾಣಿಕೆಯಲ್ಲಿ ಸಂಭಾಳಿಸಿಕೊಳ್ಳುತ್ತಿದ್ದರು. ಅಮ್ಮನಿಗೆ ಇದೆಲ್ಲಾ ಹೊಸತಲ್ಲ. ಮಗಳಿಗೂ ಮುನ್ನ ಅವನ ಪ್ರಹಾರಗಳೆಲ್ಲಾ ಹೆಂಡತಿಯ ಮೇಲೆ ನಡೆಯುತ್ತಿತ್ತು.
ಪ್ರಾಯಶಃ ಇದೇ ಕಾರಣಕ್ಕೆ ಡಿಗ್ರಿಯವರೆಗೆ ಆಕೆಯನ್ನ ನಂಜನಗೂಡು ಬಿಟ್ಟು ಹೊರಗೆ ಆಕೆಯ ಅಮ್ಮ ಕಳುಹಿಸಿರಲಿಲ್ಲ. ಡಿಗ್ರಿಯಲ್ಲಿ ಇಡೀ ಕಾಲೇಜಿಗೆ ಪ್ರಥಮ ರ್ಯಾಂಕ್ ಪಡೆದಿದ್ದಳು. ಆಕೆಯನ್ನ ಸನ್ಮಾನಿಸುವ ದಿನ ತಂದೆ ತಾಯಿಯರಿಬ್ಬರೂ ಬಂದಿದ್ದರು. ಉನ್ನತ ಶಿಕ್ಷಣಕ್ಕಾಗಿ ಅಕೆಯನ್ನ ಮೈಸೂರಿಗೆ ಕಳುಹಿಸಲೇಬೇಕೆಂಬ ಸಲಹೆ ರೂಪಿತ ಒತ್ತಡವನ್ನ ಆಕೆಯ ತಂದೆಯ ಮೇಲೆ ಪ್ರಾಧ್ಯಾಪಕರೆಲ್ಲಾ ಹೇರಿದರು. ಆಕೆಗೆ ಭೌತಶಾಸ್ತ್ರದಲ್ಲಿ ಎಂ. ಎಸ್ಸಿ. ಮಾಡಬೇಕೆಂಬ ಇಚ್ಛೆ. ಅಂತೆಯೇ ಮೈಸೂರಿನ ಒಂದು ಖಾಸಗಿ ಕಾಲೇಜಿನಲ್ಲಿ ಸೀಟು ಗಿಟ್ಟಿಸಿದ್ದಳು.
*****
ಅಂದು ಅಪ್ಪ ಅತೀ ಜರೂರು ಎಂದು ಬೆಳಗ್ಗೆಯೇ ಕೆಲಸಕ್ಕೆ ಹೊರಟವನು ಮೂರು ದಿವಸಗಳ ವರೆಗೆ ವಾಪಾಸ್ಸಿಲ್ಲ ಎಂದು ಹೇಳಿ ಹೋಗಿದ್ದು ಇವಳ ಗಮನಕ್ಕೆ ಬಂದಿತ್ತು. ಹಾಗಾಗಿ ಕೊಂಚ ನಿರಾಳವಾಗಿ ಮನೆಗೆ ಬರಬೋದೆಂದು ಬಗೆದದ್ದೇ, ಸಂಜೆಯ ಕೊನೆಯ ಬಸ್ಸು ಮಿಸ್ಸಾಗಿತ್ತು. ಪಕ್ಕದ ಬೀದಿಯ ಸುರೇಶ ಆ ಹೊತ್ತಿಗೆ ಸಿಕ್ಕಿದ್ದರಿಂದ ಅವನ ಬೈಕಿನಲ್ಲಿ ಹಿಂದೆ ಕೂತು ಊರಿಗೆ ಹೋಗುತ್ತಿದ್ದಳು. ಹಾದಿಯಲ್ಲಿ ಇವರನ್ನ ದಾಟಿ ಒಂದು ಕಾರು ಹೋಯಿತು. ಅದು ಅವರಪ್ಪನ ಕಾರು. ಇವಳಿಗೆ ಚಿಂತೆ ಹತ್ತಿತು. "ಸುರೇಶಣ್ಣ ಇಲ್ಲಿಯೇ ನಿಲ್ಲಿಸಿಬಿಡು" ಎಂದು ಹಾದಿಯಲ್ಲೇ ಒಂದೆರೆಡು ಮೈಲು ದೂರಿರುವಾಗಲೇ ಇಳಿದು ಮನದಲ್ಲೇ ಲೆಕ್ಕ ಹಾಕುತ್ತಾ ಮನೆಯ ಕಡೆ ನಡೆದಳು. "ಅಪ್ಪ ತನ್ನನ್ನ ನೋಡಿಬಿಟ್ಟಿರ್ತಾನೆಯೇ? ನೋಡಿದ್ದರೆ ಕಾರು ನಿಲ್ಲಿಸಬೇಕಿತ್ತಲ್ಲ? ನಮ್ಮೂರಿಂದ ನಾನೊಬ್ಬಳೇ ಈ ಯೂನಿಫಾರ್ಮಿನಲ್ಲಿ ಹೋಗೋಳು. ಅಪ್ಪನಿಗೆ ಗೊತ್ತಾಗಿಯೇ ಇರ್ತದೆ. ಆದರೂ ಕಾರು ನಿಲ್ಲಿಸಲಿಲ್ಲವೇ? ಆಕೆಗೆ ಬಗೆಹರಿಯದ ಗೊಂದಲವಾಯಿತು. ಅಥವಾ ಅಪ್ಪನ ಕಾರನ್ನ ಮಾಮೂಲು ಒಮ್ಮೊಮ್ಮೆ ನಚಿ ಅಂಕಲ್ ತಂದು ಮನೆಗೆ ಬಿಡ್ತಿದ್ದರಲ್ಲ ಹಾಗೆ ಇವತ್ತೂ ಬಿಟ್ಟಿರಬೋದೇ? ಅಪ್ಪ ಒಮ್ಮೊಮ್ಮೆ ನಚಿ ಅಂಕಲ್ ನ ಕಾರು ತೆಗೆದುಕೊಂಡು ಹೋಗ್ತಾರಲ್ಲ. ಹಾಗೆಯೇ ಹಾಗಿದ್ದಿರಬೋದು. ಹಾಗೆಯೇ ಆಗಿರಲಪ್ಪ ದೇವರೆ. ಹೇಗೂ ಮೂರು ದಿವಸ ಇರೋಲ್ಲ ಅಂತ ಹೇಳಿರೋದ್ರಿಂದ ನಚಿ ಅಂಕಲ್ ನ ಕಾರೇ ತೆಗೊಂಡು ಹೋಗಿರಬೇಕು" ಅಂತ ಸಮಾಧಾನದಲ್ಲಿ ಆಕೆ ಮನೆ ರೋಡಿನ ಕಡೆಗೆ ತಿರುಗಿದ್ದೇ, ಕಾರು ಕಾಣಿಸಿತು. ಗೇಟಿನ ಹೊರಗೆ ನಚಿ ಅಂಕಲ್ ಸಹ ಕಾಣಿಸಿದ್ದರಿಂದ ಆಕೆಯ ಲೆಕ್ಕಾಚಾರಗಳೆಲ್ಲಾ ಅಲ್ಲಿಗೆ ಸ್ಥಗಿತಗೊಂಡವು. ಮನೆಯ ಗೇಟನ್ನು ತೆರೆಯಲು ಬಂದವಳೇ ದಂಗು ಬಡಿದು ನಿಂತಳು. ಎದೆಯ ಬಡಿತ ಹೆಚ್ಚಿತು. ಅಪ್ಪ ಅಲ್ಲೇ ಯಮಕಿಂಕರನ ರೀತಿ ನಿಂತಿದ್ದ. ಈಕೆಗೆ ಅವನ ಮುಖವನ್ನು ನೋಡುವ ಸ್ಥೈರ್ಯವೂ ಇರಲಿಲ್ಲ. ಬಂದವಳೇ ಅವಳ ಕೈಯನ್ನು ದರದರ ಹಿಡಿದು ಎಳೆದು ಒಳಗೆ ಓಡಿದ. ಯಾವುದೋ ಕಾರಣಕ್ಕೆ ಕಸ್ಟಮರಿಗೂ ಇವನಿಗೂ ಆಗಿಬರದೆ ದೊಡ್ಡ ಜಗಳವೇ ಆಗಿ, ಟ್ರಿಪ್ಪು ಕ್ಯಾನ್ಸಲ್ ಆಗಿತ್ತು. ಕೋಪದಲ್ಲಿದ್ದವನನ್ನು ಕೊನೆಗೆ ನಚಿ ಸಮಾಧಾನ ಮಾಡಿ ತಾನೇ ಗಾಡಿ ಓಡಿಸಿಕೊಂಡು ಕರಕೊಂಡು ಬಂದಿದ್ದ. ಈ ಸಂದರ್ಭದಲ್ಲಿ ಮಗಳ ಈ ಅವತಾರ ಅವನನ್ನ ಇನ್ನೂ ರೊಚ್ಚಿಗೇಳಿಸಿತು. ಮಗಳಲ್ಲೇ ಆ ಕಸ್ಟಮರೂ ಕಂಡನೋ ಏನೋ. ನಾಲ್ಕು ಕೆನ್ನೆಗೆ ಬಿಗಿದು ನೆಲಕ್ಕೆ ದೂಡಿದ. ನಡುವೆ ತಡೆಯಲು ಬಂದ ಹೆಂಡತಿಗೂ ಕಾಲಲ್ಲಿ ಝಾಡಿಸಿ ಅವಳನ್ನೂ ದೂಡಿದ. "ಬೋಸುಡಿ ಮುಂಡೆ. ನಾ ಹೋಗೋದನ್ನೇ ಕಾಯ್ತಾ ಇದ್ದೆ ಅಲ್ವೇನೆ ಅವನ ಜೊತೆ ಚಕ್ಕಂದ ಆಡೋಕ್ಕೆ" ಎಂದು ರೇಗಲು ಆರಂಬಿಸಿದ ಕೂಡಲೇ " ಅಪ್ಪ ಹಾಗೆಲ್ಲಾ ಹೇಳ್ಬೇಡಿ. ಅವನು ನನ್ನ ಅಣ್ಙನ ಸಮಾನ", ಎಂದು ಈಕೆಯೂ ರೋಷದಲ್ಲಿ ಕಣ್ಣು ಒರೆಸಿಕೊಳ್ಳುತ್ತಾ ಕೂಗಿದ್ದು ಬೆಂಕಿಗೆ ತುಪ್ಪ ಸುರಿದ ಹಾಗಾಯಿತು. "ಎದುರು ಮಾತಾಡ್ತೀಯೇನೆ ರಂಡೆ. ಕಣ್ಣು ಮುಂದೇನೆ ಅವನನ್ನ ಬೈಕಲ್ಲಿ ತಬ್ಬುಕೊಂಡು ಹೋಗಿ, ಈಗ ಅಣ್ಣ ಅಂತೀಯಾ ಅಣ್ಣಾ.." ಅಂತ ಕಾಲಲ್ಲಿ ಇನ್ನಾಲ್ಕು ಝಾಡಿಸಿದ. ಇದೇಕೋ ಅತಿರೇಕಕ್ಕೆ ಹೋಗೋದು ಕಂಡು ನಚಿ ಒಳನುಗ್ಗಿ ಬಲವಂತದಲ್ಲಿ ಅವನನ್ನ ಆಚೆಗೆ ಎಳೆದೊಯ್ದು ಕಾರಲ್ಲಿ ಕೂರಿಸಿ ಎತ್ತಗೋ ಹೊರಟ. ರಾತ್ರಿ ಮತ್ತೆ ಮನೆಗೆ ಬಂದಾಗ ಮನೆ ನೀರವ ಮೌನದಲ್ಲಿ ಮುಳುಗಿತ್ತು. ಕುಡಿದಿದ್ದಾ. ಸೀದಾ ಮಗಳ ಕೋಣೆಯ ಕಡೆಗೆ ನಡೆದ. ಆಕೆ ಮೊಬೈಲಿನಲ್ಲಿ ಏನೋ ಟೈಪಿಸುತ್ತಿದ್ದದ್ದು ಕಂಡು ಇವನ ಪಿತ್ತ ನೆತ್ತಿಗೇರಿ " ಅಯ್ಯೋ ಹಲ್ಕಟ್ ಲೌಡಿ. ಇಲ್ಲಾಗಿರೋದನ್ನೆಲ್ಲ ವರದಿ ಮಾಡ್ತಾ ಇದೀಯಾ.." ಅಂತ ಆಕೆಯ ಮೊಬೈಲು ಕಸಿದು ನೆಲಕ್ಕೆ ಅಪ್ಪಳಿಸಿದ. "ಹೋದ್ರೆ ಹೋಯ್ತು ಸೂಳೆಮಗಂದು.." ಅಂತ ಒಡೆದ ಪೀಸುಗಳನ್ನ ನೋಡಿ ತನಗೇ ಹೇಳಿಕೊಂಡ.
