Saturday, May 29, 2021

ತಾನಿಯಾಮ

 

ನನ್ನ ಜೀವನ ಒಂದು ರೀತಿ ತೂತಾದ ಬಿಂದಿಗೆಯನ್ನು ನೀರಿನಿಂದ ತುಂಬಿಸುವಂತ ಪ್ರಯತ್ನದಂತೆ ತೋರುತ್ತದೆ.  ನೀರು ನಿಲ್ಲದೆ ಹರಿದು ಹೋಗುತ್ತಿರುವ ಹಾಗೆ  ನನ್ನ ಹಿಂದಿನ ಕಾಲೇಜಿನ ನೆನಪುಗಳೂ, ಸ್ನೇಹಿತರೂ ಎಲ್ಲರೂ ಸ್ಮೃತಿಯಿಂದ ಅದೆಷ್ಟು ಬೇಗ ಮಾಯವಾಗಿ ಹೋಗಿಬಿಡುತ್ತಾರೆ. ಒಪ್ಪುತ್ತೇನೆ, ನನ್ನ ಹಿಂದಿನ ಜೀವನದ ನೆನಪಿನ ಅಥವಾ ಅನುಭವಗಳ ಶೇಖರಣೆಗಳೇ ನಾನು ಎನ್ನುವುದರ ನಿರ್ಮಾತೃಗಳು! ನಾನು ಮರೆತಿದ್ದೇನೆಂದರೂ ಅವು ಸುಪ್ತ ಲೋಕದ ಹಿಡಿತದಲ್ಲಿ ಬಂಧಿಗಳಾಗಿದ್ದೇ ಇರುತ್ತವೆ!

ಹಾಗೇ ಕುಳಿತು ಬಲವಂತವಾಗಿ ಹಿಂದಿನ ಎಳೆಗಳನ್ನು ಒಂದೊಂದಾಗೆ ಬಿಡಿಸುತ್ತಾ ಹೋದಂತೆ ನೋವು, ಸುಖ, ಕೋಪ ಇನ್ನೇನೇನೋ ಭಾವನೆಗಳು ಸಮ್ಮಿಳಿತವಾಗಿ ಅವುಗಳ ಕೊನೆಯ ಫಲಿತ ನನ್ನ ಮೇಲೆಯೇ ನನಗೆ ಉಂಟಾಗುವ ತಿರಸ್ಕಾರವಾದ್ದರಿಂದ ನಾನು ನೆನಪಿನ ಮರುಕಳಿಕೆಯ ಚಟುವಟಿಕೆಯನ್ನು ನಿಲ್ಲಿಸಿಬಿಡುತ್ತೇನೆ! ನನ್ನ ಗತಕಾಲದ ಪ್ರತೀ ಸನ್ನಿವೇಶದಲ್ಲೂ ನಾನೊಬ್ಬ ಅಸಹಾಯಕ, ಮೂಕ ವ್ಯಕ್ತಿ! ಅದೇಕೆ ಗೊತ್ತಿಲ್ಲ. ಇದೇ ಕಾರಣಕ್ಕೇನೋ ತನ್ನನ್ನು ಕಂಡುಕೊಳ್ಳಲಾಗದೆ, ತೊಳಲಾಡುವ ಟ್ರ್ಯಾಜೆಡಿ ಕಥೆಗಳು ನನಗೆ ಹೆಚ್ಚು ರುಚಿಸುತ್ತಿದ್ದದ್ದು. 

