“ಭಯ... ಭಯ... ಓಹ್! ಬೆಳಕು, ಬೆಳಕು... ದಯಮಾಡಿ ಬಾಗಿಲು ಮುಚ್ಚಿರಿ. ನಾನು ಕಂಡು ಬಿಟ್ಟರೆ? ಅಯ್ಯೋ! ಎಂಥಾ ದರಿದ್ರ ರೂಪವಿದು. ಜನ ಉಗಿದಾರು, ಹೊಡೆದಾರು, ನನ್ನ ಹರಿದು ನಾಲ್ಕಾರು ಕಡೆ ಎಸೆದಾರು. ನನ್ನ ನೋಡಿದೊಂದಿಬ್ಬರು ನನ್ನೀ ವೇಷದ ಬಗೆಗಿನ ಸತ್ಯವನ್ನು ಮುಚ್ಚಿಟ್ಟರು! ನನ್ನೆಡೆಗಿನ ಮರುಕವೇ? ಅಲ್ಲ.. ಅಲ್ಲ.. ನನ್ನ ಹುಟ್ಟಿಸಿದಾತನೊಟ್ಟಿಗಿನ ವಿಶ್ವಾಸವೇ? ಅಯ್ಯೋ.. ಆತ ಕುರುಡಾಗಿ ಹೋಗಿದ್ದಾನೆ! ಹೀಗೆಯೇ.. ಹೀಗೆಯೇ.. ನನ್ನ ಹಾಗೆಯೇ ವಿಕಾರ, ಕುರೂಪ, ಅಸಹ್ಯಕರ ಜೀವಿಗಳನ್ನ ಹುಟ್ಟಿಸಿ ಜಗತ್ತಿಗೆಲ್ಲಾ ತೋರಿಸಿಬೇಕೆಂದಿದ್ದಾನೆ! ಅಯ್ಯೋ.. ಅಯ್ಯೋ.. ನೀವಾದರೂ ಹೇಳಬಾರದೆ? ಆತನಿಗೇನೂ ಕಾಣಲಾರದು... ದಯಮಾಡಿ ಎಲ್ಲಾ ತಿಳಿದ ನೀವು ಹೀಗೆ ನಮ್ಮ ಮೇಲೆ ಬೆಳಕ್ಹಾಯಿಸಬೇಡಿ.. ನಾವು ಕಂಡುಬಿಟ್ಟರೆ? ಅಯ್ಯೋ.. ಬೆಳಕು, ಭಯ ಭಯ...”ನನ್ನ ಲೇಖನಗಳ ಈ ಆರ್ತನಾದ ದಿನಾ ರಾತ್ರಿಯ ಕನಸಿನಲ್ಲಿ ಕೇಳಿಸುತ್ತಿದೆಯಲ್ಲಾ?
Saturday, January 11, 2020
Thursday, January 9, 2020
ಮುರಿದ ಮೌನ
ಆಕೆಯಿಂದು ಮೌನ ಮುರಿದಿದ್ದಾಳೆ. ನನಗವಳು ತೀರ ಹತ್ತಿರದ ಪರಿಚಯ. ಪ್ರತೀ ಸಂಜೆ, ಇಗೋ ಇಲ್ಲೇ ಈ ಜಾಗದಲ್ಲೇ, ನನ್ನ ಪಕ್ಕದಲ್ಲೇ ಮೌನವಾಗಿ ಕುಳಿತಿರುತ್ತಿದ್ದಳು. ಆಕೆ ಮೂಕಿಯೆಂದು ಭಾವಿಸಿದ್ದೆ. ಓಹ್! ಇದೇನಿದು ಇಂದು? ಆಕೆಯ ಮಾತುಗಳು ತಡೆಯಲಾಗದಷ್ಟು ಅಸಂಬದ್ಧವಾಗಿವೆಯೇ! ಅಗೋ, ಅಗೋ, ನಿಮ್ಮನ್ನು ರೊಚ್ಚಿಗೇಳಿಸುವಷ್ಟು ಅವೈಜ್ಞಾನಿಕವಾಗಿ ಮಾತನಾಡುತ್ತಿದ್ದಾಳಲ್ಲವೇ. ಆಕೆಗೆ ಬೈದು, ಆಕೆಯ ಬಾಯಿ ಮುಚ್ಚಿಸಿ ಓಡಿಸಿಬಿಡಬೇಕೆಂದು ಓಡೋಡಿ ಬಂದಿರಲ್ಲವೇ? ಹ್ಹ..ಹ್ಹ.. ನಿಮ್ಮ ಹಾಗೆ ಆಕೆಗೆ ‘ನಾ ನಿನ್ನ ಮಾತುಗಳನ್ನು ಕೇಳಲಾರೆ’ ಎಂದು ಹೇಳಲಾಗದ ಮೂಕನೇನೋ ಹೌದು ನಾನು. ಅಶಕ್ತನೆಂದು ಸುಮ್ಮನಿಲ್ಲ. ಆಕೆಯದ್ದೇ ಆದ ಮಾತುಗಳು ಕೇಳುಗರಿಲ್ಲದೆ ಆಕೆಯನ್ನು ಇರಿದು ಕೊಂದು ಮೂಕಿಯಾಗಿಸಿದ್ದು. ನಾನೂ ಸಹ ಕೋಪಿಸಿಕೊಂಡರೆ? ಮತ್ತೇ ಕೇಳುಗರಿಲ್ಲದೇ ಹೋದರೆ?
