Friday, September 7, 2018

ಭಾವ-ಭ್ರಮೆ

 


“ನಾನೊಂದು ಸುಂದರವಾದ ಭ್ರಮಾಲೋಕವನ್ನ ಸೃಷ್ಟಿಸ್ಲಿಕ್ಕೆ ಹೊರಟಿದ್ದೀನಿ. ಹೋಯ್! ನಿಮ್ಮೆಲ್ಲರ ಸಹಕಾರ ಇಲ್ಲದಿದ್ರೆ ಹೇಗೆ?” ಭಲೇ! ಎಷ್ಟು ಚೆಂದ ವಾಕ್ಯಮಾಲೆಯೊಂದು ಕಾದಂಬರಿಯ ಆರಂಭಕ್ಕೆ ಅರ್ಪಣೆಯಾಯ್ತು ಅಂತ ಹೆಮ್ಮೆಯ ಭಾವವೊಂದು ಮೂಡಿತು. ಬೆನ್ನನ್ನ ನೇರ ಮಾಡಿ ಕಿಟಕಿಯ ಹೊರಗೆ ನನ್ನ ರೂಮಿನ ನೇರಕ್ಕೆ ತಲೆ ಎತ್ತಿದ್ದ ಬೀದಿ ದೀಪದ ಕಂಬವೊಂದರ ಕಡೆಗೆ ದೃಷ್ಟಿ ನೆಟ್ಟಿದೆ. ದೀಪದ ಕೇಸ್ ನ ಒಳಗೆ ಕಪ್ಪು ಕಪ್ಪಗಿನ ರಾಶಿಯೊಂದು ಸ್ಪಷ್ಟವಾಗಿ ಕಾಣುತ್ತಿತ್ತು. ಹಲವಾರು ಕಪ್ಪು ಹುಳಗಳು ದೀಪದ ಸುತ್ತಲೇ ಅದಕ್ಕೆ ಮುತ್ತಿಕ್ಕಲು ಹಾರುತ್ತಿದ್ದವು.

ಈ ವೇಳೆಗಾಗಲೇ ಒಂದಷ್ಟು ನಾಯಿಗಳ ಹಿಂಡು ನಾನಿರುವ ಬಿಳ್ಡಿಂಗ್ ನ ಎದುರು ರೋಡಿನಲ್ಲಿ ಗುಪ್ತ  ಸಮಾವೇಶವೊಂದನ್ನ ಏರ್ಪಡಿಸಿದ್ದವು. ಯಾರದ್ದೋ ತೀರ್ಪು ಮತ್ಯಾರಿಗೋ ಹಿಡಿಸದ ಕಾರಣವೋ ಅಥವಾ ಪಕ್ಕದ ಬೀದಿಯ ಬೇರೆ ಪಕ್ಷದ ನಾಯಿಯೊಂದು ಈ ಸಮಾವೇಶವನ್ನ ಕದ್ದಾಲಿಸಲು ಬಂದದ್ದು ಇವುಗಳ ಗಮನಕ್ಕೆ ಬಿದ್ದ ಕಾರಣವೋ, ಕೆಲವು ಏಕಾ ಏಕಿ ತಮ್ಮ ಗಂಟಲಿನ ಉಚ್ಛ ಧ್ವನಿಯಲ್ಲಿ ಬೊಗಳಲಾರಂಭಿಸಿದವು. ಮತ್ತೆ ಕೆಲವು ಆಕಾಶವನ್ನು ನೋಡುತ್ತಾ, ‘ಉವೂ.. ಉವೂ …ಉವೂ. ಎಂದು ಊಳಿಡಲಾರಂಭಿಸಿದವು. ರಸಭಂಗಕ್ಕೆ ಕಾರಣವಾದ ಈ ನಾಯಿಗಳ ಮೇಲೆ ಅತೀವವಾದ ಸಿಟ್ಟು ಉಕ್ಕಿ ಬಂದು, ಚೇರನ್ನ ಹಿಂದಕ್ಕೆ ವೊಗೆದು, ಬಾಗಿಲ ಚಿಲಕವನ್ನ ಸರಿಸಿ, ನೀರಿನ ಬಾಟಲನ್ನು ಕೈಯಲ್ಲಿ ಹಿಡಿದು ರಭಸದಿಂದ ನಾಯಿಗಳನ್ನು ಗಮನಿಸಲು ಮುನ್ನುಗ್ಗಿದೆ. ಮೇಲಿಂದ ತಮ್ಮನ್ನು ಒಬ್ಬ ಗಮನಿಸುತ್ತಿದ್ದದು ಅವುಗಳ ಗಮನಕ್ಕೆ ಬಾರದೆ, ಅವು ತಮ್ಮ ಗೋಳಾಟ-ಊಳಾಟಗಳನ್ನು ನಿಲ್ಲಿಸದೆ ಮತ್ತಷ್ಟು ಧಾಂದಲೆ ಎಬ್ಬಿಸಿದವು.

