Friday, September 11, 2015

ವಾಸ್ತು-ವಾಸ್ತವ

"ವೈಜ್ಞಾನಿಕ ಕಾರಣಗಳನ್ನ ಕೊಡೋದು ಅಂದ್ರೆ ಮತ್ತೇನಲ್ಲ, ನನ್ನ ಆ ಕಾರಣವನ್ನ ನನ್ನನ್ನು ಸಹಿಸಲಾರದವನೂ ಯಾವ ರೀತಿಯಿಂದಲೂ ಪೊಳ್ಳು ಎಂದು ಸಾಧಿಸಲಾಸಧ್ಯವಾಗಿದ್ದಿರಬೇಕು. ಅಂದರೆ ಯಾವೊಬ್ಬನಾದರೂ ನಡೆಯುವ ಘಟನೆ, ಕ್ರಿಯೆಗಳನ್ನ ಸ್ವಂತ ಅನುಭವಗಳಿಂದ ಸಾಕ್ಷಾತ್ಕರಿಸಿಕೊಳ್ಳಬಹುದಾದಂತಹ ಕಾರಣಗಳು. ಇವರನ್ನು ವಿಚಾರವಾದಿಗಳ ಗುಂಪಿಗೆ ಸೇರಿಸಬಹುದು. ಯಾರೊಬ್ಬರ ಮಾತಿನ ಆಧಾರದ ಮೇಲೆ, ನಡೆಯುವ ಕ್ರಿಯೆಗಳ ಹಿಂದಿರುವ, ಹಾಗೆಯೇ ಆಚರಣೆಯಲ್ಲಿರುವ ಪದ್ಧತಿಗಳ ಹಿಂದಿರುವ ಕಾಣದ ಕೈಗಳನ್ನು ನಂಬದೆ ಕಾಣುವ ಕೈಗಳ ಕೈವಾಡಗಳನ್ನು ಕಂಡುಕೊಳ್ಳುವುದು.
ಆ ರೀತಿ ಪ್ರತಿಯೊಬ್ಬರೂ ಹಿರಿಯರು ಹೇಳಿದ್ದನ್ನು ಪ್ರಶ್ನಿಸದ ಗುಣಗಳನ್ನು ತಮ್ಮಪ್ಪ ಅಮ್ಮಂದಿರಿಂದ ಬಳುವಳಿಯಾಗಿ ಪಡೆದಿದ್ದರೆ, ಇಂದಿಗೂ ಒಂದು ಹುಳ ಕೊಳೆತ ಮಾಂಸದಿಂದ ಉತ್ಪತ್ತಿಯಾಗುತ್ತದೆ, ಒಂದು ಮೊಸಳೆ ನೀರಿನ ತಳದಲ್ಲಿರುವ ಕೊಳೆತ ಮರದ ದಿಮ್ಮಿಗಳಿಂದ ಹುಟ್ಟುತ್ತದೆ ಎನ್ನುವ ಅರಿಸ್ಟಾಟಲ್ ನ ಸಿದ್ಧಾಂತಗಳು ವಿದ್ಯಾರ್ಥಿಗಳ ಬದುಕನ್ನು ಬಹಳ ಸುಲಭವಾಗಿಸಿರುತ್ತಿದ್ದವೇನೋ. ಹಾಗಾಗಿದ್ದಲ್ಲಿ ಮನುಕುಲಕ್ಕಾಗುತ್ತಿದ್ದ ನಷ್ಟಗಳನ್ನ ವಿಜ್ಞಾನದ ವಿದ್ಯಾರ್ಥಿಗಳಾದ ತಮಗೆ ಹೇಳಬೇಕಿಲ್ಲವೆಂದುಕೊಳ್ಳುತ್ತೇನೆ.'' - ಸತ್ಯೇಶ ಮಾತು ಮುಗಿಸುತ್ತಿದಂತೆ ತರಗತಿಯಲ್ಲಿ ದೊಡ್ಡದೊಂದು ನಗೆ.

ಗಣಿತದ ತರಗತಿಯಲ್ಲಿ ವೈಜ್ಞಾನಿಕ, ವಿಚಾರವಾದದ ಚಿಂತನೆ ಏಕೆಂಬ ಪ್ರಶ್ನೆ ಯಾರೊಬ್ಬರಲ್ಲಿಯೂ ಮೂಡಿರಲಿಲ್ಲ. ಸತ್ಯೇಶ ತನ್ನ ಪ್ರಬುದ್ಧತೆ, ಬೋಧನಾ ಶೈಲಿಯಿಂದ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದವ. ಅವನು ಹೇಳಿದ್ದೆಲ್ಲ ಶಂಖದೊಳಗಿನಿಂದ ಹರಿದ ತೀರ್ಥದಂತೆ. ಏಕೆ, ಏನು ಎಂಬ ಯಾವ ಪ್ರಶ್ನೆಯೂ ಇಲ್ಲದೆ ಸತ್ಯೇಶನ ವಿದ್ಯಾರ್ಥಿಗಳು ಕೇಳುತ್ತಿದ್ದರು. ಇದೇ ಕಾರಣಕ್ಕೆ ಸತ್ಯೇಶ  ಪಾಂಚಜನ್ಯದ ನಾದದಂತೆ ತರಗತಿಯಲ್ಲಿ ಹಲವು ಬಾರಿ ವಿಚಾರವಾದದ ಶಂಖಾನಾದವನ್ನು ಮೊಳಗುತ್ತಿದ್ದದ್ದು. ವ್ಯಕ್ತಿ ಆರಾಧನೆಯನ್ನೆಂದೂ ನಂಬದವ, ಪಾಲಿಸದವ. ಯಾರೇ ಹೇಳೀದ್ದಾಗಲೀ, ಅದರ ಹಿಂದಿನ ಕಾಣುವ ಕೈಗಳು ಸ್ಪಷ್ಟವಾಗಿ ಅರಿವಿಗೆ  ಬಂದರಷ್ಟೇ ಅದನ್ನು ನಂಬುತ್ತಿದ್ದಂತ ವ್ಯಕ್ತಿತ್ವ ಆತನದು.

ಅಂದೇಕೋ ಕೆಲಸದ ಒತ್ತಡ ಹೆಚ್ಚಿದ್ದರಿಂದ ಸತ್ಯೇಶ ಮನೆ ತಲುಪಿದ್ದು ರಾತ್ರಿ ಒಂಭತ್ತಾಗಿತ್ತು. ತಲೆ ಸಿಡಿದು ಹೋಗುವಷ್ಟು ನೋಯುತ್ತಿದ್ದುದರಿಂದ ಒಂದು ಲೋಟ ಕಾಫಿ ಕುಡಿದು, ಮುಲಾಮ್ ಹಚ್ಚಿ ಹಾಗೆ ಮಲಗಿಬಿಟ್ಟ. ಯಾರೊ ತಟ್ಟಿ ಎಬ್ಬಿಸಿದಂತೆ ಭಾಸವಾಯಿತಾದರೂ, ಆ ತಲೆನೋವಿನಲ್ಲಿ ಕಣ್ಬಿಟ್ಟು ನೋಡುವ ಮನಸ್ಥಿತಿಯಿರಲಿಲ್ಲ. ತಟ್ಟುವ ರಭಸ ಹೆಚ್ಚಿದಂತೆ, ಮೆಲ್ಲಗೆ ಕಣ್ಬಿಟ್ಟು ನೋಡಲು ಅವನಪ್ಪ ಎನೋ ಗೊಣಗುತ್ತಿದ್ದಂತೆ ಭಾಸವಾಯಿತು.
'ಲೇ ಸತ್ಯು, ಉತ್ತರಕ್ಕೆ ತಲೆ ಇಟ್ಟು ಮಲ್ಗಿದೀಯಲ್ಲೋ. ತಲೆ ಕಡಿದು ಹೋಗತ್ತೆ ಏಳು ಏಳು. ದಕ್ಷಿಣಕ್ಕೆ ತಲೆ ಹಾಕು'' - ಅವನಪ್ಪ ಜೋರಾಗಿ ಕೂಗುತ್ತಿದ್ದರು.
ತಲೆ ನೋವಿನ ನಡುವೆಯೂ, ''ಈಗೇನಾಗ್ತಿದೆ ನಂಗೆ? ಉತ್ತರ ಆದ್ರೆ ಏನು, ಪಾತಾಳ ಆದ್ರೆ ಏನು? ನನ್ನ ತಲೆ ನೋವು ಹೋದ್ರೆ ಸಾಕು" - ಸತ್ಯೇಶನೂ ಕೂಗಿದ.
''ಹಾಂ! ಅದಕ್ಕೇ ಹೇಳಿದ್ದು. ಉತ್ತರಕ್ಕೆ ತಲೆ ಹಾಕಿದ್ರೆ ಇನ್ನೂ ತಲೆ ನೋವು ಜಾಸ್ತಿ ಆಗತ್ತೆ. ದಕ್ಷಿಣಕ್ಕೆ ಮಲಗು"
''ಅದೇ ರಾಗವನ್ನ ಬೇರೆ ಶ್ರುತೀಲಿ ಹಾಡ್ಬೇಡಿ. ನಾನು ಇದರ ಬಗ್ಗೆ ಮೊದ್ಲೇ ನಿಮಗೆ ಹೇಳಿದೀನಿ ತಾನೆ. ನನ್ನ ಪಾಡಿಗೆ ನನ್ನ ಬಿಟ್ಟು ಹೋಗಿ''
''ಇವನು ನಮ್ಮ ಹಿಡಿತಕ್ಕೆ ಸಿಗೋ ಹಾಗೆ ಇಲ್ಲ! ಸರಿ ನಿನಗೆ ಇಷ್ಟ ಬಂದ ಹಾಗೆ ಮಾಡ್ಕೋಳಪ್ಪ''
''ಈಗೇನು? ದಕ್ಷಿಣಕ್ಕೆ ಮಲಗಬೇಕು ತಾನೆ? ಸರಿ ನಿಮ್ಮಿಷ್ಟ.'' - ಕೋಪದಲ್ಲಿ , ಆ ತಲೆ ನೋವಿನಲ್ಲಿಯೂ ಸತ್ಯೇಶ ದಕ್ಷಿಣಕ್ಕೆ ತಲೆಯಿಟ್ಟ. ಅವನಿಗೆ ತಿಳಿದಿತ್ತು ಆ ಜಗಳ ಎಲ್ಲಿಗೆ ತಲುಪುವುದೆಂದು.

