Sunday, December 1, 2024

ಐರನೀಸ್

 ಐರನಿ - 1


'ನಿಮಗೊಂದು ಸ್ವಾಭಿಮಾನವಿದ್ದಲ್ಲಿ ದೇವಸ್ಥಾನಗಳಿಗೆ ಹೋಗೋದನ್ನ ನಿಲ್ಲಿಸಬೇಕು' ಭಾಷಣಕಾರ ಉದ್ರೇಕದಿಂದ ಹೇಳಿದ ದಲಿತ ಸಮಾವೇಶದಲ್ಲಿ. 

ಬಯಲ ಮೂಲೆಯಲ್ಲೆಲ್ಲೋ ಸಣ್ಣ ದಿಬ್ಬದ ಮೇಲೆ ಕುಕ್ಕರಗಾಲಲ್ಲಿ ಚೆಡ್ಡಿ ಹಾಕಿ, ತಲೆಗೆ ಟವಲ್ ಸುತ್ತಿ ಕೂತಿದ್ದ ಕರಿ‌ ಮುಖದ ತುಕಾರಾಮನ ಮೋಟು ಬೀಡಿ ಎಳೆಯುವ ವೇಗವೂ ಹೆಚ್ಚಿತು. 'ಟಿಣಿ ಣಿಣ್ ಟಿಣ್ ಟಿಣಿ ಣಿಣ್ ಟಿಣ್ ಟಿಣಿ ಣಿಣ್ ಟಿಣ್ ಟಿಣ್' ಅಂಗಿಯ ಜೇಬಲ್ಲಿದ್ದ ಮೊಬೈಲ್ ತೆಗೆದ 'ಹಲೋ....ಬಂದೆ ಸಾಮೆ..' ಭಾಷಣಕಾರನ ಧ್ವನಿಯನ್ನೂ ಮೀರಿದಂತೆ ಕೂಗಿ ಎದ್ದು ನಿಂತು ಟವಲು ತೆಗೆದ. ನಿಂತೇ ಬೀಡಿಯನ್ನ ಸರ ಸರ ಒಂದೈದು ಬಾರಿ ಎಳೆದು, ಪಕ್ಕೆಸೆದು ಹೊರಟ. 

Saturday, November 30, 2024

ಕಣ್ ಕಟ್

ಖಜಾಂಚಿಗಳೇ ಬಾಗಿಲು ತಟ್ಟುತ್ತಿದ್ದದ್ದು. ಸುಂದರ ಸ್ವಪ್ನವೊಂದಕ್ಕುಂಟಾದ ಭಂಗದಿಂದ ಜಕೋಬನಿಗೆ ಸಿಟ್ಟಾಯಿತಾದರೂ, ವಿಷಯ ಗಂಭೀರವೆಂದು ಹೇಳಿದರಿಂದ ಸುಮ್ಮನಿದ್ದ.


'ಮಹಾರಾಜರೇ! ಲೆಕ್ಕ ಪರಿಶೋಧನೆ ಈಗಷ್ಟೇ ಮುಗಿದಿದ್ದು, ತಮ್ಮ ನಿದ್ರಾಭಂಗ ಅನಿವಾರ್ಯವಾಯಿತು. ರಾಜ್ಯದ ಬೊಕ್ಕಸ ಬರಿದಾಗಲಿದೆ. ಸಾಲಕ್ಕೇ ಎಲ್ಲವನ್ನೂ ‌ವ್ಯಯಿಸಿದರೆ, ತಮಗೇ ಕಿತ್ತು ತಿನ್ನುವ ಸ್ಥಿತಿ ಎದುರಾಗಲಿದೆ' 

Sunday, November 17, 2024

ಮುಸುಕು

ಹಾಸಿಗೆ ಮೇಲೆ ಉಸಿರಾಡುತ್ತಲೇ ಹಾಗೆಯೇ ಕಣ್ಣು ನಾಲಿಗೆ ಹೊರ ಬಿಟ್ಟು ಮಲಗಿದ್ದ. ಬದುಕಿದ್ದಾಗಲೇ ಸುಡುವುದು ಅಮಾನವೀಯವೆಂದು ಸುತ್ತ ಕೆಲವರು ಸಾವಿಗಾಗಿ ಎದುರು ನೋಡ್ತಿದ್ದರು. ಸಾಕಷ್ಟು ಜನ, ಮತ್ತೆ ಮೊದಲಿನಂತೆ ಆತ ಎದ್ದು ಕೂರುವನೇ ಎಂದು ನೋಡುತ್ತಿದ್ದರು. ಆದರೆ ಸಾವು ಕೆಳಗೂ ಇಳಿಯದೇ, ಹೊರಗೂ ಹೊರಳದೇ ಗಂಟಲಲ್ಲೇ ಕೂತು ಇವನನ್ನ ಕೇಳಿತು - 'ಈಗ ಹೇಳು. ಹೇಳುವವರೆಗೂ ಈ ಜಾಗ ಬಿಟ್ಟು ಕದಲಲಾಗದು.‌ ನನಗಿದೋ ಆದ ಆಜ್ಞೆ'.