ಥುತ್ತೇರಿ.. ಹಲ್ಕಟ್ ಮುಂಡೇವು. ನಿಲ್ಸೋದೆ ಇಲ್ಲ ಅಂತವೆ. ಈ ಮಂಡ್ಯದ್ ಜನ ಮಲಗೋ ವರ್ಗು ಜನರಷ್ಟೆ. ಮಲ್ಗಿದ್ ಮೇಲೆ ಸತ್ತ ಹೆಣಗಳು. ಥುತ್! ಒಬ್ಬನಿಗಾದ್ರು ಈ ಜಗತ್ತಲ್ಲಿ ಎಂಥಾ ಧಾಂದಲೆ ಆಗ್ತಿದೆ ಅನ್ನೋದು ಪರಿಜ್ನಾನಕ್ಕೆ ಬರ್ತಿದ್ಯಾ. ಥೂ! ರಾಮ.. ಪಕ್ಕದಲ್ಲಿ ಯಾರಾದ್ರೂ ಇದ್ದಿದ್ರೆ ಇವ್ನು ಎಂಥಾ ಕೆಟ್ಟ ಮಾತಾಡ್ತಾನೆ. ಮಂಡ್ಯದ್ ಜನರನ್ನ ಹಲ್ಕಟ್-ಗಿಲ್ಕಟ್ ಅಂತಾನೆ ಅಂಡ್ಕೊಂಡ್ಬಿಡ್ತಿದ್ರು. ಅಲ್ಲ.. ನಾ ಮೊದ್ಲಿಗೆ ಬೈದಿದ್ದು ನಾಯಿಗಳಿಗೆ ಅಂತ ಹೇಳಿದ್ರೂನು ನಂಬ್ತಿರ್ಲಿಲಿಲ್ಲೇನೊ” ನನ್ನ ಸ್ವಗತ ನನ್ನೊಳಗಿದ್ದರೂ, ಮನಸ್ಸೊಳಗೆ ನನ್ನ ಒಳ್ಳೆಯತನದ ಪರದೆಯ ಒಳಗಿಂದ ಅದರ  ಹೊರಗೆ ನಿಂತಿದ್ದ ನನ್ನ ಎಲ್ಲಾ ಚಿರ –ಪರಿಚಿತರ ಎದುರಿಗೆ ಮಾತನಾಡ್ತಿದ್ದೆ. ನಾನು ಕೆಟ್ಟವನೇನಲ್ಲ ಅಂತ ಮತ್ತೊಂದು ತರಹೇವಾರಿ ಪರದೆಯೊಂದನ್ನ ಎಳೆದುಕೊಳ್ತಿದ್ದೆ. “ಥುತ್! ಆ ನಾಯಿಗಳೇ ಪರ್ವಾಯಿಲ್ಲ. ಒಳ್ಳೇದೋ ಕೆಟ್ಟದ್ದೋ ಮನ್ಸಿಗೆ ಬಂದಂಗೆ ಕೂಗ್ತವೆ. ಮನ್ಸಿಗೆ ಬಂದಂಗೆ ಬಿಹೇವ್ ಮಾಡ್ತವೆ. ನಾನು ಒಳ್ಳೇತನದ ಹಿಡಿತಕ್ಕೆ, ತೆಕ್ಕೆಗೆ, ಅದರ  ಸುಳಿಯಲ್ಲಿ ಸಿಲುಕಿ – ನಾನಾಗೆ ಸಿಲುಕಿ – ನನಗೆ ನಾನೇ ಮೋಸ ಮಾಡಿಕೊಳ್ತಿಲ್ವಾ? ಅರ್ರೇ! ಕಳ್ ಮುಂಡೇವು. ಒಂದು ನಿಮಿಷ ಆದ್ರೂ ಯೋಚಿಸ್ಲಿಕ್ಕೆ ಬಿಡ್ತಿದ್ದಾವ. ನಾಯಿ ಮುಂಡೇವು. ನೋಡು, ನೋಡಲ್ಲಿ. ನೋಡ್ತಿದ್ದಂಗೆ  ಶುರು ಹಚ್ಕೋತು ಆ ನಾಯಿ. ಮಾನ ಗೀನ ಅನ್ನೋದಿಲ್ವ ಇವಕ್ಕೆ ಅಂತ. ನೋಡದು, ಇದು  ಮಾಡೋಕ್ಕೆ ಶುರು ಮಾಡ್ತು ಅಂತ  