Thursday, July 22, 2021

ಏಯ್ ಡೆಡ್…

 

ಗುಡ್ಡದ ಮೇಲಿದ್ದ ವಾಟೆರ್ ಟ್ಯಾಂಕಿನ ಮೇಲೆ ಗಾಳಿಗೆ ಮೈಯೊಡ್ಡಿ ಕುಳಿತುಕೊಳ್ಳುವ ಆಸೆ ಇದ್ದಕ್ಕಿದ್ದ ಹಾಗೆ ಅವನಿಗೆ ಮೂಡಿತು. ದಟ್ಟ ಮಲೆನಾಡೇನಲ್ಲ ಅದು. ಆದರೂ ಸಿಟಿಯ ಡಾಂಬರು, ಕಾರು-ಬಾರುಗಳ, ಜನ-ಮನಗಳ ಜಂಗುಳಿಯ ಮುಂದೆ ಅತೀ ವಿಶಿಷ್ಟವಾದದ್ದು, ಬೇಕೆ ಬೇಕೆನಿಸುವಂಥದ್ದು ಆ ಗಾಳಿಯ ಪ್ರವಾಹ. ಗುಡ್ಡ’, ತಪ್ಪಲು’, ಮಳೆ’, ಕಾಡು’, ಹಳ್ಳ ಈ ಪದಗಳಿನ್ನು ಅವನ ಮನಸ್ಸಲ್ಲಿ ಜೀವಂತಿಕೆಯನ್ನ ಉಳಿಸಿಕೊಂಡಿದ್ದವು, ಜೀವಂತಿಕೆಯನ್ನ ತರಿಸುತ್ತಿದ್ದವು. ನಾಯಿ ನರಿಗಳ ಹಾಗೆ ಉಂಡು ಮಲಗಿ, ಸ್ರವಿಸಿ, ಸುಖಿಸಿ, ಹುಟ್ಟಿಸಿದವಗಳಿಗೂ ಉಣಿಸುತ್ತಲೇ ಸಮಯ ದೂಡುವುದನ್ನ ವಿಕಾಸ ಮನುಷ್ಯನಿಗೆ ಒದಗಿಸಿಲ್ಲ’, ಎಂದುಕೊಳ್ಳುತ್ತಾ ನಗುತ್ತಾನೆ.

Saturday, May 29, 2021

ತಾನಿಯಾಮ

 

ನನ್ನ ಜೀವನ ಒಂದು ರೀತಿ ತೂತಾದ ಬಿಂದಿಗೆಯನ್ನು ನೀರಿನಿಂದ ತುಂಬಿಸುವಂತ ಪ್ರಯತ್ನದಂತೆ ತೋರುತ್ತದೆ.  ನೀರು ನಿಲ್ಲದೆ ಹರಿದು ಹೋಗುತ್ತಿರುವ ಹಾಗೆ  ನನ್ನ ಹಿಂದಿನ ಕಾಲೇಜಿನ ನೆನಪುಗಳೂ, ಸ್ನೇಹಿತರೂ ಎಲ್ಲರೂ ಸ್ಮೃತಿಯಿಂದ ಅದೆಷ್ಟು ಬೇಗ ಮಾಯವಾಗಿ ಹೋಗಿಬಿಡುತ್ತಾರೆ. ಒಪ್ಪುತ್ತೇನೆ, ನನ್ನ ಹಿಂದಿನ ಜೀವನದ ನೆನಪಿನ ಅಥವಾ ಅನುಭವಗಳ ಶೇಖರಣೆಗಳೇ ನಾನು ಎನ್ನುವುದರ ನಿರ್ಮಾತೃಗಳು! ನಾನು ಮರೆತಿದ್ದೇನೆಂದರೂ ಅವು ಸುಪ್ತ ಲೋಕದ ಹಿಡಿತದಲ್ಲಿ ಬಂಧಿಗಳಾಗಿದ್ದೇ ಇರುತ್ತವೆ!

