Sunday, July 21, 2019

ಫುಲ್‌ಟೈಮ್‌ ಸೋಂಬೇರಿ!

 


ಕಾಡಿನ ಸಾನ್ನಿಧ್ಯ ಇದ್ದಕ್ಕಿದ್ದ ಹಾಗೆ ಬೇಕೆನಿಸಿತು. ನಮ್ಮ ಮೆದುಳಿನ ಕಾರ್ಯಪ್ರವೃತ್ತಿ ಅತೀ ವಿಚಿತ್ರ. ಅದೇಕೆ ತೇಜಸ್ವಿಯ ʻಸೋಂಬೇರಿ ಮೋರೆಯ ಕಾಡುʼ ಇದ್ದಕ್ಕಿದ್ದ ಹಾಗೆ ನೆನಪಾಯಿತು? ಅದೇಕೆ ತೇಜಸ್ವಿ ಆ ಮಳೆಗಾಲದಲ್ಲಿ ಮೂಡಿಗೆರೆಯ ಜೇನು ಸೊಸೈಟಿಯ ಬಾಗಿಲು ತೆಗೆಯುವ ಚಿತ್ರ ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಹಾರಿ ಬಂದು ಕಣ್ಣ ಮುಂದೆ ನಿಂತಿತು? ಈಕೆ ಮಲೆನಾಡಿನವಳನ್ನೋದೇನೋ ನನಗೆ ನಿಜವಾಗಿಯೂ ನೆಮ್ಮದಿಯೇ. ಆದರೆ ಮನಸ್ಸು ಮೇಗೂರಿನ ನಾಗಾನಂದರ ಮನೆಗೆ ಸೆಳೆಯುತ್ತಿದೆ. ಆ ಮನೆಯಲ್ಲಿ ಓದಿದ್ದ ಅಣ್ಣನ ನೆನಪು, ಮನೆಯೆಲ್ಲಾ ಪ್ರತಿಧ್ವನಿಸುತ್ತಿದ್ದ ನಗು, ಆ ಛಳಿಯಲ್ಲಿ ಹೊದೆದಿದ್ದ ಕಂಬಳಿ,

ಸೋಂಬೇರಿ ಮೋರೆಯ ಕಾಡಿನಿಂದ ಹೊಮ್ಮುತ್ತಿದ್ದ ʻಜೀಂ…ʼ ಎನ್ನುವ ಜೀರುಂಡೆಯ ಸದ್ದು, ನಿಲ್ಲದೆ ಸುರಿಯುತ್ತಿದ್ದ ಜಿಡಿ ಮಳೆ, ಬೆಳಗೋ, ಮಧ್ಯಾನವೋ, ಸಂಜೆಯೋ ಎನ್ನುವುದನ್ನು ಗಡಿಯಾರವಿರಲ್ಲದೆ ಕಂಡುಹಿಡಿಯಲಾಗದ ಕಾಲಾಜ್ಞಾನದ ಸ್ಥಿತಿ, ರಾತ್ರಿಯಲ್ಲಿ ಹೊತ್ತಿದ್ದ ಬಲ್ಬಿಗೆ ಮುತ್ತುತ್ತಿದ್ದ ವಿಚಿತ್ರ ಕೀಟಗಳು! ಕಾಲದಲ್ಲಿ ಹಿಂದಕ್ಕೆ ಸರಿದಿದ್ದೇನೆ. ನನ್ನನ್ನು ನಾನೇ ನೋಡುತ್ತಿದ್ದೇನೆ. ಅಗೋ ಅಲ್ಲಿ ಈಗಷ್ಟೇ ಮಳೆ ನೀರು ಹಾಯಿಸಿಕೊಂಡಿರುವ ಮಣ್ಣಿನ ಹಾದಿಯಲ್ಲಿ ಬಹಳ ಹುಷಾರಾಗಿ ಟಾರ್ಚಿನ ಲೈಟ್‌ ಬಿಡುತ್ತಾ ನಡೆಯುತ್ತಿದ್ದೇನೆ. ಈ ಹಾದಿಯಲ್ಲೆಲ್ಲೂ ದೀಪವಿಲ್ಲ. ಮೋಡ ಕವಿದಿದೆ. ಆಕಾಶದದಿಂದ ಯಾವುದೇ ಲಾಭವಿಲ್ಲ. ಕಾಲಿಗೆ ಇಂಬಳ ಮೆತ್ತಿದ್ದರೂ ಮೆತ್ತಿರಬಹುದು. ಇಲ್ಲೆಲ್ಲೂ ಕಾಲಹರಣಕ್ಕಾಗಿ ಆಲೋಚಿಸುವ ಅವಶ್ಯಕತೆಯೇ ಇಲ್ಲ. ಜೀವನದಲ್ಲಿ ನನಗೇನು ಬೇಕಿದೆ ಎನ್ನುವ ಆಲೋಚನೆಗೂ ನಿಲುಕದಷ್ಟು ವೇಗದಲ್ಲಿ ಕಾಲದೊಳಗೆ ಹರಿಯುತ್ತಿದ್ದೇನೆ. ಮಳೆ ಜಿಟಿಯುತ್ತಿದೆ.