ಒಂದು ಸಂಜೆಯ ನೆನಪಿನ ಮರುಕಳಿಕೆಯ ಚಟುವಟಿಕೆಯಲ್ಲಿ ಜೆನ್ನಿ ತೀರ ನೆನಪಾದ! ಜೆನ್ನಿ ನಾನು ಓದಿದ್ದ ಯಾವುದೋ ಕಥೆಯ ಕಥಾವಸ್ತು. ಜೀವನದಲ್ಲಿ ಏನೇನನ್ನೋ ಸಾಧಿಸಲೇಬೇಕೆನ್ನುವ ಪಣ ತೊಟ್ಟವನು ಇದ್ದಕ್ಕಿದ್ದ ಹಾಗೆ ನಿಗೂಢ ರೀತಿಯಲ್ಲಿ ಜೀವನ ಸಾಕೆನಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ! ಕಥೆ  ಇಷ್ಟೇ! ಹೀಗೆ ಜೀವನ ಸಾಕೆನಿಸಿ ಅದನ್ನು ಅಂತ್ಯಗೊಳಿಸಿದವರು ಅದೆಷ್ಟು ಮಂದಿಯೋ! ಮನುಷ್ಯರ ಮನಸ್ಸಿನಲ್ಲಿ ಓಡುವ ವಿಚಾರಧಾರೆಗಳನ್ನು ಊಹಿಸಲು ಯಾರಿಂದಾದರೂ ಸಾಧ್ಯವಿದೆಯೇ? ಮೇಲ್ನೋಟಕ್ಕೆ ಜೀವನ ಅತ್ಯುನ್ನತವಾಗಿದ್ದರೂ ಒಳಗೊಳಗೇ ಮಾನಸಿಕ ಶಕ್ತಿ ಕುಗ್ಗಿ ಸತ್ತವರು ಅದೆಷ್ಟೋ. ಜೆನ್ನಿಯ ಆತ್ಮಹತ್ಯೆಯೂ ಹಾಗೆಯೇ ಅಲ್ಲವೇ! ಸಂಸಾರ, ಕೆಲಸ ಯಾವುದರಲ್ಲೂ ಎಲ್ಲೂ ಮೇಲ್ನೋಟಕ್ಕೆ ತಾಪತ್ರಯವಿಲ್ಲದ ಜೆನ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದಾದರೂ ಊಹಿಸಲು ಸಾಧ್ಯವೇ? ಮೇಲ್ನೋಟಕ್ಕೇ ಒಂದು, ಒಳಗೊಳಗೇ ಇನ್ನೊಂದು! ಇದಕ್ಕೆ ಮೇಧಾವಿಗಳೂ ಹೊರತಲ್ಲ. ಜೆನ್ನಿಯ ಸಾವನ್ನು ನೆನಪಿಸಿಕೊಂಡಾಗ ಅದರೊಟ್ಟಿಗೇ ನೆನಪಿನಾಳದಿಂದ ಮತ್ತಷ್ಟು ನೆನಪುಗಳು ಮಿಳಿತಗೊಂಡು ಬಂದು, ಕೆಲವು ವ್ಯಕ್ತಿತ್ವಗಳ ಚಿತ್ರ ಕಣ್ಮುಂದೆ ಮೂಡಿ ಒಳಗೆ ಪುಳಕಿತಗೊಳಿಸುತ್ತವೆ. ಹಾಂ! ಒಬ್ಬ ಗಣಿತಜ್ಞ ನೆನಪಾಗುತ್ತಾನೆ. ಈ ಹೆಸರನ್ನು ಎಲ್ಲೋ ಕೆಲವು ಮಂದಿ ಕೇಳಿದ್ದಿರಬಹುದು – ಯುಟಾಕಾ ತಾನಿಯಾಮ.

ಅವನ ಹುಟ್ಟು ಹೆಸರು ಟೊಯೊ ತಾನಿಯಾಮ. ಆದರೆ ಆತನ  ಹೆಸರಲ್ಲಿ ಟೊಯೊ ಎನ್ನುವುದನ್ನು ಸೂಚಿಸಲು ಇದ್ದ ಚೈನೀಸ್ ಚಿಹ್ನೆಯನ್ನು ಜನರು ಯುಟಾಕಾ ಎಂದು ಕರೆಯಲು ಆರಂಭಿಸಿದ್ದರಿಂದ, ಆತನ  ಹೆಸರೂ ಅದೇ  ಆಯಿತು. ಎರಡನೆಯ ಮಹಾಯುದ್ಧದ ಹೊಡೆತದಿಂದ ಜಪಾನ್ ಇನ್ನೂ ಚೇತರಿಸಿಕೊಳ್ಳುತ್ತಿದ್ದ ಕಾಲವದು. ಆಗೆಲ್ಲಾ ತಾನಿಯಾಮನಂಥ ಸಾಧಾರಣ ಯುವಕನಿಗೆ 81 ಚದರ ಅಡಿಯ (ಅಂದರೆ 9 ಅಡಿ ಬೈ 9 ಅಡಿ) ರೂಮು ಸಿಕ್ಕರೇನೆ ಅದೊಂದು ಮಹಲಿನಂತೆ. ತಾನಿಯಾಮನಿದ್ದ ಆ ರೂಮಿನಲ್ಲಿ ಇನ್ನೇನಿಡಲು ಸಾಧ್ಯ – ಕೈ ತೊಳೆಯಲು ಸಿಂಕೊಂದನ್ನು ಬಿಟ್ಟು? ಎರಡನೆಯ ಅಂತಸ್ತಿನ ಕೊನೆಯ ರೂಮದು. ಪ್ರತೀ ಅಂತಸ್ತಿಗೂ ಒಂದು ಡಸನ್ನಿನಷ್ಟು ರೂಮುಗಳಿದ್ದು, ಎಲ್ಲಕ್ಕೂ ಸೇರಿ ಒಂದೇ ಪಾಯಿಖಾನೇ. ಸ್ನಾನವೇನಾದರೂ ಮಾಡಲಿಚ್ಛಿಸಿದರೆ ಹತ್ತಿರದಲ್ಲೇ ಇದ್ದ ಸಾರ್ವಜನಿಕ ಸ್ನಾನಗೃಹಕ್ಕೇ ತೆರಳಬೇಕಿತ್ತು! ಒಮ್ಮೆ ಹಾಗೆ ಕಲ್ಪಿಸಿಕೊಳ್ಳಿ – ಇಡೀ ವಿಶ್ವದ ಗಣಿತ ಲೋಕವೇ ಮೆಚ್ಚಿ ಕೊಂಡಾಡಿದ ಗಣಿತಜ್ಞನೊಬ್ಬ ಇಂಥಾ ಸಾಧಾರಣ ಬದುಕನ್ನು ಅತೀ ಸಹಜವೆನ್ನುವಂತೆಯೇ, ಯಾವುದೇ ದೂರಿಲ್ಲದೇ ಬದುಕಿದ್ದ!

