Tuesday, May 11, 2021

ಆಗುಂತಕನೊಟ್ಟಿಗೆ - ಆ ರಾತ್ರಿ

 


ಅದು 26 ನವೆಂಬರ್ 2018. ನಿಮಗ್ಯಾಕೆ ತಾರೀಕು ಹೇಳ್ತಿದ್ದೇನೆ? ಗೊತ್ತಿಲ್ಲ. ಪ್ರಾಯಶಃ ನಿಮ್ಮಲ್ಲಿ ಕುತೂಹಲ ಹುಟ್ಟಿ ಇದನ್ನ ಓದಲೇಬೇಕು ಅನ್ನೋ ಹಂಬಲ ಮೂಡಲಿ ಅಂತ ಇದ್ದಿರಬೋದು. ಆ ರಾತ್ರಿ ಮೈಸೂರಿನಿಂದ ಮಂಡ್ಯಕ್ಕೆ ಬಸ್ಸಿನಲ್ಲಿ ಹೊರಟಿದ್ದೆ. ನನ್ನ ಹಾಗೂ ಕಿಟಕಿಯ ಮಧ್ಯೆ ಒಂದಾಳು ಕುಳಿತಿದ್ರೂ ಕಿಟಕಿಯ ಪಕ್ಕ ಕುಳಿತ ಹಾಗೆಯೇ ತಂಡಿಯ ಗಾಳಿ ರಪ್ ಎಂದು ಮುಖಕ್ಕೆ ರಾಚುತ್ತಿತ್ತು. “ನಾನು ದೇವರಿಗೆ ಬಹಳ ಕೃತಜ್ನನಾಗಿರ್ತೀನಿ ಅವ್ನು ಈಗಿಂದೀಗ್ಲೆ ನನ್ನ ಕರ್ಕಾಂಡ್ ಬಿಟ್ರೆ”, ಅವನು ತನಗೆ ತಾನೇ ಹೇಳಿಕೊಂಡನೇ? ಅವನು ಕುಡಿದದ್ದಂತೂ ನಿಜ. ಇಲ್ಲ, ಅವ್ನು ನನ್ನೊಟ್ಟಿಗೆಯೇ ಮಾತನಾಡ್ತಿದ್ದದ್ದು. ಪಕ್ಕದಲ್ಲೇ ಕುಳಿತಿದ್ದರೂ ಬಸ್ಸಿನ ಗರ್.... ಎನ್ನುವ ಎಂಜಿನ್ನಿನ ಸದ್ದಿಗೆ ಪೈಪೋಟಿ ನೀಡಿ ಅವನ ಧ್ವನಿ ನನ್ನನ್ನ ತಲುಪಬೇಕಿತ್ತು.

