Saturday, May 29, 2021

ಒಂದು ದಿನದ ಮೀಸೆಯ ಕಥೆ (ಕಿಟ್ಟಿಯ ಕಥೆಗಳು)

 



(ಕಿಟ್ಟಿ ಹೇಳಿದ್ದು) 


ನಾನಾಗ 7ನೇ ಕ್ಲಾಸ್ ಇರಬೇಕು. ಒಂಭತ್ತರಲ್ಲಿದ್ದ ಹುಡುಗರದ್ದು ಬಹಳ ಹುಡುಗಾಟಿಕೆಯ ವಯಸ್ಸು. ಅವರಿಗಿಂತ ಚಿಕ್ಕವರನ್ನ ರೇಗಿಸೋದು, ಕೀಟಲೆ ಮಾಡೋದು ಎಂದ್ರೆ ಆ ವಯಸ್ಸಿನ ಗುಣಲಕ್ಷಣಗಳಿರಬೇಕು. ಅವನೊಬ್ಬ ನನ್ನೊಟ್ಟಿಗೆ ಜಗಳಕ್ಕೆ ನಿಂತಿದ್ದ. ಯಾವುದೋ ಕಾರಣಕ್ಕೆ ಅವನು ನನಗೆ ಕೀಟಲೆ ಮಾಡಿದ್ದದ್ದು ರೇಗಿಸಿತ್ತು. ನಾನು ಹೊಡೆದಿದ್ದೆನೇನೋ. ಅವನು ನಾನೀಗ ಹೇಳಲಾಗದಂತಹ ಮಾತುಗಳನ್ನಾಡಿದ. ನನ್ನ ಕುರಿತಾಗಿ ಅಲ್ಲ, ನನ್ನಮ್ಮನ ಕುರಿತಾಗಿ. ಆಗೆಲ್ಲಾ ರೋಷಕ್ಕೆ ಒಂದು ಕಾರಣ ಬೇಕಿರ್ತಿತ್ತು ಅಷ್ಟೇ. ನನ್ನ ಬಗ್ಗೆ ಬೇಕಿದ್ರೆ ಮಾತಾಡು. ನನ್ನಮ್ಮನ್ ಬಗ್ಗೆ ಮಾತಾಡ್ಬೇಡ..ಅಂತ ನಾನು ನನ್ನನ್ನಮ್ಮನ ಮಾನರಕ್ಷಣೆಯ ಗುತ್ತಿಗೆ ಹೊತ್ತವನಾಗಿ ಅವನನ್ನ ಜಲ್ಲಿಯ ಮೇಲೆ ನೂಕಿದೆ. ಅದೇ ನಾ ಮಾಡಿದ ತಪ್ಪು. ತಳ್ಳೋದು ತಳ್ಳಿದೆ, ಜಲ್ಲಿಯ ಮೇಲೆ ತಳ್ಬಿಟ್ಟೆ.

