Wednesday, June 29, 2022

ಹೇಡಿ?

 ಹೊರಗಿಂದಲೋ, ಇಲ್ಲಿಯವರೋ - ಝಗಮಗಿಸುವ ದೀಪ, ಅಲಂಕಾರಗಳು, ಮೆರುಗು, ಕಾರ್ಯಕ್ರಮಗಳು,  ಸುತ್ತಾಟ - ದಸರೆಯ ಸಂಜೆಗಳಿಗೆ ಮೈಸೂರಿನ ಬೀದಿಯಲ್ಲಿ ಜನ ಹೆಚ್ಚು. ಒಂದ್ಹತ್ತು ದಿವಸಗಳು ಮಿನುಗುವ, ಮನ ಸೆಳೆಯುವ ಮೈಸೂರನ್ನ ಮುದಕ್ಕೆಂದೇ ಮುತ್ತಿಕ್ಕುವುದು. ದಸರೆಗೆ ಮೈಸೂರಿನ ಬೆನ್ ಬಲವಿಲ್ಲದೆ ಅರ್ಥವುಂಟೆ? ಉತ್ಪ್ರೇಕ್ಷೆ ಹೆಚ್ಚೆನಿಸಿದ್ದರೂ ಅಡ್ಡಿಯಿಲ್ಲ. ಆದರೆ ಇದೊ, ರಾತ್ರಿಯ ಹತ್ತೂವರೆ ಬಸ್ಸಿಗೆ ಹೊರಟಿದ್ದೇನೆ, ಚುಟ್ಟಿಕೆರೆಗೆ. ದಸರೆಯ ಎಂಟನೆಯ ರಾತ್ರಿ. ಇಂದೇ ಇಲ್ಲಿ‌ ಮಳೆಯಿಲ್ಲ. ಪ್ರತೀ ಸಂಜೆ ಕಾಲೇಜಿನಿಂದ ಹೊರಬೀಳೋ ಹೊತ್ತಿಗೆ  ಎಂಟರ ಆಸು ಪಾಸು. ಭಾಗಶಃ ದಿವಸಗಳು ಈ ಹೊತ್ತಿಗೆ ಮಳೆಯಿಂದ ತಂಪೆರೆಸಿಕೊಳ್ಳಲಿಚ್ಛಿಸಿದ್ದವು‌. ಇದೇನು ಮೊದಲ ದಸರೆಯೇನಲ್ಲ. ಮೈಸೂರಿಗೆ ಬಂದು 11 ವರ್ಷಗಳಾಗಿದ್ದಾವಾದರೂ, ಅದರ ವರ್ಣನೆ ನನಗಸಾಧ್ಯ. ಪದಗಳಿಲ್ಲೆಂದಲ್ಲ, ಅನುಭವ ಆಸಕ್ತಿಯ ಕೊರತೆಯೇ? ಇಂದೂ ತಿಳಿದಿಲ್ಲ. ಆಟೋದಲ್ಲಿ ಕುಳಿತು ಹೊರಗೆಲ್ಲಾ ನೋಡುವಾಗ ಒಂದು ಬಗೆಯ ಪುಳಕವೇ. ಬಣ್ಣ ಬಣ್ಣದ ಬಲ್ಬುಗಳು, ಒಂದು ವಿನ್ಯಾಸದಲ್ಲಿ ಹತ್ತುರಿಯುತ್ತಿದ್ದದ್ದು ಒಂದು ಬಗೆಯ ಲೈಟು ಬಲ್ಬುಗಳ ಡ್ಯಾನ್ಸಿನಂತೆ. ವಿವಿಧ ಬಗೆಯ ಆಕೃತಿಗಳು - ಹೂ, ಎಲೆ, ಮರ, ಪ್ರಾಣಿ, ಮುಷ್ಯನ ವಿವಿಧ ಸಂಸ್ಕೃತಿಯ ಮುಖ, ಭಂಗಿಗಳು- ಲೈಟುಗಳಿಂದಲೇ ನಿರ್ಮಿತ. ಎಲ್ಲೆಡೆಯೂ ಬೆಳಕು, ಬಣ್ಣ, ಆಕೃತಿಗಳು, ಬೆಳಕಿನ ನೃತ್ಯ, ನೋಡುವ ಕಂಗಳು. ಇದರಲ್ಲೊಂದಷ್ಟು ನನ್ನ ಮನಸಿಗೆ ಹಿತವೆನಿಸುವ ಚೆಲುವನ್ನ ಹುಡುಕ ಹೊರಡಲು ಕಾರಣ ನನ್ನ ಬಳಿಯೊಂದು ಬೈಕ್ ಹಾಗೂ ಕ್ಯಾಮೆರಾ ಇದ್ದಿದ್ದರಿಂದ. ಲೈಟ್ ಗಳು ಆಫ್ ಆಗುವ ಮುನ್ನ, ಟ್ರಾಫಿಕ್ ಎಲ್ಲಾ ಕಡಿಮೆಯಾಗುವ ಹೊತ್ತಿಗೆ ಸಿಟಿಯನ್ನ ಸುತ್ತಿ ಮನಸ್ಸು, ಕ್ಯಾಮೆರಾಗಳನ್ನ ತುಂಬಿಕೊಳ್ಳಲು ಈ ಬಾರಿ ಸಾಧ್ಯವಾಗಲಿಲ್ಲ.