Sunday, March 28, 2021

ವಾಮಿ

 ವಾಮಿಯ ಬಗ್ಗೆ ಅಷ್ಟಾಗಿ ಕಿಟ್ಟಿಗೆ ನೆನಪಿನಲ್ಲುಳಿದಿರಲಿಲ್ಲ. ಉಳಿಯೋದಕ್ಕೆ ವಾಮಿಯೇನು ದೊಡ್ಡವನೆನಿಸಿಕೊಂಡ ವ್ಯಕ್ತಿಯೂ ಆಗಿರಲಿಲ್ಲ ಅಥವಾ ಕಿಟ್ಟಿಯ ಮೇಲೆ ರಾಮು, ಅಭಿಯರ ಹಾಗೆ ಪ್ರಭಾವ ಬೀರಿದವನೂ ಅಲ್ಲ. ಕೇವಲ ವಾಮಿಯಷ್ಟೆ! ಇದ್ದಕ್ಕಿದ್ದ ಹಾಗೆ ವಾಮಿಯೆಂಬ ವ್ಯಕ್ತಿಯೊಬ್ಬನ ನೆನಪಾಯಿತು. ಅವನ ಆರೇಳು ವಯಸ್ಸಿನ ಕಾಲಘಟ್ಟದಲ್ಲಿ ಸುಳಿದು ಹೋದ ಹೆಸರದು. ಇಂದೇಕೋ ನೆನಪಾಯಿತು  - ಸುಮಾರು ದಶಕಗಳೇ ಕಳೆದು ಹೋದ ಮೇಲೆ! ಏಕೆ? ನೆನಪಿಗೊಂದು ನೆಪವಿರಬೇಕಲ್ಲ. ಕಿಟ್ಟಿ ಬಾಲ್ಯದ ಊರನ್ನ ತೊರೆದೇ ಇಪ್ಪತ್ತು ವರ್ಷಗಳ ಮೇಲಾಗಿದ್ದವು. ಹಳೇ ಮುಖಗಳನ್ನ ಸುಮಾರು ವರ್ಷಗಳ ತರುವಾಯ ನೋಡಿದಾಗ ನೆನಪಿನ ಜಲಪಾತವೇ ಧುಮ್ಮಿಕ್ಕಿ ಹರಿಯುತ್ತದೆ. ಎಲ್ಲಿಲ್ಲದ ಕುತೂಹಲ ಆಕ್ರಮಿಸಿಬಿಡುತ್ತದೆ. ಬಾಲ್ಯದಲ್ಲಿಯ ನೆಂಟರುಗಳನ್ನ ಸುಮಾರು ವರ್ಷಗಳ ತರುವಾಯ ಕಿಟ್ಟಿ ಸಂಧಿಸಿದಾಗ, ಉಕ್ಕಿದ ನೆನಪಿನ ಜಲಧಾರೆಯಲ್ಲಿ ಹರಿದು ಬಂದೊಂದು ಮೀನು ವಾಮಿ!