ಅವನ ಎರೆಡೂ ಕೈಗಳು ತುಂಬೋ ಅಷ್ಟು ಕಲ್ಲುಗಳು ಅಲ್ಲಿದ್ವು . ತಳ್ಳಿದ ಮರುಕ್ಷಣವೇ ನನಗೆ ನನ್ನ ತಪ್ಪಿನ ಅರಿವಾಗಿ ಹಿಂದೆ ತಿರುಗಿ, ತಲೆಗೆ ಕೈಯಿಂದ ರಕ್ಷಣೆ ಕೊಟ್ಟು ಅಂಡು ಬಾಗಿಸಿ ನಿಂತುಬಿಟ್ಟೆ, ಹೊಡೆದ್ರೆ ಅಂಡಿಗೆ ಹೊಡ್ಕೋಳ್ಳಿ ಅಂತ. ನಾ ಎಣಿಸಿದ್ದೆಲ್ಲಾ ತಪ್ಪಾಯ್ತು. ಅವನು ಕಲ್ಲುಗಳಲ್ಲಿ ಹೊಡೆಯಲಿಲ್ಲ ಸದ್ಯ – ಒಂದು ಮಟ್ಟಿಗೆ ಒಳ್ಳೆಯ ಹುಡುಗ. ಓಡಿ ಬಂದು ನನ್ನ ಕುತ್ತಿಗೆ ಸುತ್ತ ಕೈ ಹಾಕಿ, ಹಿಂದಕ್ಕೆ ನನ್ನನ್ನ ಬಾಗಿಸಿ, ಕಾಲೆರೆಡಕ್ಕೆ ಅವನ ಕಾಲಿಂದ ಹೊಡೆದ. ನೆಲಕ್ಕೆ ನನ್ನ ಅಂಡು ಬಡಿಯಿತು. ಮೂಗಿಂದ ನೀರು ಸೋರಿತು. ಒಂದೆರೆಡು ಕ್ಷಣಗಳ ಹಿಂದೆ ಏಟು ಬಿದ್ದರೆ ಅಂಡಿಗೇ ಬೀಳಲಿ, ಅಡ್ಡಿಯಿಲ್ಲ ಎಂದು ಎಣಿಸಿದ ನನಗೆ, ಈಗಲೂ ಅಂಡಿಗೇ ಏಟು ಬಿದ್ದಿದ್ದರೂ ನಖಶಿಕಾಂತ  ಉರಿಯಿತು. ನನಗೆ ಅರಿವಾಯ್ತು. ನನ್ನ ಕೈಯಲ್ಲಿ ಇವನನ್ನ ಬಡೀಯೋ ಶಕ್ತಿಯಿಲ್ಲ ಎಂದು. ಆದರೂ ಹೇಗಾದರೂ ಪಾಠ ಕಲಿಸಬೇಕೆನ್ನುವ ರೋಷ ಒಳಗೇ ಹತ್ತಿ ಉರೀತಿದ್ದಿದ್ರಿಂದ, ‘ನಿನಗೆ ಸರಿಯಾಗಿ ಪಾಠ  ಕಲಿಸ್ತೀನಿ. ನಮ್ಮಪ್ಪನ್ನ ಕರಕೊಂಡು ಬರ್ತೀನಿ ಎಂದೆ. ಏಳನೇ ತರಗತಿಯ ಹುಡುಗನಾಡುವ ಮಾತುಗಳೇ ಅವು ಎಂದು ಈಗಲೂ ನಗು  ಬರುತ್ತೆ. ಈ ಮಾತುಗಳಿಗೆಲ್ಲಾ ಜನ ಹೆದರಿಕೊಳ್ಳೋಹಾಗಿದ್ರೆ ನಮ್ಮ ಐ.