ತಾನಿಯಾಮ

ತಾನಿಯಾಮ ಮತ್ತು ಗೊರೊ ಶಿಮುರಾರ ಪರಿಚಯವಾದದ್ದು ಟೊಕ್ಯೊ ವಿಶ್ವವಿದ್ಯಾಲಯದಲ್ಲಿ. ತಾನಿಯಾಮನ ಬಗ್ಗೆ ಒಂದಷ್ಟು ಹೆಚ್ಚಿನದಾಗಿ ನಮಗೆ ತಿಳಿದಿದೆಯೆಂದರೆ ಶಿಮುರಾರಿಂದಲೇ! ತಾನಿಯಾಮನಿಗಿಂತ ಚಿಕ್ಕವರೇ ಆದರೂ ಶಿಮುರಾರಿಗೆ ತಾನಿಯಾಮನ ಮೇಲೆ ಹೊಟ್ಟೆ ಕಿಚ್ಚು! ಯಾವುದಕ್ಕೆ ಎಂದು ಕೇಳಿದರೆ ಆಶ್ಚರ್ಯ ಪಡುತ್ತೀರಿ! ಗಣಿತದಲ್ಲಾಗಲೀ
, ಜೀವನದಲ್ಲಾಗಲೀ ತಪ್ಪುಗಳು ಕಡಿಮೆ ಆದಷ್ಟು ಒಳಿತು! ಸರಿಯಾದ ಉತ್ತರದೆಡೆಗೆ, ಸರಿಯಾದ ವಿಧಾನದಲ್ಲಿ ನಮ್ಮ ಮೆದುಳು ಯೋಚಿಸಬೇಕೆ ವಿನಃ ತಪ್ಪು ಮಾಡುವೆಡೆಗಲ್ಲ! ಅಲ್ಲವೇ? ಆದರೆ ಈ ಹುಚ್ಚುತನ ನೋಡಿ – ಶಿಮುರಾರಿಗೆ ತಾನು ತಾನಿಯಾಮನ ಹಾಗೆ ತಪ್ಪು ಮಾಡಲಿಕ್ಕಾಗುತ್ತಿಲ್ಲವೆಂದು ಬೇಸರವಿತ್ತಂತೆ. ಶಿಮುರಾ ಒಂದೆಡೆ ಹೇಳುತ್ತಾರೆ – ತಾನಿಯಾಮನಲ್ಲಿ ಒಂದು ವಿಶಿಷ್ಟವಾದ ಸಾಮರ್ಥ್ಯವಿತ್ತು, ತಪ್ಪು ಮಾಡುವುದು, ಸರಿಯಾದ ದಿಶೆಯಲ್ಲಿ ತಪ್ಪು ಮಾಡುವುದು. ಆತನಲ್ಲಿದ್ದ ಆ ಸಾಮರ್ಥ್ಯ ನಿಜವಾಗಿಯೂ ನನ್ನಲ್ಲಿ ಅಸೂಯೆಯನ್ನು ಹುಟ್ಟಿಸಿತು. ನಾನೂ ಆತನ ಹಾಗೆಯೇ ಒಳ್ಳೆಯ ತಪ್ಪುಗಳನ್ನು ಮಾಡುವುದನ್ನು ಅನುಕರಿಸಲೆತ್ನಿಸಿದೆ. ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ. ಒಳ್ಳೆಯ ತಪ್ಪುಗಳನ್ನು ಮಾಡುವುದು ಬಹಳ  ಕಷ್ಟ”. ಒಳ್ಳೆಯ ತಪ್ಪುಗಳಿಂದಲೇ ಅಲ್ಲವೇ  ಹೊಸ  ಹೊಸ ಸಿದ್ಧಾಂತಗಳು, ವಿಧಾನಗಳು ಹುಟ್ಟುವುದು?