ಹಿಂದೆ ಇದೇ ವಿಚಾರಕ್ಕೆ ಅವನಿಗೂ ಅವನಪ್ಪನಿಗೂ ಹಲವು ಬಾರಿ ಜಗಳವಾಗಿತ್ತು. ಎಂದಿನಂತೆ ಬೆಳಿಗ್ಗೆ ಎದ್ದವನು, ಹಿಂದಿನ ರಾತ್ರಿಯಲ್ಲಾದದ್ದನ್ನು ಪ್ರಸ್ತಾಪಿಸುತ್ತ
''ಉತ್ತರಕ್ಕೆ ಯಾಕೆ ಮಲಗಬಾರ್ದು ಅನ್ನೋದಕ್ಕೆ ನನಗೆ ಸ್ಪಷ್ಟವಾದ ಕಾರಣ ಕೊಡಿ. ನಾನು ಒಪ್ತೀನಿ.'' - ಎಂದು ಅಪ್ಪನಿಗೆ ರೇಗಿದ.

''ನೋಡೋ, ನಮ್ಮ ಹಿರಿಯರು ಒಂದು ಅಭ್ಯಾಸವನ್ನ ಬೆಳಸಿ ಕೊಂಡು ಬಂದಿರ್ತಾರೆ ಅಂದ್ರೆ ಅದರ ಹಿಂದೆ ಏನೋ ಒಂದು ವೈಜ್ಞಾನಿಕ ಕಾರಣ ಇರತ್ತೆ.'' - ಎಂದೇನೋ ಹೇಳಿದರು ಅವನಪ್ಪ.

''ಅದೇ. ಆ ಕಾರಣ ಏನು? ಸರಿ ಹಾಗಿದ್ದರೆ ನೀವು ಒಬ್ಬ ಹೊಲೆಯ ಸ್ನಾನ ಮಾಡಿ ಶುದ್ಧನಾಗಿ ಬಂದರೆ ಮುಟ್ಟಿಸಿಕೊಳ್ಳುವಿರೆ? ಆ ರೀತಿ ಹೊಲೆಯರನ್ನು ಮಾತ್ರ ಮುಟ್ಟಿಸಿಕೊಳ್ಳಬಾರದೆನ್ನುವ ನಿಮ್ಮ ಪದ್ಧತಿಯ ಹಿಂದೆಯೂ ವೈಜ್ಞಾನಿಕ ಕಾರಣವಿದೆಯೇ?''

''ಮೊಂಡು ವಾದ ಮಾಡ್ಬೇಡ. ಸರಿ ನಿನಗೆ ವೈಜ್ಞಾನಿಕ ಕಾರಣ ಬೇಕಷ್ಟೇ ಅಲ್ಲವೇ? ಇಲ್ಲಿದೆ ನೋಡು, ಹುಡುಕಿಟ್ಟಿದೀನಿ'' ಎಂದು ಮಾತಿನ ನಡುವೆಯೇ ತಮ್ಮ ಟ್ಯಾಬ್ ನ ಬ್ರೌಸರ್ ನಲ್ಲಿ ಹುಡುಕಿದ್ದ  ಪುಟವೊಂದನ್ನು ಇವನ ಮುಂದೆ ತೆರೆದಿಟ್ಟರು. ಒಂದು ವೈದ್ಯಕೀಯ ಸಂಸ್ಥೆಯ ಫಿಸಿಯಾಲಜಿ ವಿಭಾಗದ ಕೆಲವು ವಿದ್ಯಾರ್ಥಿಗಳ ಮೇಲೆ ವಿಜ್ಞಾನಿಗಳೆನಿಸಿಕೊಂಡಿದ್ದವರ ಒಂದು ತಂಡ ನಡೆಸಿದೊಂದು ಪ್ರಯೋಗ - 'ಮಾನವನ ಶರೀರದ ಮೇಲಿನ ವಿದ್ಯುತ್ಕಾಂತೀಯ ಶಕ್ತಿಯ ಪರಿಣಾಮ ' ಎನ್ನುವ ಶೀರ್ಷಿಕೆಯಡಿ. ಸತ್ಯೇಶನಿಗೆ ವಿಜ್ಞಾನಕ್ಕೆ ಸಂಬಂಧ ಪಟ್ಟ ವಿವರಗಳು ಅಷ್ಟಾಗಿ ಅರ್ಥವಾಗದಿದ್ದರೂ, ಅವರ ಪ್ರಯೋಗದ ವಿಧಾನವನ್ನ ಹಾಗೂ ಅದರ ಫಲಿತಾಂಶವನ್ನಷ್ಟೇ ತನ್ನ ಜ್ಞಾನದ ಮಿತಿಯಲ್ಲಿ ಅರ್ಥೈಸಿಕೊಳ್ಳಲು ಪ್ರಯತ್ನಿಸಿದ. ಆ ಒಂದು ಪ್ರಾಯೋಗಿಕ ಅಧ್ಯಯನಕ್ಕೆ ೪೦ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡು ೨೦ ಜನರ ಎರಡು ತಂಡಗಳನ್ನು ಮಾಡಾಲಾಗಿತ್ತು.ಅವೆರಡು ತಂಡಗಳಲ್ಲಿ ಒಂದರಲ್ಲಿಯ ಮಂದಿಗೆ ೧೨ ವಾರಗಳ ಕಾಲ ದಿನಕ್ಕೆ ೮ ಗಂಟೆಯ ಹಾಗೆ ದಕ್ಷಿಣಕ್ಕೆ ತಲೆಯಿಟ್ಟು ಮಲಗಬೇಕೆಂದು, ಮತ್ತೊಂದು ತಂಡಕ್ಕೆ ಅದೇ ರೀತಿ ಪೂರ್ವಕ್ಕೆ ತಲೆಯಿಟ್ಟು ಮಲಗಬೇಕೆಂದು ಆದೇಶಿಸಲಾಗಿತ್ತು. ಮೊದಲಿಗೆ ಅವರೆಲ್ಲರ ರಕ್ತದೊತ್ತಡವನ್ನ, ಹೃದಯ ಬಡಿತವನ್ನ ಹಾಗು ರಕ್ತದಲ್ಲಿನ ಕಾರ್ಟಿಸೋಲ್ ನ ಪ್ರಮಾಣವನ್ನು ದಾಖಲಿಸಲಾಯಿತು. ೧೨ ವಾರಗಳ ತರುವಾಯ ಮತ್ತೆ ಅವುಗಳ ಮಟ್ಟವನ್ನು ದಾಖಲಿಸಲಾಯಿತು.

ನಂತರ ಮೊದಲಿನ ತಂಡವನ್ನು ಮತ್ತೆ ೧೨ ವಾರಗಳ ಕಾಲ ಉತ್ತರಕ್ಕೆ ತಲೆಯಿಟ್ಟು ಮಲಗ ಬೇಕೆಂದು, ಮತ್ತೊಂದು ತಂಡವನ್ನು ಪಶ್ಚಿಮಕ್ಕೆ ತಲೆಯಿಟ್ಟು ಮಲಗಬೇಕೆಂದು ಆದೇಶಿಸಿ ಮೇಲಿನ ವಿಧಾನವನ್ನೇ ಅನುಸರಿಸಲಾಯಿತು.

ಈ ರೀತಿ ದಾಖಲಿಸಿದ್ದೆಲ್ಲವನ್ನೂ ಹೋಲಿಕೆ ಮಾಡಿ ನೋಡಿದಾಗ ದೊರೆತ ಫಲಿತಾಂಶವಿದು. ಅದೇ ಸತ್ಯೇಶನ ತಂದೆಗೆ ಬೇಕಿದ್ದ ಅಂಶ. 'ರಕ್ತದೊತ್ತಡ, ಹೃದಯ ಬಡಿತ ಹಾಗು ರಕ್ತದಲ್ಲಿನ ಕಾರ್ಟಿಸೋಲ್ ನ ಪ್ರಮಾಣ, ದಕ್ಷಿಣಕ್ಕೆ ತಲೆಯಿಟ್ಟು ಮಲಗಿದವರಿಗಿಂತ ಉತ್ತರಕ್ಕೆ ತಲೆಯಿಟ್ಟು ಮಲಗಿದವರಲ್ಲಿ ಹೆಚ್ಚಿದ್ದದ್ದು ಕಂಡು ಬಂದಿತು'.

ಇಷ್ಟೆಲ್ಲಾ ಗಮನಿಸಿದ ಮೇಲೆ ಶೀರ್ಷಿಕೆಯ ಹಿಂದಿನ ಕಾರಣ ತಿಳಿಯುವ ಕುತೂಹಲ ಹುಟ್ಟುವುದು ಸಹಜವೇ. ಕೊನೆಯಲ್ಲಿ ಒಂದು ಪುಟದಷ್ಟಿದ್ದ ಅವರ ಚರ್ಚೆಯನ್ನು, ವೈಜ್ಞಾನಿಕ ಹಿನ್ನಲೆಯಲ್ಲಿ ಅವರು ಕೊಟ್ಟ ಕಾರಣಗಳನ್ನು ಹಾಗೆಯೇ ಕಣ್ಣಾಡಿಸಿದ.  ಅವರ ಚರ್ಚೆಯನ್ನು ಹೀಗೆ ಸಂಕ್ಷೇಪಿಸಬಹುದಿತ್ತು.
''ಮಾನವನ ದೇಹದಲ್ಲಿಯ ಹತ್ತಲವಾರು ಅಯಾನ್ ಗಳ ಚಲನವಲನು ದೇಹದಲ್ಲಿಯೇ ಒಂದು ಮ್ಯಾಗ್ನೆಟಿಕ್ ಫೀಲ್ಡ್ ಅನ್ನು ಉತ್ಪತ್ತಿಸುತ್ತವೆ. ಅಂದರೆ ನಮ್ಮ ದೇಹವು ಒಂದು ಮ್ಯಾಗ್ನೆಟ್. ಈ ಬಯೋ ಮ್ಯಾಗ್ನೆಟ್ ನ  ನಾರ್ತ್ ಪೋಲ್ ಶಿರದಲ್ಲಿಯೂ, ಸೌತ್ ಪೋಲ್ ಪಾದಗಳಲ್ಲಿಯೂ ಇರುವುದು.