Tuesday, November 5, 2024

ಮೌನದ ಮಾತು - 12

ತುಟಿಯ ಮೇಲೆ ತುಂಟ ಕಿರುನಗೆ 

ಮೈಯೆಲ್ಲಾ ಕೆಂಪ ಕೆಂಪಗೆ 




Friday, November 1, 2024

ವ್ಯವಸ್ಥಿತ ಅವ್ಯವಸ್ಥೆ!

ಒಮ್ಮೊಮ್ಮೆ ರಕ್ತ ಕುದಿಯುತ್ತದೆ - ಇನ್ನೂ ಯುವಕನಾದ್ದರಿಂದ. ಆದರೂ ತನಗ್ಯಾಕೆ ಎನ್ನುವ ಪ್ರಶ್ನೆಯಿಂದ, ಇದು ತನಗೆ ಸಂಬಂಧ ಪಟ್ಟದ್ದಲ್ಲವೆನ್ನುವ ಹಿಂಜರಿಕೆಯಿಂದ, ಮುಂದೇನಾದರೂ ಆಗಿಬಿಟ್ಟರೆ ಎನ್ನುವ ಭಯದಿಂದ ಸುಮ್ಮನಿರಲೇಬೇಕಾದ ಭ್ರಮಾನಿವಾರ್ಯತೆಯ ಸೃಷ್ಟಿಯಾಗಿದೆ.‌ ಸಾರ್ವಜನಿಕ  ಶಿಕ್ಷಣ ವ್ಯವಸ್ಥೆಯಲ್ಲಿ ಮೈಗಳ್ಳರು, ಕಾಕರು, ಗೂಂಡಾಗಳು, ರಿಯಲ್ ಎಸ್ಟೇಟ್ ಬಿಸಿನಸ್ಮೆನ್ ಗಳು, ದಲ್ಲಾಳಿಗಳು, ಚೀಟಿ ವ್ಯಾಪಾರಿಗಳು ಹೀಗೇ ಹಣದ ರಾಶಿಯಲ್ಲೇ‌ ಗೋರಿ ಕಟ್ಟಿಸಿಕೊಳ್ಳಬೇಕೆಂದು ಹಟಕ್ಕೆ ಬಿದ್ದು ಹೋದ ಜನರೇ ತುಂಹೋಗಿರೋದು ಎಂಥಾ ವಿಪರ್ಯಾಸವಲ್ಲವೇ? ಅಸಲಿಗೆ ಉನ್ನತ ಶಿಕ್ಷಣದ ಶಿಕ್ಷಕನಿಗೆ (ಸೋ ಕಾಲ್ಡ್ ಪ್ರೊಫೆಸರ್) ಇರೋ ಸಂಬಳ ಒಬ್ಬ ಐ.ಎ.ಸ್ ಅಧಿಕಾರಿಗೂ ಇರದಿರೋದರಿಂದಲೇ ಈ ಶಿಕ್ಷಕನ ಹುದ್ದೆಗೆ ನೊಣ ಮುತ್ತಿದ ಹಾಗೆ ಜನ ಮುತ್ತಲಿಕ್ಕೆ ಆರಂಭಿಸಿದ್ದು ಕಾಣ್ತದೆ. ಇಂದು ಸಾಕಷ್ಟು ಸರ್ಕಾರೀ ಸಂಬಳ ಪಡೆಯುತಿರೋ ಜನರಿರೋ ಕಾಲೇಜುಗಳಲ್ಲಿನ ವ್ಯವಸ್ಥೆಯನ್ನ ಎಲ್ಲರೂ ಗಮನಿಸದೇ ಏನಿಲ್ಲ.‌ ನಮ್ಮ Appraisal ವ್ಯವಸ್ಥೆಯು ಟೊಳ್ಳು ಮರದ ಹಾಗೇ ಬರೇ ನೋಡಲಿಕ್ಕಷ್ಟೇ ಉಂಟು. ಮುಟ್ಟಿದರೆ ಶಕ್ತಿಯೇ ಇಲ್ಲದೇ ಕುಸಿದು ಮಣ್ಣು ಸೇರಿ ಹೋಗಬೋದು ಅನ್ನೋದಕ್ಕೆ ಯಾರೊಬ್ಬರೂ ಸಹ ಅದನ್ನ ಗಂಭೀರವಾಗಿ ಮುಟ್ಟಿಯೇ ಇಲ್ಲವೆಂದು ಕಾಣ್ತದೆ. 

Monday, October 28, 2024

ತೃಷ್ಣೆ!

