Thursday, July 22, 2021

ಏಯ್ ಡೆಡ್…

 

ಗುಡ್ಡದ ಮೇಲಿದ್ದ ವಾಟೆರ್ ಟ್ಯಾಂಕಿನ ಮೇಲೆ ಗಾಳಿಗೆ ಮೈಯೊಡ್ಡಿ ಕುಳಿತುಕೊಳ್ಳುವ ಆಸೆ ಇದ್ದಕ್ಕಿದ್ದ ಹಾಗೆ ಅವನಿಗೆ ಮೂಡಿತು. ದಟ್ಟ ಮಲೆನಾಡೇನಲ್ಲ ಅದು. ಆದರೂ ಸಿಟಿಯ ಡಾಂಬರು, ಕಾರು-ಬಾರುಗಳ, ಜನ-ಮನಗಳ ಜಂಗುಳಿಯ ಮುಂದೆ ಅತೀ ವಿಶಿಷ್ಟವಾದದ್ದು, ಬೇಕೆ ಬೇಕೆನಿಸುವಂಥದ್ದು ಆ ಗಾಳಿಯ ಪ್ರವಾಹ. ಗುಡ್ಡ’, ತಪ್ಪಲು’, ಮಳೆ’, ಕಾಡು’, ಹಳ್ಳ ಈ ಪದಗಳಿನ್ನು ಅವನ ಮನಸ್ಸಲ್ಲಿ ಜೀವಂತಿಕೆಯನ್ನ ಉಳಿಸಿಕೊಂಡಿದ್ದವು, ಜೀವಂತಿಕೆಯನ್ನ ತರಿಸುತ್ತಿದ್ದವು. ನಾಯಿ ನರಿಗಳ ಹಾಗೆ ಉಂಡು ಮಲಗಿ, ಸ್ರವಿಸಿ, ಸುಖಿಸಿ, ಹುಟ್ಟಿಸಿದವಗಳಿಗೂ ಉಣಿಸುತ್ತಲೇ ಸಮಯ ದೂಡುವುದನ್ನ ವಿಕಾಸ ಮನುಷ್ಯನಿಗೆ ಒದಗಿಸಿಲ್ಲ’, ಎಂದುಕೊಳ್ಳುತ್ತಾ ನಗುತ್ತಾನೆ.

ಟೈಂ..ಪಾಸ್..  ಎಲ್ಲವೂ ಟೈಂ..ಪಾಸ್..ಈ ಸಂಕೀರ್ಣ ಸಮಾಜದೊಳಗೆ? ಏನಿದು? ಏನಿದು?’ ಜಗತ್ತಿನ ಬಗ್ಗೆ ಏನೊಂದೂ ನಿಲುವಿಗೆ ಬರಲಾಗದೆ ಮರುಕ್ಷಣವೇ ಚಿಂತಿಸುತ್ತಾನೆ. ಪ್ರಶ್ನೆಯಾದರೂ ಏನೆಂದಿದ್ದರೆ ಉತ್ತರ ಸಿಗಬಹುದೇನೋ.. ಪ್ರಶ್ನೆಯೇ ಏನೆಂದು ತಿಳಿಯದೆ, ಯಾವುದಕ್ಕಾಗಿ ಹುಡುಕಾಡುವುದು – ಕತ್ತಲ ರಾತ್ರಿಯಲ್ಲಿ ಕಾಡಲ್ಲಿ ಹೋದಂತೆ. ಕ್ಷಣಕ್ಷಣಕ್ಕೂ ತನ್ನ ವರ್ತನೆ ತನಗೆ ಹಿಡಿಸದ ದಾರಿಯಲ್ಲಿ ಅನಿವಾರ್ಯವೆನ್ನುವಂತೆ ಹೊರಳುವಾಗ ಇಡೀ ಜೀವನಕ್ಕೆ ಯಾರೋ ಚೈನು ಹಾಕಿ ನಾಯಿಯಂತೆ ಎಳೆದೊಯ್ಯುವಂತನ್ನಿಸುತ್ತದೆ. ಭಯ.. ಭಯ... ಚೈನು ಬಿಟ್ಟರೂ ಹೋಗಲು ಭಯ. ಹಾಗಾದರೆ ಚೈನು ಬಿಟ್ಟರೂ ಬಿಟ್ಟಿಲ್ಲವೆಂಬತೆ – ಹ್ಹಿ..ಹ್ಹಿ.. ಎಂದು ತನ್ನೊಳಗಿನ ತರ್ಕಕ್ಕಾಗಿ ನಗುತ್ತಾನೆ. ಗೊತ್ತು ಗುರಿಯಿಲ್ಲದೆಯೇ ಸಾಗುವುದು ನಿಜಕ್ಕೂ ಹಿತವಾದ್ದೇ.. ಆದರೆ ಈತನೇನು ಹಾಗಿಲ್ಲವಲ್ಲ. ಚೈನಿನ ಸೆಳೆತದ ದಿಕ್ಕಿನಲ್ಲೇ ಇವನ ಪ್ರಯಾಣ. ಏನಿದು.. ಏನಿದು.. ಛೀ.. ಮರುಗುತ್ತಾನೆ.