"ಅಯ್ಯೋ...." ಎಂದು ಮೊಬೈಲು ಅಪ್ಪಳಿಸುವಾಗ ಆಕೆ ಉದ್ಗರಿಸಿದ್ದಷ್ಟೇ. ಏನೂ ಮಾಡಲು ಆಕೆಗೆ ತೋಚಲಿಲ್ಲ. "ನೀನಂದುಕೊಂಡ ಹಾಗೆ ಏನೂ ಇರಲಿಲ್ಲ. ಬೇಕಿದ್ರೆ ಅದನ್ನೇ ತೋರಿಸ್ತಿದ್ದೆ. ನನ್ನ ಮೇಡಂ ಜೊತೆ ಮಾತನಾಡ್ತಿದ್ದೆ" ಎಂದು ಅವಳು ಉಲಿಯುವುದೇ ತಡ "ಮೇಡಮ್ಮಾ ಇಲ್ಲಾ ಮೇಷ್ಟ್ರಾ? ಇನ್ನೂ ಎಷ್ಟು ಜನನ್ನ ಇಟುಗೊಂಡಿದ್ದೀಯೇ. ಯಾವ ಬೋಳಿಮಗನೇ ಆ ಮೇಷ್ಟ್ರು. ನಿನ್ನನ್ನ ಬುಟ್ಟಿಗೆ ಹಾಕೊಂಡೋನು? ಈ ಹೊತ್ತಿನಲ್ಲಿ ಅದೇನು ಮಾತು? ನಾನೇನು ಮುಠ್ಠಾಳ ಸೂಳೇಮಗನಾ ಇದನ್ನೆಲ್ಲಾ ನಂಬೋಕ್ಕೆ. ಅದೇನಾದ್ರೂ ಆಗ್ಬಿಡ್ಲಿ. ನಾಳೇನೆ ಕಾಲೇಜಿಗೆ ಬರ್ತೀನಿ. ನಿನ್ನ ಮುಂದೇನೆ ಆ ಬೋಸುಡೀ ಮಗಂಗೆ ನಾಕು ತದುಕ್ತೀನಿ" ಅಂತ ಮತ್ತೆ ಕಾಲಲ್ಲಿ ಆಕೆಗೆ ಝಾಡಿಸಿ ರೂಮಿನ ಹೊರಗೆ ನಡೆದ. ಈಕೆಯ ಝಂಗಾಬಲವೇ ಉಡುಗಿಹೋಯಿತು. "ಅಯ್ಯೋ.. ಹಾಗೆಲ್ಲಾ ಮಾಡ್ಬೇಡ ಪ್ಲೀಸ್.." ಎಂದು ಆಕೆ ಆತನ ಕಾಲನ್ನು ಹಿಡಿದರೂ, ಆತ ಮತ್ತೆ ಝಾಡಿಸಿ ಒದ್ದು ಹೊರ ಹೋದ. ಈಕೆ ನೆಲದ ಮೇಲೆಯೇ ಬಿಕ್ಕಳಿಸುತ್ತಾ ಬಿದ್ದಿದ್ದಳು. ಆಕೆಯ ಅಮ್ಮ ಒಳ ಬಂದು ಅವಳನ್ನು ಎದ್ದು ಕೂರಿಸಿ ಒಂದು ಲೋಟ ನೀರು ಕುಡಿಸಿ ತಲೆ ನೇವರಿಸಿದಳು. "ಅಳಬೇಡಾಮ್ಮ. ಅವನು ಹೀಗೇನೆ ಮುಂಚಿಂದಲೂ. ಈಗ ನಿನ್ನ ಮಟ್ಟಿಗೆ ಬಂದಿದೆ. ನೀನು ಮನಸಿಗೆ ಹೆಚ್ಚಾಗಿ ಹಚ್ಕೋಬೇಡ ಮಗು. ಅವನು ತಂದು ಹಾಕೋ ಕೂಳಿಗಾಗಿ ನಾನೂ ಸುಮ್ಮನಿರಬೇಕಾಗಿದೆ. ಅನುಮಾನ ಪಿಶಾಚಿ ಅದು. ನೀನು ಓದಿ ಒಳ್ಳೇ ಕೆಲಸ ಗಿಟ್ಟಿಸಿಕೊಂಡು ನನ್ನೂ ಇಲ್ಲಿಂದ ಆಚೆ ಕರಕೊಂಡು ಹೋಗ್ತೀಯಾ?" ಎಂದು ಮುಗ್ಧತೆಯಿಂದ ಕೇಳಿದ್ದು ನೋಡಿ ಈಕೆಗೂ ದುಃಖ ಉಮ್ಮಳಿಸಿತು. ಅಮ್ಮನನ್ನು ತಬ್ಬಿ ಮತ್ತಷ್ಟು ಅತ್ತಳು.
ಅಪ್ಪ ಮಾರನೇ ದಿನ ಕಾಲೇಜಿಗೇನು ಬರಲಿಲ್ಲ. ಮೊಬೈಲ್ ಇಲ್ಲದೇ ಕಾಲೇಜಿನ ಆಗುಹೋಗುಗಳ ಬಗೆಗಿನ ನ್ಯೂಸು ಆಕೆಯನ್ನ ತಡವಾಗಿ ತಲುಪುತ್ತಿತ್ತು. ಹಾಗಾಗಿ ಕಾಲೇಜಿನಲ್ಲೂ ಆಕೆ ಬೇಜವಾಬ್ದಾರಿ ಎನ್ನುವ ಹಣೆಪಟ್ಟಿ ಹೊರಬೇಕಾಯ್ತು. ಮನೆಯದ್ದೆಲ್ಲಾ ಯಾರ ಬಳಿಯೂ ಹೇಳುವ ಧೈರ್ಯ ಇಲ್ಲ. ವಾಟ್ದಾಪಿಗೆ ಕಳಿಸುತ್ತಿದ್ದ ತರಗತಿಯ ನೋಟ್ಸುಗಳು ಸರಿಯಾಗಿ ಸಿಗದೇ ಆಕೆ ಮೊದಲನೆಯ ಸೆಮೆಸ್ಟರಿನಲ್ಲಿ ಎರಡು ಪೇಪರುಗಳಲ್ಲಿ ಫೇಲಾದಳು. ಕಾಲೇಜಿಗೆ ಪ್ರಥಮ ರ್ಯಾಂಕ್ ಪಡೆದಾಕೆ, ಹೀಗೆ ಎರಡು ಪೇಪರುಗಳಲ್ಲಿ ಫೇಲಾದದ್ದು ಆಕೆಗೇ ಆಘಾತವೇ. ಮೇಷ್ಟರುಗಳೂ ಸಹ ತಮ್ಮ ರಿಸಲ್ಟು ಕುಂಠಿತಕ್ಕೇ ಆಕೆಯೂ ಸಹ ಕಾರಣವೆಂಬಂತೆ ನೋಡಲಾರಂಭಿಸಿದರು. 'ರ್ಯಾಂಕ್ ಸ್ಟೂಡೆಂಟ್ಸಿಗೆಲ್ಲಾ ತಲೆಯಿರಬೇಕೆಂದೇನಿಲ್ಲ' ಅಂತ ಕೆಲ ಸ್ನೇಹಿತರು ಆಡಿಕೊಂಡರು. ತಾನು ಫೇಲಾದದ್ದು ಮನೆಯಲ್ಲಿನ್ನೂ ಹೇಳಿರಲಿಲ್ಲ. ಫೇಲಾಗಿದ್ದರಿಂದ ತನಗೆ ಬರುತ್ತಿದ್ದ ಸ್ಕಾಲರ್ಶಿಪ್ಪೊಂದು ಮುಂದಿನ ವರ್ಷ ನಿಂತು ಹೋಗುತ್ತದೆಂದು ತಿಳಿಯಿತು. ಮತ್ತೂ ಪೆಚ್ಚಾಯಿತು.