'ಮಹಾಂಮತ್ರಿಗಳೆ, ನಮ್ಮೆಲ್ಲಾ ಮಂತ್ರಿ ಮಹಾಶಯರ ಸಭೆಯೊಂದನ್ನೇರ್ಪಡಿಸಬೇಕಲ್ಲ' ಜಕೋಬನ ಕೋರಿಕಾ ರೂಪಕ ಆದೇಶಕ್ಕೆ ಮಹಾಮಂತ್ರಿ ತಲೆದೂಗಿದರು. 

ಮಂತ್ರಿಯ ಕುತೂಹಲವನ್ನರಿತ ಜಕೋಬನೇ ಉಲಿದ 
'ಇತ್ತೀಚೆಗೆ ಜನರ ಕಷ್ಟ ನಿವೇದನೆಗಳು ಹೆಚ್ಚಿವೆ. ಈ ಸಂಬಂಧ ಪರಿಹಾರ ಚಿಂತನೆ ನಡೆಸಬೇಕಿದ್ದು, ಈ ಸಭೆ....'

'ಚಿತ್ತ ಮಹಾಪ್ರಭು..' 

ಮತ್ತೂ ಮಂತ್ರಿಯ ಮುಖಚರ್ಯೆಯಿಂದ ಆತನ ಅಸಂತೃಪ್ತಿಯನ್ನರಿತ ಜಕೋಬ ಮುಂದುವರೆಸಿದ. 

Friday, October 11, 2024

ಕೋಚಪ್ಪನ ದಿನಗಳು

ಮಂತ್ರಿವರ್ಯರೇ, ಕೆಲಸ ಹೇಗೆ ಸಾಗಿದೆ' ವಿರಾಮದ ಸಮಯದಲ್ಲಿ ಜಕೋಬ ಮಹಾರಾಜ ಲೋಕಾಭಿರಾಮವಾಗಿ ಕೇಳಿದ. 

'ಮಹಾಪ್ರಭುಗಳೆ! ತಮ್ಮ ಪ್ರೋತ್ಸಾಹದಿಂದ ನಾವು ಯೋಜಿಸಿದ್ದ ಯೋಜನೆ ಅತ್ಯಂತ ಯಶಸ್ವಿಯಾಗಿ, ಜನರನ್ನ ಕಾರ್ಯನಿರತರನ್ನಾಗಿ ಮಾಡಿವೆ' 

'ಭಲೇ ಭಲೇ'

ತನ್ನ ರಾಜ್ಯದ ಜನ ಎಂದಿಗೂ ಕಾರ್ಯನಿರತವಾಗಿರಬೇಕೆಂದು, ಕೆಲಸ ಇಲ್ಲದೋರಿಗೆಲ್ಲಾ ಜಕೋಬ ಒಂದು ಕೆಲಸವನ್ನ ಸೃಷ್ಟಿಸಿದ್ದ - ತಾವು ಬೇಡಿಕೆ ಇಟ್ಟಷ್ಟೂ ಬೆಳೆಯನ್ನ ಬೆಳೆದು ಕೊಡೋದು. ಜನ ಬೆಳೆ ನೀಡದೇ ಹೋದರೂ, ಬೆಳೆಯನ್ನ ಬೆಳೆಯುವ ಕೆಲಸದಲ್ಲಿ ತೊಡಗಿಸಿಕೊಂಡರೆ ಸಾಕಲ್ಲವೇ! ಅದೇ ಜಕೋಬನ ಧ್ಯೇಯವಾಗಿತ್ತು. ಬೇಳೆ ನೀಡದೆ ಹೋದವರ ಬಗ್ಗೆ ರಾಜರು ತಲೆ ಕೆಡೆಸಿಕೊಳ್ಳದೇ ಹೋದರೆ, ಮತ್ತೆ ಬೆಳೆ ಬೆಳೆದಾರೆ? ಹಾಂ! ಅದ್ಕಾಗಿಯೇ ಚೆನ್ನಾಗಿ ಬೆಳೆ ಬೆಳೆದೋರಿಗೆ ಚೆನ್ನಾಗಿಯೇ ಪ್ರತಿಫಲ ನೀಡೋದು. 

ಅನರ್ಥ

ಗು: ನಮ್ಮ ಜೀವನದ ಪರಮೋಚ್ಛ ಧ್ಯೇಯ ಪಿನಾಕ್ಲಿಯನ್ನ ತಲುಪೋದು. ಅದು ಅಷ್ಟು ಸುಲಭವಾಗಿ ಲಭಿಸೋದಲ್ಲ. ಪಿನಾಕ್ಲಿ ನಮ್ಮ ಪ್ರತಿಯೊಂದು ನಡೆಯನ್ನು ಗಮನಿಸ್ತಾ ಇರ್ತಾನೆ. ನಮ್ಮ ಪಾಪ ಪುಣ್ಯಗಳನ್ನ ಲೆಕ್ಕ ಹಾಕ್ತಾ ಇರ್ತಾನೆ. 

