Thursday, August 11, 2016

ಇವಳೆ

ಇವಳೆ,


'ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ....'

ಎಂದೂ ಸಹ ನನ್ನದೊಂದು ಅಪರಿಪೂರ್ಣ, ಅಶಕ್ತ ಬರವಣಿಗೆ. ಪದಗಳು ತಿಳಿದಿಲ್ಲೆಂದಲ್ಲ. ಪದಗಳನ್ನ ರಸವತ್ತಾಗಿ ಜೋಡಿಸುವ ಕಲೆ ಸಿದ್ದಿಸದೇನೋ ಈ ಜನ್ಮಕ್ಕೆ. ನಿನ್ನಂದವನ್ನ ಹೊಗಳಲಿಕ್ಕಂತಲೇ ಅಲ್ಲ ಈ ಸಿದ್ದಿ. ಹೊಗಳಬೇಕೆಂದಿದೆ, ನಿಜ. ಆದರೆ ಹೊಗಳಿ ಹೊಗಳಿ ನಿನ್ನನ್ನು ಎತ್ತಲೋ ಏರಿಸಿ ನಿನ್ನ ಮನದೊಳಗಿಳಿಯಬೇಕೆನ್ನುವ ಬಯಕೆಯೇನೂ ಇಲ್ಲ. ಇದ್ದದ್ದನ್ನು ಇದ್ದಹಾಗೆ ಹೇಳಲು ಯಾವ ಪದಸಮುಚ್ಚಯಗಳು ಬೇಡವೇನೋ. ಅದು ಹೊಗಳಿಕೆಯೂ ಅಲ್ಲೇನೋ! ನೀ ಚೆಂದವಾಗಿದ್ದಿ ಎನ್ನುವುದನ್ನು ಬಹಳ ರಸವತ್ತಾಗಿ ಹಲವಾರು ಉಪಮೆ, ರೂಪಕಗಳಿಂದ ವರ್ಣಿಸಿ ಹೇಳುವುದು ನಿನ್ನೆಡೆಗಿನ ಒಲುಮೆ-ನಲುಮೆಗಳ ಹೊರರೂಪಕಗಳಷ್ಟೇ! ಅವುಗಳ ಬದಲಾಗಿ 'ನೀ ಚೆಂದವಿದ್ದೀ' ಎಂದಷ್ಟೇ ಎನಲು ಭಾವರಸಗಳೆಲ್ಲವನ್ನೂ ಕಳಕೊಂಡು ಬಡಕಲು ಅಸ್ಥಿಪಂಜರದಹಾಗೆ ಕಾಣುವ ರಸಹೀನವೆಂದೆಂಥೆನಿಸುವ ಆ ಎರಡು ಪದಗಳೂ  ಒಲುಮೆ-ನಲುಮೆಗಳ ಹೊರರೂಪಕಗಳೇ! ನನ್ನ ಬರವಣಿಗೆಯ ಬಗೆಗಿನ ತಪನವಿರುವುದೆಲ್ಲಾ ನಿನ್ನೆಡೆಗಿನ ಭಾವನೆಗಳಿಗೆ ತದ್ರೂಪವನ್ನೇ ಸೃಷ್ಟಿಸಲಾಗುತ್ತಿಲ್ಲವೆನ್ನುವುದರಲ್ಲಷ್ಟೇ! ನನ್ನ ನಡವಳಿಕೆ, ನನ್ನ ಮಾತುಗಳು ನನ್ನೊಳಗಿನ ಆ ಭಾವನೆಗಳ ಹೊರರೂಪಕಗಳಂತೆ ಕಾಣಿಸದಾಗಿವೆಯೇ ಎನ್ನುವ ಬೇಸರವಷ್ಟೇ! ನನ್ನ ಮಾತುಗಳೆಲ್ಲವೂ ಒಬ್ಬ ಹುಡುಗ ಒಂದು ಹುಡುಗಿಯನ್ನ ಮೆಚ್ಚಿಸಲಿಕ್ಕೆಂದೇ ಆಡುವಂಥಹ ಚಾಲ್ತಿಯಲ್ಲಿರುವ ಪದ್ದತಿಯೊಂದರ ಅನುಕರಣೆಯಂತೆ ತೋರುವುದೇ ಎನ್ನುವ ಗುಮಾನಿ! ನಾನೆಂದೂ ನಿನ್ನನ್ನು ಮೆಚ್ಚಿಸುವ ಸಲುವಾಗಿ ನಡೆಯಬೇಕೆಂದು ಭಾವಿಸಿದ್ದಿಲ್ಲ. ಅದರಲ್ಲಿ ನನಗೆ ಅಶ್ರದ್ದೇಯೇ, ಅಪನಂಬಿಕೆಯೆ ಹೆಚ್ಚು. ಮಿಗಿಲಾಗಿ ಅದು ನಾಟಕೀಯವೂ ಹೌದು. ಮನಸಿನ ಭಾವನೆಗಳನ್ನು ಯಥಾವತ್ತಾಗಿ ನಿನ್ನ ಮುಂದೆ ಎತ್ತಿಡುವುದಕ್ಕಿಂತ ಮಿಗಿಲಾದ ಅಭಿಮಾನದ, ಒಲುಮೆಯ ಮಾತುಗಳು ಅನವಶ್ಯಕ ಹಾಗೂ ಅಪ್ರಯೋಜಕ! 