ಭೂಮಿಯೂ ಒಂದು ರೀತಿಯ ಮ್ಯಾಗ್ನೆಟ್ ಆಗಿದ್ದು ಅದರ ನಾರ್ತ್ ಪೋಲ್ ಭೌಗೋಳಿಕ ಸೌತ್ ನಲ್ಲಿಯೂ, ಸೌತ್ ಪೋಲ್ ಭೌಗೋಳಿಕ ನಾರ್ತ್ ನಲ್ಲಿಯೂ ಇರುವುದು. ಆದ್ದರಿಂದ ಉತ್ತರಕ್ಕೆ ತಲೆಯಿಟ್ಟು ಮಲಗಿದಾಗ ರಕ್ತದಲ್ಲಿನ ಮ್ಯಾಗ್ನೆಟಿಕ್ ವಸ್ತುಗಳ ಕಾರಣದಿಂದ, ಹೆಚ್ಚಿನಾಂಶದ ರಕ್ತ ದೇಹದ ಮೇಲ್ಭಾಗಕ್ಕೆ ಹರಿಯುವುದು. ಅಂದರೆ ಹೃದಯಕ್ಕೆ, ಮೆದುಳಿಗೆ ಹೆಚ್ಚಿನ ರಕ್ತ ಹರಿಯುವುದು. ಹೀಗೆ ಹೆಚ್ಚುವ stroke volume ಹಾಗು cardiac outputನಿಂದ ರಕ್ತದೊತ್ತಡ ಹೆಚ್ಚುವುದು. ಅಂತೆಯೇ ನಮ್ಮ  ಮೆದುಳಿನಲ್ಲಿರುವ pineal ಗ್ರಂಥಿ ಉತ್ಪತ್ತಿಸುವ ಮೆಲಟೋನಿನ್ ಹಾರ್ಮೋನಿನ ಪ್ರಮಾಣದ ಮೇಲೆ ವಿದ್ಯುತ್ಕಾಂತೀಯ ವಿಕಿರಣಗಳು ಪ್ರಭಾವ ಬೀರುವ ಹಾಗೆ ಹೊರಗಿನ ಯಾವುದೇ ಮ್ಯಾಗ್ನೆಟಿಕ್ ಫೀಲ್ಡ್ ಕೂಡ ಪ್ರಭಾವ ಬೀರಬಹುದು. ಇದರಿಂದ ಅದರ ಪ್ರಮಾಣ ಕಡಿಮೆಯಾಗಿ ನಮಗೆ ನಿದ್ರಾಭಂಗವಾಗಬಹುದು. ಹಾಗೆಯೇ ಕೆಲವು ವಿಜ್ಞಾನಿಗಳು ಇಲಿಗಳ ಮೇಲೆ ನಡೆಸಿರುವ ಪ್ರಯೋಗದ ಪ್ರಕಾರ ೫೦ ಮೆಗಾ ಹರ್ಟ್ಜ್ ಮ್ಯಾಗ್ನೆಟಿಕ್ ಫೀಲ್ಡ್ ನ ಅಡಿಯಲ್ಲಿ ಕಾರ್ಟಿಸೋಲ್ ಹಾರ್ಮೋನಿನ ಪ್ರಮಾಣ ಹೆಚ್ಛುತ್ತದೆ. ಉತ್ತರಕ್ಕೆ ತಲೆಯಿಡುವುದರಿಂದ adrenal ಗ್ರಂಥಿ ಹಾಗೆ pineal ಗ್ರಂಥಿಗಳ ಮೇಲೆ ಒಟ್ಟು ಮ್ಯಾಗ್ನೆಟಿಕ್ ಫೀಲ್ಡ್ ನ ತೀವ್ರತೆ ಹೆಚ್ಚುವುದರಿಂದ, ಇಲ್ಲಿಯ ಫಲಿತಾಂಶಗಳನ್ನು ಮೇಲಿನ ರೀತಿ ಸಮರ್ಥಿಸಬಹುದು.''

ಆ ಪ್ರಯೋಗದ ಫಲಿತಾಂಶದಲ್ಲಿ ಪಶ್ಚಿಮಕ್ಕಿಂತ ಪೂರ್ವಕ್ಕೆ ತಲೆಯಿಡುವುದು ಸೂಕ್ತ ಎನ್ನುವ ಮಾಹಿತಿ ತಿಳಿದುಬಂದಿತ್ತು. ದಕ್ಷಿಣದ ಅಂಕಿ ಅಂಶಗಳು ಪೂರ್ವದಕ್ಕಿಂತ ಕಡಿಮೆ ಇದ್ದದ್ದೂ ಕಂಡು ಬಂದಿತು. ಮತ್ತೇನನ್ನು ಹೆಚ್ಚಾಗಿ ನೋಡದೆ, ಯಾವ ಪರಾಮರ್ಶೆಗೂ ಇಳಿಯದಿದ್ದರೂ ಏನೋ ಒಂದು ರೀತಿಯ ಆಲೋಚನೆ ಸತ್ಯೇಶನನ್ನು ಆವರಿಸಿತು. ಹಿಂದಿನ ಓದಿನ ದಿನಗಳೆಲ್ಲವೂ ಕಣ್ಣ ಮುಂದೆ ಸುಳಿದವು. 'ಮೆಲಟೋನಿನ್ ಮನುಷ್ಯನ ದೇಹದಲ್ಲಿಯ ಹಗಲು-ರಾತ್ರಿ ಚಕ್ರವನ್ನು ನಿಯಂತ್ರಿಸುವುದು... ಕಾರ್ಟಿಸೋಲ್ ಹಾರ್ಮೋನ್ ನಮ್ಮಲ್ಲಿ ಉಂಟಾಗುವ  ಶಾರೀರಿಕ, ಮಾನಸಿಕ ಒತ್ತಡಗಳನ್ನು ಕಡಿಮೆಗೊಳಿಸುತ್ತದೆ ....  cardiac output ಹೆಚ್ಚುವುದರಿಂದ ರಕ್ತದೊತ್ತಡ ಹೆಚ್ಚುವುದು..' ಎನ್ನುವ ಗಾಯತ್ರಿ ಮೇಡಂ ಮುಖ ಗೋಚರಿಸಿತು.  ಆತನ ಅರಿವಿಗೆ ಅಲ್ಲಿದ್ದವೆಲ್ಲವೂ ಸ್ಪಷ್ಟವಾಗಿರಲಿಲ್ಲವಾದರೂ, ಅರಿವಿಗೆ ಬಾರದ ಹಾಗೆಯೇ ನಂಬಿಕೆಯ ಮೆಟ್ಟಿಲುಗಳನ್ನು ಒಂದೊಂದಾಗಿಯೇ ಹತ್ತತೊಡಗಿದ್ದ. 'ವಿಜ್ಞಾನಿಗಳ ಗುಂಪೊಂದು ನಡೆಸಿರುವ ಪ್ರಯೋಗ ಸುಳ್ಳಲ್ಲ. ಹಾಗೆಯೇ ಅವರ ಕಾರಣಗಳನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸುವ ಹಾಗೂ ಇಲ್ಲ. ಈ ರೀತಿಯ ಕಾರಣಗಳು ನಮ್ಮ ಹಿಂದಿನವರಿಗೆ ತಿಳಿದಿದ್ದರಿಂದಲೇ ಅವರು ಆ ರೀತಿಯ ಅಭ್ಯಾಸಗಳನ್ನು ರೂಡಿಸಿಕೊಂಡಿದ್ದು'. ಮೇಲ್ನೋಟಕ್ಕೆ ಆ ವಿಷಯಗಳಲ್ಲಿ ಅಪರಿಣಿತನಾದವನು ನಂಬಲೇಬೇಕಾದಂತಿದ್ದ ಆ ಚರ್ಚೆಯನ್ನು ಓದಿದ ಮೇಲೆ, ಅಪ್ಪನ ಮಾತಿಗೆ ಏನನ್ನೂ ಪ್ರತಿಕ್ರಯಿಸದೆ ಸತ್ಯೇಶ ಎದ್ದು ಹೊರಟು ಹೋದ.

ಕಾಲೇಜಿನ ತನ್ನ ಕೋಣೆಯಲ್ಲಿ ಆಲೋಚನಾ ಮಜ್ಞನಾಗಿದ್ದ ಸತ್ಯೆಶನಿಗೆ ಗಜಪತಿ ಬಂದದ್ದು ತಿಳಿಯಲಿಲ್ಲ. 'ಅನಾವಶ್ಯಕವಾಗಿ ಮೊಂಡು ವಾದ ಮಾಡುತ್ತಿದ್ದೆನೆ?' ಎನ್ನುವ ಆಲೋಚನೆ ಆತನನ್ನು ಕೊರೆಯತೊಡಗಿತ್ತು.

'ಏನ್ರಿ ಗಣಿತ ಬಿಟ್ಟು ಫಿಲಾಸಫಿ ಹಿಡ್ಕೊಂಡ್ರ ಹೇಗೆ?' ಮೇಜಿನ ಮೇಲಿದ್ದ ಲ್ಯಾಪ್ಟಾಪ್ ನಲ್ಲಿ ತೆರೆದಿದ್ದ ಆ ಪ್ರಯೋಗದ ಪಿಡಿಎಫ್ ಕಾಪಿಯೊಂದನ್ನು ಓದುತ್ತ ಗಜಪತಿ ಕಿಚಾಯಿಸಿದಾಗ ಸತ್ಯೇಶನ ಗಮನ ಅತ್ತ ಹರಿಯಿತು.
'ಬನ್ನಿ ಗಜಪತಿ. ಹಾ ಹಾ..  ಹಾಗೇನಿಲ್ಲ. ನಮ್ಮ ಹಿರಿಯರು ಪಾಲಿಸುತ್ತಾ ಬರುತ್ತಿದ್ದ ಅಭ್ಯಾಸಗಳ ಹಿಂದೆ ವೈಜ್ಞಾನಿಕ ಕಾರಣಗಳು ಇರುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನದಂತಿದೆ. ಅದನ್ನೇ ನೋಡುತ್ತಿದ್ದೆ.'
ಗಜಪತಿ ಅದೇ ಕಾಲೇಜಿನ ಭೌತಶಾಶಾಸ್ತ್ರದ ಅಧ್ಯಪಕನಾಗಿದ್ದ. ಗಜಪತಿ, ಸತ್ಯೇಶ ಸಮಾನ ವಯಸ್ಕರಾಗಿದ್ದು ಒಂದೇ ರೀತಿಯ ಮನಸ್ಥಿತಿ ಹೊಂದಿದ್ದವರು. ಆ ಪಿಡಿಎಫ್ ನಲ್ಲಿ ಸತ್ಯೇಶ highlight ಮಾಡಿದ್ದ ವಿಚಾರಗಳನ್ನು ಓದಿ ಗಜಪತಿ ಒಮ್ಮೆ ಜೋರಾಗಿ ನಕ್ಕ.