ಅದು  ಜಗಳಕ್ಕೆ ನಿಲ್ತು. ಇವುಗಳ ಜೀವನವೇ ಅರ್ಥವಾಗೋಲ್ವಲ್ಲಾಪ್ಪಾ! ಆ ಹೆಣ್ಣು ನಾಯಿ ಪಾಪ.. ಇವ್ರಿಬ್ರ ಜಗಳ  ಇತ್ಯರ್ಥ ಆಗೋ ವರ್ಗು ಕಾಯತ್ತೋ ಏನೋ! ಆಹ್! ಲೇ ಯತಿರಾಜ.. ಎಂಥಾ ಸ್ವಗತ! ಎಷ್ಟು ಚಂದದ ಸಂಭಾಷಣೆ ಕಟ್ಕೋತಿದೀಯಲ್ಲೋ! ಇದ್ಕಿಂತ ಬೇಕೇನೋ ನಿಂಗೆ ಕಾದಂಬರೀನೋ, ಹಾಳೋ ಬರೆಯೋದಕ್ಕೆ! ಹೌದು, ಹೌದು.. ಇದ್ನೇ ಹೇಗಾದ್ರೂ ಮಾಡಿ ನನ್ನ ಕಥೆಲೀ ಬರೋ ಹಾಗೆ ಮಾಡ್ಬೇಕು ನಾನು! ನಾಯಿ ಮುಂಡೇವು.. ಬೊಗಳಿದ್ದು ಒಳ್ಳೇದೆ ಆಯ್ತು. ಈ ಜನ ಎದ್ದಿದ್ರೆ ಎಂಥಾ ಸಂಭಾಷಣೆ ಮಿಸ್ ಆಗೋಗ್ತಿತ್ತಲ್ಲ.. ಸುಮ್ನೆ ಅನ್ಯಾಯವಾಗಿ ಬೈಸ್ಕೊಂಡ್ರು ಈ ಜನ”, ಈ ಆಲೋಚನೆಗಳು ಹುಟ್ಟುತ್ತಿದ್ದಂತೆಯೇ,  ಅವಕ್ಕೇ ಕೊಂಡಿ ಬೆಸೆದು ಹುಟ್ಟಿರುವಂಥೆ, ನನ್ನ  ಎಲ್ಲಾ ಚಿರಪರಿಚಿತರು ಸಾದೃಶವಾಗತೊಡಗಿದರು. “ಹಾಂ! ನಾನು ಈ ಸರಿ ನನ್ನ ಧ್ವನಿಯಲ್ಲೇ, ನನ್ನ ಮಾತಿನ ಶೈಲಿಯಲ್ಲೇ ವಾಕ್ಯಗಳನ್ನ ಕಟ್ಬೇಕು. ಯಾವುದೇ ಉತ್ಪ್ರೇಕ್ಷೆಯೆನಿಸೋ ಹೆಚ್ಚಿಗೆ ವರ್ಣನೆ ಅನಗತ್ಯ. ನಾ ಬರೆಯೋದು ನನ್ನ ಧ್ವನಿಯನ್ನ, ನನ್ನ ಮಾತಿನ ಧಾಟಿಯನ್ನ ಕ್ಯಾರಿ ಮಾಡಬೇಕು! ಹಾಂ.. ಹಾಂ..  ಹೌದು! ನಿಜ..!” ಕೈ  ಎರಡನ್ನೂ ಬಾಲ್ಕನಿಯ ಸರಳುಗಳ ಮೇಲಿಟ್ಟು ಆಕಾಶವನ್ನು ನೋಡುತ್ತಿದ್ದೆ. ಕಪ್ಪು,  ತೆಳು ಕಪ್ಪು, ಅತೀ  ತೆಳು ಕಪ್ಪು ರೀತಿಯ ಪ್ಯಾಚ್ ಗಳು  ಆಕಾಶದಲ್ಲೆಲ್ಲಾ ಯಾರೊ ಕತ್ತರಿಸಿ ವೇಸ್ಟೇಜ್ ಗಳೆಂದು ಎಸೆದಂತೆ ಅಲ್ಲಲ್ಲಿ ಯಾವುದೇ ಶಿಸ್ತಿಲ್ಲದೆ ನನ್ನ ಮೆದುಳಿನಲ್ಲಿನ ಆಲೋಚನೆಗಳ ಹಾಗೆ ಚೆಲ್ಲಿದ್ದವು.

