Saturday, February 20, 2016

ಭ್ರಮೆ


1
ಆಕೆಯೊಬ್ಬಳು ಸುಂದರವಾದ ಹೆಂಗಸು. ಸಹಸ್ರಾರು ಜನ ಆಕೆಯನ್ನು ಇಷ್ಟಪಡುತ್ತಿದ್ದಾರೆ. ಅದರಲ್ಲೂ ಒಬ್ಬನಂತೂ ಆಕೆಗೋಸ್ಕರ ತನ್ನ ಪ್ರಾಣವನ್ನೂ ಅರ್ಪಿಸಲು ತಯಾರಿರುವಷ್ಟು ಆಕೆಯನ್ನು ಪ್ರೀತಿಸುತ್ತಿದ್ದಾನೆ! ಆಕೆಗಾದರೋ ಇವೆಲ್ಲಾ ಸಾಮಾನ್ಯ. ಮಾಮೂಲು. ಆಕೆಗೆ ಆತನ ಭಾವನೆಗೆ ಸ್ಪಂದಿಸಲು ಯಾವ ಅವಶ್ಯಕತೆಯೂ ಇಲ್ಲ. ಈತನೋ ಅದನ್ನರಿಯದ ಮರುಳ.  ಆಕೆಯ ಉತ್ತರಕ್ಕಾಗಿಯೇ ಕಾಯುತ್ತಿದ್ದಾನೆ. ಆಕೆ ತನಗೆ ಹಿಡಿಸಿದ ಮತ್ತೋರ್ವನನ್ನು ವರಿಸಿದ್ದಾಳೆ.
ಈತಕಾಯುತ್ತಲೇ ಇದ್ದಾನೆ. ಉತ್ತರವಿಲ್ಲ. ಕಾದು ಕಾದು ಮುಪ್ಪಾದರೂ ಆದೀತು. ಇವನ  ಪ್ರೀತಿ ಮಾತ್ರ ಕುಂದುತ್ತಿಲ್ಲ. ಆಕೆಗೆ ಇವನ್ಯಾರೆಂಬ ಅರಿವೂ ಇಲ್ಲ! ಈತನಿಗೆ ಇವಳೇ ಎಲ್ಲಾ! ಮತ್ತೇನು ಮಾಡುತ್ತಿಲ್ಲ –ಬರೆ ಕಾಯುತ್ತಿದ್ದಾನೆ. ನಿಷ್ಪ್ರಯೋಜಕನಾಗಿದ್ದಾನೆ. ಇಲ್ಲ – ಆತನ ಜೀವನೋದ್ದೇಶ ಇದೊಂದೆ. ತಾನೇನು ಮಾಡುತ್ತಿಲ್ಲವೆಂದು ಆಕೆ ತನ್ನನ್ನು ಇಷ್ಟ ಪಡುತ್ತಿಲ್ಲವೇ ಎನ್ನುವ ಸಂದೇಹ ಈತನನ್ನು ಕಾಡತೊಡಗಿದೆ. ಏನಾದರೂ ಮಾಡಲು ಮುಂದಾದರೆ, ಆಕೆಯೇಕೆ ಇನ್ನೂ ಉತ್ತರಿಸಿಲ್ಲವೆನ್ನುವ ಪ್ರಶ್ನೆ ಇವನ್ನು ತಿಂದುಹಾಕಿ ಇವನ  ಭಾವೋದ್ವೇಗವನ್ನು ಹೆಚ್ಚಿಸುತ್ತಿದೆ. ಈತ ಮತ್ತೆ ಏನೂ  ಮಾಡದೆ ಕುಳಿತಿದ್ದಾನೆ! ಆಕೆ ಸುಖ ನಿದ್ರೆಯಲ್ಲಿ ಸುಂದರ ಸ್ವಪ್ನದಲ್ಲಿ ತೇಲುತ್ತಿದ್ದಾಳೆ.