'ಸತ್ಯೇಶ್, ನೀವೇಕೆ ಹೀಗಾದಿರಿ? ಎಲ್ಲವನ್ನೂ ಪರಾಮರ್ಶಿಸುತ್ತಿದ್ದವರು, ನಿಮ್ಮ ಬಳಿ ಅಂತರ್ಜಾಲವಿದೆಯೆಂಬುದನ್ನೇ ಮರೆತುಬಿಟ್ಟಿರಲ್ಲ? ಒಂದು ಹೊಡೆತಕ್ಕೆ ಗೂಗಲ್ ನಿಮಗೆ ಎಲ್ಲವನ್ನೂ ನೀಡುತ್ತದೆ. ಅದನು ಮಾಡದೆಯೇ ಹೇಗೆ ಇವನ್ನೆಲ್ಲಾ  ನಂಬಿಬಿಟ್ಟಿರಿ?'

ತಾನು ಇಷ್ಟು ದಿನ ಮೊಂಡು ವಾದಿಯಾಗಿದ್ದೆನೆ ಅಥವಾ ತಂದೆಗಿಂತ ಹೆಚ್ಚು ತಿಳಿದಿದ್ದೇನೆ ಎಂಬ ಅಹಂನಲ್ಲಿ ಅವರ ವಾದಗಳನ್ನು ತಿರಸ್ಕರಿಸುತ್ತಿದ್ದೇನೆ? ಎನ್ನುವ ಪ್ರಶ್ನೆಗಳು ಸತ್ಯೆಶನಿಗೆ ಆ ಪ್ರಯೋಗದ ಬಗ್ಗೆ ಚಿಂತಿಸುವುದನ್ನು ತಡೆದಿದ್ದವು.

'ಸತ್ಯೇಶ್, ಇಷ್ಟು ಸರಳ ತರ್ಕವನ್ನ ಹೇಗೆ ಮಿಸ್ ಮಾಡಿದಿರಿ? ಸರಿ ಅವರ ವಾದವನ್ನ ಒಪ್ಪಿದ್ವಿ ಅಂತಲೇ ಇಟ್ಟುಕೊಳ್ಳೋಣ. ನಮ್ಮ ರಕ್ತದ ಚಲನೆ ಯನ್ನ ಹೊರಗಿನ ಒಂದು ಮ್ಯಾಗ್ನೆಟಿಕ್ ಫೀಲ್ಡ್ ನಿಯಂತ್ರಿಸ್ತದೆ ಎಂದಾದ್ರೆ, ನೀವು ಉತ್ತರಕ್ಕೆ ತಲೆಯಿಟ್ಟಾಗ ಹೃದಯಕ್ಕೆ, ಮೆದುಳಿಗೆ ಹೆಚ್ಚು ರಕ್ತ ಹೋದ ಹಾಗೆ ದಕ್ಷಿಣಕ್ಕೆ ತಲೆಯಿಟ್ಟು ಮಲಗಿದಾಗ ರಿಪಲ್ಷನ್ ನ ಕಾರಣದಿಂದ ಕಡಿಮೆ ರಕ್ತ ಹರಿಯಬೇಕಲ್ಲವೇ? ನಿಮಗೆ ತಿಳಿದಿರಬೇಕು ಮೆದುಳಿಗೆ ಹಸಿವು ಹೆಚ್ಚು.

ಎರಡನೆಯದಾಗಿ ರಕ್ತ, ಶೇಕಡ ೫೫% ಪ್ಲಾಸ್ಮಾವನ್ನ ಒಳಗೊಂಡಿರತ್ತೆ. ಪ್ಲಾಸ್ಮ ೯೨% ನೀರಿಂದಲೇ ಕೂಡಿರುತ್ತದೆ. ನಿಮಗೆ ತಿಳಿದಿರಲೇಬೇಕು ನೀರು ಪಾರಕಾಂತೀಯ (diamagnetic) ವಸ್ತು. ಇಂತಹ ಪ್ಲಾಸ್ಮಾದಲ್ಲಿ ತೇಲುತ್ತಿರುವವು ಮಿಕ್ಕ ಜೀವಕೋಶಗಳು. ಹಾಗಿದ್ದ ಸಂದರ್ಭದಲ್ಲಿ, ಅಂತಹ ದುರ್ಬಲವಾದ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ನಲ್ಲಿ ಹೆಚ್ಚಿನಾಂಶದ ರಕ್ತ ಹೃದಯಕ್ಕೆ ಹರಿಯುವುದಾದರೆ, ಇನ್ನು ಎಂ ಆರ್ ಐ ಸ್ಕ್ಯಾನಿಂಗ್ ನಲ್ಲಿ ಬಳಸುವ, ಸಾವಿರ ಪಟ್ಟು ಹೆಚ್ಚಾದ ಮ್ಯಾಗ್ನೆಟಿಕ್ ಫೀಲ್ಡ್ ನಲ್ಲಿ ನಮ್ಮ ಹೃದಯ ಹೊಡೆದುಕೊಂಡೆ ಒಡೆದುಹೋಗಬಹುದು ಅಥವಾ ರಕ್ತ ರಕ್ತನಾಳಗಳನ್ನು ಸೀಳಿ ಆಚೆಯೇ ಬಂದು ಬಿಡಬಹುದು?

ಇಲ್ಲಿ ಇನ್ನೊಂದು ಗಮನಿಸಿ,  ನಿಮ್ಮ ಹೃದಯದಿಂದ ಕೆಳಗಿಳಿಯುವ ರಕ್ತನಾಳಗಳು, ಹಾಗೆಯೇ ಪಾದಗಳಿಂದ ಹೃದಯಕ್ಕೆ ರಕ್ತ ಹೊತ್ತೊಯ್ಯುವ ರಕ್ತನಾಳಗಳು ಬಹುತೇಕ ನಮ್ಮ ದೇಹಕ್ಕೆ ನೆರವಾಗಿವೆ (ಸೊಂಟದಿಂದ ಕೆಳಕ್ಕಾದರೂ) ಎಂದು ಭಾವಿಸುವುದಾದರೂ, ನಿಮಗೆ ತಿಳಿದಿರಲೇಬೇಕು ಒಂದು ಅಯಾನ್ ಮ್ಯಾಗ್ನೆಟಿಕ್ ಫೀಲ್ಡ್ ಗೆ ಸಮಾಂತರವಾಗಿ ಚಲಿಸಿದಾಗ, ಅದರ ಮೇಲೆ ಯಾವ ಪರಿಣಾಮವು ಇರುವುದಿಲ್ಲ.
ಅಲ್ಲ, ಅಷ್ಟಕ್ಕೂ ಈ ನಾರ್ತ್ ಪೋಲ್ ಸೌತ್ ಪೋಲ್ ಗಳ ವಿಚಾರಕ್ಕೆ ಸ್ಪಷ್ಟಿಕರಣವೇ ಕೊಟ್ಟಿಲ್ಲವಲ್ಲ ಅವರು. ಯಾವ ಆಧಾರದ ಮೇಲೆ ನಿಮ್ಮ ಶಿರ ಮ್ಯಾಗ್ನೆಟಿಕ್ ನಾರ್ತ್ ಎಂದು ಹೇಳುವರು? ನಾನ್ ಸೆನ್ಸ್ (ಸೈನ್ಸ್) ಎನಿಸುವುದಿಲ್ಲವೇ?
ಈ ಕಾಪಿಯನ್ನ ನನಗೆ ಮೇಲ್ ಮಾಡಿ. ನಾನು ಮತ್ತೊಮ್ಮೆ ಓದಿ ಮಿಕ್ಕ ವಿಚಾರಗಳಿಗೆ ಸ್ಪಷ್ಟನೆಯನ್ನು ಕಂಡುಕೊಂಡು ನಾಳೆ ಚರ್ಚಿಸುತ್ತೇನೆ.'  - ಗಜಪತಿ ಎದ್ದು ಹೊರಟ.

ಒಂದು ಪುಟ್ಟ ರೋಮಾಂಚಕ ಸಿನಿಮಾ ಕಣ್ಣ ಮುಂದೆ ಹೋದ ಹಾಗೆ ಮೂಕವಿಸ್ಮಿತನಾಗಿ ಕುಳಿತುಬಿಟ್ಟ ಸತ್ಯೇಶ. ಇಷ್ಟೆಲ್ಲಾ ವಿಚಾರಗಳನ್ನು ಯೋಚಿಸಲೆ ಇಲ್ಲವನ್ನು ಎಂದುಕೊಳ್ಳುತ್ತ ಹೊಸ ದಿಕ್ಕಿನಲ್ಲಿ ಆಲೋಚಿಸುತ್ತ ಕುಳಿತ.

ಮಾರನೆಯ ದಿನ:

'ಸತ್ಯೇಶ್, ಅದರಲ್ಲಿ ನೀವು ಒಂದು ಬಹಳ ಮಹತ್ತರವಾದ ಪಾಯಿಂಟ್ ಮಿಸ್ ಮಾಡಿದಿರಿ. ನೋಡಿ ಇಲ್ಲಿ' ಎಂದು ಹೈ ಲೈಟ್ ಮಾಡಿದ್ದೊಂದು ವಾಕ್ಯವನ್ನು ಗಜಪತಿ ತೋರಿಸುತ್ತಾ ಹೇಳಿದ.
'ಇವರೇ ಹೇಳಿಕೊಂಡಿರುವ ಹಾಗೆ ಮತ್ತೊಂದು ತಂಡಕ್ಕೆ ರಿವರ್ಸ್ ಫಲಿತಾಂಶಗಳು ದೊರಕಿವೆ. ಹಾಗಿದ್ದ ಸಂದರ್ಭದಲ್ಲಿ ಇವರ ಕಾರಣಗಳನ್ನು ಸುಲಭವಾಗಿಯೇ ತೆಗೆದು ಹಾಕಬಹುದು.'