ಇದು ಇತ್ತೀಚಿನ ಬೆಳವಣಿಗೆ - ನನ್ನನ್ನೇ ನಾನು ಕಾಣದಷ್ಟು ಬಹಳ ದೂರ ಕ್ರಮಿಸಿದ್ದಿರಬೇಕು ನಿನ್ನ ಒಡನಾಟದ ಬಯಲಲ್ಲಿ. ಪ್ರತಿಬಾರಿಯೂ ನೀನು 'ಏಕೆ?' ಎಂದು ಪ್ರಶ್ನಿಸುವಾಗ ಒಂದು ರೀತಿಯ ದ್ವಂದ್ವ ಮೂಡುತ್ತದೆ. ವಿಪರ್ಯಾಸವೆಂಬಂತೆ ಈ ದ್ವಂದ್ವದಿಂದ ನನ್ನನ್ನು ಹೊರಗೆಳೆಯುವುದೂ ಸಹ ನೀನೇ! 'ನನ್ನ ವ್ಯಕ್ತಿತ್ವವೇ ನಿನಗೆ ಹಿಡಿಸದಾದೀತೆ? ಅಥವಾ ನಾನೇ ನಿನಗೆ ಸರಿಯಾಗಿ ಸ್ಪಂದಿಸುತ್ತಿಲ್ಲವೇ? ಅಥವಾ ನನಗೆ ಬೇಸರವಾಗಬಾರದೆಂದು ನೀನು ನನ್ನನ್ನು ಸಹಿಸುತ್ತಿದ್ದೀಯೆ? ಇಲ್ಲವೇ ನೀ ಮತ್ತೊಬ್ಬರಿಗೆ ಯಾರಿಗಾದರೂ ಕಾಯುತ್ತಿರುವೆಯೋ?' ಹೀಗೆ ಹತ್ತು ಹಲವಾರು ಗೊಂದಲು, ಗೋಜಲು, ದ್ವಂದ್ವ ಗೂಡುಗಳ ರಾಶಿಯಲ್ಲಿ ಕಳೆದುಹೋಗಿರುವೆ. ಇದೆಂಥಾ ಭಾವನೆಯೋ ತಿಳಿಯದು.ಆದರೆ ನಾನು ನನ್ನೊಟ್ಟಿಗಿಂದ ಬೇರ್ಪಟ್ಟು ಮತ್ತೆಲ್ಲೋ ಕಳೆದುಹೋಗಿರುವ ಭಾಸವೊಂದು ಬಲವಾಗಿ ಕಾಡುತ್ತಿದೆಯಷ್ಟೆ. ನೀನು ನನಗೆ ಬೇಕೆಬೇಕೆಂಬ, ನಿನ್ನನ್ನು ನಾನು ಪಡೆಯಲೇಬೇಕೆಂಬ ಹಠಯೋಗವನ್ನೇನೂ ನಾನು ಸಾಧಿಸಹೊರಟಿಲ್ಲ. ಅದರಲ್ಲಿ ನನಗೆ ಯಾವ ಅರ್ಥವೂ ಕಂಡುಬರುವುದಿಲ್ಲ. ಬದಲಾಗಿ ಆ ಹಠಯೋಗ ನಿನ್ನ ಭಾವನೆಗಳ ಬಂಧಕಗಳಾಗಿ ಮಾರ್ಪಾಡಾಗುತ್ತವೆಯಷ್ಟೆ. ಸ್ವೇಚ್ಛೆಯಲ್ಲಿ ಹೆಚ್ಚು ನಂಬುಗೆಯನ್ನು ಇಟ್ಟವನು ನಾನು. ಒಂದನ್ನಂತೂ ಆಶ್ವಾಸನೆಯಾಗಿ ಕೊಡಬಲ್ಲೆ - ನನ್ನ ಸ್ನೇಹ, ಒಡನಾಟ ಇರುವವರೆಗೂ ನಿನ್ನ ಸ್ವಾತಂತ್ರ್ಯ, ಸ್ವೇಚ್ಛೆಗೆ ನನ್ನೆಡೆಯಿಂದ ಯಾವ ನಿರ್ಬಂಧವೂ, ಅಡ್ಡಿಯೂ ಇರುವುದಿಲ್ಲ. ಇದನ್ನು ನಾನು ಹೇಳಲೇಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಏಕೆಂದರೆ ನನ್ನ ಭಾವನೆಗಳನ್ನೆಲ್ಲಾ ನಿನಗೆ ಅರುಹಿ ನಿನ್ನ ಭಾವನೆಗಳ ಸ್ವೇಚ್ಛೆಗಳನನ್ನು ಕಟ್ಟಿಹಾಕಬೇಕೆಂಬ ಯಾವ ದುರುದ್ದೇಶ/ಉದ್ದೇಶದಿಂದಲೂ ನಿನಗೆ ಇವನ್ನೆಲ್ಲಾ ಹೇಳುವುದಲ್ಲ ನಾನು. ನಿನ್ನೆಡೆಗಿನ ಭಾವನೆಗಳನ್ನು ನಿನಗಲ್ಲದೆ ಮತ್ಯಾರಿಗಿದಾರೂ ಹೇಳುವುದಕ್ಕಾದೀತೇನೆ, ಹೆಣ್ಣೆ? ಇವುಗಳಿಗೆ ನೀನು ಸ್ಪಂದಿಸಬೇಕೆನ್ನುವ ಉದ್ದೇಶವೂ ಸಹ ಇದರ ಹಿಂದಿಲ್ಲ. ಒಳಗಿನ ಭಾವನೆಗಳನ್ನು ನಿನ್ನ ಬಳಿ ಹಂಚಿಕೊಳ್ಳದೇ ಮೌನದಿಂದಿರುವ ತಪ್ಪನ್ನು ನಾನು ಮತ್ತೊಮ್ಮೆ ಮಾಡಲಾರೆ. ಏಕೆಂದರೆ ಹೇಗಿದ್ದರೂ ನೀನಿಲ್ಲದ ಬದುಕು ಮೌನದೆಡೆಗೆ ಹೊರಳಿಬಿಡುತ್ತದೆಯೆನ್ನುವ ತಳಮಳ, ಕಳವಳವಿದೆ. ಅದನ್ನು ನಿನಗೆ ಅರುಹುವ ಹಾದಿ ತಿಳಿಯದೆ, ಹಲವು ಬಾರಿ ನನ್ನ ನಡವಳಿಕೆ, ಮಾತು, ಬರವಣಿಗೆಗಳಿಗೆ ಶಪಿಸುತ್ತಾ ಮರುಗುತ್ತೇನಷ್ಟೆ. ನಿನ್ನ ಜೀವನದಲ್ಲಿ ಉತ್ತಮನೆನಿಸುವ ವರನೊಬ್ಬ ಬರಬಹುದೇನೋ, ಅದರೆ ಅರೆಕ್ಷಣವೂ ಕಣ್ಣು ಮಿಟುಕಿಸಿದಾಗಲೆಲ್ಲ ನಿನ್ನ ರೂಪವನ್ನೇ ಮರಳಿ ತುಂಬಿಕೊಳ್ಳುತ್ತಾ, ನೆನಪಿನ ಗಂಧದಿಂದ ಧೂಪವೆಬ್ಬಿಸಿ ಆ ಧೂಪದ ತೀವ್ರತೆಗೆ ಆರ್ದ್ರವಾಗುವ ಕಣ್ಣುಗಳು ನಿನ್ನ ಜೀವನದ ಸಂತಸನ್ನಷ್ಟೇ ಅಪೇಕ್ಷಿಸಿಯಾವು!  ನಿನ್ನ ಒಡನಾಟದಲ್ಲಿ ನಾನು ನನ್ನ ತನವನ್ನೇನೂ. ನನ್ನನ್ನೇ ಮರೆತು ನಿನ್ನಲ್ಲಿ ನನ್ನನ್ನು ಹುಡುಕಲಾರಂಭಿಸಿದ್ದೆನೆನೋ? ನೀ ದೂರ ದೂರ ಹೋದಷ್ಟು ನನ್ನಿಂದ ನಾನೇ ದೂರಾಗುತ್ತಿದ್ದೇನೇನೋ!  

'ಮನಸೇ ನಾ ಏನೆ ಮಾಡಿದರೂ ನಿನ್ನ ಪ್ರೀತೀಗಲ್ಲವೇ...' ಎನ್ನುವ ಸಾಲುಗಳನ್ನು ಹೇಳಬಾರದೆಂದೆಷ್ಟೇ ಪ್ರಯತ್ನಿಸಿದರೂ, 'ಮನಸೇ .. ಮನಸಾ ಕ್ಷಮಿಸೇ..' ಎನ್ನುವ ಕ್ಷಮೆಯೊಂದನ್ನು ಸೇರಿಸಿಕೊಳ್ಳುತ್ತಾ ಈ ಮನ ಹಾಡಿರುತ್ತದೇ!!

ಇಂತಿ



No comments:

Post a Comment