Sunday, February 21, 2016

ಪ್ರೇತ!

ಅದೊಂದು ಭವ್ಯ ಬಂಗಲೆ. ಒಳಗೆ ವೈಭವವೋ ವೈಭವ. ಅದೆಷ್ಟು ವೈಭವವೆಂದರೆ, ಒಳಗೆ ಹೋದವನಿಗೆ ಒಳಗಿದ್ದರೆ ಕೊಲ್ಲುತ್ತೇನೆ ಎಂದು ಬೆದರಿಸಿದರೂ ಹೊರಗೆ ಹೋಗದಷ್ಟು ಮನಸ್ಸನ್ನು ಆಕ್ರಮಿಸಿ, ಆಳುವಂಥ ವೈಭವ. ಒಳಗೆ ಅದೆಂಥಾ ಸೋಫ. ಆಹಾ ಅದರ ಮೇಲೆ ಕೂತವನಿಗೆ ರಾಜನೆನ್ನುವಷ್ಟು ಭಾವನೆ ಮೂಡುತ್ತದೆ. ಆ ಕನ್ನಡಿಯೋ, ಅದರಲ್ಲಿ ತೋರುವ ಪ್ರತಿಬಿಂಬವೆಲ್ಲಾ ರಾಜನ ಅಥವ  ರಾಣಿಯ ಪೋಷಾಕು ತೊಟ್ಟದ್ದೇ ಆಗಿರುತ್ತದೆ. ನಿಮಗೆ ಕುಡಿಯಲು ಬಂಗಾರದ ಬಟ್ಟಲಲ್ಲಿ
ಹಣ್ಣಿನರಸ, ಹಾಲು ಸಿಗುತ್ತದೆ. ಅವುಗಳನ್ನು ತರುವವರು ಯಾರೆಂದುಕೊಂಡಿರಿ? ಆಹಾ! ಯಾವುದೇ ಲೋಕದಲ್ಲೂ ಕಾಣಸಿಗದಂತಹ ಅಪ್ರತಿಮ ಸುಂದರಿ. ಆಕೆ  ನಿಮ್ಮವಳೇ, ನಿಮ್ಮ ದಾಸಿಯೇ. ನಿಮ್ಮ ಯಾವುದೇ ಸೇವೆಗೆ ತಯಾರಿರುವವಳು. ನಿಮಗೆ ಉಣ್ಣೆಯ ಬಟ್ಟೆ ಬೇಕೆ? ಅಥವಾ ನೈಲಾನ್ ನದ್ದೇ? ಯಾವುದೇ ಕೇಳಿ ಅಲ್ಲಿ ಸಿಗದಿರುವುದು ಎನ್ನುವುದು ಏನೂ ಇಲ್ಲ. ಎಷ್ಟೆಲ್ಲಾ ವೈಭೋಗವಲ್ಲವೇ? ಇಲ್ಲ - ಸೂಕ್ಷವಾಗಿ ಗಮನಿಸಿ. ಆ ಬಂಗಲೆ  ಆಕಾರದಲ್ಲಿ ಕುಗ್ಗುತ್ತಿದೆ. ನೀವು ಎಲ್ಲೇ ಕೂತರೂ ಆ ಗೋಡೆಗಳೆಲ್ಲವೂ ನಿಮ್ಮ ಬಳಿಗೆ ಬರುವ ಹಾಗೆ ತೋರುತ್ತಿದೆ. ಅಲ್ಲವೇ? ಬರುತ್ತಿದೆ ನೋಡಿ. ಇನ್ನೇನು ಬಂದಿತು, ಬಂದು ನಿಮ್ಮನ್ನು ನಡುವೆ ಇರಿಸಿ ಅಪ್ಪುತ್ತವೆ. ಅಪ್ಪಿದಂತೆ ನಿಮ್ಮ ಮೂಳೆಗಳೆಲ್ಲಾ ಲಟ  ಲಟ  ಮುರಿದು, ನಿಮ್ಮ ಸಾವನ್ನು ನೀವೆ ಕಾಣುತ್ತೀರಿ ಅನುಭವಿಸುತ್ತೀರಿ! ಇದು  ನಿಮಗೆ ತಿಳಿದಿದೆಯಲ್ಲವೇ? ಆದರೂ ನಿಮಗೆ ಹೊರಹೋಗಲು ಇಷ್ಟವಿಲ್ಲವಲ್ಲವೇ? ಆ ವೈಭೊಗ ನಿಮ್ಮನ್ನು ಕಟ್ಟಿ ಹಿಡಿದಿದೆಯಲ್ಲವೇ? ಸಾಯಿರಿ! ಇಷ್ಟೆಲ್ಲಾ ತಿಳಿಸುತ್ತಿರುವ ನಾ ಯಾರೆಂದು ಅಚ್ಚರಿಯಿಂದ ನೋಡುತ್ತಿರುವಿರೆ? ನಿಮ್ಮ ಹಾಗೆ ಅದರೊಳಗೆ ಮೂಳೆಗಳನ್ನು ಮುರಿಸಿಕೊಂಡು, ಸತ್ತು, ಈಗ  ಒಳಗೆ ಸೇರುವವರಿಗೆಲ್ಲಾ ಎಚ್ಚರದ ಗಂಟೆ ಬಾರಿಸುವ ಒಂದು ಪ್ರೇತ. ಪ್ರೀತಿಯ ಭವ್ಯ ಬಂಗಲೆಯಲ್ಲಿ ಹುಟ್ಟಿದ ಪ್ರೇತ!

No comments:

Post a Comment