Thursday, July 23, 2020

ಧ್ಯೇಯ?


ಬೆಳೆದ ಹಾಗೆ ಆದ್ಯತೆಗಳು ಬದಲಾಗ್ತಾ ಹೋಗುತ್ತವೇನೋ. ಕಥೆ ಹೇಳೋದ್ರಲ್ಲಿ ಇರುವಷ್ಟು ಉತ್ಸುಕತೆ, ಕೇಳೋದ್ರಲ್ಲಿ ಇರೋದಿಲ್ಲ. ವಿರಳ. ಹೀಗೆ ಕಥೆ ಹೇಳಿ ಕೇಳ್ತೇನೆ ಅಂತ ಸಲೀಸಾಗಿ ಕೇಳಿಸಿಕೊಳ್ಳೋ ವ್ಯಕ್ತಿ ಸಿಕ್ಕಾಗ ಅಚ್ಚರಿ ವ್ಯಕ್ತ ಪಡಿಸೋರೂ ಸಹ ಕಡಿಮೆಯೇ. ಕಥೆ ಹೇಳಿ ಎಂದ ಕೂಡಲೆ, ಅಪ್ರಜ್ಞಾಪೂರ್ವಕವಾಗಿ ಮನುಷ್ಯ ತನ್ನನ್ನೆ ಕೇಂದ್ರೀಕರಿಸಿ ಅದರ ಸುತ್ತ ಸಿಕ್ಕ ಹಾಗೆಲ್ಲಾ ಹೆಣೆಯುತ್ತಾ ಹೋಗೋದು ಆತನ ಆಸಕ್ತಿ, ಅಭ್ಯಾಸ.

ನಾಲ್ವರು ಹೊಸದಾಗಿ ಒಟ್ಟಿಗೆ ಕೆಲಸಕ್ಕೆ ಸೇರಿದ ವ್ಯಕ್ತಿಗಳು, ಒಂದು ರಾತ್ರಿ ಯಾವುದೋ ಅಜ್ಞಾತ ಸ್ಥಳದಲ್ಲಿ ಕೂತು ಹರಟಲು ನಿರ್ಧರಿಸಿದರು. ಅದರಲ್ಲೊಬ್ಬ ಕಪ್ಪು, ಕುರುಚಲು ಗಡ್ಡದ, ಮಿತಭಾಷಿ ಒಂದು ಬಂಡೆ ಕಲ್ಲಿನ ಮೇಲೆ ಕಾಲ ಮೇಲೆ ಕಾಲು ಹಾಕಿ ಮಲಗಿ ಮಿಕ್ಕ ಮೂವರಿಗೂ ಕೇಳಿದ - ‘ನಿಮ್ಮದೆಲ್ಲಾ ಕಥೆ ಹೇಳಿ ಕೇಳ್ತೇನೆ’.

ಒಡನೆಯೇ ಒಬ್ಬ ಶುರು ಮಾಡಿದ – ಒಂದ್ಹತ್ತು ನಿಮಿಷ. ತನ್ನ ಬಾಲ್ಯ, ಊರು, ಕಷ್ಟ ಕಾರ್ಪಣ್ಯಗಳು, ಪ್ರೀತಿ ಇತ್ಯಾದಿಗಳನ್ನೆಲ್ಲಾ ಒಂದೇ ಉಸಿರಲ್ಲಿ ಹೇಳಿ ಮುಗಿಸಿದ. ಎರಡನೆಯವನ ತಲೆಯಲ್ಲಿ ಮೊದಲನೆಯವನ ಕಥೆ ದಾಖಲಾಗುವುದಕ್ಕಿಂತ ಹೆಚ್ಚಿನದಾಗಿ ಬೇರೇನೋ ಲೆಕ್ಕಾಚಾರ ನಡೆಯುತ್ತಿತ್ತು. ತನ್ನ ಕಥೆಯನ್ನ ಹೇಗೆ ಹೆಣೆಯೋದು, ಯಾವುದನ್ನ ಹೇಳೋದು ಎಂದು. ಈತ ಒಡನೆಯೇ ಶುರು ಮಾಡಿದ - ಭಾಗಶಃ ಅದೇ ರೀತಿಯಲ್ಲಿ ಒಂದೆರೆಡು ಅಂಶಗಳನ್ನ ಹೆಚ್ಚಿನದಾಗಿ ಹೇಳಿ ವೈಭವೀಕರಿಸಿ ಮೊದಲಿನವನಗಿಂತ ರುಚಿಕರವಾದ ಕಥೆಯನ್ನ ಹೆಣೆದೆ ಎನ್ನುವ ತೃಪ್ತಿಯೊಂದಿಗೆ ಒಂದು ಇಪ್ಪತ್ತು ನಿಮಿಷ. ಈ ಇಬ್ಬರ ಕಥೆಯನ್ನ ಮೀಸೆ ತಡವಿಕೊಳ್ಳುತ್ತಾ ಕೇಳುತ್ತಾ, ನಡು ನಡುವೆ ಕಣ್ಮುಚ್ಚಿ ನಕ್ಕು, ಪ್ರತಿಕ್ರಿಯಿಸುತ್ತಾ ಕುಳಿತಿದ್ದ ಉದ್ದ ಕೂದಲಿನ, ದಪ್ಪ ಮೀಸೆಯ ಮೂರನೆಯವ ನಿಟ್ಟುಸಿರೊಂದನ್ನು ಬಿಟ್ಟು, - ‘ಹ್ಹಾ, ಹ್ಹಾ! ಬಹಳ ವಿಚಿತ್ರವಾಗಿದ್ದೀರಿ ನೀವು. ಕಥೆ ಕೇಳಿ ಹೇಳಿಸಿಕೊಳ್ತಿದ್ದೀರಲ್ಲ!’ ಎಂದು ಅಚ್ಚರಿ ವ್ಯಕ್ತಿ ಪಡಿಸಿದ. ಬಂಡೆಯ ಮೇಲೆ ಮಲಗಿದ್ದ ವ್ಯಕ್ತಿ ಈತನೆಡೆಗೆ ತಿರುಗಿ ನಸುನಗು ಬಿರಿ ಮತ್ತೆ ಆಕಾಶ ನೋಡತೊಡಗಿದ.

