Sunday, March 28, 2021

ವಾಮಿ

 ವಾಮಿಯ ಬಗ್ಗೆ ಅಷ್ಟಾಗಿ ಕಿಟ್ಟಿಗೆ ನೆನಪಿನಲ್ಲುಳಿದಿರಲಿಲ್ಲ. ಉಳಿಯೋದಕ್ಕೆ ವಾಮಿಯೇನು ದೊಡ್ಡವನೆನಿಸಿಕೊಂಡ ವ್ಯಕ್ತಿಯೂ ಆಗಿರಲಿಲ್ಲ ಅಥವಾ ಕಿಟ್ಟಿಯ ಮೇಲೆ ರಾಮು, ಅಭಿಯರ ಹಾಗೆ ಪ್ರಭಾವ ಬೀರಿದವನೂ ಅಲ್ಲ. ಕೇವಲ ವಾಮಿಯಷ್ಟೆ! ಇದ್ದಕ್ಕಿದ್ದ ಹಾಗೆ ವಾಮಿಯೆಂಬ ವ್ಯಕ್ತಿಯೊಬ್ಬನ ನೆನಪಾಯಿತು. ಅವನ ಆರೇಳು ವಯಸ್ಸಿನ ಕಾಲಘಟ್ಟದಲ್ಲಿ ಸುಳಿದು ಹೋದ ಹೆಸರದು. ಇಂದೇಕೋ ನೆನಪಾಯಿತು  - ಸುಮಾರು ದಶಕಗಳೇ ಕಳೆದು ಹೋದ ಮೇಲೆ! ಏಕೆ? ನೆನಪಿಗೊಂದು ನೆಪವಿರಬೇಕಲ್ಲ. ಕಿಟ್ಟಿ ಬಾಲ್ಯದ ಊರನ್ನ ತೊರೆದೇ ಇಪ್ಪತ್ತು ವರ್ಷಗಳ ಮೇಲಾಗಿದ್ದವು. ಹಳೇ ಮುಖಗಳನ್ನ ಸುಮಾರು ವರ್ಷಗಳ ತರುವಾಯ ನೋಡಿದಾಗ ನೆನಪಿನ ಜಲಪಾತವೇ ಧುಮ್ಮಿಕ್ಕಿ ಹರಿಯುತ್ತದೆ. ಎಲ್ಲಿಲ್ಲದ ಕುತೂಹಲ ಆಕ್ರಮಿಸಿಬಿಡುತ್ತದೆ. ಬಾಲ್ಯದಲ್ಲಿಯ ನೆಂಟರುಗಳನ್ನ ಸುಮಾರು ವರ್ಷಗಳ ತರುವಾಯ ಕಿಟ್ಟಿ ಸಂಧಿಸಿದಾಗ, ಉಕ್ಕಿದ ನೆನಪಿನ ಜಲಧಾರೆಯಲ್ಲಿ ಹರಿದು ಬಂದೊಂದು ಮೀನು ವಾಮಿ!

“ಓಹ್! ಚಿತ್ತ (ಚಿಕ್ಕಪ್ಪ).. ವಾಮಿ ಅಂತಿದ್ನಲ್ರಿ.. ಅವ್ನು ಅವ್ನು? ಇನ್ನೂ ಬರ್ತಿದಾನ ದೇವಸ್ಥಾನಕ್ಕೆಲ್ಲಾ?”  - ಸುಮಾರು ದಶಕಗಳ ತರುವಾಯ ಮನೆಗೆ ಬಂದಿದ್ದ ಚಿಕ್ಕಪ್ಪನನ್ನ ಕಿಟ್ಟಿ ಕೇಳಿದ.

“ಯಾವನು ಅವ್ನಾ? ಅವ್ನೆಲ್ಲಿದ್ದ. ಹೋಗ್ ಎಷ್ಟೋ ವರ್ಷ ಆಯ್ತಲ್ಲೋ! ನೀವು ಹೋಗಿ ಒಂದು ಐದಾರು ವರ್ಷಕ್ಕೆ ಹೋಗ್ಬಿಟ್ಟ ಕಣೋ”

“ಅಯ್ಯೋ! ಹೌದಾ ಪಾಪ. ಅಷ್ಟು ಚಿಕ್ಕ ವಯಸ್ಸಿಗೇನೆ? ಏನಾಗಿತ್ತು?”

