Thursday, April 20, 2017

ಶೀರ್ಷಿಕೆಯಿಲ್ಲದ್ದು -2 
ಗುಡ್ ಗುಡ್ ಗುಡಕ್... ಗುಡ್ ಗುಡ್ ಗುಡಕ್.. ಆಗಸ ಕೂಗಿತು. ಆಟದ ಆರಂಭಕ್ಕೆ ಸೂಚನೆ ಸಿಕ್ಕಿತೆಂದು ಗಾಳಿಯು ಸುಂಯ್..... ಎಂದು ಎದ್ದಿತು. ಗಾಳಿಯ ಸೆಳೆತಕ್ಕೆ ಸಿಕ್ಕು ಮರಗಳು ಆಚೀಚೆಗೆ ಓಲಾಡಿದವು. ರೋಡಿನ ಕಸ, ಧೂಳುಗಳೆಲ್ಲ ಗಾಳಿಯ ರಭಸಕ್ಕೆ ಎದ್ದು ಹೋಗ ಬರುವವರನ್ನೆಲ್ಲಾ ಪ್ರಕೃತಿಯ ಆ ಆಟಕ್ಕೆ ಅಡಚಣೆಯೆಂದು ಬಡಿದು ಬದಿಗೆ ಓಡಿಸಿದವು. ಸುಂಟರವೋ ಏನೋ ಎನ್ನುವಷ್ಟು ರೋಷಮಯದಿಂದ ಮಣ್ಣು, ಕಸಗಳು ಭುರ್ರೆಂದು ಎದ್ದು ಮುಂದೊಂದು ಲೋಕವಿದೆ ಎನ್ನುವುದನ್ನೆ ಮುಚ್ಚಿಟ್ಟು ತಮ್ಮ ಪ್ರತಾಪವನ್ನು ನೆನಪಿಸಿ ಮೆರೆದವು. ಕೆಲವರ ಹಾಕಿದ ಸೀರೆಯ ಸೆರಗನ್ನು, ಕೆಲವರ ಮೇಲ್ಬಟ್ಟೆಯ ತುಂಡನ್ನು, ಕೆಲವರ ಪಂಚೆಯನ್ನು ಆಪೋಷನ ತೆಗೆದುಕೊಳ್ಳಲು ಯತ್ನಿಸಿದವು. ಇಷ್ಟಿದ್ದರು ಆ ಕಸ ಧೂಳುಗಳಿಗೆ ಆಗಸದ ರೆಪ್ಪೆಯನ್ನು ತಾಕಿ ಕಣ್ಣೊಳಗಿಳಿದು ನೀರಿಳಿಸಲು ಆಗಲೇ ಇಲ್ಲ. ಬರೆ ವ್ಯರ್ಥ ಪ್ರತಾಪವನ್ನು ತೋರುತ್ತಾ ಜನರ 
ಕಣ್ಣಲ್ಲಿ ನೀರಿಳಿಸುತ್ತಿದ್ದವು. ಕಣ್ಣುಗಳನ್ನು ಉಜ್ಜಿಕೊಳ್ಳುತ್ತ, ರಕ್ಷಣೆಗೆಂದು ಅಂಗಡಿಯೊಳಗೋ ಹೋಟೆಲ್ಲಿನೊಳಗೊ ಅಲ್ಲಿ ಇಲ್ಲಿ ಸಂದಿ ಗೊಂದಿ ಎನ್ನದೆ ಜನರು ಓಡಲಾರಂಭಿಸಿದರು. ಹೀಗೆ ಕಣ್ಣುಜ್ಜುತ್ತಾ ಓಡಿ ಎದುರಿನ ಹೋಟೆಲ್ಲಿಗೆ ನುಗ್ಗಿ ಕುಳಿತೆ. ಮಧ್ಯಾನ ಮೂರಾದರೂ ಸಂಜೆ ಸೂರ್ಯಾಸ್ತವಾದ ನಂತರದ ಅನುಭವ. ಮಂದ ಬೆಳಕಿನ ಹಾಗೂ ಧೂಳಿನ ಕಾರಣ ಹಲವು ಗಾಡಿಗಳು ಅದಾಗಲೆ ತಮ್ಮ ದೀಪಗಳನ್ನು ಹಚ್ಚಿಕೊಂಡು ಹೋಗುತ್ತಿದ್ದವು. ನಿಧಾನಕ್ಕೆ ತಂಡಿ ಎದ್ದಿತು. ಮಣ್ಣಿನ ವಾಸನೆ ರಪ್ ಎಂದು ಮೂಗಿಗೆ ಬಡಿಯುತ್ತಿತ್ತು. ಗಾಳಿಯ ಆರ್ಭಟ ನಿಲ್ಲುವ ಹಾಗಿಲ್ಲ. ಮಳೆ  ಬರುವ ಹಾಗಿಲ್ಲ. ಆ ಸನ್ನಿವೇಶದೊಳಗೆ ಮತ್ತಷ್ಟು ಮುಳುಗಿಹೋಗಲು  ಅನುಕರಿಸುವವೇನೋ ಎಂದು ಒಂದು ಡಬಲ್ ಕಾಫಿ ಹಾಗೂ ಒಂದು ಆಲೂ ಮತ್ತು ಮೆಣಸಿನ ಬಜ್ಜಿ ಹೇಳಿ ತಲೆಯ ಹಿಂದೆ ಕೈಕೊಟ್ಟು ಹೊರಗಿನ ವಿಶಾಲ ರಸ್ತೆಯನ್ನು ನೋಡುತ್ತಾ ಕುಳಿತೆ.