‘ನನ್ನ ಈ ಕಥೆ ನಿಮಗೆ ಅಷ್ಟಾಗಿ ರುಚಿಸದು’, ಮೂರನೆಯವ ಆರಂಭಿಸಿದ. ‘ನಾನು ಬಯಸಿದ್ಯಾವುದೂ ಭಾಗಶಃ ನನಗೆ ದಕ್ಕಲಿಲ್ಲ. ಹೀಗೇ ಎಲ್ಲರೂ ಹೇಳ್ತಾರೆ, ನಾನೂ ಒಬ್ಬ. ಆದರೆ ನನಗೆ ದಕ್ಕಿದ್ದೆಲ್ಲಾ ಒಳ್ಳೇದೇ ಆಗಿದ್ದವು. ಆದರೂ ಮನಸ್ಸನ್ನೇನೋ ಕೊರೆಯುತ್ತಿತ್ತು. ಈ ಕೊರೆತಗಳೆಲ್ಲದರÀ ವಾಕ್ಯಗಳೂ ಮೇಲ್ನೋಟಕ್ಕೆ ಅರ್ಥಹೀನ ಪ್ರಶ್ನೆಗಳು, ಗೊಂದಲಗಳು. ಎಲ್ಲಕ್ಕೂ ಸುಲಭವಾದ ಉತ್ತರಗಳು ಉಂಟು, ಕೇಳುಗರಲ್ಲಿ. ಆದರೆ ಅವು ಒಳಗೆ ಅಚ್ಚೊತ್ತಿ ಕುಳಿತಾಗಲೇ ಅವುಗಳ ತೀವ್ರತೆ ಅನುಭವಕ್ಕೆ ಬರುವುದು. ಈ ಜೀವನ ಏತಕ್ಕೆ? ನಾನಿಲ್ಲಿರುವುದಾದರೂ ಏತಕ್ಕೆ? ನನ್ನಿಂದಾದರೂ ಏನಾಗಬೇಕಿದೆ? ನಾನು ಏನು ಮಾಡಿದರೇನು? ನಾನ್ಯಾರು? ಹಲವರು ಹೇಳಿದರು ಈ ಪ್ರಶ್ನೆಗಳೆಲ್ಲಾ ನನ್ನಂಥಹ ಹರೆಯದ ವಯಸ್ಸಲ್ಲಿ ಸರ್ವೇ ಸಾಮಾನ್ಯವೆಂದು. ಸುಮ್ಮನೆ ಕುಳಿತುಕೊಳ್ಳದೇ ಏನಾದರೊಂದು ನನಗೆ ಆಸಕ್ತಿಯೆನಿಸಿದ ಕೆಲಸ ಮಾಡೆಂದು. ಇನ್ಕೆಲವರು ಆ ಪ್ರಶ್ನೆಗಳಿಗೆ ಉತ್ತರಗಳನ್ನೂ ಸೂಚಿಸಿದರೂ - ನಾನೊಬ್ಬ ಪರಮಾತ್ಮನ ಅಂಶವೆAದೂ, ಈ ಜೀವನ ಜನುಮಗಳ ಮೋಕ್ಷಕ್ಕಾಗಿಯೇ ಇದ್ದು, ಭಗವಂತನ ಧ್ಯಾನವೇ ಜೀವನದ ಕರ್ಮವೆಂದು. ಮತ್ಹಲವರು ಸೂಚಿಸಿದರು - ನೀನೀಗ ಸರಿಯಾದ ದಾರಿಯಲ್ಲಿದ್ದೀ. ಇದಕ್ಕಾಗಿ ಸಾಕಷ್ಟು ಅಧ್ಯಯಯನದ ಅವಶ್ಯಕತೆಯಿದೆಯೆಂದು ಒಂದಿಷ್ಟು ಪುಸ್ತಕಗಳನ್ನೂ, ವೇದೋಪನಿಷತ್ತುಗಳನ್ನೂ ಸೂಚಿಸಿದರು. ಆದರೆ ಇವ್ಯಾವುವೂ ನನ್ನ ಮನಸ್ಸಿಗೆ ಇಳಿಯಲಿಲ್ಲ, ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರು ಹೇಳಿದೇನನ್ನೂ ಮಾಡಲಿಲ್ಲ, ಮಾಡಬೇಕೆಂದೆನಿಸಲೂ ಇಲ್ಲ. ಏಕೆಂದರೆ ವಾಸ್ತವವಾಗಿ ನನಗೆ ಅವುಗಳಿಗೆ ಉತ್ತರವೂ ಬೇಕಿರಲಿಲ್ಲ. ನನಗೆ ಬೇಕಿದ್ದದ್ದು ಈ ಪ್ರಶ್ನೆಗಳಿಂದ ಮುಕ್ತಿ. ಸಮರ್ಪಕ ಉತ್ತರವನ್ನ ಕಂಡುಕೊಳ್ಳೋದು, ಆ ಪ್ರಶ್ನೆಯಿಂದ ಮುಕ್ತಿ ಪಡೆಯುವ ಒಂದು ವಿಧಾನ. ಉತ್ತರ ಸಿಗದೆಯೇ ಇದ್ದಾಗ, ಪ್ರಶ್ನೆಯನ್ನೇ ತೊಲಗಿಸಿಬಿಡೋದು ಇನ್ನೊಂದು ವಿಧಾನ. ಆದರೆ ಈ ಪ್ರಶ್ನೆಯನ್ನ ತೊಲಗಿಸೋದು ನನಗೆ ಒಂದು ಹೇಡಿತನದ ಕೆಲಸದಂತೆ ಮೊದಮೊದಲು ಕಂಡು, ಅವುಗಳಿಗೆ ಮನಸ್ಸು ಉತ್ತರವನ್ನ ಹಾತೊರೆಯುತ್ತಿತ್ತು. ಅವುಗಳನ್ನು ಉತ್ತರವೆಂದು ಹೇಳಲಾಗದು – ಅರಿವು ಎನ್ನಬಹುದು!