2
ಹಸಿರು ಮಲೆಯ ತುದಿಯಲಿ ಮುಳುಗುವ ಕೆಂಪುಂಡೆಯನ್ನು ನೋಡುತ್ತಾ ಮೈಮರೆತಿದ್ದಾನೆ. ಆ ರಮಣೀಯತೆ ಅವನ ತಲೆ ಕೆಡಿಸಿದೆ. ಅದರ ಒಡೆತನವನ್ನು ಬಯಸಿದ್ದಾನೆ. ರಮಣೀಯತೆಯನ್ನು ಬಯಸುವುದೇ? ಹುಚ್ಚಲ್ಲವೇ? ತಿರುಗಿದ ತಲೆ, ಆ ದೃಶ್ಯಕ್ಕೆ ಆತನನ್ನು ಒಡೆಯನನ್ನಾಗಿಸಿದೆ. ಆತ ಮರುಳಾಗೇ ಹೋದ. ನಂಬಿದ್ದಾನೆ - ಆ ರಮಣೀಯತೆಯೇ ಆತನ ಮನಕೆ ಅರುಹಿದ್ದು , 'ನೀನೆ ನನ್ನ ಒಡೆಯ' ಎಂದು. ಪ್ರತೀ ಸಾಯಂಕಾಲ ಸೂರ್ಯಾಸ್ತಯದ ವೇಳೆ ಆ ದೃಶ್ಯವನ್ನು ರಮಿಸಲಾರಂಭಿಸಿದ್ದಾನೆ. ಆ ಭಾವನೆ ಬಂಡೆ ಗಟ್ಟಿಯಾಗಿದೆ. ಅಯ್ಯೋ! ಅದೋ ಚಪ್ಪಡಿಯ ಕಲ್ಲು ಉರುಳಿತು ತಲೆಯ ಮೇಲೆ. ಕತ್ತಲಾಯಿತು ಸುತ್ತೆಲ್ಲಾ. ಬದುಕು ನಿರರ್ಥಕವಾಯಿತು. ಆತ ಅರಿತೇಬಿಟ್ಟ, ಆ ರಮಣೀಯತೆಗೆ ಎಲ್ಲರೊಟ್ಟಿಗೂ ಅದೇ ಸಲುಗೆ.  ತಾನೇನು ಭಿನ್ನವಲ್ಲ ಎಂದರಿವಾಗಿದೆ. ತಾನೂ ಒಂದೆ, ಮಳೆಯೂ ಒಂದೇ, ಮಳೆಯ ಹುಳುವು ಒಂದೇ. ಆ ದೃಶ್ಯದ ರಮಣೀಯತೆಗೆ ಬೇಕಿರುವುದು ನಿತ್ಯ ಚೈತನ್ಯ. ಆ ಚೈತನ್ಯವ ಹಸಿರಾಗಿಡುವಲ್ಲಿ ಸಹಕರಿಸುವರಲ್ಲಿ ನೋಡುಗನೊಬ್ಬನಷ್ಟೇ! 

ಮಳೆ ಹುಳುವೊಂದು ಇದೇ ಭ್ರಮೆಯಲ್ಲಿ ಮೈಮರೆತು ಆತನ ತುಳಿತಕ್ಕೆ ಸಿಕ್ಕು ಸತ್ತಿತು. 