**************

ನನಗೆ ನನ್ನ ಬರವಣಿಗೆಯನ್ನ ಮುಂದುವರೆಸ್ಲಿಕ್ಕೆ ಮನಸ್ಸಾಗ್ಲಿಲ್ಲ. ನಾನು ನನ್ನ ಧಾಟೀಲೆ ಹೇಳ್ಳಿಕ್ಕೆ ಹೋಗ್ತಿದ್ರೂ ನಾ ಬರಿಯೋ ವಿಷಯ ಯಾವುದು ಅಂತ ನನಗೇ ಗೊತ್ತಾಗ್ತಿಲ್ಲ. ಸ್ವಲ್ಪ ಬರೀತೇನೆ, ಬರೆದ ಮೇಲೆ ಮುಂದೆ ಏನು ಬರೆಯೋದು, ಹೇಗೆ ಕಥೆ ಕಟ್ಟೋದು ತಿಳೀದೆ ಓಡಾಡ್ತೇನೆ, ಕೊನೆಗೆ ಲ್ಯಾಪ್ಟಾಪ್ ಮುಚ್ಚಿ ಮಲಗ್ತೇನೆ! ನಾನು ಬರೀಬೇಕು ಅಂತಲೇ ಬರೀತಿದೇನೆ ಅನ್ನೋದು ನನಗೆ ಗೊತ್ತಿದೆ. ಒಂದು ರೀತಿಲಿ ಮೊದಲ ವಾಕ್ಯ ನಿಜವಾಗ್ಯೂ ನನ್ನ ಜೀವನಕ್ಕೆ ಹಿಡಿದ ಕನ್ನಡಿ. ನಾನು ಭ್ರಮಾಕೂಪದ ಮಂಡೂಕವಾಗಿದೀನಿ. ನಾನು ನನ್ನನ್ನ ಸಂಪೂರ್ಣ ತೆರೆದಿಟ್ಕೋಳ್ಳಿಕ್ಕೆ ಆಗ್ತಿಲ್ಲ. ತೆರೆದಿಟ್ಕೋಳ್ಳಿಕ್ಕೆ ಪ್ರಯತ್ನಿಸೋವಾಗ ನಾನು ಬಿಚ್ಚಿಟ್ಕೊಳ್ಬೇಕಿರೋ ಗುಣ ಮುಚ್ಚಿಟ್ಟ ರೋಗದಂತೆ ಭಾಸವಾಗುತ್ತದೆ. ಅದನ್ನ ತಿರುಗಿಸಿ, ತಿರುಚಿ ಇನ್ನೊಂದು ರೀತಿಲಿ ಹೇಳೋ ಕಲೆ ನಂಗಿಲ್ಲ. ಕೊನೆಗೆ ನಾನು ಬರೆದಿರೋ ಎಲ್ಲಾ ಕಥೆಗಳನ್ನ ಓದ್ಲಿಕ್ಕೆ ಶುರು ಮಾಡಿ, ನನ್ನ ಮೇಲೆಯೇ ನನಗೆ ಅಸಹ್ಯ ಮೂಡಿ ಓಡಿಹೋಗ್ಬೇಕು ಅಂತ  ಅನ್ನಿಸತ್ತೆ.