Sunday, July 21, 2019
ಫುಲ್‌ಟೈಮ್ ಸೋಂಬೇರಿ!
ಕಾಡಿನ ಸಾನ್ನಿಧ್ಯ ಇದ್ದಕ್ಕಿದ್ದ ಹಾಗೆ ಬೇಕೆನಿಸಿತು. ನಮ್ಮ ಮೆದುಳಿನ ಕಾರ್ಯಪ್ರವೃತ್ತಿ ಅತೀ ವಿಚಿತ್ರ. ಅದೇಕೆ ತೇಜಸ್ವಿಯ ʻಸೋಂಬೇರಿ ಮೋರೆಯ ಕಾಡುʼ ಇದ್ದಕ್ಕಿದ್ದ ಹಾಗೆ ನೆನಪಾಯಿತು? ಅದೇಕೆ ತೇಜಸ್ವಿ ಆ ಮಳೆಗಾಲದಲ್ಲಿ ಮೂಡಿಗೆರೆಯ ಜೇನು ಸೊಸೈಟಿಯ ಬಾಗಿಲು ತೆಗೆಯುವ ಚಿತ್ರ ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಹಾರಿ ಬಂದು ಕಣ್ಣ ಮುಂದೆ ನಿಂತಿತು? ಈಕೆ ಮಲೆನಾಡಿನವಳನ್ನೋದೇನೋ ನನಗೆ ನಿಜವಾಗಿಯೂ ನೆಮ್ಮದಿಯೇ. ಆದರೆ ಮನಸ್ಸು ಮೇಗೂರಿನ ನಾಗಾನಂದರ ಮನೆಗೆ ಸೆಳೆಯುತ್ತಿದೆ. ಆ ಮನೆಯಲ್ಲಿ ಓದಿದ್ದ ಅಣ್ಣನ ನೆನಪು, ಮನೆಯೆಲ್ಲಾ ಪ್ರತಿಧ್ವನಿಸುತ್ತಿದ್ದ ನಗು, ಆ ಛಳಿಯಲ್ಲಿ ಹೊದೆದಿದ್ದ ಕಂಬಳಿ,
Thursday, January 17, 2019
ಕನ್ಫ್ಯೂಷನ್ಸ್ – 1
ಹೊರಟುಬಿಡು ಪ್ಲೀಸ್….