ಡಿ ಕಾರ್ಡ್ ಬದಲು ನಮ್ನಮ್ಮ ಅಪ್ಪಂದಿರ ಫೋಟೋಗಳನ್ನ ನೇತು ಹಾಕೊಂಡು ಓಡಾಡಿದ್ರೆ ಸಾಕಿತ್ತು. ‘ನಿಮ್ಮಪ್ಪನೂ ನಿನ್ನ ಹಾಗೆಯೇ ಓಲೆ ತೊಟ್ಕೊಂಡಿದಾನ? ನಿಮ್ಮಪ್ಪ ಗಂಡಸಾದ್ರೆ, ನಿಮ್ಮಪ್ಪನಿಗೆ ಮೀಸೆ ಇದ್ರೆ ನಿಮ್ಮಪ್ಪನ್ನ ಕರಕೊಂಡು ಬಾ. ಅಂತ ಅವನು ಮರು ಸವಲು ಹಾಕಿ ಉರಿಯೋ ಬೆಂಕಿಗೆ ತುಪ್ಪ ಸುರಿದ. ನನಗೆ ಮನಸ್ಸಿಗೆ ನಾಟಿದ್ದು ಆತ ಅಪ್ಪನ ಬಗ್ಗೆ ಏಕವಚನದಲ್ಲಿ ಮಾತಾಡಿದ್ದು. ಆ ಕ್ಷಣವೇ ಕ್ಲಾಸಿಗೆ ಓಡಿ, ಬ್ಯಾಗ್ ನಿಂದ ಪುಸ್ತಕವೊಂದನ್ನ ತೆಗೆದು ಒಂದು ಪತ್ರ ಬರೆದೆ, ಹೆಡ್ ಮೇಡಮ್ ಗೆ. ಕ್ಲಾಸಲ್ಲಿ ನಾನೊಬ್ಬನೇ. ಮೂಗಲ್ಲಿ, ಕಣ್ನಲ್ಲಿ ಸುರಿಸಿಕೊಳ್ಳುತ್ತಾ, ನಡು ನಡುವೆ ಒರೆಸಿಕೊಳ್ಳುತ್ತಾ, ಯಾವುದೋ ಸತ್ಯಾಗ್ರಹ ಚಳುವಳಿಯಲ್ಲಿ ಅತೀವವಾದ ನೋವು ಅನುಭವಿಸಿ, ಸಾವಿನ ಪತ್ರವೊಂದನ್ನ ಬರೆಯುವವರ ಹಾಗೆ ತೀವ್ರತೆಯಿಂದ ಬರೆಯುತ್ತಿದ್ದೆ. ಬರೆದು ಮುಗಿಸ್ದೆ. ಕಾಲಾಂತರದಲ್ಲಿ ಆ ಪತ್ರ ಎಲ್ಲೋ ಕಳೆದು ಹೋಯ್ತು. ಆ ಪತ್ರದಲ್ಲಿ ನನಗಾದ ನೋವನ್ನ, ಹಾಗೆ ಅವನ  ನೈತಿಕತೆಯನ್ನ ಪ್ರಶ್ನಿಸಿ, ಅವನಿಗೆ ಶಿಕ್ಷೆ ನೀಡಲೇ ಬೇಕೆಂದು ಅಹವಾಲು ತೋಡಿದ್ದೆ.