ಒಂದು ದಿನದ ಮೀಸೆಯ ಕಥೆ (ಕಿಟ್ಟಿಯ ಕಥೆಗಳು)

 



(ಕಿಟ್ಟಿ ಹೇಳಿದ್ದು) 


ನಾನಾಗ 7ನೇ ಕ್ಲಾಸ್ ಇರಬೇಕು. ಒಂಭತ್ತರಲ್ಲಿದ್ದ ಹುಡುಗರದ್ದು ಬಹಳ ಹುಡುಗಾಟಿಕೆಯ ವಯಸ್ಸು. ಅವರಿಗಿಂತ ಚಿಕ್ಕವರನ್ನ ರೇಗಿಸೋದು, ಕೀಟಲೆ ಮಾಡೋದು ಎಂದ್ರೆ ಆ ವಯಸ್ಸಿನ ಗುಣಲಕ್ಷಣಗಳಿರಬೇಕು. ಅವನೊಬ್ಬ ನನ್ನೊಟ್ಟಿಗೆ ಜಗಳಕ್ಕೆ ನಿಂತಿದ್ದ. ಯಾವುದೋ ಕಾರಣಕ್ಕೆ ಅವನು ನನಗೆ ಕೀಟಲೆ ಮಾಡಿದ್ದದ್ದು ರೇಗಿಸಿತ್ತು. ನಾನು ಹೊಡೆದಿದ್ದೆನೇನೋ. ಅವನು ನಾನೀಗ ಹೇಳಲಾಗದಂತಹ ಮಾತುಗಳನ್ನಾಡಿದ. ನನ್ನ ಕುರಿತಾಗಿ ಅಲ್ಲ, ನನ್ನಮ್ಮನ ಕುರಿತಾಗಿ. ಆಗೆಲ್ಲಾ ರೋಷಕ್ಕೆ ಒಂದು ಕಾರಣ ಬೇಕಿರ್ತಿತ್ತು ಅಷ್ಟೇ. ನನ್ನ ಬಗ್ಗೆ ಬೇಕಿದ್ರೆ ಮಾತಾಡು. ನನ್ನಮ್ಮನ್ ಬಗ್ಗೆ ಮಾತಾಡ್ಬೇಡ..ಅಂತ ನಾನು ನನ್ನನ್ನಮ್ಮನ ಮಾನರಕ್ಷಣೆಯ ಗುತ್ತಿಗೆ ಹೊತ್ತವನಾಗಿ ಅವನನ್ನ ಜಲ್ಲಿಯ ಮೇಲೆ ನೂಕಿದೆ. ಅದೇ ನಾ ಮಾಡಿದ ತಪ್ಪು. ತಳ್ಳೋದು ತಳ್ಳಿದೆ, ಜಲ್ಲಿಯ ಮೇಲೆ ತಳ್ಬಿಟ್ಟೆ.

Tuesday, May 25, 2021

ಐರೊನಿ!

 ಬೆವರ ಮಡುವಲಿ ಮಿಂದ ಕಾಯಗಳೆರೆಡು, ಒಂದರೊಳಗೊಂದಾಗಿ ನಲಿದು, ಬೆಸೆದು ಜಗವ ಮರೆತಾ ವೇಳೆಯಲಿ, ಯಾರಿಗೂ ತಿಳಿಯದೆ, ಅರುಹದೆ, ಕಗ್ಗತಲ ಸಾಗರದಲಿ ಎದುರಾದ ಬಂಡೆ ಕಷ್ಟವನೆಲ್ಲಾ ದಾಟಿ, ದಿಕ್ಕು ತಪ್ಪಿ, ದಾರಿ ಹಿಡಿದು, ಪ್ರೇಯಸಿಯನ್ನ ಸೇರಿಯೇ ಸೇರುವ ಶಪಥದಲ್ಲಣುವೊಂದು ಜಯಗಳಿಸಿ, ಪ್ರೇಯಸಿಯ ಎದೆಯಾಳವನ್ಹೊಕ್ಕು, ಇಬ್ಬರೂ ಕೂಡಿ ಒಂದಾಗಿ, ಹೊಸತಾಗಿ ಬಡಿದು ಹಿಗ್ಗಿ ಹಿಗ್ಗಿ ಮುಂದೊಂದು ದಿನ ಹಿರಿದಾಗಿ ಹೊರಬಂದಾಗ - 'ಇವ ಎಮ್ಮ ಪ್ರೀತಿಯಾ ಕಾಣ್ಕೆಯಲ್ವಾ!' ಎಂದು ಮಮತೆಯಿಂದ ಬೀಗಿದ ಜೀವಗಳೆರೆಡು, ಇಂದು ಆ ಮಗುವನ್ನ ಮಲಗಿಸಲು ಹರಸಾಹಸ ಪಟ್ಟು, ಬೆನ್ನು ಬಿದ್ದು - 'ಇದು ಬೇಕಿತ್ತಾ?!' ಎಂದೆನಿಸಿಕೊಂಡಾಗ, ಜಗದ ಅಣು ಅಣುವೂ ನೋಡಿ ನಗುತಲಿತ್ತು!