ಆ ಅಬ್ಬರದ ನಡುವೆಯೂ, ಪ್ರವಾಹಕ್ಕೆ ಎದೆಯೊಡ್ಡುವ ಈಜುಗನ ಹಾಗೆ, ನಾಲ್ಕುವರೆ ಅಡಿಯ ಕಾಯವೊಂದು ತಲೆ ಎತ್ತಿಕೊಂಡು ಕುಂಟುತ್ತ ಕುಂಟುತ್ತಾ ಕವರೊಂದನ್ನು ಹಿಡಿದ ಕೈಯನ್ನು ಕಾಲಿಗೆ ಆಧಾರ ಕೊಟ್ಟು ಇನ್ನೊಂದು ಕೈಯಲ್ಲಿ ಆಗೀಗ ಕಣ್ಣುಜ್ಜುತ್ತಾ ಬಂದು ಹೋಟೆಲ್ಲಿನ ಹೊರಗೆ ಒಂದು ಸ್ಟೂಲ್ ಎಳೆದುಕೊಂಡು ಕುಳಿತು ಒಂದು ಬಜ್ಜಿ ಒಂದು ಕಾಫಿ ಎಂದು ಕೂಗಿತು. ಒಳಗೆ ದೋಸೆ ಹಾಕುತ್ತಿದ್ದವ ಹಾಗೆ ಹಿಂದಕ್ಕೆ ಬಗ್ಗಿ ನೋಡಿ ಕೊಟ್ಟಾಗಿಲ್ವ ಎಂದ. ರಾಮು ಅವರಿಗೊಂದು ಬಜ್ಜಿ ಕಾಫಿ ಕೊಡೊ ಮಾರಾಯ ಎಂದು ಹಣೆಯ ಮೇಲಿನ ಬೆವರನ್ನು ಹೆಬ್ಬರಳಲ್ಲಿ ಎಗರಿಸಿದ. ಅದೆಲ್ಲಿ ಬಿತ್ತೊ ಏನೋ, ದೋಸೆ ಹೇಳಬೆಕೆಂದಿದ್ದ ನನಗೆ ಬಜ್ಜಿ ಕಾಫಿ ಸಾಕೆನಿಸಿತು. ಅವ್ರಿಗಾಯ್ತು ಮಾರ್ರೆ.. ಇವ್ರಲ್ಲ ಕೂಗಿದ್ದು. ಅಲ್ಲಿದಾರೆ’. ಇದು  ಕೇಳಿದ ತಕ್ಷಣ ಆ ಕಾಯ ಬೆನ್ನು ನೇರ ಮಾಡಿ ಟೇಬಲ್ ನ ನೇರಕ್ಕೆ ತನ್ನ ಕುತ್ತಿಗೆ ತಂದಿತು. ಶೂನ್ಯದಿಂದಚಕ್ ಎಂದು ಹೊರಬಂದ ಕತ್ತೊಂದನ್ನು ನೋಡಿದ ದೋಸೆ ಮಾಲಿ ಒಡನೆಯೆ ಕೂಗಿದ –ಅಮ್ಮ ಅವ್ನು ಮತ್ತೆ ಬಂದ’. ಆ ಕತ್ತು ಹೊತ್ತಿದ ಮುಖ ಕಿರಿಯಿತು.
ಹೆಂಗಸೊಬ್ಬಳು ಹೊರ ಬಂದು ನೋಡಿ ಕೇಳಿದಳು –ಏಯ್ ಏನೋ ಯಾಕೋ ಬಂದೆ ಮತ್ತೆ?’