ಯಾವುದೇ ಸನ್ನಿವೇಶ ಆಗಲೀ ಸಂಗತೀ ಆಗಲಿ, ನನ್ನ ಜೀವನದ್ದೇ ಆಗಿದ್ರೂ ಅದರಿಂದ ಅಸ್ಪೃಶ್ಯನಾದ ಭಾವನೆ ಮೂಡಿದೆ. ಏನೇ ಆದರೂ, ಯಾವುದೇ ಘಟನೆಯಾದ್ರೂ ಅದನ್ನ ವರ್ಣಿಸಬೇಕು, ಇನ್ನೊಬ್ರಿಗೆ ಹೇಳಬೇಕು ಅಂತ  ಅನ್ನಿಸ್ತಿಲ್ಲ. ಇನ್ನು ಬರೆಯೋ ಮಾತೆಲ್ಲಿ? ಆದರೆ ವಿಪ್ರಯಾಸ ಅನ್ನೋಹಾಗೆ, ನನಗೆ ನಾಲ್ಕು ಜನರಿಗೆ ತಾಕೋ ಅಂಥ ಕಥೆಯನ್ನೋ, ಏನನ್ನೋ ಬರೀಬೇಕು ಅಂತಾನೂ ಇದೆ. ನನಗೆ ವರ್ಣಿಸಲಿಕ್ಕೆ ಬೇಕಾಗೋ ವಿಷಯಗಳಲ್ಲಿ ಆಸಕ್ತಿಯಿಲ್ಲ, ಆದರೂ ಏನನ್ನಾದರೂ ವರ್ಣಿಸೋ ತವಕ. ಇದೇ ತವಕದಲ್ಲಿ ಏನೇನನ್ನೋ ವರ್ಣಿಸಬೇಕು ಅಂತ  ಹೋಗಿ, ಅದು  ಕೊನೆಗೆ ಮುಂದುವರೀದೆ ತಟಸ್ಥವಾಗಿ ಕೊಳೆತು ನಾರಲಿಕ್ಕೆ ಶುರು ಮಾಡತ್ತೆ. ಅದಾಗ್ಲೇ ಒಂದಷ್ಟು ಕೊಳೆತು ನಾರ್ತಿವೆ. ಅವನ್ನ ಮುಟ್ಟಲಿಕ್ಕೂ ಅಸಹ್ಯವೆನಿಸೋ ಹಾಗಿವೆ. ಆದರೂ ಅವ್ಯಾಯುವನ್ನೂ ಡಿಲೀಟ್ ಮಾಡಲಿಕ್ಕೂ ಮನಸ್ಸಾಗ್ತಿಲ್ಲ! ಗೊತ್ತಿಲ್ಲ. ಮತ್ತೆ ಆಶಾಭವನೆ ಇರಬೋದೇನೋ, ಮುಂದೊಂದು ದಿನ ನನ್ನ ಆಲೋಚನೆಗಳು ಪ್ರಬುದ್ಧವಾಗಿ ಒಂದು ರೂಪವನ್ನ ಪಡಕೋಳ್ಳಿಕ್ಕೆ ಶುರು ಮಾಡಿದಾಗ ಈ ವಿಷಯಗಳು ನೀರುಹೊಯ್ದುಕೊಂಡು ವಾಸನೆ ಹೋಗಿಸಿಕೊಂಡು ತಲೆಯೆತ್ತಿ ಹರಿದಾಡಬಹುದೇನೋ ಅಂತ  ಇರಬೇಕು.