ಶಿ: ಪಿನಾಕ್ಲಿ ಯಾರು? 

ಗು: ಅಧೋನಿರ್ನಾಮಿತ, ಉದ್ರಚ್ಛಕ್ತ, ನಭೋಭುಮ್ಯಾಂತರ, ಮರ್ಕದಗಂತಿಕ, ಪಿಪ್ರಚ್ಛಾಕ್ತ ಶಕ್ತಿ. 

ಶಿ: ಹಾಂ..............  


Wednesday, August 28, 2024

ಕ್ಷೌರ - 3

 ಅಮ್ಮಂದಿರಿಗೆ ಗಂಡು ಮಕ್ಕಳ ಕೂದಲಿನ ಮೇಲೆ‌ ಒಂದು ವಿಶೇಷ ಕಾಳಜಿ. ಅಂದರೆ ಕೂದಲ ಆರೈಕೆಯಲ್ಲಲ್ಲ. ಅದರ ಉದ್ದದಲ್ಲಿ. ಕಣ್ಣಲ್ಲೇ ಅವರಿಗೆ ಒಂದು ಅಳತೆಯ ಮಾಪನವಿರ್ತದೆ. ಮಕ್ಕಳ ಕೂದಲನ್ನ  ಅದು ಅತ್ಯಂತ ಜಾಗರೂಕತೆಯಲ್ಲಿ ಆಗಾಗ್ಗೆ ಅಳೆಯುತ್ತಾ ಇರ್ತದೆ‌. ಒಂದೊಮ್ಮೆ ಅದು ನಿಗದಿಸಿಕೊಂಡ ಮಿತಿಯನ್ನ ದಾಟಿತೆಂದುಕೊಳ್ಳಿ, ಒಂದೇ ಸಮನೆ ಕೂಗಲಾರಂಭಿಸ್ತದೆ‌. ಮಗು ಚಿಕ್ಕದಿದ್ದರೆ ಇದು ಅಪ್ಪಂದಿರಿಗೆ ಅಲಾರಂ ಇದ್ದಂತೆ. ಅದು ಬೆಳೆದಂತೆ, ಮಗುವಿಗೇ ಅದು ಎಚ್ಚರಿಕೆ. ನನ್ನ ಅನುಭವವಂತೂ ವಿಚಿತ್ರ‌. ಲೋವರ್ ಮಿಡಲ್ ಕ್ಲಾಸ್ ಮಗುವಾಗಿದ್ದ ನನಗೆ, ಕಟಿಂಗ್ ಗೆ ನಿಗದಿ ಪಡಿಸುವ ದುಡ್ಡಿಗೆ ಒಂದು ನ್ಯಾಯ ಸಿಗಲೇ ಬೇಕು. ಅಂದರೆ ಕಾಸು ಕೊಟ್ಟಷ್ಟು ಕೂದಲೂ! ಹಾಗಾಗಿ ನಮ್ಮದೆಲ್ಲಾ ಎಂದಿಗೂ ಸಮ್ಮರ್ ಕಟ್ಟೇ. 'ಬಿಸಿಲಾದರೇನು, ಮಳೆಯಾದರೇನು, ಕೊಡು ನಿನ್ನ ಅಷ್ಟೂ ಕೂದಲನ್ನು' ಅನ್ನೋದು ನನ್ನ ಅಮ್ಮನ ಧ್ಯೇಯವಾಕ್ಯ. ನೋಡಿ ನಮ್ಮ ಆರ್ಥಿಕತೆಗೂ ಸಮ್ಮರ್ ಕಟ್ಟಿಗೂ ನಂಟುಂಟು. ಕಟಿಂಗ್ ಆಗಾಗ್ಗೆ ಮಾಡಿಸುವ ಪ್ರಮೇಯವಿರೋದಿಲ್ಲಾಂತ. ಈ ಮನಃಸ್ಥಿತಿ ಎಷ್ಟು ಆಳದಲ್ಲಿಳಿದು ಬೇರೂರಿಬಿಡ್ತದೆ ಎಂದರೆ, ಇವತ್ತಿಗೂ, ತಿಂಗಳಿಗೊಮ್ಮೆ ಕಟಿಂಗ್ ಮಾಡಿಸಲು ಶಕ್ಯವಿರುವ ಮಟ್ಟದಲ್ಲೂ, ನನ್ನಮ್ಮ ನನ್ನ ಕಟಿಂಗನ್ನು ನಿರ್ದೇಶಿಸುವ ಮನಃಸ್ಥಿತಿಯನ್ನ ಬಿಟ್ಟಿಲ್ಲ. ನಾನು ಕಟಿಂಗ್ ಮುಗಿಸಿ ಮನೆಗೆ ಬಂದ ಕೂಡಲೇ ನನ್ನ ಕಟಿಂಗನ್ನು ನೋಡಿ 'ಎಂಥಾ ಕಾಲ ಬಂದು ಬಿಡ್ತು' ಅನ್ನುವ ರೀತಿಯಲ್ಲಿ ನನ್ನಮ್ಮ ಅದನ್ನ ಒಪ್ಪುವುದೇ  ಇಲ್ಲ. ಒಮ್ಮೆ ನನ್ನ ಸ್ನೇಹಿತರೊಬ್ಬರು ಇದೇ ರೀತಿಯ ಕಥೆಯನ್ನು ಹೇಳಿಕೊಳ್ತಾ ಇದ್ದರು‌. ತನ್ನಮ್ಮನಿಗೆ ಸಮ್ಮರ್ ಕಟ್ ಹೊಡೆಸಿದ ತಮ್ಮ ಮಗನಿಗಿಂತ ಸುಂದರ ತರುಣ ಪ್ರಪಂಚದಲ್ಲೇ ಇಲ್ಲೆಂದು. 