ಎಲ್ಲವೂ ಸುಳ್ಳೇ.. ಎಲ್ಲವೂ ಸುಳ್ಳೇ.. ಯೂನಿವರ್ಸಿಟಿ ಕೊಟ್ಟ ಗೋಲ್ಡ್ ಮೆಡಲ್ ಗಳು, ರ್ಯಾಂಕುಗಳು, ಎಲ್ಲವೂ. ಸುಳ್ಳೆ..  ಸರ್ಟಿಫಿಕೇಟ್ ಹೇಳಿದ್ದೆಲ್ಲವೂ ಸುಳ್ಳೆ. ಯೂನಿವರ್ಸಿಟಿ ಇವನಿಗೆ ತುಂಬಬೇಕಾಗಿದ್ದೊಂದೆ – ತನಗೇನು ತಿಳಿದಿಲ್ಲವೆಂದು ಮುಕ್ತವಾಗಿ ಹೇಳಿಕೊಳ್ಳುವ ಅಹಂಕಾರ ರಹಿತ ಧೈರ್ಯ. ಸುಳ್ಳುಗಳ ಕೋಟೆಗಳೇ ಸೃಷ್ಟಿಯಾಗಿ, ಹೊರಬರಲು ದಾರಿಯೇ ಕಾಣದೆ ಬಂಧಿಯಾಗಲು ಕಾರಣರ್ಯಾರು? ಕೋಟೆಯುರುಳಿಸಲು ಶಕ್ತಿಯೂ, ಸ್ಥೈರ್ಯವೂ, ಆಸ್ಥೆಯೂ ಇಲ್ಲದಾಗಿಹೋಗಿದೆ. ಕೋಟೆಯೊಳಗೆಯೇ ಶಾಶ್ವತವಾಗಿ ಚೈನು ಬಿಗಿದು ಯಾರೋ ಕಟ್ಟಿ ನಿರ್ದೇಶಿಸುತ್ತಿದ್ದಾರೆ. ಒಬ್ಬನನ್ನ ಹೀಗೆ ಕಟ್ಟಿಹಾಕಿ ನಿರ್ದೇಶಿಸಲು ಬೇಕಾಗಿರುವ ಚೈನೊಂದು ಈ ಸಮಾಜದಲ್ಲಿ ದೊರೆಯುತ್ತದೆ – ಹೊಗಳಿಕೆ. ತಮಾಷೆಯಲ್ಲ. ‘The moment you praise me, you spoil me’ ಎಂದು ಆತ ಕೂಗುತ್ತಿರೋದು ಕೇಳಿಸೋಲ್ಲ. ಶಕ್ತಿ ಕುಗ್ಗಿದೆ. ಏನಿದು.. ಯಾರು.. ತಾನ್ಯಾರು? ತನಗೂ ಈ ಜಗತ್ತಿಗೂ ಸಂಬಂಧವೇನು? ತನಗೂ ಜನಗಳಿಗೂ ಸಂಬಂಧವೇನು? ಎನ್ನುವ ಪ್ರಶ್ನೆಗಳನ್ನ ತಡಿಯಲು ಸಾಧ್ಯವಾಗುತ್ತಿಲ್ಲ.