ಮೂರ್ನಾಲ್ಕು ದಿನಗಳ ಹಿಂದಿದ್ದ ನಾನಲ್ಲ ಇದು. ಅದೆಷ್ಟು ವ್ಯತಿರಿಕ್ತವಾಗಿ ನಾನೇ ಬಿಂಬಿತವಾಗುತ್ತಿದ್ದೇನೆ! ಈ ಸಮಯದಲ್ಲಿ,  ಮೋಡಗಟ್ಟಿದ ಕರಿ ಆಗಸಡಿಯಲ್ಲಿನ ಈ ಕಗ್ಗತ್ತಲಿನ ಕಾಡಿನ ಮಧ್ಯದಲ್ಲಿ ನನ್ನ ಅಸ್ತಿತ್ವವೆನ್ನುವ ಮರ ತನ್ನಿಂತಾನೇ ರೆಂಬೆ ಕೊಂಬೆ ಕಾಂಡ ಬೇರುಗಳನ್ನೆಲ್ಲಾ ಕಳಕೊಂಡು ನೆಲಸಮವಾಗಿರುವುದೂ ನನ್ನ ಗಮನಕ್ಕೆ ಬರುತ್ತಿಲ್ಲ. ನನಗದು ತಿಳಿಯುತ್ತಿದೆ. ಆದರೆ ಇಲ್ಲಿಗೆ ಬರುವ ಎರಡೇ ದಿನಗಳ ಹಿಂದೆ ನನ್ನನ್ನು ನಾನೇನೆಂದು ಕಂಡುಕೊಳ್ಳದೆ ಅದೆಷ್ಟು ದುಃಖಿತನಾಗಿದ್ದೆ! ನನ್ನ ಅಸ್ತಿತ್ವದ ಆಳವಾದ ಹುಡುಕಾಟದಲ್ಲಿಯೋ ಅದನ್ನು ಅರುಹುವಲ್ಲಿಯೋ ಸೋತುಹೋಗಿದ್ದೆ. ಅಗೋ ಅಲ್ಲೆಲ್ಲೋ ಮೇಲೆ ದೀಪ ಉರಿಯುತ್ತಿದೆ. ದೇವಸ್ಥಾನವದು. ಸ್ವಲ್ಪ ಹೊತ್ತು ಕೂತು ಬರೋಣವೆಂದು ಅಲ್ಲಿಗೆ ನಡೆಯುತ್ತಿದ್ದೇನೆ. ಮಣ್ಣಿನ ದಾರಿಯ ಕೊನೆಯಲ್ಲಿ ಗೇಟಿನ ಹಾಗೆ ಅಡ್ಡಲಾಗಿ ಹಾಕಿರುವ ಬೊಂಬೊಂದನ್ನು ಪಂಚೆಯಲ್ಲಿ ದಾಟುವುದು ಸ್ವಲ್ಪ ಕಷ್ಟವೇ. ಟಾರ್ಚಿನ ಲೈಟ್‌ ಬಿದ್ದಿಲ್ಲದ ಜಾಗದಲ್ಲೆಲ್ಲಾ ಮರಗಳೇ ತುಂಬಿರುವುದು ಕೇವಲ ಆ ಮರದ ಎಲೆಗೆಳು ಗಾಳಿಗೆ ಅಲುಗಾಡಿ ಹೇಳಿಕೊಂಡರಷ್ಟೇ ತಿಳಿಯೋದು. ಆಹಾ! ಎಂಥಾ ಸೋಂಬೇರಿ, ಫುಲ್‌ಟೈಮ್‌ ಸೋಂಬೇರಿ ಈ ಕಾಡು. ತನ್ನ ಮರಗಳ ಇರುವಿಕೆಯನ್ನು ಅರುಹಲು ಗಾಳಿಯೇ ಬೀಸಬೇಕು. ತನಗೇ ಸ್ವಂತ ಆಸಕ್ತಿಯಿಲ್ಲ! ತನಗಿಷ್ಟ ಬಂದ ಹಾಗೆ ಯಾವುದಕ್ಕೂ ಅಂಜದೆ, ಯಾವುದಕ್ಕೂ ಆಸಕ್ತಿ ತೋರದೆ ಕಾಲದೊಳಗೆ ಹರಿಯುತ್ತಿದೆ. ಅದೆಷ್ಟು ನಿರ್ಲಿಪ್ತತೆ. ಈ ಎರಡೂ ದಿನಗಳಲ್ಲಿ ನಾನೂ ಸಹ ಕಾಡಿನೊಳಗೆ ಕಾಡಾಗಿ ಹೋಗಿದ್ದೆನೇನೋ!