ಮಗಳು ಮ್ಲಾನವಾಗಿರುವುದು ಅಮ್ಮನಿಗೆ ಬೇಸರವೆನಿಸಿದರೂ ಅತಿಯೂ ಎನಿಸಿತೋ ಏನೋ. 'ಇಷ್ಟಕ್ಕೆ ಹೀಗಾದ್ರೆ ಹೇಗಮ್ಮ..' ಎಂದು ಆಕೆಗೆ ಸಮಾಧಾನ ಆರಂಭಿಸಿದವಳು, ಅನಿಯಂತ್ರಿತವಾಗಿಯೇ ತನ್ನೆಲ್ಲಾ ವೃತ್ತಾಂತಗಳನ್ನು ಬಿಚ್ಚಿಟ್ಟಳು. 'ನೀನಿನ್ನು ತಿಂಗಳ ಮಗು. ಬಾಣಂತನ ಮುಗಿಸಿ ಆಗಷ್ಟೇ ತವರಿಂದ ವಾಪಾಸ್ಸಾಗಿದ್ದೆ. ಬಂದು ಕೆಲವೇ ದಿನ. ಮನೇ ಮುಂದೆಯೇ ಪಂಚಾಯಿತಿ. ಇವರು ಅದ್ಯಾರೋ ಹೆಂಗಸಿನ ಸಂಗ ಮಾಡಿ, ಆಕೆ ಹ್ಯಾಗೋ ಮನೆ ಹುಡುಕಿ ಬಂದು ಮನೆ ಮುಂದೆ ಜಗಳಕ್ಕೆ ನಿಂತಿದ್ದಳು. ಆಕೇನ ಒಂದು ದಿನ ಇವರು ನಮ್ಮನೇಲೇ ಇರಿಸಿಕೊಂಡಿದ್ದರು. ಕೊನೆಗೆ ನಮ್ಮಪ್ಪ ಬಂದು, ಹ್ಯಾಗೋ ಪಂಚಾಯಿತಿ ನಡೆಸಿ ಆ ಕೇಸು ಕ್ಲೋಸ್ ಮಾಡಿಸಿದರು. ಆ ಹೆಂಗಸಿಗೆ ಒಂದಿಷ್ಟು ದುಡ್ಡು ಕೊಟ್ಟು ಸಾಗಹಾಕಿದರು. ಅದೂ ಅದಕ್ಕಾಗೀನೇ ಬಂತೇನೋ ತಿಳೀದು. ಅಂತಾ ಹಲ್ಕಾ ಕೆಲಸ ಮಾಡೀನೂ ಇವರಿಗೆ ಕಿಂಚಿತ್ ದರ್ಪ ಇಳೀಲಿಲ್ಲ. ನನ್ನೇ ಅನುಮಾನಿಸ್ತಾ ಇರ್ತಿದ್ರು. ಕಾಮಾಲೆ ಕಣ್ಣಲ್ವೇ. ಎಲ್ಲರೂ ಅವರಿಗೆ ಹಾಗೆಯೇ ಕಾಣೋದು. ಈಗಲೂ ತಿಂಗಳಾನುಗಟ್ಟಲೇ ಮನೇಗೆ ಬರೋಲ್ವಲ್ಲ ಒಮ್ಮೊಮ್ಮೆ. ಹ್ಯಾಗೋ.. ಏನೋ..ನೋಡು, ಇಷ್ಟಿದ್ದರೂ ಹ್ಯಾಗೋ ಜೀವನ ಸವೆಸ್ತಾ ಇದೀನಿ. ನಾನೇ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ತಿಲ್ಲ. ಇನ್ನು ಇಷ್ಟಕ್ಕೇ ನೀನು ಹೀಗಾದ್ತೆ ಹ್ಯಾಗಮ್ಮ.'
ತನ್ನ ಕಾಲಲ್ಲೇ ಅಮೇದ್ಯ ಇಟುಗೊಂಡು ಇತರರ ಕಾಲಿನ ಅಮೇದ್ಯಕ್ಕೆ ಮೂಗು ಮುರಿಯೋ ತನ್ನ ತಂದೆಯ ಬಗ್ಗೆ ಹುಟ್ಟಿದ ಕೋಪವನ್ನ ಹೊರಹಾಕಲೂ ಸಹ ಅವಕಾಶವಿಲ್ಲದೆ ಆಕೆ ಕನಲಿದಳು. "ಆಗ ಎಷ್ಟು ಕಾಸಿಗೆ ಹರಾಜಾಗಿತ್ತಂತೆ ಇವರ ಮಾನ" ಎಂದು ಅಮ್ಮನ ಮುಂದಷ್ಟೇ ಹೇಳಲು ಸಾಧ್ಯ ತಂದೆಯ ಈ ಅಫೇರ್ಗಳು ಅವಳನ್ನು ಇನ್ನೂ ಚಿಂತಿತವಾಗಿಸಿದವು. 'ಯಾವನಿಗೋಸ್ಕರವೋ ತನ್ನ ಜೀವನ ಕಮರಿಹೋಗ್ತಿದೆಯಲ್ಲಾ' ಎಂದು ಯೋಚಿಸುತ್ತಳೇ ಇದ್ದಳು
ಇದರಿಂದ, ಇವರಿಂದ ಬಿಡಿಸಿಕೊಳ್ಳದ ಹೊರತು ಆಕೆಗೆ ತನ್ನ ಭವಿಷ್ಯ, ಕನಸು ಕರಗುವ ಹಿಮದಂತೆ ಭಾಸವಾಯಿತು. ಆದರೆ ದಾರಿ ತಿಳಿಯಲಿಲ್ಲ.
******
"ಕಾಲೇಜಿನ ತೇರೇಸ್ ಮೇಲಿಂದ ಬಿದ್ದು ಬಿಡಬೇಕಂತ ನಿಂತಿದ್ದೆ. ಧೈರ್ಯ ಸಾಕಾಗಲಿಲ್ಲ. ಏನು ಮಾಡೋದು ತಿಳಿಯದೆ ತಮ್ಮ ಬಳಿ ಓಡಿ ಬಂದೆ" ಎಂದು ತನ್ನ ಹೆಸರು, ಕೋರ್ಸು ಮತ್ತು ಊರು ತಿಳಿಸಿದಳು. ಆಕೆಯ ಊರು, ಗೋತ್ರ, ಕುಲ ಎಲ್ಲವೂ ತಲೆಯಲ್ಲಿರಲು ಅಸಾಧ್ಯ. ಆಕೆಯೇ ತನ್ನ ಪರಿಚಯ ಮಾಡಿಕೊಂಡದ್ದು ಶಾಂತಲೆಗೆ ನಿರಾಳವಾಯಿತು. 'ಯಾಕೆ? ಹುಡುಗ ಕೈಕೊಟ್ಟನೇ?' ಎನ್ನೋ ಪ್ರಶ್ನೆ ತಲೆಯಲ್ಲಿ ಬಂದಿದ್ದರೂ ನೇರವಾಗಿ ಏಕ್ ದಂ ಹಾಗೆ ಕೇಳಿಬಿಡುವುದು ಸೌಜನ್ಯವಲ್ಲ. ಈಗಾಗಲೇ ನಲುಗಿರುವ ಆಕೆಗೆ 'ಇದೇನು ಮಹಾ. ಸಾಮಾನ್ಯವಾದ ಸಮಸ್ಯೆ' ಎಂದು ಹೇಳಿದಂತೆನಿಸಬಾರದು. ಹಾಗಾಗಿ ಆಕೆಯನ್ನ ಒಳಗೆ ಕರೆದು ಕೂಡಿಸಿದಳು. ತಾನು ಎದ್ದು ನಿಂತು ಆಕೆಯನ್ನ ತಬ್ಬಿ ತಲೆ, ಬೆನ್ನುಗಳನ್ನು ಸವರಿದಳು . ಸಾಮಾನ್ಯವಾಗಿ ಶಾಂತಲೆ ವಿದ್ಯಾರ್ಥಿಗಳಿಗೆ 'ಕೂಡು' ಎನ್ನುವುದು ಅಪರೂಪ. ವಿದ್ಯಾರ್ಥಿಗಳು ಶಿಕ್ಷಕರ ಮುಂದೆ ನಿಂತಿರಬೇಕು ಎನ್ನೋದು ಆಕೆಯ ಗಟ್ಟಿ ಅಭಿಪ್ರಾಯ. ಹಾಗಂತ ಅದು ಆಗಾಗ್ಗೆ ಸಡಿಲವೂ ಆಗುತ್ತಿತ್ತು. 'ನೀರು ಬೇಕೆ?' ಎಂದು ಒಂದು ಗ್ಲಾಸ್ ನೀರು ತರಿಸಿ ಕುಡಿಸಿದಳು. ಕುಡಿದಷ್ಟೂ ಕಣ್ಣೀರಿಗೆ ನೀರು ಹೆಚ್ಚು. ಕುಡಿಯುತ್ತಲೇ ಆಕೆಗೆ ದುಃಖ ಉಮ್ಮಳಿಸಿ ಬರುತ್ತಿತ್ತು. ಹೊರಗೆ ಕುಳಿತಿದ್ದ ಅಟೆಂಡರನ್ನು ಕರೆದು 'ನಾನು ಹೇಳೋವರೆಗೆ ಯಾರನ್ನೂ ಒಳಗೆ ಬಿಡಬೇಡ' - 'ಗೊತ್ತಾಯ್ತಾ' ಎಂದು ಗಟ್ಟಿಯಾಗಿ ಹೇಳಿದಳು. ಆದರೆ ಆತನ ಮೇಲಿನ ಗುಮಾನಿಯೋ ಏನೋ. ಸಾಕಷ್ಟು ಬಾರಿ ಆತ ಎಲ್ಲವನ್ನೂ ಕದ್ದು ಕೇಳಿಸಿಕೊಳ್ಳುತ್ತಿದ್ದಾನೆನ್ನೋ ಸಂಶಯ ಇವಳಿಗೆ ಇತ್ತು. ಜೊತೆಗೆ ಆತ ಸಾಕಷ್ಟು ಬಾರಿ ಹೀಗೆ ಹೇಳಿಸಿಕೊಂಡು ಜನರನ್ನ ಒಳಗೆ ಕಳುಹಿಸಿಬಿಡುತ್ತಿದ್ದ, ಮರೆವೋ ಅಥವಾ ಸಂಕೋಚವೋ. ಇಲ್ಲಿ ಬೇಡವೆಂದು ಆಕೆಯನ್ನ ತನ್ನ ಡಿಪಾರ್ಟ್ಮೆಂಟ್ ನ ಕೋಣೆಗೆ ಕರೆದೊಯ್ದಳು. ಅಲ್ಲಿಗೆ ಜನ ಬರುವುದು ಅಪರೂಪವಾದರೂ, ಆಕೆ ಪ್ರಾಂಶುಪಾಲೆಯಾದ್ದರಿಂದ ಆಕೆಯನ್ನ ಭೇಟಿಯಾಗೋಕ್ಕೆ ಜನ ಆಕೆ ಎಲ್ಲಿದ್ದರೂ ಬರುತ್ತಿದ್ದರು. ಹಾಗಾಗಿ ಯಾರಿಗೂ ಹೇಳದೇ - ಮುಖ್ಯವಾಗಿ ತನ್ನ ಚೇಂಬರಿನ ಅಟೆಂಡರಿಗೆ - ಆಕೆಯನ್ನ ತನ್ನ ಡಿಪಾರ್ಟ್ಮೆಂಟ್ ಗೆ ಕರೆದೊಯ್ದು ಅಲ್ಲಿ ಆಕೆಯ ಅಷ್ಟೂ ವೃತ್ತಾಂತಕ್ಕೆ ಕಿವಿಯಾದಳು.