3

ಅವನು ಹಾರಿ ಹೋಗಿದ್ದ, ನೀಲಿಯಾಕಾಶದಾಚೆಗಿನದ್ದನ್ನು ಕಾಣಲೇನೋ? ಅದು ಹಾಗೆ, ಆ ಸರಾಯಿಯ ಅಮಲು. ಗಗನದಾಚೆಗೂ ಚಿಮ್ಮಿಸುವಷ್ಟು ನಿಶೆಯನ್ನು ಕೊಡುವುದರಿಂದಲ್ಲವೇ ಆತ ಅದಕ್ಕೆ ಶರಣಾದದ್ದು! ಅವನಿಗೆ ಎಲ್ಲವನ್ನು ಅಳಿಸಬೇಕಿತ್ತು ಸ್ಮೃತಿಯಿಂದ. 
ಅಂದು ಆಕೆಯನ್ನು ಕಂಡೇಬಿಟ್ಟ. ಆತನಿಗೆ ನೆನಪಿತ್ತು - ಅಳಿಸು ಹೋಗುವಂಥದ್ದೇ ಅದು? ಆತನಿಗೆ ಆಕೆಯಲ್ಲಿ ಬಹಳ ಹಿಡಿಸಿದ್ದು ಆ ಮುಖವೂ ಅಲ್ಲ, ಉಬ್ಬು ಎದೆಯು ಅಲ್ಲ. ನೀಳ, ಕೋಮಲ, ಬಿಳುಪಾದ ಕಾಲಿನ ಪಾದಗಳು . ಆಹ್! ಆತನಿಗೆ ಪ್ರಾಣವೇ ಹೋಯಿತು. ಆಕೆ ತಿರಸ್ಕರಿಸಿದ್ದಳು, ನಿಜ. ಅದಕ್ಕಾಗಿಯೇ ಆತ  ಹೀಗಾದದ್ದು. ಆದರೆ ಆಕೆ ಮತ್ತೊಬ್ಬನಿಗೆ ತನ್ನನ್ನು ಅರ್ಪಿಸಿಕೊಳ್ಳುವಳೆಂದು ಆತ ಊಹಿಸಿದ್ದೇ ಇಲ್ಲ. ಅದು ಅವನ ಊಹೆಗೂ ನಿಲುಕದ್ದಾಗಿತ್ತು. ಏಕೆಂದರೆ ಅವನ ಊಹೆಯಲ್ಲಿದ್ದದ್ದು ಆಕೆ, ಆತ ಇಬ್ಬರೇ! ಹೌದು, ಆಕೆ ಕಾಲುಂಗುರ ತೊಟ್ಟಿದ್ದಳು. ತಡೆಯಲಾಗದೆ ಮತ್ತಷ್ಟು ಕುಡಿದು. 
ಅಗೋ ಅಲ್ಲೊಂದು ಅಪಘಾತ. ಆಕೆ ಇನ್ನೇನು ಆ ಸೇತುವೆಯಿಂದ ಕೆಳಗೆ ಬೀಳುವವಳಿದ್ದಾಳೆ. ಈತನೂ ಸೇತುವೆಯ ಮೇಲಿದ್ದಾನೆ. ಕೆಳಗಿನ ನೀರಲ್ಲೋ ಒಂದು ದೊಡ್ಡ ಸುಳಿ. ಸೇತುವೆ ಇಬ್ಬರ ಭಾರವನ್ನು ತಾಳಲಾರದು. ಈತನಿಗೆ ಆಕೆಯ ಮೇಲೆ ಅದೇಪ್ರೇತಿ. ಈತನಿಗೆ ಜೀವನ ಕತ್ತಲೆಯಲ್ಲಿನ ಶೂನ್ಯ. ಹಾರಿದ ನೀರಿಗೆ. ಅವನು ಬಿದ್ದ ರಭಸಕ್ಕೆ ಚಿಮ್ಮಿದ ನೀರು ಆಕೆಯ ಕೆನ್ನೆಯನ್ನು ಹಾದಿಯಾಗಿಸಿತ್ತು. ಆಕೆಗೆ ಆತ ಬೇಕೆನಿಸಿತು.  ಸುಳಿಯಲ್ಲಿ ಮುಳುಗುತ್ತಿದ್ದ ಆತನಿಗೆ ಆಕೆಯ ಕಣ್ಣೀರನ್ನು ಕಂಡು ಜೀವನ ವಿಪರ್ಯಾಸವೆನಿಸಿತು. ಕಾರಣವೂ ಇತ್ತು. ಆತನಿಗೆ ಬದುಕಬೇಕೆಂದೆನಿಸಿತ್ತು. ಆದರೆ ಸುಳಿ ತನ್ನ ಕಾಯಕವನ್ನು ನಿಷ್ಟೇಯಿಂದ ನಿರ್ವಹಿಸಿತ್ತು. ಅದಕ್ಕೆ ಯಾವ ಭಾವನೆ?
4

 ನಾನಂದುಕೊಂಡದ್ದಕ್ಕಿಂತ ವಿಸ್ಮಿತ ಜಾಗವಿದು. ಊಟ ದೊರೆಯುತ್ತದೆಂದಷ್ಟೆ ಕಲ್ಪಿಸಿದ್ದೆ. ಎಂಥಾ ಊಟ!  ಆಹಾ! ಇದೆಲ್ಲವೂ ನನ್ನದೇ ಜಾಗ. ನಾನೆಲ್ಲಾದರೂ ಮಲಗಬಹುದು. ಅಲ್ಲಿ, ಅಲ್ಲಿ. ನನಗೆ ಸ್ನಾನ ಇವರೆ ಮಾಡಿಸುವರೆ! ಆಹಾ! ಎಂಥಾ ಭೋಗ. ಅಲ್ಲವೆ? ಹ್ಹ .. ಹ್ಹ.. ಹೀಗೆಯೇ ಅಂದುಕೊಂಡಿದ್ದೆ. ಹೇಯ್! ಅಲ್ಲಿ... ಆ ಸರೋವರ ಎಷ್ಟು ಸುಂದರವಾಗಿದೆ. ಅಲ್ಲಿಗೆ ಹೋಗುತ್ತೇನೆ! ಉಹ್.. ಉಹ್.. ಉರೀ.. ಉರೀ.. ದಯಮಾಡಿ ಹೊಡೆಯಬೇಡ.... ನನಗೆ ಓಡಿ ಹೋಗಬೇಕಿದೆ. ಮತ್ತೆ ಯಾರ ತೆಕ್ಕೆಗೂ, ಯಾವ ಮಾಯೆಗೂ ಬೀಳದ ಹಾಗೆ. ಅರ್ರೆ! ಈ ಕಟ್ಟನ್ನು ಬಿಚ್ಚುವುದು ಹೇಗೆ? ಹೇಗೆ ತೆಗೆದರೂ ಇನ್ನೊಂದು ಕಡೆಯಿಂದ ಗಂಟು ಹಾಕಿಕೊಳ್ಳುತ್ತಿದೆ! ಎತ್ತೊಂದು ಮರುಗಿತು. 

No comments:

Post a Comment