ನನಗಾಗ ೨೩ ವರ್ಷ. ಆಕೆಯನ್ನ ಮೊದಲಿಗೆ ಕಂಡಾಗ ಅಂಥದ್ದೇನೂ ಭಾವನೆಯಿರಲಿಲ್ಲ. ಬರುಬರುತ್ತಾ ನೋಟ ಮಾತಿಗೆ ತಿರುಗಿತು, ಮಾತು ಸ್ನೇಹಕ್ಕೆ. ಸ್ನೇಹವನ್ನ ನಾನು ‘ಪ್ರೀತಿ’ ಎಂದು ಭಾವಿಸಿದೆ. ಪ್ರತೀ ಕ್ಷಣವೂ ಆಕೆಯ ಸಂದೇಶಕ್ಕಾಗಿ ಕಾಯುವುದಕ್ಕಾಗಿಯೇ ಈ ಜೀವನವಿರುವುದೆನ್ನುವ ರೀತಿ ಮೊಬೈಲ್ ಹಿಡಿದು ಕುಳ್ಳಿರುತ್ತಿದ್ದೆ. ಒಮ್ಮೊಮ್ಮೆ ಒಂದು ಗಂಟೆ, ಒಮ್ಮೊಮ್ಮೆ ಎರಡು ಗಂಟೆ - ಬೇರೇನೂ ಮಾಡದೆ ಮೊಬೇಲ್ ನೋಡುತ್ತಲೇ. ಆಕೆ ಬರುತ್ತಿದ್ದಳು, ಸಂದೇಶ ಕಳಿಸುತ್ತಿದ್ದಳು. ಕೇವಲ ಒಂದು ಕ್ಷಣವಷ್ಟೇ. ಈ ಒಂದು ಕ್ಷಣವೇ ಜೀವವನ್ನ ಇನ್ನೊಂದು ದಿನ ಮುಂದೂಡಲು ಇಂಧನದAತಿತ್ತು. ಭಾಗಶಃ ರೋಗಿಯಾಗಿ ಹೋಗಿದ್ದೆ. ಈ ಸಂದರ್ಭದಲ್ಲಿ ನನಗೆ ಆಗಲೇ ಹೇಳಿದಂಥ ಯಾವ ಪ್ರಶ್ನೆಯೂ ಉದ್ಭವಿಸುತ್ತಿರಲಿಲ್ಲ. ಪ್ರಾಯಶಃ ಈ ಜೀವನ ಇವಳಿಗಾಗಿಯೇ ಎನ್ನುವ ಅರೆ-ಬರೆ, ಮೇಲ್ ಪದರದ ಉತ್ತರಗಳನ್ನ ಮನಸ್ಸು ಅಪ್ರಜ್ಞಾಪೂರ್ವಕವಾಗಿಯೇ ಒಪ್ಪಿಕೊಂಡುಬಿಟ್ಟಿತ್ತೇನೋ. ಆಗೆಲ್ಲಾ ಕೇವಲ ಹೊಸ ಪ್ರಶ್ನೆಗಳಷ್ಟೇ – ‘ಈಕೆಯೇಕೆ ನನ್ನಂತೆ ನನಗಾಗಿ ಕಾಯುವುದಿಲ್ಲ?’ ಈಕೆಯನ್ನು ಪಡೆಯದೆ ಇರುವುದು ಒಂದು ಜೀವನವೇ ಎನ್ನುವ ಮಟ್ಟಿಗೆ ಆಕೆಯೇ ನನ್ನ ಜೀವನದ ಪರಮಧ್ಯೇಯವಾಗಿ ಹೋದಳು. ಆದರೆ ಆಕೆಯನ್ನ ಪಡೆಯೋಕ್ಕೆ ಬೇರೇನೂ ಮಾಡ್ತಿರಲಿಲ್ಲ. ಬರೇ ಕಾಯ್ತಿದ್ದೆ ಅಷ್ಟೆ. ಮುಂದೊAದು ದಿನ ನನ್ನ ಅರಿವಿಗೆ ಬಂದದ್ದೇನೆAದ್ರೆ, ನಾನು ಬರೇ ಕಾಯ್ತೇನೆ – ಏನೂ ಮಾಡೋದಿಲ್ಲ, ಯಾವುದನ್ನೇ ಪಡೆಯೋಕ್ಕೆ ಅಂತ. ಅಂದರೆ ಒಂದು ರೀತಿ ಸೋಂಬೇರಿ! ಒಂದೆರೆಡು ತಿರಸ್ಕಾರಗಳ ತರುವಾಯವೂ ಮತ್ತೆ ಕಾಯ್ತಿದ್ದೆ. ಕಾಯೋದ್ರಿಂದಲೇ ನನಗೇನಾದರೂ ಸಿಕ್ಕಿದ್ರೆ ಅದು ಇದೊಂದೇ! ಕೊನೆಗೂ ಆಕೆ ಸಿಕ್ಕಿದ್ಲು - ಜೀವನದಲ್ಲಿ ನಾ ಬಯಸಿದ್ದು ದಕ್ಕಿದ್ದು ಇದೊಂದೆ. ಇಬ್ಬರದ್ದು ಮದುವೆಯೂ ಆಯಿತು.