"ಹಂ..." ಎಂದು ಶಾಂತಲೆ ಹೂಂಕರಿಸಿದಳೇ ವಿನಃ, ಆಕೆಗೂ ಪರಿಹಾರ ಹೊಳೆಯದಾಯ್ತು. "ನನಗೆ ಇದೊಂದು ದಿನ ಸಮಯ ಕೊಡು. ಏನು ಮಾಡಬೋದು ಯೋಚಿಸಿ ನಾಳೆಗೆ ಹೇಳ್ತೇನೆ. ನಾಳೆ ಮುದ್ದಾಂ ನನ್ನ ಬಂದು ಭೇಟಿ ಮಾಡು. ಏನೂ ಆಗೋದಿಲ್ಲ, ಹೆದರಬೇಡ. ನಿನಗೆ ಅಷ್ಟೂ ಭಯವೆನಿಸಿದರೆ ನನ್ನೊಟ್ಟಿಗೆ ಮನೆಗೆ ಬಂದುಬಿಡು" ಎಂದು ಆಕೆಗೆ ಸಾಂತ್ವನ ಹೇಳಿ ಕಳುಹಿಸಿದಳು. "ಅಯ್ಯೋ... ನಾನು ಮನೆಗೆ ಹೋಗದೇ ಇರೋ ಬದಲು ಇಲ್ಲೇ ಟೆರೇಸಿನಿಂದ ಬಿದ್ದು ಬಿಡಬೋದು" ಎಂದು ಆ ಹುಡುಗಿ ಹೆದರಿದಳು. "ನಾ ಬೇಕಿದ್ರೆ ನಿಮ್ಮ ತಂದೆ ಹತ್ತಿರ ಮಾತಾಡ್ತೀನಿ. ಏನು?"
"ಅಯ್ಯೋ.. ಇಲ್ಲ ಮೇಡಂ.. ಬೇಡ ಮೇಡಂ" ಆಕೆ ಸಂಕೋಚ ಪಟ್ಟಳೋ ಅಥವಾ ತನ್ನ ತಂದೆ ಬಳಿ ಪ್ರಿನ್ಸಿಪಾಲರನ್ನು ಮಾತನಾಡಿಸೋ ಭಯವೋ ತಿಳಿಯದು. ಕೊನೆಗೆ "ನಡೀ. ನಾನೇ ಮೆನೆಗೆ ಬರ್ತೀನಿ" ಎಂದು ಹೇಳಿದ್ದೇ ಆಕೆ ಎದ್ದು "ಬೇಡ ಬೇಡ ಮೇಡಂ" ಎಂದು ಗಾಬರಿಯಾದಳು. "ನಾನೇನೂ ಮಾತಾಡೊಲ್ಲ. ಹೆದರ ಬೇಡ. ಗಾಬರಿ ಯಾಕೆ?" ಎಂದು ಆಕೆ ಹೇಳಿದರೂ, ಇವಳು ಸುತಾರಾಂ ಮನೆಗೆ ಆಕೆಯನ್ನ ಬಿಟ್ಟುಕೊಳ್ಳೋಕ್ಕೆ ಒಪ್ಪಲೇ ಇಲ್ಲ.
"ಸರಿ. ಸರಿ. ಒಂದು ಕೆಲಸ ಮಾಡು. ಇವತ್ತು ಹೊರಡು. ನಾಳೆ ಏನು ಮಾಡಬೋದು, ನೋಡೋಣ" ಎಂದು ಸಮಾಧಾನ ಮಾಡಿ ಕಳುಹಿಸಿದಳು.
***
ಶಾಂತಲೆಗೆ ಈಗಾಗಲೇ ಇದ್ದ ತಲೆಬೇನೆಗಳ ಜೊತೆ ಇದೂ ಒಂದು ಸೇರಿತು. ಅದಾಗಲೇ ಕಾಲೆಜಿನ ದಾಖಲಾತಿ ಕುಸಿತವಾದ್ದರಿಂದ ಮ್ಯಾನೇಜ್ಮೆಂಟಿನವರು ಕೆಲವು ಕೋರ್ಸುಗಳನ್ನ ಮುಚ್ಚುವ ತೀರ್ಮಾನ ಕೈಗೊಂಡಿದ್ದರು. ಹೀಗಾದಲ್ಲಿ ಸುಮಾರು ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದ ಹಲವರು ಕೆಲಸ ಕಳಕೊಂಡು ಹೊಸ ಕೆಲಸಕ್ಕಾಗಿ ಹುಡುಕಬೇಕಾಗಿತ್ತು. ಅದಕ್ಕೂ ತನಗೂ ಸಂಬಂಧವಿಲ್ಲದಿದ್ದರೂ, ಅದಾಗಲೇ ಕೆಲವರನ್ನ ತನ್ನ ಗಮನಕ್ಕೆ ತರದೆಯೇ ಕೆಲಸದಿಂದ ತೆಗೆಯುವ ತೀರ್ಮಾನವೂ ಆಗಿದ್ದು ಆಕೆಗೆ ರೇಗಿತ್ತು. ಇದಲ್ಲದೇ, ಬೆಂಕಿಗೆ ತುಪ್ಪ ಸುರಿದಂತೆ, ಮ್ಯಾನೇಜ್ಮೆಂಟಿಗೆ ಮತ್ತೊಂದು ಅಸ್ತ್ರವೂ ದೊರೆತಿತ್ತು. ಯಾವುದೋ ಒಂದೆರೆಡು ವಿದ್ಯಾರ್ಥಿಗಳು ಕಾಲೇಜಿನ ಮೇಲೆ ಯೂನಿವರ್ಸಿಟಿಗೆ ಕಂಪ್ಲೇಂಟ್ ಬರೆದು ಹಾಕಿದ್ದರು. ಅದರ ವಿಚಾರಣೆಯೂ ನಡೆಯುತ್ತಿತ್ತು. ಇದರೊಟ್ಟಿಗೆ ಯಾವುದೋ ದಾಖಲಾತಿಯಲ್ಲಿ ಕೊಂಚ ಎಡವಟ್ಟಾಗಿ, ಯಾರದ್ದೋ ಬೇಜವಾಬ್ದಾರಿಯ ಫಲದಿಂದ, ಸರಿಯಾಗಿ ಪರಿಶೀಲನೆ ಮಾಡದೆ, ಫೇಕ್ ಅಂಕಪಟ್ಟಿಯ ಆಧಾರದಲ್ಲಿ ಒಂದು ವಿದ್ಯಾರ್ಥಿಯನ್ನ ದಾಖಲಿಸಿಕೊಂಡದ್ದಕ್ಕಾಗಿ ಪ್ರಾಂಶುಪಾಲರ ತಲೆಗೆ ಯೂನಿವರ್ಸಿಟಿ ಒಂದು ಲಕ್ಷ ದಂಡ ಕಟ್ಟಿತು. ಇದೆಲ್ಲದರ ನಡುವೆ ಈ ಹುಡುಗಿ ಬಂದದ್ದು ಒಂದು ರೀತಿ ತಲೆಬೇನೆಯೇ. ಆದರೂ, ಆಕೆಯ ಹೆಂ-ಕರುಳು ಈ ರೀತಿಯ ಮಕ್ಕಳ ಸಮಸ್ಯೆಗಳಿಗೆ ಹೆಚ್ಚು ಸ್ಪಂದಿಸುತ್ತಿದ್ದರಿಂದ ಹೇಗಾದರೂ ಇದನ್ನು ಬಗರೆಹರಿಸಲೇಬೇಕು ಎಂದು ಯೋಚಿಸುತ್ತಾ ಕುಳಿತಳು.