'ಹಾಂ ಹಾಂ.. ನೆನ್ನೆ ನಾನು ಗಮನಿಸಿದೆ. ಹಾಗಂದ ಮಾತ್ರಕ್ಕೆ ಅವರ ಪ್ರಯೋಗ ಸುಳ್ಳಲ್ಲವಲ್ಲ?' - ಸತ್ಯೇಶ ಪ್ರಶ್ನಾರ್ಥಕವಾಗಿಯೇ ಹೇಳಿದ.

'ನಾನು ಪ್ರಯೋಗ ಸುಳ್ಳೆಂದು ಹೇಳಲಿಲ್ಲ. ಪ್ರಯೋಗ ನಿಜವೇ. ಹಾಗಾಗಿದ್ದಿರಬಹುದು. ಆದರೆ ಅದಕ್ಕೆ ಬೇರೆ ಕಾರಣಗಳೇ ಇರಬಹುದು. ಇಲ್ಲಿ ನೋಡಿ ಈ ವೆಬ್ ಪೇಜ್. ಈತ ೩೦ ವರ್ಷಗಳಿಂದ ಉತ್ತರಕ್ಕೆ ತಲೆಯಿಟ್ಟೆ ಮಲಗುತಿದ್ದಾನಂತೆ. ಹಾಗಾಗಿಯೂ ಈತನ ಆರೋಗ್ಯದಲ್ಲಿ ಯಾವ ಏರು ಪೇರು ಇಲ್ಲ. ಅದೇ ರೀತಿ ಇಲ್ಲಿ ನೋಡಿ ಎರಡು ಸಂಶೋಧನೆಗಳು. ಇವೆರಡು ಹೇಳುವುದು ಒಂದೇ. ಮೆಲಟೋನಿನ್ ಹಾಗು ಕಾರ್ಟಿಸಾಲ್ ಗಳ ಮೇಲೆ ಮ್ಯಾಗ್ನೆಟಿಕ್ ಫೀಲ್ಡ್ ಯಾವ ರೀತಿಯ ಪರಿಣಾಮವೂ ಬೀರುವುದಿಲ್ಲ. ೨೦ ವರ್ಷಗಳ ಸಂಶೋಧನೆ ಒಂದು.' ಎಂದು ಮೂರ್ನಾಲ್ಕು ಪುಟಗಳನ್ನ ಗಜಪತಿ ತೆರೆದಿಟ್ಟ.

'ಹಾಗಿದ್ದರೆ ನಮ್ಮ ಹಿಂದಿನವರು ಹೇಳಿದ್ದೆಲ್ಲ ಸುಳ್ಳೆ? ಅದ್ಹೇಗೆ ಯಾವ ಕಾರಣವೂ ಇಲ್ಲದೇ ಒಂದು ಪದ್ಧತಿ ಇಷ್ಟು ಪ್ರಚಲಿತವಾಗುತ್ತದೆ, ಅದೂ ದೇಶದಾದ್ಯಂತ?' - ಸತ್ಯೇಶ ಕಣ್ಣರಳಿಸಿ ಕೇಳಿದ.

'ಕಾರಣವಿಲ್ಲವೆಂದಲ್ಲ. ಹಲವಾರು ಕಾರಣಗಳನ್ನು ನಾವು ಊಹಿಸಬಹುದು. ಹಾಗೆ ನಾವು ಊಹಿಸಿದ್ದಲ್ಲಿಯೂ ನ್ಯೂನತೆಗಳಿರಬಹುದು. ಆದರೆ ಯಾವ ತರ್ಕ ಪೊಳ್ಳು ಎನ್ನುವುದನ್ನು ಕಂಡುಕೊಂಡರಷ್ಟೇ ವಿಚಾರವಾದಕ್ಕೆ ನಿಜವಾದ ಅರ್ಥ ಬರುವುದು. ನಿಮಗೆ ಎರಡು ಉದಾಹರಣೆಗಳನ್ನು ಕೊಡ್ತೇನೆ. ಮೊದಲಿಗೆ, ಕೆಲವು ವೆಬ್ ಪೇಜಸ್ ಗಳು ವಾಸ್ತು ಶಾಸ್ತ್ರದ ಪ್ರಕಾರ ಪೂರ್ವಕ್ಕೆ ತಲೆಯಿಟ್ಟು ಮಲಗಬಹುದು ಎಂದೂ ಅದಕ್ಕೆ ತರ್ಕವನ್ನು ಪ್ರಸ್ತಾಪಿಸುತ್ತಾರೆ. 'ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದರಿಂದ, ಹಾಗೆಯೇ ಸೂರ್ಯನ ಮ್ಯಾಗ್ನೆಟಿಕ್ ಫೀಲ್ಡ್ ಭೂಮಿಯನ್ನ ಪೂರ್ವದಿಂದ ಪ್ರವೇಶಿಸುವುದರಿಂದ, ಪೂರ್ವಕ್ಕೆ ತಲೆಯಿಟ್ಟ ಸಂದರ್ಭದಲ್ಲಿ, ಆ ಮ್ಯಾಗ್ನೆಟಿಕ್ ಫೀಲ್ಡ್ ಶಿರದಿಂದ ಅಡಿಯವರೆಗೂ ಚಲಿಸಿ, ತಲೆಯನ್ನು ತಣ್ಣಾಗಿಸಿ ಪಾದವನ್ನು ಬೆಚ್ಚಗಿರಿಸುತ್ತದೆ.' ಒಬ್ಬ ಶ್ರೀ ಸಾಮಾನ್ಯ, ವ್ಯಕ್ತಿ ಪೂಜೆ ಮಾಡುವವ, ತಾನು ಹೆಚ್ಚಾಗಿ ನಂಬುವ ವ್ಯಕ್ತಿಯೊಬ್ಬ ಹೀಗೆ ಹೇಳಿದರೆ ನಂಬದೆಯೇ ಇರುವನೇ? ಯಾವ ಪರಾಮರ್ಶೆಗೂ ಇಳಿಯದೇ ಇದೇ ವಿಜ್ಞಾನವೆಂದು ತನ್ನ ಸಂತತಿಯ ಮೂಲಕ ಮುಂದಿನ ತಲೆಮಾರಿಗೆ ಇದೇ ಸಂದೇಶವನ್ನು ರವಾನಿಸುತ್ತಾನೆ. ಇಲ್ಲೂ ಹಾಗೆಯೇ ಏಕೆ ಹಾಗಿರಬಾರದು? ಮೂಲ ಕಾರಣವೇ ಏನೋ, ಅದನ್ನು ಅರ್ಥೈಸಿಕೊಂಡ ಪರಿಯೇ ಮತ್ತೇನೋ, ರವಾನಿಸುವುದು  ಇನ್ನೊಂದೇನೋ.

ಎರಡನೆಯದು ಮತ್ತೊಂದು ಕೋನದಿಂದ ಈ ವಿಚಾರವನ್ನ ತೋರಿಸುತ್ತದೆ. ಅದು ಪ್ರತಿಷ್ಠೆ, ನಂಬಿಕೆ  ಅಥವಾ ವ್ಯಾಪಾರೀಕರಣ. ನಿಮಗೆ ಡಾರ್ವಿನ್ ನ ಸಿದ್ಧಾಂತಗಳು, ಹಾಗು ಅದನ್ನವರು ಪ್ರತಿಪಾದಿಸಿದಾಗ ಅವರ ಮೇಲೆ ಮಾಡಿದ ಕುಚೋದ್ಯಗಳು ತಿಳಿದಿರಬೇಕು.
ಮಂಗನಿಂದ ಮಾನವ ಎಂದು ಡಾರ್ವಿನ್ ಪ್ರತಿಪಾದಿಸಿದಾಗ ಕುಚೋದ್ಯಕ್ಕಾಗಿ ಸೃಷ್ಟಿಸಿದ ಚಿತ್ರ.

ಆದರೆ ಅವರ ಸಿದ್ಧಾಂತಕ್ಕೆ ಪುರಾವೆಗಳು, ಮನ್ನಣೆಯೂ ಸಿಗಲು ಪ್ರಾರಂಭಿಸಿದಾಗ, ಅಲ್ಲಿಯವರಗು ಜೀವಿಗಳೆಲ್ಲವನ್ನೂ ಸೃಷ್ಟಿಸಿದ್ದು ಭಗವಂತ ಎಂದು ಪ್ರತಿಪಾದಿಸುತ್ತಿದ್ದ ಕ್ರೈಸ್ತ ಪಾದ್ರಿಗಳು, ಜೀವಿಗಳ ವಿಕಾಸಕ್ಕೆ ಕಾರಣವಾಗುವ 'natural selection' ನಡೆಯುವುದು ಭಗವಂತನಿಂದಲೇ ಎಂದು ತಮ್ಮ ಹೊಸ ವಾದಗಳನ್ನ ಹುಟ್ಟಿ ಹಾಕಿದರು. ಒಟ್ಟಿನಲ್ಲಿ ತಮ್ಮ ಪ್ರತಿಷ್ಠೆ, ನಂಬಿಕೆ ಮಣ್ಣಾಗುವುದು ಅವರಿಗೆ ಸಹಿಸಲಸಾಧ್ಯವಾಗಿತ್ತು . ಹೀಗೆ ನಾನು ನನ್ನಿಷ್ಟದಂತೆ ನಿರ್ಮಿಸಿದೊಂದು ಕಟ್ಟಡದ ವಿನ್ಯಾಸ   ಮತ್ತೊಬ್ಬನ ಹಾಸ್ಯಕ್ಕೆ, ತಿರಸ್ಕಾರಕ್ಕೆ ಗುರಿಯಾದಾಗ ನಾನು ಹೊಸ ಕಥೆಗಳನ್ನು, ಪುರಾಣಗಳನ್ನು ಹುಟ್ಟಿಹಾಕುವ ಸಾಧ್ಯತೆ ಇದ್ದಿರಬಹುದಲ್ಲವೇ? ವ್ಯಾಪಾರೀಕರಣಾದ ಬಗ್ಗೆ ನಾನು ಹೇಳುವುದೇನು ಬೇಡವೇಂದುಕೊಳ್ಳುತ್ತೇನೆ. ಇಲ್ಲಿ... ' - ಗಜಪತಿ ಇನ್ನೂ ಮಾತು ಮುಗಿಸಿರಲಿಲ್ಲ. ಅಷ್ಟರಲ್ಲಿ ಸತ್ಯೇಶ ಮಧ್ಯೆ ಬಾಯಿ ಹಾಕಿದ.