ಆದರೆ ಅದೊಂದು ದಿನ ಇದ್ದಕ್ಕಿದ್ದ ಹಾಗೆ ಹಿಮಪಾತದಂತೆ ಎಲ್ಲಿಂದಲೋ ಹಳೆಯ ಪ್ರಶ್ನೆಗಳು ಧೊಪ-ಧೊಪ ಸುರಿದವು. ರ‍್ರೇ! ನನ್ನ ಜೀವನವೆಲ್ಲಾ ಈಕೆಗಾಗಿಯೇ ಬದುಕಬೇಕೆಂದಿದ್ದ ನನಗೆ ಮತ್ತೆ ಆ ಪ್ರಶ್ನೆಗಳೇಕೆ ಬಂದವು? ಪ್ರಾಯಶಃ ಈಕೆಗಾಗಿ ಬದುಕಬೇಕು ಅಂದ್ರೆ ಏನು ಅನ್ನೋದನ್ನ ನಾನು ವರ್ಣಿಸಿಕೊಳ್ಳದ್ದರಿಂದ. ಆಕೆ ನನ್ನ ಅಸ್ಮಿತೆಯ ಒಂದು ಭಾಗವೇÀ ಹೊರತು ನಾನೇ ಸಂಪೂರ್ಣವಲ್ಲ ಎನ್ನುವ ಆಲೋಚನೆಯೇ, ‘ಹಾಗಾದರೆ ನಾನ್ಯಾರು?’ ಎನ್ನುವ ಪ್ರಶ್ನೆಯೊಂದಿಗೆ ಹಳೆಯ ಆಲೋಚನೆಗಳನ್ನು ಆರಂಭಿಸಿತು. ಈ ಪ್ರಶ್ನೆಗೆ ಈಗಾಗಲೇ ಇರುವ ಉತ್ತರಗಳಿಗೆ ಇನ್ನೊಂದು ಸೇರ್ಪಡೆಯಾಯಿತು - ನಾನು ಈಕೆಯ ಗಂಡ. ಹಾಗಂತ ಆಕೆಯನ್ನ ಬಿಟ್ಟು ಇರಲಿಕ್ಕೂ ಆಗುತ್ತಿತ್ತು ಎಂದಲ್ಲ. ಆಕೆಯನ್ನೂ ಹೊರತುಪಡಿಸಿ ಮತ್ತೇನನ್ನೋ ಮನಸ್ಸು ಅಪೇಕ್ಷಿಸುತ್ತಿತ್ತು ಅತೃಪ್ತ ಆತ್ಮದಂತೆ – ತೃಪ್ತಿ! ಇದು ಸಿಗೋದು ಇನ್ನೊಬ್ಬರಿಗೆ ಸಹಾಯ ಮಾಡಿದಾಗಷ್ಟೇ! ಪ್ರಯೋಜನಕ್ಕೆ ಬಂದರಷ್ಟೇ! ಹಾಗೂ ಒಂದಷ್ಟು ಹೆಸರು ಸಂಪಾದಿಸಿದರಷ್ಟೇ. ಯಾರಿಗೂ ಸಹಾಯಕ್ಕೆ ಬಾರದ ಜೀವನ, ಯಾರಿಗೂ ಎದ್ದು ಕಾಣದ ಈ ಜೀವನ ಜೀವನವೇ, ಎನ್ನುವ ಮಟ್ಟಿಗೆ ನನ್ನ ಜೀವನದ ಪರಮ ಧ್ಯೇಯ ಬದಲಾಯಿತು. ಆದರೆ ಯಾರಿಗೆ ಏನು ಸಹಾಯ ಮಾಡೋದು? ಮತ್ತೆ ಕಾಯುತ್ತಾ ಕುಳಿತೆ, ಈ ಬಾರಿ ತಿಂಗಳೂ ವರ್ಷಗಟ್ಟಲೇ. ಯಾರಿಗೂ ಸಹಾಯ ಮಾಡಬೇಕೆಂದೆನಿಸಲೇ ಇಲ್ಲ! ಮಾಡಲೂ ಇಲ್ಲ. ಬರೇ ಕಾಯ್ತಿದ್ದೆ – ಯಾವುದೋ ಕಾಣದ ಹೆಸರು, ಹೊಗಳಿಕೆಗಾಗಿ. ಈಗಲೂ ಕಾಯ್ತಾ ಇರ್ತೇನೆ ಆಗಾಗ!