ಸುಮ್ಮನೆ.. ಸುಮ್ಮನೆ..

 ಕಣ್ಣೆಳೆದು, ದೇಹವಾಲಿ, ತಲೆಗೊಂದೊರಗು ಬೇಕೆನಿಸಿ, ಹಾಯಾಗಿ ಮಲಗಬೇಕೆಂದೆನಿಸಿದರೂ..

ಮಾತು ಮಾತುಗಳ್ಹೆಣೆದು, ಮೊಗತುಂಬ ನಲಿನಲಿದು, ಹರಟಬೇಕೆನಿಸಿದರೂ...

ಬೆಳಕ ಹೊಳೆಯಲಿ ಮಿಂದು, ಜಗವ ಅನುಭವಿಸುವೆನೆಂದು, ಮನವು ಆತುರಿಸಿದರೂ...

ಯಾರೂ ಇಲ್ಲದ ಕತ್ತಲ ಕೋಣೆಯಲ್ಲಿ, ಸುಮ್ಮನೆ, ಸುಮ್ಮನೆಯೇ, ಬರಿಯ ಗೋಡೆಯ ನೋಡುತ್ತ - ಆಗೀಗ ಕೆಳಗೊಮ್ಮೆ, ಬದಿಗೊಮ್ಮೆ - ಮಗನಿಗ್ಹಾಲುಣಿಸಿ ತೂಗುತ್ತಿದ್ದವಳು, ನಾ ಬರಲು ಆದ ಸದ್ದಿಗೆ ಎನ್ನ ಮೇಲೆ ಮುನಿಸಿಕೊಂಡಿಹಳಲ್ಲ! 

Saturday, May 15, 2021

ಮೌನದ ಮಾತು

 ಮಾತು - 3

"ಹೊಲಿ ನಿನ್ನ ತುಟಿಗಳನು ... ತಿಮ್ಮ"

ಸದ್ದೇ ನನ್ನ ಅಸ್ಮಿತೆ! 

ಆದರಿಂದೇಕೋ.... 



Tuesday, May 11, 2021

ಆಗುಂತಕನೊಟ್ಟಿಗೆ - ಆ ರಾತ್ರಿ

 


ಅದು 26 ನವೆಂಬರ್ 2018. ನಿಮಗ್ಯಾಕೆ ತಾರೀಕು ಹೇಳ್ತಿದ್ದೇನೆ? ಗೊತ್ತಿಲ್ಲ. ಪ್ರಾಯಶಃ ನಿಮ್ಮಲ್ಲಿ ಕುತೂಹಲ ಹುಟ್ಟಿ ಇದನ್ನ ಓದಲೇಬೇಕು ಅನ್ನೋ ಹಂಬಲ ಮೂಡಲಿ ಅಂತ ಇದ್ದಿರಬೋದು. ಆ ರಾತ್ರಿ ಮೈಸೂರಿನಿಂದ ಮಂಡ್ಯಕ್ಕೆ ಬಸ್ಸಿನಲ್ಲಿ ಹೊರಟಿದ್ದೆ. ನನ್ನ ಹಾಗೂ ಕಿಟಕಿಯ ಮಧ್ಯೆ ಒಂದಾಳು ಕುಳಿತಿದ್ರೂ ಕಿಟಕಿಯ ಪಕ್ಕ ಕುಳಿತ ಹಾಗೆಯೇ ತಂಡಿಯ ಗಾಳಿ ರಪ್ ಎಂದು ಮುಖಕ್ಕೆ ರಾಚುತ್ತಿತ್ತು. “ನಾನು ದೇವರಿಗೆ ಬಹಳ ಕೃತಜ್ನನಾಗಿರ್ತೀನಿ ಅವ್ನು ಈಗಿಂದೀಗ್ಲೆ ನನ್ನ ಕರ್ಕಾಂಡ್ ಬಿಟ್ರೆ”, ಅವನು ತನಗೆ ತಾನೇ ಹೇಳಿಕೊಂಡನೇ? ಅವನು ಕುಡಿದದ್ದಂತೂ ನಿಜ. ಇಲ್ಲ, ಅವ್ನು ನನ್ನೊಟ್ಟಿಗೆಯೇ ಮಾತನಾಡ್ತಿದ್ದದ್ದು. ಪಕ್ಕದಲ್ಲೇ ಕುಳಿತಿದ್ದರೂ ಬಸ್ಸಿನ ಗರ್.... ಎನ್ನುವ ಎಂಜಿನ್ನಿನ ಸದ್ದಿಗೆ ಪೈಪೋಟಿ ನೀಡಿ ಅವನ ಧ್ವನಿ ನನ್ನನ್ನ ತಲುಪಬೇಕಿತ್ತು.