ತಂದೆಯನ್ನು ಕರೆಸಿ ಮಾತನಾಡಲೇ? ಬೇಡ ಬೇಡ. ಈ ವಿಷಯೆಲ್ಲಾ ತನಗೆ ಆಕೆ ಹೇಳಿದ್ದಾಳೆಂದು ತಿಳಿದರೆ ಮನೆಯಲ್ಲಿ ಇನ್ನೂ ಹಿಂಸೆ ಕೊಟ್ಟಾನು. ಆಕೆಯನ್ನು ಮನೆ ಬಿಡಿಸಿಬಿಟ್ಟರೆ? ಇಲ್ಲೇ ಹಾಸ್ಟೆಲಿನಲ್ಲಿ ಇರಿಸಿದರೆ? ಇದೇ ಆಕೆಗೆ ಸೂಕ್ತ ಎನಿಸಿತು. ಆದರೆ ಅದನ್ನ ಕಾರ್ಯಗತಗೊಳಿಸೋದೆಂತು? ಅವಳ ಮನೆಯಿಂದ ಆಕೆಯನ್ನ ಹೊರತರೋದೆಂತು? ಕುರ್ಚಿಯಲ್ಲಿ ಹಿಂದಕ್ಕೆ ಒರಗಿ ಕುಳಿತಳು. ತನ್ನ ಮುಂದಿದ್ದ ಫೈಲುಗಳನ್ನು ತೆರೆದು ಸುಮ್ಮನೆ ಕಣ್ಣು ಹಾಯಿಸುತ್ತಿದ್ದಳು. ಮನಸ್ಸು ಅಲ್ಲಿರಲಿಲ್ಲ. ಹಾಗಾಗಿ ಯಾವ ಅಕ್ಷರವೂ ಕಣ್ಣಿಗೆ ಬೀಳುತ್ತಿರಲಿಲ್ಲ. ತಂದೆಗೆ ನಿಜ ಹೇಳಿ ಆಕೆಯನ್ನ ಹೊರತರೋದು ಕಷ್ಟವಾಗಬೋದು. 'ನಿಮ್ಮನ್ನ ಕಂಡರೆ ಮಗಳಿಗೆ ಭಯ' ಅಂತ ಹೇಳಿದರೆ ಅದರ ಪಲಿತ ತಿಳಿದೇ ಇದೆ. ಮತ್ತೇನು ಕಾರಣ ಹೇಳೋದು? ಎಂದು ಯೋಚಿಸುತ್ತಲೇ ತಲೆಗೇನೋ ಹೊಳೆಯಿತು. ಆಫೀಸಿಗೆ ಫೋನ್ ಮಾಡಿ ಆಕೆಯ ನಂಬರ್ ತರಿಸಿಕೊಂಡಳು. ಫೋನ್ ಹಚ್ಚಿದಾಗ, 'ಸ್ವಿಚ್ ಆಫ್'. ಆಹ್! ಆಕೆಗೆ ತಕ್ಷಣ ಹೊಳೆಯಿತು. ತಾನಾಗಿಯೇ ಬರ್ತೇನೆಂದು ಆಕೆ ಹೇಳಿದ್ದರಿಂದ ಕಾದು ನೋಡೋಣವೆಂದು ಸುಮ್ಮನಾದಳು. ಸರಿಯಾಗಿ ಹತ್ತು ಗಂಟೆಗೆ ಆಕೆ ಚೆಂಬರಿನ ಬಾಗಿಲು ತೆರೆದು ಇಣುಕಿದಳು. ಆಕೆಯ ಮುಖ ಕಂಡೊಡನೆ,
'ಬಾ..ಬಾ.' ಎಂದು ಆಕೆಯನ್ನ ಕರೆಸಿ ಕೂರಿಸಿದಳು. ಮುಖದಲ್ಲಿ ನಿದ್ದೆಯ ಕೊರತೆಯನ್ನು ಕಣ್ಣಿನ ಕೆಳಗಿನ ಕಪ್ಪು ಗೆರೆಗಳು ಹೇಳುತ್ತಿದ್ದವು.
'ರಾತ್ರಿಯೆಲ್ಲಾ ಅಳುತ್ತಿದ್ಯಾ? ಮತ್ತೆ ಜಗಳವಾಯ್ತ?
'ಇಲ್ಲ ಹಾಗೇನಿಲ್ಲ ಮೇಡಂ. ಏನೂ ಮಾತುಕತೆ ಇಲ್ಲ. ಅಪ್ಪ ಊಟಕ್ಕೆ ಬಂದು ಮತ್ತೆ ತಕ್ಷಣ ಹೊರಟು ಹೋದರು ಕೆಲಸದ ಮೇಲೆ.'
'ಓಕೆ. ಈಗ ನೀನು ಮನೆ ಬಿಟ್ಟು ಬರೋಕ್ಕೆ ಆಗತ್ತ? ಇಲ್ಲೇ ಒಂದು ಹಾಸ್ಟೆಲ್ ಸೇರಿಕೊಳ್ಳುವಂತೆ?'
'ಅಯ್ಯೋ. ಅಸಾಧ್ಯ ಮೇಡಂ. ಅಪ್ಪ ಒಪ್ಪೋಲ್ಲ'
'ಒಪ್ಪೋ ಹಾಗೆ ಮಾಡಲೇಬೇಕಲ್ಲ? ನಿನಗೆ ಓದೋ ಆಸೆ ಇದೆ ತಾನೆ?'
'ಹೂಂ..'
'ಹಾಗಿದ್ದರೆ ಹೇಗಾದರೂ ಒಪ್ಪಿಸಲೇಬೇಕಲ್ಲ'
ಹುಡುಗಿಗೆ ಏನೂ ತಿಳಿಯದೆ ಗೊಂದಲವಾಯಿತು.
'ನಿನ್ನ ಸ್ಕಾಲರ್ ಶಿಪ್ ಹಣ ಏನು ಮಾಡ್ತೀಯ?' ಶಾಂತಲೆ ಕೇಳಿದಳು.
'ಮನೆಗೆ ಕೊಡ್ತೀನಿ ಮೇಡಂ - ಅಪ್ಪನಿಗೆ'
'ಗುಡ್. ಎಷ್ಟು ಬರತ್ತೆ ಅಂದೆ?'
'ಸೆಮೆಸ್ಟರಿಗೆ 24 ಸಾವಿರ ಮೇಡಂ'.
'ಈಗ ನೀನು ಫೇಲ್ ಆದ್ದರಿಂದ ಅದು ನಿಲ್ತದೆ. ತಿಳೀದಿದೆ ಅಲ್ವಾ?'
ಆಕೆ ತಲೆತಗ್ಗಿಸಿದಳು.
'ಏನೂ ಮುಜುಗರ ಪಟ್ಕೋಬೇಡ. ನಿನ್ನ ಅಸಡ್ಡಯಿಂದ ಆದದ್ದಲ್ಲ ಅಲ್ಲವೆ?'
'ಹೂಂ..' ಎಂದು ಕಣ್ಣೀರು ಸುರಿಸಲಾರಂಭಿಸದಳು. ಶಾಂತಲೆ ಎದ್ದು ಆಕೆಯನ್ನ ಸಮಾಧಾನಮಾಡಿದಳು.
'ನೋಡು. ಒಂದು ದಾರಿ ಇದೆ. ನಿನ್ನ ಓದಿನ ಕಾರಣ ಇಟುಕೊಂಡು ಅಪ್ಪನನ್ನ ಒಪ್ಪಿಸಬೋದು. ನಾನು ಒಪ್ಪಿಸ್ತೇನೆ. ನೀನು ಚಿಂತೆ ಮಾಡಬೇಡ'
'ಆದರೂ ಮೇಡಂ..' ಆಕೆಗೆ ವಿಶ್ವಾಸ ಇದ್ದಂತೆ ಕಾಣಲಿಲ್ಲ.
'ಇರಲಿ. ಪ್ರಯತ್ನ ಪಡೋಣ. ಕಣ್ಣೊರೆಸಿಕೋ. ಅಪ್ಪನ ನಂಬರ್ ಬರೆದುಕೊಡು. ನಾನು ಮಾತಾಡ್ತೀನಿ. ಗಾಬರಿಯಾಗಬೇಡ. ಈ ಯಾವ ವಿಚಾರವೂ ಹೇಳೋಲ್ಲ.'
ಆಕೆಗೆ ಕೊಂಚ ಸಮಾಧಾನವಾದಂತಾಗಿ ನಂಬರ್ ಕೊಟ್ಟು ಹೊರಟವಳು ಮತ್ತೆ ತಿರುಗಿ 'ಆದರೆ ನಾನು ಹಾಸ್ಟೆಲ್ ಸೇರಿದರೆ ಅದರ ಖರ್ಚು? ಜೊತೆಗೆ ಸ್ಕಾಲರ್ಶಿಪ್ ಸಹ ಬರೋಲ್ವಲ್ಲ ಮೇಡಂ?'
'ಅದರ ಚಿಂತೆ ನಿನಗೆ ಬೇಡ'.
'ಹೂಂ ಮೇಡಂ..'
'ಅಪ್ಪ ಏನೇ ಕೇಳಿದರೂ ಗೊತ್ತಿಲ್ಲದ ಹಾಗೆಯೇ ಇರು. ಓಕೆ?'
'ಓಕೆ ಮೇಡಂ..' ಆಕೆ ಹೊರಟಳು.
******
ಆಫಿಸಿನಿಂದ ಆಕೆಯ ತಂದೆಗೆ ಫೋನು ಹೋಗಿತ್ತು - ಕಾಲೇಜಿಗೆ ಬಂದು ಪ್ರಾಂಶುಪಾಲರನ್ನು ಭೇಟಿಯಾಗಬೇಕೆಂದು ಫೀಸಿನ ವಿಚಾರವಾಗಿ. ಮೂರು ದಿನಗಳ ನಂತರ ಆತ ಕಾಲೇಜಿಗೆ ಬಂದ.
'ಏನೋ ಮಗಳ ಫೀಸಿನ ವಿಚಾರ ಅಂತ ಫೋನು ಬಂದಿತ್ತು'
'ಬನ್ನಿ ಕುಳಿತುಕೊಳ್ಳಿ. ಹೆಸರೇನು?'
'ಕೃಷ್ಣ..'
'ಅಲ್ಲ ಮಗಳದ್ದು.'
'ಮಂದಾರ'
ಕಂಪ್ಯೂಟರ್ ನೋಡಿ ಮಾತನಾಡುತ್ತಿದ್ದ ಶಾಂತಲೆ ಒಡನೆಯೇ ತಿರುಗಿದಳು. ಫೀಸಿನ ವಿಚಾರ ಪ್ರತೀದಿನ ಒಬ್ಬಿಲ್ಲೊಬ್ಬರು ಬರುತ್ತಿದ್ದರು. ತನನ್ನ ನೋಡಿ ಶಾಂತಲೆಗೆ ಅಚ್ಚರಿ. ಆ ಹುಡುಗಿಯ ವರ್ಣನೆಯಂತೆ ಆತನ ವರ್ತನೆ ಇರಲಿಲ್ಲ. ಆತನ ಧ್ವನಿಯೂ ಅಷ್ಟೇ, ಎಷ್ಡು ದೈನ್ಯ. ಆದರೆ ಅದರಲ್ಲಿಯ ನಾಟಕೀಯತೆಯ ಎಳೆ ಕಂಡು ಹಿಡಿಯುವಷ್ಟಾದರೂ ಆಕೆಯ ಅನುಭವ ಅವಳಿಗೆ ಕಲಿಸಿತ್ತು.
'ಫೀಸಿನ ವಿಚಾರ ಇರಲಿ. ನಿಮ್ಮ ಮಗಳು ಪದವಿಯಲ್ಲಿ ರ್ಯಾಂಕ್ ಪಡಕೊಂಡಿದ್ದಳಲ್ಲವೇ?'
'ಹಾಂ.. ಹೌದು ಮೇಡಂ. ಸನ್ಮಾನವೂ ಮಾಡಿದರು. ನಮಗೇನೂ ಮುಂದೆ ಓದಿಸಬೇಕೂಂತೇನು ಇಲ್ಲ. ಆಕೆಗೆ ಓದೋ ಹುಚ್ಚು. ಅಲ್ಲಿರೋ ಅವಳ ಲೆಕ್ಚರರ್ಸ್ ಕೂಡ ಬಲವಂತ ಮಾಡಿದರು. ಅಷ್ಡೆ. ಈಗ ಫೀಸು...'