ನಿನಗೆ ಯಾವುದು ಅನುಕೂಲವೋ ಅದ್ಕಾಗಿಯಷ್ಟೇ ನೀನು ಮಾತನಾಡೋದು ಅಂತ ನಾನು ಹೇಳಿದರೆ ಅದು ನನಗೇ ಪುನಃ ಅನ್ವಯಿಸಿಬಿಡತ್ತೆ ಅನ್ನೋದು ಕಾಡಲಿಕ್ಕೆ ಆರಂಭಿಸಿದ್ದಾಗಿನಿಂದ ನಾನು ಹೆಚ್ಚು ಮಾತನಾಡೋದು ಬಿಟ್ಟೆ ಕಣೊ! ಆ ಅನುಕೂಲ ಯಾವುದೋ ಗೊತ್ತಿಲ್ಲ. ಇದೊಂದು ಕೊನೆಯಿರದ ವಾಕ್ಯ ಸರಣಿ! ನೀನು ನನಗೆ ಹೇಳ್ತಿರ್ಬೋದು, ನಾನು ನಿನೆಗೆ ಹೇಳ್ತಿರ್ಬೋದು. ಈ ಮಾತು ಅನ್ನೋದು ಯಾಕೋ ಒಂದು ರೀತಿ ಜೇಡರ ಬಲೆಯ ಹಾಗೆ ಅನ್ನಿಸ್ತಿದೆ. ನಾನೇ ಹೆಣೆದ ಬಲೆಯೊಳಗೆ ನಾನೇ ಸಿಕ್ಕಾಕೊಂಡು ಬಿಡಿಸಿಕೊಳ್ಳೋದಿಕ್ಕೆ ಜೀವಮಾನವೆಲ್ಲಾ ಹೊಡೆದಾಡೊ ಸ್ಥಿತಿಯಾಗಿಹೋಗಿದೆ ಯಾಕೋ ನನಗೆ.
Wednesday, January 16, 2019
ವ್ಯಾಮೋಹ
ನಾರೀಸ್ತನಭರನಾಭೀದೇಶಾಂ
ದೃಷ್ಟ್ವಾ ಮಾ ಗಾ ಮೋಹಾವೇಶಾಂ|
ಏತನ್ಮಾಂಸವಸಾದಿವಿಕಾರಮ್
ಮನಸಿ ವಿಚಿಂತಯ ವಾರಮ್ ವಾರಂ||
“ಫಗ್..” ಬೆಂಕಿ ಕಡ್ಡಿಯನ್ನು ಗೀರಿದ ಸದ್ದು ಯಶೋದೆಯ ಅಂತರಾಳದಲ್ಲಿ ಪ್ರತಿಧ್ವನಿಸಿತು. ಯಾವುದೋ ಅರ್ಥವಿಲ್ಲದ, ಪರಿಚಯವಿಲ್ಲದ, ಆ ಸದ್ದಿಗೆ ಸಂಬಂಧಿಸಿದ್ದ ಘಟನಾವಳಿಯೊಂದು ಕ್ಷಣಮಾತ್ರದಲ್ಲಿ ಮನಸ್ಸಲ್ಲಿ ಜರುಗಿ ಹೋದಂತೆ ಭಾಸವಾಗಿ ಯಶೋದೆ ಉರಿಯುತ್ತದ್ದ ಕಡ್ಡಿಯನ್ನ ಕೈಯಲ್ಲೇ ಹಿಡಿದು ನಿಂತಿದ್ದಳು. ‘ಊ...ಫ್...ಹಾ..” ಕೈ ಸುಟ್ಟ ಭರದಲ್ಲಿ ಯಶೋದೆ ಉದ್ಗರಿಸಿ ಕೈಯನ್ನು ಒಂದಷ್ಟು ಬಾರಿ ಗಾಳಿಯಲ್ಲಿ ಕೊಡವಿ ಮತ್ತೊಂದು ಬೆಂಕಿ ಕಡ್ಡಿಯನ್ನು ಗೀರಿದಳು – ‘ಫಗ್..” ‘ಜೀವನದಲ್ಲಿ ಕೆಲವೊಂದಷ್ಟು ಹಾಗೆಯೇ! ಉರಿದು ಸುಟ್ಟರೂ, ಅದನ್ನು ಊದಿ, ಆರಿಸಿ, ಕೊಡವಿ ಮತ್ತೊಂದನ್ನು ಹೊತ್ತಿಸಬಹುದು. ಆದರೆ ನೆನಪಿರಲಿ ಎರಡನೆಯದ್ದೂ ಸಹ ಸುಡುವುದೇ! ಇದು ಮುಗುಯುವುದು ಎಂದು? ಹಾಂ! ಹೌದು.. ಹೌದು.. ಮತ್ತೆ ಹೊತ್ತಿಸಲು ಆಗದಹಾಗೆ ಸುಟ್ಟು ಕರಕಲಾದಾಗ.! ಇದು ತಿಳಿದೂ ತಿಳಿದೂ.. ಛೇ!’ ಯಶೋದೆಯ ಬೆರಳು ಮತ್ತೊಮ್ಮೆ ಸುಟ್ಟತು! ದೀಪವನ್ನು ಹೊತ್ತಿಸಲು ಗೀರಿದ ಕಡ್ಡಿಗಳು ಕೈ ಸುಟ್ಟವು!