ಆದರೆ ಒಂದು ರಾತ್ರಿ ಆಕಾಶವನ್ನ ನೋಡ್ತಾ ಮಲಗಿದ್ದಾಗ ಇದ್ದಕ್ಕಿದ್ದ ಹಾಗೆ ನನ್ನನ್ಯಾರೋ ಮಾತಾಡಿಸಿದ ಹಾಗನಿಸಿತು. ‘ಏನು ಯೋಚಿಸ್ತಿದ್ದಿ? ನೀನು ಆ ನಕ್ಷತ್ರಗಳ ನಡುವೆ ಒಂದಾಗಿ ಜನಜನಿತವಾಗಬೇಕೂಂತಲೇ? ಹಾಗಾಗ್ಲಿಕ್ಕೆ ನೀ ಏನಾದ್ರೂ ಮಾಡಬೇಕಲ್ಲ. ಸರಿ ನೀನು ಜಜನಜನಿತವಾದೇಂತ ಭಾವಿಸೋಣ, ಮುಂದೆ?’

ಈ ‘ಮುಂದೆ’ ಅನ್ನೋ ಪದ ನನ್ನನ್ನ ಬಹಳ ಕಾಡಿಬಿಡ್ತು ಅಲ್ಲಿಂದ. ಮುಂದೆ? ಮತ್ತೊಂದು ಧ್ಯೇಯಕ್ಕಾಗಿ ಹುಡುಕಾಟವೇ? ಇರೋ ಹೆಸರನ್ನ ಉಳಿಸಿಕೊಳ್ಳಬೇಕಲ್ಲ, ಮತ್ತೆ ಮುಂದೇನು? ಜೀವನ ಬರೀ ಹೆಸರು ಉಳಿಸಕೊಳ್ಳಲಿಕ್ಕಾಗೇ ಮುಡಿಪಾಗಿಡಬೇಕ? ಒಂದು ರೀತಿಯ ಭಯವೂ ಆವರಿಸಿತು. ಇತ್ತ ಹೆಸರೂ ಬೇಕು, ಅತ್ತ ಹೆಸರು ಸಿಕ್ಕ ಮೇಲಿನ ಜೀವನದ ಭಯವೂ ಉಂಟು. ಜೀವನದಲ್ಲಿ ಏನೂ ಮಾಡದೇ ಸೋಂಬೇರಿಯಾಗಿರೋದೆ ಸರಿಯೇ! ನನಗೇನೋ ಅದರಲ್ಲೇ ಅದಮ್ಯ ತೃಪ್ತಿ ದೊರೆಯುತ್ತಾ ಹೋಯಿತು. ಈ ಕೆಲಸ ಮಾಡೋ ಜೀವನ ಅತೀ ಯಾಂತ್ರಿಕ ಹಾಗೂ ಆಯಾಸವೆನಿಸತೊಡಗಿತು. ಸಿಕ್ಕ ಸಿಕ್ಕ ಸಮಯದಲ್ಲೆಲ್ಲಾ ಮನಸ್ಸು ನನ್ನನ್ನ ಏನೂ ಮಾಡದಂತೆ ಏಕಾಂತದಲ್ಲಿರಿಸಿ ಅದಮ್ಯ ತೃಪ್ತಿಯನ್ನ ನೀಡುತ್ತಿತ್ತು. ಏನಾದರೂ ಮಾಡುವುದೇ ಆಯಾಸ, ಏನೂ ಮಾಡದೇ ಸುಮ್ಮನೇ ಇರೋದೇ ಉಲ್ಲಾಸ. ಇದ್ದಕ್ಕಿದ್ದ ಹಾಗೆ ನನ್ನದೊಂದು ಪ್ರಶ್ನೆಗೆ ಫಟಕ್ಕನೆ ಉತ್ತರ ಹೊಳೆಯಿತು – ‘ಈ ಜೀವನಕ್ಕೆ ಧ್ಯೇಯವೆಂದೇನು ಇಲ್ಲ! ಇದು ಆಕಸ್ಮಿಕವಾಗಿ ಹುಟ್ಟಿದ್ದು ಹಾಗೂ ಯಾವುದೇ ಕಾರಣವಿಲ್ಲದೆಯೇ ಕೊನೆಯೆಡೆಗೆ ಮುನ್ನಡೆಯುತ್ತದೆ. ಈ ನಡುವೆ ನಡೆಯುವುದೆಲ್ಲಾ ಟೈಂ - ಪಾಸ್!’