ದೋಸೆ ತಿನ್ನುತ್ತಾ ದೀಪದ ಬೆಳಕಿಗೆ ಮುತ್ತುತ್ತಿದ್ದ ಹುಳುಗಳನ್ನು ನೋಡುತ್ತಾ ಕುಳಿತು ಬಿಟ್ಟಿದ್ದೇನೆ. ನನಗೂ ಈ ಕಾಡಿನ ಹಾಗೆ ಫುಲ್‌ಟೈಮ್‌ ಸೋಂಬೇರಿಯಾಗಬೇಕಿದೆ. ಆದರೆ ಸಾಧ್ಯವಿಲ್ಲ. ಮತ್ತೆ ಹೊರಡಲೇಬೇಕು. ನಾಳೆಯೇ ಹೊರಡಬೇಕು! ಕತ್ತರಿಸಿ ಹೋಗಿದ್ದ ಆ ಅಸ್ತಿತ್ವದ ಮರ ಎರೆಡು ದಿನಗಳ ಕೊನೆಯಲ್ಲಿ ಮತ್ತೆ ಚಿಗುರೊಡೆದಿದೆ. ಮತ್ತೆ ನಗರಕ್ಕೆ ತೆರಳಬೇಕಿದೆ. ಮತ್ತೆ ಡೋಲಾಯಮಾನದ ಸ್ಥಿತಿ. ಮತ್ತೆ ಅಸ್ಥಿರ ಭವಿಷ್ಯದ ಯೋಚನೆ.ಮತ್ತೆ ಅಸ್ತಿತ್ವದ ಹುಡುಕಾಟ, ಅದರ ಅರುಹುವಿಕೆಯ ಪ್ರಯತ್ನ. ಇದು ಅನಿವಾರ್ಯ!

*********

ʼಏನಾಯ್ತೋʼ.. ಕಣ್ಬಿಟ್ಟ ತಕ್ಷಣ ಈಕೆ ಕೇಳಿದಳು.

ʼನಂಗೆ ಫುಲ್‌ಟೈಮ್‌ ಸೋಂಬೇರಿಯಾಗಬೇಕಿದೆ ಕಣೆ….ʼ

ʼಹ್ಹಾ ಹ್ಹಾ… ಟೈಮ್‌ ಆಯ್ತು ನಡಿ ನಡಿ ಏಳು…ʼ ನಕ್ಕಳು.

 

No comments:

Post a Comment