ಮುಕ್ತಿ

 

ಮುಂದೆ? ಜೀವನದಲ್ಲಿ ಏನಾಗ್ಬೇಕು ಅನ್ಕೊಂಡಿದ್ದೀರಿ? ಏನ್ ಮಾಡ್ಬೇಕು ಅನ್ಕೊಂಡಿದ್ದೀರಿ?”

“ಗೊತ್ತಿಲ್ಲ” ಅನ್ನೋದಷ್ಟೇ ಸ್ಪಷ್ಟವಾಗಿ ತಿಳಿದಿರೋದು ಅವನಿಗೆ. ಅದನ್ನ ಹೇಳೋ ಅಷ್ಟು ಧೈರ್ಯವನ್ನೂ, ಏಕತಾನತೆಯನ್ನೂ ಜೀವನವೇ ತರಿಸಿಬಿಟ್ಟಹಾಗಿದೆ. ಹೇಳಬೋದು ಸಾಕಷ್ಟು. “I want to be a top class Mathematician!” ಆದರೆ ಅದೆಲ್ಲಾ ‘Under pressure’ ಹುಟ್ಟಿದ ಉತ್ತರಗಳು. Mathematics ಅನ್ನೋದು ಒಂದು ಕಲೆ – a creative art! ತಾನೇನೂ ಅಂತಾ out of the box ಅನ್ನೋವಂಥದ್ದೋ ಅಥವಾ ಉತ್ಕೃಷ್ಟವಾದದುದನ್ನೋ ಸೃಜಿಸಲು ಸಾಧ್ಯವಿಲ್ಲವೆನ್ನೋದು ಅವನಿಗೆ ತಿಳಿದಿದೆ. ಹಾಗಂದ ಮಾತ್ರಕ್ಕೆ ಇವನನ್ನ ತಡೀಲಿಕ್ಕೆ ಇವನನ್ನೇ ಬಿಟ್ಟು ಬೇರಾರಿಂದಲೂ ಸಾಧ್ಯವೇ ಇಲ್ಲ. ಒಂದಲ್ಲಾ ಒಂದು ದಿನ ವಿಶ್ವವೇ ನಿಬ್ಬರಗಾಗುವಂತಹದ್ದೊಂದನ್ನ ಸೃಷ್ಟಿಸಿಯೇ ತೀರುವೆನೆಂಬಂತೆ ಒಮ್ಮೊಮ್ಮೆ ಅಹಂಕಾರದಿಂದ ಮುನ್ನುಗ್ಗುತ್ತಾನೆ. ಮುಗ್ಗರಿಸಿ ಮುಗ್ಗರಿಸಿ ಮತ್ತೆ ಹಿಂದೆಯೇ ಬಂದು ಬೀಳುತ್ತಾನೆ. ಇದನ್ನೇ ಏಕೆ  ಮಾಡ್ತಿದ್ದಾನೆ ಅನ್ನೋದರ ಬಗ್ಗೆ ಎಂದಿಗೂ ಸ್ಪಷ್ಟವಾಗಿ ಈತ ಆಲೋಚಿಸಿಲ್ಲ. Of course ಇದನ್ನ ಬಿಟ್ಟು ಬೇರೆಲ್ಲೂ ಹೆಸರು ಸಂಪಾದಿಸೋಕ್ಕಂತೂ ಸಾಧ್ಯವೇ ಇಲ್ಲ ಅನ್ನೋದು crystal clear. ಅದು ಸಾಧ್ಯವೇ ಇಲ್ಲ ಅನ್ನುವ ಅರಿವು, ಸಾಧ್ಯವಾಗುವುದೇನೋ ಎನ್ನುವ ಕನಸು ಎರಡೂ ಸಮ್ಮಿಳಿತಗೊಂಡು – ಏನು ಮಾಡಬೇಕಿದೆ? ಏಕೆ ಮಾಡಬೇಕಿದೆ? ಎನ್ನುವ ಗೊಂದಲಗಳು ತಂತಾವೆ ನಿಯತ್ತಾಗೇ ಹುಟ್ಟಿಕೊಳ್ಳುತ್ತವೆ. ಈಗೊಂದರಿವಾಗಿದೆ – ಯಾವುದೋ ತನ್ನ ಹಳೆಯ ಕಥೆಯ ಸಾಲುಗಳು ಅವು. “ನಾನು ಇಲ್ಲಿ ಮಾಡ್ತಾ ಇರೋದು ಟೈಂ  ಪಾಸ್.. ಎಲ್ಲರೂ ಸಹ ಸಾಯೋವರೆಗೆ. ಹಾಗಾದಲ್ಲಿ ಇದೇ  ಏಕೆ? ಬೇರೆ  ಹೇಗೋ ಮಾಡಬೋದಲ್ಲ?” 