*************

ನಾ ಅಂದೇ ಮುಚ್ಚಿಟ್ಟೆ – ವಾಸನೆ ತಡೆಯಲಾರದೆ. ಬಹಳಷ್ಟು ದಿವಸಗಳೇ ಕಳೆದು ಹೋದವು. ಮತ್ತೊಮ್ಮೆ ತೆರೆದು ನೋಡೋಣವೆನಿಸಲೂ ಇಲ್ಲ. ವಾಸನೆ ಹೊರಗೆ ಹಬ್ಬಲಿಲ್ಲ – ನೆನಪಿಸ್ಲಿಕ್ಕೆ. ಇದೊಂದಿದೆ ಅನ್ನೋದು ಸಹ ಮರೆತುಹೋಗುವಷ್ಟು ಯಾಂತ್ರಿಕವಾಗಿಹೋಗಿತ್ತು ಬದುಕು. ಇಂದು ನೆನಪಾದವು – ಇದ್ದಕ್ಕಿದ್ದ ಹಾಗೆ. ಮನಸ್ಸೇಕೋ ಕಾಲದಲ್ಲಿ ಸಾಕಷ್ಟು ಹಿಂದೆ ಸರಿದಿದೆ. ನಾನು ಮಿಡ್ಲಿಸ್ಕೂಲಿನಲ್ಲಿದ್ದಾಗ ಶಾಲೆಗೊಬ್ಬರು ಬಂದಿದ್ದರು – ನೆನಪಿನ ಶಕ್ತಿಯನ್ನ ಹೆಚ್ಚಿಸ್ಲಿಕ್ಕೆ ತರಬೇತಿ ಕೊಡೋದಿಕ್ಕೆ. ಅವರಿಂದ ಪ್ರಭಾವಿತನಾದಂತೆ ನಟಿಸ್ಲೇಬೇಕಾದ ವಯಸ್ಸದು. ಜೀವನದಲ್ಲಿ ಬಹಳ ಪ್ರಾಮುಖ್ಯವಾದ್ದನ್ನ ಬರೆದಿಡ್ತಾ ಹೋಗಿ ಒಂದು ಪುಸ್ತಕದಲ್ಲಿ ಅಂತ ಪಾಠ ಮಾಡಿದ್ರು. ನಾನು ಅಪ್ಪನ ಬಳಿ ಕೊಂಡ ಹೊಸ ಡೈರಿಯಲ್ಲಿ ಆರಂಭಿಸಿದೆ – ಇಂದು ಬೆಳಿಗ್ಗೆ ಬೇಗ ಎದ್ದೆ. ಎದ್ದು, ಮುಖ  ತೊಳೆದು ಟಿ.ವಿ. ವಿಡಿಯೋ ಗೇಮ್  ಆಡಲು ಕುಳಿತೆ. ಅಮ್ಮ ಹಾಲು ಕೊಟ್ಟಳು. ಹಲ್ಲು ಉಜ್ಜದೆ ಹಾಲು ಕುಡಿದೆ. ವೀಡಿಯೋ ಆಡುವಾಗ ಅಕ್ಕನ ಜೊತೆ ಜಗಳವಾಡಿದೆ....” ನಾನು ಸ್ನಾನ ಮುಗಿಸಿ ಹೊರ ಬಂದಾಗ ಅಪ್ಪ ಅವಸರಾವಸರವಾಗಿ ಏನನ್ನೋ ಮಾಡುತ್ತಿದ್ದಾಗೆ ಇತ್ತು. ಬ್ಯಾಂಕಿನವರು ಪ್ರತಿವರ್ಷ ಕೊಡುತ್ತಿದ್ದ ಡೈರಿಯನ್ನ ಶೇಖರಿಸಿಟ್ಟಿದ್ದ ಪೆಟ್ಟಿಗೆಗೆ ಅಪ್ಪ ಬೀಗ ಜಡೀತಾ ಇದ್ದರು. ಹಾ...