“ಅವ್ನಿಗೆಂಥದ್ದೋ ಚಿಕ್ಕ ವಯಸ್ಸು. 40 ಆಗಿತ್ತು ಅನ್ಸತ್ತೆ ಹೋಗ್ಬೇಕಾದ್ರೆ. ಎನಾಗಿತ್ತೋ ಎನೋ?!

ವಾಮಿಯ ಮುಖ ಚರ್ಯೆಯೂ ಕಿಟ್ಟಿಗೆ ಅಷ್ಟಾಗಿ ನೆನಪಿನಲ್ಲಿರಲಿಲ್ಲ. ಕೇವಲ ಅವನ ಹೊರಬಿದ್ದತ್ತಿಂದ್ದ ಕಣ್ಣು ಗುಡ್ಡೆಗಳು, ಬಾಯಿಯಿಂದಾಚೆಗೇ ಇರುತ್ತಿದ್ದ ನಾಲಿಗೆ, ಆತ ಹಾಕುತ್ತಿದ್ದ ಅಂಗಿ ಚೆಡ್ಡಿ ಅಷ್ಟೇ ಕಿಟ್ಟಿಗೆ ನೆನಪು. ಕಿಟ್ಟಿಯ ಆಗಿನ ದೃಷ್ಟಿಯಲ್ಲಿ ವಾಮಿ ತನಗಿಂತ ಒಂದೈದು ವರ್ಷಗಳು ದೊಡ್ಡವನಿದ್ದಿರಬಹುದೇನೋ ಎಂದಷ್ಟೇ! ವಾಮಿಯ ಕುಬ್ಜ ಕಾಯ, ಕಿಟ್ಟಿಯ ಧಾಟಿಯಲ್ಲೇ ಆಡುತ್ತಿದ್ದ ಮಾತುಗಳು ಪ್ರಾಯಶಃ ಕಿಟ್ಟಿಯಲ್ಲಿ ಆ ಚಿತ್ರಣವನ್ನ ತಂದಿದ್ದಿರಬಹುದು. ವಾಮಿಯನ್ನ ದೊಡ್ಡವರ್ಯಾರು ಮಾತಾನಾಡಿಸುತ್ತಿದ್ದಿರಲಿಲ್ಲ. ಯಾವಾಗಲೂ ಮಕ್ಕಳೊಟ್ಟಿಗೆ ಇರುತ್ತಿದ್ದ. ಜೊತೆಗೆ ಅಂಗಿ ಚೆಡ್ಡಿಯೇ ಹಾಕಿರುತ್ತಿದ್ದ. ಕಿಟ್ಟಿ ಹಾಗೂ ಅವನ  ಪಟಾಲಂಗೆ ವಾಮಿ ಒಂದು ರೀತಿ ಅವರು ದಾರ ಕಟ್ಟಿ ಹಿಂಸಿಸುತ್ತಿದ್ದ ಮಳೆ  ಚಿಟ್ಟೆಯ ಹಾಗೆ. ವಾಮಿಗೆ ಸುಮ್ಮ ಸುಮ್ಮನೆ ಹೊಡೆದು ಓಡೋದು, ಆತನ ತೊದಲು ನುಡಿಗಳನ್ನ ಅಣಕಿಸಿ ನಗೋದು ಇವರಿಗೊಂದು ನಿತ್ಯಕಾಯವಾಗಿಹೋಗಿತ್ತು. ಪ್ರತಿ ದಿವಸ ಪ್ರಸಾದಕ್ಕೆಂದು ವಾಮಿ ತಪ್ಪದೇ ದೇವಸ್ಥಾನಕ್ಕೆ ಬರುತ್ತಿದ್ದ. ಎಲ್ಲಿಂದ ಬರುತ್ತಿದ್ದ? ಎಲ್ಲಿಗೆ ಹೋಗುತ್ತಿದ್ದ? ಕಿಟ್ಟಿಗೆ ಅಂದು ಅದೆಲ್ಲಾ ಬೇಡದ ವಿಷಯವಾಗಿತ್ತು. ಕೇವಲ ವಾಮಿಯಿದ್ದರೆ ಸಾಕಿತ್ತಷ್ಟೆ! ಆದರಿಂದೇಕೋ ಅದೆಲ್ಲಾ ಕುತೂಹಲಗಳೂ ಹರಿದು ಬಂದುಬಿಟ್ಟವು.