“ನಾನೊಂದು ಕ್ವಾಟ್ರು ತಕೊಂಡಿದೀನಿ ಅಣ್ಣ. ಮೈಸೂರಲ್ಲಿ ಅಕ್ಕನ ಮನೇಲಿ ತಕಂಡಿದ್ದು. ಮನೆಗೆ ಹೋದ್ಮೇಲೆ ಇನ್ನೊಂದ್ ಕ್ವಾಟ್ರು ತಕಂಡು ಮಲ್ಕಾತೀನಿ”. ನಾವೆಲ್ಲೋ ಒಂದು ಗಂಟೆಯಿಂದ ಮಾತುಕತೆಯಾಡ್ತಿದ್ದ ಹಾಗೆ ಆತ ಬಹಳ  ಸಲೀಸಾಗಿ ಸಂಭಾಷಣೆ ಆರಂಭಿಸಿದ್ದ. ಅವನು ಮಂಡ್ಯದಲ್ಲಿ ತನ್ನ ದೊಡ್ಡಕ್ಕನ ಮನೇಲಿದ್ದದ್ದಾಗಿಯೂ, ಆಕೆಯ ಗಂಡ ತೀರಿಹೋಗಿದ್ದಾಗಿಯೂ, ಆಕೆಗೆ ಎರಡು ಮಕ್ಕಳಿರೋದಾಗಿಯೂ ನಾನು ಕೇಳದೇ ಇದ್ದರೂ ನನಗೆ ಗೊತ್ತಾಗಿತ್ತು. ಎಂಥಾ ವಿಚಿತ್ರ! ನಾನ್ಯಾಕೆ ಈ ಪ್ರಶ್ನೆ ಕೆಳಿದೆ ಅನ್ನೋದು ನನಗೂ ಗೊತ್ತಿಲ್ಲ – “ಪ್ರೈವೇಟ್ ಸ್ಕೂಲಿಗೆ ಯಾಕೆ ಕಳಿಸ್ತಿಲ್ಲ ಮಕ್ಳನ್ನ?” ನಾನೂ ಕುಡಿದಿದ್ನೆ? ಅಥವಾ ಆ ವಾಸನೆ ನನ್ನಲ್ಲಿ ನಶೆ ತರಿಸಿತ್ತೆ? ಇಲ್ಲ ಇಲ್ಲ. ನಾನೇನು ಕುಡಿದಿರಲಿಲ್ಲ. ಹಾಗಿದ್ರೂ ಎಂಥ ಅಸಂಬದ್ಧವಾದ ಪ್ರಶ್ನೆ ಕೇಳಿದ್ನಲ್ಲ. ಓಹ್! ಓಹ್! ಕುಡುಕರೆಲ್ಲರೂ ಅಸಂಬದ್ಧವಾಗಿ ಮಾತ್ನಾಡ್ತಾರೆ ಅಂತ  ಹೇಳ್ತಿದ್ದೇನೆ ಅಂತ ಭಾವಿಸ್ಬೇಡಿ. ಸರಿ.. ಬಿಡಿ ಇದನ್ನ. ಆತನ ಅಕ್ಕ ಮನೆಗೆಲಸ ಮಾಡ್ತಿದ್ದಳು. ತಿಂಗಳಿಗೆ 4000ರೂ ಸಂಬಳ ಬರ್ತಿತ್ತು ಅನ್ನೋದೂ ಸಹ ಗೊತ್ತಾಯ್ತು ನನಗೆ.