ಆದರೆ ಮನಸ್ಸು ಹೀಗೆ ಇರೋದೇ ಇಲ್ಲ. ಯಾವುದೋ ಅತೃಪ್ತತೆಯ ಕರಿ ಛಾಯೆ ಯಾವಾಗಲೂ ಬೆಂಬಿಡದೆ ಕಾಡುತ್ತಲ್ಲೇ ಇರುತ್ತದೆ. ಹೆಸರು  ಸಂಪಾದನೆಗೆ ಎಂದೇ ಇದ್ದತ್ತಿಂದ ನನ್ನ ಹಳೆಯ ಕೆಲಸವನ್ನ ಬಿಟ್ಟು, ಅತೀ ಕಡಿಮೆ ಕೆಲಸವಿರುವ ಈ ಹೊಸ ಕೆಲಸಕ್ಕೆ ಬಂದಿದ್ದೇನೆ – ಏನೂ ಮಾಡದೇ ಇರುವ ಸಮಯವನ್ನ ಆನಂದಿಸೋದಕ್ಕಾಗಿ. ಅದರೆ ಏನೂ ಕೆಲಸ ಮಾಡದೆ ಕೂತು ಕೂತು ಮತ್ತೆ ಅಪ್ರಯೋಜನಾಗಿದ್ದೇನಾ ಎನ್ನೋ ಗೊಂದಲ. ಈ ದ್ವಂದ್ವದಲ್ಲಿ ನಡೀತಾ ಇದೆ ಟೈಂ-ಪಾಸ್..’ ಎಂದು ಹೇಳಿ ಮೂರನೆಯವ ಸುಮ್ಮನಾದ.

ಮೊದಲಿಬ್ಬರಿಗೆ ಇದು ಕಥೆಯ ಹಾಗೆ ಕಾಣಲಿಲ್ಲ. ಅರ್ಧ ಭಾಗ ಬರುವಷ್ಟರಲ್ಲೇ ಆಕಳಿಸಿಯಾಕಳಿಸಿ ಕಣ್ಣೆಳೆಸಿಕೊಳ್ಳುತ್ತಾ - ಬಲವಂತವಾಗಿ ಹೂಂ ಹೂಂ ಎಂದವರು, ಕಥೆಯ ಕೊನೆಯದರೊಳಗೆ ಕಣ್ಣು ಮುಚ್ಚಿ ಮಲಗೇ ಹೋದರು.  

‘ಈಗ ನಿಮ್ಮ ಕಥೆ ಹೇಳಿ’, ಮೂರನೆಯವ ಬಂಡೆಯ ಮೇಲೆ ಮಲಗಿದ್ದವನ್ನು ಕೇಳಿದ.

ಎದ್ದು, ಕಾಲುಗಳನ್ನು ಕೆಲಗಿಳಿಸಿ ನಾಲ್ಕನೆಯವ ನಕ್ಕು ಹೇಳಿದ – ‘ನನಗೆ ಕಥೆ ಹೇಳೋಕ್ಕೆ ಬರೋಲ್ಲ. ಬರ್ತೀರ ಒಂದು ಲಾಂಗ್ ರೈಡ್?’ ಎಂದು ಹೇಳಿ, ತನ್ನ ಬೈಕ್ ಹತ್ತಿ ಯಾರಿಗೂ ಕಾಯದೇ ಹೊರಟು ಹೋದ. ಬುಡ..ಬುಡ..ಬುಡ.. ಸದ್ದು ನಿಧಾನವಾಯಿತು.


No comments:

Post a Comment