ಮನಸ್ಸಲಿನಲ್ಲೆ ಅಂದುಕೊಂಡ – ಆಹ್! ವಾಮಿ. ಅದ್ಯಾರು ಆ ಹೆಸರು ಇಟ್ಟದ್ದು. ಏನದರ ಅರ್ಥ? ಅವನನ್ನ ನೋಡಿಕೊಳ್ತಿದ್ದೋರು ಯಾರು? ಊಟ ಯಾರು ಹಾಕ್ತಿದ್ದರು?’ ಹೀಗೆ ಎಂದೋ ಸತ್ತು ಹೋದ ವಾಮಿ ಇಂದು ಕಿಟ್ಟಿಯ ತಲೆಯನ್ನ ಕೊರೆಯಲಾರಂಭಿಸಿದ. ಎಲ್ಲಾ ಪ್ರಶ್ನೆಗಳನ್ನೂ ಚಿಕ್ಕಪ್ಪನಿಗೆ ರಪರಪನೆ ಕೇಳಿದ. ಎಲ್ಲಕ್ಕೂ ಚಿಕ್ಕಪ್ಪನದ್ದು ಒಂದೇ ಉತ್ತರ –

ಯಾವನಿಗೊತ್ತೋ?’ 

ಅಲ್ಲ! ಪಾಪ.. ಅವನು ಬರದೇ ಇದ್ದಾಗ ನಿಮಗೇನು ಅನ್ನಿಸ್ಲಿಲ್ವಾ?’

ಇದೊಳ್ಳೆ ಮಾರಾಯ. ನಮಗೇನನ್ನಿಸ್ಬೇಕೋ! ಅವನ್ಯಾರೋ ಬರ್ತಿದ್ದ ಹೋಗ್ತಿದ್ದ. ಒಂದಿನ  ಬಂದು ಯಾರೋ ಹೇಳಿದ್ರು ಸತ್ತು ಹೋದ ಅಂತ. ಅಷ್ಟೇ!

ಅಷ್ಟೇನಾ?! ಮತ್ತೆ ಅವ್ನ್ಯಾರು ಏನು?’

ಯಾವನಿಗ್ಗೊತ್ತೋ! ಸರಿ ಇರೋರ ಬಗ್ಗೇನೆ ನಮಗೆ ಸರಿಯಾಗಿ ಗೊತ್ತಿರೋದಿಲ್ಲ. ಅಥವಾ ನಾವು ತಿಳ್ಕೋಳ್ಳೊಕ್ಕೆ ಹೋಗೋದಿಲ್ಲ. ಇನ್ನು ಅವನ್ಯಾರೋ ಮಂಕು ಬಗ್ಗೆ ಯಾವನೋ ತಿಳ್ಕೋಳೊಕ್ಕೆ ಹೋಗ್ತಾನೆ! 

ಹ್ಹಾ! ಹ್ಹಾ! ಹೌದಲ್ಲ ಕಿಟ್ಟಿಯ ಬೇರೆಡೆ ಎಲ್ಲೋ ನೋಡುತ್ತಾ ಕುಳಿತ. ಯಾರದು ವಾಮಿ? ಯಾಕೆ ಆ ಹೆಸರು? ಎಲ್ಲಿದ್ದ? ಎಲ್ಲಿಗೆ ಹೋಗ್ತಿದ್ದ? ಹೇಗೆ ಸತ್ತ?’ ಎಲ್ಲವೂ ಪ್ರಶ್ನೆಗಳಗಿಯೇ ಉಳಿದವಾದರೂ ಅದೇಕೋ ಕಿಟ್ಟಿಯ ತಲೆಯನ್ನು ತಿನ್ನಹತ್ತಿದವು. ಜಗತ್ತಿಗೆ ಸತ್ತಿದ್ದ ವಾಮಿ ಇಂದು ಕಿಟ್ಟಿಯ ತಲೆಯಲ್ಲಿ ಬದುಕೆದ್ದ. 

No comments:

Post a Comment