ಕಾದಂಬರಿಯೊಂದರ ಸಾಲುಗಳು ನೆನಪಾಯಿತು. ಜೀವನದಲ್ಲಿಯ ಉತ್ಸಾಹ ತಗ್ಗಿದಾಗ ಮೂಲಭೂತ ಪ್ರಶ್ನೆಗಳು ತಲೆದೋರುತ್ತವೆ. ಉತ್ಸಾಹ ತಗ್ಗಲು ಕಾರಣವೇನು? ಭ್ರಮನಿರಸನವಿದ್ದರೂ ಇರಬಹುದು. ತನ್ನ ಬಗ್ಗೆ ತಾನೆ ಕಟ್ಟಿಕೊಂಡ, ಸಮಾಜ ಕಟ್ಟಿಸಿದ ಕಲ್ಪನೆಗಳೆಲ್ಲಾ ಬರಿಯ ಸುಳ್ಳುಗಳೆನ್ನುವ ಅರಿವು. ಇಷ್ಟೂ ದಿನಗಳ ಕಾಲ ಇವನನ್ನ ಹಾಡಿ ಹೊಗಳಿ spoil ಮಾಡಿದ ಜನರೇ ಇಂದು ಎಷ್ಟು ಕೊಟ್ಟು Aided College ಕೆಲಸ ಗಿಟ್ಟಿಸಿದೆ?’ ಎಂದು ಹಲ್ಕಿರಿದು ನಗುವಾಗ ನಿಜ ಹೇಳಲೂ ಆಸ್ಥೆ ತೋರದಾಗಿ ಹೋಗಿದೆ. ತನಗೆ ಕೆಲಸ ಕೊಟ್ಟವರೂ ಸುಳ್ಳೆ? ಸುಳ್ಳಿನ ಮೇಲೆ ಸುಳ್ಳು.. ಓಹ್! ನಿಜ ಹೇಳುವವರ್ಯಾರು? ತಾನು ಬ್ರಾಹ್ಮಣನೆಂದು ಕೆಲಸ ಕೊಟ್ಟರೆ? ಕೆಲಸ ಬಿಡಲೂ ಆಗದ ಹಾಗೆ ನಿರ್ದೇಶಿತವಾಗುತ್ತಿದೆ. ಏನಿದು ಭಯ?  ಯಾರದು? ಯಾವ  ಚೈನದು? ‘Congratulations’ ಎನ್ನುವ ಜನರ ವಿಶಸ್ ಗೆ ಮುಜುಗರವಾಗುತ್ತಿದೆ. ‘Thanks’ ಯಾಂತ್ರಿಕವಾಗಿ, ಅನಿಯಂತ್ರಿತವಾಗಿ ಹೊರಬೀಳುತ್ತಿದೆ.  ಕೊನೆಗೂ ಅದೇ  ಪ್ರಶ್ನೆಗೆ ಬಂದು ಮುಟ್ಟಿದ – ಇಲ್ಲಿ ನಾನೇನು ಮಾಡಬೇಕಿದೆ? ನನ್ನಿಂದೇನಾಗಬೇಕಿದೆ?’

ಮಳೆ, ಹಳ್ಳ, ಕಾಡು, ಗುಡ್ಡ, ಗಾಳಿ ಇವೆಲ್ಲವನ್ನೂ ಅರೆಕ್ಷಣ ಮರೆಸಿವೆ. ಆದರೆ ಅದಾಗಲೇ ಚೈನೊಂದು ನಿರ್ದೇಶಿಸುತ್ತಿದೆ – Duty report ಆಗಬೇಕಿದೆಯೆಂದು.

No comments:

Post a Comment