Thursday, July 30, 2015

ಅಷ್ಟಮಿಯ ರಾತ್ರಿಯೂ - ಅರಿವೆಂಬ ಮರಿಚಿಕೆಯೂ


ನನ್ನದು ಯಾವೂರೆಂದು ಹೇಳಲಿ? ೫ ವರ್ಷಗಳಿಗೊಮ್ಮೆ ಅಪ್ಪ ಕರೆದುಕೊಂಡು ಹೋದ ಊರೆಲ್ಲಾ ನನ್ನದೇ. ಮಂಡ್ಯ, ಶಿವಮೊಗ್ಗ, ಭದ್ರಾವತಿ, ಹಾಸನ, ಕೊನೆಗೀಗ ಮೈಸೂರು. ಇದೊಂದು ರೀತಿ ಶಿವಮೊಗ್ಗದಿಂದ ಮೈಸೂರಿನ ಟ್ರೈನ್ ಹತ್ತಿದಾಗೆ. ಅಪ್ಪನ ರಿಟೈರ್ಮೆಂಟ್ ಇಲ್ಲಿಯೆ ಮೈಸೂರಲ್ಲಿಯೇ ಎಂದು ಬ್ಯಾಂಕಿನವರು ನಿಶ್ಚಯಿಸಿದ್ದರು. ಊರೂರು ಸುತ್ತುತ್ತ, ಹೊಸ ಹೊಸ ಪರಿಸರಗಳಿಗೆ ನಮ್ಮನ್ನು ತೆರೆದುಕೊಳ್ಳುತ್ತ, ಅಷ್ಟಾಗಿ ಏನನ್ನೂ ಅನುಭವಿಸಲಾಗದೆ, ಅಮ್ಮನ ಭಯದ ನೆರಳಲ್ಲೇ ನಾನು ಅಕ್ಕ ಬೆಳೆದದ್ದು. ಮೈಸೂರಿಗೆ ಬರುವುದರೊಳಗೆ ,ಅಕ್ಕ, ಓದೆಂಬ ಮಹಾಸಾಗರವನ್ನು ಆಗಲೆ ದಾಟಿದ್ದಾಗಿತ್ತು. ಅವಳ ಅಂಕಪಟ್ಟಿ ಬಹಳ ಬಡಕಲಾಗಿದ್ದರೂ ಅವಳಿಗೆ ಯಾವ ಕೊರಗೂ ಇದ್ದಿರಲಿಲ್ಲ. ಕಾರಣ ಸ್ಪಷ್ಟ - ಪ್ರೀತಿ. ಇದು ಮನೆಯಲ್ಲಿ ತಿಳಿದದ್ದು ಇವಳ ಮದುವೆಯ ಪ್ರಸ್ತಾಪ ಬಂದಾಗ. ಕೈಯಲ್ಲೇ ತುಪ್ಪವಿದ್ದುದರಿಂದ ವರಾನ್ವೇಷಣೆಯಾಗಲಿ, ವರನ ಮನೆಯವರ ಬಗೆಗಿನ ವಿಚಾರಣೆಯಾಗಲಿ ಮಾಡುವ ತಾಪತ್ರಯ ಒದಗಿ ಬರಲಿಲ್ಲ. ಗ್ರಹ ನಕ್ಷತ್ರಗಳ, ಮನಸ್ಸುಗಳ ತಿಕ್ಕಾಟಗಳ ನಡುವೆಯೂ ಇವಳ ಪ್ರೇಮ ಜಯಿಸಿ, ಇವಳಿಷ್ಟ ಪಟ್ಟ ಆಂಧ್ರದ ಅತ್ತೆಯ ಮಗನೊಡನೆಯೇ ಇವಳ ಪಾಣಿಗ್ರಹಣ ನೆರವೇರಿತು. ಇವಳನ್ನು ಅಲ್ಲಿಯ ಮನೆ ತುಂಬಲು ನಾವು ಒಂಗೋಲಿಗೆ ಹೊರಟಿದ್ದೂ ಆಯಿತು.