Saturday, August 24, 2024

ಭಾವ ತರಂಗ

ಅವತ್ತು ಬೆಳಿಗ್ಗೆ ಇನ್ನೂ ಗಿಡದಲ್ಲೇ ಕೊಯ್ಯದೆ ಉಳಿದಿದ್ದ ದಾಸವಾಳದ ಹೂಗಳನ್ನ ನೋಡಿಯೇ ಐಯ್ಯಂಗಾರ್ರು ಮನೇಲಿ ಇಲ್ಲ ಎಂದು ತಿಳಿಯಿತು. ಪ್ರತೀ ದಿನ ಬೆಳಿಗ್ಗೆ ಏಳರ ಒಳಗೆ ಕಾಂಪೌಂಡಿನ ಒಳಗೆ ಬೆಳೆದು ಕೊಂಡಿದ್ದ ಹೂಗಿಡಗಳೆಲ್ಲದರ ಹೂಗಳು ಖಾಲಿಯಾಗಿರುತ್ತಿದ್ದವು. ಐಯ್ಯಂಗಾರ್ರಾದರೂ ಕಟ್ಟಾ ಆಚರಣೆ ಇರಲಿಲ್ಲ. 'ತಿರು' ಆರಾಧನೆಯನ್ನ ಮೈಗೂಡಿಸಿಕೊಳ್ಳಲಿಲ್ಲ. ಆದರೆ ದಿನಕ್ಕೆ ಒಮ್ಮೆಯಾದರೂ ಸಂಧ್ಯಾವಂದನೆ, ಹೆಚ್ಚಾಗಿ ಬೆಳಗ್ಗಿನ ಹೊತ್ತೆ, ಮಾಡಿ, ದೇವರಿಗೆ ಹೂಗಳೆಲ್ಲವನ್ನೂ ಅರ್ಪಿಸಿ ಗಂಧ, ಆರತಿ ಎಲ್ಲವನ್ನೂ ತೋರಿ ಹಾಲನ್ನ ನೈವೇದ್ಯ ಮಾಡೋದು ಐಯ್ಯಂಗಾರರ ನಿತ್ಯಕರ್ಮವಾಗಿತ್ತು. ದೊಡ್ದ ಕೆಂಪು ನಾಮವನ್ನಂತೂ ಇಡುತ್ತಿದ್ದರು. ಇದು ಪದ್ಮಮ್ಮ ಹೋದ ಮೇಲೂ ನಡೆದಿತ್ತು. ಅದಕ್ಕೂ ಮುನ್ನ ದಿನಕ್ಕೆರಡು ಬಾರಿ ಸಂಧ್ಯಾವಂದನೆ ಮಾಡ್ತಿದ್ದರಂತೆ. ಐಯ್ಯಂಗಾರರು ಆಚರಣೆಯನ್ನೆಲ್ಲಾ ಕಲೀಲಿಲ್ಲವೆಂದಲ್ಲ. ಮೈಗೂಡಿಸಿಕೊಳ್ಳಲಿಲ್ಲವಷ್ಟೆ. ಒಂದು ರೀತಿ ಉದಾಸೀನ. ಇದಕ್ಕೆ ಅವರ ಟ್ರಾನ್ಸ್ ಫರಬಲ್ ಜಾಬ್ ಕೂಡ ಕಾರಣ ಇದ್ದಿರಬೋದು. ಐಯ್ಯಂಗಾರರಲ್ಲಿ ಸಾಮಾನ್ಯ ನಿಂತು ಪೂಜೆ ಮಾಡೋದು. ಹಾಗಾಗಿ ದೇವರ ಮನೆಯಲ್ಲಿ ಕೆಳಗೆ ನೆಲಕ್ಕೆ ಕಟ್ಟೆಯ ಬದಲಾಗಿ ಸ್ವಲ್ಪ ಎತ್ತರದಲ್ಲಿ ಕಟ್ಟೆ ಇರುತ್ತದೆ. ಅದರ ಮೇಲೆ‌‌ ಒಂದು ಮರದ ಬಾಕ್ಸ್ (ಕೋವಿಲ್‌ ಆಳ್ವಾರ್ ಎಂದು ಪ್ರತೀತಿ). ಅದರ ಒಳಗೆ ಇವರ ದೇವರುಗಳು. ಈ ವ್ಯವಸ್ಥೆ ಹೋದ ಕಡೆಯೆಲ್ಲಾ ಸಿಗಲಾರದು. ಬ್ಯಾಂಕಿನವರು ಅಬ್ಬಬ್ಬ ಎಂದರೆ ನಾಲ್ಕು ವರ್ಷಕ್ಕಿಂತ ಹೆಚ್ಚಾಗಿ ಒಂದೆಡೆ ಉಳಿಸಲಾರರು. ಹೀಗಾಗಿ, ಮನುಷ್ಯ ಜೀವನದ ವಿಕಾಸದಲ್ಲಿ ಈ ರೀತಿಯ ಕೆಲವು ಉದಾಸೀನಗಳು ಅನಿವಾರ್ಯವೆಂಬಂತೆ ಇವರಲ್ಲೂ ತಲೆದೂರಿತು. 