'ಒಹ್! ಹಾಗೆಂದ್ರೆ ವೈಜ್ಞಾನಿಕ ಕಾರಣವೂ ಇದ್ದಿರಬಹುದು, ಇಲ್ಲದೆಯೂ ಇರಬಹುದು?'

'ಹೌದು. ಆದರೆ ವೈಜ್ಞಾನಿಕ ಕಾರಣವೆಂದರೆ ಅದು ಅನುಭವಕ್ಕೆ ಬರುವಂತಹದ್ದಷ್ಟೆ. ಈ ರೀತಿಯ ನಮ್ಮ ದೇಹದೊಳಗಿನ ಬಯೋ ಮ್ಯಾಗ್ನೆಟಿಕ್ ಫೀಲ್ಡ್ ನಂತಹ ವೈಜ್ಞಾನಿಕ ಕಾರಣಗಳಲ್ಲ. ಇಲ್ಲಿ ನೋಡಿ ಈತ ಒಂದು ಸಮಂಜಸವಾದ ವಾದ ಮಂಡಿಸಿದ್ದಾನೆ.' ಗಜಪತಿ ಒಂದು ವೆಬ್ ಪುಟ ತೆರೆದಿಟ್ಟು ಹೈಲೈಟ್ ಮಾಡಿದೊಂದು ಪ್ಯಾರಾಗ್ರಾಫ್ ಅನ್ನು ಸತ್ಯೇಶನಿಗೆ ಓದಲು ಸೂಚಿಸಿದ. ಅದು ಹೀಗಿತ್ತು, 
'ಒಮ್ಮೆ ಒಬ್ಬ ಸಂಶೋಧಕ-ಲೇಖಕ ಕೆಲವು ಭಾರತದ ವಿದ್ವಾಂಸರಿಗೆ ಹೀಗೆ ಪ್ರಶ್ನಿಸಿದ್ದನಂತೆ. 'ನಿಮ್ಮ ದೇಶದಲ್ಲಿ ಬಹಳ ಹಿಂದೆಯೇ ವಿಮಾನಗಳು ಸುಸಜ್ಜಿತವಾದ ಆಯುಧಗಳು ಇದ್ದವೆಂದು ನೀವು ಹೆಮ್ಮೆಯಿಂದ ಪ್ರತಿಪಾದಿಸುತ್ತೀರಿ. ಬೆಳಕಿಗೆ ಬರುವ ಯಾವ ಹೊಸ ತಂತ್ರಜ್ಞಾನವಾದರು ಅವನ್ನು ನಮ್ಮ ವೇದಗಳು ಕಂಡುಕೊಂಡಿದ್ದವೆಂದು ಹೇಳುತ್ತೀರಿ. ಪಾಶ್ಚಿಮಾತ್ಯರ ಆವಿಷ್ಕಾರಗಳೆಲ್ಲವೂ ನಮ್ಮ ಬಳುವಳಿಯೆಂದು ಹೆಮ್ಮೆಯಿಂದ ಬೀಗುತ್ತೀರಿ. ಒಪ್ಪಿಕೊಳ್ಳೋಣ. ಆದರೆ ನಿಮ್ಮ ಹಿಂದಿನವರು ಒಂದು ಸೈಕಲ್ ಅನ್ನು ಕಂಡು ಹಿಡಿದ್ದಿದ್ದರೆ ? ಟಿ .ವಿ, ಫ್ರಿಡ್ಜ್ ಗಳನ್ನು ಕಂಡುಹಿಡಿದಿದ್ದರೆ? ಅವಕ್ಕೆ ಉಲ್ಲೇಖಗಳಿವೆಯೆ? ವೇದೋತ್ತರದ ಕಾಲದಲ್ಲಿ ತಂತ್ರಜ್ಞಾನದ - ವೈಜ್ಞಾನಿಕ ಜ್ಞಾನದ ಯಾವ ಬೆಳವಣಿಗೆಯ ಕುರುಹು ಇಲ್ಲದೆ, ಕೇವಲ ಕೆಲವೆಡೆಯ ಉತ್ಖನನಗಳಿಂದ ವೇದ ಕಾಲದಲ್ಲಿ ಬಹಳ ಮುಂದುವರೆದ ಜನಾಂಗವಿದ್ದರೆಂಬ ತೀರ್ಮಾನಕ್ಕೆ ಹೇಗೆ ಬರುವಿರಿ?'

ಸತ್ಯೇಶ ಅದನ್ನು ಓದಿದ ಮೇಲೆ ಗಜಪತಿ ಮುಂದುವರೆಸಿದರು - 'ಈತನ ವಾದವನ್ನು ಒಪ್ಪಬಹುದಾಗಿದ್ದಾದರೂ ಮತ್ತೆ ಹಲವು ಪ್ರತಿವಾದಗಳು ಹುಟ್ಟಿಕೊಳ್ಳುತ್ತವೆ. ಒಂದು ಭೀಕರ ಪ್ರಕೃತಿ ವಿಕೋಪಕ್ಕೆ ಮಾನವ ಜನಾಂಗ ಒಳಗಾಗಿ, ಕೆಲವೇ ಮಾನವರು ಉಳಿದುಕೊಂಡು, ಆ ಒಂದು ತಂತ್ರಜ್ಞಾನದ ಕೊಂಡಿ ಕಳಚಿ ಹೋಗಿರಬಹುದಲ್ಲ ಎಂದು. ಆದರೆ ಆ ರೀತಿಯ ಯಾವ ಕುರುಹುಗಳು ಇದುವರೆಗೂ ಕಂಡುಬಂದಿಲ್ಲವಾದ್ದರಿಂದ ಆತನ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡುವುದು ಅಗತ್ಯವಾಗುತ್ತದೆ. ಕೇವಲ ಕಣ್ಣಿಗೆ ಕಾಣುವ ಅಥವಾ ಅನುಭವಕ್ಕೆ ಬರುವ ವಿಷಯಗಳು, ಹಾಗೆಯೆ ನಮ್ಮ ಪರಿಸ್ಥಿತಿಗಳು, ನಾವಿರುವ ಜಾಗದ ಭೌಗೋಳಿಕ ಸ್ಥಿತಿ ಗತಿಗಳು ಹೊಸ ಹೊಸ ಪದ್ಧತಿಗಳಿಗೆ ನಾಂದಿ ಹಾಡಬಹುದು. ಇವೇ ಅಂದಿನ ವೈಜ್ಞಾನಿಕ ಕಾರಣಳಿರಬಹುದು. ಇದಕ್ಕೆ ನಂತರ ಬರುತ್ತೇನೆ.
ಈಗ ಕಾರಣದ ಹುಡುಕಾಟದಲ್ಲಿಳಿಯೋಣ. ಅಕಸ್ಮಾತ್ ವಾಸ್ತು ಶಾಸ್ತ್ರ ವೇದಗಳ ಕಾಲದಲ್ಲಿ ಹುಟ್ಟಿದ್ದರೆ, ಅಂದರೆ ಸಿಂಧು ನಾಗರೀಕತೆಯ ಕಾಲ, ನಾವೇನಾದರೂ ಇಂಡೋ-ಆರ್ಯರ ವಲಸೆಯ ಸಿದ್ಧಾಂತವನ್ನು ನಂಬುವುದಾದರೆ, ಇಲ್ಲಿ ಒಂದನ್ನು ಗಮನಿಸಬಹುದು. ಆರ್ಯನ್ನರೇನಾದರೂ ಈ ನಾಗರೀಕತೆಯನ್ನು ನಶಿಸಿ ಹೋಗುವ ಹಾಗೆ ಮಾಡಿ, ಮುಂದೆ ಸಿಂಧೂ ನಾಗರಿಕತೆಯ ಶೈಲಿಯಲ್ಲಿಯೇ ಕಟ್ಟಡಗಳನ್ನು ಕಟ್ಟುತ್ತಾ ಅಥವಾ ವ್ಯಾಪಾರಿಕರಣದ ದೃಷ್ಟಿಯಿಂದ ಹಲವು ಮಾರ್ಪಾಡುಗಳನ್ನು ತರುತ್ತಾ ಹೋದ ಹಾಗೆ ಅದು ಒಂದು ರೀತಿಯ ಶಾಸ್ತ್ರವೆಂಬಂತೆ ಬೆಳೆದು ಬಂದಿರಬಹುದು. ಅಂದರೆ ಇದರ ಹಿಂದೆ ಯಾವ ಕಾರಣವು ಇದ್ದಿಲ್ಲದಿರಬಹುದು. ಸಿಂಧೂ ನಾಗರೀಕತೆಯ ಜನ ತಮ್ಮ ಅನುಕೂಲಕ್ಕೆ, ತಮ್ಮ ಇಷ್ಟಕ್ಕೆ ತಕ್ಕಂತೆ ಕಟ್ಟಡಗಳನ್ನು ಕಟ್ಟಿರಬಹುದಲ್ಲ? ಹಾಗಲ್ಲದೆ, ಸಿಂಧು ನಾಗರೀಕತೆ ಬೇರೆ ಕಾರಣಗಳಿಂದ ನಶಿಸಿ ಹೋಗಿದ್ದ ಸಂದರ್ಭದಲ್ಲಿಯೂ, ಈ ಮೇಲಿನ ಕಾರಣವೇ ಅನ್ವಯವಾಗಬಹುದು. ಅಳಿದುಳಿದ ಕಟ್ಟಡಗಳ ಮಾದರಿಗಳಲ್ಲಿಯೇ ಕಟ್ಟಡಗಳನ್ನು ಕಟ್ಟುತ್ತ ಅದೇ ವ್ಯಾಪಾರ, ನಂಬಿಕೆಯಾಗಬಹುದು. ಸಿಂಧು ಜನ ಹೀಗೆಯೇ ಕಟ್ಟಡವೇಕೆ ಕಟ್ಟಬೇಕೆನ್ನುವುದಕ್ಕೆ ಸೂಕ್ತ ಕಾರಣ ಹುಡುಕುವುದು ಕಷ್ಟ. ಎಲ್ಲವೂ ಊಹೆಗಳು. ಮೇಲೆ ಹೇಳಿದಂತೆ ಯಾವ ಕಾರಣವೂ ಇದ್ದಿಲ್ಲದಿರಬಹುದು. ಅಥವಾ ಒಂದು ನಕ್ಷತ್ರಾಕಾರದಲ್ಲಿಯೇ ಪ್ರಾಂಗಣವನ್ನು ಕಟ್ಟುತ್ತ ತಮ್ಮ ಅಸ್ತಿತ್ವದ ಕುರುಹಿನ ಹಾಗೆ ಅದನ್ನು ಬಳಸಿಕೊಳ್ಳುತ್ತಿದ್ದ ರಾಜರ ಹಾಗೆಯೇ ಸಿಂಧು ಜನರು ಯೋಚಿಸಿರಲಾರರು ಎಂದು ಹೇಳಾಲಾಗುವುದಿಲ್ಲ. ಅಥವಾ ಕೆಲವು ಭೌಗೋಳಿಕ ಕಾರಣಗಳು ಇದ್ದಿರಬಹುದು. ಹೀಗೆ ಕಟ್ಟುವ ವೇಳೆ ಅವರು ಯಾವ ಕಾರಣವೂ ಇಲ್ಲದೆಯೋ ಅಥವಾ ಕೆಲವು ಭೌಗೋಳಿಕ ಕಾರಣಗಳೀಂದಲೋ ದಕ್ಷಿಣ ಹಾಗೂ ಪಶ್ಚಿಮಕ್ಕೆ ಗವಾಕ್ಷಿಗಳನ್ನ ಇಡದಿದ್ದಿರಬಹುದು. ಗಾಳಿ ಬೀಸುವ ಕಡೆ ತಲೆಯಿಡುವುದು ಅಷ್ಟು ಸೂಕ್ತವಲ್ಲವೆಂದು ದಕ್ಷಿಣಕ್ಕೆ ಅಥವಾ ಪಶ್ಚಿಮಕ್ಕೆ ತಲೆಯಿಟ್ಟು ಮಲಗುವುದು ಸಹಜವೇ.'