ಸುಮಾರು 300 ವರ್ಷಗಳ ವರೆಗೆ ಗಣಿತ ಲೋಕದ ನಿದ್ದೆಗೆಡಿಸಿ ತಾನು ಶಾಶ್ವತ ನಿದ್ದೆಗೆ ಜಾರಿದ ಕಟುಕ ಫರ್ಮಾನ (Fermat) ಬಗ್ಗೆ ನಿಮಗೆ ತಿಳಿದಿರಬೋದು! ಸಾಯುವ ಮುನ್ನ ತನ್ನ ಕೊನೆಯ ಪ್ರಮೇಯವನ್ನು (Fermat’s Last Theorem) ನೋಟ್ ಪುಸ್ತಕದಲ್ಲಿ ಬರೆದು, ಅದಕ್ಕೆ ಪುರಾವೆಯೂ ತನ್ನ ಬಳಿಯೇ ಇದ್ದು ಅದನ್ನು ಆ ಮಾರ್ಜಿನ್ ನಲ್ಲಿ ಬರೆಯಲು ಜಾಗ  ಸಾಲದೆಂದು ಹೇಳಿ ಫರ್ಮಾ ಚಿರನಿದ್ರೆಗೆ ಜಾರಿದಂದಿಂದ ಮುಂದಿನ 300 ವರ್ಷಗಳ ಕಾಲ ಜನ ಆ ಪ್ರಮೇಯದ ಬೆನ್ನು ಬಿದ್ದದ್ದು ಇತಿಹಾಸದ ಒಂದು ಹುಚ್ಚುತನವೇ ಸರಿ! ಪ್ರಾಯಶಃ ತಾನಿಯಾಮ-ಶಿಮುರಾರಿಗೂ ಸಹ ಅಂದು ತಿಳಿದಿರಲಿಲ್ಲವೇನೋ ತಾವೂ ಈ ಪ್ರಮೇಯದ ಬೇಟೆಯ ಪಾಲುದಾರರಾಗುತ್ತೇವೆಂದು! 1996ರಲ್ಲಿ ಆಂಡ್ರ್ಯೂ ವೈಲ್ಸ್ ತನ್ನ ಚಿಕ್ಕಂದಿನ ಕನಸಾದ ಫರ್ಮಾನ ಕೊನೆಯ ಪ್ರಮೇಯವನ್ನು ಸಾಧಿಸುವುದನ್ನು ಸಾಕಾರಗಳಿಸಿಕೊಂಡು ಇಡೀ  ವಿಶ್ವವನ್ನೇ ನಿಬ್ಬೆರಗಾಗಿಸಿದ್ದರಲ್ಲಿ ತಾನಿಯಾಮ-ಶಿಮುರಾರ ಪಾತ್ರವೂ ಉಂಟು! 1955 ರಲ್ಲಿ ಈ ಇಬ್ಬರು ಗಣಿತ ಲೋಕದ ಮುಂದಿಟ್ಟ – ತಾನಿಯಾಮ ಶಿಮುರಾ ಕಂಜೆಕ್ಚರ್ನ್ನು ಬಳಸಿಯೇ ವೈಲ್ಸ್ ತನ್ನ ಕನಸನ್ನು ಸಾಕಾರಗಳಿಸಿಕೊಳ್ಳಲಿಕ್ಕೆ ಸಾಧ್ಯವಾಗಿದ್ದಲ್ಲವೇ! ತಾನಿಯಾಮನ ಗಣಿತದ ಚಾತುರ್ಯವನ್ನ ಹೊಗಳಲಿಕ್ಕಾಗಿ ಇದನ್ನೆಲ್ಲಾ ಶುರುಮಾಡಿದ್ದಲ್ಲ. ಹಾಗೆ ನೋಡಿದರೆ, ಗಣಿತದಲ್ಲಿನ ಆತನ ಕೆಲಸಗಳನ್ನು ಸಾಮಾನ್ಯನಿಗಾಗಲೀ, ಯಾರಿಗಾದರಾಗಲೀ ಅರ್ಥ ಮಾಡಿಸುವವರೆಗೂ ಅಥವಾ ನನಗೇ ನಾನೇ ಅರ್ಥ ಮಾಡಿಕೊಳ್ಳುವವರೆಗೂ ಅವುಗಳ ಪ್ರಾಮುಖ್ಯತೆ ತಿಳಿಯುವುದಿಲ್ಲ. ಅದು ಈ ಪುಟ್ಟ ಲೇಖನದಲ್ಲೂ ಸಾಧ್ಯವಿಲ್ಲ. ಆದರೆ ಆತನ  ಕೆಲಸದ ಪರಿಣಾಮವನ್ನು ತಿಳಿದುಕೊಳ್ಳಲಿಕ್ಕಾಗಿಯಷ್ಟೆ ಈ ಮೇಲಿನ ಉದಾಹರಣೆ ನೀಡಿದ್ದು.