ಶಾಂತಲೆ ಅಷ್ಡಕ್ಕೇ ತಡೆದಳು. 'ಹಾಂ. ತುಂಬಾ ಒಳ್ಳೇ ಕೆಲಸ. ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ಓದಲು ಅವಕಾಶ ಸಿಗ್ತಾ ಇರೋದು ತುಂಬಾ ಒಳ್ಳೇ ವಿಚಾರ. ಆಕೆಗೆ ಸ್ಕಾಲರ್ ಶಿಪ್ ಬರುತ್ತಿರೋ ವಿಚಾರ ತಿಳಿದಿದೆ ಅಲ್ವೆ?'
'ಹಾಂ ಹೌದು.'
'ಆದರೆ, ಆಕೆಗೆ ಪ್ರತೀ ದಿನವೂ ಟ್ರಾವೆಲಿಂಗ್ ಸಮಸ್ಯೆ ಅನಿಸುತ್ತೆ. ಹಾಗಾಗಿ ಮಧ್ಯಾಹ್ನ ಕೆಲವು ತರಗತಿಗಳನ್ನ ಅಟೆಂಡ್ ಮಾಡಲಿಕ್ಕಾಗದೆ ಮೊದಲ ಸೆಮೆಸ್ಟರಿನಲ್ಲಿ ಎರಡು ಪೇಪರ್ ಲಿ ಆಕೆ ಫೇಲಾಗಿದ್ದಾಳೆ'
'ಹೌದೇ ಮೇಡಂ.. ಆಕೆ ಏನೂ ಹೇಳಲೇ ಇಲ್ಲ.' ಆತನ ನಾಟಕೀಯ ಪ್ರತಿಕ್ರಿಯೆಯಿಂದಲೇ ಇದೇನು ಅಂತಾ ಮಹಾ ವಿಚಾರವಲ್ಲ ಆತನಿಗೆ ಎಂದು ತಿಳಿಯುತ್ತಿತ್ತು.
'ಹಾಗಾಗಿ ಆಕೆಗೆ ಬರುತ್ತಿದ್ದ ಸ್ಕಾಲರ್ ಶಿಪ್ ನಿಂತುಹೋಗೋ ಸಾಧ್ಯತೆ ಇದೆ'.
'ಏನೂ...' ಆತನಿಗೆ ಈಗ ನಿಜವಾದ ಶಾಕ್ ಆಯಿತು. ಶಾಂತಲೆಯ ಬಲೆಗೆ ಆತ ಸರಿಯಾಗಿ ಕಚ್ಚಿಕೊಳ್ಳುತ್ತಿದ್ದ.
'ಹಾಗಾಗಿ ಆಕೆಯನ್ನ ಇಲ್ಲೇ ಮೈಸೂರಲ್ಲೇ ಉಳಿಸುವ ವ್ಯವಸ್ಥೆ ಆದರೆ ಆಕೆಯ ಓದಿಗೆ ಅನುಕೂಲ ಆಗಬೋದು.'
'ಆದರೆ ಅದು ಹೇಗಾಗತ್ತೆ. ನಮ್ಮ ಊರು ಸಿಂಗಾನಹಳ್ಳಿ..'
ಶಾಂತಲೆ ಮತ್ತೆ ತಡೆದಳು - 'ಗೊತ್ತು ಗೊತ್ತು. ಹಾಗಾಗಿ ಆಕೇನ ಇಲ್ಲೇ ಹಾಸ್ಟೆಲ್ ಗೆ ಸೇರಿಸಿದರೆ ಅವಳಿಗೆ ಅನುಕೂಲವಾಗತ್ತೆ. ಇಲ್ಲವಾದಲ್ಲಿ ಮತ್ತೆ ಇದು ಮರುಕಳಿಸಬೋದು. ಹಾಸ್ಟೆಲ್ ಬಗ್ಗೆ ಚಿಂತೆ ಮಾಡಬೇಡಿ. ನನಗೆ ಗೊತ್ತಿರೊ ಸಾಕಷ್ಟು ಹುಡುಗಿಯರ ನಿಮ್ಮ ಕಮ್ಯುನಿಟಿಯ ಹಾಸ್ಟೆಲ್ ಇದ್ದಾವೆ.'
'ಏನೂ ಬೇಡ, ಆಕೆ ಮನೇಲೆ ಇರಲಿ. ಓದು ನಿಲ್ಲಿಸಿಬಿಡೋಣ ಬೇಕಿದ್ರೆ'
'ನೋಡಿ. ನಿಮ್ಮ ಮಗಳು ಒಳ್ಳೆಯ ವಿದ್ಯಾರ್ಥಿನಿ. ಆಕೆಗೆ ಮುಂದೆ ಒಳ್ಳೆಯ ಭವಿಷ್ಯವಿದೆ. ಒಳ್ಳೆಯ ಕಡೆ ಕೆಲಸ ಗಿಟ್ಟಿಸೋ ತಾಕತ್ತಿದೆ. ನೀವು ಈಗಲೇ ಅದನ್ನ ಚಿವುಟೋದು ಒಳ್ಳೆಯ ಆಲೋಚನೆಯಲ್ಲ. ಮೇಲಾಗಿ ಒಂದು ಸೆಮೆಸ್ಟರ್ ಪ್ರಯೋಗ ಮಾಡಿ ನೋಡೋಣ.'.
'ಅಂದರೆ 6 ತಿಂಗಳ ಮಟ್ಡಿಗಷ್ಟೆಯೇ?'
'ಹೌದು. ಆಕೆಗೆ ರೆಮಿಡಿಯಲ್ ಕ್ಲಾಸಸ್ ಅವಶ್ಯಕತೆ ಇರ್ತದೆ. ರಿಸಲ್ಟು ನೋಡೋಣ. ಇಂಪ್ರೂವ್ಮೆಂಟ್ ಇದ್ರೆ ಮುಂದುವರೆಸೋಣ. ಇಲ್ಲ. ನಿಮ್ಮ ನಿರ್ಧಾರ ನೀವು ತೆಗೋಬೋದು'.
ಆತ ಕುರ್ಚಿಯಲ್ಲಿ ಕೊಂಚ ಮುಂದೆ ಬಂದು ಕೈ ಎರಡನ್ನು ಟೇಬಲ್ ಮೇಲಿಟ್ಟಿ ಕುಳಿತ. 'ಮತ್ತೆ ಆರು ತಿಂಗಳು ಆಕೆ ಮನೆಗೆ ಬರೋ ಹಾಗೆ ಇಲ್ವೆ?' ಅಸಹನೆಯ ಸಣ್ಣ ಎಳೆ ಆತನ ಮುಖದ ಮೇಲೆ ಮೂಡತೊಡಗಿತು.
'ಹಾಗೇನಿಲ್ಲ. ವಾರಕ್ಕೊಮ್ಮೆ. ಅಥವಾ ರಜಾ ದಿನಗಳು ಮನೆಗೆ ಬರ್ತಾಳೆ'
ಆದರೂ ಆತನಿಗೆ ಒಪ್ಪಿಗೆಯಾದಂತೆ ಕಾಣಲಿಲ್ಲ. ಇದನ್ನರಿತ ಶಾಂತಲೆ ಮುಂದುವರೆಸಿದಳು.
'ನಿಮ್ಮ ಆತಂಕ ನನಗೆ ಅರ್ಥವಾಗ್ತದೆ. ನಾನು ಒಂದು ಹೆಣ್ಣು ಮಗಳ ತಾಯಿ. ನೀವು ನನ್ನ ಮೇಲೆ ವಿಶ್ವಾಸ ಇಟ್ಟು ಮಗಳನ್ನ ಕಳಿಸಿಕೊಡಿ. ಕೇವಲ ಒಂದು ಸೆಮೆಸ್ಟರ್ ಅಷ್ಟೆ. ಇಂದೇ ಬೇಕಿದ್ದರೆ ಹಾಸ್ಟೆಲ್ ತೋರಿಸುತ್ತೇನೆ. ತಮಗೆ ಸಮಾಧಾನವಾಗಬೋದು.'
'ಇರಲಿ. ಆಗಲಿ.' ಎಂದು ತನ್ನ ಅಸಂಪೂರ್ಣ ಸಹಕಾರದ ನಡುವೆಯೂ ಹೂಂಕರಿಸಿದ. ಮಗಳನ್ನ ಅಲ್ಲಿಗೇ ಕರೆಸಿ, ಮಗಳಿಗೂ ಹೊಸತಾಗಿ ಹೇಳುವ ಹಾಗೆ ಶಾಂತಲೆ ಹೇಳಿದಳು - 'ನೋಡಮ್ಮ. ನೀನು ಒಳ್ಳೇ ಸ್ಟೂಡೆಂಟ್ ಅಂತ ನಿನ್ನ ಬಗ್ಗೆ ಕೊಂಚ ಕಾಳಜಿ ತೆಗೆದುಕೊಳ್ತಿದ್ದೇನೆ..' ಎಂದು ಆಕೆಯೂ ಸಣ್ಣ ನಾಟಕ ಮಾಡಿದಳು.
ಆ ಹುಡುಗಿ ಕೈ ಮುಗಿದು ತಲೆ ತಗ್ಗಿಸಿ ನಿಂತಳು. ತಂದೆಯ ಮುಖವನ್ಬೂ ನೋಡುವ ಧೈರ್ಯ ಮಾಡಲಿಲ್ಲ.
'ನಾಳೆಯೇ ಹಾಸ್ಡೆಲ್ ಗೆ ಕಳಿಸಿ. ಈಗಲೇ ಹೋಗಿ ನೋಡಿ ಬರೋಣ ಬನ್ನಿ..' ಎಂದು ಆತನನ್ನ ಕರೆದುಕೊಂಡು ಹೋಗಿ ಹಾಸ್ಟೆಲ್ ತೋರಿಸಿದಳು.