Sunday, May 12, 2024

ಪಿ.ಆರ್. ಒ. ಡೈರಿ

ಬಿಸಿಲಿನ ಝಳಪಿಗೆ ಶಾಮಿಯಾನದ ಕೆಳಗೆ ಕೂತಿದ್ದವರೆಲ್ಲಾ ಬೆವೆತು ಹಾಗೆಯೇ ಬಿಟ್ಟಿದ್ದಲ್ಲಿ ಬೆವರಲ್ಲೇ ಬೆಂದು ಹೋಗುತ್ತಿದ್ದರೆಂದರೆ ಅಷ್ಟು ಬಿಸಿಲು ನಿಜವಾಗಿಯೂ ಇತ್ತು. ಬೆಳಕಿನ ಹರಿವಿಗೆ ಕಣ್ಣುಗಳ ಪ್ಯೂಪಿಲ್ ಚಿಕ್ಕದಾಗಿ ಏಕಾಏಕಿ ಕಡಿಮೆ ಬೆಳಕಿದ್ದ ಒಳಜಾಗಗಳಿಗೆ ಹೋದಾಗ ಕಣ್ಣು ಮಬ್ಬಾಗಿ ಒಂದೆರೆಡು ನಿಮಿಷ ಸುತ್ತೆಲ್ಲಾ ಕತ್ತಲು ಆವರಿಸುತ್ತಿದ್ದುದಂತೂ ಹೌದು. ಬೆಳಗ್ಗೆ ಮನೆ ಬಿಟ್ಟಾಗ ನೀರು ಕುಡಿದದ್ದು. ನೀರಿನ ಬಾಟೆಲ್ಲನ್ನು ಮನೆಯಲ್ಲಿ ಮರೆತು ಬಂದದ್ದಕ್ಕೆ ಶಪಿಸಿಕೊಳ್ಳುತ್ತಾ, ಹತ್ತಿಪ್ಪತ್ತು ನಿಮಿಷಗಳಿಗೆ ಎದ್ದು ಹೋಗಿ ನೀರು ಕುಡಯುತ್ತಿದ್ದ ಸದಾನಂದನಿಗೆ ಮತ್ತೊಮ್ಮೆ ಹುಬ್ಬು ಮೇಲೆರಿಸಿ 'ಪ್ಟ್ಚ್..' ಎಂದು ತನ್ನಲ್ಲೇ ಲೊಚಗುಟ್ಟುವಂತಾಯ್ತು. 

Monday, April 29, 2024

ರುಕ್ಕು

 ಕಳೆದ ವರ್ಷದ ದಸರ ಅಕ್ಕ ರುಕ್ಮಿಣಿ ಇಲ್ಲದೆಯೇ ನಡೆದಿತ್ತು. ಶ್ರೀನಿಗೆ ಮರೆತು ಹೋಗಿತ್ತು, ಕಳೆದ ದಸರೆಗೆ ರುಕ್ಮಿಣಿ ಏಕಿರಲಿಲ್ಲವೆಂದು. ಅದನ್ನು ಯೋಚಿಸಲೂ ಆತ ಶ್ರಮವಹಿಸಲಿಲ್ಲ. ಎಲ್ಲೋ ಅಮ್ಮ - ಮಗಳ ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಇದ್ದರಿಬೋದು ಎಂದು ಅತೀ ಸುಲಭವಾದ ಕಾರಣವೊಂದನ್ನ ಮನೆಯಲ್ಲಿ ಎಲ್ಲರೂ ಊಹಿಸುವ ರೀತಿಯಲ್ಲೇ ಅವರಿಬ್ಬರೂ ಇದ್ದದ್ದು. ಆದರೆ ಈ ಬಾರಿ ಮಗಳೇ ದಸರೆಗೆ ಮೈಸೂರಿಗೆ ಬರ್ತೇನೆ ಅಂತ ಅಮ್ಮನ ಬಳಿ ಖುಷಿಯಿಂದ ಹೇಳಿದ್ದೂ ಮನೆಯವರಿಗೆ ಹೊಸತೇನಾಗಿರಲಿಲ್ಲ. ಅವರಿಬ್ಬರ ಸಂಬಂಧ ಹಾಗೆಯೇ - ಯಾವಾಗ ಕೆಡ್ತದೆ, ಯಾವಾಗ ರಿಪೇರಿಯಾಗ್ತದೆಯಂತ ಊಹಿಸಲಸಾಧ್ಯ. ಆದರೆ ಕೆಟ್ಟಿದ್ದು ಎಂದಾದರೂ ರಿಪೇರಿಯಾಗ್ತದೆ ಅನ್ನೋದಂತೂ ನಿಜ. 