ಅದು  ನವೆಂಬರ್ 12 1958 ತಾನಿಯಾಮ 31 ನೆಯ ವಯಸ್ಸಿಗೆ ಕಾಲಿಟ್ಟ ದಿನ. ಆಗಷ್ಟೇ  ಜಪಾನಿನಲ್ಲಿ ಚಳಿಗಾಲ ಕಾಲಿಟ್ಟಿತು. ಅಷ್ಟರಲ್ಲಾಗಲೇ ತಾನಿಯಾಮ ಟೋಕ್ಯೋ ವಿಶ್ವವಿದ್ಯಾಲಯದ ಸಹ ಪ್ರಾಧ್ಯಪಕ ಹುದ್ದೆಗೇರಿದ್ದ, ಜೊತೆಗೆ ಪ್ರೀತಿಯಲ್ಲಿಯೂ ಬಿದ್ದಿದ್ದ. ತಾನಿಯಾಮ  M.S ಎಂದು ಕರೆಯುತ್ತಿದ್ದ ಆಕೆಯ ಹೆಸರು ಮಿಸಕೊ ಸುಝುಕಿ. ಇಬ್ಬರೂ ಮದುವೆಯಾಗಬೇಕೆಂದು ನಿಶ್ಚಯಿಸಿ ಒಂದು ಅಪಾರ್ಟ್ಮೆಂಟನ್ನು ಲೀಸಿಗೆ ಪಡೆದು ಅಲ್ಲಿಗೆ ಬೇಕಾದ ಸಾಮಾನುಗಳನ್ನೆಲ್ಲಾ ಕೊಂಡುಕೊಂಡು ಖುಷಿಯಿಂದಲೇ ಶಿಮುರಾವಿಗೆ ತಿಳಿಸಿದ್ದರು. ಹುಟ್ಟು ಹಬ್ಬ ಆಚರಿಸಿ ನಾಲ್ಕುದಿನಗಳು ಕಳೆದಿದ್ದವಷ್ಟೇ. ಐದನೆಯ ದಿನ, ಅಂದರೆ ನವೆಂಬರ್ 17. ಚಳಿ ಚಳಿ ಮುಂಜಾವಿಗೆ ಟೋಕ್ಯೋದ ಜನತೆ ಎಂದಿನಂತೆಯೇ ಎದ್ದಿತು. ಎಲ್ಲರಿಗೂ ಇದೂ ಸಹ ಮತ್ತೊಂದು ಮಾಮೂಲಿಯ ದಿನ. ಇಂಥಹಾ ಮುಂಜಾವಿನ ಪ್ರಶಾಂತತೆಯನ್ನ ಕದಡುವ ಘಟನೆಯೊಂದು ಜರುಗುತ್ತದೆಂದು ಯಾರೂ ಸಹ ಊಹಿಸಿರಲಿಕ್ಕಿಲ್ಲ. ಎಂದಿನಂತೆ ತಾನಿಯಾಮನ ಅಪಾರ್ಟ್ಮೆಂಟಿಗೆ ಬಂದಿದ್ದ ಅದರ ವ್ಯವಸ್ಥಾಪಕ ಮನೆಯೊಳಗೆ ನುಗ್ಗಿದವನೇ ಹೌಹಾರಿದ! ನಿಗೂಢ ರೀತಿಯಲ್ಲಿ ತಾನಿಯಾಮನನ್ನ ಮರಣ ಪಾಶವು ತೆಕ್ಕೆಗೆ ಎಳೆದುಕೊಂಡಿತ್ತು! ತಾನಿಯಾಮನ ಡೆಸ್ಕಿನ ಮೇಲಿದ್ದ ಮೂರು ಪುಟದ ಮರಣ ಪತ್ರವೊಂದು ಅದೊಂದು ಆತ್ಮಹತ್ಯೆ ಎಂದು ಹೇಳಿತು. ಜನರೆಲ್ಲರೂ ಬೆಚ್ಚಿದರು – ತಾನಿಯಾಮ ಆತ್ಮಹತ್ಯೆ ಮಾಡಿಕೊಂಡನೆ ಎಂದು! ಹೊರ ಜಗತ್ತಿಗೆ ತಾನಿಯಾಮನ ಬದುಕು ಎಷ್ಟೊಂದು ಸಾಂಗವಾಗಿ, ನಿರ್ವಿಘ್ನವಾಗಿ ನಡೆಯುತ್ತಿದೆಯೆಂದೆನಿಸುವಾಗಲೇ ತಾನಿಯಾಮ ಆತ್ಮಹತ್ಯೆ ಮಾಡಿಕೊಂಡ. ಆದರೆ ಇಂದಿಗೂ ಎಲ್ಲೂ ಸಹ ತಾನಿಯಾಮ ಹೇಗೆ ಆತ್ಮಹತ್ಯೆ ಮಾಡಿಕೊಂಡ ಎನ್ನುವುದರ ಕುರಿತಾಗಿ ಉಲ್ಲೇಖವಿಲ್ಲ! ತಾನಿಯಾಮನ ಬದುಕು ಅಷ್ಟಾಗಿ ಕಾಡದಿದ್ದರೂ, ಆತನ  ಮರಣ ಪತ್ರವು ನನ್ನ ಮನಸ್ಸಿನಲ್ಲಿಯೆ ಅಚ್ಚಳಿದು ಹೋಯಿತು. ಅಷ್ಟಕ್ಕೂ ತಾನಿಯಾಮ ಆತ್ಮಹತ್ಯೆ ಮಾಡಿಕೊಂಡದ್ದೇಕೆ?