ಅವರಿಗೆ ತಿಂಡಿ ಬೇಕಂತೆ. ಡಬ್ಬಿ ತಂದೀವ್ನಿ. ನಂಗು ಕಾಫಿ ಬೇಕು. ಕೊಡಿ.. ಬಜ್ಜಿನೂ ಬೇಕು
ನಿನ್ಗ್ಯಾಕೆ ಕೊಡ್ಬೇಕು ನಾನು? ನೀನ್ಯಾರೊ? ಹೋಗ್ ಹೋಗು. ಮೊದ್ಲು ತಿಂದಿರೋದಕ್ಕೆ ಕೊಡು. ಆಮೇಲೆ ದುಡ್ಡು ಕೊಟ್ಟು ಏನಾದ್ರು ತಿನ್ಕೊ.
ನಂಗೆ ಹೊಟ್ಟೆ ಹಸೀತಿದೆ. ಅದ್ಕೆ ಕೊಡಿ ತಿನ್ನೊಕ್ಕೆ. ನಾನು ದುಡ್ಡು ಯಾಕೆ ಕೊಡ್ಬೇಕು? ನಿಮ್ಹತ್ರ ತಿನ್ನೊಕ್ಕೆ ಇದ್ಯಲ್ಲ. ನನಗೂ ತಿನ್ನಕ್ಕೆ ಕೊಡಿ
ಹೇಯ್! ಇದ್ಯೇನ್ ಧರ್ಮ ಛತ್ರ ಅನ್ಕೊಂಡ್ಯೇನೋ. ಬಡೀತೀನಿ ಈಗ ಹೋಗ್ ಹೋಗು.. ಏನೂ ಸಿಗೋದಿಲ್ಲ ನಿಂಗೆ ಇಲ್ಲಿ
ಹಾಗೆಲ್ಲಾ ಹೇಳ್ಬಾರ್ದು ನೀವು. ನಂಗೆ ಅಳು ಬರತ್ತೆ. ಹೊಟ್ಟೆ ಹಸೀತಿದ್ರೆ ಯಾಕೆ ಕೊಡ್ಬಾರ್ದು ತಿನ್ನೋಕ್ಕೆ? ಕೊಡ್ಬೇಕು ನೀವು ಈಗ. ಇಲ್ಲ ನಾ ಇಲ್ಲಿಂದ ಹೋಗೊದಿಲ್ಲ ಎಂದು ತೊದಲಿತೊದಲಿ ಹೇಳುತ್ತ ಜೇಬಿನೊಳಗೆ ಕೈ ಹಾಕಿ ಒಂದೆರೆಡು ನಾಣ್ಯಗಳನ್ನ ಹೊರಗೆ ತೆಗೆದು –ಇದಿಟ್ಕಾಳಿ ಬೇಕಿದ್ರೆ. ನಂಗೆ ಬಜ್ಜಿ ಕಾಫಿ ಕೊಡಿ
ಹೇಯ್! ಇದ್ಕೆ ಏನ್ ಸಿಗತ್ತೆ ಅನ್ಕೊಂಡಿದೀಯ? ಇದ್ನ ತೆಗೊಂಡು ಹೋಗಿ ಬೇರೆ ಅಂಗಡಿಲಿ ಕೇಳು ಒದ್ದು  ಓಡಿಸ್ತಾರೆ ನಿನ್ನ. ನಾನಾಗಿದ್ದಕ್ಕೆ ಸುಮ್ನೆ ಬಿಟ್ಟಿದೀನಿ. ಹೋಗೋ ಮಂಕೆ
ಹಾಗೆಲ್ಲಾ ಹೇಳ್ಬಾರ್ದು ನೀವು. ಹಸಿವಾಗ್ತಿದೆ ಕೊಡ್ಬೇಕು ನಂಗೆ. ನಾನು ಇಲ್ಲಿಗೇಯಾ ಬರೋದು. ಇನ್ನೆಲ್ಲಿಗೂ ಹೋಗೊಲ್ಲ
ಅದೇ ಯಾಕೋ ಮಂಕೆ
ನಂಗೊತ್ತಿಲ್ಲ... ತಿನ್ನೊಕ್ಕೆ ಕೊಡಿ. ಹಸಿದವರ್ನ ಓಡಿಸ್ಬಾರ್ದು.
