Wednesday, March 30, 2022

ಕ್ಯಾಂಪಸ್ ರೌಂಡ್ಸ್ !

 

'See... ' ಸದಾನಂದ ಒಂದು ಸಿಪ್ ಕಾಫಿ ಹೀರಿದ. ಕ್ಯಾಂಪಸಿನಲ್ಲಿ ಶುರುವಾಗಿದ್ದ ಹೊಸ ಅಂಗಡಿ. ನೋಡಿದರೇನೆ ತಿಳೀತಿತ್ತು ಮಲೆಯಾಳಿ -  ಮುಸಲ್ಮಾನನದ್ದು. ಈ ಮಲೆಯಾಳಿ ಮುಸಲ್ಮಾನರೊಂದಿಗೆ ಅದೇನೋ ಹೋದಲ್ಲೆಲ್ಲಾ ನಂಟು. ಹಿಂದೆ ತಾನಿದ್ದ ಮಂಡ್ಯದಲ್ಲೂ ಸಹ ಮನೆಯ ಹತ್ತಿರ ಇದ್ದ ದಿನಸ ಅಂಗಡಿಯೂ ಸಹ ಮಲೆಯಾಳಿ ಮುಸಲ್ಮಾನನದ್ದೇ‌. ಅದು ತಿಳಿದದ್ದು ಬಹಳ ದಿನಗಳ ತರುವಾಯ. ತನ್ನ ಮಾವ ಮನೆಗೆ ಬಂದಿದ್ದ ಸಂದರ್ಭದಿನಸಿ ಕೊಳ್ಳೋದಿಕ್ಕೇಂತ ಹೊರಗೆ ಬಂದಿದ್ದರು. ಅವರೇ ತಿಳಿಸಿದ್ದುಅದೊಂದು ಮುಸಲ್ಮಾನ ಅಂತ. ಪ್ರಾಯಶಃ ಆರೆಸ್ಸೆಸ್ಸಿನ ಕಟ್ಟಾ ಭಕ್ತರಾಗಿದ್ದ ಅವರಿಗೆ ಈ ವಾಸನೆ ಬಲು ಬೇಗ ತಾಗಿತ್ತೇನೋ. ಅವರು ಅದನ್ನ ಸಾಧಿಸಲಿಕ್ಕೆಂದೇ ಶುಕ್ರವಾರ ಹನ್ನೆರೆಡು ಗಂಟೆಗೆ ಸರಿಯಾಗಿ ಮುಚ್ಚಿದ್ದ ಅಂಗಡಿಯನ್ನ ಸದಾನಂದನಿಗೆ ಸಾಕ್ಷಿಯಾಗಿ ತೋರಿಸಿ ಬೀಗಿದ್ದರು. ಅಷ್ಟೊಂದು ಕರಾರುವಕ್ಕು.

Tuesday, March 29, 2022

ಜಾತಿ - ಪ್ರೀತಿ? (ಕಿಟ್ಟಿಯ ಕಥೆಗಳು)