ತಾನಿಯಾಮ ಬರೆದ ಡೆತ್ ನೋಟ್ ನ ಒಂದು ಭಾಗ

 ನಿನ್ನೆಯವರೆಗೂ ನಾನು ಸಾಯಬೇಕೆನ್ನುವ ಕಿಂಚಿತ್ ಉದ್ದೇಶವೂ ಮನದಲ್ಲಿಣುಕಿರಲಿಲ್ಲ. ಒಂದಷ್ಟು ದಿನಗಳಿಂದ ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿರುವುದು ಕೆಲವರ ಗಮನಕ್ಕೆ ಬಂದಿರಬಹುದು. ನಾನೇಕೆ ಸಾಯಬೇಕು ನನಗೇ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಯಾವುದೋ ಒಂದು ನಿರ್ದಿಷ್ಟ ವಿಚಾರಕ್ಕೆ ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಆದರೆ ನನಗೆ ಅಸ್ಪಷ್ಟವಾಗಿ ತಿಳಿಯುತ್ತಿದೆ ಭವಿಷ್ಯದ ಬಗ್ಗೆ ನಂಬಿಕೆಯನ್ನು ಕಳೆದುಕೊಂಡಿರುವ ಮನಸ್ಥಿತಿಗೆ ನಾನು ತಲುಪಿದ್ದೇನೆಂದು. ನನ್ನ ಸಾವಿನಿಂದ ಆ ವ್ಯಕ್ತಿಗೆ ಅತೀವವಾದ ಆಘಾತವಾಗಬಹುದು. ಆ ವ್ಯಕ್ತಿಗೆ ನಾನು ಮಾಡುತ್ತಿರುವ ವಂಚನೆಯಿದು ಎನ್ನುವುದನ್ನು ಯಾವುದೇ ರೀತಿಯಲ್ಲೂ ನಿರಾಕರಿಸಲಸಾಧ್ಯ. ಆ ವ್ಯಕ್ತಿಯ ಭವಿಷ್ಯದ ಮೇಲೆ ಈ ಘಟನೆಯು ಯಾವುದೇ ರೀತಿಯ ಕೆಟ್ಟ ಪರಿಣಾಮವನ್ನುಂಟುಮಾಡದಿರಲೆಂದು ಆಶಿಸುತ್ತೇನೆ. ಜೀವನದಲ್ಲಿ ಎಲ್ಲವನ್ನೂ ನನಗನ್ನಿಸಿದಾಗ ಹಾಗೆಯೇ ಮಾಡಿದೆ, ಈ ಆತ್ಮಹತ್ಯೆಯನ್ನೂ ಸೇರಿ. ಇದೇ ಕೊನೆಯದಲ್ಲವೇ. ನೀವೆಲ್ಲರೂ ನನ್ನನ್ನು ಕ್ಷಮಿಸುತ್ತೀರೆಂದು ಭಾವಿಸುತ್ತೇನೆ. ದಯಮಾಡಿ ಕ್ಷಮಿಸಿ.