'ಹೌದು.. ಇದ್ದಿರಬಹುದು...' ಒಂದೇ ದಿನದಲ್ಲಿ ಇಷ್ಟೆಲ್ಲಾ ಸಂಶೋಧನೆ ಮಾಡಿರುವ ಗಜಪತಿಯನ್ನು ಮೂಕವಿಸ್ಮಿತನಾಗಿ ನೋಡುತ್ತಿದ್ದ ಸತ್ಯೇಶ.

'ಈಗ ಮತ್ತೊಂದು ಕೋನದಲ್ಲಿ ಇದನ್ನು ನೋಡೋಣ. 'ಮಾಮುಣಿ (ಮಾಮುನಿ) ಮಯನ್' ಎಂಬುದು  ತಮಿಳು ಸಂಸ್ಕೃತಿಯ ಇತಿಹಾಸದಲ್ಲಿ ವಿರಾಜಿಸುವ ಹೆಸರು. ವೇದವ್ಯಾಸರು ಈತನನ್ನೇ ವಿಶ್ವಕರ್ಮನೆಂದೇ ಕರೆದದ್ದು ಎನ್ನುವುದು ಕೆಲವರ ಅಭಿಪ್ರಾಯ. ಪ್ರಣವ ವೇದ ರಚಿಸುವುದರಿಂದ ಹಿಡಿದು ಕೆಲವು UFOಗಳನ್ನು ಕಂಡು ಹಿಡಿಯುವ ಕೆಲಸದ ವರೆಗೆ ಈತನಿಗೆ ಎಲ್ಲವೂ ತಿಳಿದಿತ್ತೆನ್ನುವುದು ಆ ಹೆಸರಿನ ಹಿಂದಿರುವ ಕಥೆ. ಅದಿರಿಲಿ, ಈತ 'Mayamata' ಎನ್ನುವ, ವಾಸ್ತುವಿಗೆ ಸಂಬಂಧಪಟ್ಟ ಶಾಸ್ತ್ರವನ್ನು ಹುಟ್ಟುಹಾಕಿರುತ್ತಾನೆ. ನಿಮಗೆ ತಿಳಿದಿರಬಹುದು, 'ಲುಮೆರಿಯ' ಎನ್ನುವ ಒಂದು ಭೂಭಾಗದ ಹುಡುಕಾಟದಲ್ಲಿ ಹತ್ತೊಂಭತ್ತನೆಯ ಶತಮಾನದ ವಿಜ್ಞಾನಿಗಳು ತೊಡಗುತ್ತಾರೆ. ಅದರ ಕಾರಣವೇನೇ ಇರಲಿ, ತಮಿಳಿನ ಹಲವು ಲೇಖಕರು ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಅಲ್ಲಿಯವರೆಗೂ ಇತಿಹಾಸದ ಗರ್ಭದಲ್ಲಿ 'ಕುಮಾರಿ ಖಂಡ' ಎನ್ನುವ ಪ್ರದೇಶ ಅಡಗಿ ಕುಳಿತಿದೆಯೆಂದು ಪ್ರತಿಪಾದಿಸುತ್ತಾ, ಅದರ ಉಲ್ಲೇಖಗಳನ್ನು 'ಖಂಡ ಪುರಾಣದಲ್ಲಿ' ಎತ್ತಿಹಿಡಿಯುತ್ತಾ ಬಂದಿದ್ದ ಆ ಲೇಖಕರು ಇದನ್ನೇ ಪುರಾವೆಯೆಂಬಂತೆ ಬಳಸಿಕೊಳ್ಳಲು ಮುಂದಾಗುತ್ತಾರೆ. ಕುಮಾರಿ ಖಂಡ ಕನ್ಯಾಕುಮಾರಿಯ ದಕ್ಷಿಣಕ್ಕಿದ್ದು ಭಾರತಕ್ಕೆ ಹೊಂದಿಕೊಂಡಿತ್ತು. ಕಾಲದಲ್ಲಿ ಪ್ರಕೃತಿಯ ವಿಕೋಪಗಳಿಗೆ ತುತ್ತಾಗಿ ಸಮುದ್ರದ ಗರ್ಭದಲ್ಲಿ ಸೇರಿಹೋಯಿತು ಎನ್ನುವುದು ಅವರ ಕಥೆ.
ಏನ್. ಮಹಾಲಿಂಗಂ ಅವರ ಊಹೆಯಲ್ಲಿ ಕುಮಾರಿ ಖಂಡಮ್ ನ ನಕ್ಷೆ (submerged Tamil Nadu)