ಆ ಪತ್ರವನ್ನ ಹೆಡ್ ಮೇಡಮ್ ಗೆ ಕೊಟ್ಟಾಗ, ಓದ್ತೇನೆ ಅಂತ ಹೇಳಿ ನನ್ನ ಸಮಾಧಾನ ಮಾಡಿ ಕಳಿಸಿದ್ರು. ಅವರು ಸಮಾಧಾನ ಮಾಡಿದ ಪರಿ ನೋಡಿ, ಅವನಿಗೆ ಸರಿಯಾದ ಶಿಕ್ಷೆಯಾಗ್ತದೆ ಅನ್ನೋ ನಂಬಿಕೆ ಅಷ್ಟಾಗಿ ಬರಲಿಲ್ಲ. ಮನೆಗೆ ಹೋದವ್ನೇ ಅಪ್ಪ ಬರೋದನ್ನೆ ಕಾಯ್ತಿದ್ದೆ. ಅಪ್ಪ ಬಂದ ಮೇಲೆ ಅಪ್ಪನಿಗೆ ಎಲ್ಲಾ ವಿವರಿಸಿದೆ. ಒಂದು ದೀರ್ಘ ಉಸಿರನ್ನ ಎಳೆದುಕೊಂಡು, ಮೀಸೆ ಬೆಳೆಯೊ ಜಾಗದ ಮೇಲೆ ಕೈ ಇಟ್ಟು ನಿಂತ್ರು. ಹಾಂ...’, ಅಪ್ಪ ಮಾತು ಶುರು ಮಾಡಿದ್ರು. ಅಲ್ವೋ ಪೆದ್ದ. ನಾನು ಗಂಡಸಾಗಿಲ್ದೆ ಇದ್ರೆ ನೀನು ಅಕ್ಕ ಹೇಗೋ ಹುಟ್ತಿದ್ರಿ? ಹ್ಹಾ.. ಹ್ಹಾ… ಹೋಗ್ಲಿ ಬಿಡು. ಈಗ ನಾನು ಗಂಡಸೇನೋ ನಿಜ. ಆದ್ರೆ ಅವನ  ಎರಡನೇ ಸವಾಲಿದ್ಯಲ್ಲ ಮೀಸೆದು, ನಂಗೆ ಮೀಸೆ ಇಲ್ವಲ್ಲ ಏನು ಮಾಡೋದು?” ಅಪ್ಪ ನನ್ನೇ ಕೇಳಿ ನಗ್ತಾ ನಗ್ತಾ ಎದ್ದು ಹೋಗ್ಬಿಟ್ರು . ನನಗೆ ಅಪ್ಪನಿಗೆ ಮೀಸೆ ಇದ್ಯೋ, ಅಪ್ಪ ಗಂಡಸೋ ಅಲ್ವೋ ಅನ್ನೋದ್ರಲ್ಲೆಲ್ಲಾ ಚಿಂತೆ ಇರಲಿಲ್ಲ. ಅದಕ್ಕೆ ಉತ್ತರವೂ ಬೇಕಿರ್ಲಿಲ್ಲ ಅವನಿಗೆ ಶಿಕ್ಷೆ ಆಗಬೇಕಿದ್ದಿತ್ತಷ್ಟೇ! ಈಗ ನೆನೆಸ್ಕೊಂಡ್ರೆ ನಗು ಬರತ್ತೆ. ನಾನು ಅಷ್ಟು ಗಂಭೀರವಾಗಿದ್ರೂ , ಅಪ್ಪ ಇದನ್ನೆಲ್ಲಾ ಅಷ್ಟು ಸಲೀಸಾಗಿ ನೋಡೀಬಿಟ್ರಲ್ಲ ಎಂದು ಇನ್ನೂ ಬೇಸರವಾಯ್ತು. ಆ ಅವಿನಾಶನಂಥ ಹುಡುಗರನ್ನ ತಡೆಯೋವ್ರು, ಬಡಿಯೋವ್ರು ಯಾರೂ ಇಲ್ವಾ? ನಾಳೆ ನಾ  ಶಾಲೆಗೆ ಹೇಗೆ ಹೋಗೋದು? ಒಬ್ಬ ಬಕಾಸುರನ ಹಾವಳಿಯನ್ನ ತಡೆಯೋಕ್ಕಾಗದ ಜನರ ಹಾಗೆ ಪೇಚಾಡಿದ್ದೆ. ನನ್ನ ದೃಷ್ಟಿಯಲ್ಲಿ ಒಂದು ಧರ್ಮಯುದ್ಧವಾಗಿ ಆ ಅವಿನಾಶನ ಅಹಂಕಾರ, ದರ್ಪ, ಕೆಟ್ಟಗುಣಗಳನ್ನೆಲ್ಲಾ ಸರ್ವನಾಶ ಮಾಡಬೇಕಿತ್ತು. ಆದರೆ ಮಾಡುವವರು ಯಾರು? ಅದನ್ನೆಲ್ಲಾ ಮಾಡಬೇಕಿದ್ದ ನನ್ನಪ್ಪ, ಸ್ಕೂಲಿನ ಹೆಚ್.ಎಮ್ ಎಲ್ಲರೂ ಕೈ ಕೊಟ್ಟರು. ನಾನು ನಿಸ್ಸಹಾಯಕನಾದೆ. ಅಪ್ಪನಿಲ್ಲದೆ ಮಾರನೇ ದಿನ ಶಾಲೆಗೆ ಹೋದರೆ ಅವನು ನನ್ನನ್ನು ಆಡಿಕೊಳ್ಳದೇ ಬಿಡುವುದಿಲ್ಲ. ಈಗೇನು ಮಾಡೋದು? ಸ್ಕೂಲಿಗೆ ಪ್ರೇಯರ್ ಮೊದಲೆ ಹೋಗಿ ಕ್ಲಾಸ್ ಲಿ ಕೂತುಬಿಡ್ಲಾ, ಅವನಿಗೆ ಎಲ್ಲೂ ಕಾಣಿಸದ ಹಾಗೆ? ಸಂಜೆ ಹೋಗಬೇಕಾದ್ರೂನು ಎಲ್ಲರೂ ಹೋದಮೇಲೆ ಹೋಗ್ತೀನಿ. ಅಷ್ಟೇ. ಹಾಗೆ ಮಾಡ್ತೀನಿ ಎಂದು ರಾತ್ರಿ ನಿರ್ಧರಿಸಿ ಮಲಗಿದೆ.