ಇಲ್ಲಿ ಆ ವ್ಯಕ್ತಿ ಎಂದರೆ ಮಿಸೊಕೋಳೇ ಇರಬೇಕೆನ್ನುವುದು ಎಲ್ಲರ ಊಹೆ. ತಾನಿಯಾಮ ತನ್ನ ಬಳಿಯಿದ್ದ ಒಂದಷ್ಟು ವಸ್ತುಗಳನ್ನು ಯಾರಿಗೆಲ್ಲಾ ನೀಡಬೇಕೆಂದು ಬರೆಯುತ್ತಾ, ತನ್ನ ಸಹೋದ್ಯೋಗಿಗಳಿಗೆ ತಾನು ಮಾಡುತ್ತಿದ್ದ ಪಾಠಗಳ ಕುರಿತಾಗಿ ಬರೆದು, ಈ ಪತ್ರದಲ್ಲಿ ಅವರಿಗೂ ಕ್ಷಮೆಯನ್ನು ಯಾಚಿಸುತ್ತಾನೆ.

ತಾನಿಯಾಮ, ನನ್ನ ಸ್ನೇಹಿತ ತಾನಿಯಾಮ, ನನ್ನೊಟ್ಟಿಗೇ ಕೆಲಸ ಮಾಡಿದ ತಾನಿಯಾಮ ಸತ್ತುಹೋದನೆಂದು ಊಹಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಎಲ್ಲರಿಗೂ ಒಂದೇ ಪ್ರಶ್ನೆ – ತಾನಿಯಾಮನಿಗೆ ಸಾಯುವಂಥದ್ದೇನಾಗಿತ್ತು? ಇದಕ್ಕೆ ಸಮರ್ಪಕ ಉತ್ತರ ಇಂದಿಗೂ ತಿಳಿದಿಲ್ಲ. ಹ್ಹಾ.. ಹ್ಹಾ.. ತಾನಿಯಾಮನಿಗೇ ತಿಳಿದಿರಲಿಲ್ಲ. ತಾನಿಯಾಮ ಒಬ್ಬ ಉದಾರ  ಮನಸ್ಸಿನ ವ್ಯಕ್ತಿ. ಪ್ರಾಯಶಃ ಅದು  ಅವನಿಗೇ ತಿಳಿದಿರಲಿಲ್ಲವೇನೋ! ಯಾವ ಕ್ಷಣದಲ್ಲಾದರೂ ತನ್ನ ಯಾವುದೇ ಸಹೋದ್ಯೋಗಿಗಾಗಲೀ, ವಿದ್ಯಾರ್ಥಿಗಾಗಲಿ ನೈತಿಕ ಬೆಂಬಲದಂತೆ ನಿಂತಿರುತ್ತಿದ್ದ. ನಿಮಗೆ ತಿಳಿದಿರಲಿಕ್ಕಿಲ್ಲ. ನಮ್ಮ ಪ್ರೊಫೆಸರ್ ಗಳೆಲ್ಲಾ ನಮಗೆ ಯಾವುದೇ ರೀತಿಯ ಸಲಹೆಗಳನ್ನು ನೀಡುತ್ತಿರಲಿಲ್ಲ. ಗಣಿತದಲ್ಲಿ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕಿತ್ತು. ಇದು ನನಗೂ ತಾನಿಯಾಮನಿಗೂ ಬಹಳ ಬೇಸರವಾಗಿದ್ದ ವಿಷಯವಾಗಿತ್ತು. ಅದಕ್ಕೇ ತಾನಿಯಾಮ ಎಂದಿಗೂ ತನ್ನ ವಿದ್ಯಾರ್ಥಿಗಳೊಟ್ಟಿಗಾಗಲೀ, ಸಹೋದ್ಯೋಗಿಗಳಿಗೊಟ್ಟಿಗಾಗಲೀ ಒಳ್ಳೆಯ ಒಡನಾಟ ಹೊಂದಿದ್ದ. ಬಹುಶಃ ದೇವರು ಅವನನ್ನು  ಅವಿವಾಹಿತ ಗಣಿತಜ್ನನಾಗಿಯೇ ಇರುವಂತೆ ಹುಟ್ಟಿಸದನೋ ಏನೋ!– ಶಿಮುರಾ ತನ್ನ ಸ್ನೇಹತನ ಸಾವಿನಿಂದ ಆಘಾತಕ್ಕೀಡಾಗಿದ್ದರು.  