****
ಆ ಹುಡುಗಿಗೆ ಅದು ನಿರಾಳ ಸಂಜೆ. ಆದರೆ ಭಯವೂ ಇತ್ತು - ತಂದೆಯ ನಿಜವಾದ ಅಂತರಾಳ ಅರಿಯಲಾರದೆ. ಮಾತಿಗಿಂತ ಮೌನವೇ ಹೆಚ್ಚು ಅಪಾಯಕಾರಿಯಾಗತೊಡಗಿತು. ಒಳಗೇ ಕುದಿಯುತ್ತಿದ್ದಾನೆಯೇ? ಎಂದು ಆಸ್ಫೋಟಿಸುವುದೋ ಎನ್ನೋ ಭಯ. ಒಂದು ಕ್ಷಣ ಹಳೆಯ ವಾತಾವರಣವೇ ಲೇಸೆ ಎನ್ನುವ ಆಲೋಚನೆಯೂ ಸುಳಿದು ಹೋಯಿತು.
ಎರಡು ಬ್ಯಾಗುಗಳಲ್ಲಿ ತನ್ನ ಬಟ್ಟೆ ಇತರೆ ಸರಂಜಾಮುಗಳನ್ನ ತುಂಬಿಕೊಂಡಳು.
'ಏನಾದರೂ ಮರೆತೆಯಾ ನೆನಪಿಸ್ಕೋ..' ಅಮ್ಮ ಎರಡು ಮೂರು ಬಾರಿ ಕೇಳಿದಳು. 'ಈ ಸ್ವೆಟರ್ ಇಟುಗೊ. ಮೈಸೂರಲ್ಲಿ ಸ್ವಲ್ಪ ಛಳಿ ಇರತ್ತೆ ರಾತ್ರೆಯ ಹೊತ್ತು' ಎಂದು ಸ್ವೆಟರ್ ಒಂದು ಕೊಟ್ಟಳು.
ಅಮ್ಮನನ್ನ ಒಮ್ನೆ ತಬ್ಬಿದಳು. ಅಳು ಬಂದಿತು. ತನ್ನ ಮನೆ, ಅಮ್ಮ ಎಲ್ಲವನ್ನೂ ಎಂದೂ ಬಿಟ್ಟಿದ್ದಿರಲಿಲ್ಲ. ಇಲ್ಲೇ ಇದ್ದು ಬಿಡಳೇ? ಎನ್ನುವ ಆಲೋಚನೆ ಮತ್ತೆ ಮತ್ತೆ ಸುಳಿಯಿತು. ಮತ್ತೊಮ್ಮೆ ರೂಮಿನ ಎಲ್ಲೆಡೆ ನೋಡಿದಳು. ತನ್ನ - ಅಮ್ಮನ ಅಳು, ಕತ್ತಲೆಯ ನೋವಿನ ರಾತ್ರಿಗಳು, ಅಪ್ಪನ ಕೂಗು ಎಲ್ಲವೂ ಪರದೆಯಲ್ಲಿ ಹರಿಯುವ ಸಿನೆಮಾದಂತೆ ಕಣ್ಣ ಮುಂದೆ ಚಲಿಸುತ್ತಿದ್ದವು. ಈಗ ಅದೆಲ್ಲದರಿಂದ ಹೊರನಿಂತು ಅವುಗಳನ್ನ ಕಾಣುತ್ತಿದ್ದಾಳೆ.
ಅಪ್ಪ ಹೊರಗೆ ಕಾಯುತ್ತಿದ್ದ. 'ರಾತ್ರಿ ಊಟಕ್ಕೆ ನಾನು ಬರಲ್ಲ..' ಅಂತ ಹೇಳಿ, ಆಕೆಯ ಬ್ಯಾಗುಗಳನ್ನ ತೆಗೆದುಕೊಂಡು ಕಾರಿಗೆ ಹಾಕಿದ.
ಆಕೆ ಕಾರಿನಿಂದ ಮತ್ತೊಮ್ಮೆ ಮನೆಯನ್ನ, ಆಕೆಯ ಅಮ್ಮಳನ್ನ ಕಂಡು ಅಳು ಬಿಕ್ಕಳಿಸಿತು. ಅಮ್ಮನೂ ಸಹ ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಿದ್ದಳು.
ಕಾರಿನಲ್ಲಿ ಕುಳಿತು ಹಾಸ್ಟೆಲ್ ಬರುವವರೆಗೂ ಅಪ್ಪನೊಟ್ಟಿಗೆ ಮಾತಿಲ್ಲ. ಆತ ಆಕೆಯನ್ನ ಹಾಸ್ಟೆಲ್ ಬಳಿ ಇಳಿಸಿ ಏನೂ ಮಾತಾಡದೇ ಹೊರಟು ಹೋದ.
ಹಾಸ್ಟೆಲ್ ನ ವಾರ್ಡನ್ ಆಕೆಗೆ ಅವಳ ಕೋಣೆ ತೋರಿಸಿದರು. ಕೋಣೆಯ ಬಾಗಿಲು ತೆಗೆದಾಗ ಅದಾಗಲೇ ಒಬ್ಬಾಕೆ ಇದ್ದಳು. ಒಬ್ಬರಿಗೊಬ್ಬರ ಪರಿಚಯ ಮಾಡಿಸಿ ವಾರ್ಡನ್ ಹೊರಟರು.
'ಇದೇ ಮೊದಲಾ?'
ಈಕೆ ತಲೆಯಾಡಿಸಿದಳು.
ಆ ಕೋಣೆಯಲ್ಲಿ ಎರಡು ಮಂಚ, ಎರಡು ಟೇಬಲ್ ಹಾಗೂ ಚೇರ್ ಗಳಿದ್ದವು. ಟೇಬಲ್ ಮೇಲೆ ಟೇಬಲ್ ಲ್ಯಾಂಪ್. ಹಾಗೆಯೇ ಕೋಣೆಗೆ ಹೊಂದುಕೊಂಡ ಹಾಗೆ ಒಂದು ಬಾಲ್ಕನಿ ಇತ್ತು.
'ನಿನ್ನದು ಆ ಮಂಚ' ಎಂದು ಕುಳಿತಲ್ಲಿಂದಲೇ ಸನ್ನೆ ಮಾಡಿದಳು. 'ಬಾತ್ ರೂಮ್ ಮತ್ತೆ ಟಾಯ್ಲೆಟ್ ಎಲ್ಲಾ ಹೊರಗೆ ಇದೆ. ಇಲ್ಲೇ ಎಡಕ್ಕೆ ಹೋದರೆ ಸಿಗಿತ್ತೆ. ನಿನಗೆ ಏನೇ ಸಹಾಯ ಬೇಕಿದ್ದರೂ ಕೇಳು.' ಎಂದು ಹೇಳಿ ತನ್ನ ಓದಿನಲ್ಲಿ ಮಜ್ಞಳಾದಳು. ಅಪ್ಪ ಮನೆಯಲ್ಲಿಲ್ಲದಿದ್ದಾಗಲೂ ಆತ ಮನೆಯಲ್ಲಿರುವಂತೆಯೇ ಭಾಸವಾಗುತ್ತಿತ್ತು. ಯಾವ ಮೂಲೆ ನೋಡಿದರೂ ಆತ ಅಲ್ಲಿ ನಿಂತು ಜಗಳ ಮಾಡುತ್ತಿದ್ದದ್ದೇ ನೆನಪಾಗುತ್ತಿತ್ತು. ಆದರೆ ಇಲ್ಲಿ ಆ ನೆನಪುಗಳಿಲ್ಲ. ಹಾಗೆ ನೋಡಿದರೆ ಇಲ್ಲಿ ನೆನಪುಗಳೇ ಇಲ್ಲ.
ಆ ರಾತ್ರಿ ಹಾಸಿಗೆಯಲ್ಲಿ ಕಣ್ಣು ಬಿಟ್ಟುಕೊಂಡೇ ಸಾಕಷ್ಟು ಹೊತ್ತು ಮಲಗಿದ್ದಳು. ಮನಸ್ಸಿಗೆ ಯಾವ ಯೋಚನೆಯೂ ಬರುತ್ತಿರಲಿಲ್ಲ. ಅದೊಂದು ನಿರಾಳ ಸ್ಥಿತಿ. ಖಾಲೀ ಸ್ಥಿತಿ. ಸುಮ್ಮನೆ ಗೋಡೆ ನೋಡುತ್ತಾ ಮಲಗಿದ್ದಳು. ಯಾವಾಗ ಕಣ್ಣು ಮುಚ್ಚಿದ್ದಳೋ ತಿಳಿಯದು. ಮಧ್ಯರಾತ್ರೆ ಛಳಿಗೆ ಎಚ್ಚರಾಯ್ತು. ಅಮ್ಮ ಕೊಟ್ಟ ಸ್ವೆಟರ್ ನೆನಪಿಗೆ ಬಂದು ಸ್ವೆಟರ್ ಹಾಕಿಕೊಂಡು ಮತ್ತೆ ಮಲಗಿ ಕಣ್ಣು ಮುಚ್ಚಿದಳು, ಯಾವುದೇ ಭಯವಿಲ್ಲದೆ, ಬಹಳ ದಿನಗಳ ನಂತರ.
*******
ಪ್ತಾಂಶುಪಾಲೆಯಾಗಿದ್ದರಿಂದ ಎಲ್ಲಾ ಕೇಸುಗಳನ್ನು ತಲೆಯಲ್ಲಿರಿಕೊಂಡು ಫಾಲೋ ಅಪ್ ಮಾಡುವುದು ಕಷ್ಟ. ಹಾಗಾಗಿ ಈಕೆಯ ಜವಾಬ್ದಾರಿಯನ್ನ ಡಿಪಾರ್ಟುಮೆಂಟಿನ ಒಬ್ಬ ಪ್ರಾಧ್ಯಾಪಕರಿಗೆ ಹಾಗೆಯೇ ವಿಭಾಗದ ಮುಖ್ಯಸ್ಥರಿಗೆ ವಹಿಸಿದ್ದಳು. ಆಕೆಗೆ ರೆಮೆಡಿಯಲ್ ಕ್ಲಾಸ್ ಕೊಡಿಸುವುದು ಹಾಗೆಯೇ ಆಕೆ ಮರಳಿ ಓದಿನಲ್ಲಿ ಚುರುಕಾಗಲು ಏನೆಲ್ಲಾ ಸಹಾಯದ ಅಗತ್ಯವಿದೆಯೋ ಅದೆಲ್ಲವನ್ನೂ ಮಾಡಬೇಕೆಂದು ತಾಕೀತು ಸಹ ಮಾಡಿದ್ದಳು. ಒಂದು ದಿನ ತುರ್ತಿನ ಮೇಲೆ ಆಕೆಯ ಜವಾಬ್ದಾರಿ ಹೊತ್ತ ಪ್ರಾಧ್ಯಪಕಿ ಈಕೆಯ ಚೇಂಬರಿಗೆ ಬಂದಳು. ಮುಖದಲ್ಲಿ ಕೊಂಚ ಗಾಬರಿ ಇತ್ತು. 'ಹೇಗೆ ಶುರು ಮಾಡುವುದು ತಿಳಿಯುತ್ತಿಲ್ಲ" ಎಂದು ತಲೆ ತಗ್ಗಿಸಿದಳು ತಲೆ ಕೆರೆದುಕೊಳ್ಳಲಾರಂಭಿಸಿದಳು. 'ಹೇಳದೆ ಇರೋದು ದೊಡ್ಡ ಅಪರಾಧವಾದೀತು ಅಂತ ಬಂದೆ' ಸೇರಿಸಿದಳು.