ಹಾ.. ಎಲ್ಲೋ ನನ್ನ ಡೈರಿಯನ್ನ ಓದಿದ್ದರೆಂದು ತೋರ್ತದೆ. ಹೀಗೆ ಬಿಟ್ರೆ ಇರೋ ಬರೋ ಡೈರೀನೆಲ್ಲಾ ಮುಗಿಸಿ ಹಾಕ್ತಾನೆ ಅನ್ನೋ ಭಯ ಬಂದಿದ್ದಿರಬೇಕು! ಆ ಮೆಮೋರಿ ಟೀಚರ್ ಪ್ರಾಮುಖ್ಯವಾದ್ದನ್ನ ಬರೆದಿಡಿ ಅಂತ ಹೇಳಿದ್ರೇ ಹೊರತು ಯಾವುದು ಪ್ರಾಮುಖ್ಯ, ಯಾವುದಲ್ಲ ಅನ್ನೋದನ್ನ ಹೇಳಲಿಲ್ಲ. ನನಗೆ ಆದದ್ದೆಲ್ಲಾ ಪ್ರಮುಖವಾದ್ದೇ ಅಲ್ಲವೇ ಅನ್ನೋ ಮೂಡಿದ ಗೊಂದಲದಲ್ಲಿ ಎಲ್ಲವನೂ ದಾಖಲಿಸ್ತಾ ಹೋದೆ. ಇಂದಿಗೆ ಅದು ನೆನೆಸಿಕೊಂಡ್ರೆ ನಗು ಬರ್ತದೆ. ಆದ್ರೆ ನಾನು ಇಂದಿಗೂ ಬದಲಾಗಿಲ್ಲ! ನನಗೆ ಯಾವುದು ಪ್ರಾಮುಖ್ಯ, ಯಾವುದು ಪ್ರಾಮುಖ್ಯವಲ್ಲ ಅನೋದನ್ನ ನಿರ್ಧರಿಸೋ ಶಕ್ತಿಯೇ ಯಾವತ್ತಿಗೂ ಇದ್ದಿರಲಿಲ್ವೇನೋ. ಅಥವಾ ಈಗೆಲ್ಲಾ ಯಾವುದೂ ಪ್ರಮುಖವಾಗಿ ಅನ್ನಿಸ್ತಿಲ್ಲ. ಅವತ್ತು ಯಾವ  ಕಾರಣಕ್ಕೆ ನನ್ನ ಬರವಣಿಗೆ ಸ್ಪೂರ್ತಿಯನ್ನ ಕಳಕೊಳ್ತೋ, ಈಗಲೂ ಅದೇ  ಮನಸ್ಥಿತಿಯಲ್ಲಿದ್ದೇನೆ – ಯಾವುದೂ ಪ್ರಮುಖವಾಗಿ ಕಾಣಿಸ್ತಿಲ್ಲ!. ಆದರೆ ಕಥೆ – ಕಾದಂಬರಿಗಳನ್ನ ಬರೀಬೇಕು ಅನ್ನೋ ಹುಚ್ಚು ಆಲೋಚನೆಯೂ ನಿಂತಿಲ್ಲ. ಆ ಹುಚ್ಚೇ ಒಂದಷ್ಟನ್ನ ಗೀಚಿಸ್ತಾ ಇದೆ ಆಗಾಗ್ಗೆ.