ಸಮಯ ಎಲ್ಲವನ್ನೂ ಮಾಸಿಬಿಡುತ್ತದೆ ಎನ್ನುವುದು ಸತ್ಯವೇ! ಎಲ್ಲರಿಗೂ ಈ ಆಘಾತದಿಂದ ಚೇತರಿಸಿಕೊಳ್ಳಲು ಒಂದೆರಡು ವಾರಗಳೇ ಬೇಕಾದವು!  ಎರಡು ವಾರಗಳ ನಂತರ ಜನರ ಬದುಕು ಸಹಜ ಸ್ಥಿತಿಗೆ ಮರಳಲಾರಂಭಿಸಿತು. ಇಷ್ಟರಲ್ಲೇ ಡಿಸಂಬರಿನ ಒಂದು ಚಳಿ ಮುಂಜಾವು ಮತ್ತೊಂದು ದುರ್ಘಟನೆಯೊಂದಿಗೆ ತೆರೆದುಕೊಂಡಿತು. M. S ಅಥವಾ ಮಿಸಾಕೋ, ತಾನಿಯಾಮ ಸತ್ತಿದ್ದ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಆಕೆಯ ಡೆತ್ ನೋಟನ್ನ ಬಹಿರಂಗಪಡಿಸದಿದ್ದರೂ ಅದರಲ್ಲಿ ಈ ಕೆಳಗಿನ ಸಾಲುಗಳು ಇದ್ದವೆಂದು ಶಿಮುರಾ ತಿಳಿಸುತ್ತಾರೆ -

“ನಾವಿಬ್ಬರೂ ಒಬ್ಬರಿಗೊಬ್ಬರು ಮಾತು ನೀಡಿದ್ದೆವು – ಎಲ್ಲೇ ಹೋದರೂ ನಾವು ಬೇರೆಯಾಗುವುದಿಲ್ಲವೆಂದು. ಈಗ ತಾನಿಯಾಮ ಈ ಜಗತ್ತನ್ನು ಬಿಟ್ಟು ಹೋಗಿದ್ದಾನೆ. ಮಾತಿನ ಪ್ರಕಾರ ನಾನೂ ಸಹ ಹೋಗಬೇಕು, ಅವನನ್ನು ಸೇರಬೇಕು”

ಇಲ್ಲಿಗೆ ಒಂದು ಪ್ರೇಮ ಅಧ್ಯಾಯ, ಒಬ್ಬ ಉದಾರ ಮನಸ್ಸಿನ ಗಣಿತಜ್ಞನ ಜೀವನದ ಅಧ್ಯಾಯ ಮುಗಿಯಿತು! ಸತ್ಯವಾಗಿಯೂ ತಾನಿಯಾಮನ ಗಣಿತದ ಕೆಲಸಗಳನ್ನು ಅರ್ಥಮಾಡಿಕೊಳ್ಳುವಷ್ಟು ಶಕ್ತನಲ್ಲ ನಾನು. ಅವನ ಗಣಿತ ಕೌಶಲ ನನ್ನನ್ನು ಕಾಡುತ್ತಿರುವುದಲ್ಲ. ತಾನಿಯಾಮನ ಬದುಕು ಇದ್ದಕ್ಕಿದ್ದಂತೆ ಭವಿಷ್ಯದ ಭಯದ ನೆರಳಲ್ಲಿ ಕೊನೆಗೊಂಡದ್ದು ಮನಸ್ಸನ್ನು ಕಲಕಿದೆ! ಭವಿಷ್ಯದ ಮೇಲೆ ನಂಬಿಕೆ ಹೋಗುವುದೆಂತಕ್ಕೆ? ಸಾವಿರಾರು ಕಾರಣಗಳಿರಬಹುದು. ಬದಲಾಗುತ್ತಿರುವ ಸಮಾಜದ ಅಪೇಕ್ಷೆಗಳಿಗೆ ಹೊಂದಿಕೊಳ್ಳುವುದು ಮನಸ್ಸಿಗೆ ಅನವಶ್ಯಕ ಎನಿಸಬಹುದೇ? ಅಥವಾ ಈ ಜಗತ್ತಲ್ಲಿ ನನ್ನಿಂದ ಆಗಬೇಕಾಗಿರುವ ಕೆಲಸವೇನೂ ಇಲ್ಲ ಎನಿಸಿರಬಹುದೇ? ಬಹುಶಃ ಜೆನ್ನಿಯೂ ಹೀಗೆಯೇ ಪ್ರಾಣವನ್ನು ಕಳೆದುಕೊಂಡಿರಬಹುದೇ? ಗೊತ್ತಿಲ್ಲ. ಒಮ್ಮೊಮ್ಮೆ ನನಗೂ ಅನ್ನಿಸುತ್ತದೆ – ನನ್ನಿಂದ ಇಲ್ಲೇನೂ ಆಗಬೇಕಿಲ್ಲವೆಂದು!

 

No comments:

Post a Comment