ಅವನಿಗೆ ಮದುವೆಯಾಗಿರಲಿಲ್ಲ. ಆತ ತನ್ನ ವಯಸ್ಸಿನ, ಹುಟ್ಟಿನ ಬಗ್ಗೆಯೇ ತೀರಾ ಗೊಂದಲಕ್ಕೊಳಗಾಗಿದ್ದ. ಪರ್ಸಿನಿಂದ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿಗಳೆರಡನ್ನು ತೆಗೆದು ನನ್ನ ಮುಂದೆ ಹಿಡಿದ. ಬಸ್ಸಿನ ಆ ಬಿಳಿ ಬೆಳಕಲ್ಲಿ ಅವನು ತೋರಿಸ್ತಿದ್ದದ್ದು ಸ್ಪಷ್ಟವಾಗಿಯೇ ಕಾಣಿಸ್ತಿತ್ತು. “ನೋಡಣ್ಣ. ನಂಗೆ ಲೆಕ್ಕ-ಗಿಕ್ಕ ಎಲ್ಲ ಹಾಕಕ್ ಬರಾಕ್ಕಿಲ್ಲ. ಆಧಾರ್ ಪ್ರಕಾರ ನಂಗೆ 46 ವರ್ಸ್ವಂತೆ. ಎಲಕ್ಷನ್ ಕಾರ್ಡ್ ಪ್ರಕಾರ್ ನಂಗೆ 36 ಅಂತೆ. ನೀನೆ ನೋಡು”. ಅವ  ತೋರಿಸಿದ್ದು ನಿಜವೇ ಇದ್ದದ್ದರಿಂದ ನಂಗೂ ಆಶ್ಚರ್ಯವೇ ಆಯ್ತು. ಆತನಿಗೆ ಈ ಗೊಂದಲದ ಹಿಂದೆಯೂ ಒಂದು ಕಾರಣ ಇತ್ತು – ಪೆನ್ಶನ್ ಪಡೀಲಿಕ್ಕೆ ಯಾವುದನ್ನ ಕೊಡಬೇಕು ಅಂತ. ನನಗೂ ಅದೇ  ಪ್ರಶ್ನೆಯನ್ನ ಕೇಳಿದ. ನಿಮಗೆ ಪೆನ್ಶನ್ ಸಿಗ್ಲಿಕ್ಕಿಲ್ಲ. ಬೇಕೂ ಅಂದ್ರೂ ಈ ವಯಸ್ಸಿಗಂತೂ ಸಿಗ್ಲಿಕ್ಕಿಲ್ಲ. ಇನ್ನೂ ತುಂಬಾ ವಯಸ್ಸು ನೀನು ಬದುಕ್ಬೇಕಾಗತ್ತೆ” ಆತ – “ಓಹ್ಹೋ!”  ಅಂತ  ಉದ್ಗರಿಸಿದ. “ಹಾಗಂತ ನಿನ್ನಂತ ಅಪ್ಪ-ಅಮ್ಮ, ಸಂಸಾರ, ಇಲ್ಲದೇ ಇರೋ, ಸರಿಯಾದ ಮನೆ, ಸರಿಯಾದ  ಕೆಲಸ ಇರದೇ ಇರೋ ಒಬ್ಬ ಗಂಡಸಿಗೆ ಸರಕಾರದಿಂದ ಏನು  ನೆರವು ಸಿಗಬೋದು ಅನ್ನೋದು ನನಗೆ ಗೊತ್ತಿಲ್ಲ. ವಿಚಾರಿಸಿ ಹೇಳ್ತೇನೆ” ಅಂತ ನಾ ಹೇಳಿದ್ದು ಯಾವುದೇ ರೀತಿಯ ಕಾಳಜಿಯಿಂದ ಹೊಮ್ಮಿದ್ದಲ್ಲ ಅನ್ನೋದು ನನಗೂ ಗೊತ್ತಿತ್ತು. ಅದು ಕೇವಲ ಹಾಗೇ ಸಂಭಾಷಣೆಯ ಹರಿವಲ್ಲಿ ಬಂದದ್ದು. ನನಗೆಲ್ಲೂ ಕುಡಿದ ನಶೆಯಲ್ಲಿದ್ದ ಒಬ್ಬ ವ್ಯಕ್ತಿಯೊಟ್ಟಿಗೆ ಇಷ್ಟು ಸೀರಿಯಸ್ಸಾದ ಸಂಭಾಷಣೆಯನ್ನ ನಡೆಸ್ತಿದ್ದೇನಲ್ಲ ಅನ್ನೋದು ಮನಸ್ಸಿಗಿನ್ನೂ ಬಂದಿರಲಿಲ್ಲ.