ಈ ಪ್ರದೇಶದಲ್ಲಿಯೇ ಇದ್ದದ್ದು ಮಾಮುಣಿ ಮಯನ್. ಆತ ಆ ವಾಸ್ತು ಶಾಸ್ತ್ರವನ್ನ ರಚಿಸದ್ದು ಇಲ್ಲಿಯೆ. ಇದು ನಿಜ ಎಂದು ಒಪ್ಪುವುದಾದರೆ, ಆತ ಇದೇ ಖಂಡದಲ್ಲಿ ಜೀವಿಸಿದ್ದ ಸಂದರ್ಭದಲ್ಲಿ, ಆತನಿದ್ದ ಪ್ರದೇಶದ ನೈಋತ್ಯ ಸಮುದ್ರಕ್ಕೆ ಹತ್ತಿರವಾದ ಸಂದರ್ಭದಲ್ಲಿ, ಮನೆಯ ಗವಾಕ್ಷಿಗಳನ್ನ ದಕ್ಷಿಣ ಹಾಗೂ ಪಶ್ಚಿಮಕ್ಕೆ ಇಡುವುದು ಆತ ನಿಷಿದ್ಧಿಸಿರಬಹುದು. ಅಕಸ್ಮಾತ್  ಆಗಲೂ ಬೇಸಿಗೆ, ಚಳಿಗಾಲಗಳ ಪರಿಕಲ್ಪನೆ ಇದ್ದಲ್ಲಿ, ನಿಮಗೆ ತಿಳಿದಿರಬಹುದು, ಬೇಸಿಗೆಯಲ್ಲಿ ಸಮುದ್ರದ ಗಾಳಿ ಭೂಭಾಗಕ್ಕೆ ಬೀಸುವುದು. ಇದು ಹೆಚ್ಚು ಆರ್ದ್ರ (humid)ವಾಗಿರುತ್ತದೆ. ಹೀಗಿದ್ದ ಪಕ್ಷದಲ್ಲಿ, ಮೊದಲೇ ಗಾಳಿಯಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ನಮ್ಮ ಬೆವರು ಅಷ್ಟಾಗಿ ಆವಿಯಾಗುವುದಿಲ್ಲ. ಹಾಗಿರುವುದರಿಂದಲೇ ನಮಗೆ ಹೆಚ್ಚು ಸೆಖೆಯೆನಿಸುವುದು. ಈ ಅನುಭವವಿದ್ದಲ್ಲಿ, ಬಿಸಿಗಾಳಿಯನ್ನು ತಡೆಯುವುದಕ್ಕಾಗಿ ಪಶ್ಚಿಮ ಹಾಗು ದಕ್ಷಿಣಗಳಲ್ಲಿ ಗವಾಕ್ಷಿ ಇಡುವುದನ್ನು ಆತ ನಿಷಿದ್ಧಿಸಿರಬಹುದು. ಹಾಗಾಗಿಯೇ ಮೇಲೆ ಹೇಳಿದ ಹಾಗೆ ಉತ್ತರಕ್ಕೆ ತಲೆಯಿಡುವುದು ಸೂಕ್ತವಲ್ಲ. ಈ ಪುಟವನ್ನ ನೋಡಿ. ಇಲ್ಲಿ ಎಲ್ಲಿಯೂ ಪೂರ್ವಕ್ಕೆ ತಲೆ ಹಾಕುವುದರ ಬಗ್ಗೆ ಪ್ರಸ್ತಾಪವೇ ಇಲ್ಲ. ದಕ್ಷಿಣ ಅಥವಾ ಪಶ್ಚಿಮ ಉತ್ತಮವೆನ್ನುವುದಷ್ಟೇ ಇಲ್ಲಿಯ ಅಭಿಪ್ರಾಯ. ಈ ವಾದ ಸರಿಯಾಗಿದ್ದಲ್ಲಿ, ಈ ರೀತಿಯ ಒಂದು ತಾಪತ್ರಯ ಭೂಭಾಗದ ಆಂತರಿಕ ಪ್ರದೇಶಗಳಿಗೆ ಬರುವುದಿಲ್ಲ. ಏಕೆಂದರೆ 'local wind'ಗಳ ಪ್ರಭಾವ ಅಲ್ಲಿ ಹೆಚ್ಚಿರುತ್ತದೆ. ಆಧುನಿಕ ಭಾಷೆಯಲ್ಲಿ ಹೇಳಬೇಕಾದರೆ, ಮಾನ್ಸೂನ್ ನಿನ ಪ್ರಭಾವಕ್ಕಿಂತ 'local wind'ಗಳ ಪ್ರಭಾವ ಹೆಚ್ಚಿರಬಹುದು ಇಂತಹ ಭೂಭಾಗದ ಆಂತರಿಕ ಪ್ರದೇಶಗಳಲ್ಲಿ. ಇದು ಕೇವಲ ಒಂದು ಅಭ್ಯಾಸವಾಗಿರಬಹುದು. ಇದನ್ನೇ ಶಾಸ್ತ್ರವೆನ್ನುವಂತೆ, ಮೂಲ ಕಾರಣಗಳನ್ನು ಪ್ರಶ್ನಿಸದೆ, ಪ್ರತಿಷ್ಠೆ ಅಥವಾ ನಂಬಿಕೆಗಳಿಗೋಸ್ಕರ (ಅಥವಾ ವ್ಯಾಪಾರವೂ ಇದ್ದಿರಬಹುದು) ಇವನ್ನು ಬೆಳೆಸಿಕೊಂಡು ಬಂದಿರಬಹುದು. ಇವೆಲ್ಲವೂ ನನ್ನ ಊಹೆಯಷ್ಟೇ. ಅಷ್ಟಕ್ಕೂ ಇದು ವಾಸ್ತು ಶಾಸ್ತ್ರದ ಯಾವುದೋ ಒಂದು ಪುಟ್ಟ ವಿಷಯಕ್ಕೆ ಸಂಬಂಧ ಪಟ್ಟದ್ದು. ಇದೇ ರೀತಿ ಮಿಕ್ಕ ವಿಚಾರಗಳನ್ನ ಸಮರ್ಥಿಸಿದಲ್ಲಿ ಮಾತ್ರ ನನ್ನ ಊಹೆಗಳಿಗೆ ಶಕ್ತಿ ಬರುತ್ತವೆ.' - ಗಜಪತಿ ಒಂದದಿನೈದು ನಿಮಿಷಗಳ ದೀರ್ಘವಾದ ಉಪನ್ಯಾಸವನ್ನು ಮುಗಿಸಿದ್ದರು ಸತ್ಯೇಶ ಯಾವುದೋ ಅಮಲಿನಲ್ಲಿ ತೇಲುತ್ತಿರುವವನ ಹಾಗೆ ಎಲ್ಲಿಯೋ ನೋಡುತ್ತ ಮೂಗಿನ ಮೇಲೆ ಬೆರಳಿಟ್ಟು ಕುಳಿತಿದ್ದ.

ಪ್ರಜ್ಞೆಯನ್ನು ತಂದುಕೊಂಡು, 'ಹೌದಲ್ಲವೇ. ಡಾರ್ವಿನ್ನಿನ ಪ್ರಕರಣದಂತೆ ಹೇಗೆ ತಮ್ಮ ದೇವರನ್ನು ಬಿಟ್ಟು ಕೊಡಲು ತಯಾರಿರಲಿಲ್ಲವೋ ಹಾಗೆಯೆ ಭಿನ್ನ ಕಾರಣಗಳನ್ನು, ವೈಜ್ಞಾನಿಕ ಕಾರಣಗಳೆಂಬಂತೆ ಕಾಲ ಕಾಲಕ್ಕೆ ಬಿಂಬಿಸುತ್ತಾ ತಮ್ಮ ಅಭ್ಯಾಸವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ ಜನ ತೊಡಗಿರಬಹುದು.  ಒಂದು ಪ್ರದೇಶಕ್ಕಷ್ಟೇ ಸೀಮಿತವಾದರೂ, ಅದು ಮುಖ್ಯವಾಗಿ ವ್ಯಾಪಾರಕ್ಕಾಗಿ ಪ್ರಚಲಿತಗೊಂಡಿರಬಹುದು. ಇವುಗಳಿಗೆಲ್ಲ ಉತ್ತರ ಸಿಗುವ ಕಾಲಕ್ಕೆ ನಾವು ಇರುವೆವೋ ಇಲ್ಲವೋ. ಉತ್ತರ ದೊರಕಿದರೂ ಯಾವ ಲಾಭವೂ ಇಲ್ಲ ನಷ್ಟವೂ ಇಲ್ಲ. ನಮ್ಮ ಕುತೂಹಲ ತಣಿಯುತ್ತದಷ್ಟೇ.'

'ಹಾಗೆ ಹೇಳುವ ಹಾಗಿಲ್ಲ ಸತ್ಯೇಶ್. ಇವೆಲ್ಲ ನನ್ನ ಊಹೆಗಳಷ್ಟೇ. ಇವೆಲ್ಲಾ ಹೀಗೇ ಎಂದು ಹೇಳಲು ಯಾವ ಪುರಾವೆಯೂ ಇಲ್ಲ. ಈ ರೀತಿಯ ಪದ್ಧತಿಯ ಹಿಂದೆ ಅಕಸ್ಮಾತ್ ಯಾವುದಾದರೊಂದು ಮಹತ್ತರವಾದ ಸತ್ಯ ಅಡಗಿ, ಅದು ಯಾವ ರೀತಿಯಲ್ಲಾದರೂ ಮನುಕುಲಕ್ಕೆ ಉಪಯೋಗವಾಗುವುದಾದರೆ, ಕೇವಲ ನಮ್ಮ ಕುತೂಹಲವೆಂದು ಅದನ್ನು ತಳ್ಳಿಬಿಡಲಾಗುವುದಿಲ್ಲ.'
'ಹೌದೌದು ನಿಜ' - ಸತ್ಯೇಶ ತಲೆದೂಗಿದ.
'ಒಹ್! ಸಮಯ ಹೋಗಿದ್ದೇ ತಿಳಿಲಿಲ್ಲ ನೋಡಿ. ೬ ಆಗೋಯ್ತು. ಮಗನಿಗೆ ವೇದ ಹೇಳಿಕೊಡುವ ಸಮಯ. ಮತ್ತೆ ಸಿಗ್ತೇನೆ ಸತ್ಯೇಶ್. ಅಂದಹಾಗೆ ತಿಳಿತಾ? ಐ. ಐ. ಟಿ. ಧಾರವಾಡಕ್ಕೆ ಮಂಜೂರಾಗಿದೆ.'
'ಹಾಂ! ಗೊತ್ತಾಯ್ತು! ಮೈಸೂರಿನವರಿಗೆ, ನನ್ನನ್ನೂ ಸೇರಿಸಿಕೊಂಡೆಯೇ ಹೇಳಿದ್ದಿರಬೇಕು ಸಚಿವರು, ಬಹಳ ಅನ್ಯಾಯವಾಗಿದೆಯಂತೆ. ಈ ತಲೆನೋವಿನ ನಡುವೆ ಹೊಸ ತಲೆ ಕೆರೆದುಕೊಳ್ಳುವ ವಿಚಾರ ಬಿಟ್ಟರು ನೋಡಿ. ನನಗೇನು ಅನ್ಯಾಯವಾಗಿದೆ ಎನ್ನುವ ಚಿಂತೆ!'
'ಹಾ! ಹಾ! ಹಾ!' ಗಜಪತಿ ಜೋರಾಗಿ ನಕ್ಕು ಹೊರಟ.
ಸತ್ಯೇಶ ಹಾಗೆಯೇ ಕುರ್ಚಿಯಲ್ಲಿ ಒರಗಿ ಕಣ್ಮುಚ್ಚಿ ಕುಳಿತ.



ಕೃತಜ್ಞತೆಗಳು:
ಇದರ ಆಲೋಚನೆಯನ್ನು ಹುಟ್ಟಿಹಾಕಿದ ತಂದೆ, ಅಕ್ಕನವರಿಗೆ.
ಒಂದು ವಿಚಾರವನ್ನು ಕೊಂಡಿಯ ರೂಪದಲ್ಲಿ ಬಳಸಿಕೊಳ್ಳಲು ಸಹಾಯ ಮಾಡಿದ ಗಣೇಶಯ್ಯನವರ 'ಮೂಕ ಧಾತು'ವಿಗೆ.

References:

1) http://medind.nic.in/ibl/t09/i3/iblt09i3p162.pdf
2) http://www.ncbi.nlm.nih.gov/pmc/articles/PMC3553569/
3) http://www.antisuperstition.org/index.php?option=com_content&view=article&id=67%3Afalse-notion-of-vastushastra&catid=58%3Avastushastra&Itemid=64
4) http://www.aumscience.com/content/mission.html
5) https://arganesh3.wordpress.com/2012/05/19/mamuni-mayan-father-of-science-part-1/
6) https://en.wikipedia.org/wiki/Mamuni_Mayan
7) https://en.wikipedia.org/wiki/Kumari_Kandam
8) http://gurumaharishi.mailerindia.com/Groundrules%20of%20Vaastu.pdf
9) http://jin.co.in/our-collection/spiritual-power/vastu-world
10) http://www.quora.com/In-what-direction-should-I-keep-my-head-pointed-while-sleeping



No comments:

Post a Comment