ಬೆಳಗ್ಗೆ ಎದ್ದಾಗ ಒಂದು ಆಶ್ಚರ್ಯ ಕಾದಿತ್ತು. ಅಪ್ಪ ಇದನ್ನ ಗಂಭೀರವಾಗಿ ಪರಿಗಣಿಸಿದ್ರು. ಮುಖದ ಮೇಲೆ ಅಲ್ಲಿ ಇಲ್ಲಿ ಇದ್ದ ಕೊಂಚ ಕೂದಲುಗಳನ್ನೆಲ್ಲಾ ತೆಗೆದು, ಮೀಸೆಯ ಜಾಗದಲ್ಲಿರುವ ಚಿಕ್ಕ ಚಿಕ್ಕ ಕೂದಲುಗಳು ಎದ್ದು ಕಾಣುವ ಹಾಗೆ ಶೇವ್ ಮಾಡಿದ್ದರು. ಹ್ಹಾ.. ಹ್ಹಾ... ಅಪ್ಪ ಅದನ್ನ ನನಗಿಂತ ಬಹಳ  ಗಂಭೀರವಾಗಿ ಪರಿಗಣಿಸಿದ್ರು. ಹಾಂ.. ನನಗೆ ಮೀಸೆ ಇಲ್ಲ ಅಂದಿದ್ನಲ್ಲ. ಈಗ ಮೀಸೆ ಇದೆ ನಡಿ. ಯಾರವ್ನು ತೋರಿಸು ಅಂತ ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರು. ನನಗೆ ಖುಷಿಯಾಗ್ಲಿಲ್ಲ, ಜೋರು ನಗು  ಬರ್ತಿತ್ತು. ಅಪ್ಪ ಎಲ್ಲಿ ಶಾಲೆಗೆ ಬಂದು ಬಿಡ್ತಾರೋ ಅಂತ  ಭಯ  ಕೂಡ  ಆಯ್ತು. ಅಪ್ಪ ಚಾರ್ಲಿ ಚಾಪ್ಲಿನ್ ನ ಹಾಗೆ ಕಾಣಿಸ್ತಿದ್ರು. ಹಾಗೆ ಕಾಣ್ಸಿದ್ರೆ ಸ್ಕೂಲಲ್ಲಿ ನನ್ನ ಇನ್ನೂ ಆಡ್ಕೊತಾರೆ ಅನ್ನೋ ಭಯಕ್ಕೆ, ಅಪ್ಪ ಬೇಡ, ತೆಗೆದು ಬಿಡೀ ಪ್ಲೀಸ್ ಎಂದು ಕೇಳಿದೆ. ಅಮ್ಮ, ಅಕ್ಕ ಇಬ್ಬರೂ ಜೋರಾಗಿ ನಗಲಿಕ್ಕೆ ಶುರು ಮಾಡಿದ್ರು. ಅಪ್ಪ ಕೇಳಲಿಲ್ಲ. ಇಲ್ಲ, ಇಲ್ಲ ನಡಿ. ಅವ್ನ್ಯಾರು ತೋರಿಸು ಅಂತ  ನನ್ನ ಬಿಡಲಿಲ್ಲ. ನನಗೆ ಇನ್ನೂ ಹೆಚ್ಚಿನ ಮುಜುಗರವಾಯ್ತು. ಅಪ್ಪನನ್ನ ಶಾಲೆಗೆ ಕರಕೊಂಡು ಹೋಗದೆಯೇ ಆಗೋ ಅವಮಾನವೇ ಏಷ್ಟೋ ಪರ್ವಾಯಿರ್ಲಿಲ್ಲ ಅಂತ  ಅನ್ನಿಸೋಕ್ಕೆ ಶುರುವಾಯ್ತು. ಇನ್ನು ಅವನು ನನ್ನ ಜನ್ಮೇಪಿ ಆಡ್ಕೊಳ್ತಲೇ ಇರ್ತಾನೆ ಅನ್ನಿಸ್ತು. ಅಪ್ಪ ಬಿಡಲಿಲ್ಲ. ಕೆಳಗೆ ಹೊರಡ್ಲಿಕ್ಕೆ ಬಂದಾಗ, ಕೆಳಗಿನ ಮನೆಯ ಅಕ್ಕಳೂ ಸಹ  ಅಪ್ಪನನ್ನ ನೋಡಿ ಕಿಸಕ್ ಅಂತ  ನಕ್ಬಿಟ್ಳು. ಅಪ್ಪನ್ನ ಯಾರೂ ಯಾವತ್ತೂ ಹಾಗೆ ನೋಡಿದ್ದಿರಲಿಲ್ಲ. ನನಗೇ ಇನ್ನೂ ಮುಜುಗರವಾಯ್ತು ಮತ್ತೆ ಖಚಿತವಾಗಿಹೋಯ್ತು, ಅಪ್ಪ ಚಂದ ಕಾಣ್ತಿಲ್ಲ ಅಂತ.