ಅವನಿಗೆ ಅವನದ್ದೇ ಆದ  ಕೆಲವೊಂದು ತತ್ವಗಳಿದ್ದವು – ಅವಕ್ಕೇನು ಯಾರಿಗೂ ಕಡಿಮೆಯಿಲ್ಲ. “ಗಂಡಸನ್ನಿಸ್ಕೊಂಡೋನು ಮನ್ಯಾಲಿರ್ಕೂಡದು. ಹಾಗಿದ್ರೆ ಜನ ಯಾರೂ ಸರೀಗೆ ಮಾತಾಡ್ಸಕ್ಕಿಲ್ಲ. ಅವನು ಕೆಲಸ ಮಾಡಲಿ ಮಾಡದೇ ಇರಲಿ ಮನೆಯಿಂದ ಆಚೆ ಹೋಗಲೇ ಬೇಕು ದಿನಾ. ನಾನು ಹಾಗೇಯಾ ಎಲ್ಲಾರ ಕೆಲ್ಸ ಸಿಕ್ದ ಹುಡಿಕ್ಕಾಂಡ್ ಹೋಯ್ತೀನಿ. ಬಂದಿರೋ ಕಾಸಲ್ಲಿ ಅಕ್ಕಂಗೆ ಕೊಡ್ಲೇಯಾ ಬೇಕು. ಇಲ್ಲಾರೆ ಬೈತಾಳೆ. ಒಂದೊಂದ್ಸಾರಿ ಹೋಡೀತಾಳೆ. ನಾ ದಿನಕ್ಕೆ ಸಂಪಾದ್ನೆ ಮಾಡೋದು ನಂಗ್ ಸಾಕು ಅಣ್ಣ. ಓಡಾಡಕ್ಕೇಯ 100 ರೂಪಾಯಿ ಸಾಕಾಯ್ತದೆ. ಅಕ್ಕಂಗ್ ಒಂಚೂರು ಕೋಡ್ತೀನಿ. ಮಿಕ್ಕಿದ್ನೆಲ್ಲಾವ ಸಾರಾಯ್ ತಕಾತೀನಿ. ನನ್ ತಲೆ ಮ್ಯಾಲೆ 5000ರೂ  ಸಾಲಾ ಅಯ್ತೆ ಇನ್ನು” ಇದೆಲ್ಲಾ ನನಗೇನು ಆಸಕ್ತಿದಾಯಕವಾಗಿರಲಿಲ್ಲ. ಚಕೋವ ಹೇಳೋ ಹಾಗೆ ಯಾವುದೇ ಮನುಷ್ಯನ್ನ ಕೇಳಿ ನೋಡೀ, ಈ ಥರ  ಏನಾದರೂ ಒಂದು ಗೋಳು ಹೋಯ್ಕೊಳ್ಳದೇ ಇರೋನು ಸಿಗೋದು ಕಷ್ಟ ಅಂತಲೇ ಹೇಳ್ತಾನೆ. ಆದರೆ ಅಚಾನಕ್ಕಾಗಿ ನನಗೊಂದು ಆಶ್ಚರ್ಯವಾಯ್ತು, ಅದ್ಯಾವಾಗ ನಾನು ಆವರನ್ನ ಅವನು ಅಂತ  ಸಂಬೋಧಿಸೋದಕ್ಕೆ ಶುರು ಮಾಡಿದ್ದು ಅಂತ. ಆದ್ರೆ ಇದರ ಒಳಗೆ ಮನಸ್ಸು ಮುಳುಗಿ ಹೋಗೋದನ್ನ ಮತ್ತೊಂದು ಕುತೂಹಲ ತಡೆದಿತ್ತು. ಒಂದು ಕೆಟ್ಟ ಕುತೂಹಲ ನನ್ನನ್ನ ಆವರಿಸಿತ್ತು. ಈ ಸಂಪೂರ್ಣ ಪ್ರಯಾಣದ ಉದ್ದಕ್ಕೂ ನನಗೆ ಹೇಗಾದ್ರೂ ಮಾಡಿ ಈತನಿಂದ ಉತ್ತರ ಪಡೀಲೇಬೇಕು ಅಂತ  ಅನ್ನಿಸ್ತಿದ್ದದ್ದು ಒಂದೇ ಒಂದು ಪ್ರಶ್ನೆಗೆ – “ಇಷ್ಟೂ ವರ್ಷಗಳ ಕಾಲ  ಯಾವುದೇ ಹುಡುಗಿಯ/ಹೆಂಗಸಿನ ಜೊತೆ ದೈಹಿಕ ಸಂಪರ್ಕ ಇಟ್ಟುಕೊಳ್ಳದೇ ಇದ್ದದ್ದಕ್ಕೆ ಬೇಸರವಾಗಿಲ್ವಾ? ಏನನ್ನಿಸತ್ತೆ ಅದರ  ಬಗ್ಗೆ?” ಅಂತ ನೇರವಾಗಿ ಕೇಳ್ಳಕ್ಕಂತೂ ಆಗಲಿಲ್ಲ ಮೊದಲಿಗೆ. ಇದಕ್ಕೆ  ಉತ್ತರ “Obvious” ಇದ್ದಿರಬೋದು. ಅಥವಾ ಇದೊಂದು ತೀರಾ ಅಸಂಬದ್ಧ, ಅನವಶ್ಯಕ ಪ್ರಶ್ನೆಯೂ ಹೌದು. ಹಾಗಿದ್ದರೂ ಅವನೇನು ಹೇಳ್ತಾನೆ ಅನ್ನೋದು ನನಗೆ ಬೇಕೇ ಬೇಕಿತ್ತು. ವಿವಿಧ ಧಾಟಿಯಲ್ಲಿ, ವಿವಿಧ ರೀತಿಯಲ್ಲಿ ಪ್ರಶ್ನೆಗಳನ್ನ ಕೇಳಿದೆ. ಎಲ್ಲದಕ್ಕೂ ಅವನದ್ದೊಂದೆ ಉತ್ತರ  - “ನಾನು ಮದುವೆಯಾಗದೇ ಇರೋದಕ್ಕೆ ನನ್ನ ಅತ್ತಿಗೇನೆಯಾ ಕಾರಣ. ನಾನೊಬ್ಬ ಕುಡ್ಕ ಅಂತ ಎಲ್ಲರ್ತವಾನೂ ಹೇಳ್ಕೊತಾ ಬಂದ್ಲು. ಕುಡುಕ್ನಿಗೆ ಯಾರ್ ಹೆಣ್ ಕೊಟ್ಟಾರು? ನಾನು ಮದ್ವೆಯಾಗಕ್ಕೋಸ್ಕರಾನೇ ಟ್ರೀಟ್ಮೆಂಟ್ ತಕಂಡಿದ್ದೆ. 3 ವರ್ಷ ಕುಡ್ದಿರ್ನಿಲ್ಲ. ಆದ್ರೆ ಅಮ್ಮ ಸತ್ತೋದ್ಲು. ಅವ್ಳೊದ್ಮೇಲೆ ತಡಿಯಕ್ಕಾಗ್ನಿಲ್ಲ. ಅವ್ಳೊಬ್ಳೇಯಾ ನನ್ನ ಚೆನಾಗ್ ನೋಡ್ಕಾತ ಇದ್ದಿದ್ದು . ಈಗ್  ಯಾರೂ ನನ್ನ ಅವ್ಳಾಗೇ ಪ್ರೀತಿ ಮಾಡಕ್ಕಿಲ್ಲ”. ಯಾಕೋ ಸಂಭಾಷಣೆ ತೀರಾ ಸೀರಿಯಸ್ ಆದ  ಹಾಗಾಯಿತು. ಆತ  ಯಾರೋ ಗೊತ್ತಿಲ್ಲ, ಇದುವರೆಗೂ ನೋಡಿಲ್ಲ, ಪರಿಚಯ ಇಲ್ಲ. ಮೇಲಾಗಿ ಕುಡಿದಿದ್ದ ಬೇರೆ. ಯಾವುದಕ್ಕೂ ಸಹ ಆತ ಆಡ್ತಿದ್ದ ಮಾತುಗಳಿಗೆ ನನ್ನದೇ ಆದ  ಕಲ್ಪನಾ ಚಿತ್ರಗಳನ್ನ ಸೃಷ್ಟಿಸಿಕೊಳ್ಳೋದನ್ನ ತಡೀಲಿಕ್ಕೆ ಆಗಲಿಲ್ಲ. ನನ್ನ ಮನಸ್ಸಲ್ಲಿ ಒಂದು ಸಣ್ಣ ಚಿತ್ರ  ಓಡ್ತಾನೆ ಇತ್ತು – ಆತನ  ಅತ್ತಿಗೆಯದ್ದು, ಅಮ್ಮನದ್ದು! ಸ್ವಲ್ಪ ಮೌನವಾದೆ.