Friday, September 7, 2018
ಭಾವ-ಭ್ರಮೆ
“ನಾನೊಂದು ಸುಂದರವಾದ ಭ್ರಮಾಲೋಕವನ್ನ ಸೃಷ್ಟಿಸ್ಲಿಕ್ಕೆ ಹೊರಟಿದ್ದೀನಿ. ಹೋಯ್! ನಿಮ್ಮೆಲ್ಲರ ಸಹಕಾರ ಇಲ್ಲದಿದ್ರೆ ಹೇಗೆ?” ಭಲೇ! ಎಷ್ಟು ಚೆಂದ ವಾಕ್ಯಮಾಲೆಯೊಂದು ಕಾದಂಬರಿಯ ಆರಂಭಕ್ಕೆ ಅರ್ಪಣೆಯಾಯ್ತು ಅಂತ ಹೆಮ್ಮೆಯ ಭಾವವೊಂದು ಮೂಡಿತು. ಬೆನ್ನನ್ನ ನೇರ ಮಾಡಿ ಕಿಟಕಿಯ ಹೊರಗೆ ನನ್ನ ರೂಮಿನ ನೇರಕ್ಕೆ ತಲೆ ಎತ್ತಿದ್ದ ಬೀದಿ ದೀಪದ ಕಂಬವೊಂದರ ಕಡೆಗೆ ದೃಷ್ಟಿ ನೆಟ್ಟಿದೆ. ದೀಪದ ಕೇಸ್ ನ ಒಳಗೆ ಕಪ್ಪು ಕಪ್ಪಗಿನ ರಾಶಿಯೊಂದು ಸ್ಪಷ್ಟವಾಗಿ ಕಾಣುತ್ತಿತ್ತು. ಹಲವಾರು ಕಪ್ಪು ಹುಳಗಳು ದೀಪದ ಸುತ್ತಲೇ ಅದಕ್ಕೆ ಮುತ್ತಿಕ್ಕಲು ಹಾರುತ್ತಿದ್ದವು.
Saturday, March 31, 2018
ಎರಡು ಮೂರು ಬಸ್ ಗಳು ಬಂದು ನಿಂತಿದ್ದರೂ ಎಲ್ಲೂ ಖಾಲಿಯಿಲ್ಲ. ಅವುಗಳಲ್ಲೆಲ್ಲಾ ಹಿಡಿಸೋ ಅಷ್ಟು ಜನರ ಹಿಂಡೇ ಅಲ್ಲಿತ್ತು. ಶನಿವಾರವೇನಾದ್ರು ಗವರ್ನಮೆಂಟ್ ಹಾಲಿಡೇ ಬಂದ್ರೆ, ಶುಕ್ರವಾರದ ಸಂಜೆಯ ಬಸ್ ಗಳಲ್ಲಿ ಸೀಟ್ ಪಡಕೋಳೋದು ಒಂದು ಸಾಹಸಾನೆ. ಅಷ್ಟೆಲ್ಲಾ ಜನಜಾತ್ರೆ ಇದ್ದರೂ ಕೂರೋ ಬೆಂಚುಗಳು ಮಾತ್ರ ತುಂಬೋದೇ ಇಲ್ಲ. ಹಿಂದಿನ ಮೂರ್ನಾಲ್ಕು ಬಸ್ ಗಳು ನಿಂತಿದ್ದ ಜಾಗವನ್ನ ಅಂದಾಜಿಸಿ, ಮುಂದಿನ ಬಸ್ ಎಲ್ಲಿ ನಿಲ್ಬೋದು ಅನ್ನೋದನ್ನ ಅವ್ರವ್ರೆ ಲೆಕ್ಕ ಹಾಕಿಕೊಳ್ತ ಆ ಜಾಗಗಳನ್ನ ರಿಸರ್ವ್ ಮಾಡಿಕೊಂಡು ನಿಂತುಬಿಡ್ತಿದ್ರು. ಬೆಂಚುಗಳ ಆಹ್ವಾನವನ್ನ ಗುರುತಿಸ್ತಿದ್ದದ್ದು ಎಲ್ಲೋ ಕೆಲವು ವಯಸ್ಸಾದವ್ರು, ಕೆಲವು ಹೆಂಗಸ್ರು ಹಾಗೂ ಶುದ್ಧ ಸೋಂಬೇರಿಗಳು.