ಕಿಟ್ಟಿಗೆ ಪ್ರೀತಿಸಬೇಕೆಂಬೋ ಹಂಬಲ ಇದ್ದೇ ಇತ್ತು. ಪ್ರೀತಿಯ ಕಲ್ಪನೆ ಅದೇ - ಚುಂಬನ, ಆಲಿಂಗನ. ಅದರ ಮುಂದಿನದ್ದು ಇವನ ಕಲ್ಪನೆಯಾಚೆಗಿನದ್ದು. ಚಿಕ್ಕ ವಯಸ್ಸಿಗೆಯೇ ಆಲಿಂಗನದ, ಚುಂಬನದ ಬಗ್ಗೆ ಅಷ್ಟು ಕುತೂಹಲ, ಆಸೆ ಹುಟ್ಟಲಿಕ್ಕೆ ದೊಡ್ಡವರಿನದ್ದೂ ಪಾಲುಂಟೇನೋ. ಯಾವುದನ್ನ ಹೆಚ್ಚು ಮಡಿಯಾಗಿ ಮುಚ್ಚಿಟ್ಟು, ಕಿಟ್ಟಿಯನ್ನ ಸಾಧ್ಯವಾದಷ್ಟು ಅದರಿಂದ ದೂರವಿರುವ ಹಾಗೆ ದೊಡ್ಡವರೂ, ಹಾಗೆಯೇ ಸಿನೆಮಾಗಳು ತೋರಿಸ್ತಾ ಇದ್ದವೋ ಅವು ತನಗೂ  ಬೇಕೆನಿಸುವಂತಹ ಆತುರವಾಯಿತು ಕಿಟ್ಟಿಗೆ‌. ಕಿಟ್ಟಿಯ ೧೪ನೇ ವಯಸ್ಸಿನವರೆಗೂ ಆತ ದಿನಾ ಬೆಳಿಗ್ಗೆ ದೇವರಲ್ಲಿ ಕೇಳತ್ತಿದ್ದದ್ದು ಒಂದೆಯೇ - ಆದಷ್ಟು ಬೇಗ ತಾನು ದೊಡ್ಡವನಾಗಬೇಕು ಹಾಗೂ ತನ್ನನ್ನ ಹೆಚ್ಚು ಪ್ರೀತಿಸುವ ಹುಡುಗಿ ಸಿಗಬೇಕೆಂದು - ಪ್ರೀತಿಯೆಂದರೆ ಅದೇ ಮೇಲೆ ಹೇಳಿದ್ದು‌. ಆದರೆ ಇದ್ದಕ್ಕಿದ್ದ ಹಾಗೆ ಕಿಟ್ಟಿಯ ಒಳಗೆ ಒಂದು ರೂಪಾಂತರವೇ ಸಂಭವಿಸಿ ಹೋಯಿತು. ಇದ್ದಕ್ಕಿದ್ದ ಹಾಗೆ ಕಿಟ್ಟಿ ಭಗವದ್ಗೀತೆ ಓದಲಾರಂಭಿಸಿದ. ಗಾಂಧಿಯ ಕಥೆ ಕೈಗಿರಿಸಿದ. ವಿವೇಕ ನುಡಿಗಳು ಕಿವಿ ಮನದಾಳದಲ್ಲಿರಿಂಗಣಿಸಲಾರಂಭಿಸಿದವು. ಯಃಕಶ್ಚಿತ್ ಪ್ರೀತಿಯೆಂಬ ದೈಹಿಕ ಸುಖಕ್ಕಾಗಿ ಮೋಕ್ಷಪ್ರಾಪ್ತಿ ಕೈತಪ್ಪೀತು ಎನ್ನುವ ಅರಿವು ೧೫ ನೇ ವಯದ ಹುಡುಗನಲ್ಲಿ ಬಂದದ್ದು ಎಂದಾದರೂ ಕಂಡಿದ್ದುಂಟೇ? ಕಿಟ್ಟಿ ಬದಲಾಗಿದ್ದ. ದಿನಾ ಸ್ನಾನ ಮಾಡಿ ಪಂಚೆಯುಟ್ಟು, ದೇವರಿಗೆ ಕೈ ಮುಗಿದು ಒಂದಷ್ಟು ಸ್ತೋತ್ರಗಳನ್ನ ಹೇಳಿದಾಗ ಮನದಲ್ಲಿನೆಮ್ಮದಿ. ಶಾಲೆಯಿದ್ದಕ್ಕೂ ಸ್ತೋತ್ರಗಳೇ ತಲೆಯಲ್ಲಿ ತುಂಬಿರುತ್ತಿದ್ದವು. ಮತ್ಯಾವ ಯೋಚನೆಗಳೂ ತಲೆಯೊಳಗೆ ತೂರದ ಹಾಗೆ ಕಿಟ್ಟಿ ಹೂಡಿಕೊಂಡಿದ್ದ ಉಪಾಯವಿದು‌.‌ ಒಮ್ಮೊಮ್ಮೆ ಹನುಮಾನ್ ಚಾಲೀಸ ಓದುತ್ತಲೇ ಪುಸ್ತಕದ ಹಿಂದೆ ಅದರ ಪ್ರಕಾಶನದ ವಿಳಾಸವನ್ನೆಲ್ಲಾ ಓದಿದ.‌ ತಲೆಯೊಳಗೆ ಅಚ್ಚತ್ತಿಹೋಯಿತು. ವಿಳಾಸವೂ ಹನುಮಾನುಚಾಲೀಸದ ಭಾಗವಾಗಿ ಹೋಯಿತು. ಇಷ್ಟೆಲ್ಲಾ ಮಾರ್ಪಾಡು ಕಿಟ್ಟಿಯೊಳಗಾಗಲು ಕಾರಣವೂ ಉಂಟು. 

Monday, March 28, 2022

ಕಳ್ಳರು.... ! (ಕಿಟ್ಟಿಯ ಕಥೆಗಳು)

ದೇವಸ್ಥಾನದ ಆವರಣದಲ್ಲೊಂದು ಅರಳಿ ಕಟ್ಟೆ‌, ಕೆಲ ನಾಗ ವಿಗ್ರಹಗಳು, ನವಗ್ರಹ ವಿಗ್ರಹಗಳು. ಭಾನುವಾರದಂದು ಕಿಟ್ಟಿ, ಅಕ್ಕ ಹಾಗೂ ಅಭಿಯ ಬಿಡಾರ ಅಲ್ಲೇ. ಅಲ್ಲೊಂದು ಅವರದ್ದೇ ಲೋಕ. ಮೂವರೂ ಸೇರಿ ಅಲ್ಲಿದ್ದ ವಿಗ್ರಹಗಳಿಗೆ ನೀರು ಹಾಕಿ ತೊಳೆದು, ಕುಂಕುಮ ಇಟ್ಟು, ಹಾರಗಳನ್ನ ಹಾಕಿ ಅದನ್ನೆಲ್ಲಾ ನೋಡಿ ಸಂಭ್ರಮಿಸ್ತಿದ್ದರು. ಆ ಹಾರಗಳನ್ನೂ ಅವರೆ ತಯಾರಿಸ್ತಿದ್ದರು. ಒಂದಷ್ಟು ಅರಳಿ ಎಲೆಗಳನ್ನ ಕಿತ್ತು, ದಾರಕ್ಕೆ ಆ ಅರಳಿ ಎಲೆಗಳನ್ನ ಪೋಣಿಸಿ, ಅರಳೀ ಹಾರವನ್ನ ತಯಾರಿಸೋದು ಮೂವರಿಗೂ ಸಂಭ್ರಮದ ಕೆಲಸ.