Friday, May 7, 2021

ಮೌನದ ಮಾತು

 ಮಾತು - 2

"ಬಂಧಿಯ  ಧ್ಯಾನ"

ಈ ಗಾರ್ಡೆನ್ನಿನಾಚೆಗೆ .......? 



Thursday, May 6, 2021

ಮೌನದ ಮಾತು

 ಮಾತು - 1

ಪ್ರತಿರೂಪಿ ಭಗವತಿಗೆ ಮುಡಿಪಾಗುವಾss.. ಬಾ ಬಾರ ಬಾರಾ ಸಖಿ...! 



Sunday, March 28, 2021

ವಾಮಿ

 ವಾಮಿಯ ಬಗ್ಗೆ ಅಷ್ಟಾಗಿ ಕಿಟ್ಟಿಗೆ ನೆನಪಿನಲ್ಲುಳಿದಿರಲಿಲ್ಲ. ಉಳಿಯೋದಕ್ಕೆ ವಾಮಿಯೇನು ದೊಡ್ಡವನೆನಿಸಿಕೊಂಡ ವ್ಯಕ್ತಿಯೂ ಆಗಿರಲಿಲ್ಲ ಅಥವಾ ಕಿಟ್ಟಿಯ ಮೇಲೆ ರಾಮು, ಅಭಿಯರ ಹಾಗೆ ಪ್ರಭಾವ ಬೀರಿದವನೂ ಅಲ್ಲ. ಕೇವಲ ವಾಮಿಯಷ್ಟೆ! ಇದ್ದಕ್ಕಿದ್ದ ಹಾಗೆ ವಾಮಿಯೆಂಬ ವ್ಯಕ್ತಿಯೊಬ್ಬನ ನೆನಪಾಯಿತು. ಅವನ ಆರೇಳು ವಯಸ್ಸಿನ ಕಾಲಘಟ್ಟದಲ್ಲಿ ಸುಳಿದು ಹೋದ ಹೆಸರದು. ಇಂದೇಕೋ ನೆನಪಾಯಿತು  - ಸುಮಾರು ದಶಕಗಳೇ ಕಳೆದು ಹೋದ ಮೇಲೆ! ಏಕೆ? ನೆನಪಿಗೊಂದು ನೆಪವಿರಬೇಕಲ್ಲ. ಕಿಟ್ಟಿ ಬಾಲ್ಯದ ಊರನ್ನ ತೊರೆದೇ ಇಪ್ಪತ್ತು ವರ್ಷಗಳ ಮೇಲಾಗಿದ್ದವು. ಹಳೇ ಮುಖಗಳನ್ನ ಸುಮಾರು ವರ್ಷಗಳ ತರುವಾಯ ನೋಡಿದಾಗ ನೆನಪಿನ ಜಲಪಾತವೇ ಧುಮ್ಮಿಕ್ಕಿ ಹರಿಯುತ್ತದೆ. ಎಲ್ಲಿಲ್ಲದ ಕುತೂಹಲ ಆಕ್ರಮಿಸಿಬಿಡುತ್ತದೆ. ಬಾಲ್ಯದಲ್ಲಿಯ ನೆಂಟರುಗಳನ್ನ ಸುಮಾರು ವರ್ಷಗಳ ತರುವಾಯ ಕಿಟ್ಟಿ ಸಂಧಿಸಿದಾಗ, ಉಕ್ಕಿದ ನೆನಪಿನ ಜಲಧಾರೆಯಲ್ಲಿ ಹರಿದು ಬಂದೊಂದು ಮೀನು ವಾಮಿ!