ನನಗಿನ್ನೂ ಉತ್ತರ ಸಿಕ್ಕಿರಲಿಲ್ಲ. ಕೊನೆಗೆ ನೇರವಾಗಿಯೇ ಕೇಳಿಬಿಟ್ಟೆ – “ಯಾವುದೇ ಹೆಂಗಸೊಟ್ಟಿಗೆ ನೀನು ಮಲಗಿಲ್ವಾ?”  ಈ ಪ್ರಶೆಯಿಂದ ಆತನಿಗೆ ಗಾಬರಿಯಾಗಬೋದೇನೋ ಅಂದುಕೊಂಡದ್ದು ಸುಳ್ಳಾಗಿತ್ತು. “ನಿನ್ನ ಹೆಸರೇನು?”  ಅನ್ನೋ ಪ್ರಶ್ನೆಗೆ ಉತ್ತರ ಹೇಳೋ ರೀತಿಯಲ್ಲೇ, ಯಾವುದೇ ರೀತಿಯಲ್ಲಿ ಉತ್ಸುಕನಾಗದೆಯೇ ಹೇಳಿದ– “ಇಲ್ಲಾಪ್ಪ”.  ಒಂದಷ್ಟು ಸೆಕೆಂಡು ಮೌನವಾಗಿತ್ತು. ಮುಂದೆ ಏನಾದ್ರೂ ಹೇಳುತ್ತಾನೇನೋ ಅಂತ  ಸುಮ್ಮನಿದ್ದೆ. ಏನೂ  ಹೇಳಲಿಲ್ಲ. “ಮಲಗ್ಬೇಕು ಅಂತ  ಅನ್ನಿಸೋಲ್ವಾ?”  ಅನ್ನೋ ಪ್ರಶ್ನೆ ಬಾಯಿಯ ತುದಿಯಲ್ಲಿತ್ತಾದ್ರೂ ಯಾಕೋ ಕೇಳೋ ಧೈರ್ಯ ಸಾಕಾಗಲಿಲ್ಲ. ಸುಮ್ಮನೆ ಮಾತು ಮುಂದುವರೆಸಿದೆ - ದಾಕ್ಷಿಣ್ಯಕ್ಕಾಗಿಯೇ (ವಿಚಿತ್ರ!).  “ಮದುವೆಯಾಗ್ಬೇಕು ಅನ್ನಿಸೋಲ್ವಾ?”  ಅಷ್ಟೂ ಹೊತ್ತು ಆತನಿಗೆ ಈ ಪ್ರಶ್ನೆ ಕೇಳಿ ಕೇಳಿ, ನಾನೇನೋ ಬೇರೆ ಉತ್ತರ  ಅಪೇಕ್ಷಿಸ್ತಿದ್ದೇನೆ ಅನ್ನಿಸಿರಬೇಕು. ಆಗೋ  ಸಾಧ್ಯತೆ ಇಲ್ಲ ಅಂತ  ಹೇಳ್ತಿದ್ದೋನು – “ಹೂಂ.. ನಂಗೂ ಮದ್ವೆ ಆಗ್ಬೇಕು” ಎಂದ. ಅವನಿಗೆ ಅಡುಗೆ ಮಾಡಿಕೊಡ್ಲಿಕ್ಕೆ ಮುಖ್ಯವಾಗಿ ಅವನ  ಬಟ್ಟೆ ತೊಳೆದು ಕೋಡ್ಲಿಕ್ಕೆ ಅವನಿಗೆ ಹೆಂಡತಿ ಬೇಕಿದ್ದದ್ದು ಎಂದು ಹೇಳಿದ.