'ಏನಾಯ್ತು?' ಶಾಂತಲೆಗೂ ಕುತೂಹಲವೇರಿತು.
'ಅದು, ಆ ಹುಡುಗಿಯ ಕುರಿತಾಗಿ'
'ಯಾರು? ಅದೇ ಮಂದಾರ?'
'ಹೌದು'
'ಹಾಂ ಹಾಂ. ನಾನೇ ಕೇಳಬೇಕೂಂತಿದ್ದೆ. ಏನಾದರೂ ಮತ್ತೆ ಸಮಸ್ಯೆಯಾಯಿತ? ತಂದೆ?'
'ಇಲ್ಲ ಆಗಬೋದೂಂತ'
'ಅಂದ್ರೆ. ಬಿಡಿಸಿ ಹೇಳಮ್ಮ ಸ್ವಲ್ಪ'
'ಮೇಡಂ ನಿಮ್ಮವರೆಗೂ ವಿಷಯ ಇನ್ನೂ ತಲುಪಿಲ್ಲ ಕಾಣುತ್ತೆ. ಕಾಲೇಜೆಲ್ಲಾ ಭಾಗಶಃ ತಲುಪಿಬಿಟ್ಟಿದೆ'
'ಅರ್ರೆ.. ಅದೇನಮ್ಮಾ?'
'ಇವತ್ತು ಒಂದು ವಿದ್ರಾರ್ಥಿನಿ ಬಂದು ಕಾಲೇಜಿನ ಒಬ್ಬ ಪ್ರಾಧ್ಯಾಪಕರು ಯಾವುದೋ ಹೆಣ್ಣಿನ ಜೊತೆ ತೆಗೆಸಿಕೊಂಡ ಖಾಸಗಿ ಫೋಟೋ ಒಂದು ಹ್ಯಾಗೋ ಲೀಕಾಗಿದೆ. ಎಲ್ಲರೂ ಅದರ ಬಗ್ಗೆ ಮಾತನಾಡಿಕೊಳ್ತಿದ್ದಾರೆ ಅಂತ ಹೇಳಿದಳು. ಯಾರು ಎಂದು ವಿಚಾರಿಸಿದಾಗ ಏನೂ ಹೇಳಲಿಲ್ಲ. ಆದರೆ ಅದರಲ್ಲಿದ್ದ ಪ್ರಾಧ್ಯಾಪಕರು ನಮ್ಮ ಡಿಪಾರ್ಡುಮೆಂಟಿನ ಶರತ್ ಎನ್ನೋದು ಇತರರಿಂದ ಹ್ಯಾಗೂ ತಿಳೀತು. ಆದರೆ, ನೆನ್ನೆ ಸಂಜೆ ನನಗೆ ಆ ಫೋಟೋವನ್ನ ವಾಟ್ಸಾಪಿನಲ್ಲಿ ಒಬ್ಬ ವಿದ್ಯಾರ್ಥಿ ಕಳಿಸಿದ. ನೋಡಿ ಮೇಡಂ'
ಅದನ್ನು ನೋಡಿ ಶಾಂತಲೆ ದಿಗ್ಭ್ರಾಂತಳಾದಳು. ತನಗೆ ಹುಚ್ಚೇ ಹಿಡಿಯುವಷ್ಟು ತಲೆ ಗಿರ್ ಎನತೊಡಗಿತು. ತನ್ನ ಮಾತೇ ಮನಸ್ಸೊಳಗೆ ರಿಂಗಣಿಸಲಾರಂಭಸಿತು 'ನನ್ನ ಮೇಲೆ ವಿಶ್ವಾಸ ಇಟ್ಟು....'
'ಅಲ್ಲಾಮ್ಮ.. ಇದು ನಿಜವೇ ಅಥವಾ ಫೇಕ್ ಫೋಟೋ...'
ಆಕೆ ಮುಗಿಸುವುದರೊಳಗೆಯೇ, 'ಇಲ್ಲ ಮೇಡಂ. ನಾನು ಆಕೆಯನ್ನ ಕರೆಸಿ ವಿಚಾರಿಸಿದೆ. ಹಾಗೆಲ್ಲಾ ಏನೂ ಇಲ್ಲ ಅಂತ ಮೊದ ಮೊದಲು ವಾದಿಸಿದವಳು ಈ ಫೋಟೋ ತೋರಿಸಿದೊಡನೆಯೇ ಅತ್ತುಬಿಟ್ಟಳು.'
ಆ ಹುಡುಗಿ ಹಾಸ್ಟೆಲ್ ಗೆ ಬಂದ ಮೇಲೆ ಆಕೆಗೆ ಸಿಕ್ಕ ಸ್ವೇಚ್ಛೆಯೂ ಹೊಸದು. ಅಲ್ಲಿ ಆಕೆಯನ್ನ ಹೀಗೆಯೇ ಇರು, ಇಷ್ಟು ಹೊತ್ತಿಗೇ ಬಾ, ಇಷ್ಟು ಹೊತ್ತಿಗೇ ಮಲಗು, ಆಚೆ ಹೋಗಬೇಡ, ಗಂಡಾರೊಟ್ಟಿಗೆ ಮಾತಾಡಕೂಡದು ಎಂದೆಲ್ಲಾ ತಾಕೀತು ಮಾಡಲೂ ಯಾರೂ ಇಲ್ಲದಿರೋದು ಮೊದ ಮೊದಲು ಆಕೆಗೇ ವಿಚಿತ್ರವೆನಿಸಲಾರಂಭಿಸಿತು. ಕ್ರಮೇಣ ಈ ಸ್ವೇಚ್ಛೆಯ ಸ್ವಾದ ಒಳಗೆ ಇಳಿಯಲು ಅದೇ ಸಹಜ ಅಂತಲೂ ಅನಿಸಿ ಮತ್ತೆ ವಾರದ ಕೊನೆಗೆ ಮನೆಗೆ ಹೋಗಿವಾಗ ಅತ್ಯಂತ ಹಿಂಸೆಯಾಗಲಾರಂಭಿಸಿತು. ಮೊದ ಮೊದಲು ಮನೆಗೆ ಹೋಗುತ್ತಿದ್ದವಳು, ಒಂದೆರೆಡು ತಿಂಗಳ ತರುವಾಯ ಎರಡು ವಾರಕ್ಕೊಮ್ಮೆ ಹೋಗಲಾರಂಭಿಸಿದಳು. ತಂದೆಯೂ ಅಷ್ಟರಲ್ಲಾಗಲೇ ಆಕೆಯ ಅನುಪಸ್ಥಿತಿಗೆ ಹೊಂದುಕೊಂಡಿದ್ದರಿಂದ ಹೆಚ್ಚು ತಲೆ ಕೆಡಸಿಕೊಳ್ಳಲಿಲ್ಲವೇನೋ. ಈ ಸಂದರ್ಭ ಆಕೆಗೊಂದು ಹೊಸ ಮೊಬೈಲ್ ಕೂಡ ಬಂದಿತ್ತು. ತಂದೆಯಿಂದಲ್ಲ. ಆಕೆಯ ರೆಮೆಡಿಯಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಶರತ್ ನಿಂದ. ಆತನೂ ಈಗಷ್ಡೇ ಒಂದೈದು ವರ್ಷಗಳ ಹಿಂದಷ್ಟೇ ಎಂ. ಎಸ್ಸಿ ಮುಗಿದ್ದ. ಪಿ.ಎಚ್ಟಿಯೂ ಆಗಿತ್ತು. ಇದೀಗ ಮದುವೆಯ ಹೊಸ್ತಿಲಲ್ಲಿದ್ದವ. ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಅವರು ಕೆಲ ಎಲ್ಲೆಯನ್ನೂ ಮೀರಿ ಮುಂದುವರೆದದ್ದು ಇದೀಗ ಇಡೀ ಕಾಲೇಜಿಗೆ ತಿಳಿದಿತ್ತು.
'ಈಗ ಏನು ಮಾಡೋದು? ಶರತ್ ಹೀಗೆಲ್ಲಾ ಏಕೆ ಮಾಡಿದ್ರು? ಯಾಕೆ ನಿಮ್ಮ ವಿದ್ಯಾರ್ಥಿಯನ್ನೇ ಪ್ರೀತಿಸಿದ್ರಿ ಅಂತ ಕೇಳೋದೆ? ಅಥವಾ ಆಕೆಗೆ ಯಾಕೆ ನಾನು ಕೊಟ್ಟ ಮಾತಿಗೆ ಅಪಚಾರ ಎಸಗಿದೆ ಅಂತ ಬೈಯೋದೆ?' ಕುರ್ಚಿಯಲ್ಲಿ ಹಿಂದೆ ಒರಗಿ ಕುಳಿತು ಮೇಲೆ ನೋಡುತ್ತಾ ಕಣ್ಣು ಮುಚ್ಚಿದಳು.
ಟೇಬಲ್ಲಿನ ಮೇಲೆ ಮ್ಯಾನೇಜ್ಮೆಂಟಿನ ಪತ್ರವಿತ್ತು - 'ಇದು ಪ್ರಾಂಶುಪಾಲರ ಬೇಜವಾಬ್ದಾರಿತನವಾದ್ದರಿಂದ 1ಲಕ್ಷ ರೂಪಾಯಿ ಅವರೇ ಕಟ್ಟತಕ್ಕದ್ದು. ಈ ವಿಚಾರದಲ್ಲಿ ಆಡಳಿತ ಮಂಡಳಿ ಯಾವುದೇ ಜವಾಬ್ದಾರಿ ಹೊರಲು ಅಂತೆಯೇ ಆರ್ಥಿಕ ಬದ್ಧತೆಗೆ ಒಳಪಡಲು ಸಿದ್ಧವಿಲ್ಲ'
No comments:
Post a Comment