Sunday, April 21, 2024

ದ್ವಾರಬಂಧ

 

ಸುಮಾರು ಹತ್ತು ವರ್ಷಗಳ ಕೆಳಗೆ ಯೂನಿವರ್ಸಿಟಿಗೆ ಈಗಿನ ರೀತಿಯ ದ್ವಾರಬಂಧಗಳಾಗಲೀ, ಭದ್ರತೆಯಾಗಲೀ ಇರಲಿಲ್ಲ. ಯೂನಿವರ್ಸಿಟಿಯ ಒಳಗಿನ ಡಬಲ್ ರೋಡಿನಲ್ಲಿ - ಆಗಿನ್ನೂ ಈಗಿನ ರೀತಿ ಮಧ್ಯ ಒಂದು ಡಿವೈಡರ್ ಸಹ ಇರಲಿಲ್ಲ- ಬಸ್ಸುಗಳೇ ಓಡಿಯಾಡ್ತಿದ್ವು. ಹಾಗಾಗಿ ಈಗಲೂ ಯೂನಿವರ್ಸಿಟಿಯ ಒಳಗೆ ಕೆಲವು ಕಡೆ ಬಸ್ ಸ್ಟಾಪುಗಳನ್ನ ಕಾಣಬೋದು. ರಾತ್ರಿ ಯಾವ ಸಮಯದಲ್ಲಿ ಬೇಕಾದರೂ ಯೂನಿವರ್ಟಿಯ ಒಳಗೆ ಬರಲಿಕ್ಕೆ ಅಥವಾ ಹೊರಗೆ ಹೋಗಲಿಕ್ಕೆ ಹತ್ತಾರು ದಾರಿಗಳಿದ್ವು. ಆ ದಾರಿಗಳ ಇಕ್ಕೆಲಗಳಲೆಲ್ಲಾ ಮರ ಗಿಡ ಗೆಂಟೆಗಳೇ. ಸದಾನಂದ ಎರಡನೇ ವರ್ಷದ ಎಂ.ಎಸ್ಸಿಗೆ ಬರುವ ವೇಳೆಗೆ ದ್ವಾರಬಂಧಗಳ ನಿರ್ಮಾಣ ಆರಂಭವಾಗಿ, ಎಂ.ಎಸ್ಸಿ ಮುಗಿಯುವ ವೇಳೆಗೆ ಸಂಪೂರ್ಣಗೊಂಡಿತು. ಬಸ್ಸುಗಳೂ, ಯೂನಿವರ್ಸಿಟಿಗೆ ಸಂಬಂಧ ಪಡದ ವಾಹನಗಳೂ ಎಲ್ಲದರ ಎಂಟ್ರಿ ಬಂದಾಯಿತು.  ಯಾರೆಂದರಾಗಲೀ ಸಂಜೆ ಕತ್ತಲಿನ ಮೇಲೆ ಒಳಗೆ ನುಗ್ಗಲು ಸಾಧ್ಯವೇ ಇಲ್ಲ. ಗೇಟಿನಲ್ಲಿ ವಾಚ್ ಮೆನ್ ಗಳಿಗೆ ಕಾರಣ ನೀಡಬೇಕು. ಹಾಸ್ಟಲ್ ಹುಡುಗಿಯರಂತೂ ಸಂಜೆ ಏಳರ ಮೇಲೆ ಹಾಸ್ಟಲಿನಿಂದಲೇ ಹೊರಗೆ ಅನುಮತಿಯಿಲ್ಲದೇ ಕಾಲಿಡಲಾಗುತ್ತಿರಲಿಲ್ಲವಾದ್ದರಿಂದ, ಸಂಜೆ ಏಳು‌‌ಗಂಟೆಯ ಮೇಲೆ ಹುಡುಗಿಯರು ಯೂನಿವರ್ಸಿಟಿಯ ಒಳಗೆ ಹೋಗೋದು ಅಪರೂಪವೇ.