ನನ್ನ ಕುತೂಹಲ ತಣಿಯದೇ ಇದ್ದದ್ದು ಈ ಸಂಭಾಷಣೆಯನ್ನ ಒಂದು ರೀತಿ ಯಾಂತ್ರಿಕವಾಗಿಸಿತು. ಸುಮ್ಮನೆ ಕೇಳಿದೆ – ಮೊದಲು ಕುಡಿದಿದ್ದು ಯಾವಾಗ?’. ಮೊದಲಿಗೆ ತನಗೆ ಸಾರಾಯಿ ಕುಡಿಸಿದ್ದ ಸ್ನೇಹಿತನನ್ನ ಮರ್ಮಾಂಗಳನ್ನ ಮುಟ್ಟಿಕೊಳ್ಳುವ ಹಾಗೆ ಬೈದು ಹಾಕಿದ. “ಮೊದಲ್ನೇ ಸಲಾವ ವಾಂತಿಯಾಗೋಗಿತ್ತು. ಆಮೇಲ್ ಆಮೇಲ್ ಸೆಟ್ ಆಯ್ತು. ಹ್ಹ.. ಹ್ಹ..” ಇದೊಂದೆ ಬಾರಿ ಈ ಪ್ರಯಾಣದುದ್ದಕ್ಕೂ ಆತ  ನಕ್ಕಿದ್ದನ್ನ ನಾನು ನೋಡಿದ್ದು.