ಇಬ್ಬರೂ ಹೆಡ್.ಮೇಡಂ ಚೇಂಬರ್ ಒಳಗೆ ಬಂದ್ವಿ. ಹೆಚ್.ಎಂ ಗೆ ಸಹ ನಗು ಬಂದ್ರೂ, ತಡಕೊಂಡಿದದ್ರು. ಆದ್ರೂ ಅಷ್ಟಾಗಿ ತಡಿಲಿಕ್ಕಾಗದೇ ನಕ್ಕಿಬಿಟ್ರು. ಅವ್ರಿಗೆ ಗೊತ್ತಾಗೋಯ್ತೇನೋ ಇದ್ಕಾಗಿಯೇ ಅಪ್ಪ ಮೀಸೆ ಬಿಟ್ರು ಅಂತ. ಅವರಿಗೂ ನನ್ನ ಮೇಲೆ ಕನಿಕರ ಬಂದಿರಬೇಕು. ಅವ್ರಿಗೆ ಮೊದಲಿಂದಲೂ ನನ್ನ ಮೇಲೆ ಸ್ವಲ್ಪ ಅನುಕಂಪ. ಅಪ್ಪನ್ನ ಕೂರಿಸಿ ಆ ಹುಡುಗನ್ನ ಕರೆಸಿದ್ರು. ಅವನು ಭಯದಲ್ಲೇ ಒಳಗೆ ಬಂದು ನಿಂತ. ಆಹಾ! ನನಗೆ ಎಂತೋ ಆನಂದ ಆಗ. ಗಂಡಸಾಗಿದ್ರೆ ಯಾಕೆ ಹೆದರ್ಕೋತೀಯ.. ಅಂತ  ಕೇಳೋ ವಿಕೃತತೆ ಮನಸ್ಸಲ್ಲಿ ಮೂಡಿತು. ಹೆಚ್.ಎಂ ಆ ಹುಡುಗನ ಕಡೆ ತಿರುಗಿ – ನೋಡು ಅವರ ಅಪ್ಪ ಬಂದಿದಾರೆಎಂದು ಹೇಳೊ ಅಷ್ಟ್ರಲ್ಲಿ ಆ ಹುಡುಗನ ಕಣ್ಣಲ್ಲಿ ನೀರು ತುಂಬಿಕೊಳ್ತು. ಇನ್ನೆಂದೂ ಹೀಗೆ ಮಾಡ್ಬೇಡ ಹೋಗು ಎಂದು ಕಳಿಸಿದ್ರು. ನನಗೆ ಮನಸ್ಸಲ್ಲೇ ಒಂದು ರೀತಿಯ ಸಂತೃಪ್ತಿ. ನಮ್ಮಪ್ಪನ ಸ್ಥಿತಿಯನ್ನ ನೋಡಿ ಇವನಿಗೆ ಬೇಸರವಾಗಿ ಅತ್ತು ಹೋದ ಅಂತ. ಆದರೆ ಆಮೇಲೆ ತಿಳಿಯಿತು ಮೇಡಂ ಆ ಹುಡುಗನನ್ನ ಕರೆಸಿ ಹೊಡೆದಿದ್ರು ಅಂತ. ಇನ್ನೆಲ್ಲಿ ಹೊಡೆದು ಬಿಡ್ತಾರೋ ಅಂತ ಮುಂಚೆಲೇ ಆತ ಅಳೋ ನಾಟಕ ಮಾಡಿದ್ದು ಅಂತ. ಅದಾದಮೇಲೆ ಆತ ಎಂದೂ ನನ್ನ  ತಂಟೆಗೇ ಬಂದಿಲ್ಲ. ನನ್ನ ಮಾತಾಡಿಸಿದ್ದೂ ಇಲ್ಲ, ಹೊಡೆತದ ಭಯಕ್ಕೆ.

ಅಪ್ಪನಿಗೆ ಏನೂ ಅರ್ಥವಾಗ್ಲಿಲ್ಲ. ಆಫೀಸಿಗೆ ತಡವಾಯ್ತು ಅಂತ ನಮಸ್ಕರಿಸಿ ಎದ್ದು ಬಂದ್ರು. ಮಾರನೆಯ ದಿನಕ್ಕೆ ಅಪ್ಪನ ಒಂದು ದಿನದ ಮೀಸೆ ಹೋಗಿತ್ತು.


No comments:

Post a Comment