ಪ್ರತಿ ಸರಿ ಇದೇ ಆಯ್ತು ಈ ಮಂಕ್ ಮುಂಡೆದ್ರದ್ದು. ಇದೆ ಕೊನೆ ಇನ್ನೊಂದ್ ಸರಿ ಈ ಕಡೆ ಕಾಣಿಸ್ಕೊಂಡ್ರೆ ಕಾಲು ಮುರೀತೀನಿ
ಹಾಗೆಲ್ಲ ಹೇಳ್ಬಾರ್ದು. ಯಾಕೆ ಹಾಗೆ ಹೇಳ್ತೀರಿ. ನಾನು ಮತ್ತೆ ಹಸಿವಾದಾಗ ಬರ್ತೀನಿ. ನೀವು ಮತ್ತೆ ಕೊಡ್ಬೇಕು ನನಿಗೆ
ಈ ಮಂಕ್ ಮುಂಡೆದ್ರ ಹತ್ತಿರ ಮಾತಾಡೋದು ನೋಡಿದ್ರೆ ನನ್ನು ಯಾರದ್ರು ಮಂಕು ಅಂದ್ಕೋತಾರೆ. ರಾಮು ಅದೇನ್ ಕೇಳತ್ತೆ ಕೊಟ್ಟು ಓಡ್ಸು ಅದ್ನ. ನನ್ ಕರ್ಮ – ಆ ಹೆಂಗಸು ಬುರ ಬುರ ಅಂತ ಒಳಗೆ ಓಡಿದಳು.
ಈ ನಲವತ್ತರ ಕುಂಟು ಶರೀರದ ಕಾಯ ತಲೆಗೆಳಗಿಳಿಸಿ, ತಲೆಯನ್ನು ಮೂರು ಬಾರಿ ಎಂಟರ ಪಥದಲ್ಲಿ ನಿಧಾನಕ್ಕೆ ಸುತ್ತಿ, ತನ್ನ ದಪ್ಪ ನಾಲಿಗೆಯನ್ನು ಹೊರಗೆ ತೆಗೆದು ಕೆಳತುಟಿಯನ್ನು ಸವರಿ ಕೊಳ್ಳುತ್ತಾ ತಲೆ ಕೆರೆದುಕೊಂಡು ಕುಳಿತಿತು. ಒಮ್ಮೆಲೆ ಕಣ್ನನ್ನು ಮೇಲೆ ಮಾಡಿ, ಅರ್ಧೆಂಟರ ಪಥದಲ್ಲೆ ಕತ್ತು ತಿರುಗಿಸುತ್ತಾ, ತುಟಿ ಸವರುತ್ತ ನನ್ನ ಬಜ್ಜಿಯನ್ನು ನೋಡಿ ಮಕ್ಕಳ ಹಾಗೆ ನಕ್ಕು ತಲೆಗೆಳಗಿಳಿಸಿತು.
ನಾನು ತಿಂದು ಮುಗಿಸಿ ಹಣ ಕೊಡಲು ಹೋದಾಗ ಒಂದು ರೀತಿಯ ಅಣಕು ನಗೆ ಮುಖವನ್ನೆಲ್ಲಾ ಆವರಿಸಿತ್ತು. ನನಗೆ ತಿಳಿಯದು ಆ ನಗೆಯ ಅರ್ಥವೇನು, ಅದರ ಹಿಂದಿನ ಭಾವವೇನು ಎಂದು. ಹಣವನ್ನು ಸ್ವೀಕರಿಸುವ ಆ ಹೆಂಗಸು ಚಕ ಚಕನೆ ಲೆಕ್ಕ ಹಾಕಿ ಬಾಕಿ ಚಿಲ್ಲರೆ ಕೊಟ್ಟು ನನ್ನ ನಗುವನ್ನೂ ಗಮನಿಸದೆ ಒಳಗೆ ಓಡಿದಳು. ಹೊರಗೆ ಬಂದು ಆತನನ್ನು ನೋಡಿದಾಗ್ಯೂ ಅದೇನೋ ನಗು – ಮಂಕ್ಯಾರು ಎನ್ನುವ ಭಾವ! ಗಾಳಿಯ ಆರ್ಭಟಕ್ಕೆ ಎದೆಯೊಡ್ಡುತ್ತಾ, ಕಣ್ಣುಜ್ಜುತ್ತಾ ಯಾವುದೋ ಹಾದಿಯಿಡಿದು ಎತ್ತಲೋ ಹೊರಟಾಗ ಏನೋ ಜೀವವನ್ನು ಅಣಕಿಸುವ ನಗು – ಹಾಗೆಲ್ಲಾ ಹೇಳ್ಬಾರ್ದು ನೀವು ಎನ್ನುವ ಗುಂಗು!
ಬದುಕ ಹವಣಿಕೆಯ
ತೊರೆದು ಜೀವಿಸುವುದ ಕಾಣೆ,
ನನಗೂ, ಅವನಿಗೂ, ಅವರಿಗೂ
ಬದುಕೇ ಬದುಕಲು ಪ್ರೇರಣೆ!




No comments:

Post a Comment