“ನಾನು  ಕಾರ್ಪೆಂಟ್ರಿ ಕೆಲ್ಸ ಮಾಡ್ತೀನಿ. ಏನಾರ ಇದ್ರೆ ಹೇಳಿ. ನೀವು ಎಷ್ಟಾರ ಕೊಡಿ ಪರ್ವಾಯಿಲ್ಲ” ನಾ ಇಳಿಯುವ ವೇಳೆಗೆ ಹೇಳಿದ. ನಾನೂ “ಹೂಂ ಆಯ್ತು” ಎಂದೆ. ಆದ್ರೆ ಅವನಿಗೇ ಹೊಳೀಲಿಲ್ಲ  ಇಷ್ಟು  ದೊಡ್ಡ ಸಾಗರದಲ್ಲಿ ನನ್ನನ್ನ ಮತ್ತೆ ಹೇಗೆ ಸಂಪರ್ಕಿಸೋದು ಅಂತ. ನನ್ನ ಮುಖವೂ ಸಹ ನೋಡಿಲ್ಲ. ಫೋನ್ ನಂಬರ್ ಸಹ ಕೊಡಬೇಕನ್ನಿಸ್ಲಿಲ್ಲ. ಅಷ್ಟಾಗಿಯೂ ನಾನು ಅವನನ್ನ ಸಂಪರ್ಕಿಸ್ತೇನೆ ಅಂತ ಹೇಗೆ ಅಂದುಕೊಂಡ ಗೊತ್ತಿಲ್ಲ. ನನಗೂ ಅದು ಬೇಕಿರ್ಲಿಲ್ಲ.

ಬಸ್ ಇಳಿದೆ. ಅವನ ಹೆಸರನ್ನೂ ಕೇಳಲಿಲ್ಲ (ಬೇಕೂ ಇರಲಿಲ್ಲವೇನೋ).  ಆದರೆ ಎರಡು ಪ್ರಶ್ನೆಗಳು ಹಾಗೆ ಉಳಿದು ಹೋದವು –“ಹೆಂಗಸೊಟ್ಟಿಗೆ  ಮಲಗ್ಬೇಕು ಅಂತ ಅನ್ನಿಸಿಲ್ವಾ?” ಹಾಗೂ ಮತ್ತೊಂದು ಇದನ್ನ ಬರೆಯೋದಿಕ್ಕೆ  ಕೂತಾಗ ಬಂದದ್ದು – “ಅವನು ಸಾಯಬೇಕು ಅಂತ ಅಂದ್ಕೊಂಡದ್ದು ಯಾಕೆ?”

 

No comments:

Post a Comment