Saturday, March 9, 2024

ಮೌನದ ಮಾತು - 11

ತಪಸಾ ಬ್ರಹ್ಮ ವಿಜಿಜ್ಞಾಸಸ್ವ...

 ಸ ತಪೋ ತಪ್ಯತಾ! ಸ ತಪಸ್ತಪ್ವಾ 

ಆನಂದಂ ಬ್ರಹ್ಮೇತಿ ವ್ಯಜಾನಾತ್..





Sunday, January 14, 2024

ಮೌನದ ಮಾತು - 10

 

ವಿಧಿ

ಇನ್ನೇನು ಕಡಿಸಿಕೊಂಡು ನೆಲವನಪ್ಪೇ ಬಿಡುವೆನೆನುವ ಆಸೆಯಲ್ಲಿ  

ಇಲ್ಲೇ ಹೀಗೆ ಎಂದಿಗೂ ಯಾರದೋ ಸೆರೆಯಲ್ಲಿ... 





Thursday, January 11, 2024

ಪರಿ'ಭ್ರಮ'ಣೆ

ಖಾಲೀ ಇದ್ದ ರಸ್ತೆಯಲ್ಲಿ ಕಾರಿನ ವೇಗ ತಗ್ಗಿಸಿ ನಿಧಾನಕ್ಕೆ ಹೋಗುತ್ತಿದ್ದಾಗಲೇ ರಮೆಗೆ ಅನುಮಾನ ಬಂದಿತು - ಕಿಟ್ಟಿ ಏನೋ ಗಹನವಾದ ಆಲೋಚನೆಯಲ್ಲಿದ್ದಾನೆಂದು. ಚಳಿಗಾಲದ ಮುಂಜಾವು. ಕಿಟಕಿಗಳೆಲ್ಲಾ ಏರಿಸಿದ್ದವು.  ಕಾರು ರಮೆಯ ತವರಿನ ಕಡೆ ಹೊರಟಿತ್ತು. ರೋಡು ಎಷ್ಟೇ ಹಾಳಾಗಿದ್ದರೂ, ಮೈಸೂರಿನಿಂದ ಶಿವಮೊಗ್ಗಕ್ಕೆ ಕೆ.ಆರ್. ಪೇಟೆ ಮುಖಾಂತರವೇ ಕಿಟ್ಟಿ ಹೋಗ್ತಿದ್ದದ್ದು. ಕೆ.ಆರ್.ಪೇಟೆ ದಾಟುವವರೆಗೂ, ರೋಡುಗಳ ಸ್ಥಿತಿಗೆ ಈತ ಬೈದುಕೊಳ್ಳೋದೂ ಸಹ ಪ್ರತೀ ಪ್ರಯಾಣದ ಅಂಗವಾಗಿಹೋಗಿತ್ತು. ಬಹಳ ಸಾರಿ ತಮಾಷೆಯೂ ಮಾಡ್ತಿದ್ದ, ನಾನು ಕಣ್ಣು ಮುಚ್ಚಿ ಓಡಿಸಿದ್ರೂ ಹೇಳಬಲ್ಲೇ ಕೆ. ಆರ್. ಪೇಟೆ ಮುಗಿಸಿ ಹಾಸನ ಜಿಲ್ಲೆಯ ರೋಡಿಗೆ ಗಾಡಿ ಇಳಿದದ್ದನ್ನ ಎಂದು‌. ಆದರೆ ಇತ್ತೀಚೆಗೆ ಎಲೆಕ್ಷನಿನ ಆಸುಪಾಸು ರೋಡಿನ ಹಳ್ಳಗಳಿಗೆಲ್ಲಾ ಅಲ್ಲಲ್ಲಿ ತೇಪೆ ಹಚ್ಚಿ ಪ್ರಯಾಣ ಅಷ್ಟೇನು ಪ್ರಯಾಸಕರವಾಗದಿರುವಂತೆ ರೋಡನ್ನ ಸಿದ್ಧಗೊಳಿಸಿದ್ದರು‌.

Sunday, January 7, 2024

ಮೌನದ ಮಾತು - 9

 ಬ್ರೇಕ್ 

ಒಣಗಿದಾ ನಾಲಗೆಗೆ ಎರಡ್ಹನಿ  ಸೋಕಿದಂತೆ

ಮುಳುಗುತಿಹ ಇರುವೆಗೊಂದು ಹುಲುಕಡ್ಡಿ ಆಸರಿಸಿದಂತೆ 

ಜಾತ್ರೆಯಲ್ ತಪ್ಪಿದ ಕೂಸಿಗದರಮ್ಮನ  ದನಿ ಕೇಳಿಸಿದಂತೆ  

ಎಡೆಬಿಡದೆ ಸುರುಯುತಿರೋ ಮಳೆಯ ನಡುವೊಮ್ಮೆ ರವಿಯು ಇಣುಕಿದಂತೆ

ಜೀವನದ ವಿರಾಮವೂ...