ಮಧ್ಯರಾತ್ರಿ ಎಚ್ಚರವಾಯ್ತು. ಸೀದಾ ರೀಡಿಂಗ್ ಸ್ಪೇಸ್ ಗೆ  ಹೋದೆ. ಲ್ಯಾಪ್ ಟಾಪ್ ಆನ್  ಮಾಡಿ ಟಪ  ಟಪ್  ಟೈಪ್ ಮಾಡಿದ್ದಷ್ಟೇ ನೆನಪು. ಬೆಳಗ್ಗೆ ಇನ್ನೊಮ್ಮೆ ಓದಲೇ ಬೇಕಿತ್ತು.

“ಭಯ... ಭಯ... ಓಹ್! ಬೆಳಕು, ಬೆಳಕು... ದಯಮಾಡಿ ಬಾಗಿಲು ಮುಚ್ಚಿರಿ.. ನಾನು ಕಂಡು ಬಿಟ್ಟರೆ? ಅಯ್ಯೋ! ಎಂಥಾ ದರಿದ್ರ ರೂಪವಿದು. ಜನ ಉಗಿದಾರು, ಹೊಡೆದಾರು, ನನ್ನ ಹರಿದು ನಾಲ್ಕಾರು ಕಡೆ  ಎಸೆದಾರು. ನನ್ನ ನೋಡಿದೊಂದಿಬ್ಬರು ನನ್ನೀ ವೇಷದ ಬಗೆಗಿನ ಸತ್ಯವನ್ನು ಮುಚ್ಚಿಟ್ಟರು! ನನ್ನೇಡೆಗಿನ ಮರುಕವೇ? ಅಲ್ಲ.. ಅಲ್ಲ... ನನ್ನ ಹುಟ್ಟಿಸಿದಾತನೊಟ್ಟಿಗಿನ ವಿಶ್ವಾಸವೇ? ಅಯ್ಯೋ... ಆತ  ಕುರುಡಾಗಿ ಹೋಗಿದ್ದಾನೆ! ಹೀಗೆಯೇ.. ಹೀಗೆಯೇ... ನನ್ನ ಹಾಗೆಯೇ  ವಿಕಾರ, ಕುರೂಪಿ, ಅಸಹ್ಯಕರ ಜೀವಿಗಳನ್ನ ಹುಟ್ಟಿಸಿ ಜಗತ್ತಿಗೆಲ್ಲಾ ತೋರಿಸಬೇಕೆಂದಿದ್ದಾನೆ! ಅಯ್ಯೋ... ಅಯ್ಯೋ...ನೀವಾದರೂ ಹೇಳಬಾರದೆ? ಆತನಿಗೇನೂ ಕಾಣಲಾರದು... ದಯಮಾಡಿ ಎಲ್ಲಾ ತಿಳಿದ ನೀವೂ ಹೀಗೆ ನಮ್ಮ ಮೇಲೆ ಬೆಳಕ್ಹಾಯಿಸಬೇಡಿ. ನಾವು ಕಂಡುಬಿಟ್ಟರೆ? ಅಯ್ಯೋ... ಬೇಳಕು, ಭಯ.. ಭಯ...” ನನ್ನ ಲೇಖನಗಳ ಈ ಆರ್ತನಾದ ದಿನಾ ರಾತ್ರಿ ಕನಸಿನಲ್ಲಿ ಕೇಳುತ್ತಿದೆಯಲ್ಲಾ?

********

ಭಾವಾಭಿವ್ಯಕ್ತಿ ಮುಖ್ಯ – ಭಾವ ಉದ್ಭವಿಸಿದಾಗ. ಭಾವ ಉದ್ಭವಿಸಿದೆಯೆನ್ನುವ ಭ್ರಮೆಯ ತೆಕ್ಕೆಗೆ ಸಿಕ್ಕು ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿದ್ದೇನೆ – ಗಾಳಕ್ಕೆ ಸಿಕ್ಕ ಮೀನಿನ ಹಾಗೆ! ಬರವಣಿಗೆ ಅನಿವಾರ್ಯವಾಗಿದೆ – ಭ್ರಮೆಯನ್ನ ತಣಿಸಲಿಕ್ಕೆ. ಬರೀತೇನೆ. ಹುಟ್ಟಿಸ್ತಲೇ ಇರ್ತೇನೆ ಭ್ರಮ ನಿರಸನವಾಗೋವರೆಗೂ. ಈಗೊಂದು ಸುಂದರವಾದ ಭ್ರಮಾಲೋಕವನ್ನ ಸೃಷ್ಟಿಸ್ತೇನೆ. ನೀವೆಲ್ಲಾ ಸಹಕರಿಸಿ.. ಆಯ್